Sunday, 12 July 2020

ಕುಟುಂಬ ಪ್ರಾರ್ಥನೆಗಳು

ಪವಿತ್ರ ಕುಟುಂಬಕ್ಕೆ ನಮ್ಮ ಕುಟುಂಬ ಸಮರ್ಪಣೆ



ಯೇಸು, ಮರಿಯಾ ಮತ್ತು ಜೋಸೇಫರೇ, ನಾವು ನಿಮ್ಮ ಆಸರೆ ಕೋರಿ ನಿಮ್ಮ ಸನ್ನಿಧಿಗೆ ಧಾವಿಸಿ ಬಂದಿದ್ದೇವೆ. ನಿಮ್ಮ ಪಾದಕ್ಕೆ ಬಿದ್ದು ನಮಸ್ಕರಿಸುತ್ತಿದ್ದೇವೆ. ನಮ್ಮ ಕುಟುಂಬವನ್ನು ನಿಮಗೆ ಸಮರ್ಪಿಸುತ್ತೇವೆ. ಈಗಾಗಲೇ ಅದನ್ನು ನಾವು ನಿಮ್ಮ ಕೃಪಾಪೋಷಣೆಗೆ ಒಪ್ಪಿಸಿರುತ್ತೇವೆ. ನೀವು ನಮ್ಮ ಮನೆಮಠದಲ್ಲಿ ನೆಲೆಸಿ ನಮ್ಮನ್ನು ನಡೆಸಿರಿ. ನಮ್ಮ ಆಶೆ ಅಭಿಲಾಷೆ, ಸುಖ ಸಂತೋಷ, ಕಷ್ಟ ತೊಂದರೆಯನ್ನು ನಿಮ್ಮ ಮುಂದೆ ನಿವೇದಿಸುತ್ತೇವೆ. ನಮ್ಮ ಮನೆತನ ವಿಶ್ವಾಸ ಪ್ರೀತಿ, ಪಾವಿತ್ರತೆ ಮತ್ತು ಸಮಾಧಾನದ ಬಿಡಾರವಾಗಲಿ. ನಮ್ಮಲ್ಲಿರುವ ಐಕ್ಯತೆ ದೃಢವಾಗಲಿ, ಪರಪ್ರೀತಿ ಬೆಳೆಯಲಿ. ಪ್ರಭು ಯೇಸು, ನೀವು ತಂದೆ ದೇವರ ಕೆಲಸದಕಲ್ಲಿ ತೊಡಗಿ ದೇವಾಲಯದಲ್ಲಿ ಉಳಿದು ಜೋಸೆಫ್ ಮತ್ತು ಮರಿಯಮ್ಮನವರಿಂದ ಕಣ್ಮರೆಯಾದಿರಿ. ಆದರೂ ಪುನಃ ಸಿಕ್ಕಿದಿರಿ. ಪರದೇಶದಲ್ಲಿ ನಮ್ಮಿಂದ ದೂರವಿರುವ ಬಂಧು ಬಳಗದವರೊಂದಿಗೆ ನಮ್ಮ ಬಾಂಧವ್ಯವನ್ನು ಕಾಪಾಡಿರಿ. ಅವರನ್ನು ಸುರಕ್ಷಿತವಾಗಿಡಿರಿ. ನಿಮ್ಮಲ್ಲಿ ವಿಶ್ವಾಸವಿಟ್ಟು ಮೃತರಾದ ನಮ್ಮ ಕುಟುಂಬದ ಸದಸ್ಯರಿಗೆ ನಿಮ್ಮ ರಾಜ್ಯದಲ್ಲಿ ಆಸರೆ ನೀಡಿರಿ. ಮರಿಯಾ ನಮ್ಮ ತಾಯೇ ನಮ್ಮ ಪರವಾಗಿ ಪುತ್ರ ಯೇಸುವಿನಲ್ಲಿ ವಿನಂತಿಸಿರಿ. ನೀವು ನಮ್ಮ ಪ್ರೀತಿಯ ತಾಯಿಯಾದ್ದರಿಂದ ನಮ್ಮ ಕುಟುಂಬ ನಿಮಗೆ ಪ್ರಿಯವಾಗಲಿ. ನಮ್ಮ ಅಗತ್ಯಗಳಲ್ಲಿ ಸದಾ ನೆರವಾಗಿರಿ. ಎಲ್ಲ ಕೆಡುಕಿನ ಮೇಲೆ ಜಯ ಸಾಧಿಸಲು ನಮಗೆ ಕಲಿಸಿರಿ. ಸುಗುಣದ ಮಾರ್ಗವನ್ನು ನಮಗೆ ಉಪದೇಶಿಸುತ್ತಾ ನಿಮ್ಮ ಪುತ್ರರ ರಾಜ್ಯಕ್ಕೆ ನಮ್ಮನ್ನು ನಡೆಸಿರಿ ಆಮೆನ್. ಪ್ರೀತಿಮಯಿ ಮತ್ತು ದಯಾಳು ಜೋಸೆಫರೇ, ನೀವು ಬಾಲಯೇಸುವನ್ನು ಹೆರೋದನ ಮುಷ್ಠಿಯಿಂದ ಬಿಡಿಸಿದಿರಿ. ಬಡಗಿಯಾಗಿ ಕೆಲಸಮಾಡಿ ಕುಟುಂಬವನ್ನು ನಿರ್ವಹಿಸಿದಿರಿ. ನಮ್ಮನ್ನು ಸಕಲ ತೊಂದರೆ ತೊಡಕು ಕಷ್ಟ ಅನಿಷ್ಟಗಳಿಂದ ಪಾರು ಮಾಡಿರಿ. ಅನುದಿನದ ಆಹಾರವನ್ನು ಗಳಿಸಲು ನಮಗೆ ನೆರವಾಗಿರಿ. ನೀವು ನಿಷ್ಟಾವಂತರಾಗಿದ್ದಂತೆ ನಮ್ಮನ್ನೂ ನ್ಯಾಯನೀತಿ ನಿಷ್ಠೆಯಲ್ಲಿ ನಡೆಸಿರಿ, ಯೇಸು ಮತ್ತು ಮರಿಯಾ ನಡೆದ ಸನ್ಮಾರ್ಗದಲ್ಲಿ ನಮ್ಮನ್ನು ಪರಿಪಾಲಿಸಿರಿ. ನಮ್ಮ ಕುಟುಂಬ ಮಾತ್ರವಲ್ಲ, ಭೂಲೋಕದ ಎಲ್ಲಾ ಕುಟುಂಬಗಳ ಮೇಲೆ ನಿಮ್ಮ ಆಶಿರ್ವಾದವನ್ನು ಕೋರುತ್ತೇವೆ ಆಮೆನ್.
 ================== 
ಮಕ್ಕಳಿಗಾಗಿ ತಂದೆ ತಾಯಿಯರ ಪ್ರಾರ್ಥನೆ


ಪ್ರೀತಿಮಯ ಪಿತ ದೇವರೇ, ನಿಮ್ಮ ಸೃಷ್ಟಿಕಾರ್ಯದಲ್ಲಿ ನಮ್ಮನ್ನು ಸಹಭಾಗಿಗಳನ್ನಾಗಿ ಮಾಡಿ ಮಾತಾಪಿತೃರಾಗುವ ಭಾಗ್ಯವನ್ನಿತ್ತಿರಿ. ಆದುದರಿಂದ ನಿಮಗೆ ವಂದನೆಯನ್ನು ಸಲ್ಲಿಸುತ್ತೇವೆ. ನಮಗೆ ಒಳ್ಳೆಯ ಮಕ್ಕಳನ್ನಿತ್ತು ನಮ್ಮ ಸಂತೋಷವನ್ನು ಅಧಿಕರಿಸುತ್ತೀರಿ. ಈ ಕಾರಣ ನಿಮಗೆ ವಂದನೆಯನ್ನು ಸಲ್ಲಿಸುತ್ತೇವೆ. ನಿಮ್ಮ ಕೃಪಾ ಪ್ರೀತಿಯ ತುಂತುರು ಮಳೆಯನ್ನು ನಮ್ಮ ಕುಟುಂಬದ ಮೇಲೆ ಹರಿಸಿರಿ. ನಮ್ಮ ಕರೆಯೋಣದ ಕಟ್ಟಳೆಗಳನ್ನು ಪರಿಪಾಲಿಸಲೂ ಅಡೆತಡೆಯಿಲ್ಲದೆ ಕುಟುಂಬವನ್ನು ನಡೆಸಿಕೊಂಡು ಹೋಗಲೂ ನೆರವನ್ನು ನೀಡಿರಿ. ಪಿತ ದೇವರೇ, ನೀವು ಕರುಣಿಸಿದ ಮಕ್ಕಳ ಬಗ್ಗೆ ನಮ್ಮ ಕರ್ತವ್ಯಗಳನ್ನು ವಿವೇಚನೆಯಿಂದ ನಿರ್ವಹಿಸಲೂ ಅವರನ್ನು ನಿಮ್ಮ ಪ್ರೀತಿಯಲ್ಲಿ ಬೆಳೆಸಲೂ , ಕ್ರಿಸ್ತೀಯ ಸುಗುಣಗಳನ್ನು ಬಿತ್ತಲೂ ನಮಗೆ ಆಧಾರವಾಗಿರಿ. ನಮ್ಮ ಮಕ್ಕಳು ಯಾವ ಕೆಡುಕಿನಲ್ಲಿ ಸಿಲುಕಿದಂತೆ ಅವರನ್ನು ನಿಮ್ಮ ಕರೆಗಳು ಕಾಪಾಡಲಿ, ನೀವು ಅವರಿಗಾಗಿ ಆಯ್ಕೆಮಾಡಿದ ಕರೆಯೋಣವನ್ನು ಕಂಡುಕೊಳ್ಳುವಂತೆ ಅವರ ಜ್ಞಾನವನ್ನು ಬೆಳಗಿಸಿರಿ. ಧಾರ್ಮಿಕ ಕರೆಯನ್ನು ಆರಿಸಿಕೊಂಡವರಿಗೆ ಧರ್ಯದಿಂದ ಅದರಲ್ಲಿ ಮುನ್ನಡೆಯುವ ವರವನ್ನು ನೀಡಿರಿ. ಈ ಸೇವೆಯಲ್ಲಿ ಅನನ್ಯ ಭಾವದಿಂದ ತಮ್ಮನ್ನೆ ತೊಡಗಿಸಿಕೊಳ್ಳುವ ವಿಶಾಲ ಮನಸ್ಸನ್ನು ನೀಡಿರಿ (ಈಗಾಗಲೇ ತಮ್ಮ ಜೀವನ ಮಾರ್ಗವನ್ನು ಕಂಡುಕೊಂಡ ಮಕ್ಕಳು ಅದರಲ್ಲಿ ಸ್ಥಿರವಾಗಿ ನಡೆಯುತ್ತಾ ಸಂತೃಪ್ತರಾಗುವಂತೆ ಮಾಡಿರಿ) ಪ್ರಭುದೇವರೇ ನಮ್ಮ ಕುಟುಂಬವನ್ನು ಪಾವನಗೊಳಿಸಿರಿ, ನಂದನಗೊಳಿಸಿರಿ. ಈ ವಾರವನ್ನು ಪ್ರಭುಕ್ರಿಸ್ತರ ಮುಖಾಂತರ ವಿನಂತಿಸುತ್ತೇವೆ ಆಮೆನ್.
 ==================
ತಂದೆ ತಾಯಿಯರಿಗಾಗಿ ಮಕ್ಕಳ ಪ್ರಾರ್ಥನೆ



ಸ್ವರ್ಗೀಯ ತಂದೆಯೇ ಮಾತಾಪಿತೃರು ಈ ಲೋಕದಲ್ಲಿ ನಮಗೆ ಕೊಟ್ಟ ಕೊಡುಗೆಯಾಗಿದ್ದಾರೆ. ಅವರ ಪ್ರೀತಿ ಮತ್ತು ತ್ಯಾಗವನ್ನು ನಾವು ಸವಿಯುತ್ತಾ ನಿಮಗೆ ವಂದನೆಯನ್ನು ಸಲ್ಲಿಸುತ್ತೇವೆ. ಅವರನ್ನು ಆಶೀರ್ವದಿಸಿರಿ. ನಮ್ಮನ್ನು ಅರಿವನ್ನೂ ನೀಡಿರಿ. ಅವರನ್ನು ಎಲ್ಲ ತೊಡಕು ತೊಂದರೆ, ಅಪಾಯ ಅವಘಡ, ರೋಗ ರುಜಿನದಿಂದ ಕಾಪಾಡಿರಿ. ಅವರ ಮಾರ್ಗದರ್ಶನ ನಮ್ಮನ್ನು ಸನ್ಮಾರ್ಗದಲ್ಲಿ ನಡೆಸಲಿ, ಅವರ ಆದರ್ಶ ಪಾವಿತ್ರತೆಯಲ್ಲಿ ಸಾಗಲು ಪ್ರೇರಣೆಯನ್ನೀಯಲಿ, ನಾವು ಮಾದರಿ ತಂದೆ ತಾಯಿಯರ ಮಕ್ಕಳು ಎಂಬ ಸಂತೃಪ್ತಿ ಮತ್ತು ಸಂತೋಷ ನಮ್ಮದಾಗಲಿ ಅವರನ್ನು ನೋಯಿಸದೆ ವಿಧೇಯರಾಗಿ ನಡೆಯಲೂ ಅವರನ್ನು ಗೌರವದಿಂದ ಅಂಗೀಕರಿಸಲೂ ಕೃಪೆ ನೀಡಿರಿ, ಅವರು ನಮಗಾಗಿ ಪಡುತ್ತಿರುವ ಬೇನೆ ಬವಣೆಗಳಿಗೆ ಸೂಕ್ತ ಸಂಭಾವನೆಯನ್ನು ನೀಡಿರಿ. ತಮ್ಮ ಮಾತಾಪಿತೃರಿಗೆ ವಿಧೇಯರಾಗಿ ಅವರನ್ನು ಸನ್ಮಾನಿಸಿದ ದಯಾಳು ಯೇಸುಕ್ರಿಸ್ತರ ಮುಖಾಂತರ ಈ ವರವನ್ನು ನಮಗೆ ನೀಡಿರಿ. ಆಮೆನ್.
==================

ಮಕ್ಕಳ ಪರೀಕ್ಷೆಯ ಸಂದರ್ಭದಲ್ಲಿ ತಂದೆತಾಯಿಯರ ಪ್ರಾರ್ಥನೆ



ದೇವರೇ, ಸರ್ವ ಜ್ಞಾನ ನಿಧಿಯೇ , ಮಾನವರು ಸುಜ್ಞಾನಿಗಳಾಗಿ ಬೆಳೆಯಬೇಕು, ನಿಮ್ಮನ್ನು ಅರಿತು ಸ್ತುತಿಸಬೇಕು, ತಮ್ಮ ಅರಿವನ್ನು ಆಧರಿಸಿ ಜೀವನವನ್ನು ಸಾಗಿಸಬೇಕು, ಸಮಾಜ ಮತ್ತು ಜಗತ್ತಿನ ಪ್ರಗತಿಗಾಗಿ ದುಡಿಯಬೇಕು ಎಂಬುದು ನಿಮ್ಮ ಆಶಯ. ಇಂದು ನಮ್ಮ ಮಕ್ಕಳ ಪರೀಕ್ಷೆಯ ಸಮಯದಲ್ಲಿ ನಾವು ನಿಮ್ಮನ್ನು ವಿನಂತಿಸುತ್ತೇವೆ, ಅವರ ಪರವಾಗಿ ನಿಮ್ಮ ನೆರವನ್ನು ಕೋರುತ್ತೇವೆ. ಅವರು ಈ ಪರೀಕ್ಷೆಯನ್ನು ಯುಕ್ತ ರೀತಿಯಲ್ಲಿ ಎದುರಿಸಿ ಯಶಸ್ವಿಯಾಗುವಂತೆ ನಿಮ್ಮ ನೆರವನ್ನು ನೀಡಿರಿ. ಅವರ ಶಿಕ್ಷಣ, ಭವಿಷ್ಯವನ್ನು ರೂಪಿಸಲು ಅವರಿಗೆ ಸಹಾಯಕವಾಗಲಿ. ಮುಂದೆ ಅವರು ನಮ್ಮ ಸಮಾಜಕ್ಕೆ ಅತ್ತುತ್ತಮ ಸೇವೆಯನ್ನು ಸಲ್ಲಿಸುವಂತಾಗಲಿ. ಮಕ್ಕಳ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುವ ನಾವು ನಮ್ಮ ರಕ್ಷಕ ಯೇಸುಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ ಆಮೆನ್.
 ==================
ಪತಿ ಪತ್ನಿಯರ ಪ್ರಾರ್ಥನೆ



ಸರ್ವೇಶ್ವರ ಸ್ವಾಮೀ, ನೀವು ನಮ್ಮ ನಿರ್ಮಾಪಕರು ಮತ್ತು ತಾರಕರು. ನೀವು ಆದಾಮ ಮತ್ತು ಏವೆಯರನ್ನು ಸೃಷ್ಟಿಸಿ ವಿವಾಹ ಬಂಧನದಲ್ಲಿ ಅವರನ್ನು ಒಂದುಗೂಡಿಸಿದಿರಿ. ಹೀಗೆ ಮಾನವ ದಂಪತಿಗಳನ್ನು ಆಶೀರ್ವದಿಸಲು ಚಿತ್ತರಾದಿರಿ. ನಿಮ್ಮ ಪುತ್ರ ಪ್ರಭುಯೇಸು ಕಾನಾ ಊರಿನಲ್ಲಿ ದಾಂಪತ್ಯ ಪ್ರೀತಿಯ ಬಾಂಧವ್ಯವನ್ನು ಹರಸಿದರು. ನಾವು ಧರ್ಮಸಭೆಯ ಸಮ್ಮುಖದಲ್ಲಿ ನಮ್ಮ ಸಮ್ಮತಿಯನ್ನಿತ್ತು ವಿವಾಹವಾದಾಗ ಈ ಬಂಧನವನ್ನು ಪವಿತ್ರೀಕರಿಸಿದಿರಿ. ನೀವು ಒಂದುಗೂಡಿಸಿದ್ದನ್ನು ಈ ಲೋಕದ ಯಾವ ಶಕ್ತಿಗಳೂ ಬೇರ್ಪಡಿಸದಂತೆ ನಿಮ್ಮ ಹಸ್ತವನ್ನು ಸದಾ ನಮ್ಮ ಮೇಲೆ ಚಾಚಿರಿ. ದಿನದಿಂದ ದಿನಕ್ಕೆ ನಮ್ಮ ಐಕ್ಯತೆ ದೃಢವಾಗಲಿ, ವೈವಾಹಿಕ ಜೀವನ ಫಲಪ್ರದವಾಗಲೆಂದು ನಿಮ್ಮನ್ನು ಪ್ರಾರ್ಥಿಸುತ್ತೇವೆ ಆಮೆನ್. ನಾವು ಪರಸ್ಪರರನ್ನು ನೋಯಿಸದೆ ಒಬ್ಬರೊಡನ್ನೊಬ್ಬರು ತ್ಯಾಗ ಮನೋಭಾವದಿಂದ ಜೀವಿಸುವಂತೆ ನಿಮ್ಮ ಪ್ರೀತಿಯನ್ನು ನಮ್ಮ ಹೃದಯದಲ್ಲಿ ಜ್ವಲಿಸಿರಿ. ನಮ್ಮ ಪಾಲಿಗೆ ಬರುವ ಸುಖ ಸಂತೋಷ , ತೊಂದರೆ ತೊಡಕುಗಳನ್ನು ಸಮನಾಗಿ ಹಂಚಿಕೊಳ್ಳುವ ಮನಸ್ಸನ್ನು ನೀಡಿರಿ. ಕಾಯಿಲೆ ಕಸಾಲೆಯಲ್ಲಿ ಜೊತೆಗಿದ್ದು ಆರೈಕೆ ಮಾಡುವ ಸಹನೆಯನ್ನು ದಯಪಾಲಿಸಿರಿ. ನಮ್ಮ ಜೀವಮಾನದಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ. ಪರಸ್ಪರರನ್ನು ಗೌರವದಿಂದ ಕಾಣುತ್ತೇವೆ ಎಂದು ಮಾಡಿದ ವಾಗ್ದಾನವನ್ನು ಪಾಲಿಸಲು ಕಲಿಸಿರಿ. ಆದರ್ಶ ಕುಟುಂಬವನ್ನು ಕಟ್ಟುವೆವು ಎಂದು ಮಾಡಿದ ನಿರ್ಧಾರವನ್ನು ಅನುಷ್ಠಾನಕ್ಕೆ ತರಲು ಶಕ್ತಿ ನೀಡಿರಿ. ಕೈಕೈ ಜೋಡಿಸಿ ಹೆಗಲಿಗೆ ಹೆಗಲು ಕಟ್ಟಿ ನಮ್ಮ ಮೇಲಿರುವ ಜವಾಬ್ದಾರಿಯನ್ನು ಹಗುರಗೊಳಿಸುವಂತೆ ನೆರವಾಗಿರಿ. ನಾವು ಪಡೆದುಕೊಂಡಿರುವ ಮಕ್ಕಳನ್ನು ಪ್ರಿತಿ ಮತ್ತು ಪಾವಿತ್ರತೆಯಲ್ಲಿ ಬೆಳೆಸಲು ನಿಮ್ಮ ವಾಕ್ಯದ ಬೆಳಕನ್ನು ನಮ್ಮ ಮೇಲೆ ಹರಿಸಿರಿ. ನಿಮ್ಮ ಪ್ರೀತಿಯ ಪ್ರತಿರೂಪ ನಮ್ಮಲ್ಲಿ ಪ್ರತಿಬಿಂಬಿಸಲಿ, ನಮ್ಮ ಕುಟುಂಬ ಪರಿಶುದ್ಧತೆಯಲ್ಲಿ ಪ್ರಜ್ವಲಿಸಲಿ. ಹೀಗೆ ನಿಮ್ಮ ಮಹಿಮೆ ಧರ್ನಸಭೆಯಲ್ಲಿ ಮಾರ್ದನಿಸಲಿ. ಈ ಕೃಪಾವರವನ್ನು ನಿಮ್ಮ ಪುತ್ರ ಯೇಸುಕ್ರಿಸ್ತರ ಮುಖಾಂತರ ಅಂಗಲಾಚಿ ಬೇಡುತ್ತೇವೆ. ಆಮೆನ್. 
==================
ಗರ್ಭಿಣಿಯ ಪ್ರಾರ್ಥನೆ



ಪ್ರೀತಿಮಯ ದೇವರೇ, ನನ್ನ ಉದರದಲ್ಲಿ ಒಂದು ಹೊಸ ಜೀವವನ್ನು ಧರಿಸಲು ನೀವು ಯೋಜಿಸಿದ್ದರಿಂದ ನಿಮ್ಮನ್ನು ಪೂರ್ಣ ಹೃದಯದಿಂದ ವಂದಿಸುತ್ತೇನೆ. ಗಂಡು ಮಗುವಾಗಲಿ ಹೆಣ್ಣು ಮಗುವಾಗಲಿ ಅದನ್ನು ನಿಮ್ಮ ಪ್ರೀತಿಯ ಕೊಡುಗೆಯೆಂದೂ , ನಮಗೆ ಅನುಗ್ರಹಿಸಿದ ಅಮೂಲ್ಯ ವರವೆಂದೂ ಅಂಗೀಕರಿಸುತ್ತೇನೆ. ಈ ಪುಟ್ಟ ಶಿಸುವಿನ ಶರೀರ ಮತ್ತು ಮನಸ್ಸು ಯಾವ ತೊಂದರೆ ತೊಡಕಿಲ್ಲದೆ ಬೆಳೆಯುವಂತಾಗಲಿ. ಈ ಶಿಸು ಒಳ್ಳೆಯ ಗುಣಗಳನ್ನು ಪಡೆದುಕೊಳ್ಳುವಂತೆ ನನ್ನನ್ನು ಸದ್ಗುಣಗಳಿಂದ ತುಂಬಿಸಿರಿ. ನನ್ನ ಶರೀರದಿಂದ ಅದಕ್ಕೆ ಸಮರ್ಪಕ ಘೋಷಣೆ ಲಭಿಸುವಂತೆ ಮತ್ತು ನಾನು ಅದನ್ನು ನನ್ನ ಗರ್ಭದಲ್ಲಿ ಸುರಕ್ಷಿತವಾಗಿ ಕಾಪಾಡುವಂತೆ ನನ್ನ ದೇಹಾತ್ಮಕ್ಕೆ ಶಕ್ತಿ ಮತ್ತು ಸೌಖ್ಯವನ್ನು ನೀಡಿರಿ. ನನ್ನನ್ನು ಪಿತೃ ವಾತ್ಸಲ್ಯದಿಂದ ಕಾಣುತ್ತಾ ನನ್ನ ಪ್ರಾರ್ಥನೆಯನ್ನು ಆಲಿಸಿರಿ. ನನ್ನ ಪ್ರಾಣವನ್ನು ಎಲ್ಲಾ ಅಪಾಯದಿಂದ ರಕ್ಷಿಸಿರಿ. ಈ ಕಂದನ ಜನನದ ತನಕ ನಾನು ಸಹಿಸಬೇಕಾದ ಅನಿವಾರ್ಯ ಕಷ್ಟ ತೊಂದರೆಗಳನ್ನು ಅನುಭವಿಸಲು ಅಗತ್ಯವಾದ ಧೈರ್ಯ ಮತ್ತು ಶಕ್ತಿಯನ್ನು ನೀಡಿರಿ. ನಾನು ಭಯಪಡದೆ ಪ್ರಸ್ವ ವೇದನೆಯನ್ನು ನಿರಾಯಾಸವಾಗಿ ಅಂಗೀಕರಿಸಿ ನವಜಾತ ಶಿಸುವನ್ನು ಕೃತಜ್ಞತೆಯಿಂದ ಕೈಯಲ್ಲಿ ಹಿಡಿಯುವ ಸಂತೋಷ ಮತ್ತು ಸಂತೃಪ್ತಿಯನ್ನು ನನಗೆ ದಯಪಾಲಿಸಿರಿ. ಆಮೆನ್, ಮರಿಯಾ, ನನ್ನ ಪ್ರೀತಿಯಾ ತಾಯೇ, ನೀವು ಗರ್ಭಧರಿಸಿ ಎಲಿಜಬೇತಮ್ಮನನ್ನು ಸಂಧಿಸಿದಿರಿ. ಅವರ ಉದರದಲ್ಲಿದ್ದ ಶಿಸುವನ್ನು ಸ್ವರ್ಗೀಯ ಆನಂದದಿಂದ ತುಂಬಿಸಿದಿರಿ. ನಿಮ್ಮ ಪುತ್ರರೊಂದಿಗೆ ನೀವೂ ನನ್ನ ಬಳಿಗೆ ಬನ್ನಿರಿ, ನನ್ನನ್ನು ಸಂತೋಷಪಡಿಸಿರಿ. ಬಾಲಯೇಸುವಿಗೆ ಜನ್ಮವಿತ್ತ ಕನ್ಯಾಮರಿಯಾ, ನನ್ನ ತಾಯೇ, ನನಗೆ ನೆರವಾಗಿರಿ ಆಮೆನ್.
 ==================
ಅಸ್ವಸ್ಥ ಹಿರಿಯರಿಗಾಗಿ ಪ್ರಾರ್ಥನೆ



ಪ್ರೀತಿಮಯ ತಂದೆಯೇ, ವಯೋವೃಧ್ಧರಾದ ನಮ್ಮ ಸಹೋದರ/ಸಹೊದರಿ (ಹೆಸರು…) ಅಸ್ಚಸ್ಥತೆ ಮತ್ತು ದುರ್ಬಲತೆಯಿಂದ ಪರಿತಪಿಸುತ್ತಿದ್ದಾರೆ. ಇವರ ಮೇಲೆ ನಿಮ್ಮ ದಯಾಮಯ ದೃಷ್ಟಿಯನ್ನು ಹರಿಸಿರಿ. ಇವರು ತಮ್ಮ ಕಾಯಿಲೆಯಿಂದ ಪಡುತ್ತಿರುವ ನೋವು, ಕಷ್ಟ, ದುಃಖವನ್ನು ಸಹನೆಯಿಂದ ಸಹಿಸಲು ಬೇಕಾದ ಶಕ್ತಿಯನ್ನು ನೀಡಿರಿ. ಈ ಜೀವನದ ಬೇನೆ ಬವಣೆ, ಕಷ್ಟ ಸಂಕಟಗಳು ಬರಲಿರುವ ಸುಖ ಸಂತೋಷದೊಂದಿಗೆ ಹೋಲಿಸಿದರೆ ಅತ್ಯಲ್ಪವೇ ಎಂಬ ಸತ್ಯ ಅವರಿಗೆ ಸಾಂತ್ವನ ನೀಡಲಿ. ಮರಣದ ಭಯ ಇವರನ್ನು ಕಾಡದಿರಲಿ. ಪ್ರತಿಯಾಗಿ ಪುನರುತ್ಥಾನದ ಭರವಸೆ ಇವರನ್ನು ಚೇತನಗೊಳಿಸಲಿ. ವಯಸ್ಸಾದ ಇವರನ್ನು ಪ್ರೀತಿಸುವ, ಜೊತೆಯಲ್ಲಿದ್ದು ಸಂತೋಷ ನೀಡುವ ಹಾಗೂ ಅವರ ಸೇವೆ ಮಾಡುವ ಮನಸ್ಸನ್ನು ನಮಗೆ ನೀಡಿರಿ. ಕಷ್ಟ ಪಡುತ್ತಿರುವ ಎಲ್ಲಾ ವಯೋವೃದ್ಧರಿಗೆ ನಿಮ್ಮ ಆಸರೆ ಲಭಿಸಲಿ. ಈ ಕೃಪಾವರವನ್ನು ನಮ್ಮ ರಕ್ಷಕ ಪ್ರಭುಕ್ರಿಸ್ತರ ನಾಮದಲ್ಲಿ ನಾವು ವಿನಂತಿಸುತ್ತೇವೆ ಆಮೆನ್. 
==================
ನಮ್ಮ ಕುಟುಂಬದ ಧಾರ್ಮಿಕ ವ್ಯಕ್ತಿಗಳಿಗಾಗಿ ಪ್ರಾರ್ಥನೆ



ಪ್ರೀತಿಮಯ ತಂದೆಯೇ, ನೀವು ಅನಂತ ಕಾಲದಿಂದ ನಮ್ಮ ಪ್ರೀತಿಸುತ್ತಾ , ನಡೆಸುತ್ತಾ, ಕಾಪಾಡುತ್ತಾ ಬಂದಿದ್ದೀರಿ. ನಮ್ಮ ಕುಟುಂಬವನ್ನು ವಿಶೇಷವಾಗಿ ಆಶೀರ್ವದಿಸಿರುತ್ತೀರಿ. ನಮ್ಮ ಕುಟುಂಬದ ಸದಸ್ಯ (ಹೆಸರು…)ನನ್ನು ನಿಮ್ಮ ಸೇವೆಗೆ ಆರಿಸಿ, ನಿಮ್ಮ ಪುತ್ರರ ಸುವಾರ್ತೆಯನ್ನು ಸಾರಲೂ ನಿಮ್ಮ ಸಮ್ರಾಜ್ಯವನ್ನು ಪಸರಿಸಲೂ ಕರೆಕೊಟ್ಟಿರುತ್ತೀರಿ. ಈ ಅಪೂರ್ವ ಕೊಡುಗೆಗಾಗಿ ನಾವು ನಿಮಗೆ ವಂದನೆಯನ್ನು ಸಲ್ಲಿಸುತ್ತೇವೆ.

ನಿಮ್ಮ ಈ ಅಭ್ಯರ್ಥಿಯ ಜೀವನದಲ್ಲಿ ಸಂತೃತ್ಪಿ ಮತ್ತು ಸ್ಥಿರತೆಯನ್ನು ನೀಡಿರಿ. ತೊಂದರೆ ತೊಡಕುಗಳನ್ನು ಲೆಕ್ಕಿಸದೆ, ಶತ್ರು ಭಯವಿಲ್ಲದೆ ಸತ್ಯ ಮತ್ತು ನೀತಿಯ ಪಥದಲ್ಲಿ ನಡೆಯಲೂ ನಿಮ್ಮ ಸುವಾರ್ತೆಯನ್ನು ಸಾರಲೂ ಅವರಿಗೆ ಧೈರ್ಯ ಮತ್ತು ಸ್ಥೈರ್ಯವನ್ನು ನೀಡಿರಿ. ಅವರನ್ನು ವಿಶ್ವಾಸದಲ್ಲಿ ದೃಢಪಡಿಸಿರಿ. ಮತ್ತು ಸ್ವಾಭಾವಿಕ ದುರ್ಬಲತೆಯಿಂದ ಎಡವಿ ಬೀಳದಂತೆ ಸಂರಕ್ಷಿಸಿರಿ. ತಮ್ಮ ವಿಶ್ವಾಸ ಮತ್ತು ಸದ್ಗುಣದ ಜೀವನದ ಮುಖಾಂತರ ಅವರು ನಿಮ್ಮ ಪುತ್ರ ಪ್ರಭುಕ್ರಿಸ್ತರಿಗೆ ಸಾಕ್ಷಿಯಾಗಿರಲಿ. ಸೇವಾಜೀವನದಲ್ಲಿ ಮಗ್ನರಾಗಿ ಸ್ವರ್ಗೀಯ ಸಂಭಾವನೆಯನ್ನು ಪಡೆಯಲು ಮುಂದಾಗಲಿ, ಈ ಕೃಪಾವರವನ್ನು ನಿಮ್ಮ ಪುತ್ರ ಯೇಸುಕ್ರಿಸ್ತರ ಮುಖಾಂತರ ವಿನಂತಿಸುತ್ತೇವೆ ಆಮೆನ್. 
==================
ನಮ್ಮ ದೇಶಕ್ಕಾಗಿ ಪ್ರಾರ್ಥನೆ



ಸರ್ವಶಕ್ತ ದೇವರೇ , ಸೃಷ್ಟಿಕರ್ತರೇ, ನೀವು ಆರಿಸಿದ ಇಸ್ರಯೇಲ್ ಜನಾಂಗಕ್ಕೆ ವಾಗ್ದಾನ ಮಾಡಿದಂತೆ ಸಂಪತ್ಭರಿತ ಸಮೃದ್ಧ ನಾಡನ್ನು ಕೊಟ್ಟಿರಿ. ನಮ್ಮ ತಾಯ್ನಾಡು ಭಾರತಕ್ಕಾಗಿ ನಾವು ಮಾಡುವ ವಿನಂತಿಯನ್ನು ಆಲಿಸಿರಿ. ಜನನಿಬಿಡವಾದ ನಮ್ಮ ದೇಶದಲ್ಲಿ ವಿಭಿನ್ನ ಜಾತಿಮತ, ಬಣ್ಣ ಭಾಷೆ, ಸಂಪ್ರದಾಯ ಸಂಸ್ಕೃತಿಗಳಿವೆ, ಆದರೆ ಅದರ ಮಧ್ಯೆ ದ್ವೇಷಾಸೂಹೆ ವೈಷಮ್ಯ ಜಗಳಗಳು ಅಧಿಕವಾಗುತ್ತಾ ಇವೆ. ಇಂಥಹ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಂದೇ ಪ್ರಜೆ, ನಿಮ್ಮ ಮಕ್ಕಳು ಎಂಬ ಪ್ರಜ್ಞೆಯನ್ನು ಮೂಡಿಸಿ, ಪ್ರೀತಿ, ವಾತ್ಸಲ್ಯ, ಐಕ್ಯತೆ, ಸಹಕಾರ ಭಾವದಿಂದ ಬಾಳುವಂತೆ ಮಾಡಿರಿ. ಜಗಳ ಕಲಹದಿಂದ ಪರಿಣಮಿಸುವ ಅಸಮಾಧಾನವನ್ನು ನೀಗಿಸಿ ಶಾಂತಿ ಸೌಹಾರ್ದವನ್ನು ಸ್ಥಾಪಿಸಿರಿ. ಬಡತವನ್ನು ನೀಗಿಸಿ ಹಸಿದಿರುವ ಎಲ್ಲರೂ ತಮ್ಮ ಅನುದಿನದ ಆಹಾರವನ್ನು ಪಡೆಯುವಂತೆ ನೆರವಾಗಿರಿ. ನಿರಾಶ್ರಿತರಿಗೆ ಆಸರೆ ಮತ್ತು ತೊಡಕಿನಲ್ಲಿ ಇರುವವರಿಗೆ ಪರಿಹಾರವನ್ನು ನೀಡಿರಿ. ನಮ್ಮ ದೇಶದ ರಾಜಕೀಯ ಪುಢಾರಿಗಳಿಗೆ ಸುಜ್ಞಾನವನ್ನು ದಯಪಾಲಿಸಿರಿ. ಧಾರ್ಮಿಕ ಸಿದ್ಧಾಂತಗಳನ್ನು ಪರಿಪಾಲಿಸುತ್ತಾ ಸತ್ಯ ನೀತಿಯಿಂದ ದೇಶವನ್ನು ಪರಿಪಾಲಿಸುವಂತೆ ಪ್ರೇರೆಪಿಸಿರಿ. ನಮ್ಮ ದೇಶ ಸಂಪತ್ಭರಿತವಾಗಿ ಸಮೃದ್ಧಿಯಲ್ಲಿ ನಿಮಗೆ ಮಹಿಮೆ ಸಲ್ಲಿಸುವಂತಾಗಲಿ. ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ ಆಮೆನ್.
=========================
ಸುಮನಸ್ಸನ್ನು ಗಳಿಸಲು ಪ್ರಾರ್ಥನೆ



ತಂದೆಯೇ, ಸ್ವರ್ಗ ಭುವಿಯ ಒಡೆಯರೇ, ನೀವು ಸರ್ವಜ್ಞರೂ ಸರ್ವಶಕ್ತರೂ ಆಗಿದ್ದೀರಿ. ಈ ಭುವಿಯಲ್ಲಿ ಎಲ್ಲವನ್ನೂ ನೀವು ಕ್ರಮಬದ್ಧವಾಗಿ ನಡೆಸುತ್ತೀರಿ. ಹೀಗೆ ನಿಮ್ಮ ಅನಂತ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತೀರಿ. ನಿಮ್ಮ ಸೃಷ್ಟಿಗಳಾದ ನಾವು ದುರ್ಬಲರು, ಅಜ್ಞಾನಿಗಳು , ತೃಣಸಮಾನರು. ನಿಮ್ಮ ಅಗಣಿತ ಜ್ಞಾನವನ್ನು ತಿಳಿಯಲು ಗುಪ್ತ ಯೋಜನೆಗಳನ್ನು ಭೇದಿಸಲು ನಾವು ಅಶಕ್ತರು. ಆದರೆ ನಿಮ್ಮನ್ನು ಪ್ರೀತಿಸುವವರಿಗೆ ಸಮಸ್ತವೂ ಸರ್ವ ಒಳಿತಾಗುವಂತೆ ಮಾಡುತ್ತೀರೆಂದು ನಾವು ನಂಬುತ್ತೇವೆ. ಆದರೆ ನಮ್ಮ ಮುಂದಿರುವ ಸಮಸ್ಯೆಗಳನ್ನು ಬದಲಿಸಲಾಗದಿದ್ದರೆ ಅವನ್ನು ಇದ್ದಂತೆಯೇ ಅಂಗೀಕರಿಸಲು ನಮಗೆ ಸುಮನಸ್ಸನ್ನು ನೀಡಿರಿ. ನಮ್ಮಿಂದ ಏನನ್ನು ಬದಲಿಸಲಾಗುವುದೋ ಅದನ್ನು ಬದಲಿಸಲು ಧೈರ್ಯವನ್ನೀಯಿತಿ ಮತ್ತು ಇವೆರಡರ ಮಧ್ಯದ ವ್ಯತ್ಯಾಸವನ್ನು ಗ್ರಹಿಸಲು ನಮಗೆ ಸುಜ್ಞಾನವನ್ನೀಯಿರಿ. ಈ ಕೃಪಾವರವನ್ನು ನಿಮ್ಮ ಪುತ್ರ ಯೇಸುವಿನ ಪೂಜ್ಯ ನಾಮದಲ್ಲಿ ಬೇಡುತ್ತೇವೆ ಆಮೆನ್.
=================
ಯುವ ಜನರಿಗಾಗಿ ಪ್ರಾರ್ಥನೆ



ಸ್ವರ್ಗೀಯ ತಂದೆಯೇ, ಮಾನವರನ್ನು ನೀವು ನಿಮ್ಮ ಸ್ವರೂಪ ಮತ್ತು ಹೋಲಿಕೆಯಲ್ಲಿ ಸೃಷ್ಟಿಸಿದಿರಿ. ಅವರನ್ನು ವಿಭಿನ್ನ ಗುಣಲಕ್ಷಣಗಳೊಂದಿಗೆ ಅಲಂಕರಿಸಿದಿರಿ. ನಿಮ್ಮನ್ನು ಅರಿತು ಒಳಿಯನ್ನು ಮಾಡುತ್ತಾ ಕೆಡುಕನ್ನು ನಿಗ್ರಹಿಸುವ ಜ್ಞಾನವನ್ನು ವಿವೇಕವನ್ನೂ ಅನುಗ್ರಹಿಸಿರಿ. ಅವರು ತಮ್ಮ ಪ್ರತಿಭೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಪ್ರೇರಣೆಯನ್ನು ಮಾರ್ಗದರ್ಶನವನ್ನೂ ನೀಡಿರಿ. ಸಕಲ ಜ್ಞಾನದ ಗಣಿಯಾಗಿರುವ ತಂದೆ ದೇವರೇ, ಯುವಜನರೂ ತಮ್ಮ ಜೀವನದ ಅರ್ಥವನ್ನೂ ಗುರಿಯನ್ನೂ ತಿಳಿದುಕೊಳ್ಳುವಂತೆ ಮಾಡಿರಿ. ತಮ್ಮ ಯುವ ಶಕ್ತಿಯನ್ನು ಸಮಾಜದ ಪ್ರಗತಿಗಾಗಿ ಉಪಯೋಗಿಸುವ ಉದಾರ ಮನಸ್ಸನ್ನು ಅವರಿಗೆ ನೀಡಿರಿ. ನೆರೆಯವರ ಜೀವನವನ್ನು ನಂದನಗೊಳಿಸುವ ಉತ್ಸಾಹವನ್ನು ಅವರಲ್ಲಿ ಚೇತನಗೊಳಿಸಿರಿ. ಅವರು ಈ ಲೋಕದ ಕಪಟತನ ಮತು ಅನಿಷ್ಠ ಅವಗುಣಗಳ ಗುಲಾಮರಾಗದಂತೆ ತಡೆಯಿರಿ. ಧರ್ಮಸಭೆಯ ಹಿರಿಯರಿಗೆ ಗೌರವ ಸಲ್ಲಿಸುತ್ತಾ ಅವರ ಮಾರ್ಗದರ್ಶನದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಸ್ಪೂರ್ಥಿಯನ್ನೀಯಿರಿ. ನಿಮ್ಮ ಪುತ್ರ ಯೇಸುಕ್ರಿಸ್ತರ ಮತ್ತು ನಮ್ಮ ಮಾತೆ ಮರಿಯಮ್ಮನವರ ಆದರ್ಶ ಜೀವನವನ್ನು ಧ್ಯಾನಿಸುತ್ತಾ ಸಂತ ಭಕ್ತರ ಮಾದರಿಯನ್ನು ಅನುಸರಿಸುತ್ತಾ ಸದ್ಗುಣಿಗಳೂ ಸತ್ಯವಂತರೂ ಆಗುವಂತೆ ಮಾಡಿರಿ. ನಮ್ಮ ಪ್ರಭುಕ್ರಿಸ್ತರ ಮುಖಾಂತರ ಪ್ರಾರ್ಥಿಸುತ್ತೇವೆ ಆಮೆನ್.
==================
ಯುವಜನರ ವೈಯಕ್ತಿಕ ಪ್ರಾರ್ಥನೆ


ಪ್ರೀತಿಮಯ ತಂದೆಯೇ, ಈ ವಯಸ್ಸಿನಲ್ಲಿ ಅನೇಕ ಪ್ರತಿಭೆ ಮತ್ತು ಕುಶಲತೆಗಳನ್ನು ನಮ್ಮಲ್ಲಿ ಬಿತ್ತಿರುವಿರಿ. ದೈಹಿಕ ಮತ್ತು ಮಾನಸಿಕ ಶಕ್ತಿಯನ್ನಿತ್ತು ನಮ್ಮಲ್ಲಿ ಉತ್ಸಾಹವನ್ನು ತುಂಬಿರುವಿರಿ. ಈ ಸುಂದರ ಆಕರ್ಷಕ ಲೋಕದಲ್ಲಿ ಜೀವಿಸುತ್ತಿರುವ ನಮಗೆ ತಂದೆ ತಾಯಿ ಮತ್ತು ಗುರು ಹಿರಿಯರ ಮಾರ್ಗದರ್ಶನ , ಸಾಂಗತ್ಯ ಮತ್ತು ಪ್ರೀತಿಯನ್ನು ಕೊಟ್ಟಿರುವಿರಿ. ಈ ಎಲ್ಲಾ ಕೊಡುಗೆಗಳಿಗಾಗಿ ನಾವು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಇವೆಲ್ಲವುಗಳ ಸಂಪೂರ್ಣ ಪ್ರಯೋಜನ ಪಡೆಯುವಂತೆ ನಮ್ಮ ಮನಸ್ಸನ್ನು ಸಿದ್ಧಗೊಳಿಸಿರಿ. ಈ ಲೋಕದ ಆಶೆ ಅಮಿಷ, ತಂತ್ರ ಶೋಧನೆಗಳಿಗೆ ಮಾರುಹೋಗದಂತೆ, ನಮ್ಮ ಜೀವನ ಗುರಿಯಿಂದ ಬೇರ್ಪಡದಂತೆ ನಿಮ್ಮ ಜ್ಞಾನ ಬೆಳಕನ್ನೂ ಶಕ್ತಿಯನ್ನೂ ದಯಪಾಲಿಸಿರಿ. ನಮ್ಮ ಹಿರಿಯರನ್ನು ನೋಯಿಸದೆ ಅವರ ಮಾರ್ಗದರ್ಶನದಲ್ಲಿ ನಡೆಯುವ ವಿನಯತೆಯನ್ನು ನೀಡಿರಿ. ನಮ್ಮ ಸಮಸ್ಯೆಗಳಿಗೆ ಶೀಘ್ರ ಪರಿಹಾರವನ್ನು ಸೂಚಿಸಿರಿ. ಪರಸೇವೆ ಮತ್ತು ಸಮಾಜ ಸುಧಾರಣೆ ಮಾಡುವ ಮನೋಭಾವವನ್ನು ಶ್ರಮಿಸುವ ಚೇತನವನ್ನೂ ಉಜ್ವಲಗೊಳಿಸಿರಿ. ಕ್ರಿಸ್ತಿಯ ಧರ್ಮ ನಿಯಮಗಳ ಪ್ರಕಾರ ಜೀವನವನ್ನು ರೂಪಿಸಲು ನಮ್ಮ ಮನಸ್ಸನ್ನೂ ಮಾರ್ಗವನ್ನು ಬೆಳಗಿಸಿರಿ. ನಮ್ಮ ಹಿರಿಯರಿಗೆ ಮತ್ತು ಇಡೀ ಸಮಾಜಕ್ಕೆ ಪ್ರಯೋಜನಕಾರಿ ಸಾಧನಗಳನ್ನಾಗಿ ನಮ್ಮನ್ನು ರೂಪಿಸಿರಿ. ನಮ್ಮ ಪ್ರಭುಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ ಆಮೆನ್.
=================
ಜೀವನ ಅಂತಸ್ತು ಆಯ್ಕೆ ಮಾಡಲು ಪ್ರಾರ್ಥನೆ



ಸ್ವರ್ಗೀಯ ತಂದೆಯೇ, ಈ ಲೋಕದಲ್ಲಿ ನಿಮ್ಮನ್ನು ಪ್ರೀತಿಸಲೂ, ಪರರ ಮತ್ತು ನಿಮ್ಮ ಸೇವೆ ಮಾಡಲೂ ನನ್ನನ್ನು ಸೃಷ್ಟಿಸಿದಿರಿ. ನನಗೆ ನೀಡಿರುವ ಗುಣಲಕ್ಷಣ, ಕೃಪಾವರಗಳಿಗೆ ನಿಮಗೆ ವಂದನೆಯನ್ನು ಸಲ್ಲಿಸುತ್ತೇನೆ. ಈ ಕೊಡುಗೆಗಳನ್ನು ನಿಮಗೆ ಮೆಚ್ಚುಗೆಯಾಗುವ ರೀತಿಯಲ್ಲಿ ಉಪಯೋಗಿಸಲು ನೀವೇ ನನ್ನ ಮನಸ್ಸನ್ನು ಬೆಳಗಿಸಿರಿ. ನಿಮ್ಮ ಮತ್ತು ನೆರೆಯವನ ಸೇವೆ ಮಾಡಲು ಯಾವ ಜೀವನ ಅಂತಸ್ತು ನನಗೆ ಸೂಕ್ತ ಎಂಬುದನ್ನು ತಿಳಿಯಪಡಿಸಿರಿ. ನನ್ನ ವ್ಯಕ್ತಿತ್ವದ ಬಗ್ಗೆ ನಿಮ್ಮ ಪವಿರ ಚಿತ್ತ ಮತ್ತು ಯೋಜನೆ ಏನೆಂಬುದನ್ನು ವ್ಯಕ್ತಪಡಿಸಿರಿ. ಅತಂತ್ರದಲ್ಲಿರುವ ನನ್ನ ಮನಸ್ಸನ್ನು ನಿರ್ಧಿಷ್ಟಗೊಳಿಸಿರಿ. ನನ್ನ ಅನಿರ್ಧಿಷ್ಟ ಅಭಿಲಾಷೆಗೆ ರೂಪ ನೀಡಿರಿ. ಒಂದು ವೇಳೆ ನೀವು ನನ್ನನ್ನು ಧಾರ್ಮಿಕ ಅಂತಸ್ತಿಗೆ ಕರೆಯುವುದಾದರೆ ಅನಗತ್ಯವಾದ ಎಲ್ಲವನ್ನು ತ್ಯಜಿಸಿ ನಿಮ್ಮ ಪುತ್ರರನ್ನು ಹಿಂಬಾಲಿಸಲು ಶಕ್ತಿ ಸಾಮರ್ಥ್ಯ ಮತ್ತು ದೃಢ ಮನಸ್ಸನ್ನು ನೀಡಿರಿ. ನಾನು ನಿಮಗೆ ಸುಪ್ರಿಯನಾಗಿ ನಡೆಯಲು ಹೊಸ ಬಾಳನ್ನು ನನ್ನಲ್ಲಿ ನಿರ್ಮಿಸಿರೆಂದು ನಮ್ಮ ಪ್ರಭುಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ ಆಮೆನ್.
===================
ಪರೀಕ್ಷೆಯನ್ನು ಎದುರಿಸುವವರ ಪ್ರಾರ್ಥನೆ


ಸರ್ವೇಶ್ವರ ಸ್ವಾಮಿ ದೇವರೇ, ಸರ್ವ ಜ್ಞಾನದ ಸಾಗರವೇ, ನನಗೆ ವಿದ್ಯಾಭ್ಯಾಸ ಮಾಡಲು ಒಳ್ಳೆಯ ಬುದ್ಧಿಶಕ್ತಿ ಮತ್ತು ಅವಕಾಶವನ್ನು ಕೊಟ್ಟಿರುವ ನಿಮಗೆ ವಂದನೆಯನ್ನು ಸಲ್ಲಿಸುತ್ತೇನೆ. ಇಂದಿನ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಯಶಸ್ವಿಯಾಗುವಂತೆ ನಿಮ್ಮ ಪ್ರತ್ಯೇಕ ಸಹಾಯ ಮತ್ತು ಜ್ಞಾನ ಬೆಳಕನ್ನು ದಯಪಾಲಿಸಿರಿ. ಪರೀಕ್ಷಾ ಕೇಂದ್ರದಲ್ಲಿ ನಿಮ್ಮ ಪ್ರಸನ್ನತೆಯ ಅರಿವು ನನಗಾಗಲಿ ನಾನು ಸಮರ್ಪಕವಾಗಿ ಉತ್ತರಿಸುವಂತೆ ನನ್ನ ಬುದ್ಧಿಶಕ್ತಿಯನ್ನು ಬೆಳಗಿಸಿ ಪ್ರಶಾಂತ ಮನಸ್ಸನ್ನು ನೀಡಿರಿ. ನನ್ನ ಸಹ ವಿದ್ಯಾರ್ಥಿ ಮತ್ತು ಶಿಕ್ಷಕರ ಮೇಲೂ ನಿಮ್ಮ ಆಶೀರ್ವಾದವಿರಲಿಲ್ ಈ ಕೃಪಾವರವನ್ನು ನಮ್ಮ ರಕ್ಷಕ ಮತ್ತು ಪರಿಪಾಲಕ ಪ್ರಭುಕ್ರಿಸ್ತರ ಮುಖಾಂತರ ವಿನಂತಿಸುತ್ತೇವೆ ಆಮೆನ್.
================
ಅಸ್ವಸ್ಥರಿಗಾಗಿ ಪ್ರಾರ್ಥನೆ


ಪ್ರಭು ಯೇಸೂ, ನೀವಿ ಈ ಲೋಕದಲ್ಲಿರುವಾಗ ಅಸ್ವಸ್ಥರ ಬಗ್ಗೆ ಅಪಾರ ಅನುಕಂಪವನ್ನು ತೋರಿದಿರಿ. ನಿಮ್ಮ ಮಾತು ಮತ್ತು ಸ್ಪರ್ಷದಿಂದ ಕುರುಡರು ಕಾಣುವಂತಾದರು, ಕಿವುಡರು ಕೇಳುವಂತಾದರು, ಮೂಗರು ಮಾತನಾಡುವಂತಾದರು. ಪ್ರಭುಯೇಸೂ , ಎಲ್ಲಾ ರೋಗಿಗಳ ಮೇಲೆ ವಿಶೇಷವಾಗಿ ನಮ್ಮ ಸಹೋದರ/ಸಹೋದರಿ (ಹೆಸರು…) ನ ಮೇಲೆ ನಿಮ್ಮ ಕರುಣಾ ದೃಷ್ಟಿಯನ್ನು ಹರಿಸಿರಿ. ನಿಮ್ಮ ಯಾತನೆ ಮತ್ತು ಮರಣವನ್ನು ಧ್ಯಾನಿಸುತ್ತಾ ಈ ಕಾಯಿಲೆಯನ್ನು ಸಹಿಸಲು ಅವರಿಗೆ ಸಹನೆ ಮತ್ತು ಶಕ್ತಿಯನ್ನು ಅನುಗ್ರಹಿಸಿರಿ. ನಿಮ್ಮ ಚಿತ್ತಕ್ಕೆ ಅನುಗುಣವಾಗಿ ಅವರನ್ನು ಸ್ವಸ್ಥಪಡಿಸಿರಿ ಮತ್ತು ಅವರು ಕಳೆದುಕೊಂಡ ಆರೋಗ್ಯವನ್ನು ಪುನಃ ದಯಪಾಲಿಸಿರಿ. ಅವರು ಅನುಭವಿಸುತ್ತಿರುವ ಏಕಾಂತದಲ್ಲಿ ಅವರ ಗೆಳೆಯರಾಗಿರಿ, ಕಾಯಿಲೆಯಲ್ಲಿ ವೈದ್ಯರಾಗಿರಿ ಮತ್ತು ಚಿಂತೆಯಲ್ಲಿ ಸಾಂತ್ವನವಾಗಿರಿ. ಪ್ರಭೂ, ಅಸ್ವಸ್ಥರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸರ್ವರಿಗೂ ಒಳ್ಳೆಯ ಆರೋಗ್ಯವನ್ನಿತ್ತು ಆಶೀರ್ವದಿಸಿರಿ, ಆಸ್ಪತ್ರೆಗಳಲ್ಲಿ ದುಡಿಯುತ್ತಿರುವ ವೈದ್ಯರನ್ನೂ ಸರ್ವ ಸಿಬ್ಬಂದಿಯನ್ನು ನಿಸ್ವಾರ್ಥಿಗಳನ್ನಾಗಿ ಮಾಡಿ ಸಹನೆಯ ಸದ್ಗುಣವನ್ನು ಅಧಿಕರಿಸಿರಿ. ಅವರು ಅಸ್ವಸ್ಥರನ್ನು ಪ್ರೀತಿಯಿಂದ ಆರೈಕೆ ಮಾಡುವ ಸೇವಾ ಸುಮನಸ್ಸನ್ನು ದಯಪಾಲಿಸಿರಿ. ಯೇಸುವಿನ ಪವಿತ್ರ ಹೃದಯವೇ ಕಷ್ಟಪಡುವವರಿಗೆ ವಿಶ್ರಾಂತಿ, ಪರಿತಪಿಸುತ್ತಿರುವವರಿಗೆ ನಿಮ್ಮ ಅನುಕಂಪ ಲಭಿಸಲಿ ಆಮೆನ್.
===================
ಕಾರ್ಮಿಕರಿಗಾಗಿ ಪ್ರಾರ್ಥನೆ


ಸರ್ವಶಕ್ತ ತಂದೆ ದೇವರೇ, ಮಾನವ ಜನಾಂಗದ ಸೃಷ್ಟಿಕರ್ತರೇ, ಮಾನವರು ದುಡಿಮೆ ಮಾಡಿ ತಮ್ಮ ಆಹಾರವನ್ನು ಸಂಪಾದಿಸಿ ಜೀವನವನ್ನು ಸಾಗಿಸಬೇಕೆಂದು ನಿಯಮಿಸಿದಿರಿ. ನಿಮ್ಮ ಪುತ್ರರು ಸಹ ಹೊಟ್ಟೆಪಾಡಿಗಾಗಿ ಮರಗೆಲಸ ಮಾಡಿ ದುಡಿಮೆಯ ಮಹತ್ವವನ್ನು ನಮಗೆ ತಿಳಿಯಪಡಿಸಿದರು. ತಂದೆಯೇ ಮಾನವನು ತನ್ನ ದೈಹಿಕ ಮತ್ತು ಮಾನಸಿಕ ಚಟುವಟಿಕೆಯಿಂದ ಈ ಜಗತ್ತನ್ನು ಅಭಿವೃದ್ಧಿಪಡಿಸಬೇಕು ಮತ್ತು ಅದರಿಂದ ಸರ್ವರ ಪ್ರಗತಿಯಾಗಬೇಕು ಎಂಬುದು ನಿಮ್ಮ ಯೋಜನೆ. ತಮ್ಮ ಶಕ್ತಿ ಮತ್ತು ಪ್ರತಿಭೆಗಳನ್ನು ದುಡಿಮೆಯಲ್ಲಿ ತೊಡಗಿಸುತ್ತಿರುವ ಎಲ್ಲಾ ಕಾರ್ಮಿಕರ ಮೇಲೆ ನಿಮ್ಮ ಆಶೀರ್ವಾದವಿರಲಿ. ಕೃಷಿಯಲ್ಲಿ ಅಥವಾ ಕಛೇರಿಯಲ್ಲಿ ಕುಟುಂಬದಲ್ಲಿ ಅಥವಾ ಕಾರ್ಖಾನೆಯಲ್ಲಿ ಮಾಡುತ್ತಿರುವ ಪ್ರತಿಕೆಲಸ ಘನತೆಯದಾಗಿದ್ದಿ ಅದು ಕುಟುಂಬ ಮತ್ತು ಸಮಾಜದ ಬೆಳವಣಿಗೆಗೆ ಅವಶ್ಯ ಎಂಬುದನ್ನು ಮನವರಿಕೆ ಮಾಡಿಸಿರಿ. ಪ್ರತಿಯೊಬ್ಬರೂ ನಿಮಗೆ ಮತ್ತು ಪರರಿಗೆ ಮೆಚ್ಚುಗೆಯಾಗುವ ಹಾಗೆ ತಮ್ಮ ಶಕ್ತ್ಯಾನುಸಾರ ದುಡಿಯುತ್ತಾ ತಮ್ಮ ಅನುದಿನದ ಆಹಾರವನ್ನು ಗಳಿಸುವಂತಾಗಲಿ. ಎಲ್ಲರೂ ಸೋಮಾರಿತವನ್ನು ದೂರಮಾಡಿ, ಸಮಯವನ್ನು ಪೋಲುಮಾಡದೆ ಸತ್ಯ ಮತ್ತು ನೀತಿಯನ್ನು ತಮ್ಮ ದುಡಿಮೆಯಲ್ಲಿ ಪರಿಪಾಲಿಸಲಿ. ಕಾರ್ಮಿಕ ನಿಯಾಮವಳಿಯನ್ನು ಅನುಸರಿಸಲು ಸರ್ವರಿಗೂ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಮನಸ್ಸನ್ನೂ ನೀಡಿರಿ. ಅವರ ಶ್ರಮ ಸುಫಲವಾಗಿ ಕುಟುಂಬ ಜೀವನ ಸುಧಾರಿಸಲಿ , ಉದ್ಯೋಗವಿಲ್ಲದೆ ಬಡತನದಲ್ಲಿ ಇರುವವರಿಗೆ ಅವರ ಕುಶಲತೆಗೆ ಸಹಜವಾದ ಕೆಲಸ ಸಿಗಲಿ. ವಯಸ್ಸಾದವರು ಮತ್ತು ಕಾಯಿಲೆಯಿಂದ ಕೆಲಸ ಮಾಡಲಾಗದೆ, ದೈನಂದಿನ ಊಟವನ್ನು ಗಳಿಸಲಾಗದವರಿಗೆ ನೀವೇ ಕಾಪಾಡಿರಿ. ಅವರಿಗೆ ನಮ್ಮ ಶಕ್ತ್ಯಾನುಸಾರ ಆಧಾರ ನೀಡಲು ನಮಗೆ ಸುಮನಸ್ಸನ್ನು ಕರುಣಿಸಿರಿ. ಹೀಗೆ ನಿಮ್ಮನ್ನು ಮಹಿಮೆ ಪಡಿಸಲಿ, ನಿಮ್ಮೊಂದಿಗೆ ಯುಗಯುಗಾಂತರಕ್ಕೂ ಸ್ವರ್ಗೀಯ ಸುಖವನ್ನು ಅನುಭವಿಸುವ ಅವಕಾಶವನ್ನು ನೀಡಬೇಕೆಂದು ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ ಆಮೆನ್.
================== 
ಶಾಂತಿಗಾಗಿ ಪ್ರಾರ್ಥನೆ


ಪ್ರಭುವೇ, ನನ್ನನ್ನು ನಿಮ್ಮ ಶಾಂತಿಯ ಸಾಧನವನ್ನಗೈ ಮಾಡಿರಿ. ದ್ವೇಷವಿದ್ದಲ್ಲಿ ಪ್ರೀತಿಯನ್ನೂ ಮಾಡಿರಿ. ದ್ವೇಷವಿದ್ದಲ್ಲಿ ಪ್ರೀತಿಯನ್ನೂ , ತಪ್ಪಿದ್ದಲ್ಲಿ ಕ್ಷಮೆಯನ್ನೂ, ಅವಿಶ್ವಾಸವಿದ್ದಲ್ಲಿ ವಿಶ್ವಾಸವನ್ನೂ, ನಿರಾಶೆಯಿದ್ದಲ್ಲಿ ಭರವಸೆಯನ್ನೂ, ಅಂಧಕಾರವಿರುವಲ್ಲಿ ಬೆಳಕನ್ನೂ ವಿಷಾದವಿರುವಲ್ಲಿ ಸಂತೋಷವನ್ನೂ ಬಿತ್ತಲು ನನಗೆ ಸಹಾಯ ಮಾಡಿರಿ. ದಿವ್ಯಗುರುವೇ, ಇತರರು ನನ್ನನ್ನು ಸಂತೈಸಬೇಕೆಂದು ಆಶಿಸುವುದಕ್ಕಿಂತ ಹೆಚ್ಚಾಗಿ ನಾನೇ ಇತರರನ್ನು ಸಂತೈಸುವಂತೆಯೂ, ಇತರರು ನನ್ನನ್ನು ಪ್ರೀತಿಸಬೇಕೆಂದು ಬಯಸುವುದಕ್ಕಿಂತ ಹೆಚ್ಚಾಗಿ ಪ್ರೀತಿಸಬೇಕೆಂದು ಬಯಸುವುದಕ್ಕಿಂತ ಹೆಚ್ಚಾಗಿ ನಾನೇ ಇತರರನ್ನು ಅರ್ಥಮಾಡಿಕೊಳ್ಳುವಂತೆಯೂ ಇತರರು ನನ್ನನ್ನು ಅರ್ಥಮಾಡಿಕೊಳ್ಳುವಂತೆಯೂ, ಇತರರು ನನ್ನನ್ನು ಪ್ರೀತಿಸಬೇಕೆಂದು ಅಪೇಕ್ಷಿಸುವುದಕ್ಕಿಂತ ಹೆಚ್ಚಾಹಿ ನಾನೇ ಇತರರನ್ನು ಪ್ರೀತಿಸುವಂತೆಯೂ ದಯೆಪಾಲಿಸಿರಿ. ಏಕೆಂದರೆ ಕೊಟ್ಟರೆ ನಾವು ಪಡೆಯುವೆವು, ಕ್ಷಮಿಸಿದರೆ ನಾವೂ ಕ್ಷಮೆಗೆ ಅರ್ಹರಾಗುವೆವು ಮತ್ತು ಸತ್ತರೆ ಅಮರರಾಗುವೆವು ಆಮೆನ್.
==================== 
ಯಾಜಕರಿಗಾಗಿ ಪ್ರಾರ್ಥನೆ


ಅನಂತ ಯಾಜಕರಾದ ಪ್ರಭು ಯೇಸುವೇ, ನಿಮ್ಮ ಸೇವಕರಾದ ಯಾಜಕರಿಗೆ, ಯಾರೂ ಕೇಡನ್ನು ಬಗೆಯದಂತೆ, ನಿಮ್ಮ ಪವಿತ್ರ ಹೃದಯದ ನೆರಳಲ್ಲಿ ಸುರಕ್ಷಿತವಾಗಿರಿಸಿರಿ. ಪ್ರತಿದಿನವೂ ನಿಮ್ಮ ಪವಿತ್ರ ಶರೀರವನ್ನು ಸ್ಪರ್ಶಿಸುವ, ಅಭ್ಯಂಗತವಾದ ಅವರ ಕರಗಳು, ಕಲುಷಿತಗೊಳ್ಳದಂತೆ ಕಾಪಾಡಿರಿ. ನಿಮ್ಮ ಪಾವನ ರಕ್ತವನ್ನು ಸೇವಿಸುವ ಅವರ ತುಟಿಗಳು, ಅಪವಿತ್ರವಾಗದಂತೆ ರಕ್ಷಿಸಿರಿ. ನಿಮ್ಮ ಮಹಿಮಾಭರಿತ ಯಾಜಕತ್ವದ, ಪುನೀತ ಮುದ್ರೆ ಹೊಂದಿದ, ಅವರ ಹೃದ್ಯಯದ ಪಾವಿತ್ರತೆಯನ್ನು ಕಾಪಾಡಿರಿ. ನಿಮ್ಮ ಪಾವನ ಪ್ರೀತಿಯು ಅವರನ್ನು ಆವರಿಸಿ, ಈ ಲೋಕದ ಅಪಾಯಕಾರಿ ಸೋಂಕಿನಿಂದ ಸಂರಕ್ಷಿಸಲಿ. ಅಪಾರ ಫಲವೀಯುವಂತೆ ಅವರ ದುಡಿಮೆಯನ್ನು ಆಶೀರ್ವದಿಸಿರಿ. ಅವರಿಂದ ಸೇವೆಯನ್ನು ಪಡೆಯುತ್ತಿರುವವರು, ಅವರಿಗೆ ಇಹದಲ್ಲಿ ಆನಂದ ಮತ್ತು ಸಾಂತ್ವನವಾಗಿಯೂ, ಪರದಲ್ಲಿ ಕಂಗೊಳಿಸುವ ಅವರ ಕಿರೀಟವಾಗಿಯೂ ಇರಲಿ. ಆಮೆನ್ ಮಾತೆ ಮರಿಯೇ, ಯಾಜಕರ ರಾಣಿಯೇ, - ಯಾಜಕರಿಗಾಗಿ ಪ್ರಾರ್ಥಿಸಿರಿ.
================= 

No comments:

Post a Comment