ತಾವೇ "ಅಭಿಷಿಕ್ತರಾದ ಲೋಕೋದ್ಧಾರಕ ಜೀವಸ್ವರೂಪರಾದ ದೇವರ ಪುತ್ರ" (ಮತ್ತಾಯ 16:15, ಮಾರ್ಕ 8:27-30, ಲೂಕ 9:18-21) ಎಂದು ಮುಕ್ತವಾಗಿ ತನ್ನ ವಿಶ್ವಾಸವನ್ನು ವ್ಯಕ್ತಪಡಿಸಿದ ಅದ್ವಿತೀಯ ಪ್ರೇಷಿತನೆ "ಕೇಫ" ಎನಿಸಿಕೊಂಡ ಸಿಮೋನ (ಕೇಫ ಎಂದರೆ ಪೇತ್ರ ಇಲ್ಲವೇ ಬಂಡೆ ಎಂದರ್ಥ ಯೊವಾನ್ನ 1:42). ಇವನ ವ್ಯಕ್ತಿತ್ವವನ್ನು ನಿಖರವಾಗಿ ಚಿತ್ರಿಸುವುದು ಅಸಾಧ್ಯ. ಯೋಚಿಸದೆ ತಕ್ಷಣ ಪ್ರತಿಕ್ರಿಯೆ ನೀಡುವ ದುಡುಕು ಸ್ವಾಭಾವ. ಒಂದೆಡೆ ಪ್ರಭು ಯೇಸುವೇ ಅಭಿಷಿಕ್ತನಾದ ಲೋಕೋದ್ಧಾರಕ! ಎಂದು ಉದ್ಗರಿಸಿದರೆ ಮತ್ತೊಂದೆಡೆ. ಅವನಾರೋ? ನಾನರಿಯೇ! ಎಂದು ಅಲ್ಲಗಳೆಯುವ ಸ್ವಭಾವ. ಆದರೆ ಅವನದು ಮುಗ್ಧ ಮನಸ್ಸು. ಘನವಾದ ತಪ್ಪಿನ ಅರಿವಾದಾಗ ಪ್ರಾಮಾಣಿಕವಾಗಿ ಪಶ್ಚಾತಾಪ ಪಡುತ್ತಾ ತಡೆರಹಿತವಾಗಿ ಗಳಗಳನೆ ಅಳುವ ಸ್ವಾಭಾವ. ಆದರೆ ಅವನೇ ವಿಶ್ವಾಸದ ಸ್ಥಿರವಾದ ಬಂಡೆ! ಧರ್ಮಸಭೆಯ ಅಡಿಗಲ್ಲು. ಜೀವಂತ ಶಿಲೆ. ಯೇಸು ಅವನನ್ನು ನೋಡಿ, ಪೇತ್ರ ನೀನು ಬಂಡೆ ನಿನ್ನ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು. ...ನನ್ನ ಕುರಿಗಳನ್ನು ಮೇಯಿಸು! ಎಂದರು (ಯೊವಾನ್ನ 21:17) ಎಂಥಹ ಆಶ್ಚರ್ಯ! ಪೇತ್ರ ಪ್ರಭವಿನ ಮಾತಿಗೆ ಶಿರಬಾಗಿದ. ವಿಶ್ವಾಸದಲ್ಲಿ ಪ್ರರ್ವಧಿಸತೊಡಗಿದ.
ಪ್ರಭು ಯೇಸು ಕ್ರಿಸ್ತರು ತಮ್ಮ ಸೇವಾಕಾರ್ಯವನ್ನು ಮುಂದುವರಿಸಲು ವಿಶೇಷವಾಗಿ ಹನ್ನೆರಡು ವ್ಯಕ್ತಿಗಳನ್ನು ಅಯ್ಕೆ ಮಾಡಿ ಅವರನ್ನು "ಪ್ರೇಷಿತರು" (ಮತ್ತಾಯ 10:1-4, ಮಾರ್ಕ 3:13, ಲೂಕ 6:12-16) ಎಂದು ಹೆಸರಿಸಿ ಇತರರಿಂದ ಅವರನ್ನು ಬೇರ್ಪಡಿಸಿ "ನನ್ನ ಜೊತೆಯಲ್ಲಿ ಇರಲು ನಿಮ್ಮನ್ನು ಆರಿಸಿಕೊಂಡಿದ್ದೇನೆ. ಶುಭಸಂದೇಶವನ್ನು ಸಾರಲು ನಿಮ್ಮನ್ನು ಕಳುಹಿಸುತ್ತೇನೆ"ಎಂದರು. ಮಾತ್ರವಲ್ಲದೆ ಅವರು, ತಮ್ಮನ್ನು ಅವರಿಗೆ ವಿವಿಧ ಹಂತಗಳಲ್ಲಿ ಶೃತಪಡಿಸುತ್ತ, ಅವರ ವಿಶ್ವಾಸವನ್ನು ದೃಢಪಡಿಸುತ್ತಾ ಸಾಗಿದರು. ತಮ್ಮ ನಿತ್ಯದ ಬದುಕಿನ ಎಲ್ಲಾ ಒಡನಾಟದಲ್ಲಿಯೂ ಅವರು ಸಹಚರರಾದರು.
ಪ್ರಭು ಯೇಸುವಿನ ಪ್ರಮುಖ ಸೇವಾ ಕ್ಷೇತ್ರ ಗಲೀಲಿಯವಾಗಿತ್ತು. ಅವರ ಪ್ರೇಷಿತರಲ್ಲಿ ಅಗ್ರಮಾನ್ಯರೆಂದರೆ ಪೇತ್ರ. ಇವನು ಗಲೀಲಿಯ ಪ್ರಾಂತ್ಯದ ಬೆತ್ಸಾಯಿದ ಊರಿನವನು (ಯೊವಾನ್ನ 1:44). ಪ್ರಭು ವಿಶೇಷವಾಗಿ ಆಯ್ಕೆ ಮಾಡಿಕೊಂಡ ಹನ್ನೆರಡು ಮಂದಿ ಪ್ರೇಷಿತರಲ್ಲಿ ಹನ್ನೊಂದು ಮಂದಿ ಗಲೀಲಿಯ ಪ್ರಾಂತ್ಯದವರಾಗಿದ್ದರು. ಜೂದಾಸ್ ಇಸ್ಕರಿಯೋತನು ಮಾತ್ರ ಜುದಾಯ ಪ್ರಾಂತ್ಯಕ್ಕೆ ಸೇರಿದವನಾಗಿದ್ದನು. ಪ್ರೇತ್ರ ಒಬ್ಬ ನಿರಕ್ಷರಕುಕ್ಷಿ. ಈತನ ಕಾಯಕ ಮೀನು ಹಿಡಿಯುವುದು. ದುಡುಕು ಸ್ವಭಾವ. ಯೋಚಿಸದೆ ತಕ್ಷಣ ಪ್ರತಿಕ್ರಿಯಿಸುವುದರಲ್ಲಿ ಎತ್ತಿದ ಕೈ. ಆದರೆ ಅಷ್ಟೇ ಪ್ರಾಮಾಣಿಕ, ನಿಷ್ಠಾವಂತ ಸೇವಕ. ಆತನ ವಿಶ್ವಾಸ ಅಚಲ ಹಾಗು ಅಭೇದ್ಯ.
ಇಸ್ರಾಯೇಲರ ಬಿಡುಗಡೆಗೆ ಮೆಸ್ಸಾಯ ಬರುವರು ಎಂಬ ಬಲವಾದ ನಂಬಿಕೆ ಯಹೂದ್ಯರದು. ರೋಮನರ ದಬ್ಬಾಳಿಕೆಗೆ ಸಿಲುಕಿ ತತ್ತರಿಸುತಿದ್ದ ಯಹೂದ್ಯರು ಬಿಡುಗಡೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದರು. ಅದೇ ಸಮಯದಲ್ಲಿ ಸ್ನಾನಿಕ ಯೊವಾನ್ನನ ಬೋಧನೆಯಿಂದ ಗಲಿಲೇಯದ ಹಲವರು ಸ್ಫೂರ್ತಿಗೊಂಡಿದ್ದರು. ಅವರಲ್ಲಿ ಪ್ರೇತ್ರನೂ ಸಹ ಒಬ್ಬನಾಗಿದ್ದನು. ಇವನು ಸಹ ರಕ್ಷಣೆಯನ್ನು ಎದುರು ನೋಡುತ್ತಿದ್ದನು. ಆದರೆ ಪ್ರಭು ಯೇಸುವೇ ತಮ್ಮ ಬಿಡುಗಡೆಯ ರಕ್ಷಕ ಎಂಬುದರ ಅರಿವು ಅವನಿಗಿರಲಿಲ್ಲ. ಆ ಒಂದು ದಿನ ಪ್ರಭು ಯೇಸು ಪೇತ್ರನನ್ನು ಕರೆದಾಗ ಆತ ತನ್ನ ಸಹೋದರ ಅಂದ್ರೆಯನೊಡನೆ ಮೀನು ಹಿಡಿಯಲು ಗಲಿಲೇಯ (ಗೆನೆಸರೇತ್) ಸರೋವರದಲ್ಲಿ ಬಲೆಬೀಸುತ್ತಿದ್ದ. ಪ್ರಭು ಯೇಸು ಅವರನ್ನು ನೋಡಿ "ನನ್ನನ್ನು ಹಿಂಬಾಲಿಸಿ ಬನ್ನಿ. ನಿಮ್ಮನ್ನು ಮನುಷ್ಯರನ್ನೇ ಹಿಡುಯುವವರನ್ನಾಗಿ ಮಾಡುವೆನು" (ಮತ್ತಾಯ 4:19, ಮಾರ್ಕ 1:17, ಲೂಕ 5:10). ಎಂದು ಕರೆಯಲು ಯಾವ ಯೋಚನೆಯನ್ನು ಮಾಡದೆ "ತಕ್ಷಣವೇ, ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು" (ಮತ್ತಾಯ 4:20, ಮಾರ್ಕ 1:18, ಲೂಕ 5:11).
ಪೇತ್ರ ಪ್ರಾರಂಭದಿಂದಲೂ ಪ್ರಭು ಯೇಸುವಿನ ಸೇವಾಕಾರ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದನು. ಯೇಸು ತಾಬೋರ್ ಬೆಟ್ಟದ ಮೇಲೆ ಮರು ರೂಪ ತಾಳಿದಾಗ, ಜಯಕಾರ ಹಾಕುತ್ತ ಜರುಸಲೇಮ್ ಪ್ರವೇಶಿಸುವಾಗ, ಗೆತ್ಸಮಿನಿ ತೋಟದಲ್ಲಿ ಪ್ರಭು ಯಾತನೆ ಪಡುತ್ತಾ ಪ್ರಾರ್ಥಿಸುತ್ತಿದ್ದಾಗ ಅವರ ಜೊತೆಯಲ್ಲಿದ್ದ. ಯೇಸುವಿನೊಡನೆ ತಾನು ಸಾಯಲೂ ಸಹ ಸಿದ್ಧನೆಂದು ಸಹ ಜಂಬ ಕೊಚ್ಚಿಕೊಂಡಿದ್ದ ಆದರೆ ಅಂಥಹ ಸಮಯ ಬಂದಾಗ ಪ್ರಾಣ ಭಯದಿಂದ ಪ್ರಭು ಯಾರೆಂದು ತಿಳಿಯದೆಂದು ಸಾರಸಗಟಾಗಿ ನಿರಾಕರಿಸಿದ್ದ. ಆದರೆ ಪ್ರಭುವಿನ ಪುನರುತ್ಥಾನದ ನಂತರ ಯಾವ ಜನರಿಗೆ ಹೆದರಿ ಪ್ರಭುವನ್ನು ನಿರಾಕರಿಸಿದ್ದನೋ ಅವರ ಮುಂದೆಯೇ ನಿಂತು ಜೀವದ ಹಂಗು ತೊರೆದು ಕೆಚ್ಚೆದಯಿಂದ "...ನೀವು ಅವರನ್ನು ಪರಕೀಯರ ಕೈಗೋಪ್ಪಿಸಿ ಶಿಲುಬೆಗೆ ಹಾಕಿಸಿ, ಕೊಲ್ಲಿಸಿದಿರಿ. ಆದರೆ ದೇವರು ಅವರನ್ನು ಮೃತ್ಯುಶೂಲೆಯಿಂದ ಬಿಡಿಸಿ ಎಬ್ಬಿಸಿದರು" ಎಂದು ಬೋಧಿಸಿದ ಅಪ್ರತಿಮ ಬಂಟ (ಪ್ರೇಷಿತ 2:23-24). ಆ ಕ್ಷಣದಿಂದ ಪ್ರಾರಂಭವಾದ ಅವನ ದಿಟ್ಟತನ ಸಾವಿನಲ್ಲಿಯೂ ನಂದಿಹೋಗಲಿಲ್ಲ.
ಯೆಹೂದ್ಯ ಅಧಿಕಾರಿಗಳು, ಪ್ರಮುಖರು ಮತ್ತು ಧರ್ಮಶಾಸ್ತ್ರಿಗಳು ಒಟ್ಟಾಗಿ ಸೇರಿ ಪೇತ್ರನನ್ನು ಹಲವು ಬಾರಿ ಬಂಧಿಸಿ ಚಾಟೆಗಳಿಂದ ಹೊಡೆಸಿದರು. ಪ್ರಭುವಿನ ಹೆಸರೆತ್ತಿ ಬೋಧಿಸದಂತೆ ಕಟ್ಟಪ್ಪಣೆ ಮಾಡಿದರು, ಸೆರಮನೆಗೆ ತಳ್ಳಿದರು ಆದರೂ ಪೇತ್ರ ಮಾತ್ರ ಯಾವುದಕ್ಕೂ ಜಗ್ಗದೆ ಪ್ರಭುವಿನ ಹೆಸರಿನಲ್ಲಿ ಬೋಧಿಸುತ್ತ ಅದ್ಭುತಕಾರ್ಯಗಳನ್ನು ಮಾಡುತ್ತ ಧೈರ್ಯದಿಂದ ಮುಂದುವರಿದನು. ಪುನರುತ್ಥಾನಿ ಪ್ರಭು ಕ್ರಿಸ್ತನ ಸ್ಫರ್ಶದಿಂದ ತುಂಬಿದವನಾದ ಪೇತ್ರನಿಗೆ ಕ್ರಿಸ್ತನೇ ಸರ್ವಸ್ವವೂ ಆಗಿದ್ದ. ಲೋಕವು ಅವನ ಪಾಲಿಗೆ ಕತ್ತಲೆಯಿಂದ ತುಂಬಿತ್ತು. ಕ್ರಿಸ್ತನ ಬೆಳಕಿಂದ ಲೋಕದ ಕತ್ತಲೆಯನ್ನು ನಿವಾರಿಸಲು ತನ್ನನ್ನೇ ಮುಡುಪಾಗಿಟ್ಟಿದ್ದ. ವೃದು ಸ್ವಭಾವದವನಾಗಿದ್ದ ಪೇತ್ರ ಈಗ ಬಂಡೆಯಂತೆ ವಿಶ್ವಾದಲ್ಲಿ ಸ್ಥಿರವಾಗಿದ್ದ.
ಪೇತ್ರ ಎಂದೂ ಸಹ ದೇವರಿತ್ತ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ. ನಿರಂತರವೂ ನಿಷ್ಠಾವಂತ ಸೇವಕನಾಗಿಯೇ ಕಾರ್ಯತತ್ಪರನಾಗಿದ್ದ. ತನ್ನ ಬೋಧನೆಯನ್ನು ಯೆಹೂದ್ಯರಿಗೆ ಮಾತ್ರ ಸೀಮಿತಗೊಳಿಸದೆ ಅನ್ಯಜನರಿಗೂ ಸಹ ವಿಸ್ತರಿಸಿದ. ಸೇವಾಕಾರ್ಯದಲ್ಲಿ ಒಂದೊದಗಿದ ಕಷ್ಟ ಸಂಕಷ್ಟಗಳಿಗೆ ಹೆದರಿ ಕುಗ್ಗಿಹೋಗದೆ ಸಮಚಿತ್ತದಿಂದ ಎದುರಿಸಿ ಇತರರಿಗೆ ಮಾದರಿಯಾಗಿ ದೀನತೆಯ ಶಿಖರವಾಗಿದ್ದ. ಸಾವಿನಲ್ಲಿಯು ಒಬ್ಬ ಪ್ರಾಮಾಣಿಕ ಹಾಗೂ ನಿಷ್ಠಾವಂತ ಸೇವಕ ಎಂಬುದನ್ನು ತಾನು ಶಿಲುಬೆಯ ಮೇಲೆ ಕ್ರಿಸ್ತನಂತೆ ತೂಗಲು ಅನರ್ಹನೆಂದು ತಲೆ ಕೆಳಗೆ ಮಾಡಿ ಜಡಿಸಿಕೊಂಡು ರಕ್ತಸಾಕ್ಷಿಯಾಗಿ ವೀರ ಮರಣವನ್ನಪ್ಪಿದ ಧೀಮಂತ ಪ್ರೇಷಿತ. ಪೇತ್ರ ಇಂದು ಎಂದೆಂದು ಧರ್ಮಸಭೆಯ ಉತ್ತುಂಗ ಶಿಖರದಲ್ಲಿ ಸಂಜೀವಿನಿಯಾಗಿ ರಾರಾಜಿಸುತ್ತಿದ್ದಾನೆ.
¨ ಫಾದರ್ ವಿಜಯ ಕುಮಾರ ಪಿ. ಬಳ್ಳಾರಿ
No comments:
Post a Comment