Thursday, 14 February 2019

ಸಂಸೋನನ ತಾಯಿ

ಸಂಸೋನನ ತಾಯಿಯನ್ನು ಬೈಬಲ್ಲಿನಲ್ಲಿ "ಆ ಸ್ತ್ರೀ" ಎಂದು   ಸಂಬೋಧಿಸಿದೆಯೇ ಹೊರತು ಆಕೆಯ ಹೆಸರು ಎಲ್ಲಿಯೂ ಕಾಣಬರುವುದಿಲ್ಲ. 1 ಪೂರ್ವಕಾಲವೃತ್ತಾಂತ 4:3 ರಲ್ಲಿ ಬರುವ   ಲೆಲ್ಪೋನಿಯಳೇ ಸಂಸೋನನ ತಾಯಿಯೆಂದು ಕೆಲವರು ಊಹಿಸಿದ್ದಾರೆ ಆದರೂ ಅದು ಸಾಬೀತಾಗಿಲ್ಲ. ಹಾಗಾಗಿ, ಸಂಸೋನನ ತಾಯಿ ಅನಾಮಿಕಳಾಗಿಯೇ ಉಳಿಯುತ್ತಾಳೆ.
ಮಾನೋಹನ  ಪತ್ನಿಯಾದ ಈ ಸ್ತ್ರೀಗೆ ಎಷ್ಟೋ ವರ್ಷಗಳು ಮಕ್ಕಳಾಗಿರಲಿಲ್ಲ. ಹನ್ನಳಂತೆ ಇವಳೂ ಸತತ ಪ್ರಾರ್ಥನೆ ಮಾಡುತ್ತಿದ್ದು, ಅದರ ಫಲಶ್ರುತಿಯಾಗಿ, ಕರ್ತನ ದೂತನು ಅವಳಿಗೆ ಪ್ರತ್ಯಕ್ಷವಾಗಿ, ”ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ” ಎಂದು ಆಶ್ವಾಸನೆ ನೀಡುತ್ತಾನೆ. ಅಷ್ಟೇ ಅಲ್ಲ, ಜೊತೆಗೆ, ಆ ಮಗುವನ್ನು ಹೇಗೆ ಸಾಕಬೇಕು ಎಂತಲೂ ಆದೇಶಿಸುತ್ತಾನೆ. ”ನೀನು ಮದ್ಯಪಾನ ಮಾಡಬಾರದು. ನಿಷಿದ್ಧ ಪದಾರ್ಥಗಳನ್ನು ತಿನ್ನಬಾರದು. ಆ ಮಗುವಿಗೆ ಕ್ಷೌರ ಮಾಡಿಸಬಾರದು, ಅವನು ದೇವರಿಗೆ ಪ್ರತಿಷ್ಠಿತವಾದವನು, ಇಸ್ರಾಯೆರ ನಾಯಕನಾಗಿರುವವನು. ”ಎಂದೂ ಆ ದೂತನು ಹೇಳಿದನು.
ಆ ಸ್ತ್ರೀ, ಸಂತೋಷದಿಂದ ಮನೆಗೆ ಓಡಿಬಂದು, ಗಂಡನಿಗೆ ವಿಷಯವನ್ನೆಲ್ಲಾ ತಿಳಿಸಿದಳು. ಅದಕ್ಕೆ ಅವನು, ”ಆತನು ಎಲ್ಲಿಂದ ಬಂದ, ಆತನ ಹೆಸರೇನು ಎಂದೆಲ್ಲಾ ನೀನು ಕೇಳಲಿಲ್ಲವೇ? ಇರಲಿ, ಆ ದೇವದೂತನು ಹೇಳಿದಂತೆಯೇ ಮಾಡೋಣ” ಎಂದನು. ಮತ್ತು, ತನ್ನ ಪ್ರಾರ್ಥನೆಯಲ್ಲಿ “ಕರ್ತನೆ, ಆ ದೇವಪುರುಷನನ್ನು ಇನ್ನೊಮ್ಮೆ ಕಳುಹಿಸಿಕೊಡು“ ಎಂದು ಬೇಡಿಕೊಂಡನು.
ಅದರಂತೆಯೇ, ಆ ಸ್ತ್ರೀಯೂ ತಮ್ಮ ಹೊಲದಲ್ಲಿರುವಾಗ, ದೇವದೂತನು ಮತ್ತೊಮ್ಮೆ ದರ್ಶನವಿತ್ತನು. ಅವಳು ತುಂಬಾ ಸಂತೋಷದಿಂದ ಗಂಡನ ಬಳಿಗೆ ಓಡಿಬಂದು, ಅವನನ್ನೂ ಹೊಲಕ್ಕೆ ಕರೆತಂದಳು. ದೂತನು, ಮಾನೋಹನಿಗೂ ಆ ಮಗುವಿನ ವಿಷಯದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ವಿವರಿಸುತ್ತಾನೆ. ದೂತನಿಗೆ, ಹೋತಮರಿಯ ಅಡುಗೆ ಮಾಡಿ ಬಡಿಸಬೇಕೆಂಬ ತನ್ನ ಆಸೆಯನ್ನು ವ್ಯಕ್ತಪಡಿಸಿದಾಗ, ಆತನು, ”ಅದನ್ನು ಕರ್ತನಿಗೆ ಅರ್ಪಿಸು“, ಎನ್ನುತ್ತಾನೆ. ಆತನ ಹೆರನ್ನು ಕೇಳಿದಾಗ, ”ಅದು ಆಶ್ಚರ್ಯಕರವಾದದ್ದು” ಎಂದು ಹೇಳಿ, ಹೋಮದ ನಂತರ ಆ ಅಗ್ನಿಜ್ವಾಲೆಯೊಳಗೆ ಆಕಾಶಕ್ಕೇರಿ  ಹೋದನು.
ಅವಳು ಗರ್ಭಿಣಿಯಾಗಿ ಮಗನನ್ನು ಹೆತ್ತು, ಅವನಿಗೆ “ಸಂಸೋನ” ಎಂದು ಹೆಸರಿಡುತ್ತಾರೆ. ದೇವದೂತನು ಹೇಳಿದ್ದನ್ನೆಲ್ಲಾ ಚಾಚೂ ತಪ್ಪದೆ ಪಾಲಿಸುತ್ತಾರೆ. ದೇವರ ಆಶೀರ್ವಾದ ಆ ಹುಡುಗನ ಮೇಲಿತ್ತು. ಅವನು ಸ್ನಾನಿಕ ಯೋಹಾನನಂತೆ ನಜರೇಯನಾದನು.
ಸಂಸೋನನ ವಿಕ್ಷಿಪ್ತ ವ್ಯಕ್ತಿತ್ವವು ತಾಯಿಯ ಮನಸ್ಸನ್ನು ಬಹಳ ನೋಯಿಸುತ್ತಿತ್ತು. ಆದರೆ, ಅವನು ಇಸ್ರಾಯೇಲ್ಯರಿಗೆ ಇಪ್ಪತ್ತು ವರ್ಷ  ನ್ಯಾಯಸ್ಥಾಪಕನಾಗಿದ್ದದ್ದು ಅವಳಲ್ಲಿ ಧನ್ಯತಾಭಾವ ತರುತ್ತಿತ್ತು. ಅವನ ಅಗಾಧ ದೈಹಿಕ ಶಕ್ತಿ ಅವಳನ್ನು ಬೆರಗುಗೊಳಿಸುತ್ತಿತ್ತು. ಆದರೆ, ಅವನು ಫಿಲಿಷ್ಟಿಯರನ್ನು ಪದೇಪದೇ ಸೋಲಿಸುತ್ತಿದ್ದುದರಿಂದ ಅವರು ಅವನನ್ನು ಕೊಲ್ಲಲು ಕಾಯುತ್ತಿದ್ದರು
ಸಂಸೋನನ ದ್ರೋಹಿ ಹೆಂಡತಿಯು, ಅವನ ಶಕ್ತಿಯು ಅವನ ಕೂದಲಿನಲ್ಲಿದೆ ಎಂದು ಅವನಿಂದ ತಿಳಿದುಕೊಂಡು, ಅದನ್ನು ಶತ್ರುಗಳಿಗೆ ಹೇಳಿದಳು, ಜೊತೆಗೆ, ಅವನು ನಿದ್ರಿಸುವಾಗ, ಸೊಂಪಾಗಿ ಬೆಳೆದಿದ್ದ ಅವನ ಕೂದಲನ್ನು ಬೋಳಿಸಿದಳು. ಕೂಡಲೇ, ಅವನ ಶಕ್ತಿ ಉಡುಗಿತು, ಅವನು ಸೆರೆಯಾದ. ಶತ್ರುಗಳು ಅವನ ಕಣ್ಣುಗಳನ್ನು ಕಿತ್ತರು.

ಕೆಲವು ದಿನಗಳ ನಂತರ, ವಿನೋದಕ್ಕಾಗಿ ಅಂಧ ಸಂಸೋನನನ್ನು ಶತ್ರುಗಳು ತಮ್ಮ ದೊಡ್ಡ ಸಮಾರಂಭಕ್ಕೆ ಎಳೆತಂದರು. ಅಷ್ಟರಲ್ಲಿ, ಅವನ ಕೂದಲು ಸ್ವಲ್ಪ ಬೆಳೆದಿತ್ತು. ಶಕ್ತಿಗೂಡಿಸಿಕೊಂಡು, ದೇವರನ್ನು ಪ್ರಾರ್ಥಿಸಿ, ಅಲ್ಲಿನ ಎರಡು ಮುಖ್ಯ ಸ್ತಂಭಗಳನ್ನು ಬಲವಾಗಿ ಹಿಡಿದು ಅಲುಗಾಡಿಸಿದಾಗ, ಆ ಭವ್ಯಭವನ ಕುಸಿದು ಮೂರುಸಾವಿರ ಮಂದಿಯೂ ಸಂಸೋನನ ಜೊತೆಯಲ್ಲಿ ಸತ್ತರು. ಪಾಪ, ಇದೆಲ್ಲವನ್ನೂ ಆ ತಾಯಿ ಹೇಗೆ ಸಹಿಸಿಕೊಂಡಳೋ? ಅವಳ ಹೆಸರು ನಮ್ಮ ಬೈಬಲ್ಲಿನಲ್ಲಿ ಯಾಕಿಲ್ಲ?

No comments:

Post a Comment