ಏಳನೆಯ ಸ್ಥಳ

ಪ್ರಭು ಯೇಸು ಮತ್ತೊಮ್ಮೆ ಬೀಳುತ್ತಾರೆ


ಒಬ್ಬ: ಸ್ವಾಮಿ ಯೇಸುವೇ, ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ, ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.

ದೇವರ ವಾಕ್ಯ: ನಿಜವಾಗಿ ವಹಿಸಿಕೊಂಡನಾತ ನಮ್ಮ ಬಾಧೆಗಳನು, ಹೊರೆಯಂತೆ ಹೊತ್ತನಾತ ನಮ್ಮ ಕಷ್ಟಸಂಕಟಗಳನು. ತೊಳಲುತ್ತಿದ್ದೆವು ನಾವೆಲ್ಲರೂ ದಾರಿ ತಪ್ಪಿದ ಕುರಿಗಳಂತೆ, ಹಿಡಿಯುತ್ತಿದ್ದನು ಪ್ರತಿಯೊಬ್ಬನೂ ತನ್ನ ದಾರಿಯನ್ನೆ. ನಮ್ಮೆಲ್ಲರ ದೋಷವನು ಸರ್ವೇಶ್ವರ ಹಾಕಿದ್ದ ಆತನ ಮೇಲೆ, ಬಾಧೆಗೊಳಗಾದ ಹಿಂಸೆ ಸಹಿಸಿದ ಆತ, ಬಾಯ್ದೆರೆಯದೆ ವಧೆಯಾದನಾತ ನಮ್ಮ ಜನರ ಪಾಪದ ದೆಸೆಯಿಂದ (ಯೆಶಾಯ ೫೩: ೪, ೬-೭, ೮)
ಶ್ಲೋಕ: ಮನುಜ ನಾನು, ಕ್ರಿಮಿ ಕೀಟಕೆ ಸಮಾನನು
ಪ್ರತಿಶ್ಲೋಕ: ಅಲಕ್ಷಿತನು, ಪರರಿಂದ ತಿರಸ್ಕೃತನು (ಕೀರ್ತನೆ ೨೨: ೬)

ಧ್ಯಾನ
(ಮಹಾ ಧರ್ಮಾಧ್ಯಕ್ಷ ಆಸ್ಕರ್ ರೊಮೇರೊ)
ಪವಿತ್ರ ವಾರದಲ್ಲಿ ಪ್ರಭು ಯೇಸುವಿನ ತಪಶ್ಚರ‍್ಯೆಗಳಲ್ಲಿ ನಾವು ಭಾಗಿಯಾಗುತ್ತೇವೆ. ಯುಕ್ತವಾದ ಈ ತಪಶ್ಚರ್ಯೆಗಳ ಮೂಲಕ ಪ್ರಭು ಯೇಸು ತಮ್ಮನ್ನು ತಾವೇ ಹಿಂಸೆಗೆ ಒಳಪಡಿಸುತ್ತಾರೆ, ಹಾಗೂ ನಮಗೂ ಈ ದಾರಿಯನ್ನು ಹಿಡಿಯಲು ಕರೆ ನೀಡುತ್ತಾರೆ. ನನ್ನನ್ನು ಹಿಂಬಾಲಿಸುವವರು ತಮ್ಮನ್ನು ತಾವೇ ಪರಿತ್ಯಜಿಸಲಿ ಅಂದರೆ ತಮ್ಮ ಬಗ್ಗೆ ತಾವೇ ನಿಷ್ಠುರವಾಗಿ ವರ್ತಿಸುತ್ತಾ ತಮ್ಮಲ್ಲಿರುವ ಅಹಂಕಾರವನ್ನು ನಿಯಂತ್ರಿಸಲಿ, ತಮ್ಮೊಳಗಿರುವ ಲೋಭ, ದುರಾಸೆ, ಒಣ ಪ್ರತಿಷ್ಠೆ, ಹಾಗೂ ಗರ್ವವನ್ನು ತ್ಯಜಿಸಲಿ. ಇಂತಹುಗಳನ್ನು ನಾಶ ಮಾಡಲೇಬೇಕು. ಅಗತ್ಯವಾಗಿರುವ ಈ ಬಗೆಯ ಹಿಂಸೆಯಿಂದ ನೂತನ ವ್ಯಕ್ತಿಯ ಆಗಮನವಾಗುತ್ತದೆ. ಈ ವ್ಯಕ್ತಿಯಿಂದ ಪ್ರೀತಿಯ ನೂತನ ನಾಗರಿಕತೆ ಸಾಧ್ಯವಾಗುತ್ತದೆ.(ಆಸ್ಕರ್ ರೋಮೇರೊ, ದ ವಯಲೆನ್ಸ್ ಆಫ್ ಲವ್, ಪುಟ ೩೯)

ಪ್ರಾರ್ಥಿಸೋಣ: ಸರ್ವಶಕ್ತ ಪ್ರೀತಿಮಯ ದೇವರೇ, ಮನುಕುಲದ ಮೇಲೆ ನಿಮಗಿರುವ ಆಳವಾದ ಪ್ರೀತಿಯಿಂದ ನೀವು ನಿಮ್ಮ ಕುಮಾರರನ್ನು ನಮ್ಮ ರಕ್ಷಕರಾಗಿ ಈ ಲೋಕಕ್ಕೆ ಕಳುಹಿಸಿದಿರಿ. ಇವರು ನಮ್ಮ ಸ್ವಭಾವವನ್ನು ಧರಿಸಿ, ನಮಗಾಗಿ ಶಿಲುಬೆಯ ಮೇಲೆ ಪ್ರಾಣಾರ್ಪಣೆ ಮಾಡಿ, ನಮಗೆ ದೀನತೆಯ ಉನ್ನತ ಆದರ್ಶವನಿತ್ತರು. ನಾವು ಅವರ ಯಾತನೆಯ ಹಾದಿಯಲ್ಲಿ ನಡೆಯುತ್ತಾ ಅವರ ಪುನರುತ್ಥಾನದಲ್ಲಿ ಭಾಗಿಯಾಗುವಂತೆ ಕರುಣಿಸಿರಿ. ಯುಗಯುಗಾಂತರಕ್ಕೂ ಜೀವಿಸಿ ಆಳುವ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಆಮೆನ್.

ಪರಿಶುದ್ಧರೂ ಸರ್ವಶಕ್ತರೂ ಅಮರರೂ ಆಗಿರುವ ದೇವರೇ, ನನ್ನ ಮೇಲೆ ದಯೆ ತೋರಿರಿ..





No comments:

Post a Comment