ಮಹಿಳೆಯೋರ್ವಳು ಯೇಸುವಿನ ಮುಖವನ್ನು ಒರೆಸುತ್ತಾಳೆ
ಒಬ್ಬ: ಸ್ವಾಮಿ ಯೇಸುವೇ, ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ,
ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು
ರಕ್ಷಿಸಿದ್ದೀರಿ.
ದೇವರ ವಾಕ್ಯ: ಆತನಲಿ ಅಂದಚಂದಗಳಾವುವೂ ಇರಲಿಲ್ಲ. ನೋಡಲು ಲಕ್ಷಣವಾದುದು
ಏನೂ ಕಾಣಲಿಲ್ಲ. ಧಿಕ್ಕರಿಸಲ್ಪಟ್ಟವನು, ಮನುಜರಿಂದ ತಿರಸ್ಕೃತನು, ದುಃಖಾಕ್ರಾಂತನು, ಕಷ್ಟಸಂಕಟ ಅನುಭವಿಸಿದವನು. ನೋಡಿದವರು
ಮುಖ ತಿರುಗಿಸುವಷ್ಟು ನಿಂದಕನು! ನಾವೋ ಲಕ್ಷ್ಯಕ್ಕೂ ತೆಗೆದುಕೊಳ್ಳಲಿಲ್ಲ ಆತನನ್ನು. ಆತನ ಮುಖ ನರಮಾನವರ
ಮುಖಕ್ಕಿಂತ ಆತನ ರೂಪ ನರಪುತ್ರರ ರೂಪಕ್ಕಿಂತ ವಿಕಾರಗೊಂಡಿದೆ ನಿಜ; ಗಾಯಗೊಂಡನಾತ ನಮ್ಮ ರಕ್ಷೆಗಾಗಿ,
ಪೆಟ್ಟು ತಿಂದ ನಮ್ಮ ಸ್ವಸ್ಥತೆಗಾಗಿ (ಯೆಶಾಯ ೫೩: ೨-೩, ಯೆಶಾಯ೫೨: ೧೪; ಯೆಶಾಯ ೫೩: ೫)
ಶ್ಲೋಕ: ಎಲೈ ದೇವನೇ, ಪುನರುದ್ಧಾರ ಮಾಡೆಮ್ಮನು
ಪ್ರತಿಶ್ಲೋಕ: ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು
(ಕೀರ್ತನೆ ೮೦: ೩)
ಧ್ಯಾನ
(ಮಹಾ ಧರ್ಮಾಧ್ಯಕ್ಷ ಆಸ್ಕರ್ ರೊಮೇರೊ)
ಲೋಕವು ದೀನ ದಲಿತರೇ ನೀವು ಭಾಗ್ಯವಂತರು ಎಂದು
ಹೇಳುವುದಿಲ್ಲ. ಬದಲಾಗಿ ಧನಿಕರೇ ನೀವು ಭಾಗ್ಯವಂತರು, ನಿಮ್ಮಲ್ಲಿ ಎಷ್ಟು ಸಂಪತ್ತಿದೆಯೋ, ಅಷ್ಟು ನೀವು
ಯೋಗ್ಯರು ಎಂದು ಹೇಳುತ್ತದೆ. ಆದರೆ ಕ್ರಿಸ್ತರು ನುಡಿಯುತ್ತಾರೆ: ಇದು ಸರಿಯಲ್ಲ, ದೀನದಲಿತರು ಭಾಗ್ಯವಂತರು.
ಏಕೆಂದರೆ ಅವರ ಸಂಪತ್ತು ಪ್ರಭು ಯೇಸುವೇ ಆಗಿದ್ದಾರೆ. ಪ್ರಭು ಯೇಸು ತಮ್ಮ ಬಡತನದಿಂದ ನಮ್ಮನ್ನು ಶ್ರೀಮಂತವಾಗಿಸಲೆಂದು,
ತಾವು ಶ್ರೀಮಂತರಾಗಿದ್ದರೂ ನಮಗೋಸ್ಕರ ಬಡವರಾದರು (೨ ಕೊರಿಂಥಿಯರಿಗೆ ೮: ೯) ಈ ಮೂಲಕ ಅವರು ನೈಜ ಕ್ರಿಸ್ತೀಯ
ಜ್ಞಾನವನ್ನು ನಮಗೆ ನೀಡುತ್ತಾರೆ.
(ಆಸ್ಕರ್ ರೋಮೇರೊ, ದ ವಯಲೆನ್ಸ್ ಆಫ್ ಲವ್, ಪುಟ ೩೩)
ಪ್ರಾರ್ಥಿಸೋಣ: ದಯಾಮಯ ದೇವರೇ, ನಿಮ್ಮ ಏಕೈಕ ಕುಮಾರರ ಯಾತನೆಯ
ಪೂರ್ವದಲ್ಲಿ ನಿಮ್ಮ ಮಹಿಮೆಯನ್ನು ಪವಿತ್ರ ಪರ್ವತದ ಮೇಲೆ ಪ್ರಕಟಿಸಿದ್ದೀರಿ: ನಾವೆಲ್ಲರೂ ವಿಶ್ವಾಸದಿಂದ
ಅವರ ಮುಖದರ್ಶನದ ಬೆಳಕಿನಲ್ಲಿ ನಡೆಯುತ್ತಾ ನಮ್ಮ ಅನುದಿನದ ಶಿಲುಬೆಯನ್ನು ಸಹಿಸಿಕೊಳ್ಳಲು ಶಕ್ತರಾಗುವಂತೆ
ಕೃಪೆ ನೀಡಿರಿ. ಈ ಮೂಲಕ ನಮ್ಮನ್ನು ಅವರ ಅನುರೂಪಿಗಳನ್ನಾಗಿ ಮಾಡಿ, ಮಹಿಮೆಯೆಡೆಗೆ ಕರೆದೊಯ್ಯಿರಿ. ಪ್ರಭು ಯೇಸುಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಆಮೆನ್.

No comments:
Post a Comment