Sunday, 10 February 2019

ಶಿಲುಬೆ ಹಾದಿ-3(ದಿನನಿತ್ಯದ ಹಾದಿ)


ಮೊದಲನೆಯ ಸ್ಥಳ .. ಇಗೋ ನಿಮ್ಮ ಅರಸ
ಬಹಳ ದಿನಗಳ ನಂತರ ನನ್ನ ನೆನಪು ನಿಮ್ಮ ಸ್ಮೃತಿಪಟಲದ ಮೇಲೆ ಮೂಡುತ್ತಿದೆ. ನಾನು ಪಿಲಾತ. ಗುರುತು ಸಿಗಲಿಲ್ಲವೇ? ಅದೇ.. ಕ್ರಿಸ್ತಯೇಸುವನ್ನು ಶಿಲುಬೆಗೇರಿಸಲು ಅನುಮತಿ ಕೊಟ್ಟ ಪೋಂತ್ಸಿಯಸ್ ಪಿಲಾತ ನಾನೇ. ನಾನು ಆ ಕಾಲದ ಇತರ ರಾಜ್ಯಪಾಲರಂತೆ ಮಡದಿ ಮಕ್ಕಳ ಜೊತೆ ಹಾಯಾಗಿ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿದ್ದೆ. ತಿಂದದ್ದನ್ನು ಅರಗಿಸಿಕೊಳ್ಳವುದಕ್ಕೆ ಜನಗಳ ಮೇಲೆ ಅಧಿಕಾರ ಚಲಾಯಿಸುವುದು, ನ್ಯಾಯ ವಿಚಾರಣೆಗಳಲ್ಲಿ ತೀರ್ಪು ಕೊಡುವುದು, ಸುಂಕದವರು ಸಂಗ್ರಹಿಸಿದ ಸುಂಕವನ್ನು ರೋಮ್ ಚಕ್ರವರ್ತಿಗೆ ಕಳುಹಿಸುವುದಷ್ಟೆ ನನ್ನ ದೈನಂದಿನ ಕಾಯಕವಾಗಿತ್ತು. ನಾನೂ ಸಹ ಹೀಗೇ ಜೀವನ ಸಾಗಿಸಿಬಿಟ್ಟಿದ್ದರೆ ಬಹುಶಃ ನಾನು ಇಂದು ನಿಮ್ಮೊಡನೆ ಮಾತಾನಾಡುತ್ತಿರಲಿಲ್ಲ. ಮಾತಾನಾಡುವುದು ಬಿಡಿ, ಇತಿಹಾಸದಲ್ಲಿ ನನ್ನ ಅಸ್ತಿತ್ವವೇ ಇರುತ್ತಿರಲಿಲ್ಲ. ಆದರೆ ದೇವರಿಚ್ಛೆಯೇ ಬೇರೆ ಇತ್ತು. ಆ ಒಂದು ದಿನ, ಕರಾಳ ದಿನ, ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿಬಿಟ್ಟಿತ್ತು. ನನ್ನ ಜೀವನವನ್ನು ಬದಲಾಯಿಸಿದ ಆ ದಿನದ ಬಗ್ಗೆ ಶತಮಾನಗಳಿಂದ ನನ್ನೊಳಗೆ ಹುದುಗಿದ್ದ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದೇನೆ .
ಅದು ನಾನು ಜುದೇಯ ಪ್ರಾಂತ್ಯದ ರಾಜ್ಯಪಾಲನಾಗಿದ್ದ ಕಾಲ. ಇತರ ರಾಜ್ಯಪಾಲರುಗಳಿಗೆ ಹೋಲಿಸಿದರೆ, ನಾನು ರೋಮ್ ಚಕ್ರವರ್ತಿಗೆ ಕೊಂಚ ಸಮೀಪವರ್ತಿ. ಆದ್ದರಿಂದಲೋ ಏನೋ ನಾನು ಇತರ ರಾಜ್ಯಪಾಲರಿಗಿಂತ ಹೆಚ್ಚು ಸಿರಿವಂತನೂ ಘನವೆತ್ತನೂ ಆಗಿದ್ದೆ.
ಹೀಗೆ, ದಿನಗಳು ಉರುಳುವಾಗ, ಅದೊಂದು ವರ್ಷ, ನನಗೆ ಇನ್ನೂ ನೆನಪಿದೆ, ಯೆಹೂದ್ಯರ ಪಾಸ್ಖ ಹಬ್ಬ ಸಮೀಪಿಸುತ್ತಿತ್ತು. ಆದರೆ ಈ ಹಬ್ಬದ ತಯಾರಿಯ ಕೊನೆಯ ದಿನಗಳಲ್ಲಿ ರಾಜ್ಯದಲ್ಲಿ ಏನೋ ವಿಚಿತ್ರ ಕೋಲಾಹಲವಾದಂತೆ ಕಾಣುತ್ತಿತ್ತು. ಇದು ಯಾವುದೋ ಯೆಹೂದ್ಯರಿಗೆ ಸಂಬಂಧಪಟ್ಟ ವಿಚಾರವೆಂದು ಅದರ ಬಗ್ಗೆ ನಾನು ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ಏಕೆಂದರೆ ನಾನು ಯೆಹೂದ್ಯನಲ್ಲವಲ್ಲ. ಇಲ್ಲದ ಉಸಾಬರಿ ನನಗೇಕೆ?
ಆ ದಿನ ಯೆಹೂದ್ಯರ ಗುಂಪೊಂದು ಯಾರನ್ನೋ ಬಂಧಿಸಿ ಗದ್ದಲ ಕಿರುಚಾಟಗಳಿಂದ ರಾಜಭವನದೊಳಗೆ ಪ್ರವೇಶಿಸಿತು. ದಿಗ್ಭ್ರಮೆಗೊಂಡ ನಾನು ನನ್ನ ಅಂಗರಕ್ಷಕನನ್ನು ಕೇಳಿದಾಗ "ಯೆಹೂದ್ಯರು ನಜರೇತಿನ ಯೇಸುವನ್ನು ಬಂಧಿಸಿ, ನ್ಯಾಯತೀರ್ಪಿಗೆ ಕರೆತರುತ್ತಿದ್ದಾರೆ" ಎಂದು ಉತ್ತರವಿತ್ತ. "ನಜರೇತಿನ ಯೇಸು!!!" ಹೌದು, ಈ ತ ಅದೇನೋ ಪವಾಡಗಳನ್ನು ಮಾಡುತ್ತಾನೆಂದು ಈ ಹಿಂದೆ ಕೇಳಿದ್ದೆ. ಆತನನ್ನೇ ಇವರು ಬಂಧಿಸಿರುವುದು ಪರಮಾಶ್ಚರ್ಯ.
ಎಂದಿನಂತೆ ನ್ಯಾಯತೀರ್ಪಿಗೆ ಸಿದ್ಧನಾದೆ. ಯೇಸುವನ್ನು ಕರೆತಂದರು. ಜನರೆಲ್ಲರೂ ಹೊರಗಿದ್ದಾಗ , ಕೋಣೆಯೊಳಗಿದ್ದದ್ದು ಯೇಸು, ನಾನು ಮತ್ತು ನನ್ನಿಬ್ಬರು ಅಂಗರಕ್ಷಕರು. ಸಾವಿರಾರು ಅಪರಾಧಿಗಳನ್ನು ನೋಡಿದ್ದೇನೆ. ಅವರ ಘನಘೋರ ಕೃತ್ಯಗಳ ಬಗ್ಗೆ ಕೇಳಿದ್ದೇನೆ . ಎಷ್ಟೋ ಜನರಿಗೆ ಮರಣದಂಡನೆ ವಿಧಿಸಿದ್ದೇನೆ. ಆದರೆ ಯಾರ ಬಗ್ಗೆಯೂ ಕರುಣೆ, ಅನುಕಂಪ, ಕೊನೆಗೆ ಪಾಪಪ್ರಜ್ಞೆಯೂ ಇರಲಿಲ್ಲ. ಆದರೆ ಯೇಸುವನ್ನು ನೋಡಿದ್ದು ಅದೇ ಮೊದಲು. ಆತನ ಆಳವಾದ ಕಂಗಳು, ತೇಜಸ್ಸು ತುಂಬಿದ ಮುಖಚರ್ಯೆ, ಕಲ್ಲನ್ನೂ ಕರಗಿಸಬಹುದಾದಂತ ನೋಟ, ಮರಣದಂಡನೆಗೆ ಒಳಗಾಗುತ್ತೇನೆ ಎಂಬ ಯಾವ ದುಃಖ ದುಗುಡಗಳಿಲ್ಲದ ಆತ ಸಾಕ್ಷಾತ್ ಸಂಯಮಮೂರ್ತಿ.
"ನೀನು ಯೆಹೊದ್ಯರ ಅರಸನೋ?" ಎಂದು ಕೇಳಿದೆ. ಯೇಸುವಿನ ಉತ್ತರದಿಂದ ನನಗೆ ಮಾತೇ ಹೊರಡಲಿಲ್ಲ. ಆಗಲೇ ನಿರ್ಧರಿಸಿಬಿಟ್ಟೆ. "ಯೇಸು ಅಪರಾಧಿಯಲ್ಲ. ಯೇಸುವನ್ನು ಬಿಡುಗಡೆ ಮಾಡುತ್ತೇನೆ" ಎಂದು. ಆದರೆ ಅಂತರಾಳದಲ್ಲಿ ಯಾರೋ ನುಡಿದಂತೆ "ಪಿಲಾತ, ನೀನು ಯೇಸುವನ್ನು ಬಿಡುಗಡೆ ಮಾಡುತ್ತೀಯೋ? ಮೊದಲು ನೀನು, ನಿನ್ನನ್ನು ಬಿಡುಗಡೆ ಮಾಡಿಕೊ!" ಎಂದು ಯಾರೋ ಈ ಟಿಯಿಂದ ತಿವಿದ ಅನುಭವ. ಎದ್ದು ಮಹಡಿಯ ಮುಂಭಾಗಕ್ಕೆ ಹೋದೆ. ಜನರನ್ನುದ್ದೇಶಿಸಿ ಯೇಸುವನ್ನು ಬಿಡುಗಡೆ ಮಾಡುತ್ತೇನೆಂದಾಗ ಅವರು "ಆತನನ್ನು ಶಿಲುಬೆಗೇರಿಸಿ" ಎಂದು ಬೊಬ್ಬೆಯಿಟ್ಟರು.
ಈ ಗೇನು ಮಾಡಲಿ? ನಿರಪರಾಧಿ ಕ್ರಿಸ್ತನನ್ನು ಶಿಲುಬೆಗೇರಿಸಲೊ? ಅಥವಾ ಜನರ ಇಚ್ಛೆಗೆ ವಿರುದ್ಧವಾಗಿ ಬಿಡುಗಡೆ ಮಾಡಲೊ? ನನ್ನ ಜೀವನದ ಮಹಾಗೊಂದಲಕ್ಕೆ ಸಿಲುಕಿದ್ದೇನೆ . ಈ ಗೊಂದಲದಲ್ಲಿ ಗೆದ್ದಿದ್ದು ನನ್ನ ಅಧಿಕಾರದಾಹ. ಎಲ್ಲಿ ನನ್ನನ್ನು ರಾಜ್ಯಪಾಲನ ಹುದ್ದೆಯಿಂದ ತೆಗೆಯುತ್ತಾರೊ ಎಂಬ ಭಯದಲ್ಲಿ ಸತ್ಯಕ್ಕೆ ದ್ರೋಹ ಎಸಗಿದೆ. ನಿರಪರಾಧಿಯನ್ನು ದುರ್ಜನರ ಕೈಗೊಪ್ಪಿಸಿದೆ. ಲೋಕಾಭಿಲಾಷೆಗಳಿಗೆ ದಾಸನಾದೆ. ನೀವು ನನ್ನಂತಾಗದಿರಿ. ಕ್ರಿಸ್ತನ ನೈಜ ಶಿಷ್ಯರಾಗಿ.
ಪ್ರಾರ್ಥನೆ
ಪ್ರಭುವೇ ಸದಾ ನನ್ನ ಪಾಪಗಳಿಂದ ನಿಮ್ಮನ್ನು ನೋಯಿಸುತ್ತಿದ್ದೇನೆ . ಪದೇ ಪದೇ ನಿಮ್ಮನ್ನು ದಂಡನೆಗೆ ಗುರಿಮಾಡಿದ್ದೇನೆ. ಕ್ಷಮಿಸು ಕ್ರಿಸ್ತ. ನನ್ನ ನಾ ಅರಿತುಕೊಂಡು ಬಾಳಲು ಕೃಪೆ ನೀಡು. ಆಮೆನ್

ಎರಡನೇ ಸ್ಥಳ.. ನಾ ಶಿಲುಬೆ ಹೊತ್ತಾಗ....
ಅಂದು ಯೇಸು ಶಿಲುಬೆ ಹೊತ್ತುಕೊಂಡಾಗ ನಾಡಿನಲ್ಲೆಲ್ಲಾ ಸ್ಮಶಾನಮೌನ. ಯೇಸುವನ್ನು ಶಿಲುಬೆಗೇರಿಸುತ್ತಾರೆಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಅದಾಗಲೇ ಜನ ಯೇಸುವಿನ ಸುತ್ತ ನೆರೆಯಲಾರಂಭಿಸಿದರು. ಆ ಸಮಯದಲ್ಲಿ ನಾನು ಸುಂಕ ವಸೂಲಿ ಮಾಡುತ್ತಿದ್ದೆ. ಅದಾಗಲೇ ಜನ ಗೊಂದಲದಲ್ಲಿರುವಂತೆ ಮಾತಾಡಿಕೊಳ್ಳುತ್ತಾ ರಾಜಭವನದ ಕಡೆಗೆ ಓಡುತ್ತಿದ್ದರು. ನನಗೋ ಏನೂ ಅರ್ಥವಾಗಲಿಲ್ಲ. ಅದೇ ಸಮಯದಲ್ಲಿ ನನ್ನ ಜೊತೆಗಾರ ಸುಂಕವಸೂಲಿಯವ ಬಂದು"ಜಕ್ಕಾಯ...ನೀನು ರಾಜಭವನಕ್ಕೆ ಬರುವುದಿಲ್ಲವೇ"ಎಂದು ಕೇಳಿದಾಗ ನಾನು ‘ಏಕೆ?’ ಎಂದು ಮರುಪ್ರಶ್ನೆ ಹಾಕಿದೆ. ಆಗ ಅವನು ಕೊಟ್ಟ ಉತ್ತರ ನನಗೆ ದಿಗ್ಭ್ರಮೆಯುಂಟುಮಾಡಿತ್ತು. ಅವನು ಯೇಸುವನ್ನು ಶಿಲುಬೆಗೇರಿಸುತ್ತಾರೆ ಎಂದಾಗ ನನ್ನ ಶರೀರ ಕ್ಷಣಕಾಲ ನಿಶ್ಚಲವಾಗಿ ಬಿಟ್ಟಿತು. ಅವನ ಮಾತನ್ನು ನಂಬಲಾರದೆ ಚೇತರಿಸಿಕೊಂಡು ರಾಜಭವನದತ್ತ ದೌಡಾಯಿಸಿದೆ. ನಾನಲ್ಲಿಗೆ ಹೋದಾಗ ಕಂಡ ಆ ದೃಶ್ಯ ನನ್ನ ಮನಸ್ಸನ್ನು ಮಂಕುಗೊಳಿಸಿತ್ತು. ನನ್ನ ಕಣ್ಣುಗಳನ್ನು ನಾನೇ ನಂಬಲಾಗಲಿಲ್ಲ. "ಅಯ್ಯೋ ದೇವರೇ...ಇದೆಂಥಹ ಅನ್ಯಾಯ? ದೇವಪುತ್ರನನ್ನೇ ಈ ಮತಿಹೀನ ಜನ ಶಿಲುಬೆ ಹೊರುವಂತೆ ಮಾಡಿದ್ದಾರಲ್ಲ...?" ಆ ಜನಜಂಗುಳಿಯಲ್ಲಿ ಕ್ರಿಸ್ತನನ್ನು ಮಾತಾಡಿಸಬೇಕೆಂದು ಹೊರಟೆ ಆದರೆ ಆ ಕ್ರೂರ ಸಿಪಾಯಿಗಳು ನನ್ನನ್ನು ಪಕ್ಕಕ್ಕೆ ದೂಡಿಬಿಟ್ಟರು. ಕೆಳಗೆಬಿದ್ದೆ. ಆಗ ನೆನಪಾದದ್ದು ಅಂದು ಆಲದಮರದ ಮೇಲೆ ಹತ್ತಿ ಕ್ರಿಸ್ತನನ್ನು ಕಾಣಲು ಕಾತುರನಾಗಿದ್ದ ನನ್ನನ್ನು ಆತನೇ ಬಂದು ಕರೆದಿದ್ದು. ಅಂದು ನನ್ನ ಮನೆಗೆ ಬಂದು ಅಲ್ಲೇ ತಂಗಿದ್ದು. ಬಹು ಕಾಲದ ನನ್ನ ಮನದ ಯಾತನೆಗಳನ್ನು ದೂರ ಮಾಡಿ ನನ್ನ ಪಾಪಗಳನ್ನೆಲ್ಲಾ ಕ್ಷಮಿಸಿದ್ದು. ಆದರೆ ಈಗ ಆ ಲೋಕೋದ್ಧಾರಕ ಶಿಲುಬೆ ಹೊತ್ತಿದ್ದಾರೆ. ಅವರು ಮುಂದೆ ನಡೆದಂತೆ ಅವರ ಹಿಂದೆ ಕ್ರೂರ ಸಿಪಾಯಿಗಳು ಚಾಟಿಗಳಿಂದ ಹೊಡೆಯುತ್ತಿದ್ದಾರೆ. ಆ ರಕ್ಕಸ ಚಾಟಿಗಳೋ ಕ್ರಿಸ್ತನ ಕೋಮಲ ದೇಹದ ಮಾಂಸವನ್ನು ಕಿತ್ತು ತೆಗೆಯುತ್ತಿವೆ. ನೋಡುಗರಿಗೇ ಆ ದೃಶ್ಯ ಭಯಾನಕವಾಗಿ ತೋರಬೇಕಾದರೆ ಇನ್ನು ಕ್ರಿಸ್ತ ಅದನ್ನು ಹೇಗೆ ಸಹಿಸಿಕೊಳ್ಳುತ್ತಿದ್ದಾರೆ? ಅವರ ಅಮೂಲ್ಯ ರಕ್ತ ಎಲ್ಲೆ ಇಲ್ಲದ ನದಿಯಂತೆ ಧಾರಾಕಾರವಾಗಿ ಹರಿಯುತ್ತಿದೆ. ಇದರ ಜೊತೆಗೆ ಆತನ ವಿರುದ್ಧವಾಗಿದ್ದ ಯೆಹೂದ್ಯರು, ಪ್ರಧಾನ ಯಾಜಕರ ಹಿಂಬಾಲಕರು ಯೇಸುವಿನ ಯಾತನೆಯನ್ನು ನೋಡಿ ಕೇಕೆ ಹಾಕುತ್ತಿದ್ದಾರೆ. ಆದರೂ ದೇವಪುತ್ರ ಮರುಮಾತನಾಡುತ್ತಿಲ್ಲ. ಯಮಭಾರದ ಶಿಲುಬೆ ಹೊತ್ತು ಮುಂದೆ ನಡೆಯುತ್ತಾರೆ. ಆ ನೋವಲ್ಲೂ ಅವರು ಯಾರನ್ನೂ ಶಪಿಸಲಿಲ್ಲ, ದೂರಲಿಲ್ಲ. ಸಂಯಮಮೂರ್ತಿ ಹಿಂದೆ ನೋಡದೆ ಮುಂದೆ ನಡೆಯುತ್ತಾರೆ. ಕರುಣಾಜನಕ ದೃಶ್ಯ ನನ್ನನ್ನು ಮೂಕನನ್ನಾಗಿಸಿತ್ತು. ನನಗೆ ಅರಿವಿಲ್ಲದೆಯೇ ನನ್ನನ್ನು ಕುಗ್ಗಿಸಿತ್ತು. ಕಾಣದ ಒಂದು ಅತೀತ ಶಕ್ತಿ ನನ್ನೊಳಗೆ ಸಂಚರಿಸಿ ಕಣ್ಣೀರಧಾರೆ ಹರಿಸಿ, ನನ್ನ ಶಿಲುಬೆಯನ್ನು ಹಿಂಬಾಲಿಸುವಂತೆ ಮಾಡಿತ್ತು.
ಪ್ರಾರ್ಥನೆ
ಕರುಣೆಯ ಕ್ರಿಸ್ತ... ನನಗಾಗಿ ಶಿಲುಬೆ ಹೊತ್ತ ನಿನಗೆ, ನಾ ಮಾಡಿದ್ದಾದರೂ ಏನು? ಪಾಪ ಕೂಪದಿ ಮುಳುಗಿದ್ದ ನನ್ನ ಕೈ ಹಿಡಿದು ಮೇಲೆತ್ತಿ ಋಣಿಯಾಗಿಸಿದ ನಿನಗೆ ನಾ ಕೊಟ್ಟ ಪ್ರತಿಫಲ ಕ್ರೂರಶಿಲುಬೆ. ಪ್ರಭುವೆ ನನಗೆ ಗೊತ್ತು.ಈ ಜೀವನ ಒಂದು ನಿರಂತರ ಶಿಲುಬೆಹಾದಿ. ಈ  ಕ್ರೂರ ಹಾದಿಯಲಿ ಅದೆಷ್ಟೋ ಕಲ್ಲುಮುಳ್ಳುಗಳಿವೆ, ಹಳ್ಳ ಕೊರಕಲುಗಳಿವೆ. ಈ  ಕತ್ತಲ ಹಾದಿಯಲಿ ನನ್ನ ಬೆಳಕಾಗು. ಸೋತು ದಣಿದಾಗ ಹೆಗಲಾಗು. ಹತಾಶ ಸಾಗರದಿ ಸಿಲುಕಿಹ ಒಂಟಿ ನೌಕೆ ನಾನು,  ನೀ ಎನ್ನ ಸ್ಪೂರ್ತಿ ನಾವಿಕನಾಗು.
"ಮುಂದೆ ಹೋಗುವೆನು ನನ್ನ ಯೇಸುವಿನೊಂದಿಗೆ
ಹಿಂದೆ ನೋಡದೆ ಹೋಗುವೆನು
ಆ ಗುರಿ ಮುಟ್ಟುವ ತನಕ "


ಮೂರನೇ ಸ್ಥಳ....ನಾನಂದು ಬಿದ್ದಾಗ .....
"ನನ್ನ ಬಾಲ್ಯದಲ್ಲಿ ನಾನೆಷ್ಟು ಸುಖವಾಗಿ ಬೆಳೆದೆ. ಬಡವರಾಗಿದ್ದರೂ ನನ್ನ ಅಜ್ಜಿ ಹನ್ನ ಹಾಗು ಅಮ್ಮ ಮರಿಯ ಅದೆಷ್ಟು ಮುದ್ದಾಗಿ, ನನ್ನ ಕಾಲು ಮಣ್ಣಿಗೆ ತಾಗದಂತೆ ಬೆಳೆಸಿದರು..!! ಅಬ್ಬಾ ಅದೊಂದು ಸುಮಧುರ ನೆನಪುಗಳ ಧಾರೆ"
ಇದು ನಾನಂದು ಬಿದ್ದಾಗ ಮರುಕಳಿಸಿದ ಬಾಲ್ಯದ ಮಧುರ ನೆನಪುಗಳು. ಮನಸ್ಸಿಗೆ ಈ ಕಾಠಿಣ್ಯವನ್ನು ಎದುರಿಸಲು ಸ್ಥೈರ್ಯವಿದೆ ಆದರೆ ದೇಹವೇಕೋ ಒಪ್ಪುತ್ತಿಲ್ಲ. ಕ್ಷಣ ಕ್ಷಣಕ್ಕೂ ಶಿಲುಬೆ ಭಾರವಾಗುತ್ತಿದೆ. ಸೈನಿಕರ ಚಾಟಿಯೇಟುಗಳಿಗೆ ನನ್ನ ದೇಹ ಹಬ್ಬದ ಬಾಡೂಟವಾಗಿದೆ. ತಾಳಲಾರದೆ ಕುಸಿದು ಬಿದ್ದೆ.
ಅದೆಷ್ಟು ಜನರಿಗೆ ನಾ ಹಾಸಿಗೆಯಿಂದೇಳುವಂತೆ ಮಾಡಿದೆ. ಹತ್ತಾರು ವರ್ಷಗಳಿಂದ ಮಲಗಿದ್ದವರನ್ನು ಕೈಹಿಡಿದು ಮೇಲೆತ್ತಿದ ನನ್ನನ್ನು ಈ ಕ್ಷಣದಲ್ಲಿ ಮೇಲೆತ್ತಲು ಯಾರೂ ಇಲ್ಲವೇ? ಸತ್ತು ನಾರುತ್ತಿದ್ದ ಲಾಜರನಿಗೆ ಜೀವ ಕೊಟ್ಟೆ. ಅವನಾದರೂ ಎಲ್ಲಿ ಹೋದ?
ಇಗೋ ನನ್ನ ಎತ್ತಿ ಆಡಿಸಿದ ನನ್ನಮ್ಮ ಅಲ್ಲಿದ್ದಾಳೆ. ಒಂದೇ ಸಮನೆ ಕಣ್ಣೀರಿಡುತ್ತಿದ್ದಾಳೆ. ಬಹುಶಃ ಈ ನೀಚ ಸೈನಿಕರಿಲ್ಲದಿದ್ದರೆ ಓಡೋಡಿ ಬಂದು ನನ್ನನ್ನು ಎಬ್ಬಿಸುತ್ತಿದ್ದಳೇನೊ...
ಸದಾ ನನ್ನೊಡನೆ ಉಂಡ ನನ್ನ ಮಿತ್ರರೆಲ್ಲಿ? "ನಿಮ್ಮೊಡನೆ ಸೆರೆಮನೆಗಾದರೂ ಸರಿಯೇ..ಸಾಯಬೇಕಾದರೂ ಸರಿಯೇ ನಾ ಬರುವೆ ಪ್ರಭು" ಎಂದ ಸಿಮೋನನೆಲ್ಲಿ?
ಯಾರೂ ನನ್ನನ್ನು ಮೇಲೆತ್ತಲಿಲ್ಲ. ಇದು ನನ್ನ ಶಿಲುಬೆ. ನಾನು ಬಂದದ್ದಾದರೊ ಇದಕ್ಕೋಸ್ಕರವೇ... ಅದೆಷ್ಟೇ ಭಾರವಾದರೂ ಇದನ್ನು ಹೊರತ್ತೇನೆ . ಹೊತ್ತು ಮುನ್ನಡೆಯುವ ಮುನ್ನ ಮಗನೇ, ಮಗಳೇ ನಿಮಗೊಂದು ಕಿವಿಮಾತೇಳುತ್ತೇನೆ ಕೇಳಿ. "ಈ ಪ್ರಪಂಚ ನಶ್ವರ. ಇಲ್ಲಿ ಬಿದ್ದು ಮೇಲೇಳುವುದೇ ಒಂದು ಸಾಧನೆಯಲ್ಲ. ನೀವು ನೋಡಬೇಕಾದ ಇನ್ನೊಂದು ಲೋಕವಿದೆ. ಆ ಲೋಕದಲ್ಲಿ ಎಡವಿ ಬೀಳದಂತೆ ಎಚ್ಚರ ವಹಿಸಿರಿ".
ನಾ ಮತ್ತೆ ಎದ್ದೆ. ಆ ಭಾರವಾದ ಶಿಲುಬೆ ಹೊರಲು ಕಾಲ್ಗಳು ಕಂಪಿಸುತ್ತಿದ್ದವು. ತಡಮಾಡಿದಷ್ಟೂ ಚಾಟಿಯೇಟುಗಳ ಆರ್ಭಟ. ಈಗಾಗಲೇ ನನ್ನ ದೇಹದಿಂದ ರಕ್ತ ಹರಿದು, ಈ ದೇಹ ರಸ ಹಿಂಡಿದ ಕಬ್ಬಿನ ಜಲ್ಲೆಯಂತಾಗಿತ್ತು. ಆದರೂ ಮುನ್ನಡೆದೆ, ನನಗಾಗಿ ಅಲ್ಲ ನಿನಗಾಗಿ. ನಿನ್ನ ಆತ್ಮದ ರಕ್ಷಣೆಗಾಗಿ.
ಪ್ರಾರ್ಥನೆ
ನನಗಾಗಿ ಕ್ರೂರ ಶಿಕ್ಷೆಯ ಸಹಿಸಿದ ಸಹನಾ ಮೂರ್ತಿ ಕ್ರಿಸ್ತ, ಇಗೋ ನಾನು ಕಡು ಪಾಪಿ. ತಿಳಿದೂ ತಿಳಿದೂ ಮತ್ತದೇ ಪಾಪದ ಕೆಸರಲ್ಲಿ ಬೀಳುತ್ತಿರುವೆ. ಕ್ಷಮೆ ಯಾಚಿಸಲೂ ನಾ ಯೋಗ್ಯನಲ್ಲ ಆದರೂ ಬೇಡುತ್ತಿರುವೆ ನನ್ನೊಡೆಯ... ಬಾ ಕೈ ಹಿಡಿದು ಮೇಲೆತ್ತು. ನಾ ಮತ್ತೆ ಆ ಕೂಪದಲ್ಲಿ ಮುಳುಗಲಾರೆ. ಆಮೆನ್

ನಾಲ್ಕನೇ ಸ್ಥಳ ..  ನನ್ನವ್ವನ ಕಂಡಾಗ...
ಮತ್ತೋರ್ವನಿಗಾಗಿ ನಿರಪರಾಧಿ ತಾನಾದರೂ ಶಿಕ್ಷೆಯೊಪ್ಪಿಕೊಂಡು, ನಿರಂತರ ಕೊರಡೆಯ ಹೊಡೆತಗಳಿಗೆ ಹೈರಾಣಾಗಿ, ದೇಹದಿಂದ ಮಾಂಸ ಕಿತ್ತು ಬಂದರೂ, ಅದೇ ಮತ್ತೋರ್ವನ ನಿತ್ಯ ರಕ್ಷೆಗೆ ಸಾತ್ವಿಕ ಎದೆಗಾರಿಕೆಯೊಳು ಸೆಣಸುತ್ತಿರುವ ಒಂದು ಜೀವ ಇಲ್ಲಿಯಾದರೆ... ತಾನೇ ಹೆತ್ತು ಸಾಕಿ ಸಲಹಿದ ಕಂದಮ್ಮನ ಹೃದಯ ವಿದ್ರಾವಕ ಪರಿಸ್ಥಿತಿಯ ಕಂಡು, ಮಾತು ಹೊರಳದೆ, ಮಡುಗಟ್ಟಿದ ಶೋಕಸಾಗರದಲ್ಲಿ ತಾನೊಬ್ಬಳೇ ಒಂಟಿಯಾಗಿ ಮನದ ನೂರು ದ್ವಂದ್ವಗಳ ಹಿಮ್ಮೆಟ್ಟಿಸುವ ನಿರಂತರ ಪ್ರಯತ್ನದ ಇನ್ನೊಂದು ಜೀವ...!
ಈ ಎರಡು ಜೀವಗಳ ಬಿಗಿಯಾಗಿ ಬೆಸೆದಿರುವ ಕೊಂಡಿ ಕರುಳಬಳ್ಳಿ. ಅತ್ತ ರಕ್ತಸಿಕ್ತ ಕ್ರಿಸ್ತ, ಇತ್ತ ಒಡೆದ ಹೃದಯದ ಮರಿಯ. ಕಲ್ವಾರಿಯೊಳು ಎದುರುಗೊಂಡ ಅಮ್ಮ- ಕಂದನ ಹೃದಯಾಳದ ಭಾವನೆಗಳ ಮನ ಕಲಕುವ ಸಂಭಾಷಣೆ!!!
ಕ್ರಿಸ್ತಕಂದ: [ಅಮ್ಮನ ಕಂಗಳನೇ ದಿಟ್ಟಿಸಿ] ಯಾಕಮ್ಮಾ ರೋದಿಸುತ್ತಿರುವೆ? ಒಂದಲ್ಲಾ ಒಂದು ದಿನ ಈ ಘಳಿಗೆ ಬಂದೀತು ಎಂದು ನಿನಗೆ ತಿಳಿದಿರಲಿಲ್ಲವೆ? ಇದು ನನ್ನದೇ ಕೈಂಕರ್ಯ. ನನ್ನ ಹೊರತು ಇದನ್ನಾರೂ ಮಾಡಲಾರರು...!
ತಾಯಿ ಮರಿಯ: ಅರ್ಹನಲ್ಲದ ಶಿಕ್ಷೆಗೆ ನೀನೇಕೆ ಕಂದ? ನೀ ಮಾಡಿದ ತಪ್ಪಾದರೂ ಏನು? ಅಂಧರಿಗೆ ದೃಷ್ಟಿ ನೀಡಿದ್ದು, ಹೆಳವನಿಗೆ ಕಾಲ್ಗಳ ಕರುಣಿಸಿದ್ದು,  ಸತ್ತವರನ್ನು ಮತ್ತೆ ಜೀವಕ್ಕೆ ಎಬ್ಬಿಸಿದ್ದೇ ಮಹಾಪರಾಧವಾಯಿತೆ?
ಕ್ರಿಸ್ತಕಂದ: ತಪ್ಪು ಮಾಡಿ ಅನುಭವಿಸುವ ಶಿಕ್ಷೆಯನ್ನು ತ್ಯಾಗವೆನ್ನುವುದಿಲ್ಲ ತಾಯಿ. ನನ್ನದು ಸರ್ವೇಶ್ವರ ತಂದೆಯ ಆಜ್ಞೆಯ ಪಾಲಿಸುವ ಕೆಲಸ. ಜಗದಲಿ ನೆಲೆಸುವ ಪಾಪಿಗಳಿಗೋಸ್ಕರ, ಈ ಘೋರ ಶಿಕ್ಷೆಯ ತಿಳಿದೂ, ಇವರ ರಕ್ಷಣೆಗಾಗಿ ಬಂದಿದ್ದೇನೆ. ಅಮ್ಮಾ... ಧೈರ್ಯವಂತಳಾಗು. ಸೃಷ್ಟಿಕರ್ತನಿಗಿಂತ ಮಿಗಿಲಾದುದು ಯಾವುದೂ ಇಲ್ಲ.. ಅಲ್ಲವೇ?
ತಾಯಿ ಮರಿಯ: ಕಂದ ಯೇಸು... ಅಂದು ದೇವಾಲಯದಲ್ಲಿ ನೀನು ಕಾಣೆಯಾದಾಗ, ನಾನೆಷ್ಟು ದಿಗಿಲಾಗಿದ್ದೆ. ಆ ಮೂರು ದಿನಗಳು ಅತಿ ದೊಡ್ಡ ಕಳವಳವನ್ನುಂಟು ಮಾಡಿದ್ದವು. ಇನ್ನೆಂದಿಗೂ ನಾನು ಹೀಗಾಗುವುದಿಲ್ಲವೆಂದು ತಿಳಿದಿದ್ದೆ. ಆದರೆ ಇಗೋ ನಾ ಹೆತ್ತ ಕಂದ ರಕ್ತದ ಮಡುವಿನಲ್ಲಿದ್ದಾನೆ. ಅವನ ದೇಹ ಹರಿದು ಹೋಗಿ ನೆತ್ತರ ಧಾರೆ ಹರಿಯುತ್ತಿದೆ.
ಅಯ್ಯೋ   ನಾನೆಂಥ ತಾಯಿ! ರಣಭಾರದ ಶಿಲುಬೆಯ  ಹೊತ್ತು ರಕ್ತ   ಬೆವರಿನಿಂದ ತೊಯ್ದು ಹೋಗಿರುವ ನನ್ನ ಕಂದನ ಕೋಮಲ ಮುಖವನ್ನು ಒರೆಸಿ, ಕೊನೆಗೊಂದಿಷ್ಟು ಸಾಂತ್ವನದ ನುಡಿಗಳನ್ನಾಡಲು ಕೂಡ ಸಾಧ್ಯವಾಗುತ್ತಿಲ್ಲವಲ್ಲ... ನಾನೆಷ್ಟು ನತದೃಷ್ಟೆ!
ಕ್ರಿಸ್ತಕಂದ: ಅಮ್ಮಾ... ನೀನೇಕೆ ಮರುಗುವೆ? ನಾನಿದನ್ನು ತಿರಸ್ಕರಿಸಿದರೆ ನೀನು ನನಗೆ ಮಾತ್ರ ತಾಯಾಗುವೆ. ನಾನಿದನ್ನು ಪುರಸ್ಕರಿಸಿದ್ದೇ ಆದಲ್ಲಿ ಮುಂದೆ ಯುಗಯುಗಾಂತರಕ್ಕೂ ನೀನು ಇಡೀ ವಿಶ್ವಕ್ಕೆ ತಾಯಾಗುವೆ. ಧೈರ್ಯದಿಂದಿದ್ದು ಇತರರಿಗೂ ಧೈರ್ಯ ತುಂಬು.
ಪ್ರಾರ್ಥನೆ
ತಂದೆಯೇ, ವಿಶ್ವದ ಎಲ್ಲಾ ತಂದೆ ತಾಯಂದಿರು ಮತ್ತು ಮಕ್ಕಳು, ತಮ್ಮ ಜವಾಬ್ದಾರಿಗಳನ್ನರಿತು, ಪರಸ್ಪರ ಅನ್ಯೋನ್ಯತೆಯಿಂದ ಜೀವಿಸಲಿ. ಆಮೆನ್.

ಐದನೇ ಸ್ಥಳ .. ಸಿಮೋನ ಹೊತ್ತಾಗ...
ನಾನು ಸಿಮೋನ. ಜ್ಞಾಪಕವಿಲ್ಲವೇ? ಅದೇ ಯೇಸುವಿನ ಕಲ್ವಾರಿ ಯಾತ್ರೆಯಲ್ಲಿ, ಶಿಲುಬೆ ಹೊರಲು, ಯೇಸುವಿಗೆ ಒತ್ತಾಸೆಯಾಗಿ ಬಂದ ಸಿರೇನ್ಯದ ಸಿಮೋನ ನಾನೇ. ಅಂದು ನಾನು ಸಿರೇನ್ಯದಿಂದ ಜೆರುಸಲೇಮಿನತ್ತ ಕೆಲಸದ ವಿಷಯವಾಗಿ ಬರುತ್ತಿದ್ದೆ.
ಜೆರುಸಲೇಮಿನ ಅಂದಿನ ಬಿಗುವಾದ ವಾತಾವರಣ ಕಂಡು ವಿಚಾರಿಸಿದಾಗ, ಯೇಸು ಎಂಬ ವ್ಯಕ್ತಿಗೆ ಮರಣದಂಡನೆ ವಿಧಿಸಿದ್ದಾರೆಂದು ತಿಳಿದು, ಅದನ್ನು ನೋಡಲು ಕಲ್ವಾರಿಯತ್ತ ತೆರಳಿದೆ.
ಇನ್ನೇನು ಹತ್ತಿರದಲ್ಲಿರುವಾಗ ಸೈನಿಕರ ದಂಡು ನನ್ನನ್ನು ಬಲವಂತದಿಂದ ಎಳೆದು ಯೇಸುವಿಗೆ ಸಹಾಯ ಮಾಡೆಂದು ತಳ್ಳಿದರು. ಆಗ ಒಲ್ಲದ ಮನಸ್ಸಿನಿಂದ ಮಾಡಿದ ಸಹಾಯಕ್ಕೆ ಇಂದು ನಾನು ಇತಿಹಾಸದ ಪುಟಗಳಲ್ಲಿ ಕಾಣಿಸಿಕೊಂಡಿದ್ದೇನೆ .
ಆ ಎಲ್ಲಾ ಆಗು ಹೋಗುಗಳಲ್ಲಿ, ಆ ಯಾತನೆಯಲ್ಲಿ ಅವರನ್ನು ದಿಟ್ಟಿಸಿ ನೋಡಿದಾಗ, ನನಗೆ ಕಂಡದ್ದು ಅವರ ನಿಷ್ಕಲ್ಮಶ ದಿವ್ಯದೃಷ್ಟಿ. ಆ ಒಂದೇ ನೋಟದಲ್ಲಿ ಪರಮಾಪ್ತತೆಯನ್ನು ಕಂಡೆ. ಮಂಜುಗಡ್ಡೆಯಾಗಿದ್ದ ನನ್ನ ಶೀತಲ ಹೃದಯಕ್ಕೆ ಅವರ ಶಾಖದ ಅಮೃತ ಸಿಂಚನವಾಯಿತು.
ಆಗ ನನಗನಿಸಿದ್ದು "ಕ್ಷಣ ಕಾಲ ಶಿಲುಬೆ ಹೊತ್ತ ಪಾಪಿಯಾದ ನನಗೇ ಇಷ್ಟು ನೋವು, ಅಪಮಾನವಾದರೆ ಇನ್ನು ಪರಿಶುದ್ಧ, ಪರಮೋನ್ನತ, ಪ್ರಭು ಕ್ರಿಸ್ತನಿಗೆಷ್ಟು ನೋವಾಗಿರಬಹುದು???
ಪ್ರಾರ್ಥನೆ
ಪ್ರತಿದಿನ ಪ್ರತಿಕ್ಷಣ ನನ್ನ ಪಾಪಗಳಿಂದ ತಿಳಿದೂ ತಿಳಿಯದೆ ನಿಮ್ಮ ಶಿಲುಬೆಗೆ ಮತ್ತಷ್ಟು ಭಾರವನ್ನು ಹೊರಿಸುತ್ತಿದ್ದೇನೆ ಕ್ರಿಸ್ತ. ದಯವಿಟ್ಟು ಕ್ಷಮಿಸಿ. ನಿಮ್ಮಂತೆ ಬಾಳಲು ದಯೆಯ ಕರುಣಿಸಿ.
ಆಮೆನ್.

ಆರನೇ ಸ್ಥಳ ..  ವೆರೋನಿಕ ಕ್ರಿಸ್ತನೆಡೆಗೆ ...
ವೆರೋನಿಕ ಕ್ರಿಸ್ತನೆಡೆಗೆ ಸಾಗುತ್ತಾಳೆ. ಅಲ್ಲಿ ಕ್ರಿಸ್ತ ಸಂಯಮದಿಂದ ಸಾಗುತ್ತಿದ್ದಾನೆ. ಸಿಪಾಯಿಗಳ ಚಾಟಿಯೇಟುಗಳು, ನಿಂದನೆ, ನೋವು ಇದ್ಯಾವುದೂ ಅವರನ್ನು ಬಾಧಿಸುತ್ತಿಲ್ಲ. ಅವರು ಬಯಸುವುದು ನಮ್ಮ ಮನಪರಿವರ್ತನೆ. ಅಲ್ಲಿ ಕ್ರಿಸ್ತ ದೈಹಿಕವಾಗಿ ಜರ್ಜರಿತವಾಗುತ್ತಿದ್ದಾಗ ಬೆವರು ಮತ್ತು ರಕ್ತ ಅವರ ವದನವನ್ನು ತೋಯಿಸುತ್ತಿತ್ತು. ಮುಂದಿನ ದಾರಿ ಕಾಣದೆ ಕ್ರಿಸ್ತನ ಕಣ್ಣು ಮಂಜಾಗಿದೆ. ಅದೆಷ್ಟೋ ಜನರು ಬದಿಯಲ್ಲಿದ್ದರೂ ಯಾರೂ ಮುಂದೆ ಬರುತ್ತಿಲ್ಲ.
ಆಗ ಅಲ್ಲಿಗೆ ಬಂದವಳೇ ವೆರೋನಿಕ. ಅವಳೂ ಒಬ್ಬ ತಾಯಿಯಲ್ಲವೇ? ಅವಳಿಗೆ ಕ್ರಿಸ್ತ ಮಗನಂತೆ ಕಂಡಿರಬಹುದು. ಯಾವ ತಾಯಿ ತಾನೆ ತನ್ನ ಮಗನ ಘೋರ ಯಾತನೆಯನ್ನು ಸಹಿಸುತ್ತಾಳೆ? ಓಡೋಡಿ ಬಂದಳು ಆ ಮಾತೆ. ಕ್ರಿಸ್ತನ ರಕ್ತಸಿಕ್ತವಾದ ಮುಖವನ್ನು ಅತೀವ ಪ್ರೀತಿಯಿಂದ ಮತ್ತು ಅದೇ ದುಃಖದಿಂದ ಒರೆಸುತ್ತಾಳೆ. ಆ ಕರವಸ್ತ್ರದಲ್ಲಿ ಕ್ರಿಸ್ತನ ಕೋಮಲ ಮುಖ ಅಚ್ಚಾಗುತ್ತದೆ. ಯಾವ ಬದುಕಿನ ಮಧುರಸ್ಮೃತಿಯ ಸೆಳೆತವೋ ಅವಳನ್ನು ಪ್ರೇರೇಪಿಸಿದ್ದು ,ಆಕೆಯ ಮನಸ್ಸು ಕ್ರಿಸ್ತನ ಯಾತನೆಯನ್ನು ಸಹಿಸಲಿಲ್ಲ. ಈ ಮಧ್ಯೆ ಅವಳು ಆ ಕ್ರೂರ ಸೈನಿಕರನ್ನೂ ಲೆಕ್ಕಿಸಲಿಲ್ಲ. ಯಾವ ಗಂಡಸಿಗೂ ಇಲ್ಲದ ಎದೆಗಾರಿಕೆ ವೆರೋನಿಕಾಳಲ್ಲಿತ್ತು!
ಆದರೆ ಇಂದು ನಮ್ಮ ಬದುಕಿನಲ್ಲಿ ಅದೆಷ್ಟೋ ಬಾರಿ ನಮ್ಮ ಗೆಳೆಯರು, ನೆರೆಹೊರೆಯವರು ಬದುಕಿನ ಹೊರೆ ಹೊತ್ತು, ಬೆಂಡಾಗಿರುವುದನ್ನು ಕಾಣುತ್ತೇವೆ. ನಮ್ಮಲ್ಲಿ ಎಷ್ಟು ಜನ ವೆರೋನಿಕಳಾಗುತ್ತೇವೆ? ನಮ್ಮಲ್ಲಿ ಸಮಾಜದ ಅಸ್ಪ್ರಶ್ಯತೆಯನ್ನು ಎದುರಿಸುವ ದಿಟ್ಟತನ ಯಾರಿಗಿದೆ? ನಮ್ಮ ಸ್ನೇಹಿತ ನರಳುವಾಗ ಅವನು ಕ್ರಿಸ್ತನಾಗಿರಬಹುದಲ್ಲವೇ? ಅಂತಹ ಸಂರ್ಭಗಳಲ್ಲಿ ನಾವು ವೆರೋನಿಕಳಾಗಿ ಅವರ ನೋವು ನರಳುವಿಕೆಗಳಿಗೆ ಸ್ಪಂದಿಸಿ ಉಪಶಮನ ನೀಡುವುದಾದರೇ ಅದು ಶಿಲುಬೆಯಡಿ ಘಾಸಿಗೊಂಡ ಆ ಕ್ರಿಸ್ತನಿಗೆ ಶುಶ್ರೂಷೆ ಮಾಡಿದಂತೆ.
ವೆರೋನಿಕ, ಮಮತೆ ವಾತ್ಸಲ್ಯಭರಿತ ತಾಯಿಯ ಹೃದಯಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾಳೆ. ಕೊರಡೆಯ ಹೊಡೆತಗಳಿಗೆ ಕ್ರಿಸ್ತನ ರಕ್ತ ಹೊನಲಂತೆ ಚಿಮ್ಮುವಾಗ ಅವಳ ಹೃದಯ ನುಚ್ಚು ನೂರಾಗಿರಬೇಕು. ಅದೆಷ್ಟು ನೋವು ಹೃದಯದಲ್ಲಿ ಕನಲಿತೊ, ಒಮ್ಮೆಲೆ ಕ್ರಿಸ್ತನತ್ತ ಧಾವಿಸಿಬಿಟ್ಟಳು! ಇಂದು ರಸ್ತೆಗಳಲ್ಲಿ ಅಪಘಾತಗಳಾದಾಗ ಅನೇಕರು ನಿಂತು ನೋಡುತ್ತೇವೆಯೇ ವಿನಃ ಯಾರೂ ಅವರ ನೆರವಿಗಾಗಿ ಧಾವಿಸುವುದಿಲ್ಲ. ಮುಂದಿನ ಸಮಸ್ಯೆಗಳೆಂಥದೊ ಎಂದು ಚಿಂತಿಸಿ ಹಿಂದೆ ಸರಿಯುತ್ತೇವೆ. ಅದೇ ಸ್ಥಳದಲ್ಲಿ ನಮ್ಮ ಕುಟುಂಬಸ್ಥರು, ಬಂಧು ಮಿತ್ರರಿದ್ದರೇ ಹೀಗೆ ಯೋಚಿಸುತ್ತೇವೆಯೇ? ಆದರೆ ವೆರೋನಿಕಾ ಹಾಗೆ ಮಾಡಲಿಲ್ಲ. ಆಕೆ ಕ್ರಿಸ್ತನ ಸಂಬಂಧಿಕಳಲ್ಲ, ತಾಯಿಯಂತೂ ಅಲ್ಲವೇ ಅಲ್ಲ! ಆದರೂ ಆಕೆ ಕ್ರಿಸ್ತನಿಗಾಗಿ ಮರುಗುತ್ತಾಳೆ. ಮಾನವ ಪ್ರೇಮದ ಉಜ್ವಲ ಸಂಕೇತ ಅವಳು!
ಪ್ರಾರ್ಥನೆ
ದಯಾಮಯ ಕ್ರಿಸ್ತ, ನನ್ನಕೈಯಲಾಗದ ಕೆಲಸವಲ್ಲದಿದ್ದರೂ, ಇತರರಿಗಾಗಿ ಮರುಗುವ ಹೃದಯನೀಡು. ಅವರಿಗಾಗಿ ಸದಾ ಪ್ರಾರ್ಥಿಸುವ ಮನಸ್ಸು ನೀಡು. ಆಮೆನ್.


ಏಳನೆಯ ಸ್ಥಳ.. ಕ್ರಿಸ್ತ ಮತ್ತೊಮ್ಮೆ ಮುಗ್ಗರಿಸಿ ಬಿದ್ದಾಗ ...

ಇಗೋ ಕ್ರಿಸ್ತ ಮತ್ತೊಮ್ಮೆ ಬಿದ್ದಿದ್ದಾನೆ. ರಕ್ತದ ಮಡುವಲಿ, ತೊಯ್ದ ಬೆವರಲಿ. ಕಣ್ಣರೆಪ್ಪೆಗಳು ಭಾರವಾಗಿ ಮುಂದಿನ ದಾರಿ ಮಸುಕಾಗಿದೆ. ದೇಹ ನಿಶ್ಚಲವಾಗಿ ಸಂಚಲನವಿಲ್ಲದಾಗಿದೆ. ಆ ಎಲ್ಲಾ ನೆನಪುಗಳೂ ಮರುಕಳಿಸುತ್ತಿವೆ. ನಡೆಯಲಾಗದ ಹೆಳವನಿಗೆ ಕಾಲ್ಗಳ ನೀಡಿ ನಡೆಸಿದೆ. ಪಾರ್ಶ್ವವಾಯು ರೋಗಿಯ ಕೈಹಿಡಿದು ಎಬ್ಬಿಸಿದೆ. ಆದರೀಗ ನಾನು ಅಶಕ್ತನಾಗಿದ್ದೇನೆ . ಮತ್ತೆ ಮುಗ್ಗರಿಸಿ ಬಿದ್ದಿದ್ದೇನೆ. ಇದೆಂಥಹ ಕ್ರೌರ್ಯ??
"ಲೋಕೋದ್ಧಾರಕನಂತೆ ನೀನು . . ಎದ್ದೇಳು . . ಎದ್ದುನಡೆ. ನಿನ್ನನ್ನು ನೀನು ರಕ್ಷಿಸಿಕೊ .."! ಎಂಬ ಸೈನಿಕರ ಅಪಹಾಸ್ಯದ ಮಾತುಗಳು ಒಂದೆಡೆಯಾದರೆ, ಸದಾ ನನ್ನೊಡನಿದ್ದು, ನನ್ನೊಡನೆ ಸುಮಧುರ ಕ್ಷಣಗಳ ಕಳೆದ ನನ್ನ ಸ್ನೇಹಿತರೆಲ್ಲಿ? ಇದೇ ನಿರಾಸೆಯ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಿದೆ.
ಇಲ್ಲಿ ಕ್ರಿಸ್ತರು ಎರಡನೇ ಬಾರಿಗೆ ಬೀಳುತ್ತಾರೆ. ದೈಹಿಕ ನಿಶ್ಶಕ್ತಿಯಿಂದಲ್ಲ ಬದಲಿಗೆ ನಮ್ಮ ಆಧ್ಯಾತ್ಮಿಕ ನಿಶ್ಶಕ್ತಿ ಅವರನ್ನು ಮತ್ತೆ ಮತ್ತೆ ಕೆಳಗೆ ತಳ್ಳುತ್ತಿದೆ. ಕಲ್ಲು ಬಂಡೆಯಂತಹ ನೆಲದ ಮೇಲೆ ಕ್ರಿಸ್ತ ಸಾಗುವಾಗ ಮುಳ್ಳುಗಳ ಲೆಕ್ಕಿಸಲಿಲ್ಲ, ಹರಿಯುತ್ತಿದ್ದ ನೆತ್ತರ ಲೆಕ್ಕಿಸಲಿಲ್ಲ. ಅವರು ಎದೆಗುಂದದೆ ಮುನ್ನಡೆಯುತ್ತಾರೆ. ಆದರೆ ಈ ಘೋರ ಪಯಣದುದ್ದಕ್ಕೂ ಅವರನ್ನು ಕಾಡುವುದು ನಮ್ಮ ಚಿಂತೆ. ಕಪಟಿಗಳು ನಾವಾಗದೆ, ಸರ್ವೇಶ್ವರನ ಪ್ರೀತಿಯ ಮಕ್ಕಳು ನಾವಾಗಬೇಕೆಂಬುದು ಅವರ ಹೆಬ್ಬಯಕೆ.
ಮುಂದೆ ಮುಂದೆ ನಡೆಯುವಾಗ ದೇಹದಿಂದ ರಕ್ತಹರಿದು, ದೇಹ ಜರ್ಜರಿತವಾಗಿದೆ. ಆದರೂ ಯೇಸು ಎದೆಗುಂದಲಿಲ್ಲ. ನಮ್ಮೆಲ್ಲರ ಶಿಲುಬೆ ಅದೆಷ್ಟೇ ಭಾರವಾಗಿದ್ದರೂ, ಅವರು ಮುಕ್ತ ಮನಸ್ಸಿನಿಂದ ಹೊರುತ್ತಾರೆ. ನಮ್ಮದೇ ಪಾಪಗಳು ಆ ಶಿಲುಬೆಯ ಭಾರವನ್ನು ದುಪ್ಪಟ್ಟುಗೊಳಿಸುತ್ತಿವೆ. ಕ್ರಿಸ್ತ ಎದೆಗುಂದದೆ ನಮ್ಮನ್ನೇ ದಿಟ್ಟಿಸಿ ನೋಡುತ್ತಿದ್ದಾರೆ. ಇದೊಂದು ಬಾರಿಯಾದರೂ ಅವರನ್ನು ಕೈ ಹಿಡಿದು ಮೇಲೆತ್ತಲು ಅಣಿಯಾಗಬೇಕೆಂಬ ಹಂಬಲ ಅವರದು.
ನಾ ಮತ್ತೆ ಎದ್ದೆ. ಆ ಭಾರವಾದ ಶಿಲುಬೆ ಹೊರಲು ಕಾಲ್ಗಳು ಕಂಪಿಸುತ್ತಿದ್ದವು. ತಡ ಮಾಡಿದಷ್ಟೂ ಚಾಟಿಯೇಟುಗಳ ಆರ್ಭಟ. ಈಗಾಗಲೇ ನನ್ನ ದೇಹದಿಂದ ರಕ್ತ ಹರಿದು, ಈ ದೇಹ ರಸ ಹಿಂಡಿದ ಕಬ್ಬಿನ ಜಲ್ಲೆಯಂತಾಗಿತ್ತು. ಆದರೂ ಮುನ್ನಡೆದೆ, ನನಗಾಗಿ ಅಲ್ಲ ನಿನಗಾಗಿ. ನಿನ್ನ ಆತ್ಮದ ರಕ್ಷಣೆಗಾಗಿ.
ಪ್ರಾರ್ಥನೆ
ನನಗಾಗಿ ಕ್ರೂರ ಶಿಕ್ಷೆಯ ಸಹಿಸಿದ ಸಹನಾ ಮೂರ್ತಿ ಕ್ರಿಸ್ತ, ಇಗೋ ನಾನು ಕಡುಪಾಪಿ. ತಿಳಿದೂ ತಿಳಿದೂ ಮತ್ತದೇ ಪಾಪದ ಕೆಸರಲ್ಲಿ ಬೀಳುತ್ತಿರುವೆ. ಕ್ಷಮೆ ಯಾಚಿಸಲೂ ನಾ ಯೋಗ್ಯನಲ್ಲ ಆದರೂ ಬೇಡುತ್ತಿರುವೆ ನನ್ನೊಡೆಯ. . . ಬಾ ಕೈಹಿಡಿದು ಮೇಲೆತ್ತು. ನಾ ಮತ್ತೆ ಆ ಕೂಪದಲ್ಲಿ ಮುಳುಗಲಾರೆ. ಆಮೆನ್

ಎಂಟನೇ ಸ್ಥಳ .. ತಾಯಂದಿರ ಮಮತೆ ...
ಹೆಂಗರುಳ ಪ್ರೀತಿ ವಾತ್ಸಲ್ಯ ಮತ್ತೊಮ್ಮೆ ಸಾಬೀತಾಯಿತು. ಜೆರುಸಲೇಮಿನ ಆ ತಾಯಂದಿರ ಮಡುಗಟ್ಟಿದ ಶೋಕದ ಅನುಕಂಪದಲ್ಲಿ ಹೆಣ್ತನದ ಪರಾಮರ್ಶೆಯಾಯಿತು. ಅವರು ಕ್ರಿಸ್ತನ ಅನುಯಾಯಿಗಳಲ್ಲ, ಸಂಬಂಧಿಕರಾಗಿರಬಹುದು ಆದರೆ ಅದಕ್ಕೆ ಪುರಾವೆಗಳಿಲ್ಲ, ಆದರೂ ಕ್ರಿಸ್ತನ ಕಲ್ವಾರಿ ಯಾತನೆಯ ಪಯಣದ ಒಂದು ಭಾಗವಾಗುತ್ತಾರೆ ಆ ಮಹಿಳೆಯರು.
ಶಿಲುಬೆ ಹೊತ್ತು ನಡೆದು ಬರುವ ಕ್ರಿಸ್ತನನ್ನು ನೋಡಿ ಅತ್ತು ಪ್ರಲಾಪಿಸುತ್ತಾರೆ ಆ ಸ್ತ್ರೀಯರು. ತಮ್ಮ ಸ್ವಂತ ಮಗನೇನೋ ಎಂಬ ಆತ್ಮೀಯ ಮಮತೆಯಿಂದ ಆತನಿಗಾಗಿ ಕಣ್ಣೀರಿಡುತ್ತಾರೆ. ಇವರ ಈ ವಿದ್ರಾವಕ ರೋನೆಯನ್ನು ಕುರಿತು ಕ್ರಿಸ್ತ ಯೇಸು "ನನಗೋಸ್ಕರ ಅಳಬೇಡಿ, ನಿಮಗಾಗಿ ನಿಮ್ಮ ಮಕ್ಕಳಿಗಾಗಿ ಪ್ರಲಾಪಿಸಿರಿ" ಎಂದು ಹೇಳುತ್ತಾನೆ.
ಈ ನೋವಿನ ಸಮಯದಲ್ಲೂ ಕ್ರಿಸ್ತನಿಗೆ ನಮ್ಮದೇ ಚಿಂತೆ - ನಮ್ಮ ಹೃದಯಗಳ ಚಿಂತೆ. "ನಿಮ್ಮ ಮಕ್ಕಳಿಗಾಗಿ ಅಳಿರಿ" ಎಂಬ ಆತನ ಮಾತುಗಳಲ್ಲಿ ಹಿರಿಯರಾಗಿ, ತಂದೆ - ತಾಯಿಗಳಾಗಿ, ಮಾರ್ಗದರ್ಶಕರಾಗಿ ನಾವು ಹೇಗೆ ನಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕೆಂಬ ಪಿಸುಮಾತಿದೆ.
ಅತಿ ಬೇಗನೆ ಬದಲಾಗುತ್ತಿರುವ ಈ ಬಣ್ಣದ ಪ್ರಪಂಚದಲ್ಲಿ ಹೇಗೆ ನಾವು ಮತ್ತು ನಮ್ಮ ಮಕ್ಕಳು ಕಳೆದು ಹೋಗಬಹುದಾದ ಸಂಭವ, ಸಾಧ್ಯತೆಗಳಿವೆ ಎಂಬುದನ್ನು ಪರಿಶೀಲಿಸಬೇಕು. ಆಧ್ಯಾತ್ಮಿಕತೆ ಎಂಬುದು ಬರೀ ಪುಸ್ತಕದ ಉಲ್ಲೇಖಗಳಿಗೆ ಸೀಮಿತವಾಗದಂತೆ ನಿಗಾ ವಹಿಸುವ ಅವಶ್ಯಕತೆ ಹಾಗು ಸವಾಲು ನಮ್ಮ ಮುಂದಿದೆ.
ನಮ್ಮ ಎಷ್ಟೋ ಮಕ್ಕಳು ಇಂದು ಪ್ರಾಪಂಚಿಕ ಆಮಿಷಗಳಿಗೆ ಬಲಿಯಾಗಿದ್ದಾರೆ. ನಮ್ಮದೇ ಆಗುಹೋಗುಗಳ ನಡುವೆ ಅವರಬೇಕು ಬೇಡಗಳನ್ನೇ ನಾವು ಮರೆತಿದ್ದೇವೆ. ಅಂತಹ ಕಳೆದು ಹೋದ ಕುರಿಗಳನ್ನು ಮಂದೆಗೆ ತರುವ ನಿಟ್ಟಿನಲ್ಲಿ ಅತ್ತು ಪ್ರಲಾಪಿಸಿರಿ ಎಂಬ ಕ್ರಿಸ್ತನ ಮಾತುಗಳು ಅಮೂಲ್ಯವಾಗಿವೆ.
ನಮಗೆ ನಿಜವಾಗಿಯೂ ಕಲ್ವಾರಿ ಕ್ರಿಸ್ತನಿಗೆ ಸಾಂತ್ವನ ಹೇಳುವ ಬಯಕೆಯಿದ್ದರೆ ಅದು ನಮ್ಮ ಮಕ್ಕಳನ್ನೂ, ನಮ್ಮನ್ನೂ ಆತನ ಪ್ರೀತಿಗೆ ಸೇವೆಗೆ ಯೋಗ್ಯರನ್ನಾಗಿ ರೂಪಿಸುವುದೇ ಆತನಿಗೆ ನಾವೀಯುವ ಅತಿ ದೊಡ್ಡ ಸಾಂತ್ವನ. ಕ್ರಿಸ್ತನ ಪ್ರತಿ ಹೆಜ್ಜೆಯೂ ನಮ್ಮದೇ ಆಲೋಚನೆಗಳಿಂದ ಕೂಡಿದೆ. ಅತೀವ ನೋವಿನಲ್ಲೂ, ಶಿಲುಬೆಯ ಭಾರ ಲೆಕ್ಕಿಸದೆ ನಮ್ಮದೇ ಚಿಂತೆಯಲ್ಲಿ ಹೆಜ್ಜೆ ಸವೆಸುತ್ತಿದ್ದಾರೆ ಕ್ರಿಸ್ತ. ಈಗ ನಮ್ಮದೇನಿದ್ದರೂ ಆತನೊಂದಿಗೆ ಹೆಜ್ಜೆ ಹಾಕುವುದು, ಕಲ್ವಾರಿ ಪಯಣದ ಜೊತೆಯಾಗುವುದು.
ಪ್ರಾರ್ಥನೆ
ದಯಾಮಯ ಕ್ರಿಸ್ತರೇ, ಬದುಕಿನ ಸತ್ವವೆಲ್ಲ ಇಂಗಿ ಹೋಗಿದೆ. ನಿಮ್ಮ ಪ್ರೇಮಧಾರೆಯ ಸ್ಪರ್ಶ ನಮಗೀಗ ಅತ್ಯವಶ್ಯಕವಾಗಿದೆ. ಬನ್ನಿ ನಮ್ಮ ಹೃದಯಗಳಲ್ಲಿ ನೆಲೆಗೊಂಡು ಬದುಕ ಹಾದಿ ರೂಪಿಸಿ, ಸದಾ ಕೈ ಹಿಡಿದು ಮುನ್ನಡೆಸಿ. ಆಮೆನ್.

ಒಂಬತ್ತನೇ ಸ್ಥಳ .. ಮತ್ತೆ ಬಿದ್ದರೇಸು ...
"ಕೆಳಗಡೆ ಬೀಳುವುದು ಅಪಘಾತವೇ ಸರಿ, ಆದರೆ ಕೆಳಗಡೆಯೇ ಉಳಿಯುವುದು ನಮ್ಮ ನಿರ್ಧಾರ". ಜೀವನದ ಹಾದಿಯಲ್ಲಿ ಒಮ್ಮೆ ಸೋತರೆ ಸಾಕು, ಸೋಲಿಗೆ ಶರಣಾಗುವ ಜನರು ಒಂದೆಡೆಯಾದರೆ, ಪ್ರಯತ್ನದ ಮೊದಲೇ ಸೋಲಿಗೆ ಅಪ್ಪುಗೆ ನೀಡುವ ಜನರು ಇನ್ನೊಂದೆಡೆ ಇರುವ ಈ ಜಗಕ್ಕೆ, ಕಲ್ವಾರಿ ಬೆಟ್ಟದ ಹಾದಿಯಲ್ಲಿ ಕ್ರಿಸ್ತನಿಟ್ಟ ಪ್ರತಿ ಹೆಜ್ಜೆ ಸ್ಫೂರ್ತಿದಾಯಕ, ಸೋತ ಹೃದಯಗಳಿಗೆ ಸಾಂತ್ವನ ಚಿಲುಮೆ.
ಆ ದೀರ್ಘ ನೋವಿನಲ್ಲೂ ಸೈನಿಕರ ಕ್ರೂರ ಚಾಟಿ ಏಟುಗಳ ನಡುವೆಯೂ ಭಾರ ಶಿಲುಬೆಯನ್ನು ಹೊತ್ತುಕೊಂಡು, ಒಂದು ಬಾರಿ ಅಲ್ಲ, ಮೂರು ಬಾರಿ ಕೆಳಗೆ ಬಿದ್ದರೂ ಲೆಕ್ಕಿಸದೆ, ಕ್ರಿಸ್ತ ಎದೆಗುಂದದೆ ಎದ್ದು ನಿಲ್ಲುತ್ತಾರೆ. ತನ್ನ ಶಿಲುಬೆಯನ್ನು ಎತ್ತಿಕೊಂಡು ಕಲ್ವಾರಿ ಬೆಟ್ಟದೆಡೆಗೆ ಹೆಜ್ಜೆಯನ್ನು ಇಡುತ್ತಾರೆ. ಈ ಜಗತ್ತಿನಲ್ಲಿ ಸೋಲದ ಜೀವವ ಎಲ್ಲಾದರೂ ಕಂಡಿರಾ? ಗೆದ್ದ ಪ್ರತಿಯೊಬ್ಬನೂ ಸೋತು ಎದ್ದವನಲ್ಲವೇ? ನಮ್ಮ ಕಚೇರಿಗಳಲ್ಲಿ ಕೆಲಸದ ಪ್ರಮಾಣವನ್ನು ತಡೆಯಲಾರದೆ ಅತಿಯಾದ ಒತ್ತಡವೆಂದು ನೆಪವೊಡ್ಡಿ ಕೆಲಸದಿಂದ ಹಿಂದೇಟು ಹಾಕುವುದು ಸರಿಯೇ? ಶಾಲೆಗಳಲ್ಲಿ ಯಾವುದಾದರೂ ಕಠೀಣ ಕಲಿಕೆಗೆ ಹೆದರಿ ಪರೀಕ್ಷೆಗೆ ಹೋಗದೆ ಇರುತ್ತೀವಲ್ಲ ಅದು ಸರಿಯೇ? ದಾಂಪತ್ಯ ಜೀವನದಲ್ಲಿ ಆಗುವ ಸಣ್ಣಸಣ್ಣ ಜಗಳಕ್ಕೆ ಬೆಟ್ಟದಷ್ಟು ಕೋಪ ಮಾಡಿಕೊಂಡು ವಿಚ್ಛೇದನಕ್ಕೆ ಮುಂದಾಗುತ್ತೇವಲ್ಲ ಅದು ಸರಿಯೇ? ಇವೆಲ್ಲವ ನಾವು ಮನದೊಳಗೆ ಪ್ರಶ್ನಿಸಿಕೊಳ್ಳಬೇಕಾಗಿದೆ. ಕ್ರಿಸ್ತ ಕಲ್ವಾರಿ ಬೆಟ್ಟದಿಂದ ಕೂಗುತ್ತಿರುವುದು ಇದೇ. ನನ್ನಲ್ಲಿ ವಿಶ್ವಾಸವಿಡಿ, ನನ್ನ ಮಕ್ಕಳೇ, ಸೋಲಿಗೆ ಶರಣಾಗದಿರಿ. ನಿಮ್ಮ ಶಿಲುಬೆಯನ್ನು ನಿಮ್ಮ ಜೀವನದಲ್ಲಿ ಹೊತ್ತುಕೊಂಡು ನನ್ನೊಡನೆ ಹೆಜ್ಜೆಹಾಕಿರಿ, ಸನ್ಮಾರ್ಗದೆಡೆಗೆ.
ಪ್ರತಿಯೊಬ್ಬ ಕ್ರೈಸ್ತನು, ದೀಕ್ಷಾಸ್ಥಾನ ಪಡೆದ ಕ್ಷಣದಿಂದಲೇ ಕ್ರಿಸ್ತನ ಅನುಯಾಯಿಯೇ ಸರಿ. ಆತನ ಸುವಾರ್ತೆಯನ್ನು ಈ ಭೂಮಿಯಲ್ಲಿ ಸಾರುವುದೇ ಪ್ರತಿಯೊಬ್ಬನ ಕರ್ತವ್ಯವಾಗಿದೆ. ಸುವಾರ್ತೆ ಸಾರುವುದು ಎಂದಾಕ್ಷಣ, ನಾವುಗಳು ಅದು ಕೇವಲ ಯಾಜಕರು, ಕನ್ಯಾಸ್ರೀಯರು ಹಾಗೂ ಭೋದಕರಿಗೆ ಸೀಮಿತ ಎಂಬ ಒಂದು ತಪ್ಪಾದ ಕಲ್ಪನೆ ಹೊಂದಿದ್ದೇವೆ. ಈ ಸೌಭಾಗ್ಯ ಕೇವಲ ಯಾಜಕರಿಗಾಗಲಿ ಅಥವಾ ಭೋಧಕರಿಗಾಗಲಿ ಸೀಮಿತವಾಗಿಲ್ಲ. ಈ ಸೌಭಾಗ್ಯ ದೀಕ್ಷಾಸ್ಥಾನ ಪಡೆದ ಪ್ರತಿಯೊಬ್ಬ ಕ್ರೈಸ್ತನಿಗೂ ಪ್ರಭುಯೇಸು ನೀಡಿರುವರು. ಹೇಗೆ ನಾವು ಪ್ರಭುಕ್ರಿಸ್ತರ ಬೋಧನೆಗಳನ್ನು ಮತ್ತು ಅವರ ಸಿದ್ದಾಂತಗಳನ್ನು ನಮ್ಮ ಜೀವನಗಳಲ್ಲಿ ರೂಢಿಸಿಕೊಂಡು, ಬೇರೆಯವರಿಗೆ ಹೇಗೆ ಉದಾಹರಣೆಯಾಗಿ ಬದುಕುತ್ತೀವಿ ಎಂಬುದರಲ್ಲಿದೆ ಸುವಾರ್ತೆ ಸಾರುವುದು. ನಮಗೆ ಆತ ನೀಡಿರುವ ಶಿಲುಬೆಗಳನ್ನು ಅಂಜದೆ ಹೇಗೆ ಹೊತ್ತುಕೊಂಡು ನಡೆದು ಉದಾಹರಣೆಯಾಗುತ್ತೇವೋ, ಅದರಲ್ಲಿದೆ ಸುವಾರ್ತೆ ಸಾರುವುದು. ಕ್ರಿಸ್ತನ ಶಿಲುಬೆಹಾದಿ ಕೇವಲ ಒಂದು ಪಯಣವಲ್ಲ ಅದು ಪ್ರತಿಯೊಬ್ಬನ ಜೀವನದಲ್ಲಿ ನಡೆಯುವ ಘಟನೆಗಳ ಬಿಂಬವಾಗಿದೆ. ಕ್ರಿಸ್ತರು ಹೇಗೆ ಶಿಲುಬೆಯನ್ನು ಹೊತ್ತುಕೊಂಡು ಜನಾಂಗಗಳಿಗೆ ಮಾದರಿಯಾದರೋ, ಅಂತೆಯೇ ನಾವುಗಳು ಅನ್ಯರಿಗೆ ಮಾದರಿ ಆಗಬೇಕೆಂಬುವುದೇ ಕ್ರಿಸ್ತನ ಆಶಯ. ಕೇವಲ ಸಣ್ಣಪುಟ್ಟ ತೊಂದರೆಗಳಿಗೆ ಶರಣಾಗುವ ನಾವುಗಳು, ಜೀವನವನ್ನು ಎದುರಿಸಿ ನಿಲ್ಲಲು ಧೈರ್ಯವಿಲ್ಲದ ನಾವುಗಳು, ನಿಜವಾಗಿಯೂ ಕ್ರಿಸ್ತನ ಅನುಯಾಯಿಗಳೇ ಎಂಬುದು ಪ್ರಶ್ನಾರ್ಹ?
ಪ್ರಾರ್ಥನೆ
ಕರುಣಾಳು ದೇವರೆ, ಧೈರ್ಯಹೀನ ಮನಗಳಿಗೆ ಧೈರ್ಯವಾಗಿ ನೀ ಬಾ. ಸೋತ ಜನಗಳಲ್ಲಿ ಸ್ಪೂರ್ತಿಯ ತುಂಬಲು ನೀ ಬಾ, ಕ್ರಿಸ್ತನ ಹಾದಿಯಲ್ಲಿ ನಡೆಯಲು ಬೆಳಕಾಗಿ ನೀ ಬಾ.


ಹತ್ತನೇ ಸ್ಥಳ ..  ಯೇಸುವಿನ ವಸ್ತ್ರವನ್ನು ಕಳಚುತ್ತಾರೆ ..                                 
"ಆತ ಮಾಡಿದ ತ್ಯಾಗಕ್ಕೆ ಬೆಲೆ ಉಂಟೆ?"
ತುಂಬಿದ ಸಭೆಯಲ್ಲಿ ಆದ ಅವಮಾನ, ಹೆಗಲ ಮೇಲೆ ತಾನು ಮಾಡಿದ ಸತ್ಕಾರ್ಯಕ್ಕೆ ಪ್ರತಿಫಲವಾಗಿ ದೊರೆತ ಶಿಲುಬೆಯ ಭಾರ, ಕನಿಕರವಿಲ್ಲದ ಸೈನಿಕರ ಕ್ರೂರ ಚಾಟಿ ಏಟುಗಳು, ಜಗದ ಒಡೆಯನಾದವನಿಗೆ ಮುಳ್ಳಿನ ಕಿರೀಟ, ಫರಿಸಾಯರ ವ್ಯಂಗ್ಯ ಮಾತುಗಳು, ತನ್ನ ಮೈಮೇಲೆ ಇದ್ದ ಬಟ್ಟೆಯನ್ನು ಕಿತ್ತು, ಚೀಟು ಹಾಕಿ ತಮ್ಮಲ್ಲೇ ಹಂಚಿಕೊಳ್ಳುತ್ತಿದ್ದರೂ ಶಾಂತಿಯುತ ಮನದವ, ತನ್ನ ಮನದಲ್ಲಿ ನಮ್ಮೆಲ್ಲರ ಬಗ್ಗೆ ಚಿಂತಿಸುತ್ತಾ ಎಲ್ಲಾ ಅವಮಾನಗಳನ್ನು ಸಹಿಸಿಕೊಂಡು, ನಮ್ರತೆಯಿಂದ ನಿಂತಿರುವನಲ್ಲಾ, "ಆತ ಮಾಡಿದ ತ್ಯಾಗಕ್ಕೆ ಬೆಲೆ ಉಂಟೆ?"
ಸಕಲ ಸೃಷ್ಠಿಯ ಒಡೆಯ, ಅನಾದಿಪುರುಷ, ರಾಜರ ರಾಜ, ಕರುಣೆಯ ದೈವ, ಸರ್ವಶಕ್ತ ದೇವರ ಏಕೈಕ ಪುತ್ರ, ಇಂದು ನಮ್ಮ ಮೇಲಿನ ಪ್ರೀತಿಗೆ ಬೆತ್ತಲಾಗಿ ನಿಂತಿರುವ, ತಾನೇ ಪೋಷಿಸಿದ ಜನರು, ತನಗೆ ಜೈಕಾರ ಹಾಕಿದ ಜನರು ಇಂದು ಕೇಕೆ ಹಾಕಿ ನಗುತ್ತಿದ್ದಾರೆ. ಇವರೆಲ್ಲರ ಮಧ್ಯೆ ನಾಚಿಕೆಯಾದರೂ, ಅವಮಾನವಾದರೂ ಸುಮ್ಮನೆ ಎಲ್ಲವನ್ನು ಸಹಿಸಿಕೊಂಡು ನಿಂತಿರುವ ಕ್ರಿಸ್ತ ಇವೆಲ್ಲ ಏಕೆ ಸಹಿಸಿಕೊಂಡರು ಎಂದು ಒಮ್ಮೆ ಯೋಚಿಸಿದರೆ ಸಾಕು, ಬಹುಶಃ ಕ್ರಿಸ್ತ ಮಾಡಿದ ಪ್ರತಿಯೊಂದು ತ್ಯಾಗಕ್ಕೂ, ನಾವು ಕೊಂಚವಾದರೂ ಬೆಲೆ ತೆರಬಹುದೇನೊ! ಇನ್ನು ಕ್ರಿಸ್ತನ ಶಿಲುಬೆ ಹಾದಿಯ ಹತ್ತನೇ ಸ್ಥಳದಿಂದ ನಾವೇನು ಕಲಿಯಬಹುದು? ಶಿಲುಬೆ ಹಾದಿಯಲ್ಲಿ, ಕರುಣೆಯೇ ಇಲ್ಲದೆ ಹಿಂಸೆ ಕೊಟ್ಟ ಸೈನಿಕರು ಅವರ ಬಟ್ಟೆಯನ್ನು ಕಿತ್ತುಕೊಂಡು, ತಮ್ಮಲ್ಲೇ ಹಂಚಿಕೊಂಡರೂ ಕ್ರಿಸ್ತ ಸೌಮ್ಯ ಮನೋಭಾವದಿಂದ ತಂದೆಯೇ, ಇವರನ್ನು ಕ್ಷಮಿಸು ಎಂದರಲ್ಲ, ಆ ಕ್ಷಮೆಯ ಮನೋಭಾವ ಈ ದ್ವೇಷ ತುಂಬಿರುವ ಜಗಕ್ಕೆ ಅತಿ ಮುಖ್ಯವಾಗಿದೆ. ಕ್ರಿಸ್ತನು ಹೇಗೆ ಪವಿತ್ರ ರಕ್ತ ತುಂಬಿರುವ ದೇಹದಲ್ಲಿ, ಬಟ್ಟೆ ಇಲ್ಲದೆ ಪರಿಶುದ್ದನಾಗಿ ನಿಂತನೋ, ಹಾಗೆಯೇ ನಾವು ಈ ಸ್ವಾರ್ಥ, ಮದ, ಮತ್ಸರ, ಕಾಮುಕತನ, ದ್ವೇಷ ಎಂಬ ಬಟ್ಟೆಯನ್ನು ಕಿತ್ತು ಹಾಕಿ, ಪರಿಶುದ್ಧ ಆತ್ಮದಿಂದ ಅವನೆಡೆಗೆ ನಡೆಯಬೇಕೆಂಬುವುದೇ ಕ್ರಿಸ್ತನ ಆಶಯವಾಗಿದೆ .
ಅಂದು ಕ್ರಿಸ್ತ ನಮ್ಮ ಪಾಪಗಳನ್ನು ಕ್ಷಮಿಸಲು, ತನ್ನ ಬಟ್ಟೆಯನ್ನು ಕಿತ್ತುಕೊಂಡರೂ, ನಮಗಾಗಿ ಆದ ಅವಮಾನವೆಲ್ಲ ಸಹಿಸಿಕೊಂಡರು. ಆದರೆ ಇಂದು ಯಾವುದೇ ಅವಮಾನವಿಲ್ಲದೆ, ಕಿಂಚಿತ್ತೂ ನಾಚಿಕೆಯಿಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಬೆತ್ತಲೆಯಾಗಿ ಬೆತ್ತಲೆಯಾಗಿಸಿ ಬೇರೆಯವರ ಮನಸ್ಸು ಕೆಡಿಸುತ್ತಾರಲ್ಲ, ಅವರಿಗೆ ಅರಿವು ಮೂಡಲು ಇಂದು ನಾವೆಲ್ಲರೂ ಪ್ರಾರ್ಥಿಸಬೇಕಾಗಿದೆ. ಯಾವುದೇ ನಾಚಿಕೆಯಿಲ್ಲದೆ ಅದನ್ನು ನೋಡುವ ನಮ್ಮ ಮನಗಳಿಗೂ ಪ್ರಾರ್ಥಿಸಬೇಕಾಗಿದೆ. ದೇವ ನೀಡಿದ ದೇಹ, ದೇವರ ದೇಗುಲ ಎಂಬುವ ಅರಿವು ನಮಗಾಗಲಿ ಎಂದು ಪ್ರಾರ್ಥಿಸೋಣ.

ಹನ್ನೊಂದನೇ ಸ್ಥಳ 
ಸ್ವಾಮಿ ಯೇಸುವನ್ನು ಶಿಲುಬೆಗೆ ಜಡಿಯುತ್ತಾರೆ"
ಯಾರಿಗೆ ಬೇಕಯ್ಯ ನೋವು? ಯಾರಿಗಾಗಿ ಸಹಿಸಿಕೊಂಡೆ ದೇವ ನೋವು? ಒಂದು ಸಣ್ಣ ಗಾಯಕ್ಕೆ ನರಳುವ ಮನುಜನ ದೇಹವಿದು, ಹೇಗಯ್ಯ ಸಹಿಸಿಕೊಂಡೆ ಮೂಳೆ ಪುಡಿಯಾಗುವ ನೋವು? ದೇವಾಲಯಕ್ಕೆ ಬಂದು ಭಕ್ತಿಯಿಂದ ದೇವರಿಗೆ ಕೈ ಮುಗಿಯಲು ಪ್ರತಿಷ್ಠೆಯೆಂಬ ಭಾವದಿಂದ ಸುಮ್ಮನೆ ನಿಲ್ಲುತ್ತಾರಲ್ಲ ಅವರಿಗಾಗಿ ನೀ ದೊಡ್ಡ ಮೊಳೆಗಳಿಂದ ಹಸ್ತಗಳ ಮೂಳೆ ಪುಡಿ ಪುಡಿಯಾಗುವಂತಹ ನೋವನ್ನು ಸಹಿಸಿಕೊಂಡೆಯಾ? ಪರಮ ಪ್ರಸಾದದ ಮುಂದೆ ಭಕ್ತಿಯಿಂದ ಮೊಣಕಾಲೂರದೆ ಅಹಂಕಾರದಿಂದ ನಿಂತಿರುತ್ತಾರಲ್ಲ, ಅವರಿಗಾಗಿಯೇ ನೀ ಮೊಣಕಾಲು ಕಿತ್ತು ಹೋದರೂ ನೋವು ಸಹಿಸಿಕೊಂಡೆಯಾ? ಬಲಿಪೂಜೆಯ ಸಮಯದಲ್ಲಿ ದೇವಾಲಯದೊಳಗೆ ಬರದೆ ಶೋಕಿಯೆಂಬ ಹುಚ್ಚಾಟದಿಂದ ಹೊರಗಡೆಯೇ ನಿಲ್ಲುತ್ತ, ದೇವರ ಬಳಿಗೆ ಬಾರದ ಕಲ್ಲುಗಳಿಗಾಗಿಯೇ ನೀ ನಿನ್ನ ಪಾದಗಳ ಮೂಳೆ ಪುಡಿಯಾದರೂ ನೋವ ಸಹಿಸಿಕೊಂಡದ್ದು? ನಮ್ಮಂತಹ ಕೃತಜ್ಞತಾ ಭಾವವಿಲ್ಲದವರಿಗೇನಾ ನೀ ನೋವು ಸಹಿಸಿಕೊಂಡಿದ್ದು? ದುಷ್ಟ ಮಾನವರಿಗಾಗಿಯೇ ನಿನ್ನನ್ನು ಶಿಲುಬೆಗೆ ಜಡಿದಿದ್ದು?
ಎಲೈ ಮನುಜ! ಅಗೋ ನೋಡು ಕೈ-ಕಾಲಿಗೆ ಮೊಳೆಗಳನ್ನು ಜಡಿಸಿಕೊಂಡು, ತಲೆ ಮೇಲೆ ಮುಳ್ಳಿನ ಕಿರೀಟವನ್ನು ಧರಿಸಿಕೊಂಡು, ಅರೆಬೆತ್ತಲೆಯಾಗಿ, ರಕ್ತದ ಕಣ್ಣೀರು ಸುರಿಯುತ್ತಿರುವ, ಮೈತುಂಬಾ ಗಾಯಗಳಿರುವ ನನ್ನ ದೇವನ ಒಮ್ಮೆ ನೋಡು. ನಿನಗಾಗಿ ಅಷ್ಟು ಪಾಡು ಪಡುತ್ತಿರುವ ನನ್ನ ಕ್ರಿಸ್ತನ ಒಮ್ಮೆ ನೋಡು. ನೀನೇ ಕುಸಿದು ಬೀಳುವೆ ಪ್ರೀತಿಗೆ. ನೀನೇ ಭಾವುಕನಾಗುವೆ ತ್ಯಾಗಕ್ಕೆ. ಮೊದಲೇ ಕೈ ಕಾಲಿಗೆ ಮೊಳೆಗಳನ್ನು ಜಡಿಸಿಕೊಂಡಿರುವ ಆತನ ಮನಸ್ಸಿಗೆ, ದಯಮಾಡಿ ನಿನ್ನ ಪಾಪಗಳಿಂದ ನೋಯಿಸಬೇಡ. ಏಳು, ನಿನ್ನ ಶಿಲುಬೆಯನ್ನೆತ್ತಿಕೊಂಡು ನಡೆ, ಆತನನ್ನು ಹಿಂಬಾಲಿಸು, ಆತನ ಪ್ರೀತಿಗೆ ಕಿಂಚಿತ್ತಾದರೂ ಪುನಃ ಪ್ರೀತಿ ನೀಡುವುದಾದರೆ ನಡೆ, ಆತನ ಹೆಜ್ಜೆಯಲ್ಲೇ ನಡೆ.
ನಮಗೆ ತಿಳಿದ ಪ್ರಕಾರ ಜಗತ್ತಿನಲ್ಲಿ ಅಪರಾಧಿಗಳ ಕೈಗಳಿಗೆ ಬೇಡಿಗಳನ್ನು ಹಾಕಿ ಬಂಧಿಸುತ್ತಾರೆ. ಆದರೆ ನಮ್ಮ ಮೇಲಿನ ಪ್ರೀತಿಗೆ ಯಾವ ತಪ್ಪುಗಳನ್ನು ಮಾಡದ ದೇವಕುಮಾರನಿಗೆ ಬೇಡಿಗಳಿಂದಲ್ಲ, ಕಠೋರ ಮೊಳೆಗಳ ಬಂಧನ. ಅನಂತವಾಗಿ ನಮ್ಮನ್ನು ಪ್ರೀತಿಸುವ ಕ್ರಿಸ್ತನಿಗೇ ಪರಿಯ ನೋವು ನೀಡಿದ್ದೇವೆಂದರೆ, ಇನ್ನು ನಮ್ಮ ಕುಟುಂಬಗಳ್ಯಾವ ಲೆಕ್ಕ? ಊಹಿಸಿಕೊಳ್ಳಲು ಅಸಾಧ್ಯವಾದ ನಮ್ಮವರ ಮನ ನೋಯಿಸಿದ್ದೇವೆ, ಅತಿ ಚಿಕ್ಕ ಕಾರಣಗಳಿಗೆ ಜರೆದಿದ್ದೇವೆ. ಹೌದು! ಯೋಚಿಸಬೇಕು. ನಮ್ಮ ಕುಟುಂಬದಲ್ಲಿ ಮಾತ್ರವಲ್ಲ, ನಮ್ಮ ಸ್ನೇಹಿತರಿಗೆ, ನಾವು ಕೆಲಸ ಮಾಡುವ ಸ್ಥಳಗಳಲ್ಲಿ ಎಷ್ಟೊ ಬಾರಿ ನಮ್ಮ ಕೆಟ್ಟ ನಡವಳಿಕೆಯಿಂದ ಅವರ ಮನಸ್ಸುಗಳನ್ನು ನೋಯಿಸಿರುತ್ತೇವೆ. ಕೊಂಚ ಸೌಜನ್ಯ ಮತ್ತು ವಿವೇಕದಿಂದ ವರ್ತಿಸಲು ನಾವು ಕಡ್ಡಾಯವಾಗಿ ಕಲಿಯಬೇಕಿದೆ. ಯೇಸು ಪಟ್ಟ ಅಗಾಧ ನೋವಿಗಾಗಿ ನಾವು ಬೇರೆಯವರನ್ನು ನೋಯಿಸದೆ ನಡೆಯಬೇಕಾಗಿದೆ.

ಪ್ರಾರ್ಥನೆ
ಚಂಚಲ ಮನಸ್ಸು, ಅಜ್ಞಾನಿ ಮನಸ್ಸು, ಸೌಜನ್ಯವಿಲ್ಲದ ನಡವಳಿಕೆಯಿಂದ, ನಮ್ಮ ಪಾಪಗಳೆಂಬ ಮೊಳೆಗಳಿಂದ ಯಾರನ್ನೂ ನೋಯಿಸದೆ, ನಿಮ್ಮ ಪ್ರೀತಿಯ ಪರಿಮಳವನ್ನು ಎಲ್ಲೆಡೆಯೂ ಹರಡುವ ಮನೋಭಾವವನ್ನು ನೀಡಿರೆಂದು ಪ್ರಭು ಕ್ರಿಸ್ತರೇ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಹನ್ನೆರೆಡನೇ ಸ್ಥಳ
ಯೇಸು ಶಿಲುಬೆ ಮೇಲೆ ಪ್ರಾಣತ್ಯಾಗ ಮಾಡುತ್ತಾರೆ
ನನ್ನ ದೇವರೇ ನನ್ನ ದೇವರೇ ನನ್ನನ್ನೇಕೆ ಮರೆತೆ" ಎಂದು ನುಡಿದು ಪ್ರಾಣ ಬಿಟ್ಟರು ನನ್ನ ಯೇಸು. ಬಂಡೆಗಳು ಸಿಡಿದವು, ಸೂರ್ಯನು ಕಾಂತಿ ಮುಕ್ತನಾದನು, ಭೂಮಿ ಕಂಪಿಸಿತು ಆದರೆ ನನ್ನ ಮನವು ಕಿಂಚಿತ್ತೂ ಅಳುಕಲಿಲ್ಲ ಏಕೆ?
ಇದಕ್ಕಿಂತ ಮಿಗಿಲಾದ ಪ್ರೀತಿ ಬೇರೆಯಾರಾದರು ನೀಡ್ಯಾರು? ಮನುಜನ ಪಾಪವ ತೊಳೆಯಲು, ತನ್ನದೆಲ್ಲಾ ನೀಡ್ಯಾನ, ತನ್ನ ಪ್ರಾಣವ ನೀಡ್ಯಾನ, ತನ್ನ ಪ್ರೀತಿಯ ಮಕ್ಕಳಿಗೆ ನಿತ್ಯ ಜೀವ ನೀಡಲು, ಶಿಲುಬೆಯ ಮೇಲೆ ಯಾತನೆ ಪಟ್ಟು, ಪ್ರಾಣ ನೀಡ್ಯಾನ. ಆದರೆ ನಾವೇನು ನೀಡಿದ್ದೇವೆ?
ಏನ ಬರೆಯಲಿ ನಾನು? ಏನ ಹೇಳಲಿ ನಾನು? ಏನೇ ಬರೆದರೂ ವ್ಯರ್ಥ!!! ಏನೇ ಹೇಳಿದರೂ ವ್ಯರ್ಥ!!! ನನ್ನ ಪ್ರಭು ಯಾತನೆ ಪಟ್ಟು, ಪ್ರಾಣಕೊಟ್ಟರು, ಕಿಂಚಿತ್ತು ಚಿಂತಿಸದೆ, ಕಿಂಚಿತ್ತೂ ಮಾನವೀಯತೆ ಇಲ್ಲದೆ. ಕಿಂಚಿತ್ತು ಕನಿಕರವಿಲ್ಲದೆ, ಪದೇ ಪದೇ ಪಾಪವ ಮಾಡುತ್ತಿರುವ ಮನುಜರು ನಾವು, ಇನ್ನು ನಾ ಬರೆದರೆ ಯಾರು ತಾನೆ ಕೇಳ್ಯಾರು? ನೀನೇ ಒಮ್ಮೆ ಕಣ್ಣುಗಳ ಮುಚ್ಚಿ, ಶಿಲುಬೆಯ ಮೇಲೆ ನಿಂತಿರುವ ನನ್ನ ಕ್ರಿಸ್ತನ ನೋಡು, ಯಾತನೆ ನೋಡು. ನಿಜವಾದ ಮನಸ್ಸು ನಿನಗಿದ್ದರೆ, ತಲೆ ಬಾಗುವೆ, ಬೇರೆಯವರ ಮಾತುಗಳು ಬೇಡವೇ ಬೇಡ.
ಕ್ರಿಸ್ತ ನಮಗಾಗಿ ಶಿಲುಬೆಯ ಮೇಲೆ ಪ್ರಾಣ ಬಿಟ್ಟಿದ್ದು ನಮ್ಮ ಪಾಪಗಳನ್ನು ಕ್ಷಮಿಸಲು ಅಲ್ಲವೇ? ಕ್ರಿಸ್ತನ ಅನುಯಾಯಿಗಳಾದ ನಾವು ಮಾಡಬೇಕಾದದ್ದು, ಪರರ ಪಾಪಗಳನ್ನು ಕ್ಷಮಿಸುವುದೇ ಅಲ್ಲವೆ? ಆದರೆ ನಾವು ಅದನ್ನು  ಮಾಡುತ್ತಿದ್ದೇವೆಯೇ? ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳ ಬೇಕಾಗಿದೆ. ನಮ್ಮ ಮನೆಗಳಲ್ಲಿ ಆಗುವ ಸಣ್ಣ ಪುಟ್ಟ ತಪ್ಪುಗಳನ್ನೆ ಕ್ಷಮಿಸದೆ, ಪರಸ್ಪರ ಮಾತನಾಡದೆ ನಡೆಯುವ ಮನುಜರು ನಾವು, ಇನ್ನು ಆತನ ಅನುಯಾಯಿಗಳಾಗಲು ಸಾಧ್ಯವೇ?? ಕ್ಷಮಿಸೋಣ ಒಂದು ಬಾರಿಯಲ್ಲ ಏಳುನೂರು ಏಪ್ಪತ್ತೇಳು ಬಾರಿ ಕ್ಷಮಿಸಿ ಬಾಳೋಣ.
ಪ್ರಭು ಯೇಸುವಿನ ಪ್ರಾಣಾರ್ಪಣೆ ನೆನೆಯುವ ಸಮಯದಲ್ಲಿ ನಮಗಾಗಿ ಗಡಿಯಲ್ಲಿ, ಕೊರೆಯುವ ಚಳಿಯಲ್ಲಿ, ನಮ್ಮ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿರುವ, ನಮ್ಮ ದೇಶ ಕಂಡ ಆನೇಕ ವೀರಯೋಧರ ಆತ್ಮ ಶಾಂತಿಗಾಗಿ ನಾವು ಇಂದು ಪ್ರಾರ್ಥಿಸಬೇಕಾಗಿದೆ, ತಮ್ಮ ಕುಟುಂಬಗಳ ಆರ್ಥಿಕ ಸ್ಥಿತಿಗಾಗಿ ಮತ್ತು ಕುಟುಂಬದ ಶಾಂತಿಗಾಗಿ ನಾವು ಇಂದು ಪ್ರಾರ್ಥಿಸಬೇಕಿದೆ.

ಪ್ರಾರ್ಥನೆ
ನಾನೇ ಸರ್ವವೂ ಎಂಬ ಮನೋಭಾವ ನೀಗಿ, ನಾವು ಕ್ರಿಸ್ತನಲ್ಲಿ ಒಂದೇ ಕುಟುಂಬವೆಂಬ ಭಾವ ಮೂಡಿ ಒಬ್ಬರನೊಬ್ಬರು ಕ್ಷಮಿಸಿ ಬಾಳುವ ಮನಸ್ಸು ನೀಡು ದೇವ.

ಹದಿಮೂರನೇ ಸ್ಥಳ
"ಮಾತೆಯ ಮಡಿಲಲ್ಲಿ"
ಇಂದು ಆಕೆ ಭೂಸ್ವರ್ಗಗಳ ರಾಣಿ, ಸಕಲ ದೂತರ ಮತ್ತು ಸಂತರ ರಾಣಿ. ಆದರೆ ಅಂದು ಆಕೆ ಪಟ್ಟ ನೋವು, ಮನಸ್ಸಿಗೆ ಆದ ಹಿಂಸೆ ಬಹುಶಃ ಪ್ರಪಂಚದಲ್ಲಿ ಯಾವ ತಾಯಿಗೂಆಗಿರದ ನೋವು. ಅಂದು ಆಕೆಯ ಮುದ್ದು ಕಂದ ಸತ್ತು ಹೆಣವಾಗಿ ತನ್ನ ಮಡಿಲಲ್ಲಿ ಮಲಗಿದಾಗ ಆದ ನೋವು ಹೇಳಲಸಾಧ್ಯ. ಪವಿತ್ರಾತ್ಮರಿಂದ ವರವಾಗಿ ಬಂದ ಮುದ್ದುಕಂದನನ್ನು ತನ್ನ ಕರಗಳಲ್ಲಿ ಎತ್ತಿ ಆಡಿಸಿ ಪಳಪಳನೆ ಹೊಳೆಯುತ್ತಿದ್ದ ಪುಟ್ಟ ಕಣ್ಣುಗಳ ನೋಡಿದ ತಾಯಿಗೆ, ರಕ್ತಸಿಕ್ತ ಕಣ್ಣುಗಳ ನೋಡಿ ಎಷ್ಟು ಕಣ್ಣೀರು ಬಂದಿರಬಹುದು ಅಲ್ಲವೆ?ತನ್ನ ಪುತ್ರನ ಮೃದುವಾದ ಕೈ ಕಾಲುಗಳನ್ನು ಮುಟ್ಟಿದ್ದ ಆಕೆಗೆ, ಬರೀ ಗಾಯಗಳಿಂದ ಸೀಳಿಹೋದ ಕೈ ಕಾಲುಗಳನ್ನು ಮುಟ್ಟಲು ಎಷ್ಟು ವೇದನೆಯಾಗಿರಬಹುದು? ತನ್ನ ಪುತ್ರನುಮೊದಲು ಉಸಿರಾಡಿದ ಕ್ಷಣದಿಂದಲೂ ಪ್ರೀತಿಯಿಂದ ನೋಡಿದ ತಾಯಿ, ತನ್ನ ಪುತ್ರ ಉಸಿರಿಲ್ಲದೆ ಮಡಿಲಲ್ಲಿ ಮಲಗಿದ ಕ್ಷಣದಲ್ಲಿ ಆಕೆಗೆ ಆಗಿರುವ ನೋವು ನಾವುಊಹಿಸಬಲ್ಲೆವೇನು? ಆದರೂ ತಾಯಿ ಎದೆಗುಂದಲಿಲ್ಲ, ತಾನೇ ಮುಂದೆ ನಿಂತು ಶಿಷ್ಯರಿಗೆ ಶಕ್ತಿಯಾಗಿ ನಿಲ್ಲುತ್ತಾಳೆ.
ನಮ್ಮೆಲ್ಲರ ಒಳಿತಿಗಾಗಿ ಕ್ರಿಸ್ತ ಎಷ್ಟು ತ್ಯಾಗ ಮಾಡಿದರೋ ಮಾತೆ ಮರಿಯಳು ಕೂಡ ಅಷ್ಟೇ ತ್ಯಾಗ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. "ಇಗೋ ನಾನು ದೇವರ ದಾಸಿ,ನಿಮ್ಮ ವಚನದಂತೆ ನನಗಾಗಲಿ" ಎಂದು ನುಡಿದ ಕ್ಷಣದಿಂದ ತಮ್ಮ ಜೀವನವನ್ನೇ ದೇವರಿಗೋಸ್ಕರ ಮುಡಿಪಾಗಿಟ್ಟರು. ಕಲ್ವಾರಿ ಬೆಟ್ಟದಲ್ಲಿ ಯೇಸುವಿಗೆ ಬೆಂಬಲವಾಗಿ ನಿಂತರು, ಶಿಷ್ಯರಿಗೆ ಶಕ್ತಿಯಾಗಿ ಜೊತೆಯಲ್ಲಿದ್ದರು. ಇದೆಲ್ಲ ಮುಗಿದು ಎರಡು ಸಾವಿರ ವರ್ಷಗಳಾದರೂ ಮಾತೆ ಯೇಸುವಿನೆಡೆಗೆ ಮನುಜರ ಮನಗಳನ್ನು ಒಯ್ಯುವುದನ್ನು ನಿಲ್ಲಿಸಿಲ್ಲ. ಅನೇಕ ಬಾರಿ ಪ್ರಪಂಚದ ವಿವಿಧ ಭಾಗಗಳಲ್ಲಿ ಭಕ್ತರಿಗೆ ದರ್ಶನ ನೀಡಿ ಭಕ್ತರಿಗೆ ಸಹಾಯವಾಗುತ್ತಲೇ ಇದ್ದಾರೆ, ಮಾತೆ ಪಟ್ಟ ಕಷ್ಟಕ್ಕೆ, ಮಾಡಿದ ಎಲ್ಲಾ ತ್ಯಾಗಕ್ಕೆ, ತೋರಿದಅತಿಯಾದ ಪ್ರೀತಿಗಾಗಿ, ನಾವು ಸಹ ಕ್ರಿಸ್ತನಿಗೆ ನಮ್ಮ ಜೀವನವನ್ನು ಅರ್ಪಿಸುವುದೇ ನಾವು ಆಕೆಗೆ ನೀಡುವ ಅತ್ಯುನ್ನತ ಗೌರವ.
ಮಾತೆ ಮಡಿಲಲ್ಲಿ ಕ್ರಿಸ್ತರು ಉಸಿರಿಲ್ಲದೆ ಮಲಗಿದ ಕ್ಷಣವನ್ನು ನೆನೆಯುವ ಸಮಯದಲ್ಲಿ, ನಮ್ಮ ಸಮಾಜದಲ್ಲಿ ತಾವು ಬದುಕಿರುವಾಗಲೇ ತಮ್ಮ ಮಕ್ಕಳ ಮರಣವನ್ನು ನೋಡಿನೋವಲ್ಲಿ ಬಳಲಿ, ಇಂದು ತಮಗಾಗಿ ಯಾರೂ ಇಲ್ಲದೆ ಅನಾಥರಾಗಿ ಬದುಕಿರುವ ತಾಯಂದಿರಿಗಾಗಿ ಇಂದು ಮೌನದಿಂದ ಪ್ರಾರ್ಥಿಸೋಣ. ಅವರು ತಮಗೆ ಬೇಕಾದಆಸರೆಯನ್ನು ಕ್ರಿಸ್ತನಲ್ಲಿ ಕಂಡು, ಇರುವಷ್ಟು ದಿನ ನೆಮ್ಮದಿಯಾಗಿ ಬಾಳಲೆಂದು ಪ್ರಾರ್ಥಿಸೋಣ. ಇನ್ನೂ ದೌರ್ಭಾಗ್ಯವೆಂದರೆ ಪುತ್ರರಿದ್ದರೂ, ಯಾರೂ ಇಲ್ಲದಂತೆ ಬದುಕುವುದು.ಯಾರು ತಮ್ಮನ್ನು ಪ್ರೀತಿಯಿಂದ ಬೆಳೆಸಿ, ಪೋಷಿಸಿ, ಇಂದು ಉತ್ತಮ ಸ್ಥಿತಿಗೆ ತಂದಿರುತ್ತಾರೋ ಅವರನ್ನೇ ತಾಯಿಯೆಂಬ ಕನಿಕರವಿಲ್ಲದೆ ಮನೆಗಳಿಂದ ಆಚೆ ಹಾಕುವಂತಹ ಕಲ್ಲುಮನಸ್ಸಿನ ಮಕ್ಕಳಿಗಾಗಿ ಇಂದು ಪ್ರಾರ್ಥಿಸಬೇಕಿದೆ. ಯಾವ ಮಕ್ಕಳು ತಮ್ಮ ಕೆಟ್ಟ ಚಟಗಳಿಂದ, ಕೆಟ್ಟ ನಡವಳಿಕೆಗಳಿಂದ ತಮ್ಮ ತಾಯಂದಿರನ್ನು ನೋಯಿಸುತ್ತಿರುವರೋ ಅಂಥವರಿಗಾಗಿ ನಾವು ಪ್ರಾರ್ಥಿಸಬೇಕಿದೆ.
ಪ್ರಾರ್ಥನೆ:-
ಮರುಕುವುಳ್ಳ ಮಹಾ ಕನ್ನಿಕೆಯೆ, ಕ್ರಿಸ್ತನ ಹಾದಿಯಲ್ಲಿ ನಮ್ಮನ್ನು ಬೆಳಕಾಗಿ ಮುನ್ನಡೆಸ ಬನ್ನಿರಿ. ನಮ್ಮ ಚಂಚಲ ಮನಸ್ಸಿಗೆ ಧೈರ್ಯವಾಗಿರಲುಎಂದಿಗೂ ಜೊತೆಯಲಿ ಬನ್ನಿರಿ. ನಿಮ್ಮ ಮಡಿಲಲ್ಲಿ ಮಗುವಾಗಿ ಬದುಕುವ ಭಾಗ್ಯವ ನೀಡಿರಿ.

ಹದಿನಾಲ್ಕನೇ ಸ್ಥಳ
 "ಸಮಾಧಿಯಲ್ಲಿ ಯೇಸು"
ಸತ್ಯಕ್ಕೆ ಎಂದಾದರೂ ಸಾವೇ? ಪ್ರಭು ಯೇಸುವನ್ನು ಸಮಾಧಿಯಲ್ಲಿ ಇರಿಸಿದಾಗ ಸತ್ತದ್ದು ಸತ್ಯವಲ್ಲ. ಮೃತ ಹೊಂದಿದ್ದು ನಮ್ಮೆಲ್ಲರ ಪಾಪ, ಶಿಲುಬೆಯ ರೂಪದಲ್ಲಿ ತನ್ನ ಮೇಲೆ ಹೊತ್ತುಕೊಂಡ ನಮ್ಮ ಪಾಪ. ಸತ್ಯವು ಕೆಟ್ಟತನವನ್ನೆಲ್ಲ ಸಮಾಧಿಯಲ್ಲೆ ಬಂಧಿಸಿ ವಿಜಯೋತ್ಸವದಿಂದ, ಸತ್ಯಕ್ಕೆಂದೂ ಸಾವಿಲ್ಲ ಎಂಬುದನ್ನು ಸಾಬೀತು ಪಡಿಸಿತು.
ಒಬ್ಬ ವ್ಯಕ್ತಿ ಎಷ್ಟೇ ಶ್ರೇಷ್ಠನಾದರೂ ಒಂದು ದಿನ ಮರಣ ಹೊಂದಲೇಬೇಕೆಂಬುದು ನಾವು ಅರಿತಿದ್ದೇವೆ. ಮರಣ ಹೊಂದಿದ ಪ್ರತಿಯೊಬ್ಬನೂ ಕ್ರಿಸ್ತನ ಶಿಲುಬೆ ಯಾತನೆ ಫಲವಾಗಿ ದೊರೆತ ನಿತ್ಯ ಜೀವದ ಭಾಗ್ಯದಿಂದಾಗಿ, ಸತ್ತರೂ ಕ್ರಿಸ್ತನಲ್ಲಿ ಜೀವಿಸುತ್ತಾನೆ ಎಂಬುದ ಅರಿತಿರುವ ನಾವು, ಅದಕ್ಕೆ ಸಿದ್ಧರಾಗಿ ಜೀವನ ನಡೆಸುತ್ತಿಲ್ಲವೇಕೆ? ಪಾಪದ ಹಾದಿಯಲ್ಲೇ ಮಗ್ನರಾಗಿದ್ದೇವಲ್ಲ ಏಕೆ? ಆತ ಮಾಡಿರುವ ತ್ಯಾಗ ಕಣ್ಣೆದುರೆ ಇದ್ದರೆ ನಮ್ಮ ಮನಸ್ಸುಗಳು ಏಕೆ ಆತನೆಡೆಗೆ ಹೋಗುತ್ತಿಲ್ಲ? ಪ್ರತಿ ವರುಷ ಶಿಲುಬೆ ಹಾದಿಯಲ್ಲಿ ಮೊಣಕಾಲೂರಿ ಪ್ರಾರ್ಥಿಸುತ್ತೇವೆ. ಆದರೆ ದೇವಾಲಯದಿಂದ ಹೊರಗೆ ಬಂದ ಮೇಲೆ ಅದೇ ಪಾಮರ ಬದುಕು ಜೀವಿಸುತ್ತಿದ್ದೇವೆ ಏಕೆ? ಆತ ಹೊತ್ತಿರುವ ಶಿಲುಬೆಯ ಭಾರ ಕಡಿಮೆ ಮಾಡುವ ಮನಸ್ಸಿಲ್ಲವೇ? ಆತನ ತಲೆ ಮೇಲಿರುವ ಪಾಪದ ಮುಳ್ಳಿನ ಕಿರೀಟದಿಂದ, ಆತನನ್ನು ವಿಮುಕ್ತಿಗೊಳಿಸಲು ಆಸೆಯಿಲ್ಲವೆ? ನಮ್ಮ ಅಂತರಂಗದಲ್ಲಿರುವ ಕೆಟ್ಟ ಯೋಚನೆಗಳಿಂದ ಆತನನ್ನು ಬೆತ್ತಲಾಗಿಸಿರುವ ನಾವು ಇನ್ನು ಎಷ್ಟು ಕಾಲ ನಮ್ಮಈ ದುರ್ನಡತೆಯಿಂದ ಆತನನ್ನು ಬೆತ್ತಲಾಗಿಸುತ್ತಿರುತ್ತೇವೆ? ಪ್ರಭು ಯೇಸು ಹೇಗೆ ಸಮಾಧಿಯಲ್ಲಿ ನಮ್ಮೆಲ್ಲರ ಪಾಪವನ್ನು ಸುಟ್ಟರೋ, ಸಮಯವನ್ನು ನೆನೆಯುವಾಗ ನಾವು ಸಹ ನಮ್ಮ ಕೆಟ್ಟತನವನ್ನೆಲ್ಲ ಸುಡೋಣ.
ಪ್ರಭು ಯೇಸು ಶಿಲುಬೆಯನ್ನು ಹೊರಬೇಕಾಗಿ ಬಂದರೂ ಅವರು ಯಾರನ್ನೂ ಪ್ರಶ್ನಿಸಲಿಲ್ಲಶಿಲುಬೆಯ ಮೇಲೆ ಪ್ರಾಣ ತ್ಯಾಗ ಮಾಡಬೇಕಾದಾಗಲೂ ಒಂದು ಕ್ಷಣಕ್ಕೂ ಅಂಜಿಕೆಯ ಭಾವ ಮೂಡಲಿಲ್ಲ. ಜಗದ ಒಡೆಯನಾದರೂ, ಸಮಾಧಿಯಲ್ಲಿ ಇರಿಸುವರು ಎಂಬುದನ್ನು ತಿಳಿದಿದ್ದರೂ ಏನನ್ನು ಪ್ರಶ್ನಿಸಲಿಲ್ಲ. ಏಕೆಂದರೆ ಪ್ರಭು ಯೇಸುವಿಗೆ ತನ್ನ ಪಿತನಲ್ಲಿ ಸಂಪೂರ್ಣ ವಿಶ್ವಾಸವಿತ್ತು. ತನಗೆ ಇಂದು ಏನೇ ಯಾತನೆ ನೀಡುತ್ತಿದ್ದರೂ ಅದು ತನ್ನ ತಂದೆಯ ಮಹಿಮೆಗೆ ಎಂಬುದು ಆತನಿಗೆ ತಿಳಿದಿತ್ತು. ಅಂತೆಯೇ ಯೇಸು ಪುನರುತ್ಥಾನರಾದರು. ನಾವು ಸಹ ಅಂತಹ ನಂಬಿಕೆಯನ್ನು ಪಿತನಲ್ಲಿರಿಸ ಬೇಕಾಗಿದೆ. ಇಂದು ನಮಗೆ ಎಂತಹುದೇ ಕಷ್ಟವಿದ್ದರೂ ಅದು ನಮ್ಮ ಒಳಿತಿಗೆ ಎಂಬುದನ್ನು ನಾವು ಅರಿತುಕೊಳ್ಳ ಬೇಕಿದೆ.
ಪ್ರಭು ಯೇಸು ಇಂದು ಕಳೆದುಹೋದ ಕುರಿಮರಿಗಾಗಿ ಕಾಯುತ್ತಿದ್ದಾರೆ. ಕಳೆದುಹೋದ ಕುರಿಮರಿ ಬೇರಾರೂ ಅಲ್ಲ ಅದು ನೀನೆ!
 ಪ್ರಾರ್ಥನೆ:-

ನಮ್ಮ ಮನದೊಳಗೆ ನಿನ್ನ ಬೆಳಕ ಬಿಂಬಿಸು ದೇವ, ಅಂತರಂಗದಲ್ಲಿ ಅಡಗಿರುವ ನನ್ನ ಸ್ವಾರ್ಥ, ದ್ವೇಷ, ಮದ, ಮತ್ಸರವೆಲ್ಲ ಸುಟ್ಟು ಹೋಗಲಿ. ನಿನ್ನಂತಹ ಪ್ರಶಾಂತ ಮನಸ್ಸು ನಮ್ಮದಾಗಲಿ.

  • ಅಜಯ್ ರಾಜ್ ಮತ್ತು ಸುಜಯ್ ಕಾಣಿಕ ರಾಜ್

ಶಿಲುಬೆಹಾದಿ-4(ಸಚಿತ್ರ )

No comments:

Post a Comment