Friday, 31 May 2019

1 ಜೂನ್ 2019


ಸುವಾರ್ತಾ ಪ್ರಸಾರ ಉದ್ದೇಶ:
ತಮ್ಮ ಸರಳ ಜೀವನ ಹಾಗೂ ದೀನಭಾವದಿಂದ ಯಾಜಕರು ತೀರ ಬಡತನದಲ್ಲಿರುವವರೊಂದಿಗೆ ಐಕ್ಯದಿಂದಿದ್ದು, ಅವರ ಸೇವೆಯನ್ನು ಸಮರ್ಪಿತ ಮನೋಭಾವದಿಂದ ಮಾಡುವಂತೆ....

ಕೆಂಪು/ಶನಿ/ಸಂತಜಸ್ಟಿನ್ (.ಸಾ) (ಸ್ಮರಣೆ)
1ನೇ  ವಾಚನ  -  ಪ್ರೇ.ಕಾ:  18:  23-28
ಕೀರ್ತನೆ  -  47:  1-2,  7-9
ಶುಭಸಂದೇಶ - ಯೊವಾನ್ನ 16: 23-28
1ನೇ  ವಾಚನ  -  ಪ್ರೇ.ಕಾ:  18:  23-28
23 : ಅಲ್ಲಿ ಕೆಲಕಾಲವಿದ್ದು ಪುನಃ ಹೊರಟು ಗಲಾತ್ಯ ಮತ್ತು ಫ್ರಿಜಿಯ ಪ್ರದೇಶಗಳಲ್ಲಿ ಸಂಚರಿಸುತ್ತಾ ಭಕ್ತರೆಲ್ಲರನ್ನು ದೃಢಪಡಿಸಿದನು.
24 : ಅಲೆಕ್ಸಾಂಡ್ರಿಯದ ಅಪೊಲ್ಲೋಸ್ ಎಂಬ ಯೆಹೂದ್ಯನು ಎಫೆಸಕ್ಕೆ ಬಂದಿದ್ದನು. ಅವನೊಬ್ಬ ಉತ್ತಮ ಭಾಷಣಕಾರ ಹಾಗೂ ಪವಿತ್ರಗ್ರಂಥದಲ್ಲಿ ಪಾಂಡಿತ್ಯಪಡೆದವನು.
25 : ಪ್ರಭುವಿನ ಮಾರ್ಗದ ಬಗ್ಗೆ ಅವನಿಗೆ ಉಪದೇಶಮಾಡಲಾಗಿತ್ತು. ಸ್ನಾನಿಕ ಯೊವಾನ್ನನ ಸ್ನಾನದೀಕ್ಷೆ ಒಂದನ್ನೇ ಅವನು ಬಲ್ಲವನಾಗಿದ್ದನು. ಆದರೂ ಯೇಸುಸ್ವಾಮಿಯ ಬಗ್ಗೆ ಉತ್ಸಾಹಭರಿತನಾಗಿ ಉಪದೇಶಮಾಡಿ ಚ್ಯುತಿಯಿಲ್ಲದೆ ಬೋಧಿಸುತ್ತಾ ಬಂದನು.
26 : ಇವನು ಪ್ರಾರ್ಥನಾಮಂದಿರದಲ್ಲಿ ಧೈರ್ಯದಿಂದ ಮಾತನಾಡುತ್ತಿದ್ದಾಗ, ಪ್ರಿಸ್ಸಿಲ ಮತ್ತು ಅಕ್ವಿಲರು ಅವನ ಬೋಧನೆಯನ್ನು ಕೇಳಿದರು. ಅವನನ್ನು ಮನೆಗೆ ಕರೆದುಕೊಂಡು ಹೋಗಿ ಪ್ರಭುವಿನ ಮಾರ್ಗವನ್ನು ಇನ್ನೂ ಸೂಕ್ಷ್ಮವಾಗಿ ವಿವರಿಸಿದರು.
27 : ಇವನು ಅಖಾಯಕ್ಕೆ ಹೋಗಲು ಇಷ್ಟಪಟ್ಟಾಗ ಭಕ್ತಾದಿಗಳು ಅವನನ್ನು ಪ್ರೋತ್ಸಾಹಿಸಿ, ಅಖಾಯದ ಭಕ್ತಾದಿಗಳಿಗೆ ಪತ್ರ ಬರೆದು, ಇವನನ್ನು ಸ್ವಾಗತಿಸುವಂತೆ ಬಿನ್ನವಿಸಿದರು. ಇವನು ಅಲ್ಲಿಗೆ ಹೋಗಿ ದೇವರ ಕೃಪೆಯಿಂದ ವಿಶ್ವಾಸಿಗಳಾಗಿದ್ದವರಿಗೆ ಬಹುವಾಗಿ ನೆರವಾದನು.
28 : ಹೇಗೆಂದರೆ, ಪವಿತ್ರ ಗ್ರಂಥಾನುಸಾರ ಯೇಸುವೇ ಲೋಕೋದ್ಧಾರಕನೆಂದು ಖಚಿತಪಡಿಸಿ ಯೆಹೂದ್ಯರನ್ನು ಎಲ್ಲರ ಮುಂದೆ ಬಹಿರಂಗವಾಗಿ ಪ್ರತಿಭಟಿಸಿದನು.
ಕೀರ್ತನೆ  -  47:  1-2,  7-9
ದೇವನು ಭೂಮಂಡಲಕ್ಕೆಲ್ಲಾ ಒಡೆಯನು
1 : ಸರ್ವ ಜನಾಂಗಗಳೇ, ಚಪ್ಪಾಳೆ ಹೊಡೆಯಿರಿ / ಸರ್ವೇಶ್ವರನಿಗೆ ಜಯಜಯ ಘೋಷ ಮಾಡಿರಿ //
2 : ಎತ್ತರದಲಿ ಸುಂದರ, ಉತ್ತರದಲಿ ಸಿಯೋನ್ ಶಿಖರ / ಆನಂದದಾಯಕ ರಾಜಾಧಿರಾಜನ ಆ ನಗರ //
3 : ಅದರ ಕೋಟೆಕೊತ್ತಲಗಳ ನಡುವೆ ದೇವನು / ತಾನೇ ಸುಭದ್ರ ದುರ್ಗವೆಂದು ತೋರಿಹನು //
8 : ವಹಿಸಿಕೊಂಡನು ದೇವನು ಸರ್ವಾಧಿಪತ್ಯ / ಅಲಂಕರಿಸಿಹನು ತನ್ನ ಪೂಜ್ಯ ಗದ್ದುಗೆಯ //
9 : ಒಟ್ಟುಗೂಡಿ ಬಂದರು ಪ್ರಜೆಯ ಪ್ರಮುಖರು / ಅಬ್ರಹಾಮನ ದೇವಜನರೊಡನೆ ಸೇರಿಕೊಂಡರು // ಭೂಪಾಲರೆಲ್ಲರೂ ದೇವರಿಗೆ ಅಧೀನರು / ಸರ್ವೋನ್ನತನು, ಸಾರ್ವಭೌಮನು ದೇವರು //

ಶುಭಸಂದೇಶ - ಯೊವಾನ್ನ 16: 23-28
23 : ಆ ದಿನದಂದು ನನ್ನಿಂದ ನೀವೇನನ್ನೂ ಕೇಳುವಂತಿಲ್ಲ. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ಪಿತನಲ್ಲಿ ಏನನ್ನು ಬೇಡಿಕೊಂಡರೂ ನಿಮಗೆ ಅವರು ನನ್ನ ಹೆಸರಿನಲ್ಲಿ ಕೊಟ್ಟೇ ತೀರುವರು.
24 : ಈ ತನಕ ನನ್ನ ಹೆಸರಿನಲ್ಲಿ ನೀವೇನನ್ನೂ ಕೇಳಲಿಲ್ಲ. ಕೇಳಿ, ನಿಮಗೆ ದೊರಕುವುದು. ಆಗ ನಿಮ್ಮ ಆನಂದವು ತುಂಬಿ ತುಳುಕುವುದು. ಲೋಕದ ಮೇಲೆ ವಿಜಯ
25 : “ಈ ಸಂಗತಿಗಳನ್ನೆಲ್ಲಾ ನಿಮಗೆ ಸಾಮತಿಗಳ ರೂಪದಲ್ಲಿ ತಿಳಿಸಿರುವೆನು. ಕಾಲವು ಬರಲಿದೆ. ಆಗ ಸಾಮತಿಗಳನ್ನು ಬಳಸದೆ ಸ್ಪಷ್ಟವಾದ ಮಾತಿನಲ್ಲಿ ಪಿತನನ್ನು ಕುರಿತು ನಿಮಗೆ ತಿಳಿಸುವೆನು.
26 : ಕಾಲವು ಬಂದಾಗ ನನ್ನ ಹೆಸರು ಹೇಳಿ ನೀವೇ ಪಿತನಲ್ಲಿ ಬೇಡುವಿರಿ. ನಿಮ್ಮ ಪರವಾಗಿ ನಾನು ಪಿತನಲ್ಲಿ ಬೇಡಿಕೊಳ್ಳುವೆನೆಂದು ನಾನು ಹೇಳುವುದಿಲ್ಲ
27 : ಕಾರಣ, ಪಿತನೇ ನಿಮ್ಮನ್ನು ಪ್ರೀತಿಸುತ್ತಾರೆ. ನೀವು ನನ್ನನ್ನು ಪ್ರೀತಿಸಿ ನಾನು ಅವರಿಂದ ಬಂದವನೆಂದು ವಿಶ್ವಾಸಿಸಿದ್ದರಿಂದ ಪಿತನಿಗೆ ನಿಮ್ಮ ಮೇಲೆ ಅಕ್ಕರೆಯಿದೆ.
28 : ಹೌದು, ನಾನು ಪಿತನಿಂದಲೇ ಹೊರಟು ಈ ಲೋಕಕ್ಕೆ ಬಂದಿದ್ದೇನೆ. ಈಗ ಈ ಲೋಕವನ್ನು ಬಿಟ್ಟು ಪಿತನಲ್ಲಿಗೆ ಹೋಗುತ್ತಿದ್ದೇನೆ,” ಎಂದರು.

ಚಿಂತನೆ
ಪಿತನೇ ನಿಮ್ಮನ್ನು ಪೀತಿಸುತ್ತಾರೆ ಎಂದು ಕ್ರಿಸ್ತರು ಇಂದಿನ ಶುಭಸಂದೇಶದಲ್ಲಿ ಹೇಳುತ್ತಾರೆ. ಈ ಸತ್ಯವನ್ನು ನಾವು ಅನುಭವಿಸಬೇಕು, ಮನವರಿಕೆ ಮಾಡಿಕೊಳ್ಳಬೇಕು ಮತ್ತು ಇದೇ  ಭರವಸೆಯಲ್ಲಿ ನಾವು ನಿರಂತರವಾಗಿ ಜೀವಿಸಬೇಕು. ಹೌದು ಪ್ರತಿಯೊಬ್ಬ ಮನುಷ್ಯನು ಪ್ರೀತಿಗಾಗಿ ಹಾತೊರೆಯುತ್ತಾನೆ. ಆದರೆ ಮಾನವನ ಪ್ರೀತಿ ನಮ್ಮ ಈ ಮೂಲ ಅಗತ್ಯವನ್ನು ಪೂರೈಸಲು ವಿಫಲವಾಗುತ್ತದೆ. ಸಂತ ಅಗಸ್ಟೀನ್ ಹೀಗೆ ಹೇಳುತ್ತಾರೆ “ ನಿಮ್ಮನ್ನು ಸಂಪೂರ್ಣವಾಗಿ ಸತ್ಯವಾಗಿ ಪ್ರೀತಿಸುವುದು ದೇವರು ಮಾತ್ರ. ಏಕೆಂದರೆ ಮನುಷ್ಯ ಪ್ರೀತಿಯಲ್ಲಿ ಮಾತ್ರವೇ ಮಾತ್ಸರ್ಯ, ಸಂಶಯ, ಭಯ, ಕೋಪ ಮತ್ತು ಕಿತ್ತಾಟ ಮುಂತಾದ ನೂನ್ಯತೆಗಳಿರಲು ಸಾಧ್ಯ”  ಎಷ್ಟೂ ಸಲ ಪ್ರೀತಿ ಸಿಗದೆ ಜನರು ಹತ್ತಾಶೆಯಾಗಿದ್ದಾರೆ. ಆದರೆ ಒಂದು ಮಾತ್ರ ಸತ್ಯ… ದೇವರು ನಮ್ಮನ್ನು ಸದಾ ಪ್ರೀತಿಸುತ್ತಾರೆ. ಈ ಒಂದು ಅನುಭವ ನಮಗಾದರೆ ಬದುಕಿನಲ್ಲಿ ಎಲ್ಲವೂ ಸಿಕ್ಕಿದಂತೆ!

No comments:

Post a Comment