ಬಿಳಿ/ಭಾನು/ಪಾಸ್ಖ
ಕಾಲದ
ಎರಡನೇ ಭಾನುವಾರ
ದಿವ್ಯ
ಕರುಣೆಯ
ಭಾನುವಾರ
1ನೇ ವಾಚನ - ಪ್ರೇ.ಕಾ 5: 12-16
ಕೀರ್ತನೆ - 118: 2-4, 22-27
2ನೇ
ವಾಚನ
- ಪ್ರಕಟಣೆ:
1:
9-13,
17-19
ಶುಭಸಂದೇಶ - ಯೊವಾನ್ನ 2೦: 19-31
1ನೇ ವಾಚನ - ಪ್ರೇ.ಕಾ 5: 12-16
12 ಜನರೆಲ್ಲರ ಕಣ್ಮುಂದೆ ಅನೇಕ ಅದ್ಭುತ ಕಾರ್ಯಗಳೂ ಸೂಚಕಕಾರ್ಯಗಳೂ ಪ್ರೇಷಿತರ ಮುಖಾಂತರ ನಡೆಯುತ್ತಿದ್ದವು. ಭಕ್ತವಿಶ್ವಾಸಿಗಳೆಲ್ಲರೂ ಸೊಲೊಮೋನನ ಮಂಟಪದಲ್ಲಿ ಸಭೆ ಸೇರುತ್ತಿದ್ದರು.
13 ಹೊರಗಿನವರು ಅವರನ್ನು ಬಹಳವಾಗಿ ಹೊಗಳುತ್ತಿದ್ದರೂ ಅವರ ಸಂಗಡ ಸೇರಲು ಯಾರಿಗೂ ಧೈರ್ಯವಿರಲಿಲ್ಲ.
14 : ಆದರೂ ಪ್ರಭುವನ್ನು ವಿಶ್ವಾಸಿಸುತ್ತಿದ್ದ ಸ್ತ್ರೀಪುರುಷರ ಸಂಖ್ಯೆ ಅಧಿಕವಾಗುತ್ತಾ ಬಂದಿತು.
15 : ಪೇತ್ರನು ಹಾದುಹೋಗುವಾಗ ಆತನ ನೆರಳಾದರೂ ಕೆಲವರ ಮೇಲೆ ಬೀಳಲೆಂದು ಜನರು ರೋಗಿಗಳನ್ನು ಹಾಸಿಗೆ ಅಥವಾ ಡೋಲಿಗಳ ಸಮೇತ ಹೊತ್ತುತಂದು ಹಾದಿಗಳಲ್ಲಿ ಮಲಗಿಸುತ್ತಿದ್ದರು.
16 : ಜೆರುಸಲೇಮಿನ ಸುತ್ತಮುತ್ತಲಿನ ಊರುಗಳಿಂದಲೂ ರೋಗಿಗಳನ್ನು ಮತ್ತು ಪಿಶಾಚಿಪೀಡಿತರನ್ನು ಜನರು ತರುತ್ತಿದ್ದರು; ಎಲ್ಲರೂ ಸ್ವಸ್ಥರಾಗುತ್ತಿದ್ದರು.
ಕೀರ್ತನೆ - 118: 2-4, 22-27
ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ / ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ //
1 : ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ / ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ //
2 : ಸಾರಲಿ ಇಸ್ರಯೇಲಿನ ಜನತೆ / ‘ಆತನ ಪ್ರೀತಿ ಶಾಶ್ವತ’ ಎಂದೆ //
3 : ಸಾರಲಿ ಆರೋನನ ವಂಶಲತೆ: / ‘ಆತನ ಪ್ರೀತಿ ಶಾಶ್ವತ’ ಎಂದೆ //
4 : ಸಾರಲಿ ಆತನ ಭಕ್ತರ ಪಂಥ / ಆತನ ಪ್ರೀತಿ ಶಾಶ್ವತ ಅಂಥ //
13 : ನನ್ನನು ತಳ್ಳಿ ಬೀಳಿಸ ನೋಡಿದರು ನೆಲಕೆ / ಆದರೆ ಪ್ರಭು ನೆರವು ನೀಡಿದನು ಎನಗೆ //
14 : ಪ್ರಭುವೇ ನನಗೆ ಬಲವು, ಧೈರ್ಯವು / ಆತನಿಂದಲೇ ನನಗೆ ಉದ್ಧಾರವು //
15 : ಜಯಘೋಷ, ಹರ್ಷಸುನಾದ ಸಜ್ಜನರ ಬಿಡಾರದಿಂದ / “ಪರಾಕ್ರಮ, ಪ್ರದರ್ಶನ ಪ್ರಭುವಿನ ಬಲಗೈಯಿಂದ //
22 : ಮನೆಕಟ್ಟುವವರು ಮೂಲೆಗೆಸೆದ ಕಲ್ಲು / ಆಯಿತು ನೋಡು, ಮುಖ್ಯವಾದ ಮೂಲೆಗಲ್ಲು //
23 : ಪ್ರಭುವಿನಿಂದಲೆ ಆದ ಈ ಕಾರ್ಯ / ನಮ್ಮ ಕಣ್ಣಿಗೆ ಅದೆಂತಹ ಆಶ್ಚರ್ಯ! //
24 : ಪ್ರಭುವೇ ನಿಯೋಜಿಸಿದ ದಿನವಿದು / ಹರ್ಷಿಸಿ ಆನಂದಿಸೋಣ ಇಂದು //
2ನೇ ವಾಚನ - ಪ್ರಕಟಣೆ: 1: 9-13, 17-19
9 : ನಾನು ಯೊವಾನ್ನ, ನಿಮ್ಮ ಸಹೋದರ; ಕ್ರಿಸ್ತೇಸುವಿನಲ್ಲಿ ದೇವರ ಸಾಮ್ರಾಜ್ಯಕ್ಕೆ ಸೇರಿರುವವರಿಗೆ ಬಂದೊದಗುವ ಕಷ್ಟಸಂಕಟಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳುವುದರಲ್ಲಿ ನಿಮ್ಮ ಪಾಲುಗಾರ. ದೇವರ ವಾಕ್ಯವನ್ನು ಸಾರಿದುದರಿಂದಲೂ ಕ್ರಿಸ್ತೇಸುವಿಗೆ ಸಾಕ್ಷಿ ನೀಡಿದುದರಿಂದಲೂ ನಾನು ಪತ್ಮೋಸ್ ದ್ವೀಪವಾಸವನ್ನು ಅನುಭವಿಸಬೇಕಾಯಿತು.
10 : ಪ್ರಭುವಿನ ದಿನದಂದು ನಾನು ದೇವರಾತ್ಮ ವಶನಾದೆ. ಆಗ ನನ್ನ ಬೆನ್ನ ಹಿಂದೆ ಮಹಾಶಬ್ದವೊಂದು ಕೇಳಿಸಿತು. ಅದು ತುತೂರಿಯ ನಾದದಂತಿತ್ತು.
11 ಅದು ಹೀಗೆಂದು ನುಡಿಯಿತು: “ನೀನು ಕಾಣುತ್ತಿರುವುದನ್ನು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ ಮತ್ತು ಲವೊದಿಕೀಯ ಎಂಬ ಪಟ್ಟಣಗಳಲ್ಲಿರುವ ಏಳು ಸಭೆಗಳಿಗೆ ಕಳುಹಿಸು.”
12 ನನ್ನ ಸಂಗಡ ಮಾತನಾಡುತ್ತಿರುವ ಈ ಶಬ್ದ ಯಾರದೆಂದು ನೋಡಲು ನಾನು ಹಿಂದಕ್ಕೆ ತಿರುಗಿದೆ. ಹಾಗೆ ತಿರುಗಿದಾಗ, ಏಳು ಚಿನ್ನದ ದೀಪಸ್ತಂಭಗಳನ್ನು ಕಂಡೆ.
13 ಆ ದೀಪಸ್ತಂಭಗಳ ನಡುವೆ ‘ನರಪುತ್ರ’ನಂಥ ಒಬ್ಬ ವ್ಯಕ್ತಿಯಿದ್ದರು. ಅವರು ನಿಲುವಂಗಿಯನ್ನು ತೊಟ್ಟಿದ್ದರು. ಅದು ಅವರ ಪಾದಗಳನ್ನು ಮುಟ್ಟುವಷ್ಟು ನೀಳವಾಗಿತ್ತು. ಅಲ್ಲದೆ, ಚಿನ್ನದ ಎದೆಪಟ್ಟಿಯನ್ನು ಕಟ್ಟಿಕೊಂಡಿದ್ದರು.
17 : ನಾನು ಅವರನ್ನು ಕಂಡಾಗ, ಸತ್ತವನಂತಾದೆ. ಅವರ ಪಾದಗಳ ಮುಂದೆ ಬಿದ್ದೆ. ಅವರು ತಮ್ಮ ಬಲಗೈಯನ್ನು ನನ್ನ ಮೇಲಿಟ್ಟು, “ಭಯಪಡಬೇಡ, ನಾನೇ ಮೊದಲನೆಯವನೂ ಕಡೆಯವನೂ
18 : ಸದಾ ಜೀವಿಸುವವನೂ ಆಗಿ ಇದ್ದೇನೆ. ಮರಣಹೊಂದಿದೆ ನಿಜ. ಆದರೆ ಇಗೋ ನೋಡು, ಯುಗಯುಗಾಂತರಕ್ಕೂ ಜೀವಿಸುವವನಾಗಿದ್ದೇನೆ.
ಮೃತ್ಯುವಿನ ಮತ್ತು ಮೃತ್ಯುಲೋಕದ ಬೀಗದ ಕೈಗಳು ನನ್ನಲ್ಲಿವೆ.
19 : ಆದುದರಿಂದ ನೀನು ಕಂಡ ಘಟನೆಗಳನ್ನು ಅಂದರೆ, ಈಗ ನಡೆಯುತ್ತಿರುವ ಘಟನೆಗಳನ್ನೂ ಮುಂದೆ ಸಂಭವಿಸಲಿರುವ ಘಟನೆಗಳನ್ನೂ ಕುರಿತು ಬರೆ ಎಂದರು
ಶುಭಸಂದೇಶ - ಯೊವಾನ್ನ 2೦: 19-31
19 : ಅದೇ ಭಾನುವಾರ ಸಂಜೆ ಶಿಷ್ಯರು ಒಂದು ಮನೆಯಲ್ಲಿ ಕೂಡಿದ್ದರು. ಯೆಹೂದ್ಯರಿಗೆ ಅಂಜಿ ಮನೆಯ ಬಾಗಿಲುಗಳನ್ನು ಮುಚ್ಚಿಕೊಂಡು ಒಳಗೇ ಇದ್ದರು. ಆಗ ಯೇಸು ಬಂದು ಅವರ ನಡುವೆ ನಿಂತರು.
20 : “ನಿಮಗೆ ಶಾಂತಿ” ಎಂದು ಹೇಳಿ ತಮ್ಮ ಕೈಗಳನ್ನು ಮತ್ತು ಪಕ್ಕೆಗಳನ್ನು ತೋರಿಸಿದರು. ಪ್ರಭುವನ್ನು ಕಂಡು ಶಿಷ್ಯರಿಗೆ ಮಹದಾನಂದವಾಯಿತು.
21 : ಯೇಸು ಪುನಃ, “ನಿಮಗೆ ಶಾಂತಿ, ಪಿತನು ನನ್ನನ್ನು ಕಳುಹಿಸಿದಂತೆಯೇ ನಾನೂ ನಿಮ್ಮನ್ನು ಕಳುಹಿಸುತ್ತೇನೆ,” ಎಂದರು.
22 : ಅನಂತರ ಅವರ ಮೇಲೆ ಉಸಿರೂದಿ, “ಪವಿತ್ರಾತ್ಮರನ್ನು ಸ್ವೀಕರಿಸಿರಿ.
23 : ಯಾರ ಪಾಪಗಳನ್ನು ನೀವು ಕ್ಷಮಿಸುತ್ತೀರೋ, ಅವರಿಗೆ ಅವನ್ನು ಕ್ಷಮಿಸಲಾಗುವುದು; ಯಾರ ಪಾಪಗಳನ್ನು ನೀವು ಕ್ಷಮಿಸದೆ ಉಳಿಸುತ್ತೀರೋ, ಅವರಿಗೆ ಕ್ಷಮಿಸದೆ ಉಳಿಸಲಾಗುವುದು,” ಎಂದು ನುಡಿದರು.
24 : ಹನ್ನೆರಡು ಮಂದಿಯಲ್ಲಿ ಒಬ್ಬನಾದ ದಿದುಮ ಎಂಬ ತೋಮನು, ಯೇಸುಸ್ವಾಮಿ ಬಂದಾಗ ಶಿಷ್ಯರೊಡನೆ ಇರಲಿಲ್ಲ.
25 : ಉಳಿದ ಶಿಷ್ಯರು “ನಾವು ಪ್ರಭುವನ್ನು ನೋಡಿದೆವು,” ಎಂದು ಹೇಳಿದರು. ಅದಕ್ಕೆ ಅವನು, “ಅವರ ಕೈಗಳಲ್ಲಿ ಮೊಳೆಗಳಿಂದಾದ ಗಾಯದ ಕಲೆಯನ್ನು ನಾನು ನೋಡಬೇಕು, ಮೊಳೆಗಳು ಜಡಿದಿದ್ದ ಜಾಗದಲ್ಲಿ ನನ್ನ ಬೆರಳನ್ನಿಡಬೇಕು, ಅವರ ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟು ನೋಡಬೇಕು. ಆ ಹೊರತು ನಾನು ನಂಬುವುದೇ ಇಲ್ಲ,” ಎಂದುಬಿಟ್ಟನು.
26 : ಎಂಟು ದಿನಗಳು ಕಳೆದವು. ಶಿಷ್ಯರು ಪುನಃ ಒಳಗೆ ಒಟ್ಟುಗೂಡಿದ್ದರು. ತೋಮನೂ ಅವರೊಡನೆ ಇದ್ದನು. ಬಾಗಿಲುಗಳು ಮುಚ್ಚಿದ್ದರೂ ಯೇಸು ಬಂದು ಅವರ ನಡುವೆ ನಿಂತು, “ನಿಮಗೆ ಶಾಂತಿ” ಎಂದರು.
27 : ಆಮೇಲೆ ತೋಮನಿಗೆ, “ಇಗೋ ನೋಡು, ನನ್ನ ಕೈಗಳು; ನಿನ್ನ ಬೆರಳನ್ನು ತಂದು ಇಲ್ಲಿಡು. ನಿನ್ನ ಕೈಯನ್ನು ಚಾಚಿ ನನ್ನ ಪಕ್ಕೆಯಲ್ಲಿಡು; ವಿಶ್ವಾಸರಹಿತನಾಗಿರಬೇಡ, ವಿಶ್ವಾಸಿಸು,” ಎಂದು ಹೇಳಿದರು.
28 : ಆಗ ತೋಮನು, “ನನ್ನ ಪ್ರಭುವೇ, ನನ್ನ ದೇವರೇ,” ಎಂದನು.
29 : ಯೇಸು ಅವನಿಗೆ “ನನ್ನನ್ನು ಕಂಡುದರಿಂದ ತಾನೆ ನಿನಗೆ ವಿಶ್ವಾಸ ಹುಟ್ಟಿತು? ಕಾಣದೆ ವಿಶ್ವಾಸಿಸುವವರು ಧನ್ಯರು,” ಎಂದು ಹೇಳಿದರು.
30 : ಯೇಸು ತಮ್ಮ ಶಿಷ್ಯರ ಕಣ್ಮುಂದೆ ಮಾಡಿದ ಸೂಚಕಕಾರ್ಯಗಳು ಇನ್ನೂ ಎಷ್ಟೋ ಇವೆ. ಅವನ್ನು ಈ ಪುಸ್ತಕದಲ್ಲಿ ಬರೆದಿಲ್ಲ.
31: ಇಲ್ಲಿ ಬರೆದವುಗಳ ಉದ್ದೇಶ ಇಷ್ಟೇ: ಯೇಸು, ದೇವರಪುತ್ರ ಹಾಗು ಲೋಕೋದ್ಧಾರಕ ಎಂದು ನೀವು ವಿಶ್ವಾಸಿಸಬೇಕು; ವಿಶ್ವಾಸಿಸಿ ಅವರ ಹೆಸರಿನಲ್ಲಿ ಸಜ್ಜೀವವನ್ನು ಪಡೆಯಬೇಕು.
ಚಿಂತನೆ
ವಿಶ್ವಾಸವು
ಪ್ರತಿಯೊಬ್ಬರ ಸ್ವಂತ ಸಂಪತ್ತು. ಅದು ಹೊರಗಿನಿಂದ ಬಂದರೂ ನಮ್ಮ ಹೃದಯಗಳಲ್ಲಿ ಮೊಳೆತು, ಬೆಳೆದು ನಮ್ಮಲ್ಲಿ
ಸ್ಥಿರವಾಗಿ, ಬೇರೂರಿರ ಬೇಕು. ಅದರ ಪಾಲನೆ ಪೋಷಣೆ
ಮಾಡಿ, ಸರಿಯಾದ ರೀತಿಯಲ್ಲಿ ಅದನ್ನು ಸಂಬಾಳಿಸಿಡಬೇಕು. ಇದು ಒಂದು ಹೊರಗಿನಿಂದ ಒಬ್ಬರ ಒಳಗೆ ಹರಿದು
ಬಂದು ನೆಲೆಸುವಂತ ನಂಬಿಕೆಯ ವಸ್ತುವಾಗಿದೆ.
ಯೇಸುಸ್ವಾಮಿಯ
ಪ್ರೇಷಿತರು ಸಾಕ್ಷಾತ್ತಾಗಿ ಪರೀಕ್ಷಿಸಿ ಪ್ರಮಾಣಿಸಿ ನಿಜವಾಗಿಯೂ ನಮ್ಮ ಪ್ರಭು ಯೇಸುಸ್ವಾಮಿ ಇವರೇ
ಎಂದು ಖಚಿತ ಪಡಿಸಿಕೊಂಡ ಹಾಗೆ ನಾವು ಇನ್ನು ಮುಂದೆ ಅವಿಶ್ವಾಸದಿಂದಿರಕೂಡದು ಎಂಬ ಸಂದೇಶ ಇದರಿಂದ ನಮಗೆ
ವ್ಯಕ್ತವಾಗುತ್ತದೆ. ನನ್ನನ್ನು ಕಾಣದೆ ವಿಶ್ವಾಸಿಸುವವರು ಧನ್ಯರು ಎಂಬ ವಿಷಯ ನಮ್ಮಲ್ಲಿ ಸದಾ ಇರಬೇಕು. ನಾವು ನಂಬಿಗಸ್ತರಾಗಿ ಬಾಳ ಬೇಕು. ಯೇವಿನ ಶಿಲುಬೆಯನ್ನು ಕಂಡು ನಿರಂತರವಾಗಿ ಅವರು ನಮಗಾಗಿ
ತಮ್ಮ ಪ್ರಾಣ ಶಿಲುಬೆ ಮೇಲೆ ತ್ಯಾಗ ಮಾಡಿ ನಮ್ಮನ್ನು ಶಾಶ್ವತವಾದ ನರಕದ ಬೆಂಕಿಯಿಂದ ರಕ್ಷಿಸಿರುವರು
ಎಂಬುದನ್ನು ಅರಿತುಕೊಂಡು ಅವರಿಗೆ ನಾವು ಸದಾಕಾಲಕ್ಕೂ ಚಿರಋಣಿಯಾಗಿರಬೇಕು. ಆಮೆನ್.
ಫಾ ಅಂಬ್ರೋಸ್ ಡಿ'ಸೋಜಾ ಯೇ.ಸ
No comments:
Post a Comment