Thursday, 26 November 2020

ಅಕ್ಟೋಬರ್ 29, 2020 ಗುರುವಾರ

 ಅಕ್ಟೋಬರ್ 29, 2020 ಗುರುವಾರ                        [ಹಸಿರು]
ಮೊದಲ ವಾಚನ: ಎಫೆಸದವರಿಗೆ 6.10-20
ಕೀರ್ತನೆ 144:1, 2, 9-10. ಶ್ಲೋಕ.1
ಸ್ತುತಿಸ್ತೋತ್ರ ಪ್ರಭುವಿಗೆ, ನನ್ನ ಆಶ್ರಯ ದುರ್ಗಕ್ಕೆ
ಶುಭಸಂದೇಶ: ಲೂಕ 13.31-35
==================
ಮೊದಲನೇ ವಾಚನ
ಎಫೆಸದವರಿಗೆ 6.10-20

10 : ಕೊನೆಯದಾಗಿ, ಪ್ರಭುವಿನ ಅನ್ಯೋನ್ಯತೆಯಲ್ಲಿ ಬಲಾಢ್ಯರಾಗಿರಿ. ಅವರ ಪರಾಕ್ರಮ ಶಕ್ತಿಯನ್ನು ಆಶ್ರಯಿಸಿರಿ.
11 : ಸೈತಾನನು ನಿಮಗೆ ಒಡ್ಡುವ ಕುತಂತ್ರಗಳ ವಿರುದ್ಧ ಅಚಲರಾಗಿ ನಿಲ್ಲಲು ನೀವು ಸಮರ್ಥರಾಗುವಂತೆ ದೇವರು ನೀಡುವ ಸಕಲ ಶಸ್ತ್ರಾಸ್ತ್ರಗಳನ್ನು ಧರಿಸಿಕೊಳ್ಳಿರಿ.
12 : ನಮ್ಮ ಹೋರಾಟ ಕೇವಲ ನರಮಾನವರೊಂದಿಗಲ್ಲ, ದಿಗಂತದಲ್ಲಿರುವ ಅಧಿಕಾರಿಗಳ ಹಾಗೂ ಆಧಿಪತ್ಯಗಳ ವಿರುದ್ಧ; ಪ್ರಸ್ತುತ ಅಂಧಕಾರ ಲೋಕಾಧಿಪತಿಗಳ ಹಾಗೂ ಅಶರೀರ ದುಷ್ಟಗಣಗಳ ವಿರುದ್ಧ.
13 : ಎಂದೇ, ದೇವರು ಕೊಡುವ ಸಕಲ ಶಸ್ತ್ರಾಸ್ತ್ರಗಳೊಂದಿಗೆ ಸುಸಜ್ಜಿತರಾಗಿರಿ. ಆ ದುರ್ದಿನದಂದು ವೈರಿಗಳನ್ನು ಎದುರಿಸಲು ಆಗ ನೀವು ಶಕ್ತರಾಗುತ್ತೀರಿ. ಮಾತ್ರವಲ್ಲ, ಕಟ್ಟಕಡೆಯವರೆಗೆ ಹಿಮ್ಮೆಟ್ಟದೆ ನಿಲ್ಲುತ್ತೀರಿ;
14 : ಹಿಮ್ಮೆಟ್ಟದೆ ನಿಲ್ಲಲೇಬೇಕು. ಇದಕ್ಕಾಗಿ ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಳ್ಳಿ, ನೀತಿಯೆಂಬ ರಕ್ಷಕವಚವನ್ನು ತೊಟ್ಟುಕೊಳ್ಳಿರಿ.
15 : ಶಾಂತಿಯ ಶುಭಸಂದೇಶವನ್ನು ಸಾರಲು ಶ್ರದ್ಧೆಯೆಂಬ ಪಾದರಕ್ಷೆಯನ್ನು ಮೆಟ್ಟಿಕೊಳ್ಳಿರಿ.
16 : ಸತತವೂ ವಿಶ್ವಾಸವೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ. ಹೀಗೆ ಸೈತಾನನ ಅಗ್ನಿಬಾಣಗಳನ್ನೆಲ್ಲಾ ನಂದಿಸಲು ಶಕ್ತರಾಗುವಿರಿ.
17 : ರಕ್ಷಣೆಯೆಂಬ ಶಿರಸ್ತ್ರಾಣವನ್ನು ಧರಿಸಿಕೊಳ್ಳಿ; ಪವಿತ್ರಾತ್ಮರ ಕೊಡುಗೆಯಾದ ದೇವರ ವಾಕ್ಯವು ನಿಮಗೆ ಖಡ್ಗವಾಗಿರಲಿ.
18 : ಪವಿತ್ರಾತ್ಮರಿಂದ ಪ್ರೇರಿತರಾಗಿ ಎಲ್ಲಾ ಸಮಯಗಳಲ್ಲೂ ಪ್ರಾರ್ಥಿಸಿರಿ. ನಿಮ್ಮ ಕೋರಿಕೆ, ಬೇಡಿಕೆಗಳನ್ನು ದೇವರಿಗೆ ಅರ್ಪಿಸಿರಿ. ಎಚ್ಚರವಾಗಿದ್ದು ಎಲ್ಲಾ ದೇವಜನರಿಗಾಗಿ ಎಡೆಬಿಡದೆ ಪ್ರಾರ್ಥಿಸಿರಿ.
19 : ಶುಭಸಂದೇಶದ ಸತ್ಯಾರ್ಥವನ್ನು ನಿರ್ಭೀತನಾಗಿ ಸಾರಲು ಸೂಕ್ತವಾದ ಮಾತುಗಳನ್ನು ದೇವರು ನನಗೆ ದಯಪಾಲಿಸಲೆಂದು ನನಗೋಸ್ಕರ ಪ್ರಾರ್ಥಿಸಿರಿ.
20 : ಶುಭಸಂದೇಶದ ನಿಮಿತ್ತ ನಾನು ಸೆರೆಯಾಳಾಗಿದ್ದರೂ ಪ್ರಭುವಿನ ರಾಯಭಾರಿಯಾಗಿದ್ದೇನೆ. ಎಂತಲೇ, ಈ ಶುಭಸಂದೇಶವನ್ನು ಧೈರ್ಯದಿಂದ ಸೂಕ್ತ ರೀತಿಯಲ್ಲಿ ಸಾರಲಾಗುವಂತೆ ನನಗಾಗಿ ಪ್ರಾರ್ಥಿಸಿರಿ.
===================
ಕೀರ್ತನೆ 
ಕೀರ್ತನೆ 144:1, 2, 9-10. ಶ್ಲೋಕ.1
ಸ್ತುತಿಸ್ತೋತ್ರ ಪ್ರಭುವಿಗೆ, 
ನನ್ನ ಆಶ್ರಯ ದುರ್ಗಕ್ಕೆ

1 : ಸ್ತುತಿಸ್ತೋತ್ರ ಪ್ರಭುವಿಗೆ,
 ನನ್ನ ಆಶ್ರಯದುರ್ಗಕ್ಕೆ / 
ಕಲಿಸಿಹನು ಕದನ ಕೈಗೆ, 
ಕಾಳಗ ನನ್ನ ಬೆರಳಿಗೆ //
2 : ಆತನೇ ನನಗೆ ಬಂಡೆ, 
ಕೋಟೆ, ದುರ್ಗ, ಉದ್ಧಾರಕ / 
ನನಗೆ ರಕ್ಷಾಕವಚ, ಆಶ್ರಯ, 
ಶತ್ರು ವಿಧ್ವಂಸಕ //
9 : ಹಾಡುವೆ ದೇವಾ, 
ನಿನಗೆ ನೂತನ ಕೀರ್ತನೆಯನು / 
ಪಾಡುವೆ ನುಡಿಸುತ್ತಾ 
ದಶತಂತಿಯ ವೀಣೆಯನು //
10 : ನೀನೇ ಅರಸುಗಳಿಗೆ
 ಜಯಪ್ರದನು / 
ದಾಸ ದಾವೀದನನು 
ಬಿಡಿಸಿದವನು //
=================
ಶುಭಸಂದೇಶ
ಲೂಕ 13.31-35

31 : ಅದೇ ಸಮಯಕ್ಕೆ ಸರಿಯಾಗಿ ಕೆಲವು ಮಂದಿ ಫರಿಸಾಯರು ಯೇಸುಸ್ವಾಮಿಯ ಬಳಿಗೆ ಬಂದು, “ಇಲ್ಲಿಂದ ಹೊರಟು ಹೋಗಿಬಿಡಿ, ಹೆರೋದನು ನಿಮ್ಮನ್ನು ಕೊಲ್ಲಬೇಕೆಂದಿದ್ದಾನೆ,” ಎಂದರು.
32 : ಅದಕ್ಕೆ ಯೇಸು, “ನೀವು ಹೋಗಿ ಆ ನರಿಗೆ ಹೀಗೆಂದು ತಿಳಿಸಿರಿ: ಇಂದು ಮತ್ತು ನಾಳೆ ದೆವ್ವಗಳನ್ನು ಬಿಡಿಸುತ್ತೇನೆ, ರೋಗಿಗಳನ್ನು ಗುಣಪಡಿಸುತ್ತೇನೆ, ಮೂರನೆಯ ದಿನ ನನ್ನ ಕಾರ್ಯ ಸಿದ್ಧಿಗೆ ಬರುವುದು.
33 : ಹೇಗೂ ಇಂದು, ನಾಳೆ ಮತ್ತು ನಾಡಿದ್ದು ನಾನು ನನ್ನ ಮಾರ್ಗವನ್ನು ಮುಂದುವರಿಸಬೇಕು. ಪ್ರವಾದಿಯಾದವನು ಜೆರುಸಲೇಮಿನ ಹೊರಗೆ ಕೊಲೆಗೀಡಾಗುವುದು ಸಲ್ಲದು.
34 : “ಓ ಜೆರುಸಲೇಮೇ, ಜೆರುಸಲೇಮೇ, ಪ್ರವಾದಿಗಳ ಕೊಲೆಪಾತಕಿಯೇ, ದೇವರು ನಿನ್ನ ಬಳಿಗೆ ಕಳುಹಿಸಿದವರನ್ನು ಕಲ್ಲುಗಳಿಂದ ಹೊಡೆಯುವವಳೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳಡಿ ಸೇರಿಸಿಕೊಳ್ಳುವಂತೆ, ನಾನು ನಿನ್ನ ಮಕ್ಕಳನ್ನು ಒಂದಾಗಿ ಸೇರಿಸಿ ಅಪ್ಪಿಕೊಳ್ಳಲು ಎಷ್ಟೋ ಬಾರಿ ಅಪೇಕ್ಷಿಸಿದೆ.
35 : ಆದರೆ ನೀನು ಒಪ್ಪಲಿಲ್ಲ. ಇಗೋ, ನಿಮ್ಮ ದೇವಾಲಯ ಪಾಳುಬೀಳುವುದು. ‘ಸರ್ವೇಶ್ವರನ ನಾಮದಲ್ಲಿ ಬರುವವರು ಧನ್ಯರು,’ ಎಂದು ನೀವಾಗಿ ಹೇಳುವ ದಿನದವರೆಗೂ ನೀವು ನನ್ನನ್ನು ಕಾಣಲಾರಿರಿ, ಎಂಬುದು ನಿಶ್ಚಯ,” ಎಂದರು. 
===================
ಚಿಂತನೆ
ನರಿ ಮತ್ತು ಹೆಣ್ಣುಕೋಳಿ ಎಂಬ ವಿರುದ್ಧವಾದ ಪಾತ್ರಗಳ ಪ್ರಸ್ತಾಪವನ್ನು ಇಂದಿನ ಶುಭಸಂದೇಶದಲ್ಲಿ ಆಲಿಸುತ್ತೇವೆ. ಯೇಸು ಮನುಕುಲದ ಮೇಲೆ ತಮಗಿರುವ ಪ್ರೀತಿಯನ್ನು, ತನ್ನ ಮರಿಗಳನ್ನು ಶತ್ರುಗಳಿಂದ ಸಂರಕ್ಷಿಸಲು ಹೋರಾಡುವ ಹೆಣ್ಣುಕೋಳಿಗೆ ಹೋಲಿಸುತ್ತಾ, ಹೆರೋದನ ಕುತಂತ್ರವನ್ನು ನರಿಗೂ ಹೋಲಿಸಿದ್ದಾರೆ.
ಕೆಲವು ಫರಿಸಾಯರಿಂದ ಹೆರೋದನು ತಮ್ಮನ್ನು ಕೊಲ್ಲಲು ಹವಣಿಸುತ್ತಿರುವುದನ್ನು ತಿಳಿದ ಯೇಸು, ನಿರ್ಭೀತರಾಗಿರುವುವಂತೆ ಕಾಣುತ್ತಾರೆ; ವಿಚಲಿತರಾಗದೆ ತಮ್ಮ ಗುರಿಯನ್ನು, ತಾವು ಮಾಡಲು ಬಂದ ಕಾರ್ಯವನ್ನು, ನಿರಪೇಕ್ಷಿತವಾಗಿ ನೆರವೇರಿಸಲು ಸನ್ನದ್ಧರಾಗಿರುವುದಾಗಿ ತೋರುತ್ತಾರೆ. ತನ್ನ ಸುತ್ತಲೂ ಕಲ್ಲು ತೂರುವವರ ನಡುವೆಯಿದ್ದರೂ ಖಿನ್ನ ಮನಸ್ಕರಾಗದೆ, ಇನ್ನಷ್ಟು ದಿನ ಜನರ ಅಗತ್ಯಗಳಿಗೆ ಸ್ಪಂದಿಸಲು ತಮ್ಮನ್ನು ತೊಡಗಿಸಿಕೊಳ್ಳುವುದಾಗಿ ನುಡಿಯುವ ಅವರ ಎದೆಗಾರಿಕೆ, ಪರಸೇವೆಯಲ್ಲಿ ಅವರು ಕಂಡುಕೊಂಡ ಅರ್ಥವನ್ನು ಮಹತ್ವವನ್ನು ಎತ್ತಿಹಿಡಿಯುತ್ತದೆ.  
ಇದುವೇ ಮಾನವ ರೂಪ ತಾಳಿ ಬದುಕಿದ ಯೇಸುವಿನಿಂದ ನಾವು ಕಲಿಯಬೇಕಾದದ್ದು- ಕೊಲ್ಲುವವರು ಕೋಟಿಯಿದ್ದರೂ ಕಾಯುವವನೊಬ್ಬ ನಮ್ಮ ಮೇಲಿರುವನೆಂಬ ಅಚಲ ನಂಬಿಕೆ; ಮನುಷ್ಯತ್ವದಿಂದ ಮಾನವತೆಗೆ, ಮಾನವತೆಯಿಂದ ದೈವತ್ವದ ಕಡೆಗೆ ಕೊಂಡೊಯ್ಯುವುದು ಸಿದ್ಧಾಂತಗಳಲ್ಲ ಮಾನವೀಯ ಕಾರ್ಯಗಳು ಎಂಬ ಸ್ಪಷ್ಟ ಅರಿವು. 
ಈ ಅರಿವಿನೆಡೆಗೆ ಯೇಸುವಿನ ಮಾತುಗಳು ನಮ್ಮನ್ನು ಸದಾ ಎಚ್ಚರಿಸುತ್ತಿರಲಿ, ನಮ್ಮ ವಿಶ್ವಾಸವನ್ನು ವೃದ್ಧಿಸಲಿ ಎಂದು ಪ್ರಾರ್ಥಿಸೋಣ.
===================

No comments:

Post a Comment