ಪ್ರಭು ಯೇಸು ತಮ್ಮ ಶಿಲುಬೆಯನ್ನು ಹೊತ್ತುಕೊಳ್ಳುತ್ತಾರೆ
ಒಬ್ಬ: ಸ್ವಾಮಿ ಯೇಸುವೇ, ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ, ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ದೇವರ ವಾಕ್ಯ: ‘ಬಳಿಕ ಅವರನ್ನು ಶಿಲುಬೇಗೇರಿಸಲು ಕರೆದೊಯ್ದರು. ಅವರೆಲ್ಲರೂ ಗೊಲ್ಗೊಥ ಎಂಬ ಸ್ಥಳಕ್ಕೆ ಬಂದು ಸೇರಿದರು (ಮತ್ತಾಯ ೨೭: ೩೧,೩೩) ‘ಯೇಸು ದೇವರ ಪುತ್ರರಾಗಿದ್ದರೂ ಹಿಂಸೆಬಾಧೆಗಳನ್ನು ತಪ್ಪಿಸಿಕೊಳ್ಳದೆ ವಿಧೇಯತೆಯನ್ನು ಅನುಭವದಿಂದ ಅರಿತುಕೊಂಡರು. (ಹಿಬ್ರಿಯರಿಗೆ ೫: ೮) ‘ಬಾಧೆಗಳಿಗೊಳಗಾದ, ಹಿಂಸೆ ಸಹಿಸಿದ, ಆತ ಬಾಯ್ದೆರೆಯದೆ, ಹೌದು, ಬಾಯ್ದೆರೆಯದಿದ್ದ ಬಲಿಗೊಯ್ದ ಕುರಿಮರಿಯಂತೆ, ತುಪ್ಪಟ ಕತ್ತಸುವವನ ಮುಂದಿರುವ ಮೂಕ ಕುರಿಮರಿಯಂತೆ (ಯಶಾಯ ೫೩: ೭) ‘ವಧಿತ ಕುರಿಮರಿಯಾದಾತನು ಶಕ್ತಿಯನು, ಸಿರಿತನವನು, ಗೌರವವನು, ಘನ ಮಾನವನು, ಸ್ತುತಿಯನು, ಸುಜ್ಞಾನವನು ಹೊಂದಲು ಯೋಗ್ಯನು (ಪ್ರಕಟಣೆ ೫: ೧೨)
ಶ್ಲೋಕ: ನಮ್ಮೆಲ್ಲರ ದೋಷವನ್ನು ಸರ್ವೇಶ್ವರ ಹಾಕಿದ ಆತನ ಮೇಲೆ (ಯೆಶಾಯ ೫೩: ೬)
ಪ್ರತಿ ಶ್ಲೋಕ: ನಮ್ಮ ಜನರ ಪಾಪದ ದೆಸೆಯಿಂದ ಪ್ರಭು ಯೇಸುಕ್ರಿಸ್ತರು ವಧೆಯಾದರು. (ಯೆಶಾಯ ೫೩: ೮)
ಧ್ಯಾನ(ಮಹಾಧರ್ಮಾಧ್ಯಕ್ಷ ಆಸ್ಕರ್ ರೊಮೇರೊ):
ಲೋಕದಲ್ಲಿ ತಲ್ಲಣವನ್ನು ಉಂಟು ಮಾಡದೆ ದೇವರ ವಾಕ್ಯದ ಸೇವೆ ಮಾಡುವುದು ಸುಲಭ. ಇಲ್ಲಿ ದೇವರ ವಾಕ್ಯದ ಬೋಧನೆಯು ತೀರಾ ಅಮೂರ್ತವಾಗಿರುತ್ತದೆ. ಈ ಬೋಧನೆಯು ಮಾನವ ಚರಿತ್ರೆಗೆ ಯಾವುದೇ ಬದ್ಧತೆ ಪ್ರದರ್ಶಿಸುವುದಿಲ್ಲ. ಇದು ವಿಶ್ವದೆಲ್ಲೆಡೆ ಸಲ್ಲುವ ಬೋಧನೆಯಾಗಿರುತ್ತದೆ. ಈ ಬೋಧನೆಯು ಯಾವುದೇ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ ಯಾವುದೇ ಸಂಘರ್ಷವನ್ನು ಹುಟ್ಟುಹಾಕುವ ಬೋಧನೆ ಯಾವುದು? ಹಿಂಸೆಯನ್ನು ಆಹ್ವಾನಿಸುವ ಬೋಧನೆ ಯಾವುದು? ನೈಜ ಧರ್ಮಸಭೆಯನ್ನು ಕಟ್ಟುವ ದೇವರ ವಾಕ್ಯದ ಬೋಧನೆ ಯಾವುದು? ಅದು ಪ್ರವಾದಿಗಳ ಬೋಧನೆಯಂತಿರುವ ಉರಿಜ್ವಾಲೆಯನ್ನು ಹೊತ್ತಿಸುವ ಬೋಧನೆ. ಅಂತಹ ದೇವರ ವಾಕ್ಯದ ಬೋಧನೆಯು ಸಾರುತ್ತದೆ ಹಾಗೂ ಆಪಾದಿಸುತ್ತದೆ. ಆ ಬೋಧನೆಯು ಜನತೆಗೆ ದೇವರ ಮಹತ್ಕಾರ್ಯಗಳನ್ನು ಸಾರುತ್ತದೆ ಹಾಗೂ ಅವುಗಳನ್ನು ಅವರು ವಿಶ್ವಾಸಿಸುವಂತೆ ಮತ್ತು ಗೌರವಿಸುವಂತೆ ಪ್ರೇರೇಪಿಸುತ್ತದೆ. ಆ ಬೋಧನೆಯು ದೇವರ ರಾಜ್ಯಭಾರವನ್ನು ವಿರೋಧಿಸುವವರ ಪಾಪಗಳನ್ನು ಖಂಡಿಸುತ್ತದೆ.. ಮಾತ್ರವಲ್ಲದೆ ಅವರ ಹೃದಯಗಳಿಂದ, ಅವರ ಸಮಾಜದಿಂದ, ಅವರ ಕಾನೂನುಗಳಿಂದ, ಶೋಷಿಸುವ ಕಾರಣ ಇಲ್ಲದೆ ಬಂಧಿಸುವ, ದೈವಿಕ ಮತ್ತು ಮಾನವ ಹಕ್ಕುಗಳನ್ನು ದಮನಿಸುವ ಅವರ ಸಂಸ್ಥೆಗಳಿಂದ, ಪಾಪವು ತೊಲಗುವಂತೆ ನೋಡಿಕೊಳ್ಳುತ್ತದೆ. ಈ ಪರಿ ದೇವರ ವಾಕ್ಯದ ಸೇವೆ ಮಾಡುವುದು ಕಷ್ಟಕರ. ಆದರೆ ಇಲ್ಲಿ ದೇವರಾತ್ಮರು ಪ್ರವಾದಿಯೊಂದಿಗೆ ಹಾಗೂ ಬೋಧಕರೊಂದಿಗೆ ಇರುತ್ತಾರೆ. ಏಕೆಂದರೆ ಅವರೇ ದೇವರ ರಾಜ್ಯಭಾರ ಸಮಸ್ತ ಜನತೆಗೆ ಸದಾ ಕಾಲಕ್ಕೂ ಸಾರುವ ಪ್ರಭು ಯೇಸುಕ್ರಿಸ್ತ (ಆಸ್ಕರ್ ರೋಮೇರೊ, ದ ವಯಲೆನ್ಸ್ ಆಫ್ ಲವ್, ಪುಟ ೧೮)
ಪ್ರಾರ್ಥಿಸೋಣ: ಸರ್ವಶಕ್ತ ದೇವರೇ, ನಮ್ಮೆಲ್ಲರ ರಕ್ಷಣೆಗಾಗಿ ನಿಮ್ಮ ಪ್ರಿಯಕುಮಾರರು ಶಿಲುಬೆಯ ಯಾತನೆಯನ್ನು ಹಾಗೂ ಅವಮಾನವನ್ನು ಸ್ವಇಚ್ಛೆಯಿಂದ ಸಹಿಸಿದರು: ನಮ್ಮೆಲ್ಲರಿಗೂ ನಮ್ಮ ನಮ್ಮ ಶಿಲುಬೆಯನ್ನು ಹೊತ್ತುಕೊಂಡು ಅವರನ್ನು ಹಿಂಬಾಲಿಸಲು ಧೈರ್ಯವನ್ನು ನೀಡಿರಿ. ಯುಗ ಯುಗಕ್ಕೂ ಜೀವಿಸಿ ಆಳುವ ಅವರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಆಮೆನ್.

No comments:
Post a Comment