Friday, 19 April 2019

24 ಏಪ್ರಿಲ್ 2019

ಬಿಳಿ/ ಬುಧ/ಪ್ರಾಸ್ಖ ಹಬ್ಬದ ಅಷ್ಟಮಿಯ ನಾಲ್ಕನೇ ದಿನ         
1ನೇ  ವಾಚನ  -  ಪ್ರೇ.ಕಾ  31-1೦    
ಕೀರ್ತನೆ  -  1೦51-57-9
ಶುಭಸಂದೇಶ  -  ಲೂಕ  2413-35    
ಐಚ್ಛಿಕ  ಸ್ಮರಣೆ  -  ಸಂತ  ಪಿದೇಲಿಸ್(ಯಾ  ಮತ್ತು  .ಸಾ)  

1ನೇ  ವಾಚನ  -  ಪ್ರೇ.ಕಾ  3:  1-1೦  
1:ಒಂದು ದಿನ ಮಧ್ಯಾಹ್ನ ಮೂರು ಗಂಟೆಯ ಸಮಯ. ಅದು ಪ್ರಾರ್ಥನಾವೇಳೆ, ಪೇತ್ರ ಮತ್ತು ಯೊವಾನ್ನ ಮಹಾದೇವಾಲಯಕ್ಕೆ ಹೋದರು.
2: ‘ಸುಂದರ ದ್ವಾರ ಎಂದು ಕರೆಯಲಾದ ಬಾಗಿಲ ಬಳಿ ಹುಟ್ಟುಕುಂಟನೊಬ್ಬ ಇದ್ದನು. ಅವನನ್ನು ಪ್ರತಿದಿನ ಹೊತ್ತುತಂದು ದ್ವಾರದ ಬಳಿ ಬಿಡಲಾಗುತ್ತಿತ್ತು. ಅವನು ದೇವಾಲಯಕ್ಕೆ ಬರುತ್ತಿದ್ದ ಜನರಿಂದ ಭಿಕ್ಷೆ ಬೇಡುತ್ತಿದ್ದನು.
3:ಪೇತ್ರ ಮತ್ತು ಯೊವಾನ್ನ ದೇವಾಲಯದೊಳಗೆ ಹೋಗುತ್ತಿರುವುದನ್ನು ಅವನು ಕಂಡನು. ತನಗೆ ಏನಾದರೂ ಭಿಕ್ಷೆ ಕೊಡಬೇಕೆಂದು ಬೇಡಿದನು.
4: ಅವರು ಕುಂಟನನ್ನು ತದೇಕ ದೃಷ್ಟಿಯಿಂದ ಈಕ್ಷಿಸಿದರು. ಪೇತ್ರನು, “ಎಲ್ಲಿ, ನಮ್ಮನ್ನು ನೋಡು,” ಎಂದನು.
5: ಕುಂಟನು ಅವರಿಂದ ಭಿಕ್ಷೆಯನ್ನು ಅಪೇಕ್ಷಿಸುತ್ತಾ ಅವರನ್ನೇ ನೋಡಿದನು.
6: ಆದರೆ ಪೇತ್ರನು, “ಹಣಕಾಸೇನೂ ನನ್ನಲ್ಲಿಲ್ಲ, ನನ್ನಲ್ಲಿ ಇರುವುದನ್ನು ನಿನಗೆ ಕೊಡುತ್ತೇನೆ; ನಜರೇತಿನ ಯೇಸುಕ್ರಿಸ್ತರ ಹೆಸರಿನಲ್ಲಿ ನಾನು ಆಜ್ಞಾಪಿಸುತ್ತೇನೆ, ಎದ್ದು ನಡೆ ಎನ್ನುತ್ತಾ,
7: ಅವನ ಬಲಗೈಯನ್ನು ಹಿಡಿದು ನಿಲ್ಲಲು ಸಹಾಯ ಮಾಡಿದನು. ಕ್ಷಣವೇ ಕುಂಟನ ಅಂಗಾಲು ಮುಂಗಾಲುಗಳು ಬಲಗೊಂಡವು.
8: ಅವನು ಜಿಗಿದುನಿಂತು ಅತ್ತಿತ್ತ ನಡೆದಾಡಲು ಪ್ರಾರಂಭಿಸಿದನು. ಅನಂತರ ಅವನು ಕುಣಿಯುತ್ತಾ ನಡೆಯುತ್ತಾ ದೇವರನ್ನು ಕೊಂಡಾಡುತ್ತಾ ಅವರೊಡನೆಯೇ ದೇವಾಲಯದೊಳಗೆ ಹೋದನು.
9: ಅವನು ಹೀಗೆ ನಡೆಯುವುದನ್ನೂ ದೇವರನ್ನು ಕೊಂಡಾಡುವುದನ್ನೂ ಜನಸಮೂಹ ನೋಡಿತು.

10: ದೇವಾಲಯದ ಸುಂದರದ್ವಾರದ ಬಳಿ ಕುಳಿತು ಭಿಕ್ಷೆ ಬೇಡುತ್ತಿದ್ದವನು ಇವನೇ ಎಂದು ಜನರು ಗುರುತು ಹಚ್ಚಿದರು. ಅವನಿಗೆ ಸಂಭವಿಸಿದ್ದನ್ನು ಕಂಡು ಬೆಕ್ಕಸಬೆರಗಾದರು.

ಕೀರ್ತನೆ  -  1೦5:  1-5,  7-9
ಹೆಮ್ಮೆಪಡಿ, ನೆನೆದಾತನ ಶ್ರೀನಾಮ / ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ
1 : ಸಲ್ಲಿಸಿ ಪ್ರಭುವಿಗೆ ಕೃತಜ್ಞತಾಸ್ತೋತ್ರವನು / ಮಾಡಿರಿ ಆತನ ನಾಮಸ್ಮರಣೆಯನು / ಸಾರಿರಿ ಜಗಕೆ ಆತನ ಸತ್ಕಾರ್ಯಗಳನು //
2 : ಹಾಡಿ ಪಾಡಿ ಹೊಗಳಿರಿ ಪ್ರಭುವನು / ಧ್ಯಾನಿಸಿ ನೀವು ಆತನ ಪವಾಡಗಳನು //
3 : ಹೆಮ್ಮೆಪಡಿ, ನೆನೆದಾತನ ಶ್ರೀನಾಮ / ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ //
4 : ಅರಸಿರಿ ಪ್ರಭುವನೂ ಆತನ ಶಕ್ತಿಯನೂ / ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು //
6 : ನೆನೆಯಿರಿ ಆತನದ್ಭುತಗಳನು, ಮಹತ್ಕಾರ್ಯಗಳನು / ಆತನ ವದನ ವಿಧಿಸಿದಾ ನ್ಯಾಯನಿರ್ಣಯಗಳನು //
7 : ಪ್ರಭು ನಮ್ಮ ದೇವನೆಂಬುದು ಶ್ರುತ / ಆತನಿತ್ತ ತೀರ್ಪು ಇದೋ ವಿಶ್ವವ್ಯಾಪ್ತ //
8 : ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು / ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು //
9 : ಅಬ್ರಹಾಮನೊಡನೆ ಮಾಡಿಕೊಂಡ ಒಡಂಬಡಿಕೆಯನು / ಇಸಾಕನಿಗೆ ಆಣೆಯಿಟ್ಟು ಆತ ಹೇಳಿದುದನು //

ಶುಭಸಂದೇಶ  -  ಲೂಕ  24:  13-35    
13 : ಅದೇ ದಿನ ಶಿಷ್ಯರಲ್ಲಿ ಇಬ್ಬರು ಜೆರುಸಲೇಮಿಗೆ ಹನ್ನೊಂದು ಕಿಲೋಮೀಟರಿನಷ್ಟು ದೂರದಲ್ಲಿದ್ದ ಎಮ್ಮಾವು ಎಂಬ ಗ್ರಾಮಕ್ಕೆ ಹೋಗುತ್ತಿದ್ದರು.
14 : ಇತ್ತೀಚೆಗೆ ನಡೆದ ವಿಷಯಗಳನ್ನೆಲ್ಲಾ ಕುರಿತು ಅವರು ಸಂಭಾಷಣೆ ಮಾಡುತ್ತಾ ನಡೆಯುತ್ತಿದ್ದರು.
15 : ಹೀಗೆ ಮಾತನಾಡಿಕೊಂಡು ಚರ್ಚೆಮಾಡುತ್ತಾ ಹೋಗುತ್ತಿರುವಾಗ, ಯೇಸುಸ್ವಾಮಿಯೇ ಖುದ್ದಾಗಿ ಸಮೀಪಿಸಿ ಅವರ ಜೊತೆ ಸೇರಿಕೊಂಡರು.
16 : ಆದರೆ ಇವರಾರೆಂದು ಅವರು ಗುರುತು ಹಚ್ಚಲಿಲ್ಲ. ಕಾರಣ - ಶಿಷ್ಯರಿಗೆ ಕಣ್ಣುಕಟ್ಟಿದಂತಾಗಿತ್ತು.
17 : “ನೀವು ತರ್ಕ ಮಾಡಿಕೊಂಡು ಹೋಗುತ್ತಿರುವಿರಲ್ಲಾ, ಏನು ವಿಷಯ?” ಎಂದು ಯೇಸು ಕೇಳಿದರು. ಶಿಷ್ಯರು ಸಪ್ಪೆ ಮುಖಮಾಡಿ ನಿಂತರು.
18 : ಆಗ ಅವರಲ್ಲಿ ಒಬ್ಬನಾದ ಕ್ಲೆಯೋಫ, “ಇತ್ತೀಚೆಗೆ ಜೆರುಸಲೇಮಿನಲ್ಲಿ ಜರುಗಿದ ಘಟನೆಗಳನ್ನು ಪಟ್ಟಣಕ್ಕೆ ಪಟ್ಟಣವೇ ತಿಳಿದಿದೆ; ನಿನಗೊಬ್ಬನಿಗೇ ಅವು ತಿಳಿಯದೆ?” ಎಂದನು.
19 : “ಏನು ನಡೆಯಿತು?” ಎಂದು ಯೇಸು ಪುನಃ ಕೇಳಿದಾಗ ಶಿಷ್ಯರಿಬ್ಬರು, “ಇವು ನಜರೇತಿನ ಯೇಸುವಿಗೆ ಸಂಭವಿಸಿದ ಘಟನೆಗಳು. ಅವರು ನಡೆಯಲ್ಲೂ ನುಡಿಯಲ್ಲೂ ದೇವರ ಹಾಗೂ ಸಕಲ ಮಾನವರ ದೃಷ್ಟಿಯಲ್ಲಿ ಪ್ರವಾದಿಯಾಗಿದ್ದರು.
20 : ನಮ್ಮ ಮುಖ್ಯ ಯಾಜಕರು ಮತ್ತು ಮುಖಂಡರು ಅವರನ್ನು ಮರಣದಂಡನೆಗೆ ಗುರಿಮಾಡಿಸಿ ಶಿಲುಬೆಗೆ ಜಡಿಸಿದರು.
21 : ಇಸ್ರಯೇಲನ್ನು ಬಿಡುಗಡೆ ಮಾಡುವ ಉದ್ಧಾರಕ ಅವರೇ ಎಂದು ನಾವು ನಂಬಿಕೊಂಡಿದ್ದೆವು. ಇಷ್ಟು ಮಾತ್ರವಲ್ಲ, ಇದೆಲ್ಲಾ ಸಂಭವಿಸಿ ಇಂದಿಗೆ ಮೂರುದಿನಗಳು ಆಗಿವೆ.
22 : ಆದರೂ ನಮ್ಮಲ್ಲಿ ಕೆಲವು ಮಂದಿ ಮಹಿಳೆಯರು ಮುಂಜಾನೆ ಸಮಾಧಿಯ ಬಳಿಗೆ ಹೋಗಿದ್ದರು.
23 : ಅಲ್ಲಿ ಯೇಸುವಿನ ಪಾರ್ಥಿವ ಶರೀರವನ್ನು ಕಾಣಲಿಲ್ಲ. ಹಿಂದಿರುಗಿ ಬಂದು, ‘ನಮಗೆ ದೇವದೂತರು ಪ್ರತ್ಯಕ್ಷರಾದರು; ಇವರು ಯೇಸುಸ್ವಾಮಿ ಸಜೀವದಿಂದ ಇದ್ದಾರೆಂದು ನಮಗೆ ತಿಳಿಸಿದರು,’ ಎಂದು ಹೇಳಿ ನಮ್ಮನ್ನು ದಿಗ್ಭ್ರಾಂತರನ್ನಾಗಿ ಮಾಡಿದರು.
24 : ನಮ್ಮ ಸಂಗಡಿಗರಲ್ಲಿ ಕೆಲವರು ಸಮಾಧಿಯ ಬಳಿಗೆ ಹೋಗಿ ನೋಡಿದರು; ಮಹಿಳೆಯರು ಹೇಳಿದ್ದೆಲ್ಲಾ ಸರಿಯಾಗಿತ್ತು. ಆದರೆ ಯೇಸುಸ್ವಾಮಿಯನ್ನು ಮಾತ್ರ ಕಾಣಲಿಲ್ಲ,” ಎಂದರು.
25 : ಆಗ ಯೇಸು, “ಎಂಥ ಮತಿಹೀನರು ನೀವು! ಪ್ರವಾದಿಗಳು ಹೇಳಿರುವುದೆಲ್ಲವನ್ನು ನಂಬುವುದರಲ್ಲಿ ಎಷ್ಟು ಮಂದಮತಿಗಳು ನೀವು!
26 : ಕ್ರಿಸ್ತನು ಇಂತಹ ಸಂಕಷ್ಟಗಳನ್ನು ಅನುಭವಿಸಿ ತನ್ನ ಮಹಿಮಾಸಿದ್ದಿಯನ್ನು ಪಡೆಯಬೇಕಾಗಿತ್ತು ಅಲ್ಲವೇ?” ಎಂದರು.
27 : ಅನಂತರ, ಮೋಶೆ ಹಾಗೂ ಪ್ರವಾದಿಗಳೆಲ್ಲರಿಂದ ಆರಂಭಿಸಿ ಎಲ್ಲಾ ಪವಿತ್ರ ಗ್ರಂಥಗಳಲ್ಲಿ ತಮ್ಮ ವಿಷಯವಾಗಿ ಬರೆದಿರುವುದನ್ನು ಅವರಿಗೆ ವಿವರಿಸಿದರು.
28 : ಅಷ್ಟರಲ್ಲಿ ಶಿಷ್ಯರು ತಲುಪಬೇಕಾಗಿದ್ದ ಗ್ರಾಮವು ಸಮೀಪಿಸಿತು. ಯೇಸುಸ್ವಾಮಿ ಇನ್ನೂ ಮುಂದಕ್ಕೆ ಸಾಗುವವರಂತೆ ಕಂಡಿತು.
29 : ಆಗ ಶಿಷ್ಯರು, “ಸಂಜೆಯಾಯಿತು, ಕತ್ತಲಾಗುತ್ತ ಬಂದಿತು; ಬಂದು ನಮ್ಮೊಡನೆ ತಂಗಿರಿ,” ಎಂದು ಒತ್ತಾಯಪಡಿಸಿದರು. ಯೇಸು ಅವರೊಡನೆ ತಂಗಲು ಹೋದರು.
30 : ಅವರ ಸಂಗಡ ಊಟಕ್ಕೆ ಕುಳಿತಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು, ದೇವರಿಗೆ ಕೃತಜ್ಞತಾ ಸ್ತೋತ್ರ ಸಲ್ಲಿಸಿ, ಅದನ್ನು ಮುರಿದು ಅವರಿಗೆ ಕೊಟ್ಟರು.
31 : ಆಗಲೇ ಶಿಷ್ಯರ ಕಣ್ಣುಗಳು ತೆರೆದವು; ಯೇಸುವನ್ನು ಗುರುತುಹಚ್ಚಿದರು. ಆಗ ಯೇಸು ಅವರಿಂದ ಅದೃಶ್ಯರಾದರು.
32 : ಶಿಷ್ಯರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ, “ದಾರಿಯಲ್ಲಿ ಇವರು ನಮ್ಮ ಸಂಗಡ ಮಾತನಾಡುತ್ತಾ ಪವಿತ್ರ ಗ್ರಂಥದ ಅರ್ಥವನ್ನು ನಮಗೆ ವಿವರಿಸುತ್ತಾ ಇದ್ದಾಗ ನಮ್ಮ ಹೃದಯ ಕುತೂಹಲದಿಂದ ಕುದಿಯುತ್ತಾ ಇತ್ತಲ್ಲವೇ?” ಎಂದುಕೊಂಡರು.
33 : ಒಡನೇ ಅವರು ಅಲ್ಲಿಂದ ಎದ್ದು ಜೆರುಸಲೇಮಿಗೆ ಹಿಂದಿರುಗಿ ಹೋದರು. ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರ ಸಂಗಡಿಗರೂ ಒಟ್ಟುಗೂಡಿದ್ದರು.
34 : “ಪ್ರಭು ಜೀವಂತರಾಗಿ ಎದ್ದಿರುವುದು ನಿಜ ! ಅವರು ಸಿಮೋನನಿಗೆ ಕಾಣಿಸಿಕೊಂಡರು,” ಎಂದು ಅಲ್ಲಿದ್ದವರು ಹೇಳುವುದನ್ನು ಕೇಳಿದರು.
35 : ಆಗ ಅವರು ತಾವು ದಾರಿಯಲ್ಲಿ ಕಂಡ ವಿಷಯವನ್ನೂ ರೊಟ್ಟಿ ಮುರಿದು ಕೊಡುವಾಗ ಸ್ವಾಮಿಯನ್ನು ತಾವು ಗುರುತುಹಚ್ಚಿದ ವಿಷಯವನ್ನೂ ಅಲ್ಲಿದ್ದವರಿಗೆ ವರದಿಮಾಡಿದರು
ಚಿಂತನೆ
ನಿರಾಶೆ ತುಂಬಿದವರಾಗಿ, ಎಲ್ಲವೂ ಮುಗಿದು ಹೊಯಿತು, ಇನ್ನು ಏನೂ ಉಳಿದಿಲ್ಲ ಎಂಬ ಅತೀ ನಿರಾಶೆ, ಜುಗುಪ್ಸೆಯಿಂದ ಬಹಳ ದು:ಖಭರಿತರಾಗಿ, ಜೀವನದಲ್ಲಿ ಸೋತಂತಾಗಿ, ಮುಂದೆ ಮಾರ್ಗ ತೋಚದಂತಾಗಿ, ತಮ್ಮ ಸ್ವಂತ ಊರಾದ ಎಮ್ಮವುಸಿಗೆ ಮರಳುತ್ತಿದ್ದ ಇಬ್ಬರು ಶಿಷ್ಯರನ್ನು ಪುನರುತ್ಥಾನರಾದ ಪ್ರಭುಯೇಸು ಭೇಟಿ ಮಾಡಿ ಧೈರ್ಯ ಕಳೆದುಕೊಂಡವರನ್ನು ಹುರಿದುಂಬಿಸಿ ಮತ್ತೆಅವರನ್ನು ಮರಳಿ ಜೆರುಸಲೇಮಿಗೆ ಹೋಗಲು ಹೇಳುತ್ತಾರೆ. ಯೇಸುವನ್ನು ಗುರುತಿಸಿದ ಶಿಷ್ಯರು ಎರಡು ಪಟ್ಟು ಉತ್ಸುಕತೆಯಿಂದ ಏನೂ ಹೇಳದೆಯೇ ಮತ್ತೆ ಜೆರುಸಲೇಮಿಗೆ ಹಿಂತಿರುಗಿ ಹೋಗುತ್ತಾರೆ.  ಈಗ ಅವರಲ್ಲಿ ಯೇಸುಕ್ರಿಸ್ತರೇ ತುಂಬಿರುವರು.  ಈಗ ಯೇಸುವಿಗಾಗಿ ಏನನ್ನೂ ಮಾಡಲು ಸಿದ್ದರಾಗಿದ್ದರು.  ಇದು ಯೇಸು ಪುನರುತ್ಥಾನರಾದ ಮೇಲೆ ನಡೆದ ವಿಷಯ.  ಜ್ಞಾನಸ್ನಾನ ಪಡೆದ ನಾವು ಪವಿತ್ರಾತ್ಮರನ್ನು ಧರಿಸಿರುತ್ತೇವೆ.  ಹಾಗಾಗಿ, ಯೇಸುವಿಗಾಗಿ ದುಡಿಯಲು ಹಾಗೂ ಸ್ವರ್ಗರಾಜ್ಯಕ್ಕಾಗಿ ಶ್ರಮಪಡಲು ಸಿದ್ಧರಾಗೋಣ.  ಆಮೆನ್.
- ಫಾ ಅಂಬ್ರೋಸ್ ಡಿ'ಸೋಜ ಯೇ.ಸ

ಸಂತ ಫಿದೆಲಿಸ್
ಫಿದೆಲಿಸ್ ನವರ ಮೊದಲ ಹೆಸರು ಮಾರ್ಕ್ ರೇ. ಇಂದು ಜರ್ಮನಿಗೆ ಸೇರಿರುವ ಆಸ್ಟ್ರಿಯಾದ ಒಂದು ಊರಿನಲ್ಲಿ 1577ರಲ್ಲಿ ಜನಿಸಿದ ಇವರು ಕೆಲಕಾಲ ಶಿಕ್ಷಕರಾಗಿದ್ದರು. ಮತ್ತೆ ಓದಲು ತೊಡಗಿ ವಕೀಲರಾಗಿ ನಾಗರಿಕ ಸಂಹಿತೆ ಮತ್ತು ಕ್ರೈಸ್ತಧರ್ಮಸಂಹಿತೆಗಳನ್ನು ಅರಗಿಸಿಕೊಂಡರು. ಮೊದಲಿಗೆ ಶ್ರೀಮಂತ ಕಕ್ಷಿದಾರರ ಪರವಾಗಿ ವಾದಿಸುತ್ತಾ ದೇಶ ದೇಶ ಸುತ್ತಿ ಅಪಾರ ಆಸ್ತಿ ಗಳಿಸಿದ ಇವರು ಮನಪರಿವರ್ತನೆಗೊಂಡು ಬಡವರ ಪರವಾಗಿ ಉಚಿತವಾಗಿ ವಾದ ಮಾಡತೊಡಗಿದರು. ಕ್ರಮೇಣ ನ್ಯಾಯವ್ಯವಸ್ಥೆಯಲ್ಲಿನ ಭ್ರಷ್ಟತೆಯನ್ನು ಕಂಡು ರೋಸಿಹೋಗಿ ವಕೀಲಿ ವೃತ್ತಿಯನ್ನು ತೊರೆದು ಫ್ರಾನ್ಸಿಸ್ಕನ್ ಕಪುಚಿನ್ ಮಠವನ್ನು ಸೇರಿ ಗುರುವಾದರು. ಆಗ ಇವರ ಹೆಸರನ್ನು ಫಿದೆಲಿಸ್ (ವಿಧೇಯ) ಎಂದು ಬದಲಿಸಲಾಯಿತು. ತಾವು ಹಿಂದೆ ಗಳಿಸಿದ ಆಸ್ತಿ ಮತ್ತು ಪುಸ್ತಕಗಳೆಲ್ಲವನ್ನು ಬಡ ಗುರುಅಭ್ಯರ್ಥಿಗಳ ವಿದ್ಯಾರ್ಥಿವೇತನಕ್ಕಾಗಿ ಮುಡಿಪಾಗಿಟ್ಟರು. ಪ್ರಾರ್ಥನೆ ಉಪವಾಸಗಳಲ್ಲಿ ತೊಡಗಿ ನೆರೆಹೊರೆಯಲ್ಲಿ ಬೋಧಿಸುತ್ತಾ, ಸಂಸ್ಕಾರಗಳನ್ನು ನೀಡುತ್ತಾ, ವಿಶೇಷವಾಗಿ ಪ್ಲೇಗಿಗೆ ಸಿಲುಕಿದ್ದ ಆಸ್ಟ್ರಿಯಾದ ಸೈನಿಕರ ಶುಶ್ರೂಷೆ ಮಾಡುತ್ತಾ ಕಳೆದರು.
ಈ ನಡುವೆ ಕ್ಯಾಲ್ವಿನಿಸ್ಟರು ಸ್ವಿಝರ್ಲೆಂಡನ್ನು ಆಸ್ಟ್ರಿಯಾದ ಹಿಡಿತದಿಂದ ಪಾರುಮಾಡುವ ಸ್ವಾತಂತ್ರ‍್ಯ ಚಳವಳಿಯಲ್ಲಿ ತೊಡಗಿದ್ದರು. ಕ್ಯಾಲ್ವಿನಿಸ್ಟ್ ಬಂಡಾಯಗಾರರು ಧರ್ಮಸಭೆಯನ್ನೂ ಧಿಕ್ಕರಿಸಿ ನಾಡು ಕಟ್ಟುವ ಉಮೇದಿನಲ್ಲಿದ್ದರು. ಜನರೆಲ್ಲ ಚರ್ಚುಗಳಿಂದ ದೂರ ಸರಿದಿದ್ದರು.  ಸ್ವಿಝರ್ಲೆಂಡಿನಲ್ಲಿ ತಾಂಡವವಾಡುತ್ತಿದ್ದ ಈ ನಾಸ್ತಿಕ ಮನೋಭಾವವನ್ನು ತಡೆಯಲು ಸುಮಾರು 1614ರಲ್ಲಿ ಅಲ್ಲಿನ ಬಿಷಪರು ಕಪುಚಿನರ ನೆರವು ಕೋರುತ್ತಾರೆ. 1621ರಲ್ಲಿ ಫಿದೆಲಿಸರು ಆ ಕೆಲಸಕ್ಕೆ ತೆರಳುತ್ತಾರೆ. ದೇವಾಲಯದಲ್ಲಿ ಮಾತ್ರವಲ್ಲದೆ ಸಂತೆಗಳಲ್ಲಿ, ಬಂಡಾಯಗಾರರ ಸಭೆಗಳಲ್ಲಿ ಸಹ ಉಪನ್ಯಾಸಗಳನ್ನು ನೀಡಿ ಜನರ ಮನಗೆಲ್ಲುತ್ತಾರೆ. ಪರಿಣಾಮವಾಗಿ ಹಲವಾರು ಕ್ಯಾಲ್ವಿನಿಸ್ಟರು ಮನತಿರುಗಿ ಕಥೋಲಿಕ ಪಂಥಕ್ಕೆ ಹಿಂದಿರುಗಿದರು.  ಆದರೆ ಕೆಲ ಕೆಲವರಲ್ಲಿ ಅಸಹನೆ ಇನ್ನೂ ಉಳಿದಿತ್ತು. ಅವರು ಕಥೋಲಿಕ ಪಾದ್ರಿಗಳ ಯಾವುದೇ ಕೆಲಸವನ್ನು ಆಸ್ಟ್ರಿಯಾದ ಹುನ್ನಾರವೆಂದೇ ಭಾವಿಸಿದ್ದರು. ಆಸ್ಟ್ರಿಯಾ ಸಂಜಾತ ಫಿದೆಲಿಸರ ಮೇಲೆ ಒಂದು ಕಣ್ಣಿಡುತ್ತಾರೆ. ಅವರ ಒಂದು ಉಪನ್ಯಾಸವು ಈ ಅಸಹನೆ ಭುಗಿಲೇಳುವಂತೆ ಮಾಡುತ್ತದೆ. ಒಂದು ಪ್ರಕ್ಷುಬ್ದ ಗುಂಪು ಅವರಿದ್ದ ಚರ್ಚಿನಡೆಗೆ ನುಗ್ಗಿ ಬಂದು ಕಾವಲಿದ್ದ ಆಸ್ಟ್ರಿಯಾ ಸೈನಿಕರನ್ನು ಕೊಂದು ಹಾಕಿತು. ಕಥೋಲಿಕ ಧರ್ಮದ ಪರವಾಗಿ ಮಾತನಾಡುವುದನ್ನು ನಿಲ್ಲಿಸಿ ಇಲ್ಲವೇ ಜೀವ ಬಿಡಲು ಸಿದ್ಧರಾಗಿ ಎಂದು ಫಿದೆಲಿಸರ ವಿರುದ್ಧ ಘೋಷಣೆ ಕೂಗಿದರು. ಆದರೆ ಫಿದೆಲಿಸರು ’ಕಥೋಲಿಕ ಧರ್ಮವೇ ಸರ್ವಕಾಲಕ್ಕೂ ಶ್ರೇಷ್ಠ, ನನಗೆ ಸಾವಿನ ಭಯವಿಲ್ಲ’ ಎಂದು ಗಟ್ಟಿಯಾಗಿ ಕೂಗಿ ಹೇಳಿದರು. ಕೂಡಲೇ  ಅವರನ್ನು ಸಿಕ್ಕಾಪಟ್ಟೆ ಥಳಿಸಲಾಯಿತು. ಗುಂಪಿನಲ್ಲಿದ್ದ ಯಾರೋ ಅವರನ್ನು ಚಾಕುವಿನಿಂದ ಇರಿದು ಕೊಂದರು. ಕ್ರಿಸ್ತಶಕ 1746ರಲ್ಲಿ ಫಿದೆಲಿಸರಿಗೆ ಸಂತ ಪದವಿ ಘೋಷಿಸಲಾಯಿತು.
- ಮರಿಜೋಸೆಫ್, ಬೆಂಗಳೂರು

No comments:

Post a Comment