ಪ್ರಭು ಯೇಸು ಮೂರನೇ ಸಲ ಬೀಳುತ್ತಾರೆ
ಒಬ್ಬ: ಸ್ವಾಮಿ ಯೇಸುವೇ, ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ,
ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು
ರಕ್ಷಿಸಿದ್ದೀರಿ
ದೇವರ ವಾಕ್ಯ: ಸರ್ವೇಶ್ವರನ ಕೋಪವೆಂಬ ಕೋಲಿನಿಂದಲೇ ಪೆಟ್ಟುತಿಂದ
ವ್ಯಕ್ತಿಯೆಂದರೆ ನಾನೇ. ಆತ ನನ್ನನ್ನು ಕರೆದೊಯ್ದು ಬೆಳಕಿನಲ್ಲಿ ಅಲ್ಲ, ಕತ್ತಲಲ್ಲೇ ನಡೆಸಿದ.
ನನ್ನನ್ನು ಹಿಡಿದು ಬಂಧಿಸಿರುವನು ದಿಬ್ಬಗಳ ಮಧ್ಯೆ, ಸುತ್ತುಗಟ್ಟಿರುವನು ಕಷ್ಟ ಸಂಕಟಗಳ ನಡುವೆ. ಎಷ್ಟೋ
ದಿನಗಳ ಹಿಂದೆ ಸತ್ತವರ ಜೊತೆಯಲ್ಲಿ, ನನ್ನನ್ನು ಇರಿಸಿದ್ದಾನೆ. ಆ ಕಾರ್ಗತ್ತಲಲ್ಲಿ
ಎಷ್ಟೋ ಮೊರೆಯಿಟ್ಟು ಕೂಗಿಕೊಂಡೆ, ಕಿವಿಗೊಡಲಿಲ್ಲ ಆತ ನನ್ನ ಮೊರೆಗೆ. ನನ್ನ ಹಲ್ಲು ಮುರಿದಿದ್ದಾನೆ
ನರುಜುಗಲ್ಲಿನಿಂದ, ನನ್ನನ್ನು ಮುಚ್ಚಿಬಿಟ್ಟಿದ್ದಾನೆ
ಬೂದಿಯಿಂದ. ಆತ ನನಗೆ ಕಹಿ ಉಣ್ಣಿಸಿದ್ದಾನೆ. ಹೊಟ್ಟೆ ತುಂಬ, ನನ್ನನ್ನು ತಣಿಸಿದ್ದಾನೆ ವಿಷಪದಾರ್ಥಗಳಿಂದ
(ಪ್ರಲಾಪಗಳು ೩: ೧, ೫-೬, ೮, ೧೫-೧೬)
ಶ್ಲೋಕ: ಪ್ರಭು ಯೇಸುವನ್ನು ಬಲಿಗೊಯ್ದ ಕುರಿಮರಿಯಂತೆ ಎಳೆದೊಯ್ದರು
ಪ್ರತಿಶ್ಲೋಕ: ತುಪ್ಪಟ ಕತ್ತರಿಸುವವನ ಮುಂದಿರುವ ಮೂಕ ಕುರಿಮರಿಯಂತೆ
(ಯೆಶಾಯ ೫೩: ೭)
ಧ್ಯಾನ
(ಮಹಾ ಧರ್ಮಾಧ್ಯಕ್ಷ ಆಸ್ಕರ್ ರೊಮೇರೊ)
ಬಿಕ್ಕಟ್ಟಿನ ಸ್ಥಿತಿಗೆ ಪ್ರಚೋದನೆ ನೀಡದ ಧರ್ಮಸಭೆಯ
ಬೋಧನೆ, ತಳಮಳವನ್ನು ಉಂಟು ಮಾಡದ ಶುಭಸಂದೇಶದ ಬೋಧನೆ, ಅಂತರಂಗವನ್ನು ಸ್ಪರ್ಶಿಸದ ದೇವರ ವಾಕ್ಯದ ಬೋಧನೆ,
ಪ್ರಸ್ತುತ ಸಮಾಜದಲ್ಲಿರುವ ಪಾಕೃತ್ಯಗಳ ಕುರಿತು ಚಕಾರವೆತ್ತದ ದೇವರ ವಾಕ್ಯದ ಬೋಧನೆ - ಇದಾವ ಪರಿಯ ಶುಭಸಂದೇಶ
ಪ್ರಸಾರ? ಇಂತಹ ಬೋಧನೆಯು ಕೇವಲ ಭಕ್ತಿಪೂರ್ವಕ ಮಾತುಗಳಿಂದ ತುಂಬಿರುತ್ತದೆ ಹಾಗೂ ಇದು ಯಾರನ್ನೂ ತಟ್ಟುವುದಿಲ್ಲ.
ಅನೇಕರಿಗೆ ಇಂತಹ ಬೋಧನೆ ಇಷ್ಟ.
ಯಾವ ಬೋಧಕರು ಪ್ರತಿಭಟನೆಗೆ ಹೆದರಿ, ಸಂಘರ್ಷ ಹಾಗೂ ಕಷ್ಟ ತೊಂದರೆಗೆ ತಾವು ಒಳಗಾಗಬಾರದು ಎಂಬ ಉದ್ದೇಶದಿಂದ
ಜಟಿಲ ಸಮಸ್ಯೆಗಳನ್ನು ಕೈಬಿಡುತ್ತಾರೋ, ಅವರು ತಾವಿರುವ ಸಮಾಜವನ್ನು ಬೆಳಗಿಸಲು ವಿಫಲರಾಗುತ್ತಾರೆ.
ಸಂತ ಪ್ರೇತರಲ್ಲಿ ಇದ್ದಂತಹ ಧೈರ್ಯ ಇವರಿಗಿಲ್ಲ. ಸಂತ ಪ್ರೇತರು ಅಂದು ತಮ್ಮ ಪ್ರಾಣಾಪಾಯವನ್ನು ಲೆಕ್ಕಿಸದೆ,
ಪ್ರಭು ಯೇಸುಕ್ರಿಸ್ತರ ಶಿಲುಬೆ ಮರಣಕ್ಕೆ ಕಾರಣಕರ್ತರಾದ ಜನತೆಯನ್ನು ಉದ್ದೇಶಿಸಿ ‘ನೀವು ಅವರನ್ನು
ಕೊಲ್ಲಿಸಿದಿರಿ’ ಎಂದು ಸಾರಿ ಹೇಳಿದರು. ಶುಭಸಂದೇಶವು ಧೈರ್ಯದ
ನುಡಿಯಾಗಿದೆ. ಏಕೆಂದರೆ ಅದು ಲೋಕದ ಪಾಪಗಳನ್ನು ಪರಿಹರಿಸಲು ಬಂದ ಪ್ರಭು ಯೇಸುವಿನ ಸುವಾರ್ತೆಯಾಗಿದೆ.
(ಆಸ್ಕರ್ ರೋಮೇರೊ, ದ ವಯಲೆನ್ಸ್ ಆಫ್ ಲವ್, ಪುಟ ೪೪)
ಪ್ರಾರ್ಥಿಸೋಣ: ದಯಾಮಯ ದೇವರೇ, ನಿಮ್ಮ ದಿವ್ಯ ಕುಮಾರರ ಯಾತನೆಯಿಂದ
ಅವಮಾನಕರವಾದ ಮರಣವನ್ನು ನಮಗೆ ಜೀವೋದ್ಧಾರ ನೀಡುವ ಸಾಧನವನ್ನಾಗಿ ಕರುಣಿಸಿದಿರಿ. ನಾವೆಲ್ಲರೂ ಪ್ರಭು
ಯೇಸುಕ್ರಿಸ್ತರ ಶಿಲುಬೆಯಲ್ಲಿ ಹೆಚ್ಚಳ ಪಡುತ್ತಾ ನಿಮ್ಮ ಕುಮಾರರೂ ನಮ್ಮ ರಕ್ಷಕರೂ ಆಗಿರುವ ಅವರಿಗಾಗಿ
ನಮ್ಮ ಜೀವನದಲ್ಲಿ ನಮಗೆ ಬಂದೊದಗುವ ಅವಮಾನಗಳನ್ನೂ, ಸೋಲುಗಳನ್ನೂ ಸಹಿಸಿಕೊಳ್ಳಲು ಕೃಪೆ ನೀಡಿರಿ. ನಿಮ್ಮ ಕುಮಾರ ಪ್ರಭು ಯೇಸುಕ್ರಿಸ್ತರ ಮುಖಾಂತರ ಪ್ರಾರ್ಥಿಸುತ್ತೇವೆ, ಆಮೆನ್.
ಪರಿಶುದ್ಧರೂ
ಸರ್ವಶಕ್ತರೂ ಅಮರರೂ ಆಗಿರುವ ದೇವರೇ, ನನ್ನ ಮೇಲೆ ದಯೆ ತೋರಿರಿ.
ನೋಡಿ ಹತ್ತನೆಯ ಸ್ಥಳ

No comments:
Post a Comment