ಜನವರಿ ೧೯, ೨೦೧೯


ಸುವಾರ್ತಾ ಪ್ರಸಾರದ ಉದ್ದೇಶ: ಯುವಜನರು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಯುವಜನರು ಪೂಜ್ಯ ಕನ್ಯಾ ಮರಿಯಮ್ಮನವರ ಆದರ್ಶವನ್ನು ಅನುಸರಿಸುತ್ತಾ ಪ್ರಭು ಯೇಸುವಿನ ಕರೆಗೆ ಓಗೊಟ್ಟು ಸುವಾರ್ತೆಯ ಆನಂದವನ್ನು ಜಗತ್ತಿನಾದ್ಯಂತ ಪಸರಿಸುವ ಕ್ಷಮತೆಯನ್ನು ಹೊಂದುವುದು.

19 ಜನವರಿ 2019

ಶನಿವಾರ/ಹಸಿರು/ಸಾಧಾರಣ ಕಾಲದ ಮೊದಲನೇ ವಾರ
1ನೇ  ವಾಚನ  -  ಹಿಬ್ರಿ:  4:  12-16
ಕೀರ್ತನೆ  -  19:  7-9,  14.
ಶುಭಸಂದೇಶ  -  ಮಾರ್ಕ  2:  13-17



ವಾಚನಗಳು
ಮೊದಲನೇ  ವಾಚನ

ಹಿಬ್ರಿಯರಿಗೆ ಬರೆದ ಪತ್ರದಿಂದ ವಾಚನ

12ದೇವರ ವಾಕ್ಯ ಜೀವಂತವಾದುದು, ಕ್ರಿಯಾತ್ಮಕವಾದುದು; ಎಂಥ ಇಬ್ಬಾಯಿ ಕತ್ತಿಗಿಂತಲೂ ಹರಿತವಾದುದು. ಪ್ರಾಣ ಮತ್ತು ಆತ್ಮಗಳ, ಕೀಲು ಮತ್ತು ಮಜ್ಜೆಗಳ ಭೇದವನ್ನು ಛೇದಿಸುವಂತಾದ್ದು; ಹೃದಯದ ಆಶೆ ಆಲೋಚನೆಗಳನ್ನು ವಿವೇಚಿಸುವಂತಾದ್ದು. 13ನಾವು ಯಾರಿಗೆ ಲೆಕ್ಕೆ ಒಪ್ಪಿಸಬೇಕಾಗಿದೆಯೋ, ಅವರ ಕಣ್ಣಿಗೆ ಮುಚ್ಚುಮರೆಯಾದುದು ಯಾವುದೂ ಇಲ್ಲ. ಅವರ ದೃಷ್ಟಿಗೆ ಎಲ್ಲವೂ ಬಟ್ಟಬಯಲು. 14ಸ್ವರ್ಗಲೋಕಕ್ಕೆ ಏರಿಹೋದ ದೇವರ ಪುತ್ರನಾದ ಯೇಸುವೇ ನಮಗೆ ಶ್ರೇಷ್ಠ ಹಾಗೂ ಪ್ರಧಾನಯಾಜಕ ಆಗಿರುವುದರಿಂದ ನಾವು ನಿವೇದಿಸುವ ವಿಶ್ವಾಸದಲ್ಲಿ ಸದೃಢರಾಗಿರೋಣ. 15ಈ ಪ್ರಧಾನ ಯಾಜಕ, ನಮ್ಮ ದೌರ್ಬಲ್ಯಗಳನ್ನು ಕಂಡು ಅನುಕಂಪ ತೋರದೆ ಇರುವವರಲ್ಲ. ಅವರು, ನಮ್ಮಂತೆಯೇ ಇದ್ದುಕೊಂಡು ಎಲ್ಲಾ ವಿಷಯಗಳಲ್ಲೂ ಶೋಧನೆ-ಸಂಕಟಗಳನ್ನು ಅನುಭವಿಸಿದರು. ಆದರೆ ಪಾಪವನ್ನು ಮಾತ್ರ ಮಾಡಲಿಲ್ಲ. 16ಆದಕಾರಣ, ನಾವು ಸಮಯೋಚಿತ ಸಹಾಯವನ್ನು ಅವರ ಅನುಗ್ರಹದಿಂದ ಪಡೆಯಲು ಮತ್ತು ಅವರ ಕರುಣೆಯನ್ನು ಸವಿಯಲು ಧೈರ್ಯದಿಂದ ಅವರ ಕೃಪಾಸನವನ್ನು ಸಮೀಪಿಸೋಣ.




ಕೀರ್ತನೆ 
        
ಶ್ಲೋಕ: ಪ್ರಭುವೇ, ನಿತ್ಯ ಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ


1 : ಆಕಾಶಮಂಡಲ ಸಾರುತಿದೆ ದೇವರ ಮಹಿಮೆಯನು|
     ತಾರಾಮಂಡಲ ತೋರುತಿದೆ ದೇವರ ಕೈಕೃತಿಗಳನು||

2 : ದಿನವು ಮರುದಿನಕೆ ಮಾಡುತಿದೆ ಈ ಪ್ರಕಟಣೆಯನು|
     ರಾತ್ರಿ ಮರುರಾತ್ರಿಗೆ ನೀಡುತಿದೆ ಈ ಪ್ರಚಾರವನು||

3 : ಅವುಗಳಿಗೆ ಮಾತಿಲ್ಲ; ಅವುಗಳಿಗೆ ಶಬ್ದವಿಲ್ಲ|
     ಅವುಗಳ ಸ್ವರವಂತೂ ಕೇಳಿ ಬರುವುದಿಲ್ಲ||

4 : ಆದರೂ ಅವುಗಳ ಧ್ವನಿರೇಖೆ ಹರಡಿದೆ ಬುವಿಯಾದ್ಯಂತ|
     ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ||

5 : ನಿರ್ಮಿಸಿಹನಲ್ಲಿ ದೇವನು ಗುಡಾರವೊಂದನು ಸೂರ್ಯನಿಗೆ|
     ಬರುತಿಹನಾ ರವಿ ವರನಂತೆ ಧಾರಾಗೃಹದಿಂದ ಹೊರಗೆ|
     ಶೂರನಂತೆ, ಓಟದ ಪಥದಲ್ಲೋಡಲು ಹರುಷದೊಂದಿಗೆ||

6 : ಏರುತಿಹನು ದಿಗಂತದೊಂದು ಕೊನೆಯಿಂದ ಮತ್ತೊಂದು ಕೊನೆಗೆ|
     ಮುಚ್ಚುಮರೆಯಾದುದೊಂದೂ ಇರದು, ಆತನಾ ಉರಿಗಣ್ಣಿಗೆ||

7 : ಪ್ರಭುವಿನ ಆಜ್ಞೆ ಪರಿಪೂರ್ಣ; ಜೀವನಕದು ನವಚೇತನ|
     ನಂಬಲರ್ಹ; ಪ್ರಭುವಿನ ಶಾಸನ ಮುಗ್ಧರಿಗದು ಸುಜ್ಞಾನ||

8 : ಪ್ರಭುವಿನ ನಿಯಮ ನೀತಿಬದ್ಧ; ಮನಸ್ಸಿಗದು ಒಸಗೆ|
     ಪ್ರಭುವಿನ ಕಟ್ಟಳೆ ಪರಿಶುದ್ಧ; ಕಣ್ಣಿಗದು ದೀವಿಗೆ||

9 : ಪ್ರಭುವಿನ ಭೀತಿ ಪವಿತ್ರ; ಅದೆಂದಿಗೂ ಶಾಶ್ವತ|
     ಪ್ರಭುವಿನ ತೀರ್ಪು ಯಥಾರ್ಥ; ಪರಿಪೂರ್ಣ ನ್ಯಾಯಯುತ||

10 :ಅಪೇಕ್ಷಣೀಯವಾದುವವು ಚಿನ್ನ ಅಪರಂಜಿಗಿಂತ|
      ಅತಿಮಧುರವಾದುವು ಅಪ್ಪಟ ಜೇನುತುಪ್ಪಕ್ಕಿಂತ||

11 :ಜಾಗೃತಗೊಳ್ಳುವನು ನಿನ್ನ ದಾಸನು ಅವುಗಳಿಂದ|
      ಸಂಭಾವಿತನಾಗುವನು ಅವುಗಳ ಪಾಲನೆಯಿಂದ||

12 :ತನ್ನ ತಪ್ಪನು ತಾನರಿತುಕೊಳ್ಳುವವನಾರಯ್ಯಾ|
      ಗುಪ್ತವಾದ ಪಾಪಗಳಿಂದೆನ್ನ ಮುಕ್ತಗೊಳಿಸಯ್ಯಾ||

13 :ಕಾಪಾಡೆನ್ನನು, ಬೇಕು ಬೇಕೆಂದು ಪಾಪಮಾಡದಂತೆ|
      ಕಾದಿಡು, ಅಂಥ ಪಾಪಕೆ ನಾ ದಾಸನಾಗದಂತೆ|
      ನಿರ್ದೋಷಿಯಾಗುವೆನು, ಆ ದ್ರೋಹಕ್ಕೊಳಗಾಗದಂತೆ||

14 :ನಿನಗೊಪ್ಪಿಗೆಯಾಗಲಿ ನನ್ನ ಬಾಯಮಾತು, ಹೃದಯಧ್ಯಾನ|
      ನೀನೆನ್ನ ಪ್ರಭು, ನನಗೆ ಉದ್ಧಾರಕ, ನನಗಾಶ್ರಯಧಾಮ||




ಶುಭಸಂದೇಶ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ

13ಯೇಸುಸ್ವಾಮಿ ಪುನಃ ಗಲಿಲೇಯ ಸರೋವರದ ತೀರಕ್ಕೆ ಹೋದರು. ಜನರ ಗುಂಪು ಅವರನ್ನು ಸುತ್ತುಗಟ್ಟಿತು. ಯೇಸು ಅವರಿಗೆ ಪ್ರಬೋಧಿಸಿದರು. 14ಅಲ್ಲಿಂದ ಹೊರಟುಹೋಗುತ್ತಿರುವಾಗ, ಅಲ್ಫಾಯನ ಮಗನಾದ ಲೇವಿಯು ಸುಂಕ ವಸೂಲಿಗಾಗಿ ಉಕ್ಕಡದಲ್ಲಿ ಕುಳಿತಿರುವುದನ್ನು ಯೇಸು ಕಂಡರು. ನನ್ನನ್ನು ಹಿಂಬಾಲಿಸು, ಎಂದು ಹೇಳಿ ಕರೆದರು. ಲೇವಿ ಎದ್ದು ಅವರನ್ನು ಹಿಂಬಾಲಿಸಿದನು. 15ತದನಂತರ ಯೇಸು ಲೇವಿಯ ಮನೆಯಲ್ಲಿ ಊಟಕ್ಕೆ ಕುಳಿತಿದ್ದರು. ಬಹುಮಂದಿ ಸುಂಕದವರು, ಪಾಪಿಷ್ಠರು, ಅಲ್ಲಿಗೆ ಬಂದರು. ಇವರೆಲ್ಲರೂ ಯೇಸು ಮತ್ತು ಅವರ ಶಿಷ್ಯರ ಪಂಕ್ತಿಯಲ್ಲೇ ಊಟಕ್ಕೆ ಕುಳಿತರು. ಇಂಥವರು ಬಹುಮಂದಿ ಯೇಸುವನ್ನು ಹಿಂಬಾಲಿಸುತ್ತಿದ್ದರು. 16ಫರಿಸಾಯ ಪಂಥಕ್ಕೆ ಸೇರಿದ್ದ ಧರ್ಮಶಾಸ್ತ್ರಿಗಳಲ್ಲಿ ಕೆಲವರು, ಸುಂಕದವರ ಮತ್ತು ಇತರ ಪಾಪಿಗಳ ಪಂಕ್ತಿಯಲ್ಲಿ ಯೇಸು ಊಟ ಮಾಡುವುದನ್ನು ಕಂಡು, ಈತನು ಇಂಥಾ ಬಹಿಷ್ಕೃತ ಜನರ ಜೊತೆಯಲ್ಲಿ ಊಟ ಮಾಡುವುದೇಕೆ? ಎಂದು ಯೇಸುವಿನ ಶಿಷ್ಯರೊಡನೆ ಆಕ್ಷೇಪಿಸಿದರು. 17ಇದನ್ನು ಕೇಳಿಸಿಕೊಂಡ ಯೇಸು ಅವರಿಗೆ, ವೈದ್ಯನ ಅವಶ್ಯಕತೆ ಇರುವುದು ರೋಗಿಗಳಿಗೆ, ಆರೋಗ್ಯವಂತರಿಗಲ್ಲ; ನಾನು ಕರೆಯಲು ಬಂದಿರುವುದು ಧರ್ಮಿಷ್ಠರನ್ನಲ್ಲ, ಪಾಪಿಷ್ಠರನ್ನು, ಎಂದರು. 



ಚಿಂತನೆ
ನಾನು ಬಂದಿರುವುದು ಧರ್ಮಿಷ್ಟರಿಗಾಗಿ ಅಲ್ಲ; ಪಾಪಿಗಳಿಗಾಗಿ

ಸುಂಕ ವಸೂಲಿಮಾಡುವುದು ಯೆಹೂದ್ಯರಿಗೆ ಒಂದು ಹೇಯ ಕೃತ್ಯವಾಗಿತ್ತು. ಏಕೆಂದರೆ, ಯೆಹೂದ್ಯರು ದೇವರಿಗಲ್ಲದೆ ಬೇರೆ ಯಾರಿಗೂ ಸಹ ಸುಂಕ ನೀಡುವುದು ತಪ್ಪು ಎಂದು ಭಾವಿಸಿದ್ದರು ಹಾಗೂ ಯೇಸುವಿನ ಕಾಲದಲ್ಲಿ ಯೆಹೂದ್ಯರನ್ನು ರೋಮನ್ನರು ಆಳುತ್ತಿದ್ದರು. ರೋಮನ್ನರ ಆಳ್ವಿಕೆಯಿಂದ ಯೆಹೂದ್ಯರು ನೊಂದಿದ್ದರು, ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದರು, ಗಾಯದ ಮೇಲೆ ಬರೆಯಂತೆ ನಾನಾ ರೀತಿಯ ತೆರಿಗೆ ವಿಧಿಸಿದ್ದರು. ಸುಂಕ ವಸೂಲಿಯವರು ತಮ್ಮ ಜನರಿಂದ ಹೆಚ್ಚಿನ ಸುಂಕ ವಸೂಲಿ ಮಾಡಿ ತಮ್ಮನ್ನು ದಬ್ಬಾಳಿಕೆ ಮಾಡುತ್ತಿದ್ದ ರೋಮನ್ನರಿಗೆ ನೀಡುತ್ತಿದ್ದರು. ಹಾಗಾಗಿ ಜನಸಾಮಾನ್ಯರ ದೃಷ್ಟಿಯಲ್ಲಿ ಸುಂಕದವರು ಪಾಪಿಗಳಾಗಿದ್ದರು. ಲೇವಿಯನ್ನು ಹಿಂಬಾಲಿಸಲು ಕರೆಯುವುದರ ಮೂಲಕ `ನಾನು ಬಂದಿರುವುದು ಧರ್ಮಿಷ್ಟರಿಗಲ್ಲ, ಪಾಪಿಷ್ಟರನ್ನು ಕರೆಯಲು' ಎಂದು ತಿಳಿಸುತ್ತಾರೆ. ಲೇವಿ ತನ್ನ ಹಳೆಯ ಬದುಕನ್ನು ತೊರೆದು ಕ್ರಿಸ್ತನನ್ನು ಹಿಂಬಾಲಿಸಿದಂತೆ ನಾವು ಸಹ ನಮ್ಮ ಪಾಪಮಯ ಬದುಕನ್ನು ತೊರೆದು ಕ್ರಿಸ್ತನನ್ನು ಹಿಂಬಾಲಿಸೋಣ.

ಚಿತ್ರ: ಗೂಗಲ್ಕೃಪೆ
© 'ದನಿ' ಮಾಧ್ಯಮ ಮನೆ

ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

1 comment: