Thursday, 14 February 2019

ಶುಭಸಂದೇಶದ ಕರ್ತೃ- ಸಂತಲೂಕ

ಲೂಕನ ಶುಭಸಂದೇಶ ಹೊಸಒಡಂಬಡಿಕೆಯಲ್ಲಿರುವ ತೃತೀಯ ಸುದೀರ್ಘ ಶುಭಸಂದೇಶ. ಯೇಸುವಿನ ಜೀವನಚರಿತ್ರೆಯನ್ನೊಳಗೊಂಡ ಈ ಶುಭಸಂದೇಶದಲ್ಲಿ, ಯೇಸು ಇಸ್ರಯೇಲ್ ಜನತೆಗೆ ವಾಗ್ದತ್ತ ರಕ್ಷಕ ಮಾತ್ರವಲ್ಲ, ಇಡೀ ಮಾನವಕುಲದ ಉದ್ಧಾರಕ ಎಂಬ ಸತ್ಯವನ್ನು ಲೂಕ ಮನದಟ್ಟಾಗಿಸುತ್ತಾನೆ. ಲೂಕನ ಶುಭಸಂದೇಶದ ಮೂಲಪ್ರತಿಯು ಶುಭಸಂದೇಶದ ಕರ್ತೃವೆಂಬುದರ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಅದಾಗ್ಯೂ, ಸಂತ ಲೂಕನೇ ತೃತೀಯ ಶುಭಸಂದೇಶದ ಕರ್ತೃವೆಂದು ವಿಶ್ವಾಸಾರ್ಹ ಪ್ರಾಚೀನ ಪರಂಪರೆಯು ನಮಗೆ ತಿಳಿಸುತ್ತದೆ. ಸಂತ ಪೌಲನ ಸಹವರ್ತಿಯಾಗಿದ್ದ ಲೂಕನು ಪೌಲನು ಬೋಧಿಸಿದ ಶುಭಸಂದೇಶವನ್ನು ಗ್ರಂಥರೂಪದಲ್ಲಿ ಬರೆದನು ಎಂದು ಸಂತ ಇರನೇಯುಸರು (ಕ್ರಿ.ಶ.180) ದೃಢಪಡಿಸುತ್ತಾರೆ. ಲೂಕನ ಬಗ್ಗೆ ಹೆಚ್ಚಿನ ಮಾಹಿತಿಯು ಮಾರ್ಸಿಯೋನನ ಖಂಡನೆ ಎಂಬ ಪ್ರಾಚೀನ ಗ್ರಂಥದಲ್ಲಿ ನಮಗೆ ಲಭ್ಯವಾಗುತ್ತದೆ. ಈ ಗ್ರಂಥದಲ್ಲಿ ಕೆಳಕಂಡ ಅಂಶಗಳನ್ನು ಗಮನಿಸಬಹುದು; 
· ಲೂಕನು ಯೆಹೂದ್ಯನಾಗಿರದೆ, ಕ್ರೈಸ್ತಧರ್ಮಕ್ಕೆ ಮತಾಂತರಗೊಂಡ ಅಂತಿಯೋಕದ ಅನ್ಯಮತೀಯನು.
· ಅವನು ವೈದ್ಯನೂ ಆಗಿದ್ದುದರಿಂದ ಗ್ರೀಕ್‌ ವಿಜ್ಞಾನದ ಪಾಂಡಿತ್ಯವನ್ನು ಹೊಂದಿದ್ದನು.
· ಅವನು ತನ್ನ ಶುಭಸಂದೇಶವನ್ನು ಗ್ರೀಕ್ ಸಂಸ್ಕೃತಿಯ ಪರಿಸರದಲ್ಲಿ ಬರೆದನು.
· ಪೌಲನ ಪಾಲನಾನುಭವಗಳಲ್ಲಿ ಸಹಭಾಗಿಯಾಗಿದ್ದ ಲೂಕ ಪ್ರೇಷಿತರಿಂದ (ಪೇತ್ರ ಹಾಗೂ ಇತರರಿಂದ) ಶುಭಸಂದೇಶವನ್ನು ಕೇಳಿ ತಿಳಿದುಕೊಂಡನು.
· ಆತನು ಅವಿವಾಹಿತನಾಗಿದ್ದನು
ಲೂಕನ ಬಗ್ಗೆ ಇಂತಹ ಮಾಹಿತಿಗಳನ್ನು ಮುರಟೋರಿಯನ್ ಪ್ರಮಾಣಪಟ್ಟಿ(ಕ್ರಿ.ಶ 120?), ಅಲೆಕ್ಸಾಂಡ್ರಿಯಾದ ಕ್ಲೆಮೆಂಟ್ (ಕ್ರಿ.ಶ.150-215), ಟೆರ್ಟಲಿಯನ್ (ಕ್ರಿ.ಶ.16ಂ-240), ಒರಿಜೆನ್ (ಕ್ರಿ.ಶ 186-254) ಮತ್ತಿತರರಿಂದ ಸಂಗ್ರಹಿಸಬಹುದು. ಲೂಕನು ಯೇಸುಸ್ವಾಮಿಯ ಸೇವಾವೃತ್ತಿಯ ಪ್ರತ್ಯಕ್ಷದರ್ಶಿಯಾಗಿರದೆ, ಪ್ರೇಷಿತರಿಂದಲೂ, ಪ್ರಭುಯೇಸುವನ್ನು ನೋಡಿದ ಇತರರಿಂದಲೂ ಅತ್ಯಂತ ಶ್ರದ್ಧೆಯಿಂದ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿ ಶುಭಸಂದೇಶವನ್ನು ಬರೆದನೆಂದು ಈ ಮೇಲಿನ ಗ್ರಂಥಗಳು ನಮಗೆ ತಿಳಿಸುತ್ತವೆ (ಶುಭಸಂದೇಶಗಳ ಹಿನ್ನೆಲೆ, 53).

No comments:

Post a Comment