ಎಂಟನೆಯ ಸ್ಥಳ

ಜೆರುಸಲೇಮಿನ ಮಹಿಳೆಯರನ್ನು ಪ್ರಭು ಯೇಸು ಸಂತೈಸುತ್ತಾರೆ



ಒಬ್ಬ: ಸ್ವಾಮಿ ಯೇಸುವೇ, ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ, ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.

ದೇವರ ವಾಕ್ಯ: ‘ಜನರ ದೊಡ್ಡ ಗುಂಪು ಯೇಸುವಿನ ಹಿಂದೆ ಹೊರಟಿತು. ಕೆಲವು ಮಹಿಳೆಯರು ಯೇಸುವಿಗಾಗಿ ದುಃಖಪಟ್ಟು, ಎದೆಬಡಿದುಕೊಂಡು ಗೋಳಾಡುತ್ತಾ, ಹಿಂಬಾಲಿಸುತ್ತಿದ್ದರು. ಯೇಸು ಅವರ ಕಡೆ ತಿರುಗಿ ‘ಜೆರುಸಲೇಮಿನ ಕುವರಿಯರೇ, ನನಗಾಗಿ ಅಳಬೇಡಿ; ನಿಮಗಾಗಿ, ನಿಮ್ಮ ಮಕ್ಕಳಿಗಾಗಿ ದುಃಖಿಸಿರಿ ಎಂದರು (ಲೂಕ ೨೩: ೨೭-೨೮)
ಶ್ಲೋಕ: ಅಳುತಳುತಾ ಬಿತ್ತುವವರು
ಪ್ರತಿಶ್ಲೋಕ: ನಲಿನಲಿಯುತ್ತಾ ಕೊಯ್ಯುವರು (ಕೀರ್ತನೆ ೧೨೬: ೫)

ಧ್ಯಾನ
(ಮಹಾ ಧರ್ಮಾಧ್ಯಕ್ಷ ಆಸ್ಕರ್ ರೊಮೇರೊ)
ಸಾವಿರಾರು ಬಗೆಯ ಶೋಷಣೆಗಳಿಂದ ಕಂಗೆಟ್ಟಿರುವ ಕೋಟ್ಯಾನುಕೋಟಿ ಮಂದಿ ವಿಮೋಚನೆಗಾಗಿ ಹಾತೊರೆಯುವಾಗ ಧರ್ಮಸಭೆಯು ತನ್ನ ಕಿವಿ ಬಾಯಿಯನ್ನು ಮುಚ್ಚಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಆದರೆ ಧರ್ಮಸಭೆಯು ಇವರೆಲ್ಲರಿಗೂ ನೈಜ ವಿಮೋಚನೆಯ ದಾರಿಯನ್ನು ತಿಳಿಸುತ್ತದೆ. ಅಂದರೆ ಪ್ರಭು ಯೇಸು ತಮ್ಮ ಪುನರುತ್ಥಾನದಿಂದ ಪಾಪ, ಮರಣ ಹಾಗೂ ನರಕದ ಸಂಕೋಲೆಗಳನ್ನು ಕಳಚಿ, ಈ ಲೋಕದಲ್ಲಿ ಆರಂಭಿಸಿರುವ ವಿಮೋಚನೆಯ ದಾರಿ. ಈ ದಾರಿಯನ್ನು ಹಿಡಿಯುವವರು ಕ್ರಿಸ್ತರಂತೆ ಪಾಪವಿಮುಕ್ತರಾಗಿ ವಿಮೋಚನೆಯ ನೈಜ ಅನುಭವವನ್ನು ಪಡೆಯುತ್ತಾರೆ. ನಿಜವಾದ ಕ್ರೈಸ್ತರು ಪುನರುತ್ಥಾನರಾದ ಪ್ರಭು ಯೇಸುವಿನಲ್ಲಿ ತಮ್ಮ ವಿಶ್ವಾಸವನ್ನು ಇರಿಸಿ ಹೆಚ್ಚು ನ್ಯಾಯಯುತವಾದ ವ್ಯವಸ್ಥೆಯನ್ನು ವಿಶ್ವದಲ್ಲಿ ಬರಮಾಡಲು ದುಡಿಯುತ್ತಾರೆ. ಇವರು ಇಂದಿನ ವ್ಯವಸ್ಥೆಯಲ್ಲಿರುವ ಅನ್ಯಾಯ, ಅಕ್ರಮಗಳ ವಿರುದ್ಧ, ಮನುಷ್ಯರೇ ಮನುಷ್ಯರ ಶೋಷಣೆ ಮಾಡುವ ವಿರುದ್ಧ, ಶ್ರೇಷ್ಠ ವಿಮೋಚಕರ ವಿಮೋಚನಾ ಕಾರ್ಯವನ್ನು ಮುಂದುವರಿಸುತ್ತಾರೆ (ಆಸ್ಕರ್ ರೋಮೇರೊ, ದ ವಯಲೆನ್ಸ್ ಆಫ್ ಲವ್, ಪುಟ ೪೧)

ಪ್ರಾರ್ಥಿಸೋಣ: ದಯಾಮಯ ದೇವರೇ ಧರ್ಮಸಭೆಯು ತಾನು ಎಸಗಿರುವ ಪಾಪಗಳಿಗಾಗಿ ಪಶ್ಚಾತ್ತಾಪ ಪಡುವಂತೆ, ಅವುಗಳಿಗಾಗಿ ಪ್ರಾಯಶ್ಚಿತ್ತ ಮಾಡಿ ಅವುಗಳನ್ನು ತ್ಯಜಿಸುವಂತೆ ಕಲಿಸಿರಿ. ಈ ಮೂಲಕ ನಿಮ್ಮ ಕ್ಷಮಾದಾನವನ್ನು ಪಡೆದು, ನಮ್ಮ ಮಕ್ಕಳು ಹಾಗೂ ಅವರ ಮಕ್ಕಳು ಈ ಪಾಪಗಳಿಂದ ಬಂದೊದಗುವ ದುರ್ಗತಿಯಿಂದ ಮುಕ್ತರಾಗಲಿ. ನಿಮ್ಮ ಕುಮಾರ ಪ್ರಭು ಯೇಸುಕ್ರಿಸ್ತರ ಮುಖಾಂತರ ಪ್ರಾರ್ಥಿಸುತ್ತೇವೆ. ಆಮೆನ್.
ಪರಿಶುದ್ಧರೂ ಸರ್ವಶಕ್ತರೂ ಅಮರರೂ ಆಗಿರುವ ದೇವರೇ, ನನ್ನ ಮೇಲೆ ದಯೆ ತೋರಿರಿ.





No comments:

Post a Comment