ಸಿರೇನ್ಯದ ಸಿಮೋನನ ಮೇಲೆ ಶಿಲುಬೆ ಹೊರಿಸುತ್ತಾರೆ
ಒಬ್ಬ: ಸ್ವಾಮಿ ಯೇಸುವೇ, ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ,
ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು
ರಕ್ಷಿಸಿದ್ದೀರಿ.
ದೇವರ ವಾಕ್ಯ: ‘ಸೈನಿಕರು ಯೇಸುಸ್ವಾಮಿಯನ್ನು ಕರೆದುಕೊಂಡು ಊರ
ಹೊರಗೆ ಹೋಗುತ್ತಿದ್ದಾಗ ಸಿರೇನ್ ಪಟ್ಟಣದ ಸಿಮೋನ್ ಎಂಬಾತನನ್ನು ಕಂಡರು. ಯೇಸುವಿನ ಶಿಲುಬೆಯನ್ನು ಹೊತ್ತು
ಬರುವಂತೆ ಅವನನ್ನು ಬಲವಂತ ಮಾಡಿದರು. (ಮತ್ತಾಯ ೨೭: ೩೨)
ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ,
ಅವನು ತನ್ನನ್ನು ತಾನೇ ಪರಿತ್ಯಜಿಸಿ, ತನ್ನ ಶಿಲುಬೆಯನ್ನು ಅನುದಿನವೂ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. (ಲೂಕ ೯: ೨೩)
‘ನನ ನೊಗಕ್ಕೆ ಹೆಗಲು ಕೊಟ್ಟು
ನನ್ನಿಂದ ಕಲಿತುಕೊಳ್ಳಿ, ಆಗ ನಿಮಗೆ ವಿಶ್ರಾಂತಿ ಸಿಗುವುದು. ನನ್ನ ನೊಗ ಹಗುರ,
ನನ್ನ ಹೊರೆ ಸುಗಮ.(ಮತ್ತಾಯ ೧೧: ೨೯)
ಶ್ಲೋಕ: ತನ್ನ ಶಿಲುಬೆಯನ್ನು ಹೊತ್ತು ನನ್ನ ಹಿಂದೆ ಬಾರದವನು
ಪ್ರತಿಶ್ಲೋಕ: ನನ್ನ ಶಿಷ್ಯನಾಗಲಾರನು (ಲೂಕ ೧೪: ೨೭)
ಧ್ಯಾನ
(ಮಹಾ ಧರ್ಮಾಧ್ಯಕ್ಷ ಆಸ್ಕರ್ ರೊಮೇರೊ)
ಪಾಪವನ್ನು ಇತಿಹಾಸದಿಂದ, ರಾಜಕೀಯ ರಂಗದಿಂದ, ಆರ್ಥಿಕ
ಕ್ಷೇತ್ರದಿಂದ ಹಾಗೂ ಅದು ಎಲ್ಲೆಲ್ಲಿ ಬೇರು ಬಿಟ್ಟಿದ್ದೆಯೋ ಅಲ್ಲಿಂದ ಬುಡಸಹಿತ ತೆಗೆಯುವ ಕಷ್ಟಕರವಾದ
ಸೇವಾ ನಿಯೋಗವನ್ನು ಧರ್ಮಸಭೆಗೆ ವಹಿಸಲಾಗಿದೆ. ಎಂತಹ ಕಠಿಣವಾದ ಕಾರ್ಯ! ಈ ಕಾರ್ಯವನ್ನು ಮಾಡುವಾಗ ಸಂಘರ್ಷ
ಅನಿವಾರ್ಯ. ಏಕೆಂದರೆ ಅಷ್ಟು ಸ್ವಾರ್ಥ, ಅಷ್ಟು ದುರಹಂಕಾರ, ಅಷ್ಟು ಒಣ ಪ್ರತಿಷ್ಠೆ ತುಂಬಿಕೊಂಡಿದೆ
ಇಲ್ಲಿ. ಪಾಪದ ರಾಜ್ಯಭಾರವನ್ನೇ ನಡೆಸುತ್ತಿದ್ದಾರೆ ಅನೇಕರು ನಮ್ಮ ಮಧ್ಯೆ. ಧರ್ಮಸಭೆಯು ಇಂತಹ ಪರಿಸ್ಥಿತಿಯಲ್ಲಿ
ಸತ್ಯವನ್ನು ಪ್ರತಿಪಾದಿಸುವಾಗ, ಪಾಪದ ಕಡೆ ಗಮನ ಸೆಳೆಯುವಾಗ, ಪಾಪವನ್ನು ಕಿತ್ತೆಸೆಯುವಾಗ ಯಾತನೆಯನ್ನು
ಅನುಭವಿಸಲೇಬೇಕು. ಪಾಪವೆಂಬ ವ್ರಣಕ್ಕೆ
ಚಿಕಿತ್ಸೆ ಮಾಡಿಸಿಕೊಳ್ಳಲು ನಿರಾಕರಿಸುವವರೇ ಅಧಿಕ ಸಂಖ್ಯೆಯಲ್ಲಿ ಇರುವ ಇಂದಿನ ಸಮಾಜಕ್ಕೆ ಈ ಚಿಕಿತ್ಸೆ ನೀಡಲು ಧೈರ್ಯದಿಂದ
ಮುಂದೆ ಬಂದು, ಚಿಕಿತ್ಸೆ ನೀಡಿ ಹೇಳುವವರು ಬೇಕು.
ನೀನು
ಇದಕ್ಕೆ ಚಿಕಿತ್ಸೆ ಪಡೆಯಲೇಬೇಕು. ಪಾಪದಿಂದ ನೀನು ಬಿಡುಗಡೆ ಹೊಂದಲೇಬೇಕು. ಪ್ರಭು ಯೇಸುವಿನಲ್ಲಿ ವಿಶ್ವಾಸವಿಡು.
ಪರಿವರ್ತನೆ ಹೊಂದು! (ಆಸ್ಕರ್ ರೋಮೇರೊ, ದ ವಯಲೆನ್ಸ್
ಆಫ್ ಲವ್, ಪುಟ ೨೯)
ಪ್ರಾರ್ಥಿಸೋಣ: ಸ್ವರ್ಗೀಯ ತಂದೆಯೇ, ನಿಮ್ಮ ದಿವ್ಯ ಕುಮಾರರು ಸೇವೆ
ಮಾಡಿಸಿಕೊಳ್ಳುವುದಕ್ಕೆ ಅಲ್ಲ, ಸೇವೆ ಮಾಡುವುದಕ್ಕೆ ಬಂದರು. ಅವರ
ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ನಡೆಯುವವರೆಲ್ಲರನ್ನೂ ಆಶೀರ್ವದಿಸಿರಿ;
ಇವರು ನಮ್ಮೆಲ್ಲರಿಗಾಗಿ
ತಮ್ಮ ಪ್ರಾಣವನ್ನೇ ನೀಡಿದ ನಿಮ್ಮ ಕುಮಾರರೂ, ನಮ್ಮ ರಕ್ಷಕರೂ ಆಗಿರುವ ಪ್ರಭು ಯೇಸುಕ್ರಿಸ್ತರ ಹೆಸರಿನಲ್ಲಿ, ಅವರ ಪ್ರೀತಿಗಾಗಿ ಯಾತನೆಯಲ್ಲಿರುವವರ, ಏಕಾಂಗಿಗಳ ಹಾಗೂ ಕೊರತೆಯಲ್ಲಿರುವವರ
ಸೇವೆಯನ್ನು ಸುಜ್ಞಾನ, ಸಹನೆ ಹಾಗೂ ದೈರ್ಯದಿಂದ ಮಾಡುವಂತೆ ಅನುಗ್ರಹಿಸಿರಿ, ಆಮೆನ್.

No comments:
Post a Comment