ಬಿಳಿ/ಗುರು/ಸಂತ
ಅತನಾಸಿಯಸ್ (ಧರ್ಮಾ ಮತ್ತುಧ.ಪಂ) (ಸ್ಮರಣೆ)
ಕೀರ್ತನೆ - 34: 1, 8, 15, 17, 18-19
1ನೇ ವಾಚನ - ಪ್ರೇ.ಕಾ 5: 27-33
ಕೀರ್ತನೆ - 34: 1, 8, 15, 17, 18-19
ಶುಭಸಂದೇಶ - ಯೊವಾನ್ನ 3: 31-36
1ನೇ ವಾಚನ - ಪ್ರೇ.ಕಾ 5: 27-33
27ಪ್ರೇಷಿತರನ್ನು ಕರೆತಂದು ನ್ಯಾಯಸಭೆಯ ಮುಂದೆ ನಿಲ್ಲಿಸಲಾಯಿತು. ಪ್ರಧಾನ ಯಾಜಕನು ಅವರನ್ನು ಉದ್ದೇಶಿಸಿ, 28“ಆ ವ್ಯಕ್ತಿಯ ಹೆಸರಿನಲ್ಲಿ ಉಪದೇಶ ಮಾಡಕೂಡದು ಎಂದು ನಿಮಗೆ ಕಟ್ಟಪ್ಪಣೆ ಮಾಡಿದೆವು. ಆದರೂ ನೀವು ಮಾಡಿರುವುದೇನು? ನಿಮ್ಮ ಬೋಧನೆ ಜೆರುಸಲೇಮ್ ಆದ್ಯಂತ ಹಬ್ಬಿಹರಡಿದೆ. ಅಷ್ಟು ಮಾತ್ರವಲ್ಲ, ಆ ವ್ಯಕ್ತಿಯ ಕೊಲೆಗೆ ನಮ್ಮನ್ನೇ ಹೊಣೆಗಾರರನ್ನಾಗಿ ಮಾಡಬೇಕೆಂದಿರುವಿರಿ,” ಎಂದು ಆಪಾದಿಸಿದನು. 29ಅದಕ್ಕೆ ಪ್ರತ್ಯುತ್ತರವಾಗಿ ಪೇತ್ರ ಮತ್ತು ಉಳಿದ ಪ್ರೇಷಿತರು, “ನಾವು ವಿಧೇಯರಾಗಬೇಕಾದದ್ದು ದೇವರಿಗೆ, ಮಾನವರಿಗಲ್ಲ. 30ನೀವು ಶಿಲುಬೆಗೇರಿಸಿ ಕೊಂದು ಹಾಕಿದ ಯೇಸುಸ್ವಾಮಿಯನ್ನು ನಮ್ಮ ಪಿತೃಗಳ ದೇವರು ಜೀವಕ್ಕೆ ಎಬ್ಬಿಸಿದ್ದಾರೆ. 31ದೇವರು ಅವರನ್ನು ತಮ್ಮ ಬಲಪಾಶ್ರ್ವಕ್ಕೆ ಏರಿಸಿ ಮುಂದಾಳನ್ನಾಗಿಯೂ ಲೋಕೋದ್ಧಾರಕನನ್ನಾಗಿಯೂ ನೇಮಿಸಿದ್ದಾರೆ. ಇಸ್ರಯೇಲಿನ ಜನರು ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಿ ಪಾಪಕ್ಷಮೆಯನ್ನು ಪಡೆಯಲು ಇವರ ಮುಖಾಂತರ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಾರೆ. 32ಈ ಘಟನೆಗಳಿಗೆ ನಾವು ಸಾಕ್ಷಿಗಳು; ನಾವು ಮಾತ್ರವಲ್ಲ, ದೈವೇಚ್ಛೆಯಂತೆ ನಡೆಯುವವರಿಗೆ ದೇವರು ದಯಪಾಲಿಸುವ ಪವಿತ್ರಾತ್ಮ ಅವರು ಕೂಡ ಸಾಕ್ಷಿಯಾಗಿದ್ದಾರೆ,” ಎಂದನು. 33ಇದನ್ನು ಕೇಳಿದ ಸಭಾಸದಸ್ಯರು ಕ್ರೋಧಭರಿತರಾಗಿ ಪ್ರೇಷಿತರನ್ನು ಕೊಲ್ಲಬೇಕೆಂದಿದ್ದರು.
1ಪ್ರಭುವನು ನಾ ಕೊಂಡಾಡುವೆ ಎಲ್ಲ ಕಾಲದೊಳು / ಆತನ ಸ್ತುತಿ ಸದಾ ಇಹುದು ನನ್ನ ಬಾಯೊಳು //
2ಪ್ರಭುವಿನಲ್ಲಿದೆ ನನ್ನ ಮನದಭಿಮಾನ / ದೀನರಿದನು ಕೇಳಿ, ಪಡೆಯಲಿ ಸುಮ್ಮಾನ //
3ಬನ್ನಿ, ಕೊಂಡಾಡುವ ಪ್ರಭು ದೇವನನು / ಘನಪಡಿಸೋಣ ಅವನ ಶ್ರೀನಾಮವನು //
4ಬೇಡಿಕೊಳ್ಳಲು ಕೊಟ್ಟನಾತ ಸದುತ್ತರವನು / ಭಯಭೀತಿಯಿಂದೆನ್ನನು ಮುಕ್ತ ನಾಗಿಸಿಹನು //
5ಆತನತ್ತ ತಿರುಗಿದ ಮುಖ ಅರಳುವುದು / ಲಜ್ಜೆಯಿಂದೆಂದಿಗು ಕುಂದಿಹೋಗದು //
6ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು / ಸರ್ವಾಪತ್ತಿನಿಂದವನು ಮುಕ್ತಗೊಂಡನು //
7ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು / ಕಾಯುವನು ಪ್ರಭುವಿನ ದೂತನೆ ಬಂದಿಳಿದು //
8ಸವಿದು ನೋಡು ಪ್ರಭುವಿನ ಮಾಧುರ್ಯವನು / ಆತನನು ಆಶ್ರಯಿಸಿಕೊಂಡವನು ಧನ್ಯನು //
9ದೇವಜನರೆ, ನಿಮಗಿರಲಿ ಪ್ರಭುವಿನ ಭಯಭಕುತಿ / ಅಂಥವರಿಗಿರದು ಯಾವ ಕುಂದುಕೊರತೆಯ ಭೀತಿ //
10ಯುವ ಕೇಸರಿಗೆ ಇರಬಹುದು ಹಸಿವು, ದಾಹ / ಪ್ರಭುವನು ಅರಸುವವರಿಗಿರದು ಒಳಿತಿನ ಅಭಾವ //
11ಬನ್ನಿ ಮಿತ್ರರೇ, ಆಲಿಸಿರೀ ಮಾತನು / ಕಲಿಸುವೆನು ನಾ ನಿಮಗೆ ದೇವ ಭಯವನು //
12ಎಲೈಮಾನವ, ಬಲುದಿನ ಬಾಳಲು ಬಯಸುವೆಯಾ? / ಆಯುರಾರೋಗ್ಯ ಭಾಗ್ಯವನು ಆಶಿಸುವೆಯಾ?//
13ಕಾದಿಡು ನಾಲಿಗೆಯನು ಕೇಡನು ಆಡದಂತೆ / ಬಿಗಿಯಿಡು ತುಟಿಯನ್ನು ಕುಟಿಲವನು ನುಡಿಯದಂತೆ //
14ಬಿಡು ಕೆಟ್ಟದನು, ಮಾಡು ಒಳಿತನು / ಹುಡುಕು ಶಾಂತಿಯನು, ಬೆನ್ನಟ್ಟು ಅದನು //
15ಸಜ್ಜನರನು ಪ್ರಭು ಕಟಾಕ್ಷಿಸುವನು / ಅವರ ಮೊರೆಗಾತ ಕಿವಿಗೊಡುವನು //
16ದುರ್ಜನರಿಗಾದರೋ ಪ್ರಭು ವಿಮುಖನು / ಅವರ ಹೆಸರನು ಧರೆಯಿಂದ ಅಳಿಸುವನು //
17ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ / ನೆರವೀವನವರ ಕಷ್ಟನಿವಾರಣೆಗೆ //
18ಸನಿಹದಲ್ಲಿಹನು ಪ್ರಭು ಭಗ್ನ ಹೃದಯಿಗಳಿಗೆ / ಉದ್ಧಾರಕನಾತನು ಮನಸ್ಸು ಕುಗ್ಗಿದವರಿಗೆ //
19ಸಜ್ಜನನಿಗೊದಗುವ ಸಂಕಟಗಳು ವಿಪರೀತ / ಪ್ರಭುವೆಲ್ಲವನು ನಿವಾರಿಸುವುದು ನಿಶ್ಚಿತ //
20ಕಾಪಾಡುವನು ಅವನೆಲಬುಗಳೆಲ್ಲವನ್ನೂ / ಮುರಿಯಬಿಡನು ಪ್ರಭು ಅವುಗಳ ಲ್ಲೊಂದನ್ನೂ //
21ದುರ್ಜನರೆಲ್ಲರೂ ತುತ್ತಾಗುವರು ತಮ್ಮ ಕೇಡಿಗೆ / ಸಜ್ಜನರ ಶತ್ರುಗಳು ಗುರಿಯಾಗುವರು ದಂಡನೆಗೆ //
22ತನ್ನ ದಾಸರನು ಉದ್ಧಾರಮಾಡದಿರನು ಪ್ರಭು / ತನ್ನ ಶರಣರೊಳೊಬ್ಬರನು ದಂಡಿಸನಾ ವಿಭು //
ಶುಭಸಂದೇಶ - ಯೊವಾನ್ನ 3: 31-36
31“ಮೇಲಿಂದ ಬಂದವನೇ ಎಲ್ಲರಿಗಿಂತ ಮೇಲಾದವನು. ಇಹಲೋಕದಿಂದ ಬಂದವನು ಆದರೋ ಈ ಲೋಕಕ್ಕೆ ಸೇರಿದವನು; ಅವನು ಲೌಕಿಕವಾದುದನ್ನೇ ಹೇಳುವವನು. ಸ್ವರ್ಗದಿಂದ ಬಂದವನಾದರೋ ಸರ್ವರಿಗೂ ಶ್ರೇಷ್ಠನು. 32ಆತನು ತಾನು ಕಂಡದ್ದನ್ನೂ ಕೇಳಿದ್ದನ್ನೂ ಕುರಿತೇ ಸಾಕ್ಷಿಹೇಳುತ್ತಾನೆ. ಆದರೂ ಆತನ ಮಾತನ್ನು ಯಾರೂ ಅಂಗೀಕರಿಸುವುದಿಲ್ಲ. 33ಆತನ ಮಾತನ್ನು ಅಂಗೀಕರಿಸುವವನು ದೇವರು ಸತ್ಯಸ್ವರೂಪಿ ಎಂದು ಸಾದೃಶ್ಯಪಡಿಸುತ್ತಾನೆ. 34ದೇವರು ಕಳುಹಿಸಿದಾತನು ದೇವರ ಮಾತುಗಳನ್ನೇ ಆಡುತ್ತಾನೆ. ಏಕೆಂದರೆ ದೇವರು ಆತನಿಗೆ ಪವಿತ್ರಾತ್ಮ ಅವರನ್ನು ಪೂರ್ಣವಾಗಿ ಕೊಟ್ಟಿರುತ್ತಾರೆ. 35ಪಿತ ಪುತ್ರನನ್ನು ಪ್ರೀತಿಸಿ ಸರ್ವಸ್ವವನ್ನೂ ಆತನ ಕೈಗೆ ಕೊಟ್ಟಿದ್ದಾರೆ. 36ಪುತ್ರನಲ್ಲಿ ವಿಶ್ವಾಸವಿಟ್ಟವನು ನಿತ್ಯಜೀವವನ್ನು ಪಡೆದಿರುತ್ತಾನೆ; ಪುತ್ರನಿಗೆ ಶರಣಾಗದವನು ನಿತ್ಯಜೀವವನ್ನು ಸವಿಯನು. ಅವನು ದೇವರ ಕೋಪಾಗ್ನಿಗೆ ಗುರಿಯಾಗುತ್ತಾನೆ,” ಎಂದು ಉತ್ತರಕೊಟ್ಟನು.
ಚಿಂತನೆ
ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಮಾತಿದೆ. ಬಲ್ಲವನಾದ ಸಂತ ಯೋವಾನ್ನ ಪದಪುಂಜಗಳ ಜೊತೆ ಆಟವಾಡಿ ವಾಕ್ಯ ರಚನೆ ಮಾಡಿದಂತಿದೆ ಇಂದಿನ ಶುಭ ಸಂದೇಶ. ಸಾಮಾನ್ಯವಾಗಿ ಒಮ್ಮೆ ಓದಿದರೆ ಅರ್ಥವಾಗದು ಈ ವಚನ. ಇದನ್ನು ಧ್ಯಾನಾಸಕ್ತರಾಗಿ ಆಧ್ಯಾತ್ಮಿಕತೆಯ ಕಣ್ಣುಗಳಿಂದ ಪಠಿಸಿದರೆ ಅದು ಅರ್ಥವಾಗುತ್ತದೆ. ಇಂದಿನ ವಾಚನದ ತಿರುಳು ವಿಶ್ವಾಸ. ವಿಶ್ವಾಸ ಇಟ್ಟವನು ನಿತ್ಯಜೀವನವನ್ನು ಪಡೆಯುತ್ತಾನೆ ಎಂಬುದಾಗಿದೆ. ನಮ್ಮ ಜೀವನದಲ್ಲಿ ಅನೇಕ ಘಟನೆಗಳು ಸಂಭವಿಸುತ್ತವೆ. ಆದರೆ ಅದು ಏಕೆ ಸಂಭವಿಸುತ್ತದೆ? ಹೇಗೆ ಸಂಭವಿಸುತ್ತದೆ ಎಂಬುದು ನಮಗೆ ಅರಿಯಲು ಅಸಾಧ್ಯ. ಕಾರಣ ವಿಶ್ವಾಸದ ಕಣ್ಣುಗಳಿಂದ ನಾವು ಕಾಣದೆ ಇರುವುದು. ವಿಶ್ವಾಸವಿರುವ ಒಂದು ಸೂತ್ರ ವಿದ್ದರೆ ಸಾಕು ಜೀವನಕ್ಕೆ, ಜೀವಕ್ಕೆ ಇರುವ ಶ್ವಾಸಕ್ಕೆ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ಈ ಸಾರ್ಥಕತೆಗೆ ನಮ್ಮ ಜೀವ ಪುಟಿಯಬೇಕು ಮತ್ತು ಅದಕ್ಕಾಗಿ ಶ್ರಮಿಸಬೇಕು. ಅದಕ್ಕೇ ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೇಳಿದ್ದು ನಿಮ್ಮಲ್ಲಿ ಸಾಸಿವೆ ಕಾಳಿನ ವಿಶ್ವಾಸವಿದ್ದರೆ ಇಲ್ಲಿರುವ ಮರವನ್ನು ಕಿತ್ತು ಸಮುದ್ರಕ್ಕೆ ಹೋಗಿ ಎಂದು ಆಜ್ಞಾಪಿಸಿದರೆ ಅದು ಹಾಗೆ ಆಗುತ್ತದೆ ಎಂದು. ಇಂತಹ ವಿಶ್ವಾಸ ನಮ್ಮದಾಗಬೇಕು ಇದನ್ನೇ ಕ್ರಿಸ್ತರು ಕೂಡ ಬಯಸುವುದು.
ಆತ್ಮಾವಲೋಕನ :
- ಎಲ್ಲವನ್ನೂ ವಿಶ್ವಾಸದ ಕಣ್ಣುಗಳಿಂದ ನೋಡುತ್ತೇವೆಯೇ?
- ನಮ್ಮಲ್ಲಿ ಶ್ವಾಸವಿದೆ ಆದರೆ ಶ್ವಾಸವನ್ನು ನೀಡಿದ ಜನಕನ ಮೇಲೆ ನಾವು ವಿಶ್ವಾಸವನ್ನು ಇಟ್ಟಿದ್ದೇವೆಯೇ?
- ನಮ್ಮ ವಿಶ್ವಾಸದಿಂದ ಮರವನ್ನಲ್ಲ, ಸಣ್ಣ ಸಾಸಿವೆ ಕಾಳನ್ನು ಅಲ್ಲಾಡಿಸ ಬಹುದೇ?
ಸಹೋ. ವಿನಯ್ ಕುಮಾರ್, ಚಿಕ್ಕಮಗಳೂರು ಧರ್ಮಾಕ್ಷೇತ್ರ
No comments:
Post a Comment