Friday, 19 April 2019

27 ಏಪ್ರಿಲ್ 2019

ಬಿಳಿ/ಶನಿ /ಪಾಸ್ಖ ಹಬ್ಬ ಅಷ್ಟಮಿಯ ಏಳನೇ ದಿನ  
1ನೇ  ವಾಚನ  -  ಪ್ರೇ.ಕಾ  413-21   
ಕೀರ್ತನೆ  -  118114-21
ಶುಭಸಂದೇಶ  -ಸಂದೇಶ:     
ಮಾರ್ಕ  169-15               

ಸಂತ  ಲೂಯಿ ಗ್ರಿಜ್ಞೊನ್  ದೆ ಮೊಂಟ್ಫೋರ್ಟ್ಸಂತ  ಪೀಟರ್‍ ಚಾನೆಲ್  ಸ್ಮರಣೆ  ಇರುವುದಿಲ್ಲ       
1ನೇ  ವಾಚನ  -  ಪ್ರೇ.ಕಾ  4:  13-21   
13 ಅವಿದ್ಯಾವಂತರು ಹಾಗೂ ಜನ ಸಾಮಾನ್ಯರು ಆಗಿದ್ದರೂ, ಇವರು ಇಷ್ಟು ಧೈರ್ಯಶಾಲಿಗಳಾಗಿರುವುದನ್ನು ಕಂಡು ಸಭೆಯ ಸದಸ್ಯರು ಚಕಿತರಾದರು; ಯೇಸುವಿನ ಸಂಗಡಿಗರೆಂದು ಇವರ ಗುರುತುಹಚ್ಚಿದರು.
14 : ಗುಣಹೊಂದಿದ್ದ ಮನುಷ್ಯನು ಪೇತ್ರ ಮತ್ತು ಯೊವಾನ್ನರ ಜೊತೆ ನಿಂತಿರುವುದನ್ನು ಕಂಡು ನಿರುತ್ತರರಾದರು.
15 : ಸಭಾಕೂಟದಿಂದ ಪ್ರೇಷಿತರನ್ನು ಹೊರಗೆ ಕಳುಹಿಸಿ ತಮ್ಮೊಳಗೇ ಚರ್ಚಿಸಲಾರಂಭಿಸಿದರು:
16 : ಇವರನ್ನು ಏನು ಮಾಡೋಣ? ಇವರು ಮಾಡಿರುವ ಅಪರೂಪ ಅದ್ಭುತ ಜೆರುಸಲೇಮಿನ ಸರ್ವರಿಗೂ ತಿಳಿದು ಹೋಗಿದೆ. ಅದನ್ನು ಅಲ್ಲಗಳೆಯುವಂತಿಲ್ಲ.
17 : ಆದರೂ, ಸಮಾಚಾರ ಜನರಲ್ಲಿ ಮತ್ತಷ್ಟು ಹರಡದಂತೆ ಇನ್ನು ಮೇಲೆ ಯಾರ ಬಳಿಯಲ್ಲೂ ಯೇಸುವಿನ ಹೆಸರೆತ್ತದಂತೆ ಇವರಿಗೆ ಎಚ್ಚರಿಕೆ ಕೊಡೋಣ,” ಎಂದುಕೊಂಡರು.
18 : ಅನಂತರ ಪ್ರೇಷಿತರನ್ನು ಒಳಕ್ಕೆ ಕರೆದು, “ಇನ್ನು ಮುಂದೆ ಯೇಸುವಿನ ಹೆಸರೆತ್ತಿ ಮಾತನಾಡಬಾರದು, ಬೋಧಿಸಕೂಡದು,” ಎಂದು ಕಟ್ಟಪ್ಪಣೆ ಮಾಡಿದರು.
19 : ಆಗ ಪೇತ್ರ ಮತ್ತು ಯೊವಾನ್ನರು, “ನಾವು ದೇವರಿಗೆ ವಿಧೇಯರಾಗಬೇಕೋ? ನಿಮಗೆ ವಿಧೇಯರಾಗಬೇಕೋ? ದೇವರ ದೃಷ್ಟಿಯಲ್ಲಿ ಯಾವುದು ಸರಿ? ನೀವೇ ನಿರ್ಣಯಿಸಿರಿ.
20 ನಾವಂತೂ ಕಣ್ಣಾರೆ ಕಂಡು, ಕಿವಿಯಾರೆ ಕೇಳಿದ ವಿಷಯವನ್ನು ಕುರಿತು ಮೌನದಿಂದಿರಲಾಗದು,” ಎಂದು ಬದಲು ನುಡಿದರು.
21 ನಡೆದ ಅದ್ಭುತಕ್ಕಾಗಿ ಜನರೆಲ್ಲರೂ ದೇವರನ್ನು ಕೊಂಡಾಡುತ್ತಿದ್ದರು. ಇದನ್ನು ಅರಿತ ಸಭಾಸದಸ್ಯರಿಗೆ ಪ್ರೇಷಿತರನ್ನು ಶಿಕ್ಷಿಸುವ ಮಾರ್ಗ ತೋಚದೆ ಹೋಯಿತು. ಆದುದರಿಂದ ಅವರನ್ನು ಇನ್ನೂ ಅಧಿಕವಾಗಿ ಎಚ್ಚರಿಸಿ ಕಳುಹಿಸಿಬಿಟ್ಟರು.
ಕೀರ್ತನೆ  -  118:  1,  14-21
01 : ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ / ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ //
14 : ಪ್ರಭುವೇ ನನಗೆ ಬಲವು, ಧೈರ್ಯವು / ಆತನಿಂದಲೇ ನನಗೆ ಉದ್ಧಾರವು //
15 : ಜಯಘೋಷ, ಹರ್ಷಸುನಾದ ಸಜ್ಜನರ ಬಿಡಾರದಿಂದ / “ಪರಾಕ್ರಮ, ಪ್ರದರ್ಶನ ಪ್ರಭುವಿನ ಬಲಗೈಯಿಂದ //
16 : ವಿಜಯಸಾಧನ ಪ್ರಭುವಿನಾ ಬಲಗೈಯಿಂದ / ಪರಾಕ್ರಮ, ಪ್ರದರ್ಶನವೂ ಅದರಿಂದ //
17 : ಸಾಯೆನು, ಜೀವದಿಂದಿರುವೆನು ನಾನು / ಪ್ರಭುವಿನ ಕಾರ್ಯಗಳನು ಸಾರುವೆನು //
18 : ಗುರಿಪಡಿಸಿಹನು ಎನ್ನನು ಪ್ರಭು ಕಠಿಣ ಶಿಕ್ಷೆಗೆ / ಆದರೂ ಗುರಿಮಾಡಲಿಲ್ಲ ಎನ್ನನು ಮರಣಕೆ //
19 : ತೆರೆಯಿರಿ ಎನಗೆ ನೀತಿದ್ವಾರಗಳನು / ಒಳನುಗ್ಗಿ ಹೊಗಳುವೆನು ಪ್ರಭುವನು //
20 : ಇದುವೇ ದ್ವಾರ ಪ್ರಭುವಿನ ಮಂದಿರಕೆ / ಇದುವೇ ಪ್ರವೇಶಮಾರ್ಗ ಸಜ್ಜನರಿಗೆ //
21 : ಸದುತ್ತರ ಪಾಲಿಸಿದ ಪ್ರಭೂ, ನಿನಗೆ ವಂದನೆ / ಉದ್ಧಾರ ಮಾಡಿದೆ, ನಿನಗೆ ಕೃತಜ್ಞತಾವಂದನೆ //
ಶುಭಸಂದೇಶ 
9 : ಭಾನುವಾರ ಮುಂಜಾನೆ ಪುನರುತ್ಥಾನ ಹೊಂದಿದ ಯೇಸುಸ್ವಾಮಿ, ಮೊತ್ತಮೊದಲು ಮಗ್ದಲದ ಮರಿಯಳಿಗೆ ಕಾಣಿಸಿಕೊಂಡರು. ಅವರು ಏಳು ದೆವ್ವಗಳನ್ನು ಹೊರಗಟ್ಟಿದ್ದು ಈಕೆಯಿಂದಲೇ.
10 : ಈಕೆ ಹೋಗಿ ತಾನು ಕಂಡದ್ದನ್ನು ಯೇಸುವಿನ ಸಂಗಡಿಗರಿಗೆ ತಿಳಿಸಿದಳು. ಅವರಾದರೋ ಇನ್ನೂ ಶೋಕಭರಿತರಾಗಿ ಅಳುತ್ತಾ ಕುಳಿತಿದ್ದರು.
11 : ಆದರೆ ಯೇಸು ಜೀವಂತರಾಗಿದ್ದಾರೆ ಮತ್ತು ಆಕೆಗೆ ಕಾಣಿಸಿಕೊಂಡಿದ್ದಾರೆ ಎಂಬ ವಾರ್ತೆಯನ್ನು ಕೇಳಿದಾಗ ಅವರು ಅದನ್ನು ನಂಬಲೇ ಇಲ್ಲ. ಶಿಷ್ಯರಿಬ್ಬರಿಗೆ ದರ್ಶನ (ಲೂಕ 24.13-35)
12 : ತರುವಾಯ, ಹಳ್ಳಿಯೊಂದಕ್ಕೆ ಪ್ರಯಾಣ ಮಾಡುತ್ತಿದ್ದ ತಮ್ಮ ಇಬ್ಬರು ಶಿಷ್ಯರಿಗೆ ಯೇಸುಸ್ವಾಮಿ ಇನ್ನೊಂದು ರೀತಿಯಲ್ಲಿ ಕಾಣಿಸಿಕೊಂಡರು.
13 : ಇವರಿಬ್ಬರೂ ಹಿಂದಿರುಗಿ ಬಂದು, ಮಿಕ್ಕ ಶಿಷ್ಯರಿಗೆ ಇದನ್ನು ತಿಳಿಸಿದರು. ಆದರೆ ಅದನ್ನು ಅವರು ನಂಬದೆ ಹೋದರು. ಪ್ರೇಷಿತರಿಗೆ ಕೊಟ್ಟ ದರ್ಶನ ಹಾಗೂ ಆದೇಶ (ಮತ್ತಾ. 28.16-20; ಲೂಕ 24.36-49; ಯೊವಾ. 20.19-23; ಪ್ರೇ.ಕಾ. 1.6-8)
14 : ಅನಂತರ, ಹನ್ನೊಂದು ಮಂದಿ ಶಿಷ್ಯರು ಊಟಮಾಡುತ್ತಿದ್ದಾಗ ಯೇಸುಸ್ವಾಮಿ ಪ್ರತ್ಯಕ್ಷರಾದರು. ತಾವು ಪುನರುತ್ಥಾನ ಹೊಂದಿದ ಮೇಲೆ, ತಮ್ಮನ್ನು ಕಂಡವರ ಮಾತನ್ನು ಅವರು ನಂಬದಿದ್ದ ಕಾರಣ ಅವರ ಅವಿಶ್ವಾಸವನ್ನೂ ಹೃದಯ ಕಾಠಿಣ್ಯವನ್ನೂ ಯೇಸು ಖಂಡಿಸಿದರು.
15 : ಬಳಿಕ ಅವರಿಗೆ, ‘ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ.
ಚಿಂತನೆ
ಜೀವದಾಶೆಯಿಂದ ಎಲ್ಲಾ ಪ್ರೇಷಿತರು ಒಂದು ಕೊಠಡಿಯನ್ನು ಸೇರುತ್ತಾರೆ. ಹೊರೆಗಡೆ, ಊರಲ್ಲಿ ಏನಾದರು ಕಾಣಿಸಿಕೊಂಡರೆ ಕಂಡಿತ ತಮಗೆ ಉಳಿಗಾಲವಿಲ್ಲ, ಎಂದು ಭಾವಿಸಿದ ಶಿಷ್ಯರು ಮಾಗ್ದಾಲದ ಮರಿಯಾ ಮತ್ತು ಎಮ್ಮಾವುಸದ ಇಬ್ಬರು ಶಿಷ್ಯರು ಬಂದು ಯೇಸುಸ್ವಾಮಿ ಪುರುತ್ಥಾನರಾಗಿದ್ದಾರೆ, ನಮಗೆ ಭೇಟಿಯಾಗಿದ್ದಾರೆ, ಎಂಬುದು ನಂಬಲಿಲ್ಲ.
ಆದರೆ ಯೇಸುಕ್ರಿಸ್ತರ ಮಾತುಗಳು, ಹೆದರಿ ಕಂಗಾಲಾದ ಪ್ರೇಷಿತರಿಗೆ ಪ್ರೋತ್ಸಾಹ ಕೊಡುತ್ತವೆ, ಉತ್ಸಾಹ ಮತ್ತು ಅತ್ಯಧಿಕವಾದ ಧೈರ್ಯವನ್ನು ಕೊಡುತ್ತವೆ. ಯೇಸುಸ್ವಾಮಿಯ ಸಾಮೀಪ್ಯ ಶಿಷ್ಯರ ಅಪನಂಬಿಕೆಯ ಹೃದಯದಲ್ಲಿ ವಿಶ್ವಾಸ ನಂಬಿಕೆಯನ್ನು ದೃಢವಾಗಿಸುತ್ತದೆ.  ಇದನ್ನು ಅರಿತ ಯೇಸುಸ್ವಾಮಿ ಶಿಷ್ಯರಿಗೆ ವಿಶ್ವದ ಎಲ್ಲ ಕಡೆಗೆ ಹೋಗಿ ಇಡೀ ಜಗತ್ತಿಗೆ ಶುಭಸಂದೇಶವನ್ನು ಸಾರಿರಿ ಎಂಬ ಆದೇಶವನ್ನು ಕೊಡುತ್ತಾರೆ.
ಆ ಆದೇಶದ ಮೇರೆಗೆ ಈಗಲೂ ಕೂಡ ಆ ಸುವಾರ್ತೆಯನ್ನು ಸಾರುವ ಕಾರ್ಯ ನಾವು ನಡೆಯಿಂದ, ನುಡಿಯಿಂದ ಮತ್ತು ಕರ್ತವ್ಯವೆಂಬಂತೆ ನಿರ್ವಹಿಸುತ್ತಾ ಇದ್ದೇವೆ.  ಯೇಸುಸ್ವಾಮಿ ಪಾಡುಪಟ್ಟು, ಶಿಲುಬೆಗೇರಿಸಲ್ಪಟ್ಟು, ಸತ್ತು ಮೂರನೆಯ  ದಿನ ಮೃತರಿಂದ ಪುನರುತ್ಥಾನರಾಗಿ, ಸ್ವರ್ಗದಲ್ಲಿ ದೇವರ ಬಲಪಾರ್ಶ್ವದಲ್ಲಿ ಆಸಿನರಾಗಿದ್ದಾರೆ. ಎಂಬುವುದನ್ನು ಸಾರುತ್ತಲೇ ಇರಬೇಕು.  ಆಮೆನ್.
- ಫಾ ಅಂಬ್ರೋಸ್ ಡಿ'ಸೋಜಾ ಯೇ.ಸ

ಸಂತ ಲೂಯಿ ಗ್ರಿಙಿಯೋನ್ ದೆ ಮೋನ್ ಫೋರ್ಟ್
1673ರ ಜನವರಿ 31ರಂದು ಫ್ರಾನ್ಸ್ ದೇಶದ ಮೋನ್ ಫೋರ್ಟ್ ಬಳಿಯ ಹಳ್ಳಿಯೊಂದರಲ್ಲಿ ಜನಿಸಿದ ಲೂಯಿಯವರ ಮನೆತನದ ಹೆಸರು ಗ್ರಿಙಿಯೊನ್. 1700ರಲ್ಲಿ ಅದೇ ಧರ್ಮಪ್ರಾಂತ್ಯದ ಗುರುವಾಗಿ ಅಭಿಷಿಕ್ತರಾದ ಲೂಯಿ ಇಡೀ ಪಶ್ಚಿಮ ಫ್ರಾನ್ಸಿನ ಧರ್ಮಕೇಂದ್ರಗಳಲ್ಲಿ ಬೋಧಿಸಲು ನಿಯುಕ್ತರಾದರು. ಹಳ್ಳಿಗಾಡಿನ ಬಡಜನತೆಯನ್ನು ಕಂಡ ಅವರು ಸರಳ ಜೀವನವನ್ನು ಅಳವಡಿಸಿಕೊಂಡು ವ್ಯಾಪಕ ಬೋಧನಾ ಪ್ರವಾಸದಲ್ಲಿ ತೊಡಗಿ ಕೆಲವೊಮ್ಮೆ ಧಾರ್ಮಿಕ ವರಿಷ್ಠರ ಕೋಪಕ್ಕೂ ಗುರಿಯಾದರು. ಹಲವಾರು ಜನರನ್ನು ಧರ್ಮದಲ್ಲಿ ಗಟ್ಟಿಯಾಗಿ ನೆಲೆಗೊಳಿಸಿದರಲ್ಲದೆ ಪ್ರತಿದಿನದ ಪೂಜೆ ಮತ್ತು ಪರಮಪ್ರಸಾದ ಸ್ವೀಕಾರವನ್ನು ಚಾಲ್ತಿಗೆ ತಂದರು. ಮರಿಯಮ್ಮನವರು ದೇವರಿಗೆ ವಿಧೇಯರಾದ ಆದರ್ಶವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಗುರುಗಳಿಗಾಗಿ ಮಿಷನರೀಸ್ ಆಫ್ ದ ಕಂಪೆನಿ ಆಫ್ ಮೇರಿ (ಮರಿಯಮ್ಮನವರ ಸಾಹಚರ್ಯದ ಮಿಷನರಿಗಳು) ಹಾಗೂ ಕನ್ಯೆಯರಿಗಾಗಿ ಡಾಟರ್ಸ್ ಆಫ್ ವಿಸ್ಡಂ ಫಾರ ದ ಸಿಕ್ (ರೋಗಿಗಳಿಗಾಗಿ ಜ್ಞಾನದ ಹೆಣ್ಣುಮಕ್ಕಳು) ಎಂಬ ಸಭೆಗಳನ್ನು ಹುಟ್ಟುಹಾಕಿದ ಇವರು ಟ್ರೂ ಡಿವೋಶನ್ ಟು ದ ಬ್ಲೆಸ್ಸಡ್ ವರ್ಜಿನ್ (ಪವಿತ್ರ ಕನ್ಯಾಮಾತೆಗೆ ನೈಜ ಭಕ್ತಿ) ಎಂಬ ಪುಸ್ತಕವನ್ನು ರಚಿಸಿದರು. 1716ರಲ್ಲಿ ಸೇಂಟ್ ಲೋರನ್ ಎಂಬಲ್ಲಿ ಮೃತರಾದ ಇವರನ್ನು 1947ರಲ್ಲಿ ಸಂತ ಪದವಿಗೇರಿಸಲಾಯಿತು.
ಸಂತ ಪೀಟರ್ ಚಾನಲ್
ಪೀಟರ್ ಚಾನೆಲ್ ನವರು ಫ್ರಾನ್ಸ್ ದೇಶದ ಬೆಯ್ಯೆ ಧರ್ಮಪ್ರಾಂತ್ಯದಲ್ಲಿ 1803ರಲ್ಲಿ ಜನಿಸಿದರು. ಅವರ ಸರಳ ಭಕ್ತಿ ಮತ್ತು ಕುಶಾಗ್ರಮತಿಯನ್ನು ಗಮನಿಸಿದ ಧರ್ಮಕೇಂದ್ರದ ಗುರುಗಳು ಅವರನ್ನು ಶಾಲೆಗೆ ಸೇರಿಸಿ ಓದಿಸಿದರು. ಆಮೇಲೆ ಗುರುಮಠ ಸೇರಿದ ಇವರು ಪ್ರಾಧ್ಯಾಪಕರ ಮತ್ತು ವಿದ್ಯಾರ್ಥಿಗಳೆಲ್ಲರಿಗೆ ಮೆಚ್ಚಿನವರಾದರು. ಗುರುಪಟ್ಟ ಪಡೆದ ಮೇಲೆ ಇವರನ್ನು ಹಳ್ಳಿಗಾಡಿನ ಒಂದು ಬರಡು ಚರ್ಚಿಗೆ ನಿಯೋಜಿಸಲಾಯಿತು. ಮೂರೇ ವರ್ಷಗಳಲ್ಲಿ ಅವರು ಅದನ್ನು ಭಕ್ತಾದಿಗಳಿಂದ ತುಂಬಿ ತುಳುಕುವಂತೆ ಮಾಡಿದರು. ಆದರೂ ಅವರ ಮನಸ್ಸಿನ್ಲಲಿ ಮಿಷನರಿಯಾಗುವ ತುಡಿತ ಹೆಚ್ಚಾಗಿತ್ತು . 1831ರಲ್ಲಿ ಅವರು ಆಗಷ್ಟೇ ಪ್ರಾರಂಭವಾಗಿದ್ದ ಸೊಸೈಟಿ ಆಫ್ ಮೇರಿ (ಮೇರಿಸ್ಟ್) ಸಭೆ ಸೇರಿದರು. ಆದರೆ ನಿರಾಶೆಯೆಂಬಂತೆ ಅವನ್ನು ಕಲಿಕಾವೃತ್ತಿಗೆ ನಿಯೋಜಿಸಲಾಗಿಯತು. ಮುಂದಿನ ಐದು ವರ್ಷಗಳು ಅವರು ಬೆಯ್ಯೆ ಗುರುಮಠದಲ್ಲಿ ಬೋಧಿಸಿದರು. 1836ರಲ್ಲಿ ಮೇರಿಸ್ಟರಿಗೆ ಪೆಸಿಫಿಕ್ ದ್ವೀಪಗಳಲ್ಲಿ ಧರ್ಮಪ್ರಸಾರ ಮಾಡಲು ಸೂಚಿಸಲಾಯಿತು. ಪೀಟರನವರು ಒಬ್ಬ ಬ್ರದರ್ ಹಾಗೂ ಒಬ್ಬ ಇಂಗ್ಲಿಷ್ ಶ್ರೀಸಾಮಾನ್ಯನೊಂದಿಗೆ ಸುಮಾರು ಹತ್ತು ತಿಂಗಳ ದೀರ್ಘ ಸಮುದ್ರಯಾನ ಮಾಡಿ ಫುಟುನಾ ದ್ವೀಪದಲ್ಲಿ ಕಾಲೂರಿದರು. ದ್ವೀಪವಾಸಿಗಳಾದ ಕಾಡುಜನರು ಇವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಕ್ರಮೇಣ ಅವರು ಸ್ಥಳೀಯ ಭಾಷೆಯನ್ನು ಕಲಿತುಕೊಂಡು ದ್ವೀಪದ ಜನರೊಂದಿಗೆ ಬಲು ಆಪ್ತವಾಗಿ ಒಡನಾಡತೊಡಗಿದರು. ಆ ದ್ವೀಪದ ಎಲ್ಲ ಧಾರ್ಮಿಕ ಕ್ರಿಎಯಗಳನ್ನು ನೆರವೇರಿಸುತ್ತಿದ್ದ ಮುಖಂಡನು ತನ್ನ ಜನರು ಕ್ರೈಸ್ತಧರ್ಮವನ್ನು ಸ್ವೀಕರಿಸಿದರೆ ತನಗೆ ಉಳಿಗಾಲವಿಲ್ಲ ಎಂದು ಆತಂಕಗೊಳ್ಳುತ್ತಾನೆ. ಅವನ ಮಗನೂ ಸಹ ತಾನು ಕ್ರೈಸ್ತನಾಗುವ ಇಚ್ಚೆ ವ್ಯಕ್ತಪಡಿಸಿದಾಗ ಆ ಮುಖಂಡನ ದ್ವೇಷ ಮಿತಿಮೀರುತ್ತದೆ. ಆತ ತನ್ನ ಬಲಗೈ ಬಂಟರನ್ನು ಕರೆದು ಪೀಟರರನ್ನು ಹಾಗೂ ಆ ಇಬ್ಬರು ಸಂಗಡಿಗರನ್ನು ನಿವಾರಿಸಿಬಿಡಲು ಆದೇಶಿಸುತ್ತಾನೆ. ಹೀಗೆ 1841 ಏಪ್ರಿಲ್ 28ರಂದು ಆ ಕಾಡುಜನರು ಪೀಟರನವರನ್ನು ಬಡಿಗೆಗಳಿಂದ ಹೊಡೆದು ಸಾಯಿಸುತ್ತಾರೆ. ವಿಪರ್ಯಾಸವೆಂದರೆ ಮುಂದಿನ ಐದೇ ತಿಂಗಳಲ್ಲಿ ಆ ಇಡೀ ದ್ವೀಪವು ಕ್ರೈಸ್ತಧರ್ಮವನ್ನು ಅಪ್ಪಿಕೊಳ್ಳುತ್ತದೆ.
- ಮರಿಜೋಸೆಫ್, ಬೆಂಗಳೂರು

No comments:

Post a Comment