ಮೊದಲನೆಯ ಸ್ಥಳ

ಯೇಸುವಿಗೆ ಮರಣದಂಡನೆ ವಿಧಿಸುತ್ತಾರೆ


ಒಬ್ಬ: ಸ್ವಾಮಿ ಯೇಸುವೇ, ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ, ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.

ದೇವರ ವಾಕ್ಯ: ಬೆಳಗಾಯಿತು. ಎಲ್ಲ ಮುಖ್ಯ ಯಾಜಕರೂ ಜನರ ಪ್ರಮುಖರೂ ಸೇರಿ ಯೇಸುವನ್ನು ಕೊಲ್ಲಿಸುವುದಕ್ಕೆ ಸಮಾಲೋಚನೆ ಮಾಡಿದರು. ಅಂತೆಯೇ ಯೇಸುವಿಗೆ ಬೇಡಿ ಹಾಕಿಸಿ, ಅವರನ್ನು ಪಿಲಾತನ ಬಳಿಗೆ ಕರೆದೊಯ್ದು ಅವನ ವಶಕ್ಕೆ ಒಪ್ಪಿಸಿದರು. (ಮತ್ತಾಯ : ೨೭: ೧-೨)
ಅವರ ಆ ಕೂಗನ್ನು ಕೇಳಿ ಪಿಲಾತನು ಯೇಸುವನ್ನು ಹೊರಗೆ ಕರೆಯಿಸಿದನು. ಹಾಸುಗಲ್ಲು ಎಂಬ ಕಟ್ಟೆಯ ಮೇಲಿದ್ದ ನ್ಯಾಯಪೀಠದ ಮೇಲೆ ಕುಳಿತುಕೊಂಡನು. ಯೆಹೂದ್ಯರ ಭಾಷೆಯಲ್ಲಿ ಆ ಸ್ಥಳಕ್ಕೆ ‘ಗಬ್ಬಥ’ ಎಂದು ಹೆಸರು. ಕಡೆಗೆ ಪಿಲಾತನು ಯೇಸುವನ್ನು ಶಿಲುಬೆಗೇರಿಸುವುದಕ್ಕಾಗಿ ಅವರಿಗೆ ಒಪ್ಪಿಸಿಬಿಟ್ಟನು (ಯೊವಾನ್ನ ೧೯: ೧೩, ೧೬)

ಶ್ಲೋಕ: ದೇವರು ತಮ್ಮ ಸ್ವಂತ ಪುತ್ರನನ್ನೇ ನಮ್ಮೆಲ್ಲರಿಗಾಗಿ ಕೊಡಲು ಹಿಂಜರಿಯಲಿಲ್ಲ. 
(ರೋಮನರಿಗೆ ೮: ೩೨)
ಪ್ರತಿ ಶ್ಲೋಕ: ತಮ್ಮ ಪುತ್ರನನ್ನೇ ನಮಗಾಗಿ ಬಲಿದಾನವಾಗಿ ಅರ್ಪಿಸಿದರು (ರೋಮನರಿಗೆ ೮: ೩೨)

ಧ್ಯಾನ(ಮಹಾ ಧರ್ಮಾಧ್ಯಕ್ಷ ಆಸ್ಕರ್ ರೊಮೇರೊ)
ನೀನು ಅನುಸರಿಸುತ್ತಿರುವ ಕ್ರೈಸ್ತಧರ್ಮದ ಸಾಚಾತನದ ಬಗ್ಗೆ ತಿಳಿದುಕೊಳ್ಳಲು ಇಚ್ಚಿಸುವೆಯಾ? ಇಲ್ಲಿದೆ ಮಾನದಂಡ. ಯಾರೊಂದಿಗೆ ನೀನು ಹೊಂದಿಕೊಂಡು ಹೋಗುತ್ತೀ? ನಿನ್ನನ್ನು ಟೀಕಿಸುವವರು ಯಾರು? ನಿನ್ನನ್ನು ನಿರಾಕರಿಸುವವರು ಯಾರು? ನಿನ್ನ ಮುಖಸ್ತುತಿ ಮಾಡುವವರು ಯಾರು? ಪ್ರಭುಯೇಸು ಒಮ್ಮೆ ಹೇಳಿದ್ದನ್ನು ಈಗ ಕೇಳು: ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆ ಎಂದು ಭಾವಿಸುತ್ತೀರೋ? ಇಲ್ಲ. ಭಿನ್ನಭೇದಗಳನ್ನು ಉಂಟು ಮಾಡಲು ಬಂದೆನೆಂದು ನಿಮಗೆ ಒತ್ತಿ ಹೇಳುತ್ತೇನೆ (ಲೂಕ ೧೨: ೫೧). ಒಂದೇ ಕುಟುಂಬದಲ್ಲಿ ಭಿನ್ನಭೇದಗಳು ಉಂಟಾಗುವುವು. ಏಕೆಂದರೆ ಕೆಲವರು ಈ ಲೋಕದ ಸಿದ್ಧಾಂತಗಳಿಗೆ ಮರುಳಾಗಿ ಸುಖ ಜೀವನದ ಬೆನ್ನು ಹತ್ತಿ ಅಧಿಕಾರ ಹಾಗೂ ಹಣದ ಮೋಹಕ್ಕೆ ವಶವಾಗುವರು. ಆದರೆ ಇತರರು ಪ್ರಭು ಯೇಸುವಿನ ಕರೆಗೆ ಓಗೊಟ್ಟು ಈ ಲೋಕದಲ್ಲಿ ನ್ಯಾಯನೀತಿಯ ಪರ ನಿಂತು ಅನ್ಯಾಯದ ವ್ಯವಸ್ಥೆಯನ್ನು ತಿರಸ್ಕರಿಸಬೇಕಾಗುತ್ತದೆ. (ಆಸ್ಕರ್ ರೊಮೇರೊ, ದ ವಯಲೆನ್ಸ್ ಆಫ್ ಲವ್, ಪುಟ ೯)

ಪ್ರಾರ್ಥಿಸೋಣ: ಸರ್ವಶಕ್ತ ದೇವರೇ, ನಿಮ್ಮ ಅತಿಪ್ರಿಯ ಕುಮಾರರು ಸಂತೋಷವನ್ನಲ್ಲ, ಬದಲಾಗಿ ಯಾತನೆಯನ್ನು, ಮಹಿಮೆಯನ್ನಲ್ಲ ಬದಲಾಗಿ ಶಿಲುಬೆ ಮರಣವನ್ನು ಅನುಭವಿಸಿದರು: ನಾವೆಲ್ಲರೂ ಶಿಲುಬೆಯ ಹಾದಿಯಲ್ಲಿ ನಡೆಯುತ್ತಾ ಜೀವನದ ಪಥವನ್ನು ಹಾಗೂ ಶಾಂತಿಯನ್ನು ಪಡೆಯುವಂತೆ ಅನುಗ್ರಹಿಸಿರಿ. ನಿಮ್ಮ ಕುಮಾರ ಪ್ರಭು ಯೇಸುಕ್ರಿಸ್ತರ ಮುಖಾಂತರ ಪ್ರಾರ್ಥಿಸುತ್ತೇವೆ. ಆಮೆನ್.

ಪರಿಶುದ್ಧರೂ ಸರ್ವಶಕ್ತರೂ ಅಮರರೂ ಆಗಿರುವ ದೇವರೇ, ನನ್ನ ಮೇಲೆ ದಯೆ ತೋರಿರಿ.

No comments:

Post a Comment