ಬಿಳಿ/ ಶುಕ್ರ/ ಪಾಸ್ಖ ಕಾಲದ ಐದನೇ ವಾರ
1ನೇ ವಾಚನ - ಪ್ರೇ.ಕಾ: 15: 22-31
22 : ಅನಂತರ ಪ್ರೇಷಿತರೂ ಸಭಾಪ್ರಮುಖರೂ ಇಡೀ ಧರ್ಮಸಭೆಯ ಸಮ್ಮತಿ ಪಡೆದು, ತಮ್ಮಲ್ಲಿ ಕೆಲವರನ್ನು ಆರಿಸಿ, ಪೌಲ ಮತ್ತು ಬಾರ್ನಬರೊಂದಿಗೆ ಅಂತಿಯೋಕ್ಯಕ್ಕೆ ಕಳುಹಿಸಬೇಕೆಂದು ನಿರ್ಧರಿಸಿದರು. ಅಂತೆಯೇ, ಸಹೋದರರಲ್ಲಿ ಬಹು ಗೌರವಾನ್ವಿತರಾದ ಬಾರ್ಸಬ ಎಂದು ಕರೆಯಲಾದ ಯೂದ ಮತ್ತು ಸೀಲ ಎಂಬ ಇಬ್ಬರನ್ನು ಆರಿಸಿದರು. ಈ ಕೆಳಗಿನ ಪತ್ರವನ್ನು ಬರೆದು ಅವರ ಕೈಯಲ್ಲಿ ಕಳುಹಿಸಿದರು.
23 : “ಅಂತಿಯೋಕ್ಯ, ಸಿರಿಯ ಮತ್ತು ಸಿಲಿಸಿಯಗಳಲ್ಲಿ ವಾಸಿಸುವ ಯೆಹೂದ್ಯೇತರ ಸಹೋದರರಿಗೆ - ಪ್ರೇಷಿತರೂ ಸಭಾಪ್ರಮುಖರೂ ನಿಮ್ಮ ಸಹೋದರರೂ ಆದ ನಮ್ಮ ಶುಭಾಶಯಗಳು!
24 : ನಮ್ಮ ಕಡೆಯ ಕೆಲವು ಜನರು ನಮ್ಮಿಂದ ಯಾವ ಆದೇಶವನ್ನೂ ಪಡೆಯದೆ ನಿಮ್ಮನ್ನು ತೊಂದರೆಗೆ ಈಡುಮಾಡಿ ನಿಮ್ಮ ಮನಸ್ಸನ್ನು ಕಲಕಿದರೆಂಬ ಸಮಾಚಾರ ನಮ್ಮ ಗಮನಕ್ಕೆ ಬಂದಿದೆ.
25 : ಆದುದರಿಂದ ನಾವೆಲ್ಲರೂ ಸಭೆಸೇರಿ ಪ್ರತಿನಿಧಿಗಳನ್ನು ಆರಿಸಿ ನಿಮ್ಮಲ್ಲಿಗೆ ಕಳುಹಿಸಲು ನಿರ್ಧರಿಸಿದೆವು.
26 : ನಮ್ಮ ಪ್ರಭುವಾದ ಯೇಸುಕ್ರಿಸ್ತರಿಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿರುವ ನಮ್ಮೊಲವಿನ ಬಾರ್ನಬ ಮತ್ತು ಪೌಲರೊಡನೆ ಈ ಪ್ರತಿನಿಧಿಗಳು ಬರುತ್ತಿದ್ದಾರೆ.
27 : ಇವರೇ ನಾವು ಕಳುಹಿಸುತ್ತಿರುವ ಯೂದ ಮತ್ತು ಸೀಲ. ಇವರು ನಾವು ಬರೆದಿರುವುದನ್ನು ನಿಮಗೆ ಖುದ್ದಾಗಿ ತಿಳಿಸುವರು.
28 : ವಿಗ್ರಹಗಳಿಗೆ ನೈವೇದ್ಯವಾದುದು ಅಪವಿತ್ರವಾದುದು. ಅದನ್ನು ಸೇವಿಸಬಾರದು; ರಕ್ತವನ್ನಾಗಲಿ, ಕುತ್ತಿಗೆ ಹಿಸುಕಿಕೊಂದ ಪ್ರಾಣಿಗಳನ್ನಾಗಲಿ ತಿನ್ನಬಾರದು; ಅನೈತಿಕತೆಯಿಂದ ದೂರವಿರಬೇಕು.
29 : ಈ ಅಗತ್ಯ ನಿಯಮಗಳ ಹೊರತು ಬೇರೆ ಯಾವ ಹೊರೆಯನ್ನೂ ನಿಮ್ಮ ಮೇಲೆ ಹೇರುವುದು ವಿಹಿತವಲ್ಲವೆಂಬುದು ಪವಿತ್ರಾತ್ಮ ಅವರ ಹಾಗೂ ನಮ್ಮ ತೀರ್ಮಾನ. ಈ ನಿಯಮಗಳನ್ನು ಅನುಸರಿಸಿದರೆ, ನಿಮಗೆ ಒಳಿತಾಗುವುದು, ನಿಮಗೆ ಶುಭವಾಗಲಿ!”
30 : ಅಂತೆಯೇ ಪ್ರತಿನಿಧಿಗಳು ಅಲ್ಲಿಂದ ಅಪ್ಪಣೆ ಪಡೆದು ಅಂತಿಯೋಕ್ಯಕ್ಕೆ ಹೋದರು. ಅಲ್ಲಿ ಭಕ್ತ ಸಭೆಯನ್ನು ಒಟ್ಟುಗೂಡಿಸಿ ಅವರಿಗೆ ಆ ಪತ್ರವನ್ನು ಕೊಟ್ಟರು.
31 : ಪತ್ರದಲ್ಲಿದ್ದ ಪ್ರೋತ್ಸಾಹದಾಯಕ ಸಂದೇಶವನ್ನು ಓದಿದ್ದೇ ಭಕ್ತಾದಿಗಳು ಆನಂದಭರಿತರಾದರು.
ಕೀರ್ತನೆ - 57: 7-11
ನಿನ್ನ ಸ್ತುತಿಯನು ಪ್ರಭು ಜನಾಂಗಗಳ ಮುಂದೆ
ನಿನ್ನ ಸ್ತುತಿಯನು ಪ್ರಭು ಜನಾಂಗಗಳ ಮುಂದೆ
7 : ಸ್ಥಿರವಿದೆ ದೇವಾ, ಸುಸ್ಥಿರವಿದೆ ನನ್ನ ಮನ / ಹಾಡುತ ಪಾಡುತ ನಾ ರಚಿಸುವೆ ಗಾಯನ //
8 : ಚೇತನಗೊಳ್ಳು ಮನವೇ, ಚೇತನಗೊಳ್ಳು / ಎಚ್ಚರಗೊಳ್ಳಲಿ ವೀಣೆ ತಂಬೂರಿಗಳು / ಎಬ್ಬಿಸೆ ರವಿಯನು ಪ್ರಾತಃಕಾಲದೊಳು //
9 : ನಿನ್ನ ಸ್ತುತಿಯನು ಪ್ರಭು ಜನಾಂಗಗಳ ಮುಂದೆ// ಸಂಕೀರ್ತಿಸುವೆನು ನಿನ್ನನು ರಾಷ್ಟ್ರಗಳ ಮಧ್ಯೆ //
10 : ನಿನ್ನಚಲ ಪ್ರೀತಿ ಮುಟ್ಟುತ್ತಿದೆ ಗಗನ ಮಂಡಲವನು / ನಿನ್ನ ಸತ್ಯಸಂಧತೆ ತಾಕುತ್ತಿದೆ ಮೇಘಮಂಡಲವನು //
11 : ಮೇಲಣ ಲೋಕದಲಿ ಮೆರೆಯಲಿ ದೇವಾ, ನಿನ್ನ ಹಿರಿಮೆ / ಭೂಮಂಡಲದಲಿ ಹಬ್ಬಿ ಹರಡಲಿ ನಿನ್ನಾ ಮಹಿಮೆ //
ಶುಭಸಂದೇಶ - ಯೊವಾನ್ನ 15: 12-17
12 : ನಾನು ಕೊಡುವ ಆಜ್ಞೆ ಏನೆಂದರೆ: ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು.
13 : ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ.
14 : ನಾನು ಆಜ್ಞಾಪಿಸಿದಂತೆ ನಡೆದರೆ ನೀವು ನನ್ನ ಗೆಳೆಯರು.
15 : ನಾನಿನ್ನು ನಿಮ್ಮನ್ನು ದಾಸರೆಂದು ಕರೆಯುವುದಿಲ್ಲ. ಧಣಿಯ ಕೆಲಸಕಾರ್ಯಗಳು ದಾಸನಿಗೆ ತಿಳಿಯವು. ನಾನಾದರೋ ಪಿತನಿಂದ ಕೇಳಿಸಿಕೊಂಡದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ. ಈ ಕಾರಣ ನಿಮ್ಮನ್ನು ಗೆಳೆಯರೆಂದು ಕರೆದಿದ್ದೇನೆ.
16 : ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವು ಲೋಕಕ್ಕೆ ಹೋಗಬೇಕು, ಸಫಲರಾಗಬೇಕು; ಆ ಫಲ ಶಾಶ್ವತವಾಗಿರಬೇಕೆಂದೇ ನಿಮ್ಮನ್ನು ನೇಮಿಸಿದ್ದೇನೆ. ಹೀಗಿರಲಾಗಿ ನೀವು ನನ್ನ ಹೆಸರಿನಲ್ಲಿ ಪಿತನಿಂದ ಏನು ಕೇಳಿದರೂ ನಿಮಗೆ ಅದು ಸಿಗುವುದು.
17 : ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆ.
ಚಿಂತನೆ
ಒಬ್ಬ ವ್ಯಕ್ತಿಯ ನಿಜಗುಣ ಗೊತ್ತಾಗಬೇಕಾದರೆ ಆತನಿಗೆ ಆಸ್ತಿ, ಅಂತಸ್ತು ಮತ್ತು ಅಧಿಕಾರವನ್ನು ಕೊಟ್ಟುನೋಡಿ ಎಂಬ ಹಿರಿಯರ ಮಾತನ್ನು ನಾವು ಕೇಳಿದ್ದೇವೆ. ಅಧಿಕಾರವೇ ಹೀಗೆ ಎಂತಹ ಒಳ್ಳೆಯ ವ್ಯಕ್ತಿಗಳನ್ನು ಸಹ ಬದಲಾಯಿಸಿಬಿಡುತ್ತದೆ. ತನ್ನ ಕೈ ಕೆಳಗೆ ಇರುವವರನ್ನ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರ ಮೇಲೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ತಿಳಿಯುತ್ತದೆ. ವ್ಯಕ್ತಿಯ ವ್ಯಕ್ತಿತ್ವ ವೈಭವಗೊಳ್ಳುವುದು ಆತನ ವರ್ತನೆಯಿಂದ. ಎಲ್ಲಾ ವ್ಯಕ್ತಿತ್ವಕಿಂತಲೂ ಮೇರು ವ್ಯಕ್ತಿತ್ವವನ್ನು ನಾವು ಯೇಸು ಸ್ವಾಮಿ ಯಲ್ಲಿ ಕಾಣುತ್ತೇವೆ. ದೇವಪುತ್ರರಾಗಿ, ರಾಜಾಧಿರಾಜನಾಗಿದ್ದರೂ, ಶಿಷ್ಯರ ಪಾದಗಳನ್ನು ತೊಳೆದು, ಶಿಷ್ಯರನ್ನು ದಾಸರು ಎಂದು ಅವರು ಕರೆಯುವುದಿಲ್ಲ; ಬದಲಾಗಿ, ಗೆಳೆಯರು ಎಂದು ಕರೆಯುತ್ತಾರೆ. ಇಂತಹ ದೀನತೆ ಎಲ್ಲರಿಗೂ ಒಂದು ನಿದರ್ಶನ. ಇಂದಿನ ಶುಭ ಸಂದೇಶದಲ್ಲಿ ಪ್ರಭು ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ದಾರೆ ಎರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ ಎಂದು ನಾವು ನೋಡುತ್ತೇವೆ. ಇಂತಹ ಪ್ರೀತಿ ನಮ್ಮದಾಗಲಿ, ನಮಗೆ ಒಳ್ಳೆಯ ಗೆಳೆಯರು ಸಿಗಲಿ ಎಂದು ಪ್ರಾರ್ಥಿಸುವ.
ಆತ್ಮಾವಲೋಕನ
1. ಅಧಿಕಾರ ನನ್ನನ್ನು ಹೇಗೆ ವರ್ತಿಸುವಂತೆ ಮಾಡುತ್ತಿದೆ?
2. ಯೇಸು ಸ್ವಾಮಿ ನಮ್ಮನ್ನು ದಾಸರೆಂದು ಕರೆಯುವುದಿಲ್ಲ. ನಾವು ನಮ್ಮ ಜೊತೆಯಲ್ಲಿ ಕೆಲಸ ಮಾಡುವವರನ್ನು ಹೇಗೆ ಕರೆಯುತ್ತೇವೆ?
3. ನಾನು ಪ್ರಾಣ ಕೊಡುವ ಸ್ನೇಹಿತನೇ? ಸ್ನೇಹಿತಳೇ?
ಸಹೋ ವಿನಯ್ ಕುಮಾರ್
No comments:
Post a Comment