“ಬನ್ನಿ ಕ್ರಿಸ್ತರೇ ನಮ್ಮ ದೇವರೇ ಬನ್ನಿ”
ಪ್ರಾರಂಭ ಪ್ರಾರ್ಥನೆ
ಯೇಸುವಿನ ಹೆಸರಿಗೆಂದೇ ಮೊಣಕಾಲೂರಿ ಮಣಿವರು ಸ್ವರ್ಗವಾಸಿಗಳು, ಭೂನಿವಾಸಿಗಳು, ಪಾತಾಳ ಜೀವರಾಶಿಗಳು. ಕ್ರಿಸ್ತಯೇಸುವೇ ಪ್ರಭು ಎಂದೆಲ್ಲರಿಗೆ ಅರಿಕೆ ಮಾಡುವರು. ಪಿತದೇವನ ಮಹಿಮೆಯನು ಈ ಪರಿ ಹೊಗಳಿ ಸಾರುವರವರು (ಫಿಲಿಪ್ಪಿ 2: 10-11). ಪ್ರಭುವಿನ ಸಾನಿಧ್ಯಕ್ಕೆ ಬರುವುದೇ ನಮಗೆಲ್ಲ ಆನಂದ. ಏಕೆಂದರೆ ಅವರ ಅನುಭವ ನಮಗೆ ಸ್ಪೂರ್ತಿದಾಯಕ ಹಾಗು ಶಾಂತಿದಾಯಕ.
ಉತ್ತರ: ಪ್ರಭುವೇ, ನಿಮಗೆ ಆರಾಧನೆ
ಪೀಠಿಕೆ
ಪವಿತ್ರ ದಿವ್ಯ ಸಂಸ್ಕಾರ, ಅತಿ ಪರಿಶುದ್ಧ ಪರಮ ಪ್ರಸಾದ ಸಂಸ್ಕಾರ ಸರ್ವ ಗೌರವ ಆರಾಧನೆ ಸದಾ ನಿಮಗೆ ಸಲ್ಲಲಿ. ಓ ಅತೀ ಪವಿತ್ರ ತ್ರಯೇಕ ದೇವರಾದ ಪಿತ ಸುತ ಮತ್ತು ಪವಿತ್ರಾತ್ಮರೇ ಪರಮ ಪ್ರಸಾದದಲ್ಲಿ ನಿಮ್ಮ ಅತೀ ಪರಿಶುದ್ಧ ಪ್ರಸನ್ನತೆಯನ್ನು ಸ್ಮರಿಸುತ್ತೇವೆ ಮತ್ತು ನಿಮ್ಮನ್ನು ಆರಾಧಿಸುತ್ತೇವೆ. ಪ್ರೀತಿಯ ತಂದೆಯೇ, ಸಕಲ ಸೃಷ್ಟಿಯ ರಚನಕಾರರೇ, ನಿಮಗೆ ನಮ್ಮ ವಂದನೆ, ಆರಾಧನೆ ಸಲ್ಲಿಸುತ್ತೇವೆ. ನಿಮ್ಮ ಮಕ್ಕಳ ಮೇಲೆ ಕರುಣೆಯಿಂದ ಈಕ್ಷಿಸಿ ನಮ್ಮ ಪಾಪಗಳನ್ನು ಮನ್ನಿಸಿರಿ.
ಓ ಯೇಸುವೇ, ತಂದೆ ದೇವರ ಅನಂತ ವಾರ್ತೆಯೇ, ಈ ಪರಮಪ್ರಸಾದವು ನಿಮ್ಮ ಮಹೋನ್ನತ ದೇಹ, ನೀವು ಮನುಷ್ಯರಾಗಿ ಧರೆಗಿಳಿದು ನಮ್ಮ ಸಹೋದರನಾಗಿ ಆತ್ಮೀಯನಾಗಿ ನಮ್ಮನ್ನು ರಕ್ಷಿಸುವ ದೇವರಾಗಿರುವಿರಿ. ನಾವು ನಿಮ್ಮನ್ನು ಪ್ರೀತಿಸುತ್ತೇವೆ, ಆರಾಧಿಸುತ್ತೇವೆ. ಪವಿತ್ರಾತ್ಮರೇ, ಪಿತ ಪುತ್ರರ ಪ್ರೀತಿಯ ಪ್ರತೀಕವೇ, ನಾವು ನಿಮ್ಮನ್ನು ಆರಾಧಿಸುತ್ತೇವೆ. ನಿಮಗೆ ಸ್ತುತಿ ಮಹಿಮೆಯನ್ನು ಸಲ್ಲಿಸುತ್ತೇವೆ.
ಓ ಯೇಸುಕ್ರಿಸ್ತರೇ ಈ ಆಗಮನ ಕಾಲದಲ್ಲಿ ನಿಮ್ಮ ಸಮ್ಮುಖದಲ್ಲಿರುವಾಗ ಈ ಜಾಗರಣೆಯ ಮತ್ತು ಆರಾಧನೆಯ ಮಹತ್ವವನ್ನು ನಾವು ಸ್ಮರಿಸುತ್ತೇವೆ. ಮನುಷ್ಯಾವತಾರ ಹೊಂದಿದ ನಿಮ್ಮನ್ನು ಬರಮಾಡಿಕೊಳ್ಳಲು ನಾವು ಮಾಡಬೇಕಾಗಿರುವ ಸಿದ್ಧತೆಯ ಬಗ್ಗೆ ಪವಿತ್ರ ಬೈಬಲ್ ತಿಳಿಯಪಡಿಸುತ್ತದೆ. ನಮ್ಮ ಹೃದಯವು ಸಕಲ ಕಲ್ಮಷಗಳಿಂದ ಪಾಪಗಳಿಂದ ದೂರವಾಗಿ ಪರಿಶುದ್ಧವಾಗಿರಬೇಕು. ನಿಮ್ಮ ಬರುವಿಕೆಯನ್ನು ಸಂತೋಷ ಮತ್ತು ನಿರೀಕ್ಷೆಯಿಂದ ಎದುರುಗೊಳ್ಳಲು ನಮಗೆ ಸಹಾಯ ಮಾಡಿರಿ ಯೇಸುವೇ. ನಮ್ಮ ಹೃದಯಗಳು ಕೇವಲ ನಿಮಗಾಗಿ ಮಾತ್ರ ಹಾತೊರೆಯವಂತೆ ಮಾಡಿರಿ. ನಾವು ಸದಾ ನಿಮ್ಮ ದೈವೀ ಶಕ್ತಿ ಮತ್ತು ಅನುಗ್ರಹದಿಂದ ತುಂಬಿರುವಂತೆ ಹರಸಿರಿ.
ದಯಾಮಯ ಯೇಸುವೇ ನಾವು ಪಶ್ಚಾತ್ತಾಪ, ದೇಹದಂಡನೆ ಮತ್ತು ಪ್ರಾಯಶ್ಚಿತ್ತಗಳಿಂದ ನಿಮ್ಮ ಪ್ರೀತಿಯಲ್ಲಿ ಮೀಯಲು ಕರುಣಿಸಿರಿ. ಈ ಆಗಮನ ಕಾಲದಲ್ಲಿ ಪ್ರಾರ್ಥನೆಯ ಮಹತ್ವವನ್ನು ಗ್ರಹಿಸುತ್ತಾ ಹೆಚ್ಚು ಹೆಚ್ಚು ಸಮಯವನ್ನು ಜಪ ಮತ್ತು ಆಧ್ಯಾತ್ಮಿಕ ಚಟುವಟಿಕೆಯಲ್ಲಿ ಕಳೆಯುತ್ತಾ ನಮ್ಮ ಆತ್ಮವನ್ನು ದೈವೀ ಮೌಲ್ಯಗಳಿಂದ ಹಾಗೂ ಒಳ್ಳೆಯ ಕೆಲಸಗಳಿಂದ ಅಲಂಕರಿಸುವಂತೆ ಮಾಡಿರಿ.
ಕರುಣಾಳು ತಂದೆಯೇ, ನಮ್ಮ ಮೇಲೆ ನಿಮಗಿರುವ ಅಮೋಘ ಪ್ರೀತಿಯನ್ನು ಸ್ಮರಿಸುತ್ತೇವೆ. ಆ ನಿಮ್ಮ ಪ್ರೀತಿಯೇ ನಿಮ್ಮನ್ನು ಸ್ವರ್ಗದಿಂದ ಈ ಧರೆಗೆ ಕರೆತಂದಿತು. ನೀವು ಮನುಷ್ಯರಾಗಿ ಈ ಧರೆಗೆ ಬರದಿದ್ದರೆ ನೀವು ನಮ್ಮ ಪಾಪಗಳನ್ನು ಹೊತ್ತುಕೊಳ್ಳದೆ ಹೋಗಿದ್ದರೆ ನಾವು ಸದಾ ಕಾಲಕ್ಕೂ ಕಳೆದುಹೋಗುತ್ತಿದ್ದೆವು. ಈ ಕ್ರಿಸ್ಮಸ್ ಸಮಯದಲ್ಲಿ ನೀವು ನಮ್ಮ ಬಳಿಗೆ ಬರುವುದು ನಿಮ್ಮ ಅಮೋಘ ಪ್ರೀತಿ, ದಯೆ ಮತ್ತು ಕರುಣೆಯನ್ನು ಸಾರುತ್ತದೆ. ನಿಮ್ಮ ಈ ಕರುಣಾಮಯ ಪ್ರೀತಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ.
ದೇವರೇ, ಇಡೀ ಧರ್ಮಸಭೆಯು ನಿಮ್ಮನ್ನು ಬರಮಾಡಿಕೊಳ್ಳಲು ಸಿದ್ಧತೆ ನಡೆಸಿದೆ. ಶತಮಾನಗಳಿಂದ ಸರ್ವ ಕ್ರೈಸ್ತರ ಕೂಗು “ಬನ್ನಿ ಕ್ರಿಸ್ತರೇ ನಮ್ಮ ದೇವರೇ ಬನ್ನಿ” ಎಂದಾಗಿದೆ. ನಾವು ನಿಮ್ಮ ಬರುವಿಕೆಗಾಗಿ ಕಾಯುವಾಗ ನಮ್ಮ ಪ್ರಾರ್ಥನೆಯೂ ಸಹ ಇದೇ ಆಗಿದೆ.
ಬನ್ನಿ ದೇವರೇ, ಬನ್ನಿ ನಿಮ್ಮ ಬರುವಿಕೆಯು ನಿಮ್ಮನ್ನು ಬರಮಾಡಿಕೊಳ್ಳಲು ನಮ್ಮನ್ನು ಯೋಗ್ಯರನ್ನಾಗಿ ಮಾಡಲಿ. ನೀವು ಪ್ರತಿದಿನ ಪ್ರತಿ ಘಟನೆಯ ಮೂಲಕ ಈ ಪವಿತ್ರ ಸಂಸ್ಕಾರದ ಮೂಲಕ ನಮ್ಮಲ್ಲಿಗೆ ಬರುವಿರಿ, ನಾವು ಭೇಟಿಮಾಡುವ ಪ್ರತಿಯೊಬ್ಬ ವ್ಯಕ್ತಿಯ ಮೂಲಕ ನಮ್ಮಲ್ಲಿಗೆ ಬರುತ್ತೀರಿ.
ಓ ಯೇಸುವೇ, ನೀವು ಪ್ರತಿನಿತ್ಯ ಈ ದಿವ್ಯ ಸಂಸ್ಕಾರದ ಮೂಲಕ ನಮ್ಮಲ್ಲಿಗೆ ಬರುವಾಗ ನಿಮ್ಮನ್ನು ಪ್ರೀತಿಯಿಂದ ಎದುರುಗೊಳ್ಳಲು ನೆರವಾಗಿರಿ. ನಾವು ನಮ್ಮ ಸರ್ವವನ್ನೂ ನಿಮ್ಮಲ್ಲಿ ಕೇಂದ್ರೀಕರಿಸಿ ನೀವು ಕ್ರಿಸ್ಮಸ್ ಸಮಯದಲ್ಲಿ ಬರುವಾಗ ನಿಮ್ಮನ್ನು ಪ್ರೀತಿಯಿಂದ ಬರಮಾಡಿಕೊಳ್ಳಲು ತಕ್ಕುದಾದ ಸಿದ್ಧತೆಯನ್ನು ಮಾಡಿಕೊಳ್ಳುತ್ತೇವೆ.
ನಮ್ಮಲ್ಲಿ ನಿರ್ಮಲ ಹೃದಯವನ್ನು ಶುದ್ಧ ಮನಸ್ಸಾಕ್ಷಿಯನ್ನು ಮತ್ತು ದೋಷರಹಿತ ಜೀವನವನ್ನು ರೂಪಿಸ ಕರುಣಿಸಿರಿ. ಬನ್ನಿ ಯೇಸುವೇ ಬನ್ನಿ ತಡಮಾಡಬೇಡಿ. ಬಂದು ನಮ್ಮ ಜೀವನವನ್ನು ಸಂಪೂರ್ಣವಾಗಿ ಆವರಿಸಿ. ನಿಮಗಾಗಿ ನಾವು ದಿನನಿತ್ಯ ಕಾಯುತ್ತಿದ್ದೇವೆ.
ನಾವು ನಿಮ್ಮ ಸಮ್ಮುಖದಲ್ಲಿ ಕಳೆಯುವ ಈ ಕೆಲವು ಸಮಯವು ನಮ್ಮ ಆತ್ಮವನ್ನು ಸಂಪೂರ್ಣವಾಗಿ ಪರಿಶುದ್ಧಗೊಳಿಸಲಿ ಮತ್ತು ನಿಮ್ಮ ಬರುವಿಕೆಗಾಗಿ ಹಾತೊರೆಯುವಂತೆ ಮಾಡಲೆಂದು ಪ್ರಾರ್ಥಿಸುತ್ತೇವೆ. ನಿಮ್ಮನ್ನು ಸಂತೋಷವಾಗಿ ಸ್ವೀಕರಿಸುವ ಅನುಗ್ರಹ ದಯಪಾಲಿಸಿರಿ.
ಕಿರ್ತನೆ: 145
ಪ್ರಭುವಿನ
ಗುಣಗಾನ
ದೇವಾ, ನನ್ನೊಡೆಯಾ, ಮಾಡುವೆ ನಿನ್ನ ಗುಣಗಾನ / ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆನಮನ //
2 ಹೊಗಳುವೆನು ನಾ ದಿನದಿನವೂ ನಿನ್ನನು / ಭಜಿಸುವೆನೆಂದೆಂದಿಗೂ ನಿನ್ನ ಹೆಸರನು //
ದೇವಾ, ನನ್ನೊಡೆಯಾ, ಮಾಡುವೆ ನಿನ್ನ ಗುಣಗಾನ / ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆನಮನ //
3 ಪ್ರಭು ಮಹಾತ್ಮನು, ಸ್ತುತ್ಯರ್ಹನು / ಆತನ ಮಹಿಮೆ ಅಗಮ್ಯವಾದದು //
ದೇವಾ, ನನ್ನೊಡೆಯಾ, ಮಾಡುವೆ ನಿನ್ನ ಗುಣಗಾನ / ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆನಮನ //
4 ತಲೆಮಾರು ತಲೆಮಾರಿಗೆ ನುತಿಸುವುದು ನಿನ್ನ ಕಾರ್ಯಗಳನು /
ತಿಳಿಸುವುದು ಪ್ರಭು, ನೀ ಮಾಡಿದೆಲ್ಲಾ ಮಹತ್ಕಾರ್ಯಗಳನು //
ದೇವಾ, ನನ್ನೊಡೆಯಾ, ಮಾಡುವೆ ನಿನ್ನ ಗುಣಗಾನ / ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆನಮನ //
5 ಧ್ಯಾನಿಸುವೆನು ನಿನ್ನ ಅದ್ಭುತಕಾರ್ಯಗಳನು / ನಿನ್ನ ಮಹೋನ್ನತ ಮಹಿಮಾಪ್ರಭಾವವನು //
ದೇವಾ, ನನ್ನೊಡೆಯಾ, ಮಾಡುವೆ ನಿನ್ನ ಗುಣಗಾನ /ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆನಮನ //
6 ಜನರು ಸಾರುವರು ನಿನ್ನ ಅದ್ಭುತ ಶಕ್ತಿಯನು / ನಾ ಪ್ರಸಿದ್ಧಪಡಿಸುವೆನು ನಿನ್ನ ಮಹಿಮೆಯನು //
ದೇವಾ, ನನ್ನೊಡೆಯಾ, ಮಾಡುವೆ ನಿನ್ನ ಗುಣಗಾನ /ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆನಮನ //
7 ಪ್ರಕಟಿಸುವರವರು ನಿನ್ನ ಮಹೋಪಕಾರವನು / ಹಾಡಿ ಹೊಗಳುವರು ನಿನ್ನ ನ್ಯಾಯನೀತಿಯನು //
ದೇವಾ, ನನ್ನೊಡೆಯಾ, ಮಾಡುವೆ ನಿನ್ನ ಗುಣಗಾನ / ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆನಮನ //
8 ಪ್ರಭು ದಯಾನಿಧಿ, ಕೃಪಾಸಾಗರನು / ಸಹನಾಶೀಲನು, ಪ್ರೀತಿಪೂರ್ಣನು //
ದೇವಾ, ನನ್ನೊಡೆಯಾ, ಮಾಡುವೆ ನಿನ್ನ ಗುಣಗಾನ / ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆನಮನ //
9 ಪ್ರಭುವಿನ ಕರುಣೆ ಎಲ್ಲರ ಮೇಲೆ / ಆತನ ಕೃಪೆಯು ಸೃಷ್ಟಿಯ ಮೇಲೆ //
ದೇವಾ, ನನ್ನೊಡೆಯಾ, ಮಾಡುವೆ ನಿನ್ನ ಗುಣಗಾನ / ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆನಮನ //
10 ಪ್ರಭು, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು / ಕೊಂಡಾಡುವುದು ನಿನ್ನನು ಭಕ್ತ ಸಮೂಹವು //
ದೇವಾ, ನನ್ನೊಡೆಯಾ, ಮಾಡುವೆ ನಿನ್ನ ಗುಣಗಾನ / ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆನಮನ //
11 ಪ್ರಸಿದ್ಧಪಡಿಸುವರು ನಿನ್ನ ರಾಜ್ಯದ ಮಹತ್ವವನು / ವರ್ಣಿಸುವರವರು ನಿನ್ನ ಶಕ್ತಿ ಸಾಮರ್ಥ್ಯವನು //
ದೇವಾ, ನನ್ನೊಡೆಯಾ, ಮಾಡುವೆ ನಿನ್ನ ಗುಣಗಾನ / ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆನಮನ //
ಮೌನ ಆರಾಧನೆ
ಹಾಡು
ಪವಿತ್ರ ಬೈಬಲ್ - ಲೂಕ: 3: 1- 6
3
ಅದು ತಿಬೇರಿಯಸ್ ಚಕ್ರವರ್ತಿಯ
ಆಡಳಿತದ ಹದಿನೈದನೆಯ ವರ್ಷ.
ಆ ಕಾಲದಲ್ಲಿ ಜುದೇಯ
ಪ್ರಾಂತ್ಯಕ್ಕೆ ಪೊನ್ಸಿಯುಸ್ ಪಿಲಾತನು
ರಾಜ್ಯಪಾಲನಾಗಿದ್ದನು. ಗಲಿಲೇಯ
ಪ್ರಾಂತ್ಯಕ್ಕೆ ಹೆರೋದನೂ ಇತುರೆಯ
ಮತ್ತು ತ್ರಕೋನಿತಿ ಪ್ರಾಂತ್ಯಗಳಿಗೆ
ಇವನ ತಮ್ಮನಾದ ಫಿಲಿಪ್ಪನೂ
ಮತ್ತು ಅಬಿಲೇನೆ ಪ್ರಾಂತ್ಯಕ್ಕೆ
ಲುಸಾನಿಯನೂ ಸಾಮಂತರಾಗಿದ್ದರು. 2ಅನ್ನನು
ಮತ್ತು ಕಾಯಿಫನು ಅಂದಿನ
ಪ್ರಧಾನ ಯಾಜಕರು. ಆಗ
ಬೆಂಗಾಡಿನಲ್ಲಿ ಜಕರೀಯನ ಮಗ
ಯೊವಾನ್ನನಿಗೆ ದೇವರ ಸಂದೇಶದ
ಬೋಧೆ ಆಯಿತು. 3ಆತನು
ಜೋರ್ಡನ್ ನದಿಯ ಪರಿಸರ
ಪ್ರಾಂತ್ಯದಲ್ಲೆಲ್ಲಾ ಸಂಚರಿಸುತ್ತಾ, ಪಶ್ಚಾತ್ತಾಪಪಟ್ಟು ಪಾಪಕ್ಕೆ
ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ
ಮತ್ತು ಸ್ನಾನದೀಕ್ಷೆ ಪಡೆದುಕೊಳ್ಳಿರಿ; ದೇವರು ನಿಮ್ಮ
ಪಾಪಗಳನ್ನು ಕ್ಷಮಿಸಿ ಬಿಡುವರು,
ಎಂದು ಸಾರಿ ಹೇಳುತ್ತಿದ್ದನು. 4ಈ ಬಗ್ಗೆ
ಪ್ರವಾದಿ ಯೆಶಾಯನ ಗ್ರಂಥದಲ್ಲಿ
ಮುಂಚಿತವಾಗಿಯೇ ಹೀಗೆಂದು ಬರೆದಿಡಲಾಗಿದೆ:
'ಪ್ರಭುವಿಗಾಗಿ ಮಾರ್ಗವನ್ನು
ಸಿದ್ಧಪಡಿಸಿರಿ,
ಆತನ ಆಗಮನಕ್ಕಾಗಿ
ಹಾದಿಯನ್ನು
ಸರಾಗ ಮಾಡಿರಿ'
ಎಂದು ಬೆಂಗಾಡಿನಲ್ಲಿ
ಒಬ್ಬನು ಘೋಷಿಸುತ್ತಿದ್ದಾನೆ.
5
ಹಳ್ಳಕೊಳ್ಳಗಳೆಲ್ಲ ಭರ್ತಿಯಾಗಬೇಕು;
ಬೆಟ್ಟಗುಡ್ಡಗಳು ಮಟ್ಟವಾಗಬೇಕು;
ಅಂಕುಡೊಂಕಾದವು ನೆಟ್ಟಗಾಗಬೇಕು;
ತಗ್ಗುಮುಗ್ಗಾದ ಹಾದಿಗಳು
ಹಸನಾಗಬೇಕು.
6
ಆಗ ದೇವರು ದಯಪಾಲಿಸುವ
ಜೀವೋದ್ಧಾರವನ್ನು ಮಾನವರೆಲ್ಲರು
ಕಾಣುವರು.
ಚಿಂತನೆ
ಸ್ನಾನಿಕ ಯೊವಾನ್ನ ಎಲೀಯನ ಆಸಕ್ತಿಯಿಂದ ಪ್ರಾಯಶ್ಚಿತ್ತದ ಮಾರ್ಗವನ್ನು ಬೈಲಾಗಿಸಲು ಬಂದರು. ಪಾಪದ ಮಾರ್ಗದಲ್ಲಿ ಮುಳುಗಿದ್ದ ಜನರನ್ನು ಪರಿವರ್ತಿಸಿ ದೇವರನ್ನು ಸ್ವಾಗತಿಸಲು ಕರೆ ನೀಡಿದರು. ಪಾಪಕ್ಕೆ ಪ್ರಾಯಶ್ಚಿತ್ತ ಪಡದವರನ್ನು ಕೆಲಸಕ್ಕೆ ಬಾರದ ಒಣಗಿದ ಮರವನ್ನು ಬೆಂಕಿಯಲ್ಲಿ ಸುಡುವಂತೆ ಅವರನ್ನು ನಿರ್ಮೂಲಿಸಬೇಕಾಗಿದೆ ಎಂದು ಎಚ್ಚರಿಕೆಯ ಮಾತುಗಳನ್ನು ಹೇಳುತ್ತಾ ಪಾಪಕ್ಕೆ ಪ್ರಾಯಶ್ಚಿತ್ತ ಪಡುವಂತೆ ತಿಳಿಸಿದ್ದಾರೆ. ಈ ಮಾತುಗಳನ್ನು ಈ ಆಗಮನ ಕಾಲದಲ್ಲಿ ನಮ್ಮ ಕಿವಿಯಲ್ಲಿ ಮರುಧ್ವನಿಸಬೇಕಾಗಿದೆ. ಈ ಆಗಮನ ಕಾಲದಲ್ಲಿ ಪ್ರಭು ಯೇಸುವನ್ನು ಸ್ವೀಕರಿಸಲು ನಮ್ಮ ಹೃದಯವನ್ನು ಶುದ್ಧೀಕರಿಸಲು ಪ್ರಯತ್ನಿಸಬೇಕು. ಆಗಮನ ಕಾಲ ಎಂದರೆ ಪ್ರಭು ಯೇಸು ಬರುವ ಕಾಲ ನಿಜ, ಪ್ರಭು ಯೇಸು ಈಗಾಗಲೇ ಬಂದಿದ್ದಾರೆ. ದಿನನಿತ್ಯವೂ ಬಲಿಪೀಠದಲ್ಲಿ ಬರುತ್ತಾರೆ. ಆದರೆ ಅವರ ಈ ಆಗಮನವನ್ನು ವಿಶಿಷ್ಟವಾಗಿ ಕೊಂಡಾಡುತ್ತೇವೆ. ನಮ್ಮ ಹೃದಯದ ಬಾಗಿಲುಗಳನ್ನು ತೆರೆದು ’ಯೇಸುವೇ ಬನ್ನಿ’ ಎಂದು ಕರೆಯಬೇಕಾಗಿದೆ.
ಯೇಸು ಮಾನವಕುಲದ ಸರ್ವೋಚ್ಚ ನ್ಯಾಯಾಧೀಶರಾಗಿ ಮತ್ತೆ ಬರುತ್ತಾರೆ. ಆತನೇ ನಮಗೆ ಹೇಳಿರುವಂತೆ ನಾವು ಜಾಗರಣೆ ಮಾಡಿ ಪ್ರಾರ್ಥಿಸಬೇಕಾಗಿದೆ,
ಆಗಮನಕಾಲದಲ್ಲಿ ನಾವು ದೇವರೊಂದಿಗೆ ಸಂವಾದಿಸಲು ಪ್ರಾರ್ಥಿಸಲು ಸಮಯವನ್ನು ಮಾಡಿಕೊಳ್ಳಬೇಕಾಗಿದೆ. ನಮ್ಮ ಪಾಪಗಳಿಗೆ ಪ್ರಶ್ಚಾತ್ತಾಪ ಪಟ್ಟು ನಮ್ಮ ವಿಮೋಚನೆಯ ಹಾದಿಯನ್ನು ಹಿಡಿಯಬೇಕಾಗಿದೆ. ಒಟ್ಟಾಗಿ ನಾವು ಆತನ ಆಗಮನವನ್ನು ವಿಶ್ವಾಸಿಸಿ ಆತನನ್ನು ಸ್ವಾಗತಿಸಲು ತಯಾರಾಗಿ ವಿಶ್ವಾಸದ ರಾಜ್ಯದ ಮಕ್ಕಳಾಗಿ ಬಾಳೋಣ. ಆತನ ಈ ಆಗಮನವನ್ನು ಪ್ರೀತಿಯಿಂದ ಸ್ವಾಗತಿಸುತ್ತಾ ’ಯೇಸುವೇ ಬನ್ನಿ’ ಎಂದು ಸ್ವಾಗತಿಸೋಣ.
ವಿಶ್ವಾಸಿಗಳ ಪ್ರಾರ್ಥನೆ
ದೇವರ ಬರುವಿಕೆಗಾಗಿ ಕಾಯುತ್ತಿರುವ ನಾವು ಅವರನ್ನು ಸ್ವೀಕರಿಸಲು ನಮ್ಮನ್ನು ತಯಾರಿ ಮಾಡಿಕೊಳ್ಳುತ್ತೇವೆ. ಈಗ ನಮ್ಮ ಹೃದಯವನ್ನು ಅವರಿಗೆ ತೆರೆಯುತ್ತಾ ಪ್ರಾರ್ಥಿಸೋಣ.
ಎಲ್ಲರೂ: ಯೇಸು ದೇವನೇ ಬನ್ನಿರಿ.
ಬನ್ನಿ ದೇವನೇ, ನಮ್ಮನ್ನು ದುಷ್ಟಶಕ್ತಿಗಳಿಂದ ವಿಮುಕ್ತಿ ನೀಡಿ ಉತ್ಸಾಹದ ಸಂಕೋಲೆಗಳಿಂದ ಬಿಡುಗಡೆ ಮಾಡಿ.
ಎಲ್ಲರೂ: ಯೇಸು ದೇವನೇ ಬನ್ನಿರಿ.
ಯೇಸುವೇ, ಶಾಂತಿಯ ಒಡೆಯನೇ ನಮ್ಮ ಅಸೂಯೆಗಳನ್ನು ಪ್ರೀತಿಗೆ ಮತ್ತು ನಮ್ಮ ಕೋಪವನ್ನು ಸೌಮ್ಯತೆಗೆ ಪರಿವರ್ತಿಸಿರಿ, ಸಾಮರಸ್ಯ ಮತ್ತು ಒಕ್ಕೂಟವನ್ನು ಸ್ಥಾಪಿಸಿರಿ.
ಎಲ್ಲರೂ: ಯೇಸು ದೇವನೇ ಬನ್ನಿರಿ.
ಯೇಸುವೇ, ನೀವು ಈ ಲೋಕಕ್ಕೆ ಬೆಳಕಾಗಿ ಬಂದು ಮಾನವನ ಹೃದಯಗಳನ್ನು ಹೊತ್ತಿಸಿ ಮತ್ತು ಎಲ್ಲರಿಂದ ಅಜ್ಞಾನದ ಕತ್ತಲನ್ನು ಹೊರಹಾಕಿರಿ.
ಎಲ್ಲರೂ: ಯೇಸು ದೇವನೇ ಬನ್ನಿರಿ.
ನಮ್ಮ ದೇವನು ಮತ್ತು ಹೃದಯಗಳ ಒಡೆಯನಾಗಿರುವ ಯೇಸುವೇ, ನಾವು ಹಗಲು ರಾತ್ರಿ ಭರವಸೆಯೆಂಬ ದೀಪಗಳಿಂದ ಮತ್ತು ಜಾಗರೂಕತೆಯಿಂದ ನಿಮ್ಮ ಬರುವಿಕೆಯನ್ನು ಕಾಯುತ್ತೇವೆ.
ಎಲ್ಲರೂ: ಯೇಸು ದೇವನೇ ಬನ್ನಿರಿ.
ನಮ್ಮ ಜೀವ ಮತ್ತು ಸತ್ಯವಾಗಿರುವ ಯೇಸು ದೇವನೇ, ನೀವಿಲ್ಲದೆ ಅಸ್ತಿತ್ವವೇ ಇಲ್ಲದ ನಮ್ಮನ್ನು ವಿಮೋಚಿಸಲು ಬನ್ನಿ.
ಎಲ್ಲರೂ: ಯೇಸು ದೇವನೇ ಬನ್ನಿರಿ.
ಯೇಸು ದೇವನೇ, ನಾವು ಕುರಿಗಾಹಿ ಇಲ್ಲದ ಕುರಿಗಳಂತಿದ್ದೇವೆ. ಮನೆಗಳಿಂದ ದೂರ ಹೋಗುತ್ತಿದ್ದೇವೆ, ನಮ್ಮನ್ನು ಹಸಿರು ಹುಲ್ಲುಗಾವಲೆಡೆಗೆ ಮಾರ್ಗದರ್ಶಿಸಲು ತೋಳಗಳಿಂದ ನಮ್ಮನ್ನು ರಕ್ಷಿಸಲು ಬನ್ನಿರಿ.
ಎಲ್ಲರೂ: ಯೇಸು ದೇವನೇ ಬನ್ನಿರಿ.
ಯೇಸು ದೇವನೇ, ನೀವೇ ನಿಜವಾದ ಶಾಂತಿಯ ಒಡೆಯರು, ಒಡೆದುಹೋದ ಕುಟುಂಬಗಳಲ್ಲಿ ಮತ್ತು ಸಮುದಾಯದಲ್ಲಿ ಶಾಂತಿಯನ್ನು ಸ್ಥಾಪಿಸಲು ಮತ್ತು ಎಲ್ಲಾ ರಾಷ್ಟ್ರಗಳನ್ನು ಸೌಹಾರ್ದದಲ್ಲಿ ಒಂದಾಗಿಸಲು ಬನ್ನಿ ಯೇಸುವೇ.
ಎಲ್ಲರೂ: ಯೇಸು ದೇವನೇ ಬನ್ನಿರಿ.
ಧರ್ಮಸಭೆಯ ಮುಖ್ಯವಾದ ಮೂಲೆಗಲ್ಲಾಗಿರುವ ದೇವನೇ, ಧರ್ಮಸಭೆಯ ವಿಭಜನೆಗಳನ್ನು ಒಡಕುಗಳನ್ನು ಕಲಹಗಳನ್ನು ಕೊನೆಗೊಳಿಸಿ, ನಮಗೆ ತಿಳುವಳಿಕೆಯ ಶಕ್ತಿಯನ್ನು ಮತ್ತು ಐಕ್ಯತೆಯನ್ನು ಸ್ಥಾಪಿಸಲು ಬನ್ನಿ ದೇವನೇ.
ಎಲ್ಲರೂ: ಯೇಸು ದೇವನೇ ಬನ್ನಿರಿ.
ಪ್ರಾರ್ಥಿಸೋಣ
ತಂದೆಯೇ, ಈ ಆಗಮನ ಕಾಲವನ್ನು ನಿಮ್ಮ ಪುತ್ರನ ಬರುವಿಕೆಗೆ ಸಿದ್ಧರಾಗಲು ನೀವು ನೀಡಿದ್ದೀರಿ. ನಮ್ಮ ಪ್ರಾರ್ಥನೆಗಳನ್ನು ಅಂಗೀಕರಿಸಿ ನಿಮ್ಮ ಪುತ್ರನನ್ನು ಶುದ್ಧ ಹೃದಯದಿಂದ ಸ್ವೀಕರಿಸಲು ಸಹಾಯ ಮಾಡಿರಿ. ಆತನು ತರುವ ಸುಖಶಾಂತಿಯನ್ನು ನಾವು ಅನುಭವಿಸುವಂತೆ ಮಾಡಿರಿ. ಆ ಪುಟ್ಟ ಕಂದನು ಹೊಸದಾಗಿ ನಮ್ಮ ಹೃದಯದಲ್ಲಿ ಜನಿಸುವಂತೆ ಮಾಡಿರಿ. ಅಂಧಕಾರದ ಹೊಸ್ತಿಲಲ್ಲಿ ಬದುಕುತ್ತಿರುವ ಜನರಿಗೆ ಆತನು ದಿವ್ಯ ಜ್ಯೋತಿಯಾಗಿ ಆವರಿಸುವಂತೆ ಮಾಡಿ. ಮಾನವ ಜಾತಿಯ ಉದ್ದಾರಕ್ಕೆ ಬರುವ ಆ ಮಗುವನ್ನು ಸ್ವೀಕರಿಸಲು ನಮಗೆ ಸಹಾಯ ಮಾಡಿರಿ. ನಾವು ಈ ಪ್ರಾರ್ಥನೆಯನ್ನು ಪ್ರಭು ಯೇಸುವಿನ ನಾಮದಲ್ಲಿ ಮಾಡುತ್ತಿದ್ದೇವೆ.
ಆಮೆನ್.

Pl add lent days prayers
ReplyDelete