Sunday, 10 February 2019

ಸಂವಾದ ಬಲಿಪೂಜೆ


ಸಾಧಾರಣ ಬಲಿಪೂಜೆ


ಪ್ರವೇಶ ಶ್ಲೋಕ:


ಯಾಜಕ: ಪಿತನ ಸುತನ ಮತ್ತು ಪವಿತ್ರಾತ್ಮನ ನಾಮದಲ್ಲಿ,
ಎಲ್ಲರೂ: ಆಮೆನ್.
ಸ್ವಾಗತ
ಯಾಜಕ: ನಮ್ಮ ಪ್ರಭು ಯೇಸುಕ್ರಿಸ್ತರ ಕೃಪಾವರವೂ ದೇವರ ಪ್ರೀತಿಯೂ ಪವಿತ್ರಾತ್ಮರ ಅನ್ಯೋನ್ಯತೆಯೂ ನಿಮ್ಮೆಲ್ಲರೊಡನೆ ಇರಲಿ.
[ಅಥವಾ]
ಯಾಜಕನಮ್ಮ ತಂದೆ ದೇವರು ಹಾಗೂ ಪ್ರಭು ಯೇಸುಕ್ರಿಸ್ತರು ನಿಮಗೆ ಕೃಪಾಶೀರ್ವಾದವನ್ನೂ ಶಾಂತಿ ಸಮಾಧಾನವನ್ನೂ ಅನುಗ್ರಹಿಸಲಿ
[ಅಥವಾ]
ಯಾಜಕಪ್ರಭು ನಿಮ್ಮೊಡನೆ ಇರಲಿ.
 ನಿಮ್ಮಾತ್ಮದೊಡನೆಯೂ ಇರಲಿ.
[ಅಥವಾಎಲ್ಲರೂ:]
ಧರ್ಮಾಧ್ಯಕ್ಷರು: ಶಾಂತಿ ನಿಮ್ಮಲ್ಲಿ ಇರಲಿ.
ಎಲ್ಲರೂ: ನಿಮ್ಮಾತ್ಮದೊಡನೆಯೂ ಇರಲಿ.

*ಪಶ್ಚಾತ್ತಾಪದ ವಿಧಿ*




ಹಿಸ್ಸೋಪ್ ಎಂಬ ಹುಲ್ಲಿನಿಂದ
ನನ್ನ ಮೇಲೆ ನೀರನ್ನು ಚಿಮುಕಿಸುವಿರಿ
ನಾನು ಶುದ್ಧನಾಗುವೆನು
ನೀವು ನನ್ನನ್ನು ತೊಳೆಯುವಿರಿ
ಹಿಮಕ್ಕಿಂತಲೂ ಬೆಳ್ಳಗಾಗುವೆನು

ಪ್ರೀತಿಸ್ವರೂಪರಾದ ದೇವರೇ
ನಮಗೆ ದಯೆತೋರಿ
ಪಿತನಿಗೂ ಸುತನಿಗೂ ಪವಿತ್ರಾತ್ಮರಿಗೂ ಮಹಿಮೆಯಾಗಲಿ
ಆದಿಯಲ್ಲಿದ್ದ ಹಾಗೆ ಈಗಲೂ ಯಾವಾಗಲೂ
ಯುಗಯುಗಾಂತರಕ್ಕೂ ಆಮೆನ್
ಸತ್ಯಸ್ವರೂಪರಾದ ದೇವರೇ
ನಮ್ಮನ್ನು ಕರುಣಿಸಿರಿ
ಪಿತನಿಗೂ ಸುತನಿಗೂ ಪವಿತ್ರಾತ್ಮರಿಗೂ ಮಹಿಮೆಯಾಗಲಿ
ಆದಿಯಲ್ಲಿದ್ದ ಹಾಗೆ ಈಗಲೂ ಯಾವಾಗಲೂ
ಯುಗಯುಗಾಂತರಕ್ಕೂ ಆಮೆನ್

*೧*
ಯಾಜಕ: ಸಹೋದರ ಸಹೋದರಿಯರೇ, ಈ ಪವಿತ್ರ ರಹಸ್ಯಗಳನ್ನು ಆಚರಿಸಲು ನಾವು ಯೋಗ್ಯರಾಗುವಂತೆ ನಮ್ಮ ಪಾಪಗಳನ್ನು ಒಪ್ಪಿಕೊಳ್ಳೋಣ.
(ಮೌನದಲ್ಲಿ ಆತ್ಮಾವಲೋಕನ)
ಎಲ್ಲರೂ: ಸರ್ವಶಕ್ತ ದೇವರಿಗೂ
ಸಹೋದರ ಸಹೋದರಿಯರೇ ನಿಮಗೂಯೋಚನೆಯಿಂದಲೂ, ನುಡಿಯಿಂದಲೂ, ನಡತೆಯಿಂದಲೂಕರ್ತವ್ಯ ಲೋಪದಿಂದಲೂ ನಾನು ಅನೇಕ ಪಾಪಗಳನ್ನು ಮಾಡಿದ್ದೇನೆಂದು ನಿವೇದಿಸುತ್ತೇನೆ
(ಎದೆ ಬಡಿದುಕೊಳ್ಳುತ್ತಾ)
‘ನನ್ನ ಪಾಪವೇ ನನ್ನ ಪಾಪವೇ ನನ್ನ ಮಹಾ ಪಾಪವೇ’ ಆದುದರಿಂದ ಸದಾಕನ್ನಿಕೆಯಾದ ಸಂತ ಮರಿಯಮ್ಮನವರನ್ನೂ,  ಸಕಲ ದೇವದೂತರನ್ನೂ,ಸಂತರನ್ನೂ,  ಸಹೋದರ ಸಹೋದರಿಯರೇ ನಿಮ್ಮನ್ನೂ,  ನನಗಾಗಿ ನಮ್ಮ ಪ್ರಭು ದೇವರನ್ನು ಪ್ರಾರ್ಥಿಸಬೇಕೆಂದು ಬೇಡಿಕೊಳ್ಳುತ್ತೇನೆ
ಯಾಜಕ: ಸರ್ವಶಕ್ತ ದೇವರು ನಮಗೆ ದಯೆ ತೋರಿಸಿ ನಮ್ಮ ಪಾಪಗಳನ್ನು ಕ್ಷಮಿಸಿನಮ್ಮನ್ನು ನಿತ್ಯಜೀವಕ್ಕೆ ಕರೆದೊಯ್ಯಲಿ.
ಎಲ್ಲರೂ: ಆಮೆನ್.          

*೨*
ಯಾಜಕ: ಸಹೋದರ ಸಹೋದರಿಯರೇ, ಈ ಪವಿತ್ರ ರಹಸ್ಯಗಳನ್ನು ಆಚರಿಸಲು ನಾವು ಯೋಗ್ಯರಾಗುವಂತೆ ನಮ್ಮ ಪಾಪಗಳನ್ನು ಒಪ್ಪಿಕೊಳ್ಳೋಣ. (ಮೌನ)
ಪ್ರಭು ನಮಗೆ ದಯೆತೋರಿ
ಎಲ್ಲರೂ: ಏಕೆಂದರೆ ನಾವು ನಿಮ್ಮ ವಿರುದ್ಧ ಪಾಪ ಮಾಡಿದ್ದೇವೆ
ಯಾಜಕ: ಪ್ರಭು ನಮಗೆ ದಯೆತೋರಿ
ಎಲ್ಲರೂ: ನಿಮ್ಮ ರಕ್ಷಣೆಯನ್ನು ನಮಗೆ ಕರುಣಿಸಿರಿ
ಯಾಜಕ: ಸರ್ವಶಕ್ತ ದೇವರು ನಮಗೆ ದಯೆ ತೋರಿಸಿ ನಮ್ಮ ಪಾಪಗಳನ್ನು ಕ್ಷಮಿಸಿ, ನಮ್ಮನ್ನು ನಿತ್ಯಜೀವಕ್ಕೆ ಕರೆದೊಯ್ಯಲಿ.  ಎಲ್ಲರೂ: ಆಮೆನ್.          

*೩*
ಯಾಜಕ: ಸಹೋದರ ಸಹೋದರಿಯರೇ, ಈ ಪವಿತ್ರ ರಹಸ್ಯಗಳನ್ನು ಆಚರಿಸಲು ನಾವು ಯೋಗ್ಯರಾಗುವಂತೆ ನಮ್ಮ ಪಾಪಗಳನ್ನು ಒಪ್ಪಿಕೊಳ್ಳೋಣ. (ಮೌನ)
ಪಶ್ಚಾತ್ತಾಪಿ ಹೃದಯಗಳನ್ನು ಗುಣಪಡಿಸಲು ನೀವು ಕಳುಹಿಸಲ್ಪಟ್ಟಿರಿ.
ಪ್ರಭು ದಯೆತೋರಿ
ಎಲ್ಲರೂ: ಪ್ರಭು ದಯೆತೋರಿ
ಯಾಜಕ: ಪಾಪಿಗಳನ್ನು ಕರೆಯಲು ನೀವು ಬಂದಿರಿ.
ಕ್ರಿಸ್ತರೇ ದಯೆತೋರಿ
ಎಲ್ಲರೂ: ಕ್ರಿಸ್ತರೇ ದಯೆತೋರಿ
ಯಾಜಕ: ನಮಗಾಗಿ ಬಿನ್ನವಿಸಲು ತಂದೆಯ ಬಲಗಡೆಯಲ್ಲಿ ನೀವು ಆಸೀನರಾಗಿರುವಿರಿ.
ಪ್ರಭು ದಯೆತೋರಿ
ಎಲ್ಲರೂ: ಪ್ರಭು ದಯೆತೋರಿ

ಯಾಜಕ: ಸರ್ವಶಕ್ತ ದೇವರು ನಮಗೆ ದಯೆತೋರಿಸಿ ನಮ್ಮ ಪಾಪಗಳನ್ನು ಕ್ಷಮಿಸಿ ನಮ್ಮನ್ನು ನಿತ್ಯಜೀವಕ್ಕೆ ಕರೆದೊಯ್ಯಲಿ.
ಎಲ್ಲರೂ: ಆಮೆನ್

ಯಾಜಕ: ಪ್ರಭುವೇ, ದಯೆತೋರಿ (ಮೂಲದಲ್ಲಿ ಪ್ರಭೂ ಎಂದಿದೆ)
ಎಲ್ಲರೂ: ಪ್ರಭುವೇ, ದಯೆತೋರಿ
ಯಾಜಕ: ಕ್ರಿಸ್ತರೇ, ದಯೆತೋರಿ
ಎಲ್ಲರೂ: ಕ್ರಿಸ್ತರೇ, ದಯೆತೋರಿ
ಯಾಜಕ: ಪ್ರಭುವೇ, ದಯೆತೋರಿ
ಎಲ್ಲರೂ: ಪ್ರಭುವೇ, ದಯೆತೋರಿ
[ಅಥವಾ]
ಯಾಜಕ: ಕೀರಿಯೇ, ಎಲೇಯಿಸೋನ್
ಎಲ್ಲರೂ: ಕೀರಿಯೇ, ಎಲೇಯಿಸೋನ್
ಯಾಜಕ: ಕ್ರಿಸ್ತೇ, ಎಲೇಯಿಸೋನ್
ಎಲ್ಲರೂ: ಕ್ರಿಸ್ತೇ, ಎಲೇಯಿಸೋನ್
ಯಾಜಕ: ಕೀರಿಯೇ, ಎಲೇಯಿಸೋನ್
ಎಲ್ಲರೂ: ಕೀರಿಯೇ, ಎಲೇಯಿಸೋನ್

*ಮಹೋನ್ನತದಲ್ಲಿ*

ಮಹೋನ್ನತದಲ್ಲಿ ದೇವರಿಗೆ ಮಹಿಮೆ,
ಭುವಿಯಲ್ಲಿ ಸುಮನಸ್ಕರಿಗೆ ಶಾಂತಿ.
ಪ್ರಭು ದೇವರೇ, ಸ್ವರ್ಗದ ರಾಜರೇ, ಸರ್ವಶಕ್ತ ದೇವಪಿತನೇ,
ನಾವು ನಿಮ್ಮನ್ನು ಸ್ತುತಿಸುತ್ತೇವೆ, ಭಜಿಸುತ್ತೇವೆ,
ಆರಾಧಿಸುತ್ತೇವೆ, ಮಹಿಮೆಪಡಿಸುತ್ತೇವೆ.
ನಿಮ್ಮ ಉನ್ನತ ಮಹಿಮೆಗಾಗಿ ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.

ಪ್ರಭು ಯೇಸುಕ್ರಿಸ್ತರೇ, ಏಕೈಕ ಪುತ್ರರೇ,
ಪ್ರಭು ದೇವರೇ, ದೇವರ ಕುರಿಮರಿಯೇ, ಪಿತನ ಪುತ್ರರೇ,
ಲೋಕದ ಪಾಪಗಳನ್ನು ಪರಿಹರಿಸುವವರೇ,
ನಮಗೆ ದಯತೋರಿ;
ಲೋಕದ ಪಾಪಗಳನ್ನು ಪರಿಹರಿಸುವವರೇ,
ನಮ್ಮ ಪ್ರಾರ್ಥನೆಯನ್ನು ಅಂಗೀಕರಿಸಿರಿ.

ಪಿತನ ಬಲಗಡೆಯಲ್ಲಿ ಆಸೀನರಾಗಿರುವವರೇ,
ನಮಗೆ ದಯೆತೋರಿ.
ಏಕೆಂದರೆ ನೀವೊಬ್ಬರೇ ಪರಿಶುದ್ಧರು,
ನೀವೊಬ್ಬರೇ ಪ್ರಭು,
ನೀವೊಬ್ಬರೇ ಮಹೋನ್ನತರು.
ಯೇಸುಕ್ರಿಸ್ತರೇ, ಪವಿತ್ರಾತ್ಮರೊಡನೆ
ದೇವಪಿತನ ಮಹಿಮೆಯಲ್ಲಿ ಇರುವವರು ನೀವು.
ಆಮೆನ್.
ಯಾಜಕ: ಪ್ರಾರ್ಥಿಸೋಣ ...
ಎಲ್ಲರೂ: ಆಮೆನ್

*ದೈವ ವಾಕ್ಯದ ವಿಧಿ*


ವಾಚಕ: ಇದು ಪ್ರಭುವಿನ ನುಡಿ. (ಮೂಲದಲ್ಲಿ ’ಪ್ರಭುವಿನ ವಾಕ್ಯ’ ಎಂದಿದೆ)
ಎಲ್ಲರೂ: ದೇವರಿಗೆ ಕೃತಜ್ಞತೆ ಸಲ್ಲಲಿ.

*ಶುಭಸಂದೇಶ ವಾಚನ*

[ಡೀಕನ್: ತಂದೆಯೇ ನನ್ನನ್ನು ಆಶೀರ್ವದಿಸಿರಿ.
ಯಾಜಕ: ನೀವು ಶುಭಸಂದೇಶವನ್ನು ಯೋಗ್ಯವಾಗಿಯೂ ಸಮರ್ಪಕವಾಗಿಯೂ ಪ್ರಕಟಿಸುವಂತೆ ಪ್ರಭು ನಿಮ್ಮ ಹೃದಯದಲ್ಲಿಯೂ ತುಟಿಗಳಲ್ಲಿಯೂ ನೆಲೆಸಲಿ.
+ ಪಿತನ ಮತ್ತು ಸುತನ ಮತ್ತು ಪವಿತ್ರಾತ್ಮನ ನಾಮದಲ್ಲಿ
ಡೀಕನ್: ಆಮೆನ್]
(ಡೀಕನ್ ಇಲ್ಲದಿದ್ದಾಗ
ಯಾಜಕ: [ಮೆಲುದನಿಯಲ್ಲಿ] ಸರ್ವಶಕ್ತ ದೇವರೇ, ನಿಮ್ಮ ಪವಿತ್ರ ಶುಭಸಂದೇಶವನ್ನು ಯೋಗ್ಯವಾಗಿ ಪ್ರಕಟಿಸುವಂತೆ ನನ್ನ ಹೃದಯವನ್ನೂ ತುಟಿಗಳನ್ನೂ ಶುದ್ಧೀಕರಿಸಿರಿ.
(ಈಗ ಪ್ರಕಟವಾಗಿ)
ಯಾಜಕ: ಪ್ರಭು ನಿಮ್ಮೊಡನೆ ಇರಲಿ.
ಎಲ್ಲರು: ನಿಮ್ಮಾತ್ಮದೊಡನೆಯೂ ಇರಲಿ.
ಯಾಜಕ: ....ನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ
ಎಲ್ಲರು: ಪ್ರಭೂ, ನಿಮಗೆ ಮಹಿಮೆ ಸಲ್ಲಲಿ.
(ಶುಭಸಂದೇಶದ ಪಠನ)
ಯಾಜಕ: ಪ್ರಭುವಿನ ಶುಭಸಂದೇಶ.
ಎಲ್ಲರು: ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ.
ಯಾಜಕ: ಶುಭಸಂದೇಶದ ಈ ನುಡಿಗಳು ನಮ್ಮ ಪಾಪಗಳನ್ನು ಅಳಿಸಲಿ.

*ವಿಶ್ವಾಸ ಪ್ರಕಟಣೆ*

(ನೈಸಿನೊ ಕಾನ್‌ಸ್ಟಾಂಟಿನೊಪಾಲಿಟನ್ ಕ್ರೀಡ್)
ಸ್ವರ್ಗವನ್ನೂ ಭುವಿಯನ್ನೂ ಗೋಚರವಾದುದನ್ನೂ ಅಗೋಚರವಾದುದನ್ನೂ ಸರ್ವವನ್ನೂ ಸೃಷ್ಟಿಸಿದ ಸರ್ವಶಕ್ತ ಪಿತನಾದ ಏಕ ದೇವರನ್ನು ವಿಶ್ವಾಸಿಸುತ್ತೇನೆ.
ಸಕಲ ಯುಗಗಳ ಮುನ್ನ ಪಿತನಿಂದ ಜನಿಸಿದ ಏಕಮಾತ್ರ ದೇವಪುತ್ರ ಪ್ರಭು ಯೇಸುಕ್ರಿಸ್ತರನ್ನು ವಿಶ್ವಾಸಿಸುತ್ತೇನೆ.
ಇವರು ದೇವರಿಂದ ದೇವರೂ, ಬೆಳಕಿನಿಂದ ಬೆಳಕೂ, ನಿಜದೇವರಿಂದ ನಿಜದೇವರೂ, ಜನಿಸಿಯೂ ಸೃಷ್ಟಿಯಾಗದೆ ಪಿತನ ಸಹಸ್ವಭಾವಿ ಆಗಿರುವರು.
ಇವರ ಮುಖಾಂತರವೇ ಸಕಲವೂ ಸೃಷ್ಟಿಯಾಯಿತು.
ಇವರು ಮಾನವರಾದ ನಮಗಾಗಿಯೂ, ನಮ್ಮ ರಕ್ಷಣೆಗಾಗಿಯೂ ಸ್ವರ್ಗದಿಂದ ಇಳಿದು ಬಂದರು
ಮತ್ತು (ತಲೆಬಾಗಿ) *ಪವಿತ್ರಾತ್ಮರಿಂದ ಕನ್ಯಾಮರಿಯಮ್ಮನವರಲ್ಲಿ ಮನುಷ್ಯರಾದರು* .
ಪೋಂತ್ಸಿಯುಸ್ ಪಿಲಾತನ ಅಧಿಕಾರದಲ್ಲಿ ನಮಗಾಗಿ ಶಿಲುಬೆಗೇರಿಸಲ್ಪಟ್ಟು, ಮೃತರಾಗಿ, ಸಮಾಧಿ ಮಾಡಲ್ಪಟ್ಟರು
ಪವಿತ್ರ ಗ್ರಂಥಗಳ ಪ್ರಕಾರವೇ ಮೂರನೆಯ ದಿನ ಪುನರ್ಜೀವಂತರಾಗಿ ಎದ್ದರು.
ಸ್ವರ್ಗಕ್ಕೇರಿ ಪಿತನ ಬಲಗಡೆಯಲ್ಲಿ ಆಸೀನರಾಗಿರುವರು.
ಅಲ್ಲಿಂದ ಜೀವಂತರಿಗೂ ಮೃತರಿಗೂ ತೀರ್ಪುಕೊಡಲು ಮಹಿಮೆಯೊಂದಿಗೆ ಮರಳಿ ಬರುವರು.
ಅವರ ರಾಜ್ಯಕ್ಕೆ ಅಂತ್ಯವಿರದು.
ಪಿತನಿಂದಲೂ ಸುತನಿಂದಲೂ ಹೊರಡುವ ಪ್ರಭುವೂ ಜೀವದಾತರೂ ಆಗಿರುವ ಪವಿತ್ರಾತ್ಮರನ್ನು ವಿಶ್ವಾಸಿಸುತ್ತೇನೆ.
ಪ್ರವಾದಿಗಳ ಮುಖಾಂತರ ಮಾತನಾಡಿದ ಇವರು, ಪಿತ ಮತ್ತು ಸುತನೊಡನೆ ಒಂದಾಗಿ ಆರಾಧನೆಯನ್ನೂ, ಮಹಿಮೆಯನ್ನೂ ಪಡೆಯುತ್ತಾರೆ
ಏಕ, ಪವಿತ್ರ, ಕಥೋಲಿಕ ಮತ್ತು ಪ್ರೇಷಿತ ಧರ್ಮಸಭೆಯನ್ನು ವಿಶ್ವಾಸಿಸುತ್ತೇನೆ.
ಪಾಪ ಪರಿಹಾರಕ್ಕಾಗಿ ಒಂದೇ ದೀಕ್ಷಾಸ್ನಾನ ಇರುವುದೆಂದು ನಿವೇದಿಸುತ್ತೇನೆ.
ಮೃತರ ಪುನರುತ್ಥಾನವನ್ನೂ ಬರಲಿರುವ ಮರುಲೋಕ ಜೀವನವನ್ನೂ ನಿರೀಕ್ಷಿಸುತ್ತೇನೆ. ಆಮೆನ್.

*ಕಾಣಿಕೆಯರ್ಪಣೆ*





ಯಾಜಕ
:
ಸಕಲ ಸೃಷ್ಟಿಯ ಪ್ರಭು ದೇವರೇ, ಸ್ತುತಿಗೆ ಪಾತ್ರರು ನೀವು. ನಾವು ಅರ್ಪಿಸುವ ಈ ರೊಟ್ಟಿಯನ್ನು ನಿಮ್ಮ ಔದಾರ್ಯದಿಂದ ಪಡೆದಿದ್ದೇವೆ. ಭೂಮಿಯ ಹಾಗೂ ಮಾನವನ ದುಡಿಮೆಯ ಫಲವಾಗಿರುವ ಇದು ನಮಗೆ ಜೀವದಾಯಕ ರೊಟ್ಟಿಯಾಗಿ ಮಾರ್ಪಡಲಿ.
ಎಲ್ಲರೂ: ದೇವರಿಗೆ ಸದಾ ಸ್ತುತಿ ಸಲ್ಲಲಿ.
ಯಾಜಕ: ಸಕಲ ಸೃಷ್ಟಿಯ ಪ್ರಭು ದೇವರೇ, ಸ್ತುತಿಗೆ ಪಾತ್ರರು ನೀವು. ನಾವು ಅರ್ಪಿಸುವ ಈ ದ್ರಾಕ್ಷಾರಸವನ್ನು ನಿಮ್ಮ ಔದಾರ್ಯದಿಂದ ಪಡೆದಿದ್ದೇವೆ. ದ್ರಾಕ್ಷಾಲತೆಯ ಹಾಗೂ ಮಾನವನ ದುಡಿಮೆಯ ಫಲವಾಗಿರುವ ಇದು ನಮಗೆ ಆಧ್ಯಾತ್ಮಿಕ ಪಾನವಾಗಿ ಮಾರ್ಪಡಲಿ.
ಎಲ್ಲರೂ: ದೇವರಿಗೆ ಸದಾ ಸ್ತುತಿ ಸಲ್ಲಲಿ.

ಯಾಜಕ:  [ಮೆಲುದನಿಯಲ್ಲಿ] ಪ್ರಭೂ, ಮನೋದೀನತೆ ಹಾಗೂ ಪಶ್ಚಾತ್ತಾಪವುಳ್ಳ ನಮ್ಮನ್ನು ಅಂಗೀಕರಿಸಿರಿ. ಪ್ರಭು ದೇವರೇ, ನಾವು ಈ ದಿನ ನಿಮ್ಮ ಸಮ್ಮುಖದಲ್ಲಿ ಅರ್ಪಿಸುವ ಈ ಬಲಿಯು ನಿಮಗೆ ಮೆಚ್ಚುಗೆಯಾಗಲಿ.
[ಕೈಗಳನ್ನು ತೊಳೆದುಕೊಳ್ಳುತ್ತಾ]
ಪ್ರಭೂ ನನ್ನ ದೋಷದಿಂದ ನನ್ನನ್ನು ತೊಳೆಯಿರಿ
ಮತ್ತು ನನ್ನ ಪಾಪದಿಂದ ನನ್ನನ್ನು ಶುದ್ಧೀಕರಿಸಿರಿ.

ಯಾಜಕ: ಸಹೋದರ ಸಹೋದರಿಯರೇ, ನನ್ನ ಮತ್ತು ನಿಮ್ಮ ಬಲಿಯು ಸರ್ವಶಕ್ತ ಪಿತನಾದ ದೇವನಿಗೆ ಅಂಗೀಕೃತವಾಗುವಂತೆ ಪ್ರಾರ್ಥಿಸಿರಿ.
ಎಲ್ಲರೂ: ಪ್ರಭು ತಮ್ಮ ನಾಮದ ಸ್ತುತಿ ಹಾಗೂ ಮಹಿಮೆಗಾಗಿಯೂ ನಮ್ಮ ಮತ್ತು ತಮ್ಮ ಇಡೀ ಪವಿತ್ರ ಧರ್ಮಸಭೆಯ ಒಳಿತಿಗಾಗಿಯೂ ಈ ಬಲಿಯನ್ನು ನಿಮ್ಮ ಕರಗಳಿಂದ ಸ್ವೀಕರಿಸಲಿ.

*ಪರಮ ಪ್ರಸಾದ ಪ್ರತಿಷ್ಠಾ ಪ್ರಾರ್ಥನೆ*


ಯಾಜಕ: ಪ್ರಭು ನಿಮ್ಮೊಡನೆ ಇರಲಿ.
ಎಲ್ಲರೂ: ನಿಮ್ಮಾತ್ಮದೊಡನೆಯೂ ಇರಲಿ.
ಯಾಜಕ: ನಿಮ್ಮ ಹೃದಯಗಳನ್ನು ಮೇಲಕ್ಕೆತ್ತಿರಿ.
ಎಲ್ಲರೂ: ಪ್ರಭುವಿನ ಕಡೆಗೆ ಎತ್ತಿದ್ದೇವೆ.
ಯಾಜಕ: ನಮ್ಮ ಪ್ರಭು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸೋಣ.
ಎಲ್ಲರೂ: ಅದು ಯೋಗ್ಯ ಮತ್ತು ನ್ಯಾಯವಾಗಿದೆ.


[ಸಾಧಾರಣ ಕಾಲದ ಭಾನುವಾರದ ಪೀಠಿಕೆ-೧, ROMAN MISSAL P-641]

ಯಾಜಕ: ಪ್ರಭುವೇ, ಪವಿತ್ರ ಪಿತನೇ, ಸರ್ವಶಕ್ತ ನಿತ್ಯದೇವರೇ, ನಾವು ಎಂದೆಂದೂ ಎಲ್ಲೆಲ್ಲೂ ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮಗೆ ಕೃತಜ್ಞತೆಯನ್ನು ಸಲ್ಲಿಸುವುದು ನಿಜವಾಗಿ ಯೋಗ್ಯವೂ ನ್ಯಾಯವೂ ಆಗಿದೆ, ನಮ್ಮ ಕರ್ತವ್ಯವೂ ರಕ್ಷಣೆಯೂ ಆಗಿದೆ.
ಏಕೆಂದರೆ  ಅವರು ಪಾಸ್ಖ ರಹಸ್ಯದ ಮೂಲಕ ಪಾಪ ಮತ್ತು ಮರಣದ ನೊಗದಿಂದ ನಮ್ಮನ್ನು ಬಿಡುಗಡೆ ಮಾಡುವ ಅತಿಶಯ ಕಾರ್ಯವನ್ನು ನೆರವೇರಿಸಿದರು. ಆಯ್ಕೆಯಾದ ಜನರೂ ರಾಜಗುರುವರ್ಗದವರೂ ಪವಿತ್ರ ಜನಾಂಗದವರೂ ನಿಮ್ಮ ಸ್ವಂತ ಪ್ರಜೆಯೂ ಎಂದು ಈಗ ಎನಿಸಿಕೊಳ್ಳುವಂತಹ ಮಹಿಮೆಗೆ ನಮ್ಮನ್ನು ಆರಿಸಿದರು. ಹೀಗೆ ಕಾರ್ಗತ್ತಲೆಯಿಂದ ನಿಮ್ಮ ಅದ್ಭುತಕರ ಬೆಳಕಿಗೆ ಆಹ್ವಾನಿತರಾಗಿರುವ ನಾವು ನಿಮ್ಮ ಮಹತ್ಕಾರ್ಯಗಳನ್ನು ಎಲ್ಲೆಲ್ಲೂ ಸಾರಲು ನಮ್ಮನ್ನು ಕರೆದರು.
ಆದುದರಿಂದ, ದೇವದೂತರೊಂದಿಗೂ ಶ್ರೇಷ್ಠದೂತರೊಂದಿಗೂ ರಾಜಾಸನ ಹಾಗೂ ಪ್ರಭುತ್ವ ದೂತರೊಂದಿಗೂ ಸ್ವರ್ಗೀಯ ಸಕಲ ದಳ ಮತ್ತು ಶಕ್ತರೊಂದಿಗೂ ನಾವು ನಿಮ್ಮ ಮಹಿಮಾ ಗೀತೆಯನ್ನು ಹಾಡುತ್ತಾ ನಿರಂತರವಾಗಿ ನಿಮ್ಮ ಸ್ತುತಿಯನ್ನು ಘೋಷಿಸುತ್ತೇವೆ:

*ಪರಿಶುದ್ಧರು*

ಪರಿಶುದ್ಧರು, ಪರಿಶುದ್ಧರು,
ಸೇನಾಧೀಶ್ವರ ಪ್ರಭು ದೇವರು ಪರಿಶುದ್ಧರು.
ಇಹಪರಗಳು ನಿಮ್ಮ ಮಹಿಮೆಯಿಂದ ತುಂಬಿವೆ.
ಮಹೋನ್ನತದಲ್ಲಿ ಹೊಸಾನ್ನ
ಪ್ರಭುವಿನ ನಾಮದಲ್ಲಿ ಬರುವವರು ಸ್ತುತಿಗೆ ಪಾತ್ರರು.
ಮಹೋನ್ನತದಲ್ಲಿ ಹೊಸಾನ್ನ.

[ಪರಮಪ್ರಸಾದ ಪ್ರತಿಷ್ಠಾ ಪ್ರಾರ್ಥನೆ I, ROMAN MISSAL P-641]
ಆದುದರಿಂದ ಅತ್ಯಂತ ದಯಾಮಯ ತಂದೆಯೇ,
ಈ ಕೊಡುಗೆಗಳನ್ನು,
ಈ ಕಾಣಿಕೆಗಳನ್ನು
ಈ ಪವಿತ್ರ ಹಾಗೂ ನಿಷ್ಕಳಂಕ ಬಲಿವಸ್ತುಗಳನ್ನು
ಸ್ವೀಕರಿಸಿ
+ಆಶೀರ್ವದಿಸಬೇಕೆಂದು ನಮ್ಮ ಪ್ರಭು ನಿಮ್ಮ ಪುತ್ರ ಯೇಸುಕ್ರಿಸ್ತರ ಮುಖಾಂತರ ನಿಮ್ಮನ್ನು ಬಿನ್ನವಿಸುತ್ತಾ ದೀನತೆಯಿಂದ ಪ್ರಾರ್ಥಿಸುತ್ತೇವೆ.
ಮೊತ್ತಮೊದಲು ಇವುಗಳನ್ನು ನಿಮ್ಮ ಪವಿತ್ರ ಕಥೋಲಿಕ ಧರ್ಮಸಭೆಗಾಗಿ ಅರ್ಪಿಸುತ್ತೇವೆ. ಅದನ್ನು ಕಾಪಾಡಿರಿ, ಅದಕ್ಕೆ ದಾರಿ ತೋರಿಸಿರಿ.
ವಿಶ್ವದಲ್ಲೆಲ್ಲಾ ಅದಕ್ಕೆ ಶಾಂತಿಯನ್ನೂ ಐಕ್ಯತೆಯನ್ನೂ ದಯಪಾಲಿಸಿರಿ. ಅಂತೆಯೇ ನಿಮ್ಮ ಸೇವಕರಾದ ನಮ್ಮ ವಿಶ್ವಗುರು ಫ್ರಾನ್ಸಿಸ್ ಅವರಿಗಾಗಿಯೂ, ನಮ್ಮ ಧರ್ಮಾಧ್ಯಕ್ಷ .. ಅವರಿಗಾಗಿಯೂ ಸತ್ಯವನ್ನು ಎತ್ತಿಹಿಡಿಯುತ್ತಾ ಪ್ರೇಷಿತ ಹಾಗೂ ಕಥೋಲಿಕ ವಿಶ್ವಾಸವನ್ನು ಹಸ್ತಾಂತರಿಸುವ ಸರ್ವರಿಗಾಗಿಯೂ ಇವುಗಳನ್ನು ಅರ್ಪಿಸುತ್ತೇವೆ.
[ಕೈಯಗಲಿಸಿ]
ಆದುದರಿಂದ ಪ್ರಭೂ,
ನಿಮ್ಮ ಇಡೀ ಕುಟುಂಬವು ಅರ್ಪಿಸುವ
ನಮ್ಮ ಸೇವೆಯ ಈ ಬಲಿಕಾಣಿಕೆಯನ್ನು
ದಯೆಯಿಂದ ಸ್ವೀಕರಿಸಿರಿ.
ನಮ್ಮ ಬಾಳನ್ನು ನಿಮ್ಮ ಶಾಂತಿಯಲ್ಲಿ ನೆಲೆಗೊಳಿಸಿರಿ.
ಅನಂತ ದಂಡನೆಯಿಂದ ನಮ್ಮನ್ನು ಪಾರುಮಾಡಿ
ನೀವು ಆಯ್ದುಕೊಂಡ ಮಂದೆಯೊಂದಿಗೆ
ನಾವು ಬಂದು ಸೇರುವಂತೆ ಆಜ್ಞಾಪಿಸಿರಿ.
[ಕೈಜೋಡಿಸಿ]
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಆಮೆನ್.
[ಕೈಯಗಲಿಸಿ]
ದೇವರೇ, ಈ ಕಾಣಿಕೆಯನ್ನು ಆಶೀರ್ವದಿಸಿ, ಅನುಮೋದಿಸಿ, ಇದನ್ನು ಯಥಾರ್ಥವಾಗಿ ಸ್ವೀಕರಿಸಚಿತ್ತರಾಗಿರೆಂದು ನಿಮ್ಮನ್ನು ವಿನಂತಿಸುತ್ತೇವೆ.
ಇದು ಆಧ್ಯಾತ್ಮಿಕವೂ ಅಂಗೀಕೃತವೂ ಆಗುವಂತೆ ಮಾಡಿರಿ.
ನಮಗಿದು ನಿಮ್ಮ ಅತಿ ಪ್ರಿಯ ಪುತ್ರರೂ
ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರ
ಶರೀರ ಮತ್ತು ರಕ್ತವಾಗುವಂತೆ ಕರುಣಿಸಿರಿ.
[ಕೈಜೋಡಿಸಿ]

ಅವರು ಯಾತನೆ ಪಡುವುದಕ್ಕೆ ಹಿಂದಿನ ದಿನ ತಮ್ಮ ಪವಿತ್ರ ಹಾಗೂ ಪೂಜ್ಯ ಕರಗಳಲ್ಲಿ ರೊಟ್ಟಿಯನ್ನು ತೆಗೆದುಕೊಂಡು ಸ್ವರ್ಗದೆಡೆಗೆ ಕಣ್ಣೆತ್ತಿ, ತಮ್ಮ ಸರ್ವಶಕ್ತ ತಂದೆಯಾದ ನಿಮ್ಮ ಕಡೆ ನೋಡಿ, ಕೃತಜ್ಞತೆಯನ್ನು ಸಲ್ಲಿಸಿ, ಆ ರೊಟ್ಟಿಯನ್ನು ಆಶೀರ್ವದಿಸಿ, ಮುರಿದು, ತಮ್ಮ ಶಿಷ್ಯರಿಗೆ ಕೊಡುತ್ತಾ ಹೀಗೆಂದರು:

*ತೆಗೆದುಕೊಳ್ಳಿ ಇದನ್ನು ನೀವೆಲ್ಲರೂ ಭುಜಿಸಿರಿ

ಏಕೆಂದರೆ ಇದು ನಿಮಗಾಗಿ ಒಪ್ಪಿಸಲಾಗುವ

ನನ್ನ ಶರೀರ*   

ಅಂತೆಯೇ ಭೋಜನದ ಅಂತ್ಯದಲ್ಲಿ ಅವರು ಅಮೂಲ್ಯ ಪಾನಪಾತ್ರೆಯನ್ನು ತಮ್ಮ ಪವಿತ್ರ ಹಾಗೂ ಪೂಜ್ಯ ಕರಗಳಲ್ಲಿ ತೆಗೆದುಕೊಂಡು, ನಿಮಗೆ ಕೃತಜ್ಞತೆಯನ್ನು ಸಲ್ಲಿಸಿ, ಅದನ್ನು ಆಶೀರ್ವದಿಸಿ, ಆ ಪಾನಪಾತ್ರೆಯನ್ನು ತಮ್ಮ ಶಿಷ್ಯರಿಗೆ ಕೊಡುತ್ತಾ ಹೀಗೆಂದರು:

*ತೆಗೆದುಕೊಳ್ಳಿ ಮತ್ತು ಇದರಿಂದ ನೀವೆಲ್ಲರೂ ಪಾನಮಾಡಿರಿ

ಏಕೆಂದರೆ ಇದು ಹೊಸ ಮತ್ತು ಅನಂತ ಒಡಂಬಡಿಕೆಯ ನನ್ನ ರಕ್ತದ ಪಾತ್ರೆ

ರಕ್ತವು ನಿಮ್ಮ ಮತ್ತು ಅನೇಕರ ಪಾಪಗಳ ಪರಿಹಾರಕ್ಕಾಗಿ ಸುರಿಸಲಾಗುವುದು

ಇದನ್ನು ನನ್ನ ಸ್ಮರಣೆಗಾಗಿ ಮಾಡಿರಿ*

*ವಿಶ್ವಾಸದ ರಹಸ್ಯ*

ಎಲ್ಲರೂ: ಪ್ರಭೂ, ನಿಮ್ಮ ಮರಣವನ್ನು ಸಾರುತ್ತೇವೆ. ನೀವು ಮರಳಿ ಬರುವ ತನಕ, ನಿಮ್ಮ ಪುನರುತ್ಥಾನವನ್ನು ನಿವೇದಿಸುತ್ತೇವೆ.
[ಅಥವಾ]
ಪ್ರಭೂ, ನಾವು ಈ ರೊಟ್ಟಿಯನ್ನು ಭುಜಿಸಿ, ಈ ಪಾತ್ರೆಯಿಂದ ಪಾನ ಮಾಡುವಾಗಲೆಲ್ಲಾ ನೀವು ಮರಳಿ ಬರುವ ತನಕ ನಿಮ್ಮ ಮರಣವನ್ನು ಸಾರುತ್ತೇವೆ.
[ಅಥವಾ]
ನಿಮ್ಮ ಶಿಲುಬೆ ಹಾಗೂ ಪುನರುತ್ಥಾನದ ಮೂಲಕ ನಮ್ಮನ್ನು ವಿಮೋಚಿಸಿದ ಲೋಕರಕ್ಷಕರೇ, ನಮ್ಮನ್ನು ರಕ್ಷಿಸಿರಿ.

ಯಾಜಕ: [ಕೈಯಗಲಿಸಿ] ಆದುದರಿಂದ ಪ್ರಭೂ,
ನಿಮ್ಮ ಸೇವಕರೂ ನಿಮ್ಮ ಪವಿತ್ರ ಪ್ರಜೆಯೂ ಆದ ನಾವು
ನಿಮ್ಮ ಪುತ್ರ, ನಮ್ಮ ಪ್ರಭು ಕ್ರಿಸ್ತರು
ಪೂಜ್ಯ ಯಾತನೆಯನ್ನು ಅನುಭವಿಸಿ,
ಮೃತರ ಮಧ್ಯದಿಂದ ಪುನರುತ್ಥಾನಗೊಂಡು
ಮಹಿಮಾಭರಿತರಾಗಿ ಸ್ವರ್ಗಾರೋಹಣವಾದುದನ್ನು ಸ್ಮರಿಸುತ್ತೇವೆ.
ನೀವಿತ್ತ ಕೊಡುಗೆಗಳಿಂದ ಆರಿಸಿದ
ಈ ಪರಿಶುದ್ಧ, ಈ ಪವಿತ್ರ, ಈ ನಿಷ್ಕಳಂಕ ಬಲಿ
ಹಾಗೂ ಅನಂತ ಜೀವವೀವ ಪವಿತ್ರ ರೊಟ್ಟಿಯನ್ನೂ
ನಿತ್ಯ ರಕ್ಷಣೆಯನ್ನೀಯುವ ಪಾತ್ರೆಯನ್ನೂ
ನಿಮ್ಮ ಮಹಿಮಾ ಮಹತ್ವಕ್ಕೆ ಅರ್ಪಿಸುತ್ತೇವೆ.
ನಿಮ್ಮ ನೀತಿವಂತ ಸೇವಕ ಆಬೇಲನ ಕಾಣಿಕೆಗಳನ್ನೂ
ವಿಶ್ವಾಸದಲ್ಲಿ ನಮ್ಮ ಪಿತಾಮಹನಾದ
ಅಬ್ರಹಾಮನ ಬಲಿಯರ್ಪಣೆಯನ್ನೂ
ನಿಮ್ಮ ಮಹಾಯಾಜಕ
ಮೆಲ್ಕಿಸೆದೆಕ್ ಅರ್ಪಿಸಿದ ಬಲಿಯನ್ನೂ
ನೀವು ಸ್ವೀಕರಿಸಿದಂತೆ ನಮ್ಮ ಪವಿತ್ರ ಹಾಗೂ
ನಿಷ್ಕಳಂಕ ಬಲಿಯನ್ನೂ ಪ್ರಶಾಂತಚಿತ್ತರಾಗಿ ದಯೆಯಿಂದ ಈಕ್ಷಿಸಿ ಅಂಗೀಕರಿಸಿರಿ.
[ಕೈಜೋಡಿಸಿ] ಸರ್ವಶಕ್ತ ದೇವರೇ
ನಿಮ್ಮ ದಿವ್ಯ ಸಾನ್ನಿಧ್ಯದ ಮಹೋನ್ನತ ಪೀಠಕ್ಕೆ 
ಈ ಕೊಡುಗೆಗಳನ್ನು ತನ್ನ ಕರಗಳಲ್ಲಿ ಕೊಂಡೊಯ್ಯುವಂತೆ ನಿಮ್ಮ ಪವಿತ್ರ ದೂತನಿಗೆ ಆದೇಶಿಸಬೇಕೆಂದು ನಿಮ್ಮನ್ನು ವಿನಯದಿಂದ ಬಿನ್ನವಿಸುತ್ತೇವೆ.
ನಿಮ್ಮ ಪುತ್ರರ ಅತಿ ಪವಿತ್ರ ಶರೀರ ಮತ್ತು ರಕ್ತವನ್ನು
ಈ ಬಲಿಪೀಠದಿಂದ ಸ್ವೀಕರಿಸುವ ನಾವೆಲ್ಲರೂ
[ಆಶೀರ್ವದಿಸುತ್ತಾ] ಸ್ವರ್ಗೀಯ ಆಶೀರ್ವಾದದಿಂದಲೂ
ಸಕಲ ಕೃಪಾವರದಿಂದಲೂ ತುಂಬಿರುವಂತೆ ಮಾಡಿರಿ.
[ಕೈಜೋಡಿಸಿ] ನಮ್ಮ ಪ್ರಭು ಕ್ರಿಸ್ತರ ಮುಖಾಂತರ
ನಿಮ್ಮನ್ನು ಪ್ರಾರ್ಥಿಸುತ್ತೇವೆ. ಆಮೆನ್.
[ಪಾನಪಾತ್ರೆಯನ್ನೂ ಅಪ್ಪವುಳ್ಳ ತಟ್ಟೆಯನ್ನೂ ಎತ್ತಿಹಿಡಿದು]
ಇವರ ಮುಖಾಂತರವೂ, ಇವರೊಂದಿಗೂ, ಇವರಲ್ಲಿಯೂ, ಸರ್ವಶಕ್ತ ತಂದೆಯಾದ ದೇವರೇ, ಪವಿತ್ರಾತ್ಮರ ಐಕ್ಯದಲ್ಲಿ ಸರ್ವಗೌರವವೂ ಮಹಿಮೆಯೂ ಯುಗಯುಗಾಂತರಕ್ಕೂ ಸಲ್ಲಲಿ.  ಎಲ್ಲರೂ: ಆಮೆನ್

*ಪ್ರಭುವಿನ ಪ್ರಾರ್ಥನೆ*

ಯಾಜಕ: ರಕ್ಷಕರ ಆಜ್ಞೆಯ ಪ್ರಕಾರ ಮತ್ತು ದೈವಬೋಧನೆಯಿಂದ ಶಿಕ್ಷಿತರಾಗಿ ಧೈರ್ಯದಿಂದ ನಾವು ಹೇಳುತ್ತೇವೆ:
ಎಲ್ಲರೂ: ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿಮ್ಮ ನಾಮ ಪೂಜಿತವಾಗಲಿ; ನಿಮ್ಮ ರಾಜ್ಯ ಬರಲಿ, ನಿಮ್ಮ ಚಿತ್ತ ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭುವಿಯಲ್ಲಿಯೂ ನೆರವೇರಲಿ.
ನಮ್ಮ ಅನುದಿನದ ಆಹಾರವನ್ನು ಇಂದು ನಮಗೆ ನೀಡಿರಿ. ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ  ನಮ್ಮ ಪಾಪಗಳನ್ನು ಕ್ಷಮಿಸಿರಿ; ನಮ್ಮನ್ನು ಶೋಧನೆಗೆ ಒಳಪಡಿಸದೆ, ಕೇಡಿನಿಂದ ನಮ್ಮನ್ನು ರಕ್ಷಿಸಿರಿ.
ಯಾಜಕ: ಪ್ರಭೂ, ಸಕಲ ಕೇಡುಗಳಿಂದ ನಮ್ಮನ್ನು ರಕ್ಷಿಸಿರೆಂದು ಪ್ರಾರ್ಥಿಸುತ್ತೇವೆ. ನಿಮ್ಮ ಕರುಣೆಯ ನೆರವನ್ನು ಪಡೆದು ಪಾಪದಿಂದ ಸದಾ ವಿಮುಕ್ತರಾಗಿ, ಎಲ್ಲಾ ಸಂಕಷ್ಟಗಳಿಂದ ಸುರಕ್ಷಿತರಾಗಿರುವಂತೆ ನಮ್ಮ ಜೀವಮಾನದಲ್ಲಿ ಶಾಂತಿಯನ್ನು ದಯೆಯಿಂದ ಕರುಣಿಸಿರಿ. ನಾವು ಸ್ವರ್ಗಾನಂದವನ್ನೂ ನಮ್ಮ ರಕ್ಷಕ ಯೇಸುಕ್ರಿಸ್ತರ ಆಗಮನವನ್ನೂ ನಿರೀಕ್ಷಿಸುತ್ತಿದ್ದೇವೆ.
ಎಲ್ಲರೂ: ಏಕೆಂದರೆ, ರಾಜ್ಯಭಾರವೂ ಅಧಿಕಾರವೂ ಮಹಿಮೆಯೂ ಯುಗಯುಗಾಂತರಕ್ಕೂ ನಿಮ್ಮದೇ.
ಯಾಜಕ: ಪ್ರಭುವಿನ ಶಾಂತಿ ಸದಾ ನಿಮ್ಮಲ್ಲಿರಲಿ.
ಎಲ್ಲರೂ: ನಿಮ್ಮಾತ್ಮದೊಡನೆಯೂ ಇರಲಿ.
ಯಾಜಕ: ಪರಸ್ಪರ ಶಾಂತಿಯನ್ನು ಕೋರೋಣ.

*ದೇವರ ಕುರಿಮರಿ*

ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿಯೇ ನಮಗೆ ದಯೆತೋರಿ
ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿಯೇ ನಮಗೆ ದಯೆತೋರಿ
ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿಯೇ ನಮಗೆ ಶಾಂತಿ ನೀಡಿರಿ.
ಯಾಜಕ: ಇಗೋ, ದೇವರ ಕುರಿಮರಿ, ಇಗೋ ಲೋಕದ ಪಾಪಗಳನ್ನು ಪರಿಹರಿಸುವವರು ಇವರೇ. ಕುರಿಮರಿಯ ಭೋಜನಕ್ಕೆ ಆಹ್ವಾನಿತರು ಭಾಗ್ಯವಂತರು.
ಎಲ್ಲರೂ: ಪ್ರಭೂ, ತಾವು ನನ್ನ ಮನೆಯನ್ನು ಪ್ರವೇಶಿಸಲು ನಾನು ಪಾತ್ರನಲ್ಲ. ಆದರೆ ತಾವು ಒಂದೇ ಒಂದು ಮಾತನ್ನು ನುಡಿಯಿರಿ, ನನ್ನ ಆತ್ಮವು ಸ್ವಸ್ಥವಾಗುವುದು.

 *ಮುಕ್ತಾಯ ವಿಧಿ*


ಯಾಜಕ: ಪ್ರಭು ನಿಮ್ಮೊಡನೆ ಇರಲಿ.
ಎಲ್ಲರೂ: ನಿಮ್ಮಾತ್ಮದೊಡನೆಯೂ ಇರಲಿ.
ಯಾಜಕ: ಸರ್ವಶಕ್ತ ದೇವರಾದ + ಪಿತ ಮತ್ತು ಸುತ ಮತ್ತು ಪವಿತ್ರಾತ್ಮರು ನಿಮ್ಮನ್ನು ಆಶೀರ್ವದಿಸಲಿ.
ಎಲ್ಲರೂ: ಆಮೆನ್
ಯಾಜಕ: ಹೋಗಿ ಬನ್ನಿ, ಬಲಿಯರ್ಪಣೆ ಮುಗಿಯಿತು.


ಎಲ್ಲರೂ: ದೇವರಿಗೆ ಕೃತಜ್ಞತೆ ಸಲ್ಲಲಿ.

4 comments:

  1. ಅಚ್ಚುಕಟ್ಟಾಗಿ ಸಂವಾದ ಬಲಿಪೂಜೆಯ ಪಠ್ಯವನ್ನು ಬ್ಲಾಗ್ ನಲ್ಲಿ ತರಲು ಶ್ರಮಿಸಿದ ನಿಮಗೆ ಅಭಿನಂದನೆಗಳು. ಪ್ರಭುಯೇಸು ನಿಮ್ಮನ್ನು ಆಶೀರ್ವದಿಸಲಿ.

    ReplyDelete
    Replies
    1. Thank you Very much. Please share this blog with your contacts. Thanking you.

      Delete
  2. ಒಳ್ಳೆಯ ಟಿಪ್ಪಣಿಗಳಿಗೆ ನಾನು ಚಿರಋಣಿ

    ReplyDelete
    Replies
    1. Thank you Very much. Please share this blog with your contacts. Thanking you.

      Delete