ಪುರೋಹಿತಶಾಹಿ ವರ್ಗದವರ ಪುಸಲಾವಣೆಗೊಳಗಾಗಿ
ಉದ್ರಿಕ್ತರಾಗಿದ್ದ ಯಹೂದಿ ಜನರ ಆಗ್ರಹಕ್ಕೆ ಮಣಿದು, ರೋಮನ್ ಪ್ರಾಂತಾಧಿಕಾರಿ ಪೊನ್ಸಿಯಸ್ ಪಿಲಾತ
ಕೈಗೊಂಡ ನಿರ್ಧಾರದಂತೆ ಶಿಲುಬೆ ಮರಣದ ಶಿಕ್ಷೆಗೆ ಗುರಿಯಾದ ಯೇಸುಸ್ವಾಮಿ, ಪಿಲಾತನ ಅರಮನೆಯ ಅಂಗಳದ
ನ್ಯಾಯಾಲಯದಿಂದ ಜೆರುಸಲೇಮ್ ಪಟ್ಟಣದ ಬೀದಿಗಳಲ್ಲಿ ಹಾಯ್ದು ಕಪಾಲ ಬೆಟ್ಟದವರೆಗೆ ಶಿಲುಬೆ ಹೊತ್ತು
ಸಾಗಿದ ಹಾದಿ, ಶಿಲುಬೆ ಮರಣ ಮತ್ತು ನಂತರದ ಭೂಸ್ಥಾಪನೆ (ಸಮಾಧಿ) ವರೆಗಿನ ಘಟನಾವಳಿಗಳನ್ನು ‘ಶಿಲುಬೆ
ಹಾದಿ’ ಎಂದು ಗುರುತಿಸಲಾಗುತ್ತದೆ.
ಆ ಹಾದಿಯಲ್ಲಿನ ಹದಿನಾಲ್ಕು ಸ್ಥಳಗಳನ್ನು ಗುರುತಿಸಿ ಆಯಾ
ಘಟನಾವಳಿಗಳನ್ನು ಸ್ಮರಿಸುತ್ತಾ, ಧ್ಯಾನಿಸುವ, ಪ್ರಾರ್ಥಿಸುವ ಪ್ರಕ್ರಿಯೆಯನ್ನು ‘ಶಿಲುಬೆ ಹಾದಿ’
ಎಂದು ಕಥೋಲಿಕ ಧರ್ಮಸಭೆ ಮಾನ್ಯ ಮಾಡಿದೆ.
ಈ ‘ಶಿಲುಬೆ ಹಾದಿ’ಯನ್ನು ‘ವೀಯಾ ದೋಲೊರೊಸಾ’, ‘ವೀಯಾ ಕ್ರೂಚಿಸ್’ ಮತ್ತು ‘ಶಿಲುಬೆಯ ಹದಿನಾಲ್ಕು ಸ್ಥಳಗಳು’ ಎಂದೂ ಕರೆಯಲಾಗುತ್ತದೆ. ಲ್ಯಾಟಿನ್ ನಲ್ಲಿ ‘ವಿಯಾ
ದೋಲೊರೊಸಾ’ ಎಂದರೆ ‘ನೋವಿನ ಹಾದಿ’. ಅದರಂತೆ ‘ವಿಯಾ ಕ್ರೂಸಿಸ್’ ಎಂದರೆ ‘ಶಿಲುಬೆಯ ಹಾದಿ’.
ಈ ಸ್ಥಳಗಳನ್ನು- ಚಿತ್ರಗಳು, ಭಿತ್ತಿಚಿತ್ರಗಳು,
ಉಬ್ಬುಚಿತ್ರಗಳು (ಕಟ್ಟಿಗೆಯ, ಪ್ಲಾಸ್ಟರ್ ಆಫ್ ಪ್ಯಾರಿಸ್, ಲೋಹದ, ಕಲ್ಲಿನ) ಕೆಲವೊಮ್ಮೆ ನೈಜ
ಗಾತ್ರದ ಮಾನವಾಕಾರದ ಪ್ರತಿಕೃತಿಗಳ ಮೂಲಕವೂ ಪ್ರತಿನಿಧಿಸಲಾಗುತ್ತದೆ. ಒಂದರಿಂದ
ಹದಿನಾಲ್ಕರವರೆಗಿನ ಸಂಖ್ಯೆಗಳನ್ನು ಗುರುತಿಸುವ ಕಲ್ಲಿನ ಶಿಲುಬೆಗಳ ‘ಶಿಲುಬೆ ಹಾದಿ’ ಕೆಲವು
ಕ್ರೈಸ್ತ ಗ್ರಾಮಗಳಲ್ಲಿ ಮತ್ತು ಕ್ರೈಸ್ತರು ಹೆಚ್ಚಾಗಿರುವ ಬಡಾವಣೆಗಳಲ್ಲಿ ಕಾಣಬಹುದು.
ಶಿಲುಬೆ ಹಾದಿಯ ಹದಿನಾಲ್ಕು ಸ್ಥಳಗಳು:
೧) ಪ್ರಭು ಯೇಸುಸ್ವಾಮಿಯನ್ನು ಶಿಲುಬೆ ಮರಣದ ಶಿಕ್ಷೆಗೆ ಗುರಿಪಡಿಸಲಾಗುವುದು.
೨) ಪ್ರಭು ಯೇಸುಸ್ವಾಮಿಯು ಶಿಲುಬೆಯನ್ನು
ಹೊತ್ತುಕೊಳ್ಳುವರು.
೩) ಶಿಲುಬೆಯ ಭಾರ ಹೊರಲಾರದೆ ಪ್ರಭು ಯೇಸುಸ್ವಾಮಿಯು
ಮೊದಲನೆಯ ಬಾರಿ ಮೊಕ್ಕಡೆಯಾಗಿ ಬೀಳುವರು.
೪) ಪ್ರಭು ಯೇಸುಸ್ವಾಮಿ ಪೂಜ್ಯ ಮಾತೆಮರಿಯಳನ್ನು
ಎದುರುಗೊಳ್ಳುವರು.
೫) ಭಾರವಾದ ಶಿಲುಬೆಯನ್ನು ಹೊತ್ತು ಸಾಗಿಸಲು ಪ್ರಭು
ಯೇಸುಸ್ವಾಮಿ ಸಿರೇನ್ಯದ ಸಿಮೋನನ ಸಹಾಯ ಪಡೆಯುವರು.
೬) ಜೆರುಸಲೇಮಿನ ಮಹಿಳೆಯರಲ್ಲೊಬ್ಬಳಾದ ವೆರೋನಿಕ ಎಂಬುವವಳು
ಬಿಳಿಯ ಬಟ್ಟೆಯಿಂದ ಪ್ರಭು ಯೇಸುಸ್ವಾಮಿಯ ಮುಖವನ್ನು ಒರೆಸುವಳು.
೭) ಪ್ರಭು ಯೇಸುಸ್ವಾಮಿಯು ಎರಡನೇ ಸಾರಿ ಮೊಕ್ಕಡೆಯಾಗಿ
ಬೀಳುವರು.
೮) ಪ್ರಭು ಯೇಸುಸ್ವಾಮಿಯು ತನ್ನನ್ನು ಹಿಂಬಾಲಿಸಿ
ಬರುತ್ತಿದ್ದ ಜೆರುಸಲೇಮಿನ ಮಹಿಳೆಯರಿಗೆ ಸಮಾಧಾನ ಮಾಡುವರು.
೯) ಪ್ರಭು ಯೇಸುಸ್ವಾಮಿಯು ಮೂರನೇ ಬಾರಿ ಮೊಕ್ಕಡೆಯಾಗಿ
ಬೀಳುವರು.
೧೦) ಈ ಮೊದಲೇ ಸೂಚನೆಯಾದಂತೆ ಸೈನಿಕರು ಪ್ರಭು ಯೇಸುಸ್ವಾಮಿಯ
ಬಟ್ಟೆಗಳನ್ನು ಸುಲಿದು ಹಂಚಿಕೊಳ್ಳುವರು.
೧೧) ಸೈನಿಕರು ಪ್ರಭು ಯೇಸುಸ್ವಾಮಿಯನ್ನು ಶಿಲುಬೆಮರಕ್ಕೆ
ಕಟ್ಟಿ ಮೊಳೆ ಜಡಿಯುವರು.
೧೨) ಪ್ರಭು ಯೇಸುಸ್ವಾಮಿಯು ಶಿಲುಬೆಯ ಮೇಲೆ ಮರಣಿಸುವರು.
೧೩) ಪ್ರಭು ಯೇಸುಸ್ವಾಮಿಯ ಪಾರ್ಥಿವ ಶರೀರವನ್ನು
ಶಿಲುಬೆಯಿಂದ ಇಳಿಸಿ ತಾಯಿ ಮಾತೆ ಮರಿಯಳ ಮಡಿಲಲ್ಲಿರಿಸುವುದು.
೧೪) ಪ್ರಭು ಯೇಸುಸ್ವಾಮಿಯ ಪಾರ್ಥಿವ ಶರೀರವನ್ನು
ಗುಹೆಯೊಂದರಲ್ಲಿ ಭೂಸ್ಥಾಪನೆ ಮಾಡುವುದು.
ಶಿಲುಬೆ ಹಾದಿ - ಪವಿತ್ರ ಯಾತ್ರೆಯ ಪ್ರತೀಕ.....
ಪ್ರಭು ಯೇಸುಕ್ರಿಸ್ತರು ಬಾಳಿ ಬದುಕಿದ, ಪ್ರಬೋಧನೆ ಮಾಡಿದ,
ಪವಾಡಗಳನ್ನು ಗೈದ ಸ್ಥಳಗಳಿರುವ ಪವಿತ್ರ ಭೂಮಿ ಜೆರುಸಲೇಮಿಗೆ ಪ್ರತಿಯೊಬ್ಬ ಕ್ರೈಸ್ತನೂ
ಭೇಟಿಕೊಡುವುದು ಅಸಾಧ್ಯವಾದ ಮಾತು. ಈ ನಿಟ್ಟಿನಲ್ಲಿ ‘ಶಿಲುಬೆ ಹಾದಿ’ ಆಚರಣೆಯು, ಕ್ರೈಸ್ತರ
ಪವಿತ್ರ ಭೂಮಿ ‘ಜೆರುಸಲೇಮಿನ ತೀರ್ಥಯಾತ್ರೆ’ಯ ಪುಟ್ಟ ಪ್ರತೀಕ ಎಂದು ಹೇಳಲಾಗುತ್ತದೆ. ಈ
ಆಚರಣೆಯಲ್ಲಿ ಭಾಗವಹಿಸುವವರಿಗೆ ‘ಪವಿತ್ರ ಭೂಮಿ ಜೆರುಸಲೇಮಿ’ಗೆ ಭೇಟಿಕೊಟ್ಟ ಧನ್ಯತೆಯ ಭಾವ
ಮೂಡುತ್ತದೆ ಎಂಬ ಕಾರಣವೇ ಈ ಆಚರಣೆಯ ಆರಂಭಕ್ಕೆ ನಾಂದಿಯಾಯಿತು ಎನ್ನಲಾಗುತ್ತಿದೆ.
ಪವಿತ್ರ ಭೂಮಿ ‘ಜೆರುಸಲೇಮ್ ಯಾತ್ರೆ’ಯ ಸಂದರ್ಭದಲ್ಲಿ
ಶಿಲುಬೆ ಹೊತ್ತು ಸಾಗಿದ ದಾರಿಯಲ್ಲಿ ಭಕ್ತರು ಸಾಗಿ ಧನ್ಯತೆಯನ್ನು ಅನುಭವಿಸುತ್ತಿದ್ದರು. ಮೂರು
ನಾಲ್ಕನೇ ಶತಮಾನಗಳಲ್ಲಿ ದೂರದ ಪವಿತ್ರ ಭೂಮಿಗೆ ಹೋಗಲಾಗದ ಭಕ್ತರಿಗೆ ಅನುಕೂಲವಾಗಲಿ ಎಂದು ಕೆಲವು
ದೇಶಗಳಲ್ಲಿನ ಸನ್ಯಾಸಿ ಮಠಗಳಲ್ಲಿ ಜೆರುಸಲೇಮಿನ ಪವಿತ್ರ ಕ್ಷೇತ್ರಗಳ ಪ್ರತಿಕೃತಿಗಳ ನಿರ್ಮಾಣ
ಕಾರ್ಯ ನಡೆದವು. ಪ್ರಯಾಣದ ಪ್ರಯಾಸವನ್ನು ಅನುಭವಿಸಿ ಪವಿತ್ರ ಭೂಮಿಗೆ ಭೇಟಿ ಕೊಟ್ಟವರು
ಮಾಡುತ್ತಿದ್ದ ಪ್ರಭು ಯೇಸುಸ್ವಾಮಿ ಶಿಲುಬೆ ಹೊತ್ತು ಸಾಗಿದ ಹಾದಿಯ ಬಣ್ಣನೆ, ಅವರ ವರ ಧನ್ಯತೆಯ
ಭಾವ ಆಯಾ ಊರುಗಳಲ್ಲಿ ಅನುರಣಿಸಿದಾಗ, ಆಯಾ ಊರಲ್ಲಿನ ಭಕ್ತರಲ್ಲಿ ಪವಿತ್ರ ಭೂಮಿಯ ಭೇಟಿಯ ತವಕ ಹೆಚ್ಚುತ್ತಿತ್ತು.
ಈ ಬೆಳವಣಿಗೆಗಳೇ ಕ್ರಮೇಣ ಶಿಲುಬೆ ಹಾದಿಯ ಸ್ಥಳಗಳ ಚಿತ್ರಣಗಳು ಹದಿನೇಳನೇ ಶತಮಾನದ ಉತ್ತರಾರ್ಧದ
ಹೊತ್ತಿಗೆ ಚರ್ಚ್ ಅಂಗಳಕ್ಕೆ ಬರುವಂತೆ ಪ್ರೆರೇಪಿಸಿರಬೇಕು ಎಂದು ಇತಿಹಾಸಕಾರರು
ಪ್ರತಿಪಾದಿಸುತ್ತಾರೆ.
ಪವಿತ್ರ ಕ್ಷೇತ್ರದ ಯಾತ್ರೆಯ ಪ್ರತೀಕ:
ಪ್ರಭು ಯೇಸುಕ್ರಿಸ್ತರು ಬಾಳಿ ಬದುಕಿದ, ಪ್ರಬೋಧನೆ ಮಾಡಿದ,
ಪವಾಡಗಳನ್ನು ಗೈದ ಸ್ಥಳಗಳಿರುವ ಪವಿತ್ರ ಭೂಮಿ ಜೆರುಸಲೇಮಿಗೆ ಪ್ರತಿಯೊಬ್ಬ ಕ್ರೈಸ್ತನಿಗೆ
ಭೇಟಿಕೊಡುವುದು ಅಸಾಧ್ಯವಾದ ಮಾತು. ಈ ನಿಟ್ಟಿನಲ್ಲಿ ‘ಶಿಲುಬೆ ಹಾದಿ’ ಆಚರಣೆಯು, ಕ್ರೈಸ್ತರ
ಪವಿತ್ರ ಭೂಮಿ ‘ಜೆರುಸಲೇಮಿನ ತೀರ್ಥಯಾತ್ರೆ’ಯ ಪುಟ್ಟ ಪ್ರತೀಕ ಎಂದು ಹೇಳಲಾಗುತ್ತದೆ. ಈ
ಆಚರಣೆಯಲ್ಲಿ ಭಾಗವಹಿಸುವವರಿಗೆ ‘ಪವಿತ್ರ ಭೂಮಿ ಜೆರುಸಲೇಮಿ’ಗೆ ಭೇಟಿಕೊಟ್ಟ ಧನ್ಯತೆಯ ಭಾವ
ಮೂಡುತ್ತದೆ ಎಂಬ ಕಾರಣವೇ ಈ ಆಚರಣೆಯ ಆರಂಭಕ್ಕೆ ನಾಂದಿಯಾಯಿತು ಎನ್ನಲಾಗುತ್ತಿದೆ. ಪವಿತ್ರ ಭೂಮಿ ‘ಜೆರುಸಲೇಮ್ ಯಾತ್ರೆ’ಯ
ಸಂದರ್ಭದಲ್ಲಿ ಶಿಲುಬೆ ಹೊತ್ತು ಸಾಗಿದ ದಾರಿಯಲ್ಲಿ ಭಕ್ತರು ಸಾಗಿ ಧನ್ಯತೆಯನ್ನು ಅನುಭವಿಸುತ್ತಿದ್ದರು.
ಮೂರು, ನಾಲ್ಕನೇ ಶತಮಾನಗಳಲ್ಲಿ ದೂರದ ಪವಿತ್ರ ಭೂಮಿಗೆ
ಹೋಗಲಾಗದ ಭಕ್ತರಿಗೆ ಅನುಕೂಲವಾಗಲಿ ಎಂದು ಕೆಲವು ದೇಶಗಳಲ್ಲಿನ ಸನ್ಯಾಸಿ ಮಠಗಳಲ್ಲಿ ಜೆರುಸಲೇಮಿನ
ಪವಿತ್ರ ಕ್ಷೇತ್ರಗಳ ಪ್ರತಿಕೃತಿಗಳ ನಿರ್ಮಾಣ ಕಾರ್ಯ ನಡೆದವು. ಪ್ರಯಾಣದ ಪ್ರಯಾಸವನ್ನು ಅನುಭವಿಸಿ
ಪವಿತ್ರ ಭೂಮಿಗೆ ಭೇಟಿ ಕೊಟ್ಟವರು ಮಾಡುತ್ತಿದ್ದ ಪ್ರಭುಯೇಸುಸ್ವಾಮಿ ಶಿಲುಬೆ ಹೊತ್ತು ಸಾಗಿದ
ಹಾದಿಯ ಬಣ್ಣನೆ, ಅವರ ವರ ಧನ್ಯತೆಯ ಭಾವ ಆಯಾ ಊರುಗಳಲ್ಲಿ ಅನುರಣಿಸಿದಾಗ, ಆಯಾ ಊರಲ್ಲಿನ
ಭಕ್ತರಲ್ಲಿ ಪವಿತ್ರ ಭೂಮಿ ಭೇಟಿಯ ತವಕ ಬೆಚ್ಚುತ್ತಿತ್ತು. ಈ ಬೆಳವಣಿಗೆಗಳೇ ಕ್ರಮೇಣ ಶಿಲುಬೆ
ಹಾದಿಯ ಸ್ಥಳಗಳ ಚಿತ್ರಣಗಳು ಹದಿನೇಳನೇ ಶತಮಾನದ ಉತ್ತರಾರ್ಧದ ಹೊತ್ತಿಗೆ ಚರ್ಚ್ ಅಂಗಳಕ್ಕೆ
ಬರುವಂತೆ ಪ್ರೆರೇಪಿಸಿರಬೇಕು ಎಂದು ಇತಿಹಾಸಕಾರರು ಪ್ರತಿಪಾದಿಸುತ್ತಾರೆ.
ಮಾತೆ ಮರಿಯಳ ‘ನೋವಿನ ಹಾದಿ’:
ಹದಿನೈದನೇ ಶತಮಾನದಲ್ಲಿ ಪೂರ್ಣ ಪ್ರಮಾಣದ ‘ಶಿಲುಬೆ ಹಾದಿ’ಯ
ಪರಿಕಲ್ಪನೆ ಅಸ್ತಿತ್ವಕ್ಕೆ ಬಂದಿತ್ತು ಎನ್ನಲಾಗುತ್ತದೆ. ಮಾತೆ ಮರಿಯಳು ಕೆಲವು ಸಮಯ ಅದೇ
ಹಾದಿಯಲ್ಲಿ ಸಾಗಿದ್ದಳು ಎಂಬ ಕಾರಣಕ್ಕೆ ‘ವಿಯಾ ದೋಲೊರೊಸಾ’ (ನೋವಿನ ಹಾದಿ) ಎಂಬ ಹೆಸರು
ಪ್ರಾಪ್ತಿಯಾಯಿತಂತೆ. ಈ ಪದಪುಂಜ ೧೬ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದಿತಂತೆ.
‘ಶಿಲುಬೆ ಹಾದಿ’ಯಲ್ಲಿ ಇಂದು ‘ಹದಿನಾಲ್ಕು ಸ್ಥಳ’ಗಳಿವೆ.
ಮೊದಮೊದಲು ‘ಶಿಲುಬೆ ಹಾದಿ’ಗೆ ಇಷ್ಟೇ ಸ್ಥಳಗಳು ಎಂಬುದು ಇರಲಿಲ್ಲ. ಪವಿತ್ರ ಭೂಮಿಗೆ ಭೇಟಿ ಕೊಟ್ಟ
ಭಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ೬, ೧೯, ೨೫, ೩೧, ೩೭ ಎಂದು ಶಿಲುಬೆ ಹಾದಿಯ ಸ್ಥಳಗಳನ್ನು
ಗುರುತಿಸುತ್ತಿದ್ದರು. ಹದಿನಾರನೇ ಶತಮಾನದ ಕೊನೆಯಲ್ಲಿ ಪ್ರಕಟಗೊಂಡ ಪುಸ್ತಕವೊಂದರಲ್ಲಿ ಇಂದು
ಬಳಕೆಯಲ್ಲಿರುವ ಮೊದಲ ೧೨ ಸ್ಥಳಗಳನ್ನು ಗುರುತಿಸಲಾಗಿದೆ. ನಂತರ ಧರ್ಮಸಭೆಯು ‘ಶಿಲುಬೆ ಹಾದಿ’ಯ
ಸ್ಥಳಗಳನ್ನು ೧೪ಕ್ಕೆ ನಿಗದಿ ಪಡಿಸಿದೆ.
ದೇಹ ದಂಡನೆಯ ತಪಸ್ಸು ಕಾಲ:
ಸಾಮಾನ್ಯವಾಗಿ ಫೆಬ್ರುವರಿ ಮಾರ್ಚ ತಿಂಗಳಲ್ಲಿ ಬರುವ ಈ
ಸ್ಟರ್ ಹಬ್ಬಕ್ಕೆ ಮೊದಲು ೪೦ ದಿನಗಳ ಕಾಲದ ಅವಧಿಯನ್ನು (ಭಾನವಾರ ಲೆಕ್ಕಕ್ಕೆ ಸೇರುವುದಿಲ್ಲ) ಕಥೋಲಿಕ
ಕ್ರೈಸ್ತರು ‘ತಪಸ್ಸುಕಾಲ’ವೆಂದು ಕರೆಯುತ್ತಾರೆ. ‘ತಪಸ್ಸು ಕಾಲಕ್ಕೆ’ ಆಂಗ್ಲ ಪದ ಲೆಂಟನ್ ಸೀಸನ್.
ಲೆಂಟ್ ಎಂದರೆ ವಸಂತ ಎಂಬ ಅರ್ಥವಿದೆ. ಪ್ರಭುಯೇಸು ಕ್ರಿಸ್ತರು ತಮ್ಮ ಬಹಿರಂಗ ಜೀವನವನ್ನು
ಆರಂಭಿಸುವ ಮುನ್ನ ೪೦ ದಿನಗಳ ಕಾಲ ಜಪ, ಧ್ಯಾನ ಮತ್ತು ದೇಹದಂಡನೆಯ ಉಪವಾಸದಲ್ಲಿ ಕಾಲ ಕಳೆದರೆಂದು
ಹೊಸ ಒಡಂಬಡಿಕೆಯ, ಜೇಸುನಾಥರ ಜೀವನ ಕಥನ ಸಾರುವ ‘ಸುವಾರ್ತೆ’ಗಳಲ್ಲಿ ಪ್ರಸ್ತಾಪಿಸಲಾಗಿದೆ. ಇದು
ತಪಸ್ಸು ಕಾಲದ ಆಚರಣೆಯ ಹಿನ್ನೆಲೆ.
ಈ ಅವಧಿಯಲ್ಲಿ, ಸಂಪ್ರದಾಯ ಶರಣರು ಈ ಹಿಂದೆ, ಉಪವಾಸವಿರುವುದರ
ಜೊತೆಗೆ ಕಪ್ಪುಬಟ್ಟೆ ಧರಿಸುತ್ತಿದ್ದರು, ಕೆಲವರು ಕೂದಲನ್ನು ಹಾಗೇ ಬಿಟ್ಟುಕೊಂಡಿರುತ್ತಿದ್ದರು.
ಮತ್ತೆ ಕೆಲವರು ಮಾಂಸಾಹಾರಕ್ಕೆ ತಾತ್ಕಾಲಿಕ ವಿರಾಮ ಹೇಳುತ್ತಿದ್ದರು.
ಬೂದಿ (ವಿಭೂತಿ-ಹಿಂದಿನ ವರ್ಷ ‘ಗರಿಗಳ ಹಬ್ಬ’ದಂದು
ಪಾದ್ರಿಗಳು ಆಶಿರ್ವದಿಸಿ ಕೊಟ್ಟಿದ್ದ ಗರಿಗಳನ್ನು ಭಕ್ತರು ಹಿಂದಿರುಗಿಸಿದ ನಂತರ ಅವುಗಳನ್ನು
ಸುಟ್ಟು ಸಿದ್ಧಪಡಿಸಿದ ಬೂದಿಯನ್ನು ಅಂದು ‘ಮಣ್ಣಿಂದ ಕಾಯ, ಮಣ್ಣಿಗೆ ಸೇರುವೆ’ ಎನ್ನತ್ತಾ ಅದನ್ನು
ಹಣೆಗೆ ಹಚ್ಚಲಾಗುತ್ತದೆ) ಬುಧವಾರದಂದು (ಆಶ್ ವೆನ್ಸಡೆ) ಆರಂಭವಾಗುವ ‘ತಪಸ್ಸು ಕಾಲ’ದಲ್ಲಿ ಬರುವ
ಶುಕ್ರವಾರಗಳಲ್ಲಿ ವೈಯಕ್ತಿಕವಾಗಿ, ಕೌಟುಂಬಿಕ ನೆಲೆಗಳಲ್ಲಿ ಹಾಗು ಚರ್ಚುಗಳಲ್ಲಿ ಸಾಮೂಹಿಕವಾಗಿ ‘ಶಿಲುಬೆ
ಹಾದಿ’ಯನ್ನು ನಡೆಸಲಾಗುತ್ತದೆ.
‘ಶುಭಶುಕ್ರವಾರ’ದ ಹಿಂದಿನ ಭಾನುವಾರ ‘ಗರಿಗಳ ಹಬ್ಬ’, ಅದು
ಪ್ರಭು ಯೇಸುಸ್ವಾಮಿ ಜೆರುಸಲೇಮಿಗೆ ಪ್ರವೇಶಿಸಿದ ಸಂಭ್ರಮವನ್ನು ಕೊಂಡಾಡುವ ಹಬ್ಬ. ಅಂದು
ಜೆರುಸಲೇಮಿನ ಜನರು ಗರಿಗಳನ್ನು ಹಿಡಿದು ಪ್ರಭು ಯೇಸುಸ್ವಾಮಿಗೆ ಸ್ವಾಗತ ಕೋರಿದ್ದರು.
ಕೊನೆಯ ಭೋಜನ’ದ ‘ಪವಿತ್ರ ವಾರ :
ಶುಭ ಶುಕ್ರವಾರ’ವಿರುವ ವಾರವನ್ನು ‘ಪವಿತ್ರವಾರ’ವೆಂದು
ಗುರುತಿಸಲಾಗುತ್ತದೆ.
ಆ ವಾರದ ‘ಪವಿತ್ರ ಗುರುವಾರ’ದಂದು ವಿಶೇಷ ಆರಾಧನೆಗಳ ಜೊತೆಗೆ
‘ಕೊನೆಯ ಭೋಜನ’ದ ಮೊದಲು ಪ್ರಭು ಯೇಸುಕ್ರಿಸ್ತರು ತಮ್ಮ ಶಿಷ್ಯರ ಪಾದ ತೊಳೆದು ದೈನ್ಯತೆಯ ಪಾಠ
ಹೇಳಿದ ಘಟನೆಯ ಪುನರಾವರ್ತನೆ ಎಂಬಂತೆ, ಚರ್ಚಿನಲ್ಲಿ ಪಾದ್ರಿಗಳು ಸಾಂಕೇತಿಕವಾಗಿ ೧೨ ಜನ ಭಕ್ತರ
ಪಾದ ತೊಳೆಯುವ ಸಾಂಗ್ಯ ನಡೆಸಿಕೊಡುತ್ತಾರೆ.
‘ಶುಭಶುಕ್ರವಾರ’ದಂದು ಸಂಪ್ರದಾಯಸ್ತರ ಮನೆಗಳಲ್ಲಿ ಸಾವಿನ
ಸೂತಕದ ಲಕ್ಷಣಗಳನ್ನು ಕಾಣಬಹುದು. ಅಂದು ಚರ್ಚಿನಲ್ಲಿ ವಿಶೇಷ ಪ್ರಾರ್ಥನೆಗಳು ನಡೆದರೆ,
ಮನೆಗಳಲ್ಲೂ ಅದು ಪ್ರತಿಫಲಿಸುತ್ತಿರುತ್ತದೆ. ಮಾರನೆಯ ದಿನ ಶನಿವಾರ ಜಾಗರಣೆ, ಅದೇ ದಿನ ಸರಿ ರಾತ್ರಿ
ಈ ಸ್ಟರ್ ಹಬ್ಬದ ದೊಡ್ಡ ಪಾಡುಪೂಜೆ ನಡೆಯುತ್ತದೆ. ಅಗ್ನಿ, ಧೂಪ, ತೀರ್ಥಗಳನ್ನು
ಪವಿತ್ರೀಕರಿಸಲಾಗುತ್ತದೆ. ದೊಡ್ಡ ಮೇಣದ ಬತ್ತಿಯನ್ನು ಹಚ್ಚಿ, ಅದರ ಮೇಲೆ ಶಿಲುಬೆ ಆಕಾರವನ್ನು
ಹೋಲುವಂತೆ ಧೂಪದ ಉಂಡೆಗಳನ್ನು ನೆಟ್ಟು ಆದಿ ಅಂತ್ಯದ ಸ್ಮರಣೆ ಮಾಡಲಾಗುತ್ತದೆ. ಆ ದೊಡ್ಡ ‘ಪವಿತ್ರ
ಮೇಣದ ಬತ್ತಿ’ ಪ್ರಭು ಯೇಸುಕ್ರಿಸ್ತರ ಪುನರುತ್ಥಾನದ ಸಂಕೇತವಾಗಿರುತ್ತದೆ. ಪ್ರಭು ಯೇಸುಸ್ವಾಮಿ
ಪುನರುತ್ಥಾನರಾದಾಗ ‘ಈ ಸ್ಟರ್’ ಹಬ್ಬ ಸಂಪನ್ನವಾಗುತ್ತದೆ.
ಶಿಲುಬೆ ಹಾದಿ’ಯ ಆಚರಣೆಯು ಫ್ರಾನ್ಸಿಸ್ಕನ್ ಸಭೆಯ ಕೊಡುಗೆ. . .
ಕೆಲವು ಸಮಯ ಜೆರುಸಲೇಮ್ ಪಟ್ಟಣ ಮಹಮ್ಮದೀಯರ ವಶದಲ್ಲಿದ್ದ
ಕಾರಣ ‘ಶಿಲುಬೆ ಹಾದಿ’ಯು ಯುರೋಪಿನ ವಿವಿಧ ದೇಶಗಳಲ್ಲಿ ಹುಟ್ಟಿಕೊಂಡು ಇಂದಿನ ಸ್ವರೂಪ
ಪಡೆದಿರಬೇಕು, ಇದಕ್ಕೆ ಫ್ರಾನ್ಸಿಸ್ಕನ್ ಸಭೆಯ ಪಾದ್ರಿಗಳ ಕೊಡುಗೆ ಅಪಾರ ಎಂದು ಕಥೋಲಿಕ
ವಿಶ್ವಕೋಶವು ದಾಖಲಿಸಿದೆ,
ಹದಿನೇಳನೇ ಶತಮಾನದಲ್ಲಿದ್ದ ಆಳಿದವರಾದ ಹನ್ನೊಂದನೇ
ನಿಷ್ಕಳಂಕಪ್ಪ (ಇನೊಸೆಂಟ್) (೧೬೮೬) ಮತ್ತು ಹನ್ನೆರಡನೇ ನಿಷ್ಕಳಂಕಪ್ಪ (೧೬೯೪) ಮತ್ತು
ಹದಿನೆಂಟನೇ ಶತಮಾನದಲ್ಲಿದ್ದ ಆಳಿದವರಾದ ಹದಿಮೂರನೇ ಆಶಿರ್ವಾದಪ್ಪ (೧೭೨೬) ಪಾಪುಸ್ವಾಮಿಗಳು
ಅದಕ್ಕೊಂದು ಅಧಿಕೃತ ಮುದ್ರೆಯೊತ್ತಿದರು.
‘ಮುಂದೆ ೧೭೩೧ರಲ್ಲಿ ಆಳಿದವರಾದ ಹನ್ನೆರಡನೇ ಶಾಂತಪ್ಪ
ಪಾಪುಸ್ವಾಮಿಗಳು ಚರ್ಚುಗಳಲ್ಲಿ ‘ಶಿಲುಬೆ ಹಾದಿ’ ಪಟಗಳನ್ನು ಅಭಿಷೇಕಿಸಲು ಅನುಮತಿ ನೀಡಿದ್ದರು’
ಎಂದು ಕಥೋಲಿಕ ವಿಶ್ವಕೋಶದಲ್ಲಿ ಪ್ರಸ್ತಾಪಿಸಲಾಗಿದೆ.
-
ಫ್ರಾನ್ಸಿಸ್.ಎಂ.ನಂದಗಾವ
No comments:
Post a Comment