Friday, 19 April 2019

25 ಏಪ್ರಿಲ್ 2019

ಬಿಳಿ/ಗುರು/ಪಾಸ್ಖ ಹಬ್ಬದ ಅಷ್ಟಮಿಯ ಐದನೇ ದಿನ              
1ನೇ  ವಾಚನ  -  ಪ್ರೇ.ಕಾ  311-26   
ಕೀರ್ತನೆ  -  8:1,4-856-9              
ಶುಭಸಂದೇಶ  -  ಲೂಕ  2435-48    

ಸಂತ  ಮಾರ್ಕ  (ಶು.ಹಬ್ಬ ಇರುವುದಿಲ್ಲ         

1ನೇ  ವಾಚನ  -  ಪ್ರೇ.ಕಾ  3:  11-26
11: ‘ಸೊಲೊಮೋನನ ಮಂಟಪದಲ್ಲಿ ಪೇತ್ರ ಮತ್ತು ಯೊವಾನ್ನರ ಜೊತೆ ಭಿಕ್ಷುಕನು ಇನ್ನೂ ನಿಂತಿದ್ದನು. ಆಶ್ಚರ್ಯಭರಿತರಾದ ಜನರು ಅಲ್ಲಿಗೆ ಓಡಿಬಂದರು.
12: ಇದನ್ನು ನೋಡಿ ಪೇತ್ರನು ಇಂತೆಂದನು: “ಇಸ್ರಯೇಲಿನ ಜನರೇ, ಘಟನೆಯಿಂದ ನೀವೇಕೆ ಆಶ್ಚರ್ಯಚಕಿತರಾಗಿದ್ದೀರಿ? ನಮ್ಮನ್ನೇಕೆ ಎವೆಯಿಕ್ಕದೆ ನೋಡುತ್ತಿದ್ದೀರಿ? ನಮ್ಮ ಸ್ವಂತ ಶಕ್ತಿಯಿಂದಾಗಲೀ ಭಕ್ತಿಯಿಂದಾಗಲೀ, ಮನುಷ್ಯನು ನಡೆಯುವಂತೆ ನಾವು ಮಾಡಿದೆವೆಂದು ಭಾವಿಸುತ್ತೀರೋ?
13: ಪಿತಾಮಹ ಅಬ್ರಹಾಮ, ಇಸಾಕ ಮತ್ತು ಯಕೋಬರ ದೇವರು, ಅಂದರೆ ನಮ್ಮ ಪೂರ್ವಜರ ದೇವರು, ತಮ್ಮ ದಾಸ ಯೇಸುವಿನ ಮಹಿಮೆಯನ್ನು ಬೆಳಗಿಸಿದ್ದಾರೆ. ನೀವಾದರೋ ಅವರನ್ನು ಅಧಿಕಾರಿಗಳ ಕೈಗೊಪ್ಪಿಸಿದಿರಿ. ರಾಜ್ಯಪಾಲ ಪಿಲಾತನು ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದಾಗ ಕೂಡ ಅವನ ಸಮ್ಮುಖದಲ್ಲೇ ಅವರನ್ನು ಧಿಕ್ಕರಿಸಿದಿರಿ.
14: ಯೇಸು ಪುನೀತರು ಹಾಗೂ ಸತ್ಯಸ್ವರೂಪರು. ಆದರೂ ನೀವು ಅವರನ್ನು ನಿರಾಕರಿಸಿ, ಒಬ್ಬ ಕೊಲೆಗಡುಕನನ್ನೇ ನಿಮಗೆ ಬಿಟ್ಟುಕೊಡುವಂತೆ ಪಿಲಾತನನ್ನು ಬೇಡಿಕೊಂಡಿರಿ.
15: ಜೀವದೊಡೆಯನನ್ನು ನೀವು ಕೊಂದುಹಾಕಿದಿರಿ; ದೇವರು ಅವರನ್ನು ಪುನರುತ್ಥಾನಗೊಳಿಸಿದರು. ಇದಕ್ಕೆ ನಾವೇ ಸಾಕ್ಷಿಗಳು.
16: ನಿಮ್ಮ ಕಣ್ಣೆದುರಿಗಿರುವ ಮನುಷ್ಯನು ಯಾರೆಂದು ನಿಮಗೆ ಗೊತ್ತಿದೆ. ಯೇಸುವಿನ ನಾಮದಿಂದಲೇ, ನಾಮದ ಮೇಲಿಟ್ಟ ವಿಶ್ವಾಸದಿಂದಲೇ, ಈತನು ಶಕ್ತಿಪಡೆದಿದ್ದಾನೆ. ಯೇಸುವಿನಲ್ಲಿಟ್ಟ ವಿಶ್ವಾಸವೇ ಈತನಿಗೆ, ನೀವೇ ನೋಡುವಂತೆ, ಸಂಪೂರ್ಣ ಆರೋಗ್ಯವನ್ನು ದಯಪಾಲಿಸಿದೆ.
17 : “ಸಹೋದರರೇ, ನೀವೂ ನಿಮ್ಮ ಅಧಿಕಾರಿಗಳೂ ತಿಳಿಯದೆ ಯೇಸುವಿಗೆ ಹೀಗೆ ಮಾಡಿದಿರೆಂದು ನಾನು ಬಲ್ಲೆ.
18: ಕ್ರಿಸ್ತಯೇಸು ಯಾತನೆಯನ್ನು ಅನುಭವಿಸಬೇಕೆಂದು ದೇವರು ಪ್ರವಾದಿಗಳೆಲ್ಲರ ಮುಖಾಂತರ ಆಗಲೇ ಮುಂತಿಳಿಸಿದ್ದರು. ಪ್ರವಾದನೆಗಳನ್ನು ಈಗ ನೆರವೇರಿಸಿದ್ದಾರೆ.
19 : ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಿರಿ. ಅವರು ನಿಮ್ಮ ಪಾಪಗಳನ್ನು ಪರಿಹರಿಸುವರು.
20 : ಸರ್ವೇಶ್ವರನ ಸಾನ್ನಿಧ್ಯ ಸೌಭಾಗ್ಯವು ನಿಮ್ಮದಾಗುವುದು; ನಿಮಗೋಸ್ಕರ ನೇಮಿತರಾದ ಉದ್ಧಾರಕ ಯೇಸುವನ್ನು ಕಳುಹಿಸುವರು.
21 : ಸಮಸ್ತವನ್ನೂ ಪುನರ್ಸ್ಥಾಪನೆಗೊಳಿಸುವವರೆಗೆ ಕ್ರಿಸ್ತಯೇಸು ಸ್ವರ್ಗದಲ್ಲಿಯೇ ಇರಬೇಕಾಗಿದೆ. ಇದನ್ನು ದೇವರು ಪವಿತ್ರ ಪ್ರವಾದಿಗಳ ಮುಖಾಂತರ ಬಹುಕಾಲಕ್ಕೆ ಹಿಂದೆಯೇ ಪ್ರಕಟಿಸಿದ್ದಾರೆ.
22 : ‘ಸರ್ವೇಶ್ವರನಾದ ದೇವರು ನನ್ನನ್ನು ಕಳುಹಿಸಿದಂತೆಯೇ ನಿಮಗೊಬ್ಬ ಪ್ರವಾದಿಯನ್ನು ಕಳುಹಿಸುವರು. ಆತನು ನಿಮ್ಮ ಸ್ವಂತ ಜನಾಂಗದವನಾಗಿರುವನು. ಆತನು ಹೇಳುವುದನ್ನೆಲ್ಲಾ ನೀವು ಕೇಳಬೇಕು.
23 : ಪ್ರವಾದಿಗೆ ಕಿವಿಗೊಡದವನು ದೇವಜನರಿಂದ ದೂರವಾಗಿ ನಾಶವಾಗುತ್ತಾನೆ,’ ಎಂದು ಮೋಶೆ ಹೇಳಿದ್ದಾನೆ.
24 : ಸಮುವೇಲನೂ ಅವನ ನಂತರ ಬಂದ ಎಲ್ಲ ಪ್ರವಾದಿಗಳೂ ದಿನಗಳಲ್ಲಿ ನಡೆಯುತ್ತಿರುವುದನ್ನು ದೈವದತ್ತವಾಗಿ ಸಾರಿದ್ದಾರೆ.
25 : ದೇವರು ಪ್ರವಾದಿಗಳ ಮುಖಾಂತರ ಮಾಡಿದ ವಾಗ್ದಾನಗಳಿಗೂ ನಿಮ್ಮ ಪೂರ್ವಜರೊಂದಿಗೆ ಮಾಡಿದ ಒಡಂಬಡಿಕೆಗೂ ನೀವು ಉತ್ತರಾಧಿಕಾರಿಗಳು; ಪೂರ್ವಜ ಅಬ್ರಹಾಮನಿಗೆ, ‘ನಿನ್ನ ಸಂತತಿಯ ಮುಖಾಂತರ ವಿಶ್ವದ ಎಲ್ಲಾ ಜನಾಂಗಗಳು ಧನ್ಯರಾಗುವರು ಎಂದಿದ್ದಾರೆ ದೇವರು.
26 : ಅಂತೆಯೇ, ಅವರು ತಮ್ಮ ದಾಸನನ್ನು ಎಬ್ಬಿಸಿದ್ದಾರೆ. ನಿಮ್ಮೆಲ್ಲರನ್ನು ದುರ್ಮಾರ್ಗದಿಂದ ದೂರಮಾಡಿ ಧನ್ಯರಾಗಿಸಲು ಅವರನ್ನು ಮೊತ್ತಮೊದಲು ನಿಮ್ಮಲ್ಲಿಗೆ ಕಳುಹಿಸಿದ್ದಾರೆ.”
ಕೀರ್ತನೆ  -  8:1,4-8,  5,  6-9     
ಪ್ರಭು, ನಮ್ಮ ಪ್ರಭು, ಎನಿತು ಮಹಿಮಾನ್ವಿತ / ಹರಡಿವೆ ನಿನ್ನ ಸಿರಿನಾಮ ಜಗದಾದ್ಯಂತ
2 : ವಿರೋಧಿಗಳ ಬಾಯನು ಮುಚ್ಚಿಸಿದೆ ಬಾಲ ಬಾಲೆಯರ ಬಾಯಿಂದಲೆ / ಹಗೆಗಳನು ದುರ್ಗದಂತೆ ತಡೆದೆ ಮೊಲೆಗೂಸುಗಳ ನಾಲಿಗೆಯಿಂದಲೆ /
5 : ಆದರೆ ದೇವದೂತರಿಗಿಂತ ಕಿಂಚಿತ್ತೆ ಕೀಳಾಗಿಸಿದೆ ಮನುಜನನು / ಮುಡಿಸಿದೆ ಮುಕುಟವಾಗವನಿಗೆ ಘನ ಮಾನವನು, ಸಿರಿಹಿರಿಮೆಯನು //
6 : ಒಡೆಯನಾಗಿಸಿದೆ ನಿನ್ನಯ ಕರಕೃತಿಗಳಿಗೆ / ಒಳಪಡಿಸಿದೆ ಸಕಲವನು ಅವನ ಪಾದದಡಿಗೆ //
7 : ಕುರಿಗಳನು, ಕರುಗಳನು, ಕಾಡು ಮೃಗಗಳನು / ಗರಿಗಳನು, ವಿೂನುಗಳನು, ಜಲಚರಗಳನು /
8 : ಕರಗತ ಮಾಡಿದೆ ನೀ ಅವನಿಗೆಲ್ಲವನು //
9 : ಪ್ರಭು, ಎಮ್ಮ ಪ್ರಭು, ನಿನ್ನ ನಾಮಾಮೃತ / ಬೆಳಗಿದೆ ತನ್ನ ಮಹಿಮೆಯನು ಭುವನ ಪರ್ಯಂತ //

ಶುಭಸಂದೇಶ  -  ಲೂಕ  24:  35-48    
35 : ಆಗ ಅವರು ತಾವು ದಾರಿಯಲ್ಲಿ ಕಂಡ ವಿಷಯವನ್ನೂ ರೊಟ್ಟಿ ಮುರಿದು ಕೊಡುವಾಗ ಸ್ವಾಮಿಯನ್ನು ತಾವು ಗುರುತುಹಚ್ಚಿದ ವಿಷಯವನ್ನೂ ಅಲ್ಲಿದ್ದವರಿಗೆ ವರದಿಮಾಡಿದರು. ಶಿಷ್ಯರಿಗೆ ದಿವ್ಯದರ್ಶನ (ಮತ್ತಾ. 28.16-20; ಮಾರ್ಕ 16.14-18; ಯೊವಾ. 20.19-23; ಪ್ರೇ.ಕಾ. 1.6-8)
36 : ಅವರು ವರದಿಮಾಡುತ್ತಿದ್ದಂತೆ ಯೇಸುಸ್ವಾಮಿಯೇ ಅವರ ಮಧ್ಯೆ ಪ್ರತ್ಯಕ್ಷವಾಗಿ ನಿಂತು, ‘ನಿಮಗೆ ಶಾಂತಿ,’ ಎಂದರು.
37 : ಅವರೆಲ್ಲರೂ ಚಕಿತರಾಗಿ, ದಿಗಿಲುಗೊಂಡು, ತಾವು ಕಾಣುತ್ತಿರುವುದು ಭೂತವೆಂದು ಭಾವಿಸಿದರು.
38 : ಆಗ ಯೇಸು, “ಏಕೆ ಕಳವಳಪಡುತ್ತೀರಿ? ನಿಮ್ಮ ಮನಸ್ಸಿನಲ್ಲಿ ಸಂಶಯವೇಕೆ?
39 : ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿ, ನಾನೇ ಅಲ್ಲವೇ? ನನ್ನನ್ನು ಮುಟ್ಟಿ ನೋಡಿರಿ, ನೀವು ನನ್ನಲ್ಲಿ ಕಾಣುವಂತೆ, ಮಾಂಸ ಮತ್ತು ಎಲುಬು ಭೂತಕ್ಕೆ ಇರುವುದಿಲ್ಲ,” ಎಂದರು.
40 : ಇಂತೆಂದ ಮೇಲೆ ತಮ್ಮ ಕೈಗಳನ್ನೂ ಕಾಲುಗಳನ್ನೂ ಅವರಿಗೆ ತೋರಿಸಿದರು.
41 : ಶಿಷ್ಯರು ಇನ್ನೂ ನಂಬದೆ, ಆನಂದಾಶ್ಚರ್ಯಭರಿತರಾಗಿದ್ದರು. ಆಗ ಯೇಸು, “ನಿಮ್ಮಲ್ಲಿ ತಿನ್ನಲು ಏನಾದರೂ ಇದೆಯೇ?” ಎಂದು ಕೇಳಿದರು.
42 : ಹುರಿದ ವಿೂನಿನ ತುಂಡು ಒಂದನ್ನು ಶಿಷ್ಯರು ಕೊಟ್ಟರು.
43 : ಯೇಸು ಅದನ್ನು ತೆಗೆದುಕೊಂಡು ಅವರ ಎದುರಿಗೇ ತಿಂದರು. ಅಂತಿಮ ಸಂದೇಶ
44 : ತರುವಾಯ ಯೇಸುಸ್ವಾಮಿ, “ನಾನು ನಿಮ್ಮೊಡನೆ ಇದ್ದಾಗಲೇ ನಿಮಗೆ ತಿಳಿಸಿದ ವಿಷಯ ಇದು: ಮೋಶೆಯ ನಿಯಮದಲ್ಲೂ ಪ್ರವಾದಿಗಳ ಗ್ರಂಥದಲ್ಲೂ ಕೀರ್ತನೆಗಳಲ್ಲೂ ನನ್ನ ವಿಷಯವಾಗಿ ಬರೆದಿರುವುದೆಲ್ಲಾ ನೆರವೇರಲೇಬೇಕಾಗಿತ್ತು,” ಎಂದರು.
45 : ಆಮೇಲೆ, ಪವಿತ್ರ ಗ್ರಂಥವನ್ನು ಅವರು ಅರ್ಥಮಾಡಿಕೊಳ್ಳುವಂತೆ ಅವರ ಬುದ್ಧಿಯನ್ನು ವಿಕಾಸಗೊಳಿಸಿದರು.
46 : ಅನಂತರ, “ಮೊದಲೇ ಬರೆದಿರುವ ಪ್ರಕಾರ ಕ್ರಿಸ್ತನು ಯಾತನೆಯನ್ನು ಅನುಭವಿಸಿ ಸತ್ತು ಮೂರನೆಯ ದಿನ ಪುನರುತ್ಥಾನ ಹೊಂದಬೇಕಾಗಿತ್ತು;
47 : ಅಲ್ಲದೆ ಜನರು ಪಾಪಪರಿಹಾರ ಪಡೆಯಬೇಕಾದರೆ, ಪಶ್ಚಾತ್ತಾಪಪಟ್ಟು, ಪಾಪಕ್ಕೆ ವಿಮುಖರಾಗಿ, ದೈವಾಭಿಮುಖಿಗಳಾಗಬೇಕೆಂತಲೂ ಸಂದೇಶವನ್ನು ಜೆರುಸಲೇಮಿನಿಂದ ಮೊದಲ್ಗೊಂಡು ಎಲ್ಲಾ ಜನಾಂಗಗಳಿಗೂ ಆತನ ಹೆಸರಿನಲ್ಲೇ ಪ್ರಕಟಿಸಬೇಕೆಂತಲೂ ಮೊದಲೇ ಲಿಖಿತವಾಗಿತ್ತು.
48 : ಇದಕ್ಕೆಲ್ಲಾ ನೀವೇ ಸಾಕ್ಷಿಗಳು ಎಂದು ಹೇಳಿದರು     
ಚಿಂತನೆ
ಪುನರುತ್ಥಾನರಾದ ಪ್ರಭು ಯೇಸು ತಮ್ಮ ಶಿಷ್ಯರನ್ನು ಅತೀ ಮಮತೆಯಿಂದ ಭೇಟಿಮಾಡಿ ಅವರಿಗೆ ಧೈರ್ಯವನ್ನು, ಶಕ್ತಿಯನ್ನು ಕೊಡುತ್ತಾರೆ. ಈಗ ಶಿಷ್ಯರು ಕ್ರಿಸ್ತೇಸುವಿನ ಬಲದಿಂದ ಧರ್ಮಸಭೆಯ ಬುನಾದಿ ಸ್ಥಿರವಾಗಿ ಜಗತ್ತಿನಲ್ಲಿ ಸ್ಥಾಪಿಸುವುದಕ್ಕೆ ಪ್ರಾರಂಭಿಸುತ್ತಾರೆ.
ಎಮ್ಮಾವುಸ್ ಶಿಷ್ಯರು ಜೆರುಸಲೇಮಿಗೆ ಹಿಂದಿರುಗಿದ ನಂತರ, ದಾರಿಯಲ್ಲಿ ಯೇಸುವಿನೊಡನೆ ತಮಗಾದ ದೈವೀ ಅನುಭವವನ್ನು ವರದಿ ಮಾಡುವಾಗಲೇ ಯೇಸುಸ್ವಾಮಿ ಅವರ ಮಧ್ಯದಲ್ಲಿ ಪ್ರತ್ಯಕ್ಷರಾಗಿ ನಿಮಗೆ ಶಾಂತಿ ಎಂದು ಹೇಳುತ್ತಾರೆ. ಭಯಭ್ರಾಂತರಾದ ಅವರನ್ನು ಕಂಡ ಯೇಸುಸ್ವಾಮಿ ಹುರಿದುಂಬಿಸುವುದಕ್ಕಾಗಿ ನಿಮ್ಮಲ್ಲಿ ಏನಾದರೂ ತಿನ್ನುವುದಕ್ಕೆ ಇದ್ದರೆ ಕೊಡಿ, ಮತ್ತು ಇನ್ನಿತರ ಮಾತುಗಳಿಂದ ಅವರಿಗೆ ಧೈರ್ಯವನ್ನು ತಂದು ಕೊಡುತ್ತಾರೆ.
ಸರಿಯಾಗಿ ಅರ್ಥಮಾಡಿಕೊಂಡಿರದ ತಮ್ಮ ಪ್ರೇಷಿತರನ್ನು ವಿಶ್ವಾಸದಲ್ಲಿ ದೃಢಪಡಿಸಲು ಯೇಸುಸ್ವಾಮಿ ಆರಂಭಿಸುತ್ತಾರೆ ಹಾಗೂ ತಾವು ನಿಜವಾಗಿಯೂ ಸತ್ತು ಮೂರು ದಿನದ ನಂತರ ಪುನರುತ್ಥಾನವಾಗಿದ್ದಾರೆ ಎಂಬ ಸಂಗತಿಯನ್ನು ಮನಗಾಣಿಸುವಂತೆ ತಮ್ಮ ಶಿಷ್ಯರಲ್ಲಿ ಖಚಿತಪಡಿಸುತ್ತಾರೆ.
ಇನ್ನೊಂದು ಕಡೆ ಪ್ರೇಷಿತರು ಭರದಿಂದ ತಮ್ಮ ಕಾರ್ಯಕಲಾಪಗಳನ್ನು ಸುತ್ತಮುತ್ತ ಊರುಗಳಲ್ಲಿ, ಪವಿತ್ರಾತ್ಮರ ಪ್ರೇರಣೆಯಿಂದ ಧರ್ಮಪ್ರಚಾರ ನಡೆಸಲು ಪ್ರಾರಂಭಿಸಿದ್ದಾರೆ.  ಪ್ರಭು ಯೇಸುವಿನ ಮಹಿಮೆಯು ದಿನೇ ದಿನೇ ಬೆಳಗುತ್ತಿದೆ.  ಪುನರುತ್ಥಾನರಾದ ಪ್ರಭು ಯೇಸುವಿನಲ್ಲಿ ನಂಬಿರಿ ಮತ್ತು ಸ್ವರ್ಗವನ್ನು ನಿಮ್ಮದಾಗಿಸಿರಿ.  ಆಮೆನ್.
ಫಾ ಅಂಬ್ರೋಸ್ ಡಿ'ಸೋಜಾ ಯೇ.ಸ

ಸಂತ ಮಾರ್ಕ
ಶುಭಸಂದೇಶವನ್ನು ರಚಿಸಿದ ಮಾರ್ಕನು ಹುಟ್ಟಿದ್ದು ಈಜಿಪ್ಟ್ ದೇಶಕ್ಕೆ ಹೊಂದಿಕೊಂಡಂತಿದ್ದ ಲಿಬಿಯಾ ನಾಡಿನ ಪಶ್ಚಿಮ ಗಡಿಯಲ್ಲಿ. ಅಲ್ಲಿನ ಯೆಹೂದಿ ಕುಟುಂಬದಲ್ಲಿ ಜನಿಸಿದ ಮಾರ್ಕ ಯೇಸುವಿಗಿಂತ ಸುಮಾರು ಹದಿನೈದು ವರ್ಷ ಚಿಕ್ಕವನು. ಅವನ ಮೂಲ ಹೆಸರು ಯೊವಾನ್ನ. ಆದರೆ ಅವನ ಮನೆತನದ ಹೆಸರಾದ ಮಾರ್ಕ ಎಂಬುದೇ ಅವನಿಗೆ ಅನ್ವರ್ಥವಾಗಿ ಬಳಕೆಯಲ್ಲಿದೆ. ಅಪೋಸ್ತಲರ ಕೃತ್ಯಗಳ 12:12, 15:37 ಮತ್ತು 12:25ರಲ್ಲಿ ಇದರ ಉಲ್ಲೇಖವಿದೆ. ಮಾರ್ಕ ಹುಟ್ಟಿದ ಕೆಲದಿನಗಳಲ್ಲೇ ಯುದ್ಧ ಸಂಭವಿಸಿ ಅವನ ತಂದೆತಾಯಿ ತಮ್ಮ ಆಸ್ತಿಪಾಸ್ತಿಯನ್ನೆಲ್ಲ ಕಳೆದುಕೊಂಡು ಮಗುವನ್ನೆತ್ತಿಕೊಂಡು ಪಾಲೆಸ್ತೀನಿಗೆ ವಲಸೆ ಹೋಗಿ ಗಲಿಲೇಯ ನಾಡಿನ ಕಾನಾ ಊರಿನಲ್ಲಿ ನೆಲೆನಿಂತರು. ಕೆಲ ದಿನಗಳ ನಂತರ ಮಾರ್ಕನ ತಂದೆ ತೀರಿಹೋದುದರಿಂದ ಅವರ ಸಂಬಂಧಿಕನಾಗಿದ್ದ ಸಿಮೋನ್ ಪೇತ್ರನು ಮಾರ್ಕನನ್ನು ಮಗನಂತೆ ನೋಡಿಕೊಂಡನು. (1 ಪೇತ್ರ 5:13). ಪೇತ್ರನ ಪಾಲನೆಯಲ್ಲಿ ಮಾರ್ಕನು ಕಾನೂನು ಮತ್ತು ಇತರ ಶಾಸ್ತ್ರಗಳನ್ನು ಕಲಿತನು. ಅಲ್ಲದೆ ಪಾಲೆಸ್ತೀನಿನಲ್ಲಿ ಯೇಸುವಿನ ಬೋಧನೆಗಳನ್ನು ಹಾಗೂ ಯಾತನೆಗಳನ್ನು ಕಣ್ಣಾರೆ ಕಂಡವನು. ಮೊತ್ತಮೊದಲ ಶುಭಸಂದೇಶವನ್ನು (ಗ್ರೀಕ್ ಭಾಷೆಯಲ್ಲಿ) ಬರೆದವನು ಇವನೇ ಎಂದು ನಂಬಲಾಗಿದೆ. ಅವನು ಯೇಸುವಿನ ಕಥನದ ಎಲ್ಲ ಆಖ್ಯಾಯಿಕೆಗಳ ವಿವರಗಳನ್ನು ಪಡೆದುಕೊಂಡಿದ್ದು ಪೇತ್ರನಿಂದಲೇ ಎನ್ನುತ್ತಾರೆ ಬೈಬಲ್ ವಿದ್ವಾಂಸರು. ಅದೇ ರೀತಿ ಮತ್ತಾಯ ಮತ್ತು ಲೂಕರೂ ತಮ್ಮ ಶುಭಸಂದೇಶಗಳ ಹೂರಣವನ್ನು ಪಡೆದುಕೊಂಡಿದ್ದು ಮಾರ್ಕನಿಂದಲೇ. ಮಾರ್ಕ ತನ್ನ ಶುಭಸಂದೇಶದಲ್ಲಿ ತನ್ನನ್ನು ಮೂರನೆಯ ವ್ಯಕ್ತಿಯಾಗಿ ಬಿಂಬಿಸಿಕೊಳ್ಳುತ್ತಾನೆ. ಮಾರ್ಕ 14:51-52ರಲ್ಲಿ ದುಪಟಿಯನ್ನು ಅಲ್ಲೇ ಬಿಸುಟು ಬೆತ್ತಲೆಯಾಗಿ ಓಡಿಹೋಗುವ ಯುವಕ ಮಾರ್ಕನೇ.
ಕ್ರಿಸ್ತಶಕ 44ರಲ್ಲಿ ಪೌಲ ಮತ್ತು ಬಾರ್ನಬರೊಂದಿಗೆ ಅಂತಿಯೋಕಕ್ಕೆ ಹೋದ ಈತ ಆ ಪ್ರಯಾಣ ಸೈಪ್ರಸ್ಸಿಗೆ ಮುಂದುವರಿದಾಗ ತಂಡವನ್ನು ತೊರೆದು ಮನೆಗೆ ಹಿಂದಿರುಗಿದ. (ಅಪೋ. ಕೃತ್ಯ 13:13). ಇದರಿಂದ ಮಾರ್ಕನ ಬಗ್ಗೆ ಪೌಲನಿಗೆ ಅಸಹನೆಯುಂಟಾಯಿತು. ತನ್ನ ಎರಡನೆಯ ಪಯಣದಲ್ಲಿ ಅವರು ಮಾರ್ಕನನ್ನು ಸೇರಿಸಿಕೊಳ್ಳಲಿಲ್ಲ. ಆದರೆ ಕ್ರಮೇಣ ಮಾರ್ಕನ ಪ್ರತಿಭೆಯ ಕುರಿತು ಪೌಲನಿಗೆ ಮನವರಿಕೆಯಾಗುತ್ತದೆ. ಪೌಲ ಬಂಧನದಲ್ಲಿದ್ದಾಗ ಅವನನ್ನು ಮಾರ್ಕ ಸಂದರ್ಶಿಸಿದ್ದ ಹಾಗೂ ಕೊಲೊಸ್ಸೆಯರ ಬಳಿಗೆ ಅವನನ್ನು ಕಳುಹಿಸಲಿದ್ದ ಎಂಬ ಮಾತು ಕೊಲೊಸ್ಸೆಯರಿಗೆ ಬರೆದ ಪತ್ರ 4:10ರಲ್ಲಿ ಉಲ್ಲೇಖವಾಗಿದೆ. ಪೌಲನ ಶಿರಚ್ಛೇದದ ಸಮಯದಲ್ಲೂ ಮಾರ್ಕ ಅಲ್ಲಿದ್ದ. (2 ತಿಮೊಥಿ 4:11)
ಕ್ರಿಸ್ತಶಕ 48ರಲ್ಲಿ ಮಾರ್ಕ ಅಲೆಕ್ಸಾಂಡ್ರಿಯಾಕ್ಕೆ ತೆರಳಿ ಶುಭಸಂದೇಶವನ್ನು ಮೊತ್ತಮೊದಲ ಬಾರಿ ಅಲ್ಲಿ ಬಿತ್ತಿದ. ಹಾಗಾಗಿ ಈಜಿಪ್ಟಿನ ಧರ್ಮಸಭೆಯ ಮೂಲಪುರುಷನೆಂದು ಅವನನ್ನು ಗೌರವಿಸಲಾಗುತ್ತದೆ. ಸುಮಾರು ಕ್ರಿ.ಶ. 68ರಲ್ಲಿ ಸೆರಾಪಿಯನ್ ದೇವತೆಯ ಭಕ್ತರು ಅವನನ್ನು ಕುದುರೆಯ ಬಾಲಕ್ಕೆ ಕಟ್ಟಿ ಅಲೆಕ್ಸಾಂಡ್ರಿಯಾದ ಬೀದಿಬೀದಿಗಳಲ್ಲಿ ಎರಡು ದಿನಗಳ ಕಾಲ ಎಳೆದಾಡಿ ಕೊಂದರು.
- ಮರಿಜೋಸೆಫ್ 

No comments:

Post a Comment