Friday, 19 April 2019

23 ಏಪ್ರಿಲ್ 2019

ಬಿಳಿ/ಮಂಗಳ/ಪಾಸ್ಖ ಹಬ್ಬದ ಅಷ್ಟಮಿಯ ಮೂರನೇ ದಿನ    
1ನೇ  ವಾಚನ  -  ಪ್ರೇ.ಕಾ  236-41   
ಕೀರ್ತನೆ - 33: 4-5, 18-2೦, 22          
ಶುಭಸಂದೇಶ - ಯೊವಾನ್ನ 2೦: 11-18
ಐಚ್ಛಿಕ  ಸ್ಮರಣೆ  -  ಸಂತ  ಜಾರ್ಜ್  (.ಸಾ)        

1ನೇ  ವಾಚನ  -  ಪ್ರೇ.ಕಾ  2:  36-41   
36: “ಇಸ್ರಯೇಲಿನ ಜನರೆಲ್ಲರಿಗೆ ಇದು ನಿಸ್ಸಂದೇಹವಾಗಿ ತಿಳಿದಿರಲಿ: ನೀವು ಶಿಲುಬೆಗೇರಿಸಿದ ಯೇಸುಸ್ವಾಮಿಯನ್ನೇ ದೇವರು ಪ್ರಭುವನ್ನಾಗಿಯೂ ಅಭಿಷಿಕ್ತ ಲೋಕೋದ್ಧಾರಕನನ್ನಾಗಿಯೂ ನೇಮಿಸಿದ್ದಾರೆ.”
37: ಇದನ್ನು ಕೇಳಿದ ಜನರ ಹೃದಯದಲ್ಲಿ ಅಲಗು ನೆಟ್ಟಂತಾಯಿತು. ಅವರು ಪ್ರೇಷಿತರನ್ನು ಉದ್ದೇಶಿಸಿ, “ಸಹೋದರರೇ, ಈಗ ನಾವು ಮಾಡಬೇಕಾದುದು ಏನು?” ಎಂದು ಕೇಳಿದರು.
38: ಅದಕ್ಕೆ ಪೇತ್ರನು, “ನಿಮ್ಮಲ್ಲಿ ಪ್ರತಿ ಒಬ್ಬನೂ ಪಶ್ಚಾತ್ತಾಪಪಟ್ಟು, ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗಲಿ; ಯೇಸುಕ್ರಿಸ್ತರ ನಾಮದಲ್ಲಿ ದೀಕ್ಷಾಸ್ನಾನವನ್ನು ಪಡೆಯಲಿ. ಇದರಿಂದ ನೀವು ಪಾಪಕ್ಷಮೆಯನ್ನು ಪಡೆಯುವಿರಿ; ದೇವರ ವರವಾದ ಪವಿತ್ರಾತ್ಮರನ್ನು ಹೊಂದುವಿರಿ.
39: ವಾಗ್ದಾನವನ್ನು ನಿಮಗೆ ಮಾತ್ರವಲ್ಲ, ನಿಮ್ಮ ಸಂತತಿಗೂ ದೂರ ಇರುವ ಎಲ್ಲರಿಗೂ ಮತ್ತು ಸರ್ವೇಶ್ವರನಾದ ದೇವರು ತಮ್ಮತ್ತ ಆಹ್ವಾನಿಸುವ ಪ್ರತಿಯೊಬ್ಬನಿಗೂ ಮಾಡಲಾಗಿದೆ,” ಎಂದನು.
40: ಪೇತ್ರನು ಅವರಿಗೆ ಹಲವಾರು ವಿಧದಲ್ಲಿ ಮನವಿಮಾಡಿದನು. ‘ ದುಷ್ಟ ಪೀಳಿಗೆಯಿಂದ ನಿಮ್ಮನ್ನು ಸಂರಕ್ಷಿಸಿಕೊಳ್ಳಿ,’ ಎಂದು ಎಚ್ಚರಿಸಿದನು.
41: ಅವನ ಬೋಧನೆಯನ್ನು ಅಂಗೀಕರಿಸಿದ ಅನೇಕರು ದೀಕ್ಷಾಸ್ನಾನ ಪಡೆದರು. ಅಂದೇ ಸುಮಾರು ಮೂರು ಸಾವಿರ ಜನರು ಸಭೆಯನ್ನು ಸೇರಿಕೊಂಡರು.

ಕೀರ್ತನೆ - 334-518-2೦22       
ಅಚಲ ಪ್ರೀತಿಯಿಂದ  ಪ್ರಭು ಜಗವನು ತುಂಬಿಹನು
4 : ಸತ್ಯವಾದುದು ಆತನ ಪವಿತ್ರ ವಾಕ್ಯ / ಸ್ತುತ್ಯವಾದುದು ಆತನ ಪುನೀತ ಕಾರ್ಯ //
5 : ಸತ್ಯಸಂಧನು, ನ್ಯಾಯಪ್ರಿಯನು ಆತನು | ಅಚಲ ಪ್ರೀತಿಯಿಂದ ಜಗವನು ತುಂಬಿಹನು ||
18: ಪ್ರಭುವಾದರೋ ಕಟಾಕ್ಷಿಸುವನು ತನಗಂಜಿ ನಡೆದವರನು / ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು //
19 : ತಪ್ಪಿಸುವನವನು ಪ್ರಾಣವನು ಮರಣದಿಂದ / ಉಳಿಸುವನು ಜೀವವನು ಕ್ಷಾಮಡಾಮರದಿಂದ //
20 : ಕಾದಿದೆ ಎನ್ನ ಮನ ಪ್ರಭುವಿಗಾಗಿ / ಆತನಿಹನು ಎನಗೆ ಗುರಾಣಿಯಾಗಿ //
22 : ನಮ್ಮ ಮೇಲಿರಲಿ ಪ್ರಭು, ನಿನ್ನಚಲ ಪ್ರೀತಿ / ಕಾದಿಹೆವು ಇದೋ ನಿನ್ನ ನಂಬಿ ಭರವಸದಿ //    

ಶುಭಸಂದೇಶ - ಯೊವಾನ್ನ 2೦11-18
11 : ಮರಿಯಳು ಅಳುತ್ತಾ ಸಮಾಧಿಯ ಹೊರಗೆ ನಿಂತುಕೊಂಡಿದ್ದಳು.
12 : ಆಕೆ ಅಳುತ್ತಾ ಸಮಾಧಿಯೊಳಗೆ ಬಗ್ಗಿ ನೋಡಿದಾಗ ಶ್ವೇತವಸ್ತ್ರಧಾರಿಗಳಾದ ಇಬ್ಬರು ದೇವದೂತರನ್ನು ಅಲ್ಲಿ ಕಂಡಳು. ಯೇಸುವಿನ ಪಾರ್ಥಿವ ಶರೀರವನ್ನು ಇಟ್ಟಿದ್ದ ಸ್ಥಳದಲ್ಲಿ, ಒಬ್ಬನು ಅವರ ತಲೆಯಿದ್ದ ಕಡೆಯಲ್ಲೂ ಮತ್ತೊಬ್ಬನು ಕಾಲಿದ್ದ ಕಡೆಯಲ್ಲೂ ಕುಳಿತಿದ್ದರು.
13 : ಅವರು ಆಕೆಯನ್ನು, “ಏಕಮ್ಮಾ ಅಳುತ್ತಿರುವೆ?” ಎಂದು ಕೇಳಿದರು. “ನನ್ನ ಪ್ರಭುವನ್ನು ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ. ಎಲ್ಲಿ ಇಟ್ಟಿದ್ದಾರೋ ತಿಳಿಯದು,” ಎಂದಳು.
14 : ಹಾಗೆ ಹೇಳಿ ಹಿಂದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿಂತಿರುವುದು ಆಕೆಗೆ ಕಾಣಿಸಿತು. ಆದರೆ ಯೇಸುವೇ ಅವರೆಂದು ಆಕೆಗೆ ತಿಳಿಯಲಿಲ್ಲ.
15 : ಯೇಸು, “ಏಕಮ್ಮಾ ಅಳುತ್ತಿರುವೇ? ಏನನ್ನು ಹುಡುಕುತ್ತಿರುವೇ?” ಎಂದು ಕೇಳಿದಾಗಲೂ ಮರಿಯಳು ಅವರು ತೋಟಗಾರನೆಂದು ಭಾವಿಸಿ, “ಅಯ್ಯಾ, ನೀವೇನಾದರೂ ಅವರನ್ನು ಕೊಂಡೊಯ್ದಿದ್ದರೆ ಎಲ್ಲಿ ಇಟ್ಟಿರುವಿರಿ, ಹೇಳಿ; ನಾನು ತೆಗೆದುಕೊಂಡು ಹೋಗುತ್ತೇನೆ,” ಎಂದು ಹೇಳಿದಳು.
16 : ಆಗ ಯೇಸು, “ಮರಿಯಾ ಎಂದು ಹೆಸರಿಡಿದು ಕರೆದರು. ಆಕೆ ಹಿಂದಿರುಗಿ ನೋಡಿ, “ರಬ್ಬೂನಿ ಎಂದಳು. (ಯೆಹೂದ್ಯರ ಭಾಷೆಯಲ್ಲಿ ಹಾಗೆಂದರೆಗುರುದೇವಾ ಎಂದರ್ಥ).
17 : ಯೇಸು ಆಕೆಗೆ, “ನನ್ನನ್ನು ಹಿಡಿದುಕೊಂಡಿರಬೇಡ, ನಾನು ಇನ್ನೂ ಪಿತನ ಬಳಿಗೆ ಏರಿಹೋಗಿಲ್ಲ. ನೀನು ನನ್ನ ಸಹೋದರರ ಬಳಿಗೆ ಹೋಗಿ ನನ್ನ ಪಿತನೂ ನಿಮ್ಮ ಪಿತನೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನಲ್ಲಿಗೆ ನಾನು ಏರಿ ಹೋಗುತ್ತೇನೆಂದು ತಿಳಿಸು,” ಎಂದು ಹೇಳಿದರು.
18 : ಮಗ್ದಲದ ಮರಿಯಳು ಶಿಷ್ಯರ ಬಳಿಗೆ ಬಂದು, “ನಾನು ಪ್ರಭುವನ್ನು ಕಂಡೆ. ಅವರು ಹೀಗೆಲ್ಲಾ ಹೇಳಿದರು,” ಎಂದು ತಿಳಿಸಿದಳು.
ಚಿಂತನೆ
ಮೊದಲನೆ ವಾಚನದಲ್ಲಿ ಪೇತ್ರನು ಅನ್ನುತ್ತಾನೆ ನೀವು ಶಿಲುಬೆಗೇರಿಸಿದ ಆ ಯೇಸುಸ್ವಾಮಿಯನ್ನೇ ದೇವರು ಪ್ರಭುವನ್ನಾಗಿಯೂ, ಅಭಿಷಿಕ್ತ ಲೋಕೊಧ್ಧಾರಕನ್ನಾಗಿಯೂ ನೇಮಿಸಿದ್ದಾರೆ.  ಇದನ್ನು ಕೇಳಿದ ಇಸ್ರಾಯೆಲರ ಹೃದಯಗಳಲ್ಲಿ ಅಲಗೊಂದು ನೆಟ್ಟಂತಾಯಿತು. ನಿಮ್ಮಲ್ಲಿ ಪ್ರತಿಯೊಬ್ಬನು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ.  ಪ್ರೇಷಿತರ ಪ್ರಬೋಧನೆ ಆಲಿಸಿ ಅದೇ ದಿನ ಸುಮಾರು ಮೂರು ಸಾವಿರ ಜನರು ಮನಪರಿವರ್ತಿತರಾಗಿ ದಿಕ್ಷಾಸ್ನಾನ ಪಡೆದರು.
ಮಗ್ದಲದ ಮರಿಯ ಒಬ್ಬ ಸರಳ ಸಾದಾ ಸ್ತ್ರೀ. ಯೇಸುಸ್ವಾಮಿ ಎಂದರೆ ಅವಳಿಗೆ ಜೀವ. ಎಲ್ಲಿಲ್ಲದ ಮಮಕಾರ. ಯೇಸುಸ್ವಾಮಿ ಶಿಲುಬೆ ಮರಣಕ್ಕೆ ಸಿಲುಕಿ ಸತ್ತದ್ದು ಅವಳಿಗೆ ಸಹಿಸಲಾರದ ನೋವಾಗಿತ್ತು. ಯೇಸುವಿನ ಪಾರ್ಥಿವ ಶರೀರವನ್ನು ಹೂಳಿದ ಮಾರನೆ ದಿನ ಬೆಳ್ಳಂ ಬೆಳಗ್ಗೆ ಯೇಸುವನ್ನು ಕಾಣುವ ಹಂಬಲದಿಂದ ಬಂದವಳಿಗೆ ಮೊದಲು ಪುನರುತ್ಥಾನರಾದ ಯೇಸುವಿನ ದರ್ಶನ ಆಗುತ್ತದೆ.
ಆ ಪವಿತ್ರವಾದ ದರ್ಶನವನ್ನು ಅವಳಿಗೆ ಪ್ರಭುಯೇಸು ಕೊಡುವ ಮೂಲಕ ಅವಳ ಪ್ರೀತಿಗೆ ಪ್ರತ್ಯುತ್ತರವಾಗಿ ಯೆಹೂದ್ಯ ಗಂಡುಮೇಲ್ಪಂಕ್ತಿ ಹೊಂದಿದ ಸಮಾಜದಲ್ಲಿ ಮಹಿಳೆಯರಿಗೆ ಪ್ರಮುಖಸ್ಥಾನವನ್ನು ಕೊಟ್ಟರು. ಮಗ್ದಲದ ಮರಿಯಳ ಹಾಗೆಯೇ ನಾವೂ ಯೇಸುವನ್ನು ಪ್ರೀತಿಸಬೇಕು. ಈಗ ಅವರು ನಮ್ಮ ಕಣ್ಣಿಗೆ ಕಾಣುವುದಿಲ್ಲ, ನಾವು ವಿಶ್ವಾಸದ ಕಣ್ಣಿನಿಂದ ಯೇಸುವನ್ನು ಕಾಣಲು ಹಂಬಲಿಸುತ್ತಿರಬೇಕು.  ಆಮೆನ್.
- ಫಾ ಅಂಬ್ರೋಸ್ ಡಿ'ಸೋಜಾ ಯೇ.ಸ

ಸಂತ ಜಾರ್ಜ್
ಜಾರ್ಜ್ ನವರು ಪೌರ್ವಾತ್ಯ ಸಂಪ್ರದಾಯದ ಕ್ರೈಸ್ತರ ಒಬ್ಬ ಪ್ರಮುಖ ಸಂತರಾಗಿದ್ದಾರೆ. ಇವರು ಜನಿಸಿದ ದಿನಾಂಕದ ಬಗ್ಗೆ ಖಚಿತ ದಾಖಲೆಗಳಿರುವುದಿಲ್ಲ. ಆದರೆ ರಕ್ತಸಾಕ್ಷಿಯಗಿ ಮರಣ ಹೊಂದಿದ್ದು ಏಪ್ರಿಲ್ 23 ಎಂದು ನಂಬಲಾಗಿದೆ. ಇವರು ಗ್ರೀಕ್ ಮತ್ತು ಸಿರಿಯನ್ ಪೆಲೆಸ್ತೀನದ ನಾಡಿನಲ್ಲಿದ್ದ ಕ್ರೈಸ್ತ ಕುಟುಂಬದಲ್ಲಿ ಜನಿಸಿ ತಮ್ಮ ಯೌವನದ ದಿನಗಳ್ಲಲಿ ರೋಮನ್ ಸೈನ್ಯವನ್ನು ಸೇರಿದ್ದರು. ರೋಮನ್ ಚಕ್ರವರ್ತಿ ಡಯೊಕ್ಲೀಶನು ತನ್ನ ಸೈನ್ಯದಲ್ಲಿರುವ ಯೋಧರೆಲ್ಲರೂ ರೋಮನ್ ದೇವರಿಗೆ ಬಲಿಯರ್ಪಣೆ ಮಾಡಬೇಕೆಂದು ಆದೇಶ ಹೊರಡಿಸಿದನು. ಅರಸನ ಆದೇಶವನ್ನು ಉಲ್ಲಂಘಿಸಿದ ಜಾರ್ಜ್ ಮತ್ತು ಸಂಗಡಿಗರನ್ನು ಮರಣ ದಂಡನೆಗೆ ಗುರಿಮಾಡಲಾಗುತ್ತದೆ. ಒಂದು ಐತಿಹ್ಯದ ಪ್ರಕಾರ ಜಾರ್ಜರನ್ನು ಮೂರು ಸಾರಿ ಸಾಯಿಸಿದರೂ ಅವರು ಬದುಕುಳಿಯುತ್ತಾರೆ. ನಾಲ್ಕನೇ ಬಾರಿ ಅರಸನು ಅವರನ್ನು ಹಿಂಸೆಗೊಳಪಡಿಸಿ ಅವರು ನಿಶ್ಚೇಷ್ಟಿತರಾದಾಗ ಇದೀ ಊರಿಗೆ ಬೆಂಕಿ ಹಚ್ಚುತ್ತಾನೆ. ಆ ಮಹಾಬೆಂಕಿಯಲ್ಲಿ ಅವರು ಬೂದಿಯಾದರೆಂದು ಹೇಳಲಾಗುತ್ತದೆ.
ಸಂತ ಜಾರ್ಜರ ಬಗ್ಗೆ ಹಲವಾರು ದಂತಕತೆಗಳು ಪ್ರಚಲಿತವಿದ್ದು ಗ್ರೀಕೋ ಸಿರಿಯನ್ ಕ್ರೈಸ್ತರು, ಆಂಗ್ಲಿಕನ್ ಕ್ರೈಸ್ತರು, ಮಾತ್ರವಲ್ಲ ಮುಸಲ್ಮಾನರೂ ಅವರ ಬಗ್ಗೆ ಆದರ ಹೊಂದಿದ್ದಾರೆ. ಚಿತ್ರಪಟಗಳಲ್ಲಿ ಜಾರ್ಜರು ಕುದುರೆಯ ಮೇಲೆ ಕುಳಿತು ಕೆಳಗೆ ಬುಸುಗುಡುತ್ತಿರುವ ರಕ್ಕಸಪ್ರಾಣಿಗೆ ಈಟಿಯಿಂದ ತಿವಿಯುತ್ತಿರುವ ದೃಶ್ಯ ಅತ್ಯಂತ ಜನಪ್ರಿಯವಾಗಿದೆ. ಧರ್ಮರಕ್ಷಣೆಗಾಗಿ ಯುದ್ಧ ಸಂಭವಿಸಿದಾಗಲೆಲ್ಲ ಧರ್ಮರಕ್ಷಕ ಯೋಧರು ಜಾರ್ಜರನ್ನು ಸಂಕೇತಿಸುವ ಪುತ್ಥಳಿಯನ್ನು ಧರಿಸಿ ಯುದ್ಧಕ್ಕೆ ತೆರಳುತ್ತಿದ್ದರಂತೆ.
- ಮರಿಜೋಸೆಫ್, ಬೆಂಗಳೂರು

No comments:

Post a Comment