ಶುಭಸಂದೇಶಕಾರ ಸಂತ ಮಾರ್ಕರು ಜನಿಸಿದ್ದು ಉತ್ತರ ಆಪ್ರಿಕಾದ ಲಿಬಿಯಾ ಎಂಬಲ್ಲಿ. ಯೆಹೂದಿ ದಂಪತಿಗಳಾದ ಅರಿಸ್ಟೊಪೊಲೆಸ್ ಮತ್ತು ಮೇರಿ ಇವರ ವರಪುತ್ರನಾಗಿ ಜನಿಸಿದ ಮಾರ್ಕ, ಕ್ರಿಸ್ತನಿಗಿಂತ ಕೇವಲ ಮೂರು ವರ್ಷ ಮಾತ್ರ ಕಿರಿಯರು. ಮೂಲತಃ ಜಾನ್ ಎಂಬ ಹೆಸರಿನಿಂದ ಖ್ಯಾತಿ ಹೊಂದಿದ್ದ ಇವರ ಹೆಸರು ನಂತರ ಮಾರ್ಕ ಎಂದು ಕರೆಯಲ್ಪಟ್ಟಿತು. ತಮ್ಮ ತವರನ್ನು ಅಗಲಿ ದೂರದ ಪಾಲೇಸ್ತೀನ್ ನಾಡಿಗೆ ಪಲಾಯಾನ ಮಾಡಿ ಅಲ್ಲಿಯೆ ತಮ್ಮ ಮುಂದಿನ ಜೀವನವನ್ನು ಕಳೆಯುವ ನಿರ್ಧಾರವನ್ನು ಇವರ ಪೋಷಕರು ಮಾಡಿದ ಕಾರಣ ಈ ಮಹಾ ಸಂತರು ಮಾರ್ಕ ಎಂಬ ಹೆಸರಿನಿಂದ ಅಲ್ಲಿ ಕರೆಯಲ್ಪಟ್ಟರು. ಮುಂದೆ ತಮ್ಮ ಪೋಷಕರೊಡನೆ ಕಾನಾನ್ ನಾಡಿನಲ್ಲಿ ತಮ್ಮ ಶಾಶ್ವತ ನೆಲೆಯನ್ನು ಕಂಡರು. ಹೀಗೆ ಅವರು ತಮ್ಮ ಪೋಷಕರೊಡನೆ ಈ ಊರಿನಲ್ಲಿ ಜೀವಿಸುತ್ತಿರಲು ಅನೇಕ ಬಾರಿ ಪ್ರಭು ಕ್ರಿಸ್ತರನ್ನು ಕಾಣುವ ಭಾಗ್ಯ ಇವರದಾಗಿತ್ತು ಎಂದು ಇತಿಹಾಸದ ಪುಟಗಳಲ್ಲಿ ಕಾಣಬಹುದಾಗಿದೆ. ಇವರ ತಾಯಿಯಂತೂ ಪ್ರಭುಕ್ರಿಸ್ತರ ಅನುಯಾಯಿಯಾಗಿ ತಮ್ಮ ಜೀವನವನ್ನು ದೈವಾರಾಧನೆಯಲ್ಲಿ ಕಳೆದರೆ ಇವರು ಸಹ ಅದೇ ಪ್ರಭುವಿನ ಜೀವನನಿಂದ ಬಹು ಮಟ್ಟಿಗೆ ಪ್ರಭಾವಿತರಾಗಿರಬಹುದು ಎಂಬ ನಂಬಿಕೆ ಬಹಳ ಸ್ಪಷ್ಟವಾಗಿ ಗೋಚರಿಸುತ್ತದೆ.
ಪ್ರಭುಕ್ರಿಸ್ತರು ಕಾನಾ ಊರಿನಲ್ಲಿ ಮಾಡಿದ ಮೊದಲ ಅದ್ಭುತಕಾರ್ಯದಲ್ಲಿ ಇವರು ಭಾಗಿಯಾಗಿದ್ದರು ಎನ್ನುವ ನಂಬಿಕೆ ಗಾಢವಾಗಿ ಬೇರೂರಿದೆ. ಕಾನಾನಾಡಿನಲ್ಲಿ ನೆಲೆಸಿದ್ದ ಕಾರಣ ಪ್ರಭುವಿನ ಬೋಧನೆಯನ್ನು ಚೆನ್ನಾಗಿ ತಿಳಿದಿದ್ದರು ಎಂಬ ಮಾಹಿತಿ ಸಹ ಹಲವು ಮೂಲಗಳಿಂದ ಸಂಶೋಧನಕಾರರಿಗೆ ದೊರೆತಿರುವುದು ಅವರಿಗೆ ಶುಭಸಂದೇಶದ ಬಗ್ಗೆ ಇದ್ದಂತಹ ಜ್ಞಾನಕ್ಕೆ ಪುಷ್ಟಿಯನ್ನು ನೀಡುತ್ತದೆ. ತನ್ನ ಬಾಲ್ಯದಿಂದಲೆ ದೈವ ಭಕ್ತಿ ಹಾಗೂ ಧರ್ಮದ ಬಗೆಗಿನ ಅಭಿಮಾನ ಅತ್ಯಂತ ಆಳವಾಗಿ ಬೇರೂರಿಕೊಂಡಿದ್ದರಿಂದ ಮುಂದೆ ಒಬ್ಬ ಮಹಾಧರ್ಮಪಾಲಕನಾಗುವುದರಲ್ಲಿ ಎಳ್ಳಷ್ಟು ಸಂಶಯವಿರಲಿಲ್ಲ. ದೈವಭಕ್ತಿಯ ಕುಟುಂಬದಲ್ಲಿ ಬೆಳೆದ ಮಾರ್ಕರು ತಮ್ಮ ಜೀವನವನ್ನು ಸಹ ದೇವರಕಾರ್ಯಕ್ಕಾಗಿ ಸಂಪೂರ್ಣವಾಗಿ ಅರ್ಪಿಸಿಕೊಂಡರು. ಬಾಲ್ಯದಿಂದಲೆ ದೈವಭಕ್ತಿ ಪರ ಪ್ರೀತಿಯಲ್ಲಿ ತಮ್ಮ ಜೀವನವನ್ನು ಸವಿಸಿಕೊಂಡು ಬಂದಂತಹ ಇವರು ಮುಂದೆ ತಮ್ಮ ಸ್ವಂತ ನಾಡಾದ ಈಜಿಪ್ಟ್ ದೇಶದಲ್ಲಿ ಕ್ರೈಸ್ತ ಧರ್ಮದ ಬೀಜವನ್ನು ಬಿತ್ತಿ ಪೋಷಿಸಿ ಬೆಳೆಸಿದರು. ಈ ನಾಡಿನಲ್ಲಿ ವಿಶ್ವಾಸದ ಬೀಜವನ್ನು ಬಿತ್ತಿ ಅನೇಕರಿಗೆ ದೈವದ ಪ್ರೀತಿಯನ್ನು ಉಣಿಸಿದ ಮಹಾ ವ್ಯಕ್ತಿ ಎಂದು ಸಾರಿ ಹೇಳಿದರೆ ಖಂಡಿತ ತಪ್ಪಾಗಲಾರದು. ದೇವರಲ್ಲಿ ಇವರಿಗಿದ್ದ ಭಕ್ತಿ ಮತ್ತು ದೈವ ಸಾಮ್ರಾಜ್ಯವನ್ನು ನಿರ್ಮಿಸಲು ಇದ್ದತಂಹ ಶ್ರದ್ಧೆ ಇವರನ್ನು ಎಂತಹ ತ್ಯಾಗಕ್ಕೂ ಹೆದರದ ಹಾಗೇ ಮುನ್ನಡೆಸಿತು. ಇವರ ಮನದಾಳದಿಂದ ಮಿಡಿಯುತ್ತಿದ್ದ ಭಾವನೆಯೆಂದರೆ ಎಲ್ಲರನ್ನು ಕ್ರಿಸ್ತನ ಅನುಯಾಯಿಗಳನ್ನಾಗಿಸಿ ಅವರನ್ನೆಲ್ಲ ದೇವರ ಸಾಮ್ರಾಜ್ಯದ ನೆಚ್ಚಿನ ಪ್ರಜೆಗಳನ್ನಾಗಿ ಮಾರ್ಪಡಿಸುವುದು.
ಇವರ ಈ ಆಕಾಂಕ್ಷೆ ಅಂದುಕೊಂಡ ಹಾಗೆ ಖಂಡಿತ ಸಾಧಿಸಬಲ್ಲ ಯೋಜನೆಯಾಗಿರಲಿಲ್ಲ. ಮನದ ಬಯಕೆಯೇನೊ ನಿಶ್ಚಯವಾಗಿದೆ ಅದರೆ ಹಾದಿ ಮಾತ್ರ ಬಹಳಷ್ಟು ಅಡ್ಡಿ, ಅಡಚಣೆಗಳಿಂದ ತುಂಬಿದ್ದು ಪ್ರತಿಯೊಂದು ಹಂತದಲ್ಲೂ ಎಡವಿ ಬೀಳುವ ಸಾದ್ಯತೆಗಳು ಸಾಕಷ್ಟು. ದೈವದ ಅರಿವೆ ಇಲ್ಲದ ಪೀಳಿಗೆಯ ನಡುವೆ ಅವರ ಮನವೊಲಿಸಿ ಪ್ರೀತಿ ವಿಶ್ವಾಸದಿಂದ ಅವರ ಮನವನ್ನು ಪರಿವರ್ತನೆ ಮಾಡುವ ಕಾರ್ಯದಲ್ಲಿ ತೊಡಗುತ್ತಾರೆ ಈ ಮಹಾಪುರುಷ ಸಂತ ಮಾರ್ಕ. ತದೇಕಚಿತ್ತದಿಂದ ಯಾವುದೇ ಒತ್ತಡಗಳಿಗೆ ಮಣಿಯದೆ ತಾನು ಅಂದುಕೊಂಡ ಕೆಲಸದಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಳ್ಳುತ್ತಾರೆ. ಇವರ ಈ ಅಗಾಧ ದೈವ ಭಕ್ತಿ ಮತ್ತು ಕಾರ್ಯಶ್ರದ್ಧೆಯ ಫಲವಾಗಿ ಅನೇಕ ಮಂದಿ ಸ್ವಪ್ರೇರಣೆಯಿಂದ ಮುಂದೆ ಬಂದು ಹೊಸ ಧರ್ಮವನ್ನು ಸ್ವೀಕರಿಸುವ ನಿಲುವನ್ನು ತೊಟ್ಟು ತಮ್ಮ ಕೋರಿಕೆಯನ್ನು ಮಾರ್ಕರ ಬಳಿ ಇಡುತ್ತಾರೆ. ಹೀಗೆ ದಿನಗಳು ಉರಿಳಿದ ಹಾಗೇ ಅನೇಕರು ಕ್ರಿಸ್ತನ ಭೋಧನೆಯ ಹಾಗೂ ಸಾಧನೆಯ ಅರಿವನ್ನು ಪಡೆದು ತಾವು ಸಹ ಕ್ರಿಸ್ತೀಯ ಜೀವನವನ್ನು ನಡೆಸಲು ಪಣತೊಡುತ್ತಾರೆ. ಈ ಸಂತರ ಅಚಲ ನಂಬಿಕೆ ಹಾಗೂ ನಿಸ್ವಾರ್ಥ ಸೇವೆಗೆ ದೊರೆತ ಫಲವೇ ಇದು ಎಂದು ಪರಿಗಣಿಸಿದರೆ ಎಂದಿಗೂ ತಪ್ಪಾಗಲಾರದು. ಹೀಗೆ ಎಲ್ಲವೂ ಸುಗಮವಾಗ ಸಾಗುತಿರಲು, ಮತ್ತೊಂದು ಕಡೆಯಿಂದ ದೊಡ್ಡ ಗಂಡಾಂತರ ಎಂಬಂತೆ ಹಲವಾರು ಮಂದಿ ಶತ್ರುಗಳು ಸಹ ಹುಟ್ಟಿಕೊಳ್ಳುತ್ತಾರೆ. ಈ ಪುಣ್ಯ ಪುರುಷನ ಸಾಧನೆಯನ್ನು ಸಹಿಸದ ಹಲವರು ಇವರ ಮೇಲೆ ದ್ವೇಷದ ಜ್ವಾಲೆಯನ್ನೇ ಕಾರುತ್ತಾ ಹೇಗಾದರೂ ಇವರ ಅಂತ್ಯವನ್ನು ಕಾಣಲು ಹವಣಿಸುತ್ತಿದ್ದರು. ಹಲವು ನಾಯಕರು ಇವರನ್ನು ತಮ್ಮ ಶತ್ರುವಿನಂತೆ ಭಾವಿಸಿ, ತಮ್ಮ ಏಳಿಗೆಗೆ ಇವರೊಂದು ದೊಡ್ಡ ತೊಡಕೆಂದು ಕೊಲ್ಲುವುದೇ ಸರಿಯಾದ ಮಾರ್ಗ ಎಂಬ ನಿರ್ಧಾರಕ್ಕೆ ಬರುತ್ತಾರೆ. ಹಾಗೆಯೇ ಕ್ರಿ.ಶ.68ರಲ್ಲಿ ಇವರನ್ನು ಕುದುರೆಯ ಹಿಂದೆ ಕಟ್ಟಿ ದುರ್ಗಮ, ಕಲ್ಲು ಮುಳ್ಳುಗಳಿಂದ ತುಂಬಿದ್ದ ಮಾರ್ಗದಲ್ಲಿ ಶರೀರ ನುಜ್ಜುಗುಜ್ಜಾಗುವವರೆಗೂ ಎಳೆದಾಡುತ್ತಾರೆ ಆ ಕ್ರೂರಿಗಳು. ಅಂತಹ ಆ ಭಯಾನಕ ನೋವಿನ ಕ್ಷಣಗಳಲ್ಲೂ ಸಹ ತಮ್ಮ ಸಹನೆ ಕಳೆದುಕೊಳ್ಳದೆ ನಿಶ್ಚಿಂತೆಯಿಂದ ತಮ್ಮ ಸೃಷ್ಠಿಕರ್ತನಿಗೆ ಜೀವವನ್ನು ಅರ್ಪಿಸುತ್ತಾರೆ ಈ ಧೀಮಂತ ಕ್ರಿಸ್ತ ಸೇವಕ.ಇವರ ಭೋಧನೆ ಹಾಗೂ ಸಾಧನೆಗೆ ಕನ್ನಡಿ ಹಿಡಿದಂತೆ ಇಂದು ಸಹ ಕ್ರೈಸ್ತ ಧರ್ಮ ಹಚ್ಚಹಸುರಿನಿಂದ ಕಂಗೊಳಿಸುವ ಹೆಮ್ಮರದಂತೆ ಜೀವಂತವಾಗಿ ನಿಂತು ಇನ್ನೂ ಹಲವರನ್ನು ತನ್ನೆಡೆಗೆ ಸೆಳೆಯುವಲ್ಲಿ ಬಹಳಷ್ಟು ಯಶಸ್ಸನ್ನು ಕಂಡಿದೆ.
ಶುಭಸಂದೇಶಕಾರ ಸಂತ ಮಾರ್ಕರು
ಗರ್ಜಿಸುವ ಸಿಂಹದ ಲಾಂಛನದಿಂದ ಪ್ರಖ್ಯಾತಿಹೊಂದಿರುವ ಹಾಗೂ ಶುಭಸಂದೇಶವನ್ನು ಪ್ರಪ್ರಥಮ ಭಾರಿಗೆ ಲಿಖಿತ ರೂಪದಲ್ಲಿ ಕ್ರೋಢೀಕರಿಸಿದ ಗೌರವ ಸಲ್ಲಬೇಕಾದುದು ಸಂತ ಮಾರ್ಕರಿಗೆ. ಅದುವರೆಗೂ ಕೇವಲ ಮೌಖಿಕವಾಗಿದಂತಹ ಪ್ರಭುವಿನ ಭೋಧನೆಗಳನ್ನು ಕ್ರಮ ಬದ್ಧವಾದ ಲಿಖಿತ ರೂಪಕ್ಕೆ ಮಾರ್ಪಡಿಸುವ ಪಣತೊಟ್ಟು ಉಳಿದ ಎರಡು ಶುಭಸಂದೇಶಕಾರರಿಗೆ ಮಾರ್ಗಸೂಚಿಯಾದರು. ಇವರ ಗ್ರಂಥ ಗಾತ್ರದಲ್ಲಿ ಕಿರಿದಾದರೂ ಅತ್ಯಂತ ಉತ್ಕೃಷ್ಟವಾದ ಭಾಷೆ, ಸತ್ವದಿಂದ ಕೂಡಿದ್ದು ಎಲ್ಲ ಮುಂಬರುವ ಲೇಖಕರಿಗೆ ದಾರಿ ದೀಪವಾಗಿದೆ. ಇವರ ಶುಭಸಂದೇಶವು ಪ್ರಾರಂಭವಾಗುವುದೇ ಸಂತ ಸ್ನಾನಿಕ ಆರುಳಪ್ಪರು ಮರಳುಗಾಡಿನಲ್ಲಿ ಮಾಡುವ ಭೋಧನೆಯಿಂದ. ಸ್ನಾನಿಕ ಅರುಳಪ್ಪರ ಆ ವೀರಾವೇಷದ ಮಾತುಗಳು, ಮನ ಪರಿವರ್ತೆನೆಗೊಂಡು ದೇವರ ಸಾಮ್ರಾಜ್ಯಕ್ಕೆ ಭಾದ್ಯಸ್ತರಾಗಲು ನೀಡುವ ಆಹ್ವಾನ ಇವು ಈ ಶುಭಸಂದೇಶದ ಆರಂಭದಲ್ಲಿ ಎದ್ದು ಕಾಣುವ ಪ್ರಮುಖ ಅಂಶಗಳು. ಇಡೀ ಗ್ರಂಥದಲ್ಲಿ ಎದ್ದು ಕಾಣುವ ಮುಖ್ಯ ದೈವಶಾಸ್ತ್ರೀಯ ತಿರುಳೆಂದರೆ ಬಹು ಶತಮಾನಗಳಿಂದ ನಿರೀಕ್ಷೆಯಲ್ಲಿದ್ದ ದೇವರ ಸಾಮ್ರಾಜ್ಯದ ಸ್ಥಾಪನೆ, ಗುರು- ಶಿಷ್ಯರ ಸಂಬಂಧ ಮತ್ತು ಪ್ರಭುವಿನ ಯಾತನೆ. ಪ್ರಭು ಕ್ರಿಸ್ತರನ್ನು ಬಾಧೆಪಡುವ ಯೆಹೋವನ ಸೇವಕ ಎಂಬ ನಾಮಪದದಿಂದ ಗುರುತಿಸಲ್ಪಟ್ಟಿರುವುದು ಈ ಶುಭಸಂದೇಶದ ವಿಶೇಷವಾಗಿದೆ. ಸಂತ ಪೇತ್ರರು ಪ್ರಭುವನ್ನು ಅಭಿಶಕ್ತರಾದ ಲೊಕೋದ್ಧಾರಕ ಎಂದು ಗುರುತಿಸುವುದರೊಂದಿಗೆ ಕ್ರಿಸ್ತನ ನೈಜ ಸ್ವಭಾವವನ್ನು ಲೋಕಕ್ಕೆ ಪರಿಚಯಿಸಿ ಕೊಡುತ್ತಾರೆ.
ಇವುಗಳೊಂದಿಗೆ ಈ ಶುಭಸಂದೇಶದಲ್ಲಿ ಅತೀ ಪ್ರಾಮುಖ್ಯವಾಗಿ ಗೋಚರಿಸುವ ಮತ್ತೊಂದು ಮುಖ್ಯ ಅಂಶವೆಂದರೆ ಯೇಸು ಕ್ರಿಸ್ತರನ್ನು ದಾವಿದ ಕುಲದ ಕುಡಿ ಹಾಗೂ ಜಗತ್ತಿನ ಉದ್ಧಾರಕ್ಕಾಗಿ ಧರೆಗಿಳಿದ ದೇವರ ಕುರಿಮರಿ ಎಂದು ಚಿತ್ರೀಕರಿಸಲ್ಪಟ್ಟಿದೆ. ತಂದೆ ದೇವರ ತಮ್ಮ ಎಕೈಕ ಕುಮಾರ ಯೇಸು ಕ್ರಿಸ್ತರ ಮೂಲಕ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿ ಎಂದಿಗೂ ಅಳಿಯದ ಹಾಗೆ ಭದ್ರವಾದ ಬುನಾದಿಯನ್ನು ನಿರ್ಮಿಸಿದ್ದಾರೆ ಎಂಬ ಸತ್ಯಘಟನೆಯನ್ನು ಪುಟಪುಟಗಳಲ್ಲಿ ಮೂಡಿಸಲಾಗಿದೆ. ಪ್ರಭುಕ್ರಿಸ್ತರನ್ನು ಬಾಧೆಪಡುವ ಯೆಹೋವನ ಸೇವಕನೆಂದು ಕರೆಯಲ್ಪಟ್ಟರು ಸಹ ತನ್ನ ಕಾರ್ಯವನ್ನು ಸಿದ್ಧಿಗೊಳಿಸುವವರೆಗೆ ಹೇಗೆ ಪ್ರಭುಕ್ರಿಸ್ತರು ಅದನ್ನು ರಹಸ್ಯವಾಗಿ ಇಡುತ್ತಾರೆ ಎಂಬುದನ್ನು ಈ ಶುಭಸಂದೇಶದಲ್ಲಿ ಬಹಳ ಸ್ಪಷ್ಟವಾಗಿ ಓದುಗರಿಗೆ ತಿಳಿಸಲಾಗಿದೆ. ಕೊನೆಯವರೆಗೂ ಅಂದರೆ ಶತಾಧಿಪತಿ ಉದ್ಘರಿಸಿದ ಆ ಮನಮೋಹಕ ಅನುಮೋಧನೆ ಈತನು ನಿಜವಾಗಿಯೂ ದೇವರ ಪುತ್ರ ಎಂಬ ವಾಕ್ಯದೊಂದಿಗೆ ಆ ರಹಸ್ಯ ಬಯಲಾಗುತ್ತದೆ. ಅದುವರೆಗೂ ಎಲ್ಲಿಯೂ ಸಹ ಪ್ರಭುಕ್ರಿಸ್ತರು ಈ ರಹಸ್ಯವನ್ನು ಬಹಿರಂಗ ಪಡಿಸುವ ಪ್ರಮೇಯವನ್ನು ನಿರ್ಮಿಸಲೇ ಇಲ್ಲ. ಒಂದು ಅಂತಹ ಸನ್ನಿವೇಶವೇನಾದರು ಉಂಟಾದಲ್ಲಿ ಅತ್ಯಂತ ಚಾಕಚಕ್ಯತೆಯಿಂದ ಅದನ್ನು ಯಾರಿಗೂ ಅರಿವಾಗದ ರೀತಿಯಲ್ಲಿ ಮರೆಮಾಚುತ್ತಿದ್ದರು.
ಹೀಗೆ ದೇವರ ಸಮ್ರಾಜ್ಯ, ಮನಪರಿವರ್ತನೆ, ಗುರು-ಶಿಷ್ಯನ ಅನುಬಂಧ ಇಂತಹ ಹಲವಾರು ಮುಖ್ಯ ದೈವೀಕ ತಿರುಳನ್ನು ಹೊಂದಿರುವ ಸಂತ.ಮಾರ್ಕರ ಶುಭಸಂದೇಶವು ಜನಮನ ತಣಿಸುವ ಸುಂದರ ಸರಳಭಾಷೆಯ ಅಷ್ಟೇ ಉನ್ನತವಾದ ದೈವಶಾಸ್ತ್ರದಿಂದ ಕೂಡಿದೆ. ಆಗಿನ ಕಾಲದಲ್ಲಿ ಪ್ರಚಲಿತದಲ್ಲಿದ್ದ ಆಚಾರ ವಿಚಾರಗಳನ್ನು ಆಧರಿಸಿ ಇದರೊಂದಿಗೆ ಜನರ ಅನುಭವ, ಭಕ್ತಿ ಮತ್ತು ಆಚರಣೆಗಳನ್ನು ಒಟ್ಟುಗೂಡಿಸಿ ಒಂದು ಕ್ರಮಬದ್ಧವಾದ, ಅತ್ಯುನ್ನತವಾದ ಪ್ರಥಮ ಶುಭಸಂದೇಶವನ್ನು ಲಿಖಿತರೂಪದಲ್ಲಿ ಭಕ್ತಾದಿಗಳಿಗೆ ಅರ್ಪಿಸಿದರು ಸಂತ ಮಾರ್ಕರು. ಮುಂದೇ ಇವರ ಈ ಗ್ರಂಥವನ್ನು ದಾರಿದೀಪವಾಗಿ ಹಿಡಿದು ಅನೇಕರು ಪ್ರಮುಖವಾಗಿ ಸಂತ ಮತ್ತಾಯ ಮತ್ತು ಲೂಕರು ಸಹ ತಮ್ಮದೇ ಆದ ಸಮುದಾಯದರಿಗೆ ಅವರದೇ ಶೈಲಿಯಲ್ಲಿ ಶುಭಸಂದೇಶವನ್ನು ಬರೆಯುತ್ತಾರೆ.
ಆಗಿನ ಯೆಹೂದಿ ಕುಲದವರಿಗಾಗಿ ಮೀಸಲಿಟ್ಟಿದ್ದ ಇವರ ಶುಭಸಂದೇಶದ ಮುಖ್ಯವಾಹಿನಿಯಲ್ಲಿರುವ ಓದುಗರೆಂದರೆ ಜೆರುಸಲೇಮ್ ಸುತ್ತಮುತ್ತಲಿನಲ್ಲಿ ವಾಸಿಸುತ್ತಿದ್ದಂತಹ ಎಲ್ಲ ಇಸ್ರಯೇಲ್ ಕುಲದವರು ಹಾಗೂ ಕೆಲವು ಧರ್ಮಶಾಸ್ತ್ರರು. ಇವರ ಈ ಸಾಧನೆಗೆ ತಕ್ಕ ಪ್ರತಿಫಲವಾಗಿ ಯುಗಗಳು ಕಳೆದಂತೆ ಅನೇಕ ಧರ್ಮಶಾಸ್ತ್ರಜ್ಞರು ಇವರ ಜೀವನ ಹಾಗೂ ಕಾರ್ಯದ ಬಗ್ಗೆ ಸಾಕಷ್ಟು ಅಧ್ಯಯನವನ್ನು ನಡೆಸಿ ಈ ಶುಭಸಂದೇಶವು ಚಿರಕಾಲಕ್ಕೆ ವಿನೂತನವಾಗಿ ಜೀವಿಸುವ ಹಾಗೆ ರೂಪಿಸಿ ಇತಿಹಾಸದ ಪುಟಗಳಲ್ಲಿ ಇದರ ಪ್ರತಿಬಿಂಬವನ್ನು ಬಿಂಬಿಸಿದ್ದಾರೆ.
ಫಾದರ್ . ಬಾಲ್ ರಾಜ್
No comments:
Post a Comment