Tuesday, 30 April 2019

3 ಮೇ 2೦19

ಕೆಂಪು/ಶುಕ್ರ/ಸಂತ ಫಿಲಿಪ್ ಮತ್ತು ಯಾಕೋಬ (ಪ್ರೇ) ಹಬ್ಬ

1ನೇ ವಾಚನ - 1 ಕೊರಿಂಥ 15, 1-8
1ಪ್ರಿಯ ಸಹೋದರರೇ, ನಾನು ನಿಮಗೆ ಬೋಧಿಸಿದ ಶುಭಸಂದೇಶವನ್ನು ನೆನಪಿಗೆ ತಂದುಕೊಳ್ಳಿರಿ. ನೀವು ಅದನ್ನು ಸ್ವೀಕರಿಸಿದ್ದೀರಿ. ಅದರಲ್ಲಿ ನೆಲೆಯಾಗಿ ನಿಂತಿದ್ದೀರಿ2ನಾನು ನಿಮಗೆ ಶುಭಸಂದೇಶವೆಂದು ತಿಳಿಸಿದ ಸಂಗತಿಯನ್ನು ದೃಢವಾಗಿ ವಿಶ್ವಾಸಿಸಿದರೆ ನೀವು ಜೀವೋದ್ಧಾರವನ್ನು ಪಡೆಯುವಿರಿ. ಇಲ್ಲವಾದರೆ ನಿಮ್ಮ ವಿಶ್ವಾಸ ನಿರರ್ಥಕವಾದೀತು3ನಾನು ಪಡೆದುಕೊಂಡದ್ದನ್ನು ಮುಖ್ಯವಾದುದು ಎಂದೆಣಿಸಿ ನಿಮಗೆ ಒಪ್ಪಿಸಿದ್ದೇನೆ. ಅದು ಯಾವುದೆಂದರೆ, ಪವಿತ್ರಗ್ರಂಥದಲ್ಲಿ ಹೇಳಿರುವ ಪ್ರಕಾರ ಕ್ರಿಸ್ತಯೇಸು ನಮ್ಮ ಪಾಪಗಳ ಪರಿಹಾರಕ್ಕಾಗಿ ಪ್ರಾಣತ್ಯಾಗ ಮಾಡಿದರು4ಅವರನ್ನು ಭೂಸ್ಥಾಪನೆ ಮಾಡಲಾಯಿತು. ಅದೇ ಗ್ರಂಥದ ಪ್ರಕಾರ ಮೂರನೆಯ ದಿನ ಅವರು ಪುನರುತ್ಥಾನ ಹೊಂದಿದರು5ಅನಂತರ ಕೇಫನಿಗೂ ಹನ್ನೆರಡು ಮಂದಿಗೂ ಕಾಣಿಸಿಕೊಂಡರು6ತರುವಾಯ ಒಂದೇ ಸಮಯದಲ್ಲಿ ಐನೂರಕ್ಕೂ ಹೆಚ್ಚಿನ ಮಂದಿ ಸಹೋದರರಿಗೆ ಪ್ರತ್ಯಕ್ಷರಾದರು. ಅವರಲ್ಲಿ ಕೆಲವರು ಸತ್ತುಹೋಗಿದ್ದರೂ ಬಹು ಮಂದಿ ಇಂದಿಗೂ ಬದುಕಿದ್ದಾರೆ7ಅದಾದ ಮೇಲೆ ಯಕೋಬನಿಗೂ ಅನಂತರ ಪ್ರೇಷಿತರೆಲ್ಲರಿಗೂ ಕಾಣಿಸಿಕೊಂಡರು8ಕಟ್ಟಕಡೆಗೆ ದಿನ ತುಂಬುವ ಮೊದಲೇ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡರು.
           
ಕೀರ್ತನೆ - 19:  1-4       
1ಆಕಾಶಮಂಡಲ ಸಾರುತಿದೆ ದೇವರ ಮಹಿಮೆಯನು / ತಾರಾಮಂಡಲ ತೋರುತಿದೆ ದೇವರ ಕೈಕೃತಿಗಳನು //
2ದಿನವು ಮರುದಿನಕೆ ಮಾಡುತಿದೆ ಪ್ರಕಟಣೆಯನು | ರಾತ್ರಿ ಮರುರಾತ್ರಿಗೆ ನೀಡುತಿದೆ ಪ್ರಚಾರವನು ||
3ಅವುಗಳಿಗೆ ಮಾತಿಲ್ಲ; ಅವುಗಳಿಗೆ ಶಬ್ದವಿಲ್ಲ / ಅವುಗಳ ಸ್ವರವಂತೂ ಕೇಳಿ ಬರುವುದಿಲ್ಲ //
4ಆದರೂ ಅವುಗಳ ಧ್ವನಿರೇಖೆ ಹರಡಿದೆ ಬುವಿಯಾದ್ಯಂತ / ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ //

ಶುಭಸಂದೇಶ - ಯೊವಾನ್ನ 14: 6-14
6ಅದಕ್ಕೆ ಯೇಸು, “ಮಾರ್ಗವೂ ಸತ್ಯವೂ ಜೀವವೂ ನಾನೇ. ನನ್ನ ಮುಖಾಂತರ ಬಾರದ ಹೊರತು ಯಾರೂ ಪಿತನ ಬಳಿಗೆ ಬರಲಾರರು7ನೀವು ನನ್ನನ್ನು ಅರಿತವರಾಗಿದ್ದರೆ ನನ್ನ ಪಿತನನ್ನು ಕೂಡ ಅರಿಯುತ್ತಿದ್ದಿರಿ. ಈಗಿನಿಂದ ಅವರನ್ನು ನೀವು ಅರಿತವರಾಗಿದ್ದೀರಿ ಹಾಗೂ ಕಂಡೂ ಇದ್ದೀರಿ,” ಎಂದು ನುಡಿದರು8ಆಗ ಫಿಲಿಪ್ಪನು, “ಪ್ರಭೂ, ನಮಗೆ ಪಿತನನ್ನು ತೋರಿಸಿ; ಅಷ್ಟೇ ಸಾಕು,” ಎಂದನು9ಅದಕ್ಕೆ ಉತ್ತರವಾಗಿ ಯೇಸು, “ನಾನು ಇಷ್ಟುಕಾಲ ನಿಮ್ಮೊಡನೆ ಇದ್ದರೂ ನಾನು ಯಾರೆಂಬುದನ್ನು ನೀನು ಅರಿತುಕೊಳ್ಳಲಿಲ್ಲವೆ? ನನ್ನನ್ನು ನೋಡಿದವನು ಪಿತನನ್ನೇ ನೋಡಿದವನಾಗಿದ್ದಾನೆ. ಹೀಗಿರುವಾಗ, ಫಿಲಿಪ್ಪನೇ, ‘ನಮಗೆ ಪಿತನನ್ನು ತೋರಿಸಿಎಂದು ಹೇಗೆ ಕೇಳುತ್ತೀ10ನಾನು ಪಿತನಲ್ಲಿ ಇದ್ದೇನೆ. ಪಿತನು ನನ್ನಲ್ಲಿ ಇದ್ದಾರೆ. ಇದನ್ನು ನೀನು ವಿಶ್ವಾಸಿಸುವುದಿಲ್ಲವೇ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುತ್ತಿಲ್ಲ. ಪಿತನೇ ನನ್ನಲ್ಲಿದ್ದುಕೊಂಡು ತಮ್ಮ ಕಾರ್ಯವನ್ನು ಸಾಧಿಸುತ್ತಾರೆ11ನಾನು ಪಿತನಲ್ಲಿ ಇದ್ದೇನೆ, ಪಿತನು ನನ್ನಲ್ಲಿ ಇದ್ದಾರೆ,’ ಎನ್ನುವ ನನ್ನ ಮಾತುಗಳನ್ನು ವಿಶ್ವಾಸಿಸಿರಿ; ಇಲ್ಲವೇ, ನಾನು ಸಾಧಿಸಿದ ಸುಕೃತ್ಯಗಳ ನಿಮಿತ್ತದಿಂದಾದರೂ ವಿಶ್ವಾಸಿಸಿರಿ12ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನನ್ನಲ್ಲಿ ವಿಶ್ವಾಸವುಳ್ಳವನು ನಾನು ಸಾಧಿಸುವ ಕಾರ್ಯಗಳನ್ನು ಆತನೂ ಸಾಧಿಸುವನು. ಅಷ್ಟೇ ಏಕೆ, ಅವುಗಳಿಗಿಂತಲೂ ಮಹತ್ತಾದುವುಗಳನ್ನು ಸಾಧಿಸುವನು. ಏಕೆಂದರೆ ನಾನು ಪಿತನ ಬಳಿಗೆ ಹೋಗುತ್ತೇನೆ13ಇದಲ್ಲದೆ ನೀವು ನನ್ನ ಹೆಸರಿನಲ್ಲಿ ಕೇಳಿಕೊಳ್ಳುವುದನ್ನೆಲ್ಲಾ ಮಾಡುತ್ತೇನೆ. ಹೀಗೆ ಪಿತನಿಗೆ ಪುತ್ರನಲ್ಲಿ ಮಹಿಮೆ ಉಂಟಾಗುವುದು14ಹೌದು, ನನ್ನ ಹೆಸರಿನಲ್ಲಿ ನೀವು ಏನನ್ನು ಕೇಳಿದರೂ ನಾನು ಅದನ್ನು ಮಾಡಿಯೇ ತೀರುವೆನು15ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ ನನ್ನ ಆಜ್ಞೆಗಳನ್ನು ಕೈಗೊಂಡು ನಡೆಯುವಿರಿ16 ನಾನೂ ಪಿತನನ್ನು ಕೇಳಿಕೊಳ್ಳುವೆನು; ಅವರು ನಿಮಗೆ ಬೇರೊಬ್ಬ ಪೋಷಕರನ್ನು ಕೊಡುವರು. ಇವರು ನಿಮ್ಮೊಡನೆ ಯಾವಾಗಲೂ ಇರುವರು

ಚಿಂತನೆ
ವಾರವಿಡೀ ಶಿಷ್ಯರಿಗೆ ಯೇಸುಸ್ವಾಮಿ ವಿಶ್ವಾಸದ ಪಾಠವನ್ನು ಕಲಿಸುತ್ತಿದ್ದಾರೆ ಎಂಬುದು ನಮಗೆ ಕಾಣಿಸುತ್ತದೆ. ನಾವು ಶಾಲೆಯಲ್ಲಿ ನೋಡುತ್ತೇವೆ ಪರೀಕ್ಷೆ ಹತ್ತಿರವಾದಾಗ ನಿಧಾನವಾಗಿ ಕಲಿಯುವ ಮಕ್ಕಳಿಗೆ ಎಂದು ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಇದೇ ರೀತಿ ಯೇಸು ಸ್ವಾಮಿ ಕೂಡ ತಮ್ಮ ಶಿಷ್ಯರಿಗೆ ಇಂತದೇ ಒಂದು ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಇಲ್ಲಿ ಬಹುಶಃ ಎಲ್ಲರೂ ಸ್ಲೋ ಲೋನರ್ಸ್ ಎಂದು ಕಾಣುತ್ತದೆ. ಎಲ್ಲರೂ ಯೇಸು ಸ್ವಾಮಿ ಜೊತೆ ಇದ್ದು ಅವರನ್ನು ತಿಳಿದರೂ ಕೂಡ ಮತ್ತೆ ಮತ್ತೆ ಅವರ ಇರುವಿಕೆಯ ಬಗ್ಗೆ ಶಿಷ್ಯರು ಪ್ರಶ್ನೆಯನ್ನು ಕೇಳುತ್ತಿದ್ದರು. ಪ್ರೀತಿ ಎಂಬ ಶಾಲೆಯಲ್ಲಿ  ಯೇಸುಸ್ವಾಮಿ ಎನ್ನುವ ಗುರು ವಿಶ್ವಾಸವೆಂಬ ಪಾಠವನ್ನು ಕಲಿಸುತ್ತಿದ್ದಾರೆ ಇಂದು. ಆದರೆ ಇದನ್ನು ತಿಳಿಯದ ಮುಗ್ಧ ಶಿಷ್ಯರು ಸ್ವಾಮಿ ನಮಗೆ ಪಿತನನ್ನು ತೋರಿಸಿ ಅಷ್ಟೇ ಸಾಕು ಎಂದು ಫಿಲಿಪ್ಪ ಕೇಳುತ್ತಾನೆ. ಫಿಲಿಪ್ಪನ ಇಂತಹ ಪ್ರಶ್ನೆಗೆ ಯೇಸು ಸ್ವಾಮಿ ದೊಡ್ಡ ಉತ್ತರವನ್ನು ನೀಡುತ್ತಾರೆ ಯೋವಾನ್ನ 14:6 " ಮಾರ್ಗವುಸತ್ಯವು, ಜೀವವೂ ನಾನೇ" ಎಂದು. ಅದಕ್ಕೆ ಯೇಸು ಸ್ವಾಮಿ ತನ್ನ ಮತ್ತು ತಂದೆಯ ಅನ್ಯೋನ್ಯತೆಯ ಸಂಬಂಧದ ಪರಿ ತಿಳಿಸುತ್ತಾರೆ, ಕಾರಣ ಅವರಿಬ್ಬರೂ ಒಬ್ಬರು. ಇದು ಲೆಕ್ಕಚಾರ ಮಾಡುವ ಕಣ್ಣುಗಳಿಗೆ ಕಾಣುವುದಿಲ್ಲ. ಅದನ್ನು ಬಿಟ್ಟು ವಿಶ್ವಾಸದ ಕಣ್ಣುಗಳಿಗೆ ಮಾತ್ರ ಕಾಣಲು ಸಾಧ್ಯ. ಇದನ್ನೇ ಮುಂದೆ ಯೇಸು ಸ್ವಾಮಿ ನನ್ನಲ್ಲಿ ವಿಶ್ವಾಸ ಉಳ್ಳವನು ನಾನು ಸಾಧಿಸುವ ಕಾರ್ಯಗಳನ್ನು ಆತನು ಸಾಧಿಸುವನು ಎಂದು ಹೇಳುತ್ತಾರೆ. ಹೀಗೆ ಹೇಳಿ ಯೇಸು ಸ್ವಾಮಿ ವಿಶ್ವಾಸವಿರುವ ಯಾರಿಗೂ ಬಂಪರ್ ಬಹುಮಾನವನ್ನು ನೀಡುತ್ತಾರೆ. ಬಹುಮಾನ ಮೂಲ - ವಿಶ್ವಾಸ. ಇದು ನಮ್ಮದಾಗಬೇಕು ಅಷ್ಟೇ.    

ಆತ್ಮಾವಲೋಕನ    

  1. ಜೀವನವೆಂಬ ಜಂಜಾಟದಲ್ಲಿ ಸಿಲುಕಿ ನಾನು ಯೇಸು ಸ್ವಾಮಿಯನ್ನು ಕಾಣುವುದನ್ನು ಮರೆತಿದ್ದೇನೆಯೇ
  2. ಪ್ರೀತಿಯೆಂಬ ಶಾಲೆಯಲ್ಲಿ ಯೇಸು ಸ್ವಾಮಿ ಎಂಬ ಗುರು ವಿಶ್ವಾಸವೆಂಬ ಪಾಠ ಮಾಡಿದರೆ ನಾನು ಏನು ಮಾಡುತ್ತಿದ್ದೇನೆ?  
  3. ಯೇಸು ಸ್ವಾಮಿ ಸಾಧಿಸಿದ ಕಾರ್ಯಗಳಲ್ಲಿ  ನಾನು ಒಂದನ್ನಾದರೂ ಮಾಡಬಹುದೇ?   
  
ಸಹೋ. ವಿನಯ್ ಕುಮಾರ್, ಚಿಕ್ಕಮಗಳೂರು ಧರ್ಮಾಕ್ಷೇತ್ರ    

No comments:

Post a Comment