ಮೂರನೆಯ ಸ್ಥಳ


ಶಿಲುಬೆ ಹೊತ್ತ ಪ್ರಭು ಯೇಸು ಬೀಳುತ್ತಾರೆ

ಒಬ್ಬ: ಸ್ವಾಮಿ ಯೇಸುವೇ, ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ, ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ

ದೇವರ ವಾಕ್ಯ: ಕ್ರಿಸ್ತ ಯೇಸುವಿನಲ್ಲಿರುವ ಮನೋಭಾವ ನಿಮ್ಮಲ್ಲೂ ನೆಲಸಿರಲಿ: ದೇವಸ್ವರೂಪಿ ತಾನಾಗಿದ್ದರೂ ನಿರುತ, ದೇವರಿಗೆ ಸಮನಾದ ಆ ಸಿರಿ ಪದವಿಯನಾತ, ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ. ತನ್ನನೇ ಬರಿದು ಮಾಡುಕೊಂಡು, ದಾಸನ ರೂಪವ ಧರಿಸಿಕೊಂಡು, ಮನುಜನಾಕಾರದಲಿ ಕಾಣಿಸಿಕೊಂಡು, ನರಮಾನವರಿಗೆ ಸರಿಸಮನಾದ, ತನ್ನನೇ ಆತ ತಗ್ಗಿಸಿಕೊಂಡು, ವಿಧೇಯನಾದ. ಎಂತಲೇ ಪರಮೋನ್ನತ ಸ್ಥಾನಕ್ಕೇರಿಸಿದನಾತನನು, ಇತ್ತನು ಹೆಸರುಗಳೊಳುತ್ತಮ ಹೆಸರನು, ದೇವಪರಮನು. ಯೇಸುವಿನ ಹೆಸರಿಗೆಂದೇ, ಮೊಣಕಾಲೂರಿ ಮಣಿವರು, ಸ್ವರ್ಗವಾಸಿಗಳು, ಭೂನಿವಾಸಿಗಳು, ಪಾತಾಳ ಜೀವರಾಶಿಗಳು. ‘ಕ್ರಿಸ್ತಯೇಸುವೇ ಪ್ರಭು ಎಂದೆಲ್ಲರಿಗೆ ಅರಿಕೆ ಮಾಡುವರು, ಪಿತದೇವನ ಮಹಿಮೆಯನ್ನು ಈ ಪರಿ ಹೊಗಳಿ ಸಾರುವವರು (ಫಿಲಿಪ್ಪಿಯರಿಗೆ ೨: ೫-೧೧)

ಶ್ಲೋಕ: ನಿಜವಾಗಿ ವಹಿಸಿಕೊಂಡನಾತ ನಮ್ಮ ಬಾಧೆಗಳನು (ಯೆಶಾಯ ೫೩: ೪)
ಪ್ರತಿಶ್ಲೋಕ: ಹೊರೆಯಂತೆ ಹೊತ್ತನಾತ ನಮ್ಮ ಕಷ್ಟಸಂಕಟಗಳನು (ಯೆಶಾಯ ೫೩: ೪)

ಧ್ಯಾನ
(ಮಹಾ ಧರ್ಮಾಧ್ಯಕ್ಷ ಆಸ್ಕರ್ ರೊಮೇರೊ)
ಮನುಷ್ಯರ ಜೀವಕ್ಕೆ, ಸ್ವಾತಂತ್ರ್ಯಕ್ಕೆ ಹಾಗೂ ಘನತೆಗೆ ಹಾನಿಯನ್ನು ಉಂಟುಮಾಡುವ ಅನೇಕ ಘಟನೆಗಳನ್ನು ಧರ್ಮಸಭೆಯು ತೀವ್ರವಾದ ನೋವಿನಿಂದ ಗಮನಿಸುತ್ತಿದೆ. ಈ ಲೋಕದ ಹಿತವನೇ ಬಯಸುವ ಧರ್ಮಸಭೆಯ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸೃಷ್ಟಿಕರ್ತರ ರೂಪ ಇದೆ, ಆ ರೂಪವನ್ನು ವಿರೂಪಗೊಳಿಸುವವರು ದೇವರನ್ನೇ ವಿರೋಧಿಸುತ್ತಾರೆ ಎಂದು ನಂಬುತ್ತದೆ. ದೇವರ ಹಾಗೂ ಅವರ ಸ್ವರೂಪವನ್ನು ಹೊಂದಿರುವ ಪ್ರತಿಯೊಬ್ಬರ ಹಕ್ಕು ಬಾಧ್ಯತೆಗಳ ಪರ ನಿಲ್ಲುವ ಪವಿತ್ರವಾದ ಹೊಣೆಗಾರಿಕೆಯನ್ನು ಹೊಂದಿರುವ ಧರ್ಮಸಭೆಯು ಈಗ ದನಿಯೆತ್ತಿ ಮಾತನಾಡಬೇಕು. ಅದರ ಮುಖದ ಮೇಲೆ ಉಗುಳು ಬೀಳಬಹುದು, ಅದರ ಬೆನ್ನ ಮೇಲೆ ಚಾಟಿಯೇಟು ಬೀಳಬಹುದು, ಯಾತನೆಯ ಶಿಲುಬೆಯನ್ನು ಸಹಿಸಬೇಕಾಗಬಹುದು ಈ ಎಲ್ಲಾ ಮನುಷ್ಯರು ಅವರು ಅವಿಶ್ವಾಸಿಗಳೇ ಆಗಿರಲಿ, ದೇವರ ಸ್ವರೂಪವನ್ನು ಹೊಂದಿರುವ ಅವರು ಈ ಕಷ್ಟ ಸಂಕಟಗಳನ್ನು ಅನುಭವಿಸುತ್ತಿದ್ದಾರೆ. ಮನುಷ್ಯ ಹಾಗೂ ದೇವರ ಸ್ವರೂಪದ ಮಧ್ಯೆ ಯಾವುದೇ ವಿಂಗಡಣೆ ಇಲ್ಲ. ಯಾರು ಮನುಷ್ಯರನ್ನು ಹಿಂಸೆಗೆ ಗುರಿಪಡಿಸುತ್ತಾರೋ, ಯಾರು ಮನುಷ್ಯರ ಮೇಲೆ ದೌರ್ಜನ್ಯ ಎಸಗುತ್ತಾರೋ, ಅವರು ದೇವರ ಸ್ವರೂಪದ ಮೇಲೆ ದೌರ್ಜನ್ಯವೆಸಗುತ್ತಾರೆ. ಧರ್ಮಸಭೆಯು ಈ ಶಿಲುಬೆ ಹಾಗೂ ಬಲಿದಾನವನ್ನು ತನ್ನದೇ ಎಂದು ಭಾವಿಸುತ್ತದೆ. (ಆಸ್ಕರ್ ರೋಮೇರೊ, ದ ವಯಲೆನ್ಸ್ ಆಫ್ ಲವ್, ಪುಟ ೨೬)

ಪ್ರಾರ್ಥಿಸೋಣ: ದಯಾಮಯ ದೇವರೇ ತೀವ್ರವಾದ ಅನೇಕ ಅಪಾಯಗಳ ಮಧ್ಯೆ ನಾವು ಇರುವುದನ್ನು ನೀವು ಬಲ್ಲವರಾಗಿದ್ದೀರಿ. ಇಂತಹ ಪರಿಸ್ಥಿತಿಯಲ್ಲಿ, ನಮ್ಮ ಸ್ವಾಭಾವಿಕ ಬಲಹೀನತೆಯಿಂದಾಗಿ, ಎದ್ದು ನಿಲ್ಲಲು ಅಶಕ್ತರಾಗಿರುವ ನಮಗೆ ಬಲ ಹಾಗೂ ರಕ್ಷಣೆಯನ್ನು ದಯಪಾಲಿಸಿರಿ. ಈ ಮೂಲಕ ಎಲ್ಲಾ ಅಪಾಯಗಳಲ್ಲೂ ನಿಮ್ಮ ಆಧಾರ ನಮಗೆ ಸಿಗಲಿ, ಹಾಗೂ ಎಲ್ಲಾ ಶೋಧನೆಗಳನ್ನು ನಾವು ಮೆಟ್ಟಿ ನಿಲ್ಲುವಂತಾಗಲಿ; ಪ್ರಭು ಯೇಸುಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಆಮೆನ್.

ಪರಿಶುದ್ಧರೂ ಸರ್ವಶಕ್ತರೂ ಅಮರರೂ ಆಗಿರುವ ದೇವರೇ, ನನ್ನ ಮೇಲೆ ದಯೆ ತೋರಿರಿ.






No comments:

Post a Comment