ಇಸ್ರಾಯೇಲರ ಹದಿಮೂರು ನ್ಯಾಯಸ್ಥಾಪಕರಲ್ಲಿ
ಯೆಫ್ತಾಹನೂ ಒಬ್ಬಾತ. ಮಹಾ ಪರಾಕ್ರಮಿ. ಒಬ್ಬಳೇ ಪ್ರೀತಿಯ ಮಗಳು. ಒಮ್ಮೆ ಅವನು, ಶತ್ರುಗಳಾದ
ಅಮ್ಮೋನಿಯರನ್ನು ಎದುರಿಸಲು ಹೊರಟಾಗ, ದುಡುಕುತನದಿಂದ ದೇವರಿಗೆ ಹೀಗೆಂದು ಹರಕೆ
ಹೊತ್ತನು-"ಸರ್ವೇಶ್ವರಾ, ನೀನು ಶತ್ರುಗಳನ್ನು ನನ್ನ ಕೈಗೆ ಒಪ್ಪಿಸಿ, ನಾನು ಸುರಕ್ಷಿತವಾಗಿ
ಮನೆಗೆ ಹಿಂತಿರುಗಿದರೆ, ನನ್ನನ್ನು ಎದುರುಗೊಳ್ಳಲು ಮನೆಯ ಬಾಗಿಲಿನಿಂದ ಬರುವ ಮೊದಲ ಪ್ರಾಣಿಯನ್ನು
ನಿಮಗೆ ಹೋಮಮಾಡುವೆನು (ನ್ಯಾಯ 11:31) ಬಹುಶಃ ಅವನ ಮನಸ್ಸಿನಲ್ಲಿ ತನ್ನ ಪ್ರೀತಿಯ ಆಡೋ, ಕುರಿಯೋ
ಬರಬಹುದು ಎಂದಿದ್ದಿರಬಹುದು!
ಆದರೆ, ಆದದ್ದೇ ಬೇರೆ. ಯೆಫ್ತಾಹನು ಜಯಪ್ರದನಾಗಿ ಮನೆಗೆ
ಹಿಂತಿರುಗಿದಾಗ, ಅವನನ್ನು ಎದುರುಗೊಂಡದ್ದು ತನ್ನ ಕಣ್ಮಣಿಯಾಗಿದ್ದ ಪ್ರಿಯಪುತ್ರಿ! ಅವಳು ಅತ್ಯಂತ
ಆನಂದದಿಂದ, ದಮ್ಮಡಿ ಬಡಿಯುತ್ತಾ, ನಾಟ್ಯವಾಡುತ್ತಾ ತಂದೆಯನ್ನು ಎದುರುಗೊಳ್ಳಲು ಸಂಭ್ರಮದಿಂದ
ಹೊರಗೆ ಬಂದಳು. ಅವಳನ್ನು ಕಂಡ ಯೆಫ್ತಾಹನಿಗೆ ಎದೆಯೊಡೆಯಿತು. ಉಕ್ಕಿಬಂದ ದುಃಖದಿಂದ ತನ್ನ
ಬಟ್ಟೆಗಳನ್ನು ಹರಿದುಕೊಂಡು, "ಅಯ್ಯೋ ನನ್ನ ಮಗಳೇ, ನೀನು ನನ್ನನ್ನು
ಕುಗ್ಗಿಸಿಬಿಟ್ಟೆಯಲ್ಲಾ! ನನಗೆ ಮಹಾ ಸಂಕಟವನ್ನು ಉಂಟುಮಾಡಿದಿ. ನನ್ನ ಹರಕೆಯನ್ನು ತೀರಿಸಲೇ
ಬೇಕಾಯಿತಲ್ಲಾ. ಅದರಿಂದ ನಾನು ಹಿಂದೆಗೆಯಲಾರೆನು" ಎಂದು ಕೂಗಿಕೊಂಡನು.
ಆ ಹುಡುಗಿಯಾದರೋ ಹೆದರಲಿಲ್ಲ, ಬೆದರಲಿಲ್ಲ.
"ದೇವರು,ಇಸ್ರಾಯೆಲ್ಯರನ್ನು ಅಮ್ಮೋನಿಯರಿಂದ ಬಿಡಿಸಲು ನನ್ನ ತಂದೆಯನ್ನು ಸಾಧನವನ್ನಾಗಿ ಮಾಡಿದ್ದಾನೆ.
ಆತನು ಈಗ ವಚನಭ್ರಷ್ಟನಾಗಬಾರದು," ಎಂದು ಮನಸ್ಸಿನಲ್ಲಿ ಅಂದುಕೊಂಡು, ಧೈರ್ಯದಿಂದ,
"ಅಪ್ಪಾ, ನೀನು ಬಾಯ್ದೆರೆದು ಸರ್ವೇಶ್ವರರಿಗೆ ಹರಕೆಮಾಡಿದ್ದೀ. ಅವರು, ಶತ್ರುಗಳನ್ನು
ಸೋಲಿಸಿ, ನಮಗೆ ಜಯವನ್ನು ದಯಪಾಲಿಸಿದ್ದಾರೆ. ಹಾಗಾಗಿ, ನಿನ್ನ ಬಾಯಿಂದ ಹೊರಟಿದ್ದನ್ನೇ
ನೆರವೇರಿಸು” ಎಂದು ಹೇಳಿ, ಮುಂದೆ, "ಅಪ್ಪಾ, ನನ್ನ ಬಿನ್ನಹವನ್ನು ಆಲಿಸು. ಎರಡು
ತಿಂಗಳವರೆಗೂ ನನ್ನನ್ನು ಬಿಡು. ನಾನು ನನ್ನ ಗೆಳತಿಯರೊಡನೆ ಬೆಟ್ಟದ ಪ್ರದೇಶಗಳಿಗೆ ಹೋಗಿ ನನ್ನ
ಕನ್ಯಾವಸ್ಥೆಗಾಗಿ ಗೋಳಾಡುವೆನು" ಎಂದು ಕೇಳಿಕೊಂಡಳು. ಈ ಅವಧಿ ಮುಗಿದನಂತರ, ಯೆಫ್ತಾಹನು
ತನ್ನ ಆತುರದಲ್ಲಿ ಹೇಳಿಕೊಂಡ ಹರಕೆಯನ್ನು ತೀರಿಸಿದನು.
No comments:
Post a Comment