ಪೌಲನ ಮತೊಂದು ಹೆಸರು ಸೌಲ. ಇವನು ಸುಮಾರು 4ನೇ ಶತಮಾನದಲ್ಲಿ ಪ್ರಸ್ತುತ ಟರ್ಕಿಯಲ್ಲಿರುವ ಸಿಲಿಸಿಯಾದ ತಾರ್ಸುಸ್‌ನಲ್ಲಿ ಜನಸಿದ. ಇವನು ಆದಿ ಧರ್ಮಸಭೆಯ ಅತ್ಯದ್ಭುತ ಸೇವಕ. ಕಥೋಲಿಕ ಕ್ರೈಸ್ತ ಇತಿಹಾಸದ ಬಹು ಪ್ರಮುಖವಾದ ವ್ಯಕ್ತಿ. ಈತನು ಒಬ್ಬ ಅಪ್ಪಟ ಯಹೂದ್ಯ ಹಾಗು ಏಕ ದೇವರ ಆರಾಧಕ. ಹಲವು ಯಹೂದ್ಯರು ಕ್ರೈಸ್ತ ಧರ್ಮಾವಲಂಬಿಗಳಾಗುವಂತೆ ಅವರ ಮನಪರಿವರ್ತನೆಗೆ ಕಾರಣನಾದವ. ಆದರೆ ಇವನು ಶುಭಸಂದೇಶ ಪ್ರಮುಖವಾಗಿ ಸಾರಿದ್ದು ಮಾತ್ರ ಯಹೂದ್ಯೇತರಿಗೆ. ಯಹೂದ್ಯೇತರು (Gentiles- ಅನ್ಯಧರ್ಮೀಯರು) ಏಕದೇವೋಪಾಸಕರಲ್ಲ ಬದಲಾಗಿ ಬಹು ದೇವರುಗಳಲ್ಲಿ ನಂಬಿಕೆಯುಳ್ಳವರಾಗಿದ್ದರು. ಅಲ್ಲದೆ ವಿಗ್ರಹಗಳ ಆರಾಧಕರಾಗಿದ್ದರು. ಇಂತಹ ಜನರು ಏಕದೇವೋಪಾಸಕರಾಗಲು ಕರೆ ನೀಡಿದ ಧೀಮಂತವ್ಯಕ್ತಿಗಳಲ್ಲಿ ಪ್ರಥಮ ಪಂಕ್ತಿಗೆ ಸೇರಿದವನು ಪೌಲ. ಪ್ರಭು ಯೇಸುವೇ ಏಕದೇವರು ಕಳುಹಿಸಿದ ರಕ್ಷಕರೆಂದು, ಅವರೆ ದೇವಕುಮಾರ ಹಾಗೂ ಮನುಕುಲದ ಉದ್ಧಾರಕರೆಂದು, ಅವರನ್ನು ಕಠೋರವಾದ ಶಿಲುಬೆಯ ಮರಣಕ್ಕೆ ನಮ್ಮವರೇ ಗುರಿಪಡಿಸಿದರೆಂದು, ಆದರೆ ತಂದೆ ದೇವರು ಅವರನ್ನು ಪುನರುತ್ಥಾನಗೊಳಿಸಿದರೆಂದು ವಿಶ್ವಾಸದಿಂದ ಬೋಧಿಸಿದ ಅಪ್ರತಿಮ ಮಹಾ ಬೋಧಕ. ಮಾತ್ರವಲ್ಲದೆ ಈ ಸತ್ಯವನ್ನು ವಿಶ್ವಾಸಿಸುವವರು ಜೀವೋದ್ಧಾರ ಹೊಂದುವರೆಂದು ದೃಢ ವಿಶ್ವಾಸದಿಂದ ತನ್ನ ಜೀವದ ಹಂಗು ತೊರೆದು ಬೋಧಿಸಿದ. ಅಂತಿಮವಾಗಿ ಕ್ರಿಸ್ತನಿಗಾಗಿ ತನ್ನ ಜೀವವನ್ನೇ ನೀಡಿದ ಮಹಾನುಭಾವಿ ಸಂತ ಪೌಲ.
ಪ್ರಾರಂಭದಲ್ಲಿ ಕ್ರೈಸ್ತ ಧರ್ಮದ ಅನುಯಾಯಿಗಳಾದ ಯಹೂದ್ಯರು, ಯಹೂದ್ಯ ಧರ್ಮದ ನೀತಿ ನಿಯಮಗಳನ್ನು ಕ್ರಮ ಬದ್ದವಾಗಿ ಪಾಲಿಸುತ್ತಿರಲಿಲ್ಲ. ಇವರು (ಅನ್ಯಧರ್ಮೀಯರು) ಹೊಸದಾಗಿ ಕ್ರೈಸ್ತ ಧರ್ಮ ಸೇರಿದ ಯಹೂದ್ಯೇತರೊಡನೆ ಸರಳವಾಗಿ ಬೆರೆತು ತಮ್ಮ ಧಾರ್ಮಿಕ ಮಡಿವಂತಿಕೆಯನ್ನು ಕಳೆದುಕೊಳ್ಳುತ್ತಿದ್ದರು. ನ್ಯಾಯತೀರ್ಪಿನ ದಿನ ಎಲ್ಲರು ಪುನರುತ್ಥಾನರಾಗುವರು ಎಂಬುದ ಪೌಲನ ಅಪಾರ ನಂಬಿಕೆ ಆದರೆ ಪ್ರಭುಯೇಸುವನ್ನು ತಂದೆ ದೇವರು ಹೇಗೆ ಅಂತಿಮ ದಿನಕ್ಕೆ ಮೊದಲೇ ಪುನರುತ್ಥಾನಗೊಳಿಸಲು ಸಾಧ್ಯ? ಇದು ಸತ್ಯಕ್ಕೆ ದೂರವಾದುದು ಎಂಬುದು ಪೌಲನ ದೃಡ ವಿಶ್ವಾಸವಾಗಿತ್ತು. ಅದಲ್ಲದೆ ಶಿಲುಬೆಯಲ್ಲಿ ಸತ್ತವನೊಬ್ಬ "ಮೆಸ್ಸಾಯ" ಆಗಲೂ ಹೇಗೆ ಸಾಧ್ಯ? ಶಿಲುಬೆಯ ಮರಣ ಕಟೋರ ಪಾಪಿಗಳಿಗೆ ಹಾಗು ಶಾಪಗ್ರಸ್ತರಿಗೆ ಮಾತ್ರ! ಇವೆಲ್ಲವು ಪೌಲನ ನಂಬಿಕೆಗಳಿಗೆ ತದ್ವಿರುದ್ದವಾಗಿದ್ದವು ಈ ಕಾರಣ ಅವನು ಹೊಸದಾಗಿ ಪ್ರಾರಂಭವಾಗಿದ್ದ ಕ್ರೈಸ್ತಧರ್ಮದ ಬಗ್ಗೆ ವಿರೋಧ ವ್ಯಕ್ತಪಡಿಸುವುದು ಮಾತ್ರವಲ್ಲದೆ ಆ ಧರ್ಮದ ಕಡು ವಿರೋಧಿಯಾಗಿ ಕ್ರೈಸ್ತರನ್ನು ಹಿಂಸಿಸಲು ಪ್ರಾರಂಭಿಸಿದ್ದನು. ಆದರೆ ದಮಸ್ಕಸ್ ಹಾದಿಯಲ್ಲಿ ಕ್ರಿಸ್ತನ ದರ್ಶನದಿಂದ ಅವನ ಅಂತರಂಗ ಕ್ರಿಸ್ತಮಯವಾಯಿತು. ದ್ವೇಷ ಅಳಿಯಿತು. ಪ್ರೀತಿ ಮೊಳೆಯಿತು. ಅಂದಿನಿಂದ ಆತ ಕ್ರಿಸ್ತಾಂಭರನಾದ. ಪುನರುತ್ಥಾನಿ ಕ್ರಿಸ್ತನಲ್ಲಿ ಸದೃಡನಾಗಿ ಕ್ರಿಸ್ತ ವಿರೋಧಿಯಾಗಿದ್ದ ಪೌಲ, ಕ್ರಿಸ್ತ ವಿಶ್ವಾಸಿಯಾಗಿ ಇತರರನ್ನು ಅವರತ್ತ ಸೆಳೆಯಲು ತನ್ನ ಜೀವನವನ್ನು ಮುಡುಪಾಗಿಟ್ಟ.
ಪೌಲ ಒಬ್ಬ ಅದ್ಧುತ ಮಾನವ ಜೀವಿ. ವಿಶಾಲ ಹೃದಯವುಳ್ಳವನಾಗಿದ್ದನು. ಕೆಲಸದಲ್ಲಿ ಬದ್ಧತೆ ಪ್ರಾಮಾಣಿಕತೆಯ ಬದುಕು ಇವನದಾಗಿತ್ತು. ಈತ ಭಾವೋದ್ವೇಗ ಉಳ್ಳವನೂ ಆಗಿದ್ದನು. ಕೆಲವು ಸಂದರ್ಭಗಳಲ್ಲಿ ತುಂಬ ಕಠಿಣ ಸ್ವಾಭಾವದವನಾಗಿ ಕೋಪವನ್ನು ವ್ಯಕ್ತಪಡಿಸುತ್ತಿದ್ದನು. ಇವನು ಮಹಾ ಬುದ್ಧಿವಂತ, ಆಗಾಗ ಹಾಸ್ಯಪ್ರಜ್ಞೆವುಳ್ಳವನೂ ಆಗಿದ್ದನು. ಇವನದು ಪಾರದರ್ಶಕ ವ್ಯಕ್ತಿತ್ವ. ಮಾತಿನಲ್ಲಿ ಸಮತೋಲನ ಎಲ್ಲಕ್ಕಿಂತ ಹೆಚ್ಚಾಗಿ ದೇವರಲ್ಲಿ ಅಪಾರ ಭಕ್ತಿ ವಿಶ್ವಾಸವುಳ್ಳವನಾಗಿ ತ್ರೈಏಕ ದೇವನಿಗೆ ಸಂಪೂರ್ಣವಾಗಿ ಶರಣಾಗಿದ್ದ ನಿಷ್ಠಾವಂತ ಸೇವಕ. ಈತ ಕ್ರಿಸ್ತನ ಸೇವೆಯಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ.
ಪೌಲ ಚರ್ಮದ ಗುಡಾರ ಕಟ್ಟುವ ಕೆಲಸದಲ್ಲಿ ಪರಿಣಿತ. ಕೆಲಸ ಮಾಡುತ್ತಲೇ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಮಾತಾನಾಡುತ್ತಿದ್ದ ಹಾಗೆಯೇ ಕ್ರಿಸ್ತನ ಬಗ್ಗೆ ಮಾತನಾಡಲು ಪ್ರಾರಂಭಿಸಿ ಬಿಡುತ್ತಿದ್ದ. ಹಿಬ್ರೂ ಹಾಗೂ ಗ್ರೀರ್ಕ್ ಭಾಷೆಗಳನ್ನು ಬಲ್ಲವನಾಗಿದ್ದ ಕಾರಣ ವಿಷಯವನ್ನು ಸರಳವಾಗಿ ಸಮರ್ಪಕವಾಗಿ ವಿವರಿಸುವ ವಾಕ್ಚತುರನಾಗಿದ್ದ. ತನ್ನ ಕೆಲಸದಿಂದ ಬರುತ್ತಿದ್ದ ಆದಾಯ ಅವನ ಹೊಟ್ಟೆ ತುಂಬುತ್ತಿರಲಿಲ್ಲ. ಕ್ರೈಸ್ತ ಭಕ್ತ ಸಮೂಹ ನೀಡುತ್ತಿದ್ದ ಸಹಾಯ ಧನಕ್ಕಾಗಿ ಕಾಯುತ್ತಿದ್ದ ವಿನಮ್ರ ವ್ಯಕ್ತಿ. ಆತನ ಮಾತುಗಳಲ್ಲೇ ಹೇಳುವುದಾದರೆ "ಶ್ರಮಪಟ್ಟು ದುಡಿದಿದ್ದೇನೆ, ಎಷ್ಟೋ ಸಾರಿ ನಿದ್ದೇಗೆಟ್ಟಿದ್ದೇನೆ; ಹಸಿವು ನೀರಡಿಕೆಗಳಿಂದ ಬಳಲಿದ್ದೇನೆ; ಅನೇಕ ಸಾರಿ ಊಟ ಬಟ್ಟೆಯಿಲ್ಲದೆ ಅಲೆದಿದ್ದೇನೆ; ಚಳಿಗಾಳಿಯಲ್ಲಿ ನಡುಗಿದ್ದೇನೆ" (2ಕೋರಿ 11:27) ಆದರೆ ಅವನು ಎಂದೂ ಅವನು ಅತೃಪ್ತಿಯನ್ನು ವ್ಯಕ್ತಪಡಿಸಲಿಲ್ಲ ಬದಲಾಗಿ ಆತನು ಕ್ರಿಸ್ತನಲ್ಲಿ ಸಂತೃಪ್ತಿಯಿಂದ ಇರಲು ಕಲಿತುಕೊಂಡಿದ್ದನು "ನಾನು ಯಾವ ಸ್ಥಿತಿಯಲ್ಲಿದ್ದರೂ ತೃಪ್ತಿಯಿಂದಿರಲು ಕಲಿತುಕೊಂಡಿದ್ದೇನೆ. ಬಡತನ ಇರಲಿ, ಸಿರಿತನವಿರಲಿ, ಕೊರತೆಯಿರಲಿ, ಸಮೃದ್ಧಿ ಇರಲಿ, ಹಸಿದಿರಲಿ, ಹೊಟ್ಟೆ ತುಂಬಿರಲಿ-ಯಾವ ಸ್ಥಿತಿಯಲ್ಲಿದ್ದರೂ, ಎಲ್ಲಾ ವೇಳೆಯಲ್ಲಿಯೂ ಸಂತೃಪ್ತನಾಗಿರುವ ರಹಸ್ಯವನ್ನು ತಿಳಿದಿದ್ದೇನೆ" ಎನ್ನುತ್ತಾನೆ ಸಂತ ಪೌಲ (ಪಿಲಿ 4:11-12).
ಪೌಲ ಒಬ್ಬ ಅದ್ವಿತೀಯ ಬೋಧಕ. ಹಿಬ್ರೂ ಬೈಬಲಿನ (ಬೈಬಲಿನ ಮೊದಲ ಐದು ಗ್ರಂಥಗಳು) ಪೂರ್ಣ ಪರಿಚಯ ಅವನಿಗಿತ್ತು. ಅಪ್ಪಟ ಯಹೂದ್ಯನಾಗಿದ್ದ ಇವನು ತನ್ನ ಧರ್ಮದ ನೀತಿ ನಿಯಮಗಳನ್ನು ಚೆನ್ನಾಗಿ ಬಲ್ಲವನಾಗಿದ್ದನು. ಯಹೂದ್ಯ ಧರ್ಮ ಗ್ರಂಥಗಳಲ್ಲಿ ತಿಳಿಸಲಾಗಿರುವ "ಮೆಸ್ಸಾಯ" 'ಕ್ರಿಸ್ತ'ನೇ. ಅವರೆ ಲೋಕೋದ್ಧಾರಕ ಮನುಕುಲದ ರಕ್ಷಕ. ಅವರು ಮನುಕುಲದ ರಕ್ಷಣೆಗಾಗಿ ಶಿಲುಬೆಯ ಮರಣವನ್ನು ಅನುಭವಿಸಿದರು ಆದರೆ ಮೂರನೆಯ ದಿನ ನಮ್ಮ ಪಿತೃಗಳ ದೇವರು ಅವರನ್ನು ಪುನರುತ್ಥಾನಗಳಿಸಿದರು ಎಂದು ವಿಶ್ವಾಸಿ, ತನ್ನ ಪ್ರಾಣದ ಹಂಗು ತೊರೆದು ನಿರ್ಭಯದಿಂದ ಪ್ರಬೋಧಿಸಿದ ಧೀಮಂತ ವ್ಯಕ್ತಿಯೇ ಸಂತ ಪೌಲ.
¨ ಫಾದರ್ ವಿಜಯ ಕುಮಾರ ಪಿ. ಬಳ್ಳಾರಿ
No comments:
Post a Comment