ಬಿಳಿ/ಮಂಗಳ/
ಪಾಸ್ಖ
ಕಾಲದ
ಎರಡನೇ ವಾರ
1ನೇ ವಾಚನ - ಪ್ರೇ.ಕಾ 4: 32-37
ಕೀರ್ತನೆ
- 93:
1-2,
5
ಶುಭಸಂದೇಶ
- ಯೊವಾನ್ನ
3:
7-15
ಐಚ್ಛಿಕ
ಸ್ಮರಣೆ
- ಸಂತ
ಐದನೇ
ಭಕ್ತಿನಾಥರು,
(ವಿ.ಗು)
1ನೇ ವಾಚನ - ಪ್ರೇ.ಕಾ 4: 32-37
32 : ಭಕ್ತರ ಅನ್ಯೋನ್ಯ ಜೀವನ ಭಕ್ತವಿಶ್ವಾಸಿಗಳು ಒಗ್ಗಟ್ಟಿನಿಂದಲೂ ಒಮ್ಮನಸ್ಸಿನಿಂದಲೂ ಬಾಳುತ್ತಿದ್ದರು. ಯಾರೂ ತಮ್ಮ ಸೊತ್ತನ್ನು ತನ್ನದೇ ಎಂದು ಭಾವಿಸದೆ ಹುದುವಾಗಿ ಹಂಚಿಕೊಳ್ಳುತ್ತಿದ್ದರು.
33 : ಪ್ರೇಷಿತರು ಪ್ರಭು ಯೇಸುವಿನ ಪುನರುತ್ಥಾನಕ್ಕೆ ಬಹು ಸಾಮಥ್ರ್ಯದಿಂದ ಸಾಕ್ಷಿಕೊಡುತ್ತಿದ್ದರು.
ಜನರು ಅವರೆಲ್ಲರನ್ನು ಗೌರವದಿಂದ ಕಾಣುತ್ತಿದ್ದರು.
34 : ಅವರಲ್ಲಿ ಕೊರೆತೆಯಿದ್ದವರು ಒಬ್ಬರೂ ಇರಲಿಲ್ಲ.
35 : ಕಾರಣ - ಹೊಲಗದ್ದೆ, ಮನೆಮಾರು ಇದ್ದವರೆಲ್ಲರೂ ಅವುಗಳನ್ನು ವಿಕ್ರಯಿಸಿ, ಬಂದ ಹಣವನ್ನು ತಂದು ಪ್ರೇಷಿತರಿಗೆ ಪಾದಕಾಣಿಕೆಯಾಗಿ ಒಪ್ಪಿಸುತ್ತಿದ್ದರು. ಇವರು ಅದನ್ನು ಪ್ರತಿ ಒಬ್ಬರಿಗೂ ಅವರವರ ಅವಶ್ಯಕತೆಗೆ ತಕ್ಕಂತೆ ಹಂಚುತ್ತಿದ್ದರು.
36 : ಜೋಸೆಫ್ ಎಂಬ ಲೇವಿಯನು ಅವರ ಸಂಗಡ ಇದ್ದನು. ಇವನ ಹುಟ್ಟೂರು ಸೈಪ್ರಸ್. ಇವನಿಗೆ ‘ಬಾರ್ನಬ’ (ಎಂದರೆ ಪ್ರೋತ್ಸಾಹಪುತ್ರ) ಎಂದು ಪ್ರೇಷಿತರು ಹೆಸರಿಟ್ಟಿದ್ದರು.
37 : ಇವನು ತನ್ನ ಜಮೀನನ್ನು ಮಾರಿ ಬಂದ ಹಣವನ್ನು ಪ್ರೇಷಿತರಿಗೆ ಪಾದ ಕಾಣಿಕೆಯಾಗಿ ಒಪ್ಪಿಸಿದನು.
ಕೀರ್ತನೆ - 93: 1-2, 5
ವಹಿಸಿಹನು ಪ್ರಭು, ರಾಜ್ಯಾಧಿಕಾರವನು / ಧರಿಸಿಹನು ಘನತೆಯ ವಸ್ತ್ರ ಲಾಂಛನವನು
1 : ವಹಿಸಿಹನು ಪ್ರಭು, ರಾಜ್ಯಾಧಿಕಾರವನು / ಧರಿಸಿಹನು ಘನತೆಯ ವಸ್ತ್ರ ಲಾಂಛನವನು / ತೊಟ್ಟಿಹನು ಶೌರ್ಯವೆಂಬ ನಡುಕಟ್ಟನು / ಸ್ಥಿರಪಡಿಸಿಹನು ಕದಲದಂತೆ ಜಗವನು //
2 : ನಿನ್ನ ಸಿಂಹಾಸನ ಸ್ಥಿರ ಆದಿಯಿಂದ / ನೀನಿರುವೆ ಪ್ರಭು ಅನಾದಿಯಿಂದ //
3 : ಸಮುದ್ರಗಳು ಪ್ರಭು, ಮೊರೆಯುತಿಹವು / ಗರ್ಜನೆಗೈದು ಭೋರ್ಗರೆಯುತಿಹವು //
4 : ಸಾಗರಗಳ ಗರ್ಜನೆಗಿಂತ / ಸಮುದ್ರ ತರಂಗಗಳಿಗಿಂತ / ಮಹೋನ್ನತ ಪ್ರಭು ಬಲವಂತ //
5 : ನಿನ್ನ ಆಜ್ಞೆಗಳು ಪ್ರಭು, ಸುಸ್ಥಿರ / ನಿನ್ನ ಆಲಯಕೆ ಪವಿತ್ರತೆ ಅರ್ಹ / ಯುಗಯುಗಾಂತರಕೂ ಅದು ಅರ್ಹ //
ಶುಭಸಂದೇಶ - ಯೊವಾನ್ನ 3: 7-15
7 : ನೀವು ಹೊಸ ಜನ್ಮ ಪಡೆಯಬೇಕೆಂದು ನಾನು ಹೇಳಿದ್ದನ್ನು ಕೇಳಿ ಬೆರಗಾಗಬೇಕಿಲ್ಲ.
8 : ಗಾಳಿ ತನಗೆ ತೋಚಿದ ಕಡೆ ಬಿಸುತ್ತದೆ, ಅದರ ಸದ್ದು ನಿನಗೆ ಕೇಳಿಸುತ್ತದೆ; ಆದರೆ ಅದು ಎಲ್ಲಿಂದ ಬರುತ್ತದೆ, ಎಲ್ಲಿಗೆ ಹೋಗುತ್ತದೆ ಎಂಬುದು ನಿನಗೆ ತಿಳಿಯದು. ದೇವರ ಆತ್ಮನಿಂದ ಹುಟ್ಟಿದ ಪ್ರತಿಯೊಬ್ಬನೂ ಅದರಂತೆಯೇ,” ಎಂದು ಹೇಳಿದರು.
9 : ಅದಕ್ಕೆ ನಿಕೊದೇಮನು, “ಇದೆಲ್ಲಾ ಹೇಗೆ ಸಾಧ್ಯ?” ಎಂದು ಕೇಳಿದನು.
10 : ಆಗ ಯೇಸು, “ಇಸ್ರಯೇಲಿನ ಹೆಸರಾಂತ ಬೋಧಕನಾದ ನಿನಗೇ ಇದು ಅರ್ಥವಾಗಲಿಲ್ಲವೆ?
11 : ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ ಕೇಳು: ನಮಗೆ ತಿಳಿದುದನ್ನೇ ಕುರಿತು ನಾವು ಮಾತನಾಡುತ್ತೇವೆ; ನಾವು ಕಂಡದ್ದನ್ನು ಕುರಿತು ಸಾಕ್ಷಿ ನೀಡುತ್ತೇವೆ. ಆದರೂ ನಮ್ಮ ಸಾಕ್ಷ್ಯವನ್ನು ನೀವು ಒಪ್ಪಿಕೊಳ್ಳಲು ಸಿದ್ಧರಿಲ್ಲ.
12 : ಭೂಲೋಕದ ವಿಷಯವನ್ನು ಕುರಿತು ನಾನು ಮಾತನಾಡಿದಾಗಲೇ ನಿಮಗೆ ವಿಶ್ವಾಸವಿಲ್ಲವೆಂದ ಮೇಲೆ, ಸ್ವರ್ಗಲೋಕದ ವಿಷಯವನ್ನು ಕುರಿತು ನಾನು ಮಾತನಾಡಿದಲ್ಲಿ ನೀವು ವಿಸ್ವಾಸಿಸುವುದು ಉಂಟೆ?
13 : ಸ್ವರ್ಗಲೋಕದಿಂದಲೇ ಇಳಿದು ಬಂದ ನರಪುತ್ರನೇ ಹೊರತು ಬೇರೆ ಯಾರೂ ಸ್ವರ್ಗಕ್ಕೆ ಏರಿಹೋದವರಿಲ್ಲ.
14 : “ಮೋಶೆ ಮರುಭೂಮಿಯಲ್ಲಿ ಸರ್ಪವನ್ನು ಮೇಲಕ್ಕೆ ಏರಿಸಿದನು.
15
: ಅಂತೆಯೇ ನರಪುತ್ರನಲ್ಲಿ ವಿಶ್ವಾಸವಿಟ್ಟವರೆಲ್ಲರೂ ನಿತ್ಯಜೀವವನ್ನು ಪಡೆಯುವಂತೆ ನರಪುತ್ರನನ್ನು ಸಹ ಮೇಲಕ್ಕೆ ಏರಿಸಬೇಕು.
ಚಿಂತನೆ
ನಿಕೊದೇಮನೆಂಬ
ಒಬ್ಬ ಒಳ್ಳೆಯ ಹೃದಯವಂತಿಕೆಯ ಜಾಣ ಬುದ್ದಿವಂತ ವ್ಯಕ್ತಿಯಾಗಿದ್ದ. ಇವನು ರಾತ್ರಿಯ ಸಮಯದ ವೇಳೆಯಲ್ಲಿ ಯೇಸುಸ್ವಾಮಿಯನ್ನು ಹುಡುಕಿಕೊಂಡು
ಅವರಿದ್ದಲ್ಲಿಗೆ ಬಂದು ಗುಪ್ತವಾಗಿ ಸ್ವರ್ಗಸಾಮ್ರಾಜ್ಯದ ಬಗ್ಗೆ ಪ್ರಭುಕ್ರಿಸ್ತರ ಸಂಗಡ ಸವಿಸ್ತಾರವಾಗಿ
ಚರ್ಚಿಸುತ್ತಿದ್ದ. ಯೇಸುಸ್ವಾಮಿಯಿಂದ ಶುಭಸಂದೇಶವನ್ನು
ಕೇಳಿಕೊಂಡು ಆಲಿಸುತ್ತಿದ್ದ ಮಹಾಶಯನಾದ ಪುರುಷನಿವನು.
ಇವನಲ್ಲಿ ಬಹುತೇಕವಾಗಿ ಎಲ್ಲ ಸುಗುಣಗಳೂ ಇದ್ದವು. ಇವನು ಯೇಸುಸ್ವಾಮಿಯ ಪ್ರಶಂಸೆಗೆ ಪಾತ್ರನಾದ
ವ್ಯಕ್ತಿಯಾಗಿದ್ದವನು. ನಾವೂ ಕೂಡ ಇಂತಹ ಪ್ರಶಂಸೆಗೆ
ಪಾತ್ರರಾಗಲು ಬಯಸಬೇಕು. ಯಾವಾಗ ನಾವು ಯೇಸುಸ್ವಾಮಿಯವರಲ್ಲಿ ಬಿಚ್ಚು ಮನಸ್ಸಿನಿಂದ ಪ್ರಾರ್ಥಿಸುತ್ತೇವೋ
ಆವಾಗ ಕ್ರಿಸ್ತರ ಮೆಚ್ಚುಗೆಗೆ ಪಾತ್ರರಾಗುತ್ತೇವೆ.
ನರಪುತ್ರನಲ್ಲಿ
ವಿಶ್ವಾಸವಿಟ್ಟವರೆಲ್ಲರೂ ನಿತ್ಯಜೀವವನ್ನು ಪಡೆಯುವರು. ಅಂದರೆ, ಯೇಸುವಿನ ಪುನ್ರುತ್ಥಾನಕ್ಕೆ ಬಹು
ಸಾಮರ್ಥ್ಯದಿಂದ ಸಾಕ್ಷಿ ನೀಡುತ್ತಿರಬೇಕು. ಹಾಗಾದರೆ ಒಂದು ಅನ್ಯೋನ್ಯತೆಯ ಸಾತ್ವಿಕ ಬಾಳನ್ನು ಬಾಳುವುದಕ್ಕೆ
ಸಾಧ್ಯವಾಗುತ್ತದೆ. ಇದು ದೇವರಿಗೆ ಮಾನ್ಯವಾದ ಜೀವನವಾಗುವುದು. ಸದಾ ಮತ್ತು ನಿತ್ಯವೂ ಸುಗುಣವಾದ ಮಾತುಗಳನ್ನು,
ಹಿತಕರವಾದ ಪದಗಳನ್ನು ಉಪಯೋಗಿಸಬೇಕು. ಇದು ದೇವರಿಗೆ ಹಿಡಿಸುತ್ತದೆ. ಆಮೆನ್.
ಫಾ ಅಂಬ್ರೋಸ್ ಡಿ'ಸೋಜಾ ಯೇ.ಸ
ಸಂತ ಐದನೇ ಭಕ್ತಿನಾಥರು
ಕ್ರಿಸ್ತಶಕ 1566-72ರ ಅವಧಿಯಲ್ಲಿ ಪೋಪರಾಗಿದ್ದ ಸಂತ ಐದನೇ ಭಕ್ತಿನಾಥರ ಪೂರ್ವಾಶ್ರಮದ
ಹೆಸರು ಅಂಟೋನಿಯೋ ಗಿಸ್ಲಿಯರಿ. ಇಟಲಿಯ ಬಾಸ್ಕೋ ಎಂಬಲ್ಲಿ ಬಡಕುಟುಂಬದಲ್ಲಿ ಹುಟ್ಟಿದ ಇವರು
ಹದಿನಾಲ್ಕನೇ ವಯಸ್ಸಿನವರೆಗೂ ಕುರಿ ಮೇಯಿಸುತ್ತಿದ್ದರು. ಆನಂತರ ದೊಮಿನಿಕನ್ ಮಠ ಸೇರುವ ಇವರು 1528ರಲ್ಲಿ
ಗುರುವಾಗಿ ಹದಿನಾರು ವರ್ಷಗಳ ಕಾಲ ತತ್ವಶಾಸ್ತ್ರ ಧರ್ಮಶಾಸ್ತ್ರಗಳನ್ನು ಬೋಧಿಸುತ್ತಾರೆ.
ಬಲಿಯುತ್ತಿದ್ದ ಪ್ರೊಟೆಸ್ಟೆಂಟ್ ವಾದವನ್ನು ಸಮರ್ಥವಾಗಿ ಹತ್ತಿಕ್ಕುತ್ತಿದ್ದ ಇವರನ್ನು ಗಮನಿಸಿದ
ಕಾರ್ಡಿನಲ್ ಸರಾಫನವರು ಪೋಪರಿಗೆ ಹೇಳಿ ಇವರನ್ನು ಪಾಷಂಡವಾದ ನಿವಾರಣಾ ಸಮಿತಿಯ ಮುಖ್ಯಸ್ಥರನ್ನಾಗಿ
ನೇಮಿಸುತ್ತಾರೆ. ಆನಂತರದಲ್ಲಿ ಆ ಕರ್ಡಿನಾಲರೇ ಪೋ;ಪರಾಗಿ ಆಯ್ಕೆಯಾದ ಮೇಲೆ ಅಂಟೋನಿಯೋ ನವರು
ಮೇಲೇರುತ್ತಾ ಹೋಗಿ 1566ರಲ್ಲಿ ಸ್ವತಃ ಪೋಪರಾಗಿ ಆಯ್ಕೆಯಾಗುತ್ತಾರೆ. ಪೋಪರಾದ ಕೂಡಲೇ ಕಥೋಲಿಕ
ಧರ್ಮೋಪದೇಶ, ಬ್ರೀವಿಯರಿ ಹಾಗೂ ರೋಮನ್ ಪೂಜಾಪುಸ್ತಕಗಳನ್ನು ಮುದ್ರಿಸುತ್ತಾರೆ. ತೋಮಾಸ್
ಆಕ್ವಿನಾಸರ ಎಲ್ಲ ಕೃತಿಗಳನ್ನು ಮರುಪ್ರಕಟಿಸುತ್ತಾರೆ. ಧರ್ಮದ ವಿರುದ್ಧ ಸೊಲ್ಲೆತ್ತುವವರನ್ನು
ಹತ್ತಿಕ್ಕುವ ಟ್ರೆಂಟ್ ಸುಧಾರಣೆಯ ಠರಾವುಗಳನ್ನು ಮುದ್ರಿಸಿ ಪ್ರಪಂಚದೆಲ್ಲೆಡೆಯ ಕಥೋಲಿಕರಿಗೆ
ತಲಪುವಂತೆ ನೋಡಿಕೊಂಡರಲ್ಲದೆ ಅದರ ಜಾರಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸುತ್ತಾರೆ. ವೆನಿಸ್
ಮತ್ತು ಸ್ಪೇನಿನೊಂದಿಗೆ ಒಪ್ಪಂದ ಮಾಡಿಕೊಂಡು ಮೆಡಿಟರೇನಿಯನ್ ಸಮುದ್ರದಾಚೆಗೆ ಸದ್ದಿಲ್ಲದೇ
ಹರಡುತ್ತಿದ್ದ ಒಟ್ಟೊಮನ್ ಟರ್ಕರನ್ನು ಯುದ್ಧದಲ್ಲಿ ಸದೆಬಡಿಯುತ್ತಾರೆ. ಅಂದು ಯೂರೋಪಿನಾದ್ಯಂತ
ಕಥೋಲಿಕ ಭಕ್ತಾದಿಗಳ ನಿರಂತರ ಜಪಸರ ಜಪಿಸಿದ ಫಲವಾಗಿ ಮಾತೆ ಮರಿಯಮ್ಮನವರು ಈ ಅಭೂತಪೂರ್ವ ವಿಜಯವನ್ನು
ತಂದುಕೊಟ್ಟರು. ಅದಕ್ಕಾಗಿಯೇ ಆ ವಿಜಯದ ದಿನವನ್ನು ‘ವಿಜಯಮಾತೆಯ ಹಬ್ಬ’ ಎಂದು ಆಚರಿಸಲಾಗುತ್ತಿದೆ.
ಈ ವಿಜಯದ ಉನ್ಮಾದದಲ್ಲಿ ಪೋಪ್ ಐದನೇ ಭಕ್ತಿನಾಥರು ಕೆಲ ಆತುರದ ಕ್ರಮಗಳನ್ನೂ ಕೈಗೊಂಡರು.
ತಮ್ಮ ಆದೇಶಗಳಿಗೆ ತಲೆಬಾಗದ ರಾಣಿ ಎಲಿಝಬೆತ್-1 ರಿಗೆ ಧಾರ್ಮಿಕ ಬಹಿಷ್ಕಾರ ಹಾಕಿದ ಪರಿಣಾಮವಾಗಿ
ಇಂಗ್ಲೆಂಡ್ ನಾಡಿನ ಕಥೋಲಿಕ ಭಕ್ತರು ಹಿಂಸೆಬಾಧೆಗಳಿಂದ ತತ್ತರಿಸಿದರು. ಇದು ಧರ್ಮಸಭೆಯ
ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಪರಿಣಮಿಸಿತು. ಆದರೂ ಪೋಪ್ ಐದನೇ ಭಕ್ತಿನಾಥರ ಕಠೋರ ಸುಧಾರಣಾ
ಕ್ರಮಗಳು ಧರ್ಮಸಭೆಯ ಅವನತಿಯನ್ನು ತಡೆದವು ಎಂಬುದು ಮಾತ್ರ ನಿತ್ಯಸತ್ಯ. ಹಾಗಾಗಿ ಅವರು ಅಂದಿನ
ಧಾರ್ಮಿಕ ಸುಧಾರಕರ ಅಗ್ರಗಣ್ಯರ ಸಾಲಿನಲ್ಲಿ ನಿಲ್ಲುತ್ತಾರೆ.
- ಮರಿಜೋಸೆಫ್, ಬೆಂಗಳೂರು
No comments:
Post a Comment