ಪ್ರಾರಂಭ ಪ್ರಾರ್ಥನೆ
ನಾವು ಈಗ ಕೈಗೊಳ್ಳುತ್ತಿರುವ ಪ್ರಯಾಣ ಆಧ್ಯಾತ್ಮಿಕ ಪ್ರಯಾಣ. ಜಗತ್ತನ್ನು ಸಮಷ್ಟಿಯಾಗಿ ಗ್ರಹಿಸಲು ಕ್ರಿಸ್ತನ
ದೃಷ್ಟಿಕೋನ, ಮಾಪನ ಮತ್ತು ಮನೋಭಾವವನ್ನು ಕಲಿಸಿಕೊಡುವ ಪ್ರಯಾಣವಿದು. ಈ ಪ್ರಯಾಣದ ಕೇಂದ್ರಬಿಂದು ಕ್ರಿಸ್ತ.
ಅದರಲ್ಲೂ ಕ್ರಿಸ್ತ ಅನುಭವಿಸಿದ ಯಾತನೆ ಮತ್ತು ಶಿಲುಬೆ ಮರಣವೇ ಈ ಪ್ರಯಾಣದ ಹೆಜ್ಜೆಗಳಲ್ಲಿ ಧ್ಯಾನಿಸುವ
ಕಥಾವಸ್ತು. ಸತ್ಯದ ರೂಪಕವೇ ಆಗಿದ್ದ ಕ್ರಿಸ್ತನನ್ನು ಸಾವು ಕೂಡ ಸೋಲಿಸಲಾಗದೆ, ಕ್ರಿಸ್ತನಲ್ಲಿ ಸತ್ಯವು ಅಸತ್ಯವನ್ನು ಗೆದ್ದು ಸಂಭ್ರಮಿಸುವ
ಚಲನಚಿತ್ರವಿದು. ಈ ಪ್ರಯಾಣದ ಕೇಂದ್ರಬಿಂದು ಕ್ರಿಸ್ತನಾದರೂ,
ಕ್ರಿಸ್ತನ ಸುತ್ತ ಕಟ್ಟಿಕೊಳ್ಳುವ ಅನೇಕ ಪಾತ್ರಗಳಿವೆ. ಇವೆಲ್ಲವೂ
ಕ್ರಿಸ್ತನ ನಿಲುವುಗಳನ್ನು ಬೆಂಬಲಿಸುವ ಅಥವಾ ನಿರಾಕರಿಸುವ ಪಾತ್ರಗಳೇ. ಆದರೆ ಈ ಎಲ್ಲಾ ಪಾತ್ರಗಳೂ ಕ್ರಿಸ್ತನ ನಿಲುವುಗಳನ್ನು, ದೃಷ್ಟಿಕೋನವನ್ನು ಸ್ಪಷ್ಟ
ಪಡಿಸುವ ಸ್ಫಟಿಕಗಳೇ.
ಕಿಸ್ತನನ್ನು ದಿಟ್ಟಿಸುತ್ತಾ ಬೇರೆ ಪಾತ್ರಗಳನ್ನು
ಸಹ ಗಮನಿಸೋಣ. ಆ ಪಾತ್ರಗಳು ಸಹ ನಮ್ಮ ಒಳ್ಳೆತನ ಅಥವಾ ಕೆಟ್ಟತನಗಳನ್ನು ಬಿಂಬಿಸಬಹುದು; ಅಧಿಕಾರದ ಆಸೆಗೆ
ಸತ್ಯವನ್ನು ಕೊಲೆ ಮಾಡಿದ ಪಿಲಾತನಿರಬಹುದು, ಅವಮಾನದ ಸಂಕೇತವಾಗಿದ್ದ ಶಿಲುಬೆಯೇ ಇರಬಹುದು, ಮಗನ ಯಾತನೆಯನ್ನು
ಕಂಡು ಮಮ್ಮಲ ಮರುಗುವ ಪೂಜ್ಯ ತಾಯಿರಬಹುದು, ಸೈನಿಕರಿಗೆ ಹೆದರಿ ಕ್ರಿಸ್ತನಿಗೆ
ಸಹಾಯ ಮಾಡಿದ ಸಿರೇನ್ಯದ ಸಿಮೋನನಿರಬಹುದು, ಸೈನಿಕರ ಕ್ರೂರತನಕ್ಕೆ ಹೆದರದೆ, ಗಾಯಗೊಂಡಿದ್ದ ಕ್ರಿಸ್ತನ ಮುಖವನ್ನು ಒರೆಸುವ ವೆರೋನಿಕಳೇ ಇರಬಹುದು, ಕ್ರಿಸ್ತನಿಗಾದ ಅನ್ಯಾಯವನ್ನು ಕಂಡು
ಅಳುವ ಜೆರುಸಲೇಮಿನ ತಾಯಂದಿರಬಹುದು.
ಕೊನೆಗೆ ಕ್ರಿಸ್ತನ ಕೊಲೆಸಂಚಿನ
ರೂವಾರಿ ಕೈಪಾಸ್, ಅನ್ನಾಸ್
ಮತ್ತು ಫರಿಸಾಯರೇ ಇರಬಹುದು, ಇವರೆಲ್ಲರೂ ನಮ್ಮನ್ನು ಪ್ರತಿಬಿಂಬಿಸುವ
ಪಾತ್ರಧಾರಿಗಳೇ.
ಇನ್ನು ಕ್ರಿಸ್ತನ ಯಾತನೆಯ ಪ್ರಯಾಣದಲ್ಲಿ ಕಟ್ಟಿಕೊಳ್ಳುವ
ಘಟನೆಗಳು ಸಹ ನಮ್ಮ ಬದುಕುಗಳಲ್ಲಿ ಘಟಿಸುವ ಘಟನೆಗಳೇ. ಅಪಮಾನ, ಶಿಕ್ಷೆ, ಅನ್ಯಾಯ, ಬೀಳುವಿಕೆ, ವಿವಸ್ತ್ರಗೊಳಿಸುವುದು,
ಜಡಿಯುವುದು, ಸಾವು, ತಾಯಿಯ ಕಂಬನಿ, ಸಮಾಧಿ, ಚುಚ್ಚುಮಾತುಗಳು,
ಅಂತಃಕರಣ ಹೀಗೆ ಎಲ್ಲವೂ ನಮ್ಮ ಬದುಕ ಭಾಗವೇ.
ಹೌದು, ಈ ಎಲ್ಲಾ ಪಾತ್ರಗಳು, ಘಟನೆಗಳು ತೋರುವ ಲೋಕವಿವರಣೆಯನ್ನು
ಆಲಿಸೋಣ; ಕಿವಿಯಿಂದ ಮಾತ್ರವಲ್ಲ ಹೃದಯದಿಂದಲ್ಲೂ ಸಹ.
ಕೊನೆಗೆ ಈ ಪ್ರಯಾಣವು ನಮ್ಮ ಅರಿವನ್ನು ಜಾಗೃತಗೊಳಿಸಿ ಕ್ರಿಸ್ತನು ಗ್ರಹಿಸಿದ
ರೀತಿಯಲ್ಲಿ ಲೋಕವನ್ನು ನಮ್ಮ ಬದುಕನ್ನು ಗ್ರಹಿಸಲು ಅನುವು ಮಾಡಿ ಕೊಡಲೆಂದು ಪ್ರಾರ್ಥಿಸೋಣ. ಆಮೆನ್
1. ಸತ್ಯಕ್ಕೆ ಮರಣ ದಂಡನೆ
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ
ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ
ಲೋಕವನ್ನು ರಕ್ಷಿಸಿದ್ದೀರಿ.
ಇಲ್ಲಿಗೆ ಮನುಕುಲ ತನ್ನ ಪಾಪದ ಪರಮಾವಧಿಯನ್ನು ತಲುಪಿದೆ. ಲೋಕೋದ್ಧಾರಕೆ ನಿಂತ ಕೈಗಳು ಬಂಧಿಸಲ್ಪಟ್ಟಿವೆ.
ಕ್ರಿಸ್ತ ನಿನ್ನನ್ನು ಮರಣ ದಂಡನೆಗೆ ಗುರಿಪಡಿಸುವಲ್ಲಿ ನಮ್ಮ ಪಾಪಗಳು ಸಫಲವಾಗಿವೆ.
ಪ್ರಾರ್ಥನೆ:
ಮನವ ನೀಡು ಪ್ರಭುವೇ
ನಮ್ಮಪಾಪಗಳ ದಂಡಿಸಲು
ನಿನಗೆ ನಮ್ಮನ್ನೇ ಸಮರ್ಪಿಸಲು!
ಮನವ ನೀಡು ಪ್ರಭುವೇ
ನಮ್ಮಪಾಪಗಳ ದಂಡಿಸಲು
ನಿನಗೆ ನಮ್ಮನ್ನೇ ಸಮರ್ಪಿಸಲು!
ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ
ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ:
ಆಮೆನ್
2. ಹೊತ್ತನು ಪರಮನು ಪಾಪದ ಶಿಲುಬೆಯನು!
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ
ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ
ಲೋಕವನ್ನು ರಕ್ಷಿಸಿದ್ದೀರಿ.
ಬಳಲಿ ಬೆಂಡಾಗಿರುವ ಸರ್ವಜನರೇ ನನ್ನಬಳಿಗೆ ಬನ್ನಿರಿ, ವಿಶ್ರಾಂತಿಯನ್ನಿಯುವೆ ಎಂದ ಶಾಂತಿದಾತ
ಅವಮಾನದ ಶಿಲುಬೆ ಹೊತ್ತಿದ್ದಾನೆ. ಅರ್ಹನಲ್ಲದ ಶಿಕ್ಷೆಗೆ ಮುಗ್ಧ ಕುರಿಮರಿಯಂತೆ ತಲೆಕೊಟ್ಟು ನಿಂತಿದ್ದಾನೆ.
ಒಂದು ಕ್ಷಣ ಕಣ್ಮುಚ್ಚಿ ಧ್ಯಾನಿಸೋಣ! ಉತ್ತರ ನಮ್ಮೊಳಗೇ ಇದೆ.
ಪ್ರಾರ್ಥನೆ
ಪಾಮರ ಬಿರುದನು ಪ್ರೀತಿಯೊಳ್
ಹೊತ್ತ ಪಾವನ ಕ್ರಿಸ್ತ
ಮುನ್ನಡೆಸೆಮ್ಮ ಬದುಕ ಹಾದಿಯಲಿ
ನಿನ್ನ ಸಾಮ್ರಾಜ್ಯದತ್ತ
ಪಾಮರ ಬಿರುದನು ಪ್ರೀತಿಯೊಳ್
ಹೊತ್ತ ಪಾವನ ಕ್ರಿಸ್ತ
ಮುನ್ನಡೆಸೆಮ್ಮ ಬದುಕ ಹಾದಿಯಲಿ
ನಿನ್ನ ಸಾಮ್ರಾಜ್ಯದತ್ತ
ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ
ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ:
ಆಮೆನ್
3. ಮುಕ್ಕಡೆಯಾಗಿ ಬೀಳುತ್ತಾರೆ.
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ನಾವು ಬದುಕಲ್ಲಿ ಬಿದ್ದಿದ್ದೇವೆ. ಆದರೆ ನಮಗೆ ಮೇಲೇಳಲು ಮನಸ್ಸಿಲ್ಲ. ಕಾರಣ, ನಾವು ಪಾಪದ ಗುಂಡಿಯೊಳಗೆ
ಆರಾಮಾಗಿದ್ದೇವೆ. ಆದರೆ ಕ್ರಿಸ್ತ ನೀನು ಬಿದ್ದದ್ದು ನಿನಗೋಸ್ಕರವಲ್ಲ, ನೀ ಬಿದ್ದದ್ದು ನಮಗೋಸ್ಕರ,
ನಮ್ಮ ಪಾಪಗಳಿಗೋಸ್ಕರ. ಆದರೆ ವ್ಯತ್ಯಾಸವೊಂದೇ, ನೀನು ಎದ್ದು ಮುನ್ನಡದೆ ... ನಾವು ಇನ್ನೂ ಬಿದ್ದಿದ್ದೇವೆ.
ಪ್ರಾರ್ಥನೆ
ನಮ್ಮವನೇ ಆದ, ನಮ್ಮೊಳಗಿರುವ ಸಂಯಮ ಕ್ರಿಸ್ತ, ನೀನೊಮ್ಮೆ ಕರವ ನೀಡುವಿಯಾದರೆ ಇಗೋ ನಾ ಸಿದ್ಧನಿದ್ದೇನೆ ಮೇಲೇಳಲು.
ನಮ್ಮವನೇ ಆದ, ನಮ್ಮೊಳಗಿರುವ ಸಂಯಮ ಕ್ರಿಸ್ತ, ನೀನೊಮ್ಮೆ ಕರವ ನೀಡುವಿಯಾದರೆ ಇಗೋ ನಾ ಸಿದ್ಧನಿದ್ದೇನೆ ಮೇಲೇಳಲು.
ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ
ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ:
ಆಮೆನ್
4. ಕಂಡಳು ಮಾತೆ ಕಂದನ
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ತಾಯಿ! ತಾನು ಉಪವಾಸವಿದ್ದರೂ ತನ್ನ ಮಕ್ಕಳಿಗೆ ರಕ್ತವನ್ನೇ ಬಸಿದು ಕೊಡುವಂಥ
ಸಂಯಮಮೂರ್ತಿ. ಇಂದು ಮರಿಯ ಕ್ರಿಸ್ತನನ್ನು ಆ ವಿಷಮ ಸ್ಥಿತಿಯಲ್ಲಿ ಎದುರುಗೊಂಡಾಗ ಆ ತಾಯಿ ಎದುರಿಸಿದ
ವೇದನೆ ಹೇಗಿದ್ದಿರಬೇಕು? ಎಲ್ಲವನ್ನೂ ಸಂಯಮದಿಂದ ಎದುರಿಸಿದರು ಕ್ರಿಸ್ತ.
ಪ್ರಾರ್ಥನೆ:
ನಾವ್ನಡೆವ ಹಾದಿಯಲಿ ತಾಯಂತೆ
ಬಾರಾ
ನಮಗಿರದು ನೋವನರಿವ ಶಿಲುಬೆ
ಭಾರ !
ನಾವ್ನಡೆವ ಹಾದಿಯಲಿ ತಾಯಂತೆ
ಬಾರಾ
ನಮಗಿರದು ನೋವನರಿವ ಶಿಲುಬೆ
ಭಾರ !
ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್
5. ಬಂದನಿದೋ ಸಿಮೋನ!
ಗುನುಗುತಿರಲು ಶೋಕಗಾನ ಬಂದನಿದೋ ಸಿಮೋನ!
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ಸಿಮೋನನೆಂಬ ಯಾವನೋ ಅಪರಿಚಿತನು ಬಂದು ಕ್ರಿಸ್ತನ ಹೆಗಲಿಗೆ ಹೆಗಲಾಗುತ್ತಾನೆ.
ಸ್ವಇಚ್ಛೆಯಿಂದಲೋ ಅಥವಾ ಸೈನಿಕರ ಬಲವಂತದಿಂದಲೋ ಆತ ಕ್ರಿಸ್ತನ ಶಿಲುಬೆಯನ್ನು ತುಸುದೂರ ಹೊರುತ್ತಾನೆ.
ನಮ್ಮನ್ನೊಮ್ಮೆ ಕೇಳಿಕೊಳ್ಳೋಣ! ಅಪರಿಚಿತ ಸಿಮೋನನೇ ಕ್ರಿಸ್ತನಿಗೆ ಹೆಗಲಾಗಬೇಕಾದರೆ ಇನ್ನು ಕ್ರೈಸ್ತರಾದ
ನಾವು ಕ್ರಿಸ್ತನ ನೋವಿಗೆ ಹೇಗೆ ಸ್ಪಂದಿಸಬೇಕು! ಇದು ಆತ್ಮವಿಮರ್ಶೆಯ ಸಮಯ.
ಪ್ರಾರ್ಥನೆ:
ಮಿತ್ರರೆಂದು ಕರೆದೆ ಎಮ್ಮ ಬಾಳ ಗುರುವೇ
ಸ್ಪಂದಿಸಲೆಮ್ಮ ಮನವ ನೀಡು
ಮರೆತು ಗೊಡವೆ
ಮಿತ್ರರೆಂದು ಕರೆದೆ ಎಮ್ಮ ಬಾಳ ಗುರುವೇ
ಸ್ಪಂದಿಸಲೆಮ್ಮ ಮನವ ನೀಡು
ಮರೆತು ಗೊಡವೆ
ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್
6. ಕ್ರಿಸ್ತನ ವದನವಿದೋ ವೆರೋನಿಕಾಳ ಕರವಸ್ತ್ರದಲ್ಲಿ!
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ಹೆಂಗರುಳು ಎನ್ನುವುದು ಇದನ್ನೇ! ಕ್ರೂರ ಸಿಪಾಯಿಗಳನ್ನು ಲೆಕ್ಕಿಸದೆ ತಾಯಿ ವೆರೋನಿಕ ಬೆವರು ಮತ್ತು
ರಕ್ತಸಿಕ್ತವಾಗಿದ್ದ ಕ್ರಿಸ್ತನ ಮುಖವನ್ನು ಒರೆಸಲು ದಿಟ್ಟತನದಿಂದ ಮುಂದೆ ಬರುತ್ತಾಳೆ. ಕ್ರಿಸ್ತನ
ಮುಖ ಕರವಸ್ತರದಲ್ಲಿ ಅಚ್ಚಾಗುತ್ತದೆ. ವೆರೋನಿಕಾಳಿಂದ ಕಲಿಯಬೇಕು ಪರರ ಕಣ್ಣೀರನ್ನು ಒರೆಸುವುದನ್ನು.
ಪ್ರಾರ್ಥನೆ:
ಬದುಕ ನಶ್ವರ ಓಟದಲಿ
ಮಿಡಿತ ಕಲಿಸು;
ಅನ್ಯ ಕಷ್ಟಕೆ ಹೃದಯ ಮಿಡಿಯುವ
ಕೃಪೆಯ ಸುರಿಸು!
ಬದುಕ ನಶ್ವರ ಓಟದಲಿ
ಮಿಡಿತ ಕಲಿಸು;
ಅನ್ಯ ಕಷ್ಟಕೆ ಹೃದಯ ಮಿಡಿಯುವ
ಕೃಪೆಯ ಸುರಿಸು!
ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್
7. ಎರಡನೇ ಬಾರಿ ಬೀಳುತ್ತಾರೆ ಕ್ರಿಸ್ತ!
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ಇಲ್ಲ... ನಮ್ಮ ಪಾಪಗಳಿಗೆ ಇನ್ನೂ ತೃಪ್ತಿಯಾಗಿಲ್ಲ. ಎರಡನೇ ಬಾರಿಗೆ ಭಾರವಾದ ಶಿಲುಬೆಯ ಕೆಳಗೆ
ಜರ್ಜರಿತರಾಗಿ ಬೀಳುತ್ತಾರೆ ಕ್ರಿಸ್ತ. ಏದುಸಿರ ಆ ಸುಪ್ತ ಕಂಪನದಲ್ಲಿ ಮಾರ್ದನಿಸುತ್ತಿದೆ ಆತನಿಗೆ
ನಿನ್ನ ಮೇಲಿರುವ ಪ್ರೀತಿ. ಈ ಪ್ರೀತಿಗೆ ಪ್ರತಿಫಲವಾಗಿ ನೀನೇನ ನೀಡಬಲ್ಲೆ?
ಪ್ರಾರ್ಥನೆ
ಶಿಲುಬೆಯಡಿಯಲೆಮ್ಮ ಪಾಪಗಳು
ನಿನ್ನ ಜರೆದಾಗ ಹೇಗಿದ್ದೆಯೋ ಕ್ರಿಸ್ತ?
ಸಾಕಿನ್ನು ನೋವು, ನನಗಿರಲಿ ಹಸಿವು
ಮೇಲೆತ್ತ ಬಂದಿರುವೆ ನೀ, ನೀಡು ಹಸ್ತ!
ಶಿಲುಬೆಯಡಿಯಲೆಮ್ಮ ಪಾಪಗಳು
ನಿನ್ನ ಜರೆದಾಗ ಹೇಗಿದ್ದೆಯೋ ಕ್ರಿಸ್ತ?
ಸಾಕಿನ್ನು ನೋವು, ನನಗಿರಲಿ ಹಸಿವು
ಮೇಲೆತ್ತ ಬಂದಿರುವೆ ನೀ, ನೀಡು ಹಸ್ತ!
ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್
8. ಅವ್ವಂದಿರ ಮಮತೆಯ ತೊಟ್ಟಿಲಲ್ಲಿ ಕ್ರಿಸ್ತ!
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ಜೆರುಸಲೇಮಿನ ಸ್ತ್ರೀಯರು ಯೇಸುವನ್ನು ಕಂಡು ರೋದಿಸುತ್ತಿದ್ದಾರೆ. ಅವರು ಕ್ರಿಸ್ತನಲ್ಲಿ ಗುರುವನ್ನು
ಕಂಡಿರಬಹುದು, ಸಹೋದರನ ಕಂಡಿರಬಹುದು, ಮಿಗಿಲಾಗಿ ತಂದೆಯನ್ನೇ ಕಂಡಿರಬಹುದು! ಇಂದು ನನಗಾಗಿ ಶಿಲುಬೆ
ಹೊತ್ತಿರುವ ಕ್ರಿಸ್ತನಿಗೆ ನಾನ್ಯಾರಾಗಿದ್ದೇನೆ?
ಪ್ರಾರ್ಥನೆ
ಮಾನವತೆಯ ದಿವ್ಯಶಿಲ್ಪಿ ಯೆಹೂದ್ಯ ಬಡಗಿಯೇ;
ಕಲಿಸು ನೀತಿ, ಹರಿಸ ಪ್ರೀತಿ ನಿತ್ಯ
ನಿನ್ನ ರೀತಿಯೇ!
ಮಾನವತೆಯ ದಿವ್ಯಶಿಲ್ಪಿ ಯೆಹೂದ್ಯ ಬಡಗಿಯೇ;
ಕಲಿಸು ನೀತಿ, ಹರಿಸ ಪ್ರೀತಿ ನಿತ್ಯ
ನಿನ್ನ ರೀತಿಯೇ!
ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್
9. ಮಗದೊಮ್ಮೆ ಬಿದ್ದರು
ದೇವಕುವರ!
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ಕ್ರಿಸ್ತ ಬೀಳುತ್ತಿರುವುದು ಮೂರನೇ ಬಾರಿ! ಆತ ಬಯಸುವುದಾದರೂ ಏನು? ಆತ ಬಯಸುವುದು ಶುದ್ಧ ಹೃದಯವೊಂದೇ.
ಕ್ರಿಸ್ತನಿಗೆ ಈ ಕಾಣಿಕೆ ನೀಡಲು ಸಿದ್ಧರಿದ್ದೇವೆಯೇ?
ಪ್ರಾರ್ಥನೆ
ನನ್ನದೊಂದೇ ಪ್ರಾರ್ಥನೆ ಪ್ರಭುವೇ
ಬೇರೇನೂ ಬೇಕಿಲ್ಲ, ಬಾ ರಕ್ಷಿಸು
ಶುದ್ಧ ಮನಸ್ಸ ರೂಪಿಸು!
ಎಲ್ಲರೂ: ಆಮೆನ್
ನನ್ನದೊಂದೇ ಪ್ರಾರ್ಥನೆ ಪ್ರಭುವೇ
ಬೇರೇನೂ ಬೇಕಿಲ್ಲ, ಬಾ ರಕ್ಷಿಸು
ಶುದ್ಧ ಮನಸ್ಸ ರೂಪಿಸು!
ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್
10. ಕ್ರಿಸ್ತನನ್ನು ವಿವಸ್ತ್ರಗೊಳಿಸುತ್ತಾರೆ!
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ನಮ್ಮ ಅಹಂಕಾರದ ಬಣ್ಣದ ಬದುಕಿನ ಮುಖವಾಡವನ್ನು ಕಳಚಿಡಬೇಕಾದ ನಾವು, ಪರಮೋನ್ನತ ಕ್ರಿಸ್ತನ ವಸ್ತ್ರಗಳನ್ನು
ಕಳಚುತ್ತಿದ್ದೇವೆ. ಒಮ್ಮೆ ಅವಲೋಕಿಸಿ ನೋಡೋಣ ಆ ಯಾತನೆಯ ತೀವ್ರತೆ! ಕಲಿಯೋಣ ಬದುಕ ಪಾಠ.
ಪ್ರಾರ್ಥನೆ
ಕಲಿಸು ಹೇ ಪ್ರಭು ಕಳಚಲು
ನಮ್ಮೆಲ್ಲ ಪಾಪದ ವಸ್ತ್ರಗಳ..
ಧೈರ್ಯ ನೀಡು ಬದುಕಲು
ಬಿಟ್ಟು ನಮ್ಮೆಲ್ಲ ಪಾಪಗಳ!
ಕಲಿಸು ಹೇ ಪ್ರಭು ಕಳಚಲು
ನಮ್ಮೆಲ್ಲ ಪಾಪದ ವಸ್ತ್ರಗಳ..
ಧೈರ್ಯ ನೀಡು ಬದುಕಲು
ಬಿಟ್ಟು ನಮ್ಮೆಲ್ಲ ಪಾಪಗಳ!
ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್
11.
ಹೊಕ್ಕವು ಕ್ರೂರ ಮೊಳೆಗಳು, ಸೀಳಿತು ಕ್ರಿಸ್ತನ ಕರಗಳ!
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ನಮ್ಮ ಅಸಂಖ್ಯಾತ ತಪ್ಪುಗಳಿಗೆ ಆತ ಬೆಲೆ ತೆರಬೇಕಾಯಿತು. ಆ ಒಂದೊಂದು ಮೊಳೆಯೂ ಕ್ರಿಸ್ತನ ಕರಗಳೊಳಗೆ
ನುಗ್ಗಿ ಹೋಗಬೇಕಾದರೆ ಆತ ಅದೆಷ್ಟು ಪರಿತಪಿಸಿರಬಹುದು? ಆದರೂ ನಮ್ಮೊಳಗೆ ಪಾಪಪ್ರಜ್ಞೆ ಮೂಡುತ್ತಿಲ್ಲವೇಕೆ?
ಪ್ರಾರ್ಥನೆ
ತಮ್ಮ ನುಡಿಗಳಿಂದ ನೋಯಿಸಿದವರ
ಕ್ಷಮಿಸಲು ಅರ್ಹರಾಗಿಸು
ನಮ್ಮ ತಪ್ಪುಗಳನ್ನೂ ಮನ್ನಿಸು!
ತಮ್ಮ ನುಡಿಗಳಿಂದ ನೋಯಿಸಿದವರ
ಕ್ಷಮಿಸಲು ಅರ್ಹರಾಗಿಸು
ನಮ್ಮ ತಪ್ಪುಗಳನ್ನೂ ಮನ್ನಿಸು!
ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್
12. ಪಾವನ ಕ್ರಿಸ್ತರೆ ವಂದಿಸುವೆ ಘಾಸಿತ ಚರಣವ ಚುಂಬಿಸುವೆ
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ಈ ಹೊತ್ತಿಗೆ ಆತ ಭುವಿಗೆ ಬಂದ ಪರಮೋದ್ದೇಶ ನೆರವೇರಿತು. ನಮಗಾಗಿ ಪ್ರಾಣತ್ಯಾಗ ಮಾಡಿದ ಆತನ ದೇಹದಿಂದ
ರಕ್ತದ ಕೊನೆಯ ಹನಿ ತೊಟ್ಟಿಕ್ಕಿತು. ನಮಗೆಲ್ಲರಿಗೂ ಸ್ವರ್ಗದ ಹಾದಿ ತೆರೆಯಿತು.
ಪ್ರಾರ್ಥನೆ
ಮಾಡು ಎನ್ನ ಪ್ರಭುವೇ ಶಾಂತಿಯ
ಚಿಲುಮೆ; ಮುದುಡಿದ ಮನಗಳಲ್ಲಿ
ಅರಳಿಸಲು ನಿನ್ನೊಲುಮೆ!
ಮಾಡು ಎನ್ನ ಪ್ರಭುವೇ ಶಾಂತಿಯ
ಚಿಲುಮೆ; ಮುದುಡಿದ ಮನಗಳಲ್ಲಿ
ಅರಳಿಸಲು ನಿನ್ನೊಲುಮೆ!
ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್
13. ತಾಯಿಯ ಮಡಿಲಲ್ಲಿ!
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ಸತ್ತವರನ್ನು ಜೀವಕ್ಕೆ ಮರಳಿ ತಂದ ಕ್ರಿಸ್ತ ಇಂದು ಅಮ್ಮನ ಮಡಿಲಲ್ಲಿ ಮಾಂಸದ ಮುದ್ದೆಯಾಗಿ ಬಿದ್ದಿದ್ದಾನೆ.
ನಿಶ್ಚಲವಾದ ದೇಹ ತಾಯಿಯ ಮಡಿಲಲ್ಲಿ ಕೊನೆಯ ಕ್ಷಣಗಳನ್ನು ಕಳೆಯುತ್ತಿದೆ. ಇದೆಲ್ಲಾ ಯಾರಿಗಾಗಿ ಆತ ಮಾಡಿದ್ದು?
ಧ್ಯಾನಿಸೋಣ!
ಪ್ರಾರ್ಥನೆ
ಸಾವಿರಾರು ಜೀವಂತ ಶವಗಳು ನಮ್ಮೊಡನಿವೆ ಕ್ರಿಸ್ತ; ಅಭ್ಯಂಗಿಸು..
ಉಸಿರೂದಿ ಜೀವಕ್ಕೆಬ್ಬಿಸು!
ಸಾವಿರಾರು ಜೀವಂತ ಶವಗಳು ನಮ್ಮೊಡನಿವೆ ಕ್ರಿಸ್ತ; ಅಭ್ಯಂಗಿಸು..
ಉಸಿರೂದಿ ಜೀವಕ್ಕೆಬ್ಬಿಸು!
ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್
14. ಇಲ್ಲಿ ಸತ್ಯವು ಮಲಗಿದೆ; ಎಬ್ಬಿಸುವವರು ಯಾರು?
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ಇಲ್ಲಿ ಸತ್ಯವು ಮಲಗಿದೆ ಎಬ್ಬಿಸುವವರು ಯಾರು?
ಇಲ್ಲಿ ನ್ಯಾಯವು ನಲುಗಿದೆ ಸಂತೈಸುವವರಾರು?
ಇಲ್ಲಿ ನ್ಯಾಯವು ನಲುಗಿದೆ ಸಂತೈಸುವವರಾರು?
ಪ್ರಾರ್ಥನೆ
ನಿತ್ಯಜೀವ ಕ್ರಿಸ್ತ ನಿಮ್ಮಲ್ಲಿಹುದು
ದುರ್ಬಲರು ನಾವು ಪಾಮರರು
ನಿಮ್ಮಲ್ಲಿಯೇ ಮೋಕ್ಷ ಕಾಣುವೆವು!
ನಿತ್ಯಜೀವ ಕ್ರಿಸ್ತ ನಿಮ್ಮಲ್ಲಿಹುದು
ದುರ್ಬಲರು ನಾವು ಪಾಮರರು
ನಿಮ್ಮಲ್ಲಿಯೇ ಮೋಕ್ಷ ಕಾಣುವೆವು!
ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್
ಅಂತಿಮ ಪ್ರಾರ್ಥನೆ
ಕ್ರಿಸ್ತನ ಸಮಷ್ಟಿ ದೃಷ್ಟಿಯನ್ನು ಅನಾವರಣ ಮಾಡಿದ ಈ ಆಧ್ಯಾತ್ಮಿಕ ಪ್ರಾರ್ಥನೆ / ಪ್ರಯಾಣ ಇಲ್ಲಿಗೆ ಕೊನೆಕೊಳ್ಳುವುದಿಲ್ಲ. ಇಲ್ಲಿ ನಡೆದುದ್ದು ಪ್ರಯಾಣದ ವೇಳೆ ಕ್ರಿಸ್ತನಲ್ಲಿದ್ದ ಆತ್ಮದೃಷ್ಟಿಯ ಸಾಕ್ಷಾತ್ಕಾರ ಮಾತ್ರ. ಕ್ರಿಸ್ತನ
ಮನೋದೃಷ್ಟಿಯನ್ನು ನಾವು ನಮ್ಮ ಬದುಕಿನಲ್ಲಿ ರೂಢಿಸಿಕೊಳ್ಳಬೇಕು. ಬದುಕಿನ ಪ್ರತಿಯೊಂದು ನೀರ್ಣಾಯಕ
ಹಾಗೂ ಇಕ್ಕಟ್ಟುಗಳ
ಸಂದರ್ಭದಲ್ಲಿ ಕ್ರಿಸ್ತ ತೋರಿದ ಪ್ರತಿಕ್ರಿಯೆಗಳನ್ನು ನಮ್ಮದಾಗಿಸಿಕೊಳ್ಳುತ್ತಾ ಮತ್ತೊಬ್ಬ ಕ್ರಿಸ್ತನಂತೆ ಈ ಜಗತ್ತಿನಲ್ಲಿ ಬಾಳಬೇಕು.
ಹೌದು, ಇದು ಹೇಳಿದಷ್ಟು ಸುಲಭವಲ್ಲ. ಈ ಒಂದು ಕಾರ್ಯಸಾಧನೆಗೆ ಅಚಲ ವಿಶ್ವಾಸಬೇಕು, ದೇವರ ಕೃಪೆ ಬೇಕು.
ಆದ್ದರಿಂದ ದೇವರ ಕೃಪೆಗಳಿಗಾಗಿ ಪ್ರಾರ್ಥಿಸೋಣ. ಆಮೆನ್.

No comments:
Post a Comment