ಹನ್ನೆರಡನೆಯ ಸ್ಥಳ

ಪ್ರಭು ಯೇಸು ಶಿಲುಬೆಯ ಮೇಲೆ ಪ್ರಾಣತ್ಯಾಗ ಮಾಡುತ್ತಾರೆ


ಒಬ್ಬ: ಸ್ವಾಮಿ ಯೇಸುವೇ, ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ, ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.

ದೇವರ ವಾಕ್ಯ: ಯೇಸು ತಮ್ಮ ತಾಯನ್ನೂ ಆಕೆಯ ಪಕ್ಕದಲ್ಲಿ ನಿಂತಿದ್ದ ತಮ್ಮ ಆಪ್ತ ಶಿಷ್ಯನನ್ನೂ ನೋಡಿ, ಅಮ್ಮಾ, ಇಗೋ ನಿನ್ನ ಮಗ, ಎಂದರು. ಅನಂತರ ತಮ್ಮ ಶಿಷ್ಯನನ್ನು ಕುರಿತು, ಇಗೋ, ನಿನ್ನ ತಾಯಿ ಎಂದರು (ಯೊವಾನ್ನ ೧೯: ೨೬-೨೭) ‘ಯೇಸು ಆ ಹುಳಿರಸವನ್ನು ಸೇವಿಸುತ್ತಲೇ, ಎಲ್ಲಾ ನೆರವೇರಿತು ಎಂದು ನುಡಿದರು (ಯೊವಾನ್ನ ೧೯: ೩೦)
‘ಯೇಸುಸ್ವಾಮಿ, ಪಿತನೇ, ನನ್ನಾತ್ಮವನ್ನು ನಿಮ್ಮ ಕೈಗೊಪ್ಪಿಸುತ್ತೇನೆ ಎಂದು ಗಟ್ಟಿಯಾಗಿ ಕೂಗಿ ಪ್ರಾಣಬಿಟ್ಟರು (ಲೂಕ ೨೩: ೪೬)
ಶ್ಲೋಕ: ಪ್ರಭುಯೇಸು ನಮಗಾಗಿ ಮರಣ ಪರಿಯಂತ ವಿಧೇಯರಾದರು
ಪ್ರತಿಶ್ಲೋಕ: ಶಿಲುಬೆಯ ಮರಣಪರಿಯಂತ ವಿಧೇಯರಾದರು (ಫಿಲಿಪ್ಪಿಯರಿಗೆ ೨: ೮)

ಧ್ಯಾನ
(ಮಹಾ ಧರ್ಮಾಧ್ಯಕ್ಷ ಆಸ್ಕರ್ ರೊಮೇರೊ)
ದೇವರು ನಮ್ಮೊಂದಿಗೆ ಇಲ್ಲ ಎಂದು ನಮಗೆ ಅನಿಸಿದಾಗ, ದೇವರು ನಮ್ಮನ್ನು ಕೈಬಿಟ್ಟಿದ್ದಾರೆ ಎಂದು ನಾವು ಭಾವಿಸಬಾರದು. ನಾನು ಪ್ರಾರ್ಥಿಸಿದ್ದನ್ನು ದೇವರು ನನಗೆ ಕೊಡಲಿಲ್ಲ, ಆದ್ದರಿಂದ ಇನ್ನು ಮುಂದೆ ನಾನು ಪ್ರಾರ್ಥನೆ ಮಾಡುವುದೇ ಇಲ್ಲ ಎಂದು ನಾವು ಹೇಳಲೇಬಾರದು. ಏಕೆಂದರೆ ದೇವರು ಸದಾ ನಮ್ಮೊಂದಿಗಿದ್ದಾರೆ. ಅವರು ನಮ್ಮಿಂದ ದೂರ ಇದ್ದಾರೆ ಎಂದು ಯಾವಾಗ ನಮಗೆ ಅನಿಸುತ್ತದೆಯೋ, ಆಗ ದೇವರು ನಮಗೆ ತೀರಾ ಸಮೀಪದಲ್ಲಿ ಇರುತ್ತಾರೆ. ದೇವರು ನಿಮ್ಮೊಂದಿಗೆ ಇಲ್ಲ ಎಂಬ ಅನಿಸಿಕೆ ನಿಮಗೆ ಬಂದು, ದೇವರಿಗಾಗಿ ನಿಮ್ಮ ಅಪೇಕ್ಷೆ ತೀವ್ರವಾದಾಗ, ಆ ತೀವ್ರವಾದ ಅಪೇಕ್ಷೆಯಲ್ಲಿ ದೇವರು ನಿಮಗೆ ಇನ್ನೂ ಹತ್ತಿರವಾಗುತ್ತಾರೆ. ದೇವರು ನಮಗೆ ಸಂತೋಷವನ್ನು ನೀಡುವುದರ ಜೊತೆಗೆ, ನಮ್ಮ ನೋವಿನ ಕ್ಷಣಗಳಲ್ಲಿ ನಮ್ಮ ವಿಶ್ವಾಸವನ್ನು ಪರೀಕ್ಷಿಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನಾವು ಸಿದ್ಧರಿದ್ದೇವೆಯೇ? ಸಿದ್ಧರಿರುವಾಗ ನಮ್ಮ ಪ್ರಾರ್ಥನೆ ಹಾಗೂ ನಮ್ಮ ಧರ್ಮ ನಮಗೆ ಪುಣ್ಯಫಲಗಳ ಸರ್ವಶ್ರೇಷ್ಠ ದಾರಿಯಾಗುತ್ತವೆ. ಏಕೆಂದರೆ ಇಲ್ಲಿ ನಾವು ಧರ್ಮ ನಮಗೆ ಪುಣ್ಯಫಲಗಳ ಸರ್ವಶ್ರೇಷ್ಠ ದಾರಿಯಾಗುತ್ತವೆ. ಏಕೆಂದರೆ ಇಲ್ಲಿ ನಾವು ದೇವರು ನಮ್ಮೊಂದಿಗೆ ಇಲ್ಲ ಎಂಬ ಅನಿಸಿಕೆಯಲ್ಲೂ, ದೇವರಿಗೆ ಅತಿ ನಿಷ್ಠೆಯುಳ್ಳವರಾಗಿ ಬಾಳುತ್ತೇವೆ. ತನ್ನ ತಂದೆಯನ್ನು ಕುರಿತು ಶಿಲುಬೆ ಮೇಲಿಂದ ಪ್ರಭು ಯೇಸು ನುಡಿದ ಮಾತುಗಳಿಂದ ದೇವರು ಸದಾ ನಮ್ಮ ತಂದೆಯಾಗಿ ನಮ್ಮೊಡನಿದ್ದಾರೆ, ಅವರೆಂದಿಗೂ ನಮ್ಮ ಕೈ ಬಿಡುವುದಿಲ್ಲ. ನಾವು ಊಹಿಸುವುದಕ್ಕಿಂತಲೂ ಹೆಚ್ಚಾಗಿ ನಾವು ಅವರ ಸನಿಹ ಇದ್ದೇವೆ ಎಂಬುದನ್ನು ಮನಗಾಣೋಣ. (ಆಸ್ಕರ್ ರೋಮೇರೊ, ದ ವಯಲೆನ್ಸ್ ಆಫ್ ಲವ್, ಪುಟ ೧೩೧)

ಪ್ರಾರ್ಥಿಸೋಣ: ದಯಾಮಯ ದೇವರೇ, ನಮ್ಮ ರಕ್ಷಣೆಗಾಗಿ ನೀವು ಏಕೈಕ ಕುಮಾರರನ್ನು ಶಿಲುಬೆ ಮರಣಕ್ಕೆ ಒಪ್ಪಿಸಿದಿರಿ. ಹಾಗೂ ಅವರ ಮಹಿಮಾಭರಿತ ಪುನರುತ್ಥಾನದಿಂದ ನಮ್ಮನ್ನು ನಮ್ಮ ಶತ್ರುವಿನ ಪ್ರಭಾವದಿಂದ ಬಿಡಿಸಿದಿರಿ. ನಾವೆಲ್ಲರೂ ಪ್ರತಿದಿನವೂ ಪಾಪದ ಪಾಲಿಗೆ ಸತ್ತು, ಅವರೊಂದಿಗೆ ಪುನರುತ್ಥಾನದ ಸಂತೋಷದಲ್ಲಿ ಬಾಳುವಂತೆ ಅನುಗ್ರಹಿಸಿರಿ; ಯುಗಯುಗಾಂತರಕ್ಕೂ ಜೀವಿಸಿ ಆಳುವ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಆಮೆನ್.

ಪರಿಶುದ್ಧರೂ ಸರ್ವಶಕ್ತರೂ ಅಮರರೂ ಆಗಿರುವ ದೇವರೇ, ನನ್ನ ಮೇಲೆ ದಯೆ ತೋರಿರಿ.

 ನೋಡಿ  ಹದಿಮೂರನೆಯ ಸ್ಥಳ

No comments:

Post a Comment