ಸೆಪ್ಟೆಂಬರ್ 14, 2020 ಸೋಮವಾರ [ಬಿಳಿ]
ಪವಿತ್ರ ಶಿಲುಬೆಯ ವಿಜಯ (ಹಬ್ಬ)
ಮೊದಲ ವಾಚನ: ಸಂಖ್ಯಾ 21.4-9
ಕೀರ್ತನೆ 78: 1-2, 34-38. ಶ್ಲೋಕ.7
ಮರೆಯದಿರು ಪ್ರಭುವಿನ ಮಹತ್ಕಾರ್ಯಗಳನು
ಎರಡನೆಯ ವಾಚನ: ಫಿಲಿಪ್ಪಿಯರಿಗೆ 2.6-11
ಶುಭಸಂದೇಶ: ಯೊವಾನ್ನ 3.13-17
==================
ಸಂಖ್ಯಾ 21.4-9
4 : ಇಸ್ರಯೇಲರು ಹೋರ್ ಬೆಟ್ಟದಿಂದ ಹೊರಟು ಎದೋಮ್ಯರ ನಾಡನ್ನು ಸುತ್ತಿಕೊಂಡು ಹೋಗುವುದಕ್ಕೆ ಕೆಂಪುಕಡಲಿನ ಮಾರ್ಗವಾಗಿ ಪ್ರಯಾಣ ಮಾಡಿದರು. ಈ ಮಾರ್ಗದ ಆಯಾಸ ದಿಂದ ಅವರಿಗೆ ಬೇಸರವಾಯಿತು.
5 : ಆಗ ಅವರು ದೇವರಿಗೂ ಮೋಶೆಗೂ ವಿರುದ್ಧ ಮಾತಾಡ ತೊಡಗಿದರು: “ನೀವು ನಮ್ಮನ್ನು ಈ ಮರಳುಗಾಡಿನಲ್ಲಿ ಕೊಲ್ಲಬೇಕೆಂದು ಈಜಿಪ್ಟ್ದೇಶದಿಂದ ಕರೆದುಕೊಂಡು ಬಂದಿರೋ? ಇಲ್ಲಿ ಆಹಾರವಿಲ್ಲ, ನೀರೂ ಇಲ್ಲ; ಈ ನಿಸ್ಸಾರವಾದ ಆಹಾರವನ್ನು ತಿಂದು ತಿಂದು ನಮಗೆ ಬೇಸರವಾಗಿದೆ,” ಎಂದು ಹೇಳತೊಡಗಿದರು.
6 : ಅದಕ್ಕೆ ಸರ್ವೇಶ್ವರ ವಿಷಸರ್ಪಗಳನ್ನು ಅವರ ನಡುವೆ ಬರಮಾಡಿದರು. ಅವು ಆ ಜನರನ್ನು ಕಚ್ಚಿದವು. ಬಹುಜನ ಸತ್ತುಹೋದರು.
7 : ಆಗ ಜನರು ಮೋಶೆಯ ಬಳಿಗೆ ಬಂದು, “ನಾವು ನಿಮಗೂ ಸರ್ವೇಶ್ವರನಿಗೂ ವಿರುದ್ಧ ಮಾತಾಡಿ ದೋಷಿಗಳಾದೆವು. ಈ ಸರ್ಪಗಳು ನಮ್ಮನ್ನು ಬಿಟ್ಟು ತೊಲಗುವಂತೆ ಸರ್ವೇಶ್ವರನನ್ನು ಪ್ರಾರ್ಥಿಸಿ,” ಎಂದು ಬೇಡಿಕೊಂಡರು.
8 : ಮೋಶೆ ಜನರ ಪರವಾಗಿ ಪ್ರಾರ್ಥಿಸಿದನು. ಸರ್ವೇಶ್ವರ ಅವನಿಗೆ, “ನೀನು ಕಂಚಿನಿಂದ ವಿಷಸರ್ಪದ ಆಕಾರವನ್ನು ಮಾಡಿಸಿ, ಧ್ವಜಸ್ತಂಭದ ಮೇಲೆ ಎತ್ತಿ ನಿಲ್ಲಿಸು. ಸರ್ಪಗಳಿಂದ ಗಾಯಗೊಂಡ ಪ್ರತಿ ಒಬ್ಬನು ಅದನ್ನು ನೋಡಿ ಬದುಕಿಕೊಳ್ಳುವನು,” ಎಂದು ಆಜ್ಞಾಪಿಸಿದರು.
9 : ಅಂತೆಯೆ ಮೋಶೆ ಕಂಚಿನಿಂದ ಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಇಡಿಸಿದನು. ಸರ್ಪಗಳಿಂದ ಗಾಯಗೊಂಡವರಲ್ಲಿ ಯಾರು ಯಾರು ಆ ಕಂಚಿನ ಸರ್ಪವನ್ನು ಲಕ್ಷ್ಯವಿಟ್ಟು ನೋಡಿದರೋ ಅವರೆಲ್ಲರೂ ಬದುಕಿಕೊಂಡರು.
==================="
"ವಾಚಕ: ಪ್ರಭುವಿನ ವಾಕ್ಯ
ಎಲ್ಲರು : ದೇವರಿಗೆ ಕೃತಜ್ಞತೆ ಸಲ್ಲಲಿ.
================
ಕೀರ್ತನೆ
"ಕೀರ್ತನೆ 78: 1-2, 34-38. ಶ್ಲೋಕ.7
ಮರೆಯದಿರು ಪ್ರಭುವಿನ
ಮಹತ್ಕಾರ್ಯಗಳನು
1 : ನನ್ನ ಜನರೇ, ಕಿವಿಗೊಡಿ
ನನ್ನ ಬೋಧನೆಗೆ /
ಗಮನಕೊಡಿ ನಾ ಹೇಳುವ
ಮಾತುಗಳಿಗೆ /
2 : ಸಾಮತಿಯೊಂದಿಗೆ
ಬೋಧನೆಯನಾರಂಭಿಸುವೆನು /
ಹೊರಪಡಿಸುವೆನು ಪೂರ್ವಕಾಲದ
ಗೂಡಾರ್ಥಗಳನು //
34 : ಆತನನು ನೆನಸಿಕೊಂಡರವರು
ವಧೆಯಾಗುವಾಗ /
ಪರಿತಾಪಗೊಂಡು ದೇವರಿಗೆ
ಅಭಿಮುಖರಾದಾಗ //
35 : ನೆನೆದರಾಗ ದೇವರೇ
ತಮಗಾಶ್ರಯ ದುರ್ಗವೆಂದು /
ಆ ಪರಾತ್ಪರ ದೇವರೇ ತಮಗೆ
ಉದ್ಧಾರಕನೆಂದು //
36 : ಆದರೆ ಅವರ ನಾಲಿಗೆಯಾಡಿತು
ಅಸತ್ಯ /
ಅವರ ಬಾಯಿ ಮಾಡಿತು ಕೇವಲ
ಮುಖಸ್ತುತಿಯ //
37 : ನೆಲೆಯಾಗಿರಲಿಲ್ಲ ಅವರ
ಹೃದಯ ಆತನಲಿ /
ಬದ್ಧರಾಗಿರಲಿಲ್ಲ ಆತನ
ನಿಬಂಧನೆಗಳಲಿ //
38 : ಆದರೂ ಕ್ಷಮಿಸಿದನವರನು
ಆ ದಯಾಳು, ನಾಶಮಾಡದೆ /
ಕೋಪವ ತಾಳಿಕೊಂಡನು ಹಲವು ವೇಳೆ,
ಉದ್ರೇಕಗೊಳ್ಳದೆ //
===========
ಎರಡನೇ ವಾಚನ
ಫಿಲಿಪ್ಪಿಯರಿಗೆ 2.6-11
6 : ದೇವಸ್ವರೂಪಿ ತಾನಾಗಿದ್ದರೂ ನಿರುತ ದೇವರಿಗೆ ಸಮನಾದ ಆ ಸಿರಿ ಪದವಿಯನಾತ ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ.
7 : ತನ್ನನೇ ಬರಿದು ಮಾಡಿಕೊಂಡು ದಾಸನ ರೂಪವನು ಧರಿಸಿಕೊಂಡು ಮನುಜನಾಕಾರದಲಿ ಕಾಣಿಸಿಕೊಂಡು ನರಮಾನವರಿಗೆ ಸರಿಸಮನಾದ.
8 : ತನ್ನನೇ ಆತ ತಗ್ಗಿಸಿಕೊಂಡು ವಿಧೇಯನಾಗಿ ನಡೆದುಕೊಂಡು ಮರಣಪರಿಯಂತ, ಹೌದೌದು, ಶಿಲುಬೆಯ ಮರಣಪರಿಯಂತ ವಿಧೇಯನಾದ.
9 : ಎಂತಲೇ ಪರಮೋನ್ನತ ಸ್ಥಾನಕ್ಕೇರಿಸಿದನಾತನನು ಇತ್ತನು ಹೆಸರುಗಳೊಳುತ್ತಮ ಹೆಸರನು ದೇವಪರಮನು.
10 : ಯೇಸುವಿನ ಹೆಸರಿಗೆಂದೇ ಮೊಣಕಾಲೂರಿ ಮಣಿವರು ಸ್ವರ್ಗವಾಸಿಗಳು, ಭೂನಿವಾಸಿಗಳು, ಪಾತಾಳ ಜೀವರಾಶಿಗಳು.
11 : ‘ಕ್ರಿಸ್ತ ಯೇಸುವೇ ಪ್ರಭು’ ಎಂದೆಲ್ಲರಿಗೆ ಅರಿಕೆ ಮಾಡುವರು ಪಿತದೇವನ ಮಹಿಮೆಯನು ಈ ಪರಿ ಹೊಗಳಿ ಸಾರುವರವರು.
===========
ವಾಚಕ: ಪ್ರಭುವಿನ ವಾಕ್ಯ
ಎಲ್ಲರು : ದೇವರಿಗೆ ಕೃತಜ್ಞತೆ ಸಲ್ಲಲಿ"
=======
"ಅಲ್ಲೆಲೂಯ
"ಅಲ್ಲೆಲೂಯ, ಅಲ್ಲೆಲೂಯ!
ಕರ್ತರೇ, ನಿಮ್ಮನ್ನು ಆರಾಧಿಸಿ, ಸ್ತುತಿಸುತ್ತೇವೆ;
ಏಕೆಂದರೆ ನೀವು ನಿಮ್ಮ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ಅಲ್ಲೆಲೂಯ!
----------------------------
ಕೀರ್ತನೆ 145: 14
ಅಲ್ಲೆಲೂಯ, ಅಲ್ಲೆಲೂಯ!
ನುಡಿಯಲಿ ಪ್ರಭು ಸದಾ ಪ್ರಾಮಾಣಿಕನು/
ನಡೆಯಲಿ ಆತನು ಸದಾ ಪ್ರೀತಿಮಯನು//
ಅಲ್ಲೆಲೂಯ!
----------------------------
ಶುಭಸಂದೇಶ
ಯೊವಾನ್ನ 3.13-17
13 : ಸ್ವರ್ಗಲೋಕದಿಂದಲೇ ಇಳಿದು ಬಂದ ನರಪುತ್ರನೇ ಹೊರತು ಬೇರೆ ಯಾರೂ ಸ್ವರ್ಗಕ್ಕೆ ಏರಿಹೋದವರಿಲ್ಲ.
14 : “ಮೋಶೆ ಮರುಭೂಮಿಯಲ್ಲಿ ಸರ್ಪವನ್ನು ಮೇಲಕ್ಕೆ ಏರಿಸಿದನು.
15 : ಅಂತೆಯೇ ನರಪುತ್ರನಲ್ಲಿ ವಿಶ್ವಾಸವಿಟ್ಟವರೆಲ್ಲರೂ ನಿತ್ಯಜೀವವನ್ನು ಪಡೆಯುವಂತೆ ನರಪುತ್ರನನ್ನು ಸಹ ಮೇಲಕ್ಕೆ ಏರಿಸಬೇಕು.
16 : ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು; ಆತನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ದೇಶ.
17 : ದೇವರು ತಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿಮಾಡಲೆಂದಲ್ಲ; ಪುತ್ರನ ಮುಖಾಂತರ ಲೋಕ ಉದ್ಧಾರವಾಗಲೆಂದು.
===================" "ಯಾಜಕ : ಪ್ರಭುವಿನ ಶುಭಸಂದೇಶ.
ಎಲ್ಲರು : ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ.
ಯಾಜಕ : ಶುಭಸಂದೇಶದ ಈ ನುಡಿಗಳು ನಮ್ಮ ಪಾಪಗಳನ್ನು ಅಳಿಸಲಿ.
=================
ಚಿಂತನೆ
"ಶಿಲುಬೆಯು ನಮ್ಮ ಕ್ರೈಸ್ತರ ಲಾಂಛನ. ಕಾರಣ ಇದು ಪ್ರಭು ಯೇಸುವಿನ ಜೀವನದ ಕೊನೆಯಾಗಿತ್ತು. ಇದು ದೇವರ ಪ್ರೀತಿಯನ್ನು ಪ್ರಕಟಿಸುತ್ತದೆ. ನಮ್ಮನ್ನು ರಕ್ಷಿಸಲು, ಕ್ರಿಸ್ತರು ಶಿಲುಬೆಯ ಮೇಲೆ ಸಾಯಬೇಕಾಯಿತು. ಶಿಲುಬೆಯ ಮೇಲೆ ಅವರು ಸುರಿಸಿದ ರಕ್ತ ಹೊಂದಿದೆ ಮರಣ. ಇದು ನಮ್ಮೆಲ್ಲರ ರಕ್ಷಣೆಯ ಸಾಧನವಾಗಿದೆ. ನಮ್ಮೆಲ್ಲರ ಪಾಪಗಳ ಪರಿಹಾರಕ್ಕಾಗಿ ನಮ್ಮನ್ನು ಮರಣದಿಂದ ಬಿಡಿಸಲು ಕ್ರಿಸ್ತರು ಕೊಲೆಗಡುಕರ, ದರೋಡೆಕೋರರ ಶಿಕ್ಷಯಾದ ಶಿಲುಬೆಯ ಮರಣವನ್ನು ಅಪ್ಪಿದರು. ಮರಣವನ್ನು ಜಯಿಸಿ ಎಲೈ ಸಾವೇ ನಿನ್ನ ವಿಷದ ಕೊಂಡಿಯಲ್ಲಿ? ಎಲ್ಲೆ ಸಾವೆ, ನಿನ್ನ ಜಯವೆಲ್ಲಿ ? ಎಂದು ಸಾವಿನ ಮೇಲೆ ವಿಜಯವನ್ನು ಸಾಧಿಸಿದರು.
ಪ್ರಭುವಿನ ಜೀವನದಿಂದ ಪ್ರೇರಿತರಾದ ನಾವು ಕೂಡ ನಮ್ಮ ದಿನನಿತ್ಯದ ಶಿಲುಬೆಗಳನ್ನು ತಾಳ್ಮೆಯಿಂದ ಹೊತ್ತುಕೊಂಡು ಪ್ರಭುವನ್ನು ಹಿಂಬಾಲಿಸುವುದು ಅಗತ್ಯವಾಗಿದೆ.
ಇಂದು ನಾವು ಪ್ರಭುವಿನ ಶಿಲುಬೆಯ ವಿಜಯವನ್ನು ಕೊಂಡಾಡುವಾಗ ಅವರ ಶಿಲುಬೆಯ ಹಾದಿಯಲ್ಲಿ ನಡೆದು ಅವರ ವಿಜಯದಲ್ಲಿ ಪಾಲುದಾರರಾಗಿ ನಮ್ಮ ಜೀವನವನ್ನು ಪಾವನಗೊಳಿಸೋಣ.
==================="
No comments:
Post a Comment