Friday, 19 April 2019

29 ಏಪ್ರಿಲ್ 2019

ಬಿಳಿ/ಸೋಮ/ಸಿಯೆನ್ನಾದ ಸಂತ ಕಥರೀನ (ಕನ್ಯೆ ಮತ್ತು     .ಪಂ - ಸ್ಮರಣೆ)                    
1ನೇ  ವಾಚನ  -  ಪ್ರೇ.ಕಾ  423-31   
ಕೀರ್ತನೆ  -  21-23-9.    
ಶುಭಸಂದೇಶ  -  ಯೊವಾನ್ನ  31-8     

1ನೇ  ವಾಚನ  -  ಪ್ರೇ.ಕಾ  4:  23-31   
23 ಪೇತ್ರ ಮತ್ತು ಯೊವಾನ್ನ ಬಂಧನದಿಂದ ಬಿಡುಗಡೆಹೊಂದಿದ ಮೇಲೆ ವಿಶ್ವಾಸಿಗಳಿಗೆ ಭೇಟಿಯಿತ್ತರು. ಮುಖ್ಯ ಯಾಜಕರು ಹಾಗೂ ಪ್ರಜಾ ಪ್ರಮುಖರು ತಮಗೆ ಹೇಳಿದ್ದನ್ನು ಅವರಿಗೆ ವರದಿಮಾಡಿದರು.
24 : ಸಮಾಚಾರವನ್ನು ಕೇಳಿದ ಕೂಡಲೇ ಭಕ್ತಾದಿಗಳು ಏಕಕಂಠದಿಂದ ದೇವರನ್ನು ಪ್ರಾರ್ಥಿಸುತ್ತಾ ಹೀಗೆಂದರು: “ಪ್ರಭುವೇ, ಇಹಪರಗಳನ್ನೂ ಸಮುದ್ರ ಸಾಗರಗಳನ್ನೂ ಅವುಗಳಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದವರು ನೀವೇ.
25 : ಸರ್ವೇಶ್ವರನಿಗೂ ಆತ ಅಭಿಷೇಕಿಸಿದವನಿಗೂ ವಿರುದ್ಧಅನ್ಯಧರ್ಮಿಯರೇಕೆ ರೋಷಭರಿತರಾದರು? ಜನರೇಕೆ ವ್ಯರ್ಥ ಒಳಸಂಚು ಹೂಡಿದರು?
26 : ಲೋಕಾಧಿಪತಿಗಳೇಕೆ ಸನ್ನದ್ಧರಾದರು? ಜನನಾಯಕರೇಕೆ ಸಮಾಲೋಚಿಸಿದರು?’ ಎಂದು ನಮ್ಮ ಪಿತಾಮಹ ಹಾಗೂ ನಿಮ್ಮ ದಾಸನಾದ ದಾವೀದನ ಬಾಯಿಂದ ನುಡಿಸಿದಿರಿ.
27 : “ಅಂತೆಯೇ, ನಿಮ್ಮ ಪರಮಪೂಜ್ಯ ದಾಸ ಯೇಸುವಿನ ವಿರುದ್ಧ ಹೆರೋದನು ಮತ್ತು ಪೊಂತ್ಸಿಯುಸ್ ಪಿಲಾತನು ಅನ್ಯಧರ್ಮದವರೊಡನೆ ಹಾಗೂ ಇಸ್ರಯೇಲಿನ ಜನರೊಡನೆ ಸೇರಿ ಪಟ್ಟಣದಲ್ಲೇ ಸಮಾಲೋಚನೆ ಮಾಡಿದರು.
28 : ನೀವು ಸಂಯೋಜಿಸಿದ್ದು ಹಾಗೂ ಸಂಕಲ್ಪಿಸಿದ್ದು ಈಡೇರುವಂತೆ ಅವರು ಹೀಗೆ ವರ್ತಿಸಿದರು.
29 : ಪ್ರಭುವೇ, ಇಗೋ, ಇವರು ನಮ್ಮನ್ನು ಬೆದರಿಸುತ್ತಿದ್ದಾರೆ; ನಿಮ್ಮ ಸಂದೇಶವನ್ನು ಧೈರ್ಯವಾಗಿ ಸಾರಲು ಶರಣರಾದ ನಮಗೆ ನೆರವು ನೀಡಿರಿ.
30 : ಸ್ವಸ್ಥಪಡಿಸುವ ನಿಮ್ಮ ಅಮೃತ ಹಸ್ತವನ್ನು ಚಾಚಿರಿ; ನಿಮ್ಮ ಪರಮ ಪೂಜ್ಯ ದಾಸ ಯೇಸುವಿನ ನಾಮದಲ್ಲಿ ಅದ್ಭುತಗಳೂ ಸೂಚಕಕಾರ್ಯಗಳೂ ಜರುಗುವಂತಾಗಲಿ.”
31 ಹೀಗೆ ಪ್ರಾರ್ಥನೆ ಮಾಡಿದಾಗ ಅವರು ನೆರೆದಿದ್ದ ಸ್ಥಳ ಕಂಪಿಸಿತು. ಅವರೆಲ್ಲರೂ ಪವಿತ್ರಾತ್ಮಭರಿತರಾದರು; ದೇವರ ಶುಭಸಂದೇಶವನ್ನು ಧೈರ್ಯವಾಗಿ ಸಾರತೊಡಗಿದರು.

ಕೀರ್ತನೆ  -  2:  1-2,  3-9.     
ಆತನನು ಆಶ್ರಯಿಸುವವರಿಗಿದೆ ಸೌಭಾಗ್ಯ ಸಂತೋಷ   
1 : ದೊಂಬಿಯೇಳುವುದೇತಕೆ ಅನ್ಯ ದೇಶವಿದೇಶಗಳು? / ಕುತಂತ್ರ ಹೂಡುವುದೇಕೆ ಅನ್ಯ ಜಾತಿಜನಾಂಗಗಳು? //
2 : ದೇವನಿಗು, ಅವನಭಿಷಿಕ್ತನಿಗು ವಿರುದ್ಧವಾಗಿ // ನಿಂತಿಹರು ನೃಪರು ಸಮರ ಸನ್ನದ್ಧರಾಗಿ / ಸಮಾಲೋಚಿಸಿಹರು ಸಚಿವರು ರಹಸ್ಯವಾಗಿ //
3 : “ಅವರೆಮಗೆ ತೊಡಿಸಿಹ ಬೇಡಿಗಳನು ಮರಿಯೋಣ ಎನ್ನುತಿಹರು / “ಅವರೆಮಗೆ ಹಾಕಿದ ಬಂಧನಗಳನು ಹರಿಯೋಣ ಎನ್ನುತಿಹರು //
4 : ಪರದಲಿ ಆಸೀನನಾಗಿಹ ಪ್ರಭು ನಗುವನಿದಕೆ / ಗುರಿಮಾಡದಿರನು ಇವರೆಲ್ಲರನು ಪರಿಹಾಸ್ಯಕೆ //
5 : ಅನಂತರ ಸಿಡಿದೆದ್ದು ಹೀಗೆಂದು ನುಡಿವನು: “ನಾ ನೇಮಿಸಿದ ಅರಸನನೇ ಸ್ಥಾಪಿಸಿಹೆನು /
6 : ಸಿಯೋನ್ ಶ್ರೀಶಿಖರದಲೇ ಅವನನು ಇರಿಸಿಹೆನು / ಪರಿ ಕೆರಳಿ ಕಳವಳಗೊಳಿಸುವನು ಅವರನು //
7 ಕೇಳಿರೀ ದೈವಾಜ್ಞೆಯನು: ಆತನು ಎನಗಿಂತೆದನು: I “ ದಿನ ನಾನಿನ್ನ ಹಡೆದಿಹೆನು: ನೀನೆನಗೆ ಮಗನು II
8 : ಕೇಳಿದೆಯಾದರೆ ನಿನಗಧೀನಮಾಡುವೆನು ರಾಷ್ಟ್ರಗಳನು / ಕೊಡುವೆನು ನಿನಗೆ ಸ್ವಾಸ್ತ್ಯವಾಗಿ ಜಗದ ಆದ್ಯಂತವನು //
9 : ನೀ ಬಡಿದು ಹಾಕುವೆ ಕಬ್ಬಿಣದ ಗದೆಯಿಂದವರನು / ನೀ ಒಡೆದು ಹಾಕುವೆ ಮಣ್ಣಿನ ಮಡಕೆಯಂತವರನು //

ಶುಭಸಂದೇಶ  -  ಯೊವಾನ್ನ  3:  1-8     
1 : ಅಲ್ಲಿ ನಿಕೊದೇಮನೆಂಬ ಫರಿಸಾಯನು ಇದ್ದನು.
2 : ಅವನು ಯೆಹೂದ್ಯರ ನಾಯಕರಲ್ಲಿ ಒಬ್ಬನು. ಒಂದು ರಾತ್ರಿ ಅವನು ಯೇಸುಸ್ವಾಮಿಯ ಬಳಿಗೆ ಬಂದು, “ಗುರುದೇವಾ, ತಾವು ದೇವರಿಂದ ಬಂದ ಬೋಧಕರೆಂದು ನಾವು ಬಲ್ಲೆವು. ದೇವರು ತನ್ನೊಡನೆ ಇಲ್ಲದ ಹೊರತು ಯಾರಿದಂಲೂ ತಾವು ಮಾಡುವ ಸೂಚಕಕಾರ್ಯಗಳನ್ನು ಮಾಡಲು ಆಗದು,” ಎಂದು ಹೇಳಿದನು.
3 : ಆಗ ಯೇಸು, “ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ: ಒಬ್ಬನು ಹೊಸದಾಗಿ ಹುಟ್ಟದಿದ್ದರೆ ಅವನು ದೇವರ ಸಾಮ್ರಾಜ್ಯವನ್ನು ಸೇರಲಾರ,” ಎಂದು ಹೇಳಿದರು.
4 : ಅದಕ್ಕೆ ನಿಕೊದೇಮನು, “ವಯಸ್ಸಾದ ಒಬ್ಬನು ಹೊಸದಾಗಿ ಹುಟ್ಟುವುದಾದರೂ ಹೇಗೆ? ತಾಯಿಯ ಗರ್ಭವನ್ನು ಮತ್ತೊಮ್ಮೆ ಹೊಕ್ಕು ಅವನು ಹುಟ್ಟಲು ಸಾಧ್ಯವೇ?” ಎಂದು ಕೇಳಿದನು.
5 : ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ: ನೀರಿನಿಂದಲೂ ಪವಿತ್ರಾತ್ಮನಿಂದಲೂ ಹುಟ್ಟಿದ ಹೊರತು ಯಾವನೂ ದೇವರ ರಾಜ್ಯವನ್ನು ಪ್ರವೇಶಿಸಲಾರನು.
6 : ಶರೀರದಿಂದ ಹುಟ್ಟಿದ್ದು ಶರೀರಮಯ, ದೇವರಿಂದ ಹುಟ್ಟಿದ್ದು ದೈವಮಯ.
7 : ನೀವು ಹೊಸ ಜನ್ಮ ಪಡೆಯಬೇಕೆಂದು ನಾನು ಹೇಳಿದ್ದನ್ನು ಕೇಳಿ ಬೆರಗಾಗಬೇಕಿಲ್ಲ.

8 : ಗಾಳಿ ತನಗೆ ತೋಚಿದ ಕಡೆ ಬಿಸುತ್ತದೆ, ಅದರ ಸದ್ದು ನಿನಗೆ ಕೇಳಿಸುತ್ತದೆ; ಆದರೆ ಅದು ಎಲ್ಲಿಂದ ಬರುತ್ತದೆ, ಎಲ್ಲಿಗೆ ಹೋಗುತ್ತದೆ ಎಂಬುದು ನಿನಗೆ ತಿಳಿಯದು. ದೇವರ ಆತ್ಮನಿಂದ ಹುಟ್ಟಿದ ಪ್ರತಿಯೊಬ್ಬನೂ ಅದರಂತೆಯೇ,” ಎಂದು ಹೇಳಿದರು.

ಚಿಂತನೆ
ಒಬ್ಬನು ಹೊಸದಾಗಿ ಹುಟ್ಟದಿದ್ದರೆ ಅವನು ದೇವರ ಸಾಮ್ರಾಜ್ಯವನ್ನು ಸೇರಲಾರ. ಪವಿತ್ರಾತ್ಮರಿಂದ ಅಭಿಷಿಕ್ತರಾಗಬೇಕು. ಜ್ಞಾನಸ್ನಾನದ ಮೂಲಕ ದೈವಪ್ರಜೆಯಾಗಬೇಕು. ಒಬ್ಬನು ಕೆಟ್ಟ ದಾರಿ, ಕೆಟ್ಟ ನಡತೆ ಬಿಡಬೇಕು, ಅಶ್ಲೀಲ ಮಾತುಗಳನ್ನು ಬಿಡಬೇಕು, ಹೇಸಿಗೆಯ ಕೆಲಸಗಳನ್ನು ವರ್ಜಿಸಬೇಕು.  ಮೋಸ ವಂಚನೆ, ಸುಳ್ಳುತನ, ಕಳ್ಳತನ, ವ್ಯಬಿಚಾರ, ಅಸೂಯೆ ಪಡುವುದು, ಹೊಟ್ಟೆಕಿಚ್ಚು ಪಡುವುದು, ಕದಿಯುವುದು, ಕೊಲೆ ಮತ್ತು ಮಾನಭಂಗ ಮಾಡುವುದು, ಅಸಹ್ಯವಾಗಿ ವರ್ತಿಸುವುದು, ಪತಿಪತ್ನಿಯವರ ನಡುವೆ ವೈಷಮ್ಯ, ಕುಟುಂಬದ ಸದಸ್ಯರಲ್ಲಿ ಜಗಳ, ಇವನ್ನೆಲ್ಲ ತೊರೆದಾಗ ಮಾತ್ರ ತಂದೆ ದೇವರಿಗೆ ಮೆಚ್ಚುಗೆಯಾಗುತ್ತದೆ.
ಈ ರೀತಿಯಾದ ಬಾಳು ಬಾಳಿದಲ್ಲಿ ನಿಜವಾಗಿಯೂ ಹೊಸದಾಗಿ ಹುಟ್ಟಿದಂತಾಗಿ ದೈವೀ ರಾಜ್ಯವನ್ನು ಸೇರುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಇದನ್ನು ಆಲಿಸಿದ ಫರಿಸಾಯ ನಿಕೊದೇಮನು ನಿಬ್ಬೆರಗಾದ. ಅವನು ಆಶ್ಚರ್ಯಚಕಿತನಾಗಿ ಉಳಿದುಕೊಂಡ. ದೇವರ ಆತ್ಮನಿಂದ ಹುಟ್ಟಿದ ಪ್ರತಿಯೊಬ್ಬನೂ ಹೊಸ ಜೀವಿಯಾಗಿರುವನು. ಅಂದರೆ ಒಂದು ಸ್ಫಟಿಕದಂತ ಶುದ್ಧ, ನಿರ್ಮಲ, ಸ್ಪಷ್ಟ ಬಾಳು ಬಾಳಿದರೆ, ಅದು ದೇವರಿಗೆ ಬಹಳ ಅಚ್ಚುಮೆಚ್ಚಿನದಾಗಿರುತ್ತದೆ. ಹೀಗಾಗಿ, ಸುಲಭದಲ್ಲಿ ಸ್ವರ್ಗರಾಜ್ಯವನ್ನು ಸೇರಬಹುದು. ಆಮೆನ್.
ಫಾ ಅಂಬ್ರೋಸ್ ಡಿ'ಸೋಜಾ ಯೇ.ಸ

ಸಿಯೆನ್ನಾದ ಸಂತ ಕಥರೀನ
ಇಟಲಿಯ ಸಿಯೆನ್ನಾದಲ್ಲಿ ಪ್ಲೇಗ್ ಮಾರಿ ಅಪ್ಪಳಿಸಿದ್ದ ಸಂದರ್ಭದಲ್ಲಿ 1357 ಮಾಚ್ 25ರಂದು ಕಥರೀನ ಜನಿಸಿದರು. ಅವರ ತಾಯಿಗೆ ಆಕೆ 25ನೇ ಮಗು. ಅದರಲ್ಲಿ ಅರ್ಧದಷ್ಷು ಮಕ್ಕಳು ಎಳೆವಯಸ್ಸಿನಲ್ಲೇ ತೀರಿಕೊಂಡರು. ಕಥರೀನರೂ ಅವಳಿ ಮಗುವಾಗಿದ್ದು ಮತ್ತೊಂದು ಮಗು ಅಸುನೀಗಿತು. ಆಕೆ ಹುಟ್ಟಿದಾಗ ತಾಯಿಗೆ 40ವರ್ಷ ವಯಸ್ಸು. ಕಥರೀನಳಿಗೆ 16 ತುಂಬಿದಾಗ ಅವಳ ಅಕ್ಕ ಬೊನವೆಂಚುರ ಸತ್ತುಹೋಗುತ್ತಾಳೆ. ಒಂಟಿಯಾದ ಭಾವನಿಗೆ ಕಥರೀನಳನ್ನು ಕೊಟ್ಟು ಮದುವೆ ಮಾಡುವ ಮಾತು ಕೇಳಿಬರುತ್ತದೆ. ಆದರೆ ಅದು ಕಥರೀನಳಿಗೆ ಇಷ್ಟವಾಗುವುದಿಲ್ಲ. ಮದುವೆ ಬೇಡವೆಂದು ಆಕೆ ಉಪವಾಸಕ್ಕೆ ತೊಡಗುತ್ತಾಳೆ, ತನ್ನ ಕೂದಲನ್ನು ಕತ್ತರಿಸಿಕೊಳ್ಳುತ್ತಾಳೆ.  ತನ್ನ ತಂದೆಯಲ್ಲಿ ಯೇಸುವನ್ನು, ತಾಯಿಯಲ್ಲಿ ಮರಿಯಮ್ಮನವರನ್ನು ಮತ್ತು ಅಣ್ಣಂದಿರಲ್ಲಿ ಯೇಸುವಿನ ಶಿಷ್ಯರನ್ನು ಕಾಣುವ ಕಥರೀನ ಬಲು ಧಾರ್ಮಿಕ ವ್ಯಕ್ತಿಯಾಗಿ ಕಂಗೊಳಿಸುತ್ತಾಳೆ.
ಆದರೆ ಧಾರ್ಮಿಕ ಜೀವನಕ್ಕಾಗಿ ಯಾವುದೇ ಕಾನ್ವೆಂಟು ಸೇರದೆ, ಸಂತ ದೊಮಿನಿಕರ ಗೃಹಸ್ಥಾಶ್ರಮ ಸೇರಿ ಮನೆಯಲ್ಲೇ ಉಳಿಯುತ್ತಾಳೆ. ದೊಮಿನಿಕನ್ ಸೋದರಿಯರು ಆಕೆಗೆ ಓದು ಕಲಿಸುತ್ತಾರೆ. ಬಡಬಗ್ಗರನ್ನು ಕಂಡರೆ ಸಿಕ್ಕಿದ್ದನ್ನು ಕೊಟ್ಟುಬಿಡುವ ಕಥರೀನ ಮನೆಯವರ ಕೋಪಕ್ಕೆ ಗುರಿಯಾಗುತ್ತಾಳೆ. ಏಕೆಂದರೆ ಕೆಲವೊಮ್ಮೆ ಮನೆಯವರಿಗೆ ಮಾಡಿದ ಅಡುಗೆಯನ್ನೂ ದಾನ ಮಾಡಿಬಿಡುತ್ತಿದ್ದಳು.
ಅವಳಿಗೆ ಇಪ್ಪತ್ತೊಂದು ಆದಾಗ ಯೇಸುವೇ ಬಂದು ತನ್ನನ್ನು ಮದುವೆಯಾದಂತೆ ಆಕೆಗೆ ಭಾಸವಾಯಿತು. ತನ್ನ ಬೆರಳಿನ ಉಂಗುರವನ್ನು ತೋರಿಸಿ ಇದು ಯೇಸುವೇ ತೊಡಿಸಿದ್ದು ಎನ್ನುತ್ತಿದ್ದಳು. ಅದರ ಬಗ್ಗೆ ಆಕೆ ಬರೆದುಕೊಂಡಿದ್ದಾಳಾದರೂ ಎಷ್ಟೋ ಮಂದಿಗೆ ಆ ಉಂಗುರ ಕಾಣಲಿಲ್ಲ.
ಆಕೆ ಆಸ್ಪತ್ರೆಗಳಿಗೆ ಭೇಟಿ ನೀಡಿ ಬಡರೋಗಿಗಳಿಗೆ ಸಾಂತ್ವನದಲ್ಲಿ ತೊಡಗಿಕೊಂಡಳು. ಅದನ್ನು ಕಂಡ ಕೆಲ ದಾನಿಗಳು ಅವಳಿಗೆ ಸಹಾಯ ಮಾಡತೊಡಗಿದರು. ಕ್ರಮೇಣ ಅವಳು ಸಮಾಜಸೇವೆಯಿಂದ ರಾಜಕೀಯಕ್ಕೆ ಧುಮುಕಿ ರಾಜ್ಯಾಡಳಿತಗಳು ಪೋಪ್ ಜಗದ್ಗುರುಗಳಿಗೆ ವಿಧೇಯರಾಗುವಂತೆ ಹೇಳತೊಡಗಿದಳು. ಇಂಥಾ ಒಂದು ಸಂದರ್ಭದಲ್ಲಿ ಜೆರುಸಲೇಮ್ ಪುಣ್ಯಭೂಮಿಗೆ ತೆರಳುವ ಕಥರೀನ ರಾಜಕೀಯ ಬಂಧಿಯೊಬ್ಬನನ್ನು ಸಂದರ್ಶಿಸಿ ಅವನ ಮನಪರಿವರ್ತನೆ ಮಾಡುತ್ತಾಳೆ. ಪಶ್ಚಾತ್ತಾಪ ಪಡುವ ಅವನ ಆತ್ಮವು ಸತ್ತ ಕೂಡಲೇ ಸ್ವರ್ಗಕ್ಕೇರುವುದನ್ನೂ ಕಾಣುತ್ತಾಳೆ.
ಮುತ್ಸದ್ದಿಯಾಗಿ ಬದಲಾದ ಕಥರೀನ 1375ರ ನಂತರ ತನ್ನ ಮಾತುಗಳನ್ನು ಬರೆದುಕೊಳ್ಳುವಂತೆ ಲಿಪಿಕಾರರಿಗೆ ಹೇಳಿ ಭಾಷಣ ಮಾಡುತ್ತಾ ಹೋಗುತ್ತಾಳೆ. ತನ್ನ ದಕ್ಷ ಮಾತುಗಳಿಂದ ಪ್ರಕ್ಷುಬ್ಬ ರೋಮ್ ನಗರದಲ್ಲಿ ಶಾಂತಿ ನೆಲಸುವಂತೆ ಮಾಡಿ ಹೊರನಡೆದಿದ್ದ ಪೋಪರನ್ನು ಮತ್ತೆ ಅಧಿಕಾರ ಪೀಠದಲ್ಲಿ ಕುಳ್ಳಿರಿಸುತ್ತಾಳೆ. ಪರಸ್ಪರ ಕಚ್ಚಾಡುತ್ತಿದ್ದ ಇಟಲಿಯ ರಾಜ್ಯಗಳ ನಡುವೆ ಶಾಂತಿಸಂಧಾನ ಏರ್ಪಡಿಸುತ್ತಾಳೆ. ಅವಳ ಪತ್ರಗಳೇ ಸುಮಾರು 400ಕ್ಕೂ ಹೆಚ್ಚಿದ್ದು ಅವಳ ಅಪಾರ ಬುದ್ದಿಮತ್ತೆಗೆ ಸಾಕ್ಷಿಯಾಗಿವೆ. ಹೀಗೆ ತನ್ನ 33ನೇ ಕಿರಿವಯಸ್ಸಿನಲ್ಲಿ ಮೃತಳಾದ ಕಥರೀನಳನ್ನು ಧರ್ಮಪಂಡಿತೆ ಎಂದು ಧರ್ಮಸಭೆ ಗೌರವಿಸುತ್ತದೆ.
ಮರಿಜೋಸೆಫ್

No comments:

Post a Comment