ಬಿಳಿ/ ಶನಿ/ ಪಾಸ್ಖ ಕಾಲದ ಐದನೇ ವಾರ
1ನೇ ವಾಚನ ಪ್ರೇ.ಕಾ: 16: 1-1೦
1 : ಪೌಲನು ದೆರ್ಬೆಗೂ ಅಲ್ಲಿಂದ ಲುಸ್ತ್ರಕ್ಕೂ ಪ್ರಯಾಣಮಾಡಿದನು. ತಿಮೊಥೇಯ ಎಂಬ ಕ್ರೈಸ್ತಭಕ್ತನು ಅಲ್ಲಿ ವಾಸಿಸುತ್ತಿದ್ದನು. ಇವನ ತಾಯಿ ಯೆಹೂದ್ಯಳು ಹಾಗೂ ಕ್ರೈಸ್ತಭಕ್ತಳು. ತಂದೆಯಾದರೋ ಗ್ರೀಕನು.
2 : ಲುಸ್ತ್ರ ಮತ್ತು ಇಕೋನಿಯದ ಸಹೋದರರೆಲ್ಲರಿಗೆ ತಿಮೊಥೇಯನ ಬಗ್ಗೆ ಸದಭಿಪ್ರಾಯವಿತ್ತು.
3 : ಪೌಲನು ತಿಮೊಥೇಯನನ್ನು ತನ್ನೊಡನೆ ಕರೆದುಕೊಂಡು ಹೋಗಲು ಅಪೇಕ್ಷಿಸಿದನು. ಆ ಪ್ರದೇಶಗಳಲ್ಲಿದ್ದ ಯೆಹೂದ್ಯರಿಗೆ ತಿಮೊಥೇಯನ ತಂದೆ ಗ್ರೀಕನೆಂದು ತಿಳಿದಿದ್ದುದರಿಂದ ಅವನಿಗೆ ಸುನ್ನತಿ ಮಾಡಿಸಿದನು.
4 : ಊರಿಂದ ಊರಿಗೆ ಪ್ರಯಾಣ ಮಾಡುತ್ತಾ, ಜೆರುಸಲೇಮಿನಲ್ಲಿದ್ದ ಪ್ರೇಷಿತರೂ ಸಭಾಪ್ರಮುಖರೂ ನಿರ್ಧರಿಸಿದ ನಿಯಮಗಳನ್ನು ಭಕ್ತರಿಗೆ ಬೋದಿಸುತ್ತಾ, ಅವುಗಳನ್ನು ಪಾಲಿಸುವಂತೆ ಹೇಳಿದರು.
5 : ಹೀಗೆ ಕ್ರೈಸ್ತ ಸಭೆಗಳು ವಿಶ್ವಾಸದಲ್ಲಿ ದೃಢಗೊಂಡು ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯತೊಡಗಿತು.
6 : ಏಷ್ಯದಲ್ಲಿ ಅವರು ಶುಭಸಂದೇಶವನ್ನು ಸಾರಕೂಡದೆಂದು ಪವಿತ್ರಾತ್ಮ ನಿಷೇಧಿಸಿದ್ದರಿಂದ ಅವರು ಫ್ರಿಜಿಯ ಮತ್ತು ಗಲಾತ್ಯ ಪ್ರದೇಶಗಳ ಮಾರ್ಗವಾಗಿ ಪ್ರಯಾಣಮಾಡಿದರು.
7 : ಮೂಸಿಯದ ಗಡಿಯನ್ನು ತಲುಪಿದಾಗ ಅವರು ಬಿಥೂನಿಯ ಪ್ರಾಂತ್ಯಕ್ಕೆ ಹೋಗಲು ಯತ್ನಿಸಿದರು. ಯೇಸುವಿನ ಆತ್ಮ ಅಲ್ಲಿಗೆ ಹೋಗಲು ಸಹ ಅವರನ್ನು ಬಿಡಲಿಲ್ಲ.
8 ಆದುದರಿಂದ ಅವರು ಮೂಸಿಯವನ್ನು ಹಾದು ನೇರವಾಗಿ ತ್ರೋವಕ್ಕೆ ಹೋದರು.
9 : ಆ ರಾತ್ರಿ ಪೌಲನಿಗೆ ಒಂದು ದರ್ಶನವಾಯಿತು; ಮಕೆದೋನಿಯದ ಒಬ್ಬ ವ್ಯಕ್ತಿ ಅಲ್ಲಿ ನಿಂತು, “ಮಕೆದೋನಿಯಕ್ಕೆ ಬಂದು ನಮಗೆ ಸಹಾಯಮಾಡಿ,” ಎಂದು ಅಂಗಲಾಚಿದನು.
10 : ಪೌಲನಿಗೆ ಈ ದರ್ಶನವಾದ ತಕ್ಷಣ ಆ ಜನರಿಗೆ ಶುಭಸಂದೇಶವನ್ನು ಸಾರಲು ದೇವರು ನಮ್ಮನ್ನು ಕರೆದಿದ್ದಾರೆಂದು ನಾವು ಅರಿತುಕೊಂಡು ಮಕೆದೋನಿಯಕ್ಕೆ ಹೋಗಲು ಸಿದ್ಧರಾದೆವು.
ಕೀರ್ತನೆ - 1೦೦: 1-3, 5
ಭೂನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ /
1 : ಭೂನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ /
2 : ಅತಿ ಸಂತೋಷದಿಂದ ಸೇವೆ ಮಾಡಿ ಆತನಿಗೆ / ಹಾಡುತ, ಪಾಡುತ, ಬನ್ನಿ ಆತನ ಸನ್ನಿಧಿಗೆ //
3 : ಪ್ರಭುವೇ ದೇವರೆಂಬುದನು ಮರೆತುಬಿಡಬೇಡಿ ನೀವು / ನಮ್ಮ ಸೃಷ್ಟಿಕರ್ತ ಆತನು, ಆತನವರು ನಾವು / ಆತನ ಜನ, ಆತನೆ ಮೇಯಿಸುವ ಕುರಿಗಳು, ನಾವು //
5 : ಹೌದು, ಪ್ರಭುವೆನಿತೋ ಒಳ್ಳೆಯವನು / ಇರುವುದಾತನ ಪ್ರೀತಿ ಯುಗಯುಗಕು / ಆತನ ಸತ್ಯತೆ ತಲತಲಾಂತರಕು //
ಶುಭಸಂದೇಶ - ಯೊವಾನ್ನ: 15: 18-21
18 : “ಲೋಕವು ನಿಮ್ಮನ್ನು ದ್ವೇಷಿಸಿದರೆ, ನನ್ನ ಮೇಲೆ ಅದಕ್ಕೆ ಮೊದಲೇ ದ್ವೇಷವಿತ್ತೆಂಬುದನ್ನು ನೆನಪಿನಲ್ಲಿಡಿ.
19 : ನೀವು ಲೋಕದ ಕಡೆಯವರಾಗಿದ್ದರೆ ಲೋಕವು ನಿಮ್ಮನ್ನು ತನ್ನವರೆಂದು ಮಮತೆಯಿಂದ ಕಾಣುತ್ತಿತ್ತು. ನೀವಾದರೋ ಲೋಕದ ಕಡೆಗೆ ಸೇರಿದವರಲ್ಲ. ನಾನು ನಿಮ್ಮನ್ನು ಆರಿಸಿಕೊಂಡಿರುವುದರಿಂದ ನೀವು ಲೋಕದಿಂದ ಬೇರ್ಪಟ್ಟಿದ್ದೀರಿ. ಎಂದೇ ಲೋಕಕ್ಕೆ ನಿಮ್ಮ ಮೇಲೆ ದ್ವೇಷವಿದೆ.
20 : ಧಣಿಗಿಂತಲೂ ದಾಸನು ದೊಡ್ಡವನಲ್ಲವೆಂದು ನಾನು ನಿಮಗೆ ಹೇಳಿದ್ದನ್ನು ನೆನಪಿಗೆ ತಂದುಕೊಳ್ಳಿ. ಅವರು ನನ್ನನ್ನು ಹಿಂಸೆಗೆ ಗುರಿಮಾಡಿದಂತೆ ನಿಮ್ಮನ್ನೂ ಹಿಂಸೆಗೆ ಗುರಿಮಾಡುವರು. ನನ್ನ ಬೋಧನೆಯ ಮಾತನ್ನು ಅವರು ಅನುಸರಿಸಿ ನಡೆದರೆ ನಿಮ್ಮ ಬೋಧನೆಯ ಮಾತನ್ನು ಅನುಸರಿಸಿ ನಡೆಯುವರು.
21 : ನೀವು ನನ್ನವರಾದುದರಿಂದ ಅವರು ನಿಮ್ಮನ್ನು ಹೀಗೆ ಕಾಣುವರು. ಏಕೆಂದರೆ ನನ್ನನ್ನು ಕಳುಹಿಸಿದಾತನನ್ನು ಅವರು ಅರಿಯರು.
ಚಿಂತನೆ
ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ ಎಂಬ ಗಾದೆ ಮಾತಿದೆ. ಕ್ರೈಸ್ತರಾದ ನಮ್ಮೆಲ್ಲರ ಕರೆ ಪ್ರಸ್ತುತ ಪ್ರಪಂಚದ ಜೊತೆ ಸಾಗುವುದಲ್ಲ, ಬದಲಾಗಿ ಪ್ರಸ್ತುತ ಪ್ರಪಂಚದ ವಿರುದ್ಧ ನಡೆಯುವುದಾಗಿದೆ. ಕಾರಣ ನಮ್ಮ ವಾಸ ಈ ಪ್ರಪಂಚದಲ್ಲಿ ಇಲ್ಲ, ಬದಲಾಗಿ ಸ್ವರ್ಗಲೋಕದಲ್ಲಿದೆ. ಅದಕ್ಕಾಗಿ ಲೋಕದ ಚಿಂತೆ ನಮಗೆ ಬೇಡ ಈಗ ಲೋಕದಲ್ಲಿ ಸಿಗುವ ಸನ್ಮಾನ, ಗೌರವ, ಪ್ರತಿಷ್ಠೆ ಅಪೇಕ್ಷಿಸುವುದು ಬೇಡ ಎಂದು ತಿಳಿಸುತ್ತಾರೆ. ಕಾರಣ ದೇವರ ಪುತ್ರ ಕ್ರಿಸ್ತನನ್ನು ಅವರು ದ್ವೇಷಿಸಿದರು. ಇನ್ನು ಹಿಂಬಾಲಕರಾದ ನಮ್ಮನ್ನು ಬಿಡುತ್ತಾರೆಯೇ? ಇದಕ್ಕೆ ಶಿಷ್ಯರನ್ನು ಸ್ವರ್ಗಲೋಕದ ಸಾಮ್ರಾಜ್ಯಕ್ಕೆ ಅರ್ಹರನ್ನಾಗಿ ಮಾಡಲು ಸ್ವಾಮಿ ಕಟುವಾಗಿ ಅವರಿಗೆ ತರಬೇತಿ ನೀಡುತ್ತಿದ್ದಾರೆ. ಇದೊಂದು ರೀತಿ ಮಿಲಿಟರಿ ಸೈನ್ಯದ ತರಬೇತಿಯಂತೆ ಕಾಣುತ್ತದೆ. ಈ ಹಿಂಸೆಯಲ್ಲೂ ಒಂದು ಸಾಂತ್ವನವಿದೆ. ಈ ಆತಂಕದಲ್ಲೂ ಒಂದು ಶಾಂತಿ ಇದೆ. ಅದು ಏನು ಎಂದರೆ ನಾವು ಪ್ರಭುವಿಗೆ ಸಾಕ್ಷಿ ನೀಡುವವರಾಗುತ್ತೇವೆ ಮತ್ತು ಸ್ವರ್ಗಕ್ಕೆ ಬಾಧ್ಯಸ್ಥರಾಗುತ್ತೇವೆ. ಇಂತಹ ಭಾಗ್ಯ ನಮಗೆ ಲಭ್ಯವಾಗಲಿ ಮತ್ತು ಇನ್ನೊಬ್ಬರ ದ್ವೇಷಕ್ಕೆ ಕೋಪಕ್ಕೆ ನಾವು ತಲೆ ಕೆಡಿಸಿಕೊಳ್ಳದೆ ಸಾಂತ್ವನಕ್ಕೆ ನಾವು ಅಪೇಕ್ಷಿಸೋಣ. ಈ ಮಾತನ್ನು ಜ್ಯಾರಿಗೆ ತರಲು ದೇವರಿಗೆ ಬಿಡದ ಈ ಜನ ಇನ್ನು ನಮ್ಮನ್ನು ಬಿಡುತ್ತಾರೆಯೇ?
ಆತ್ಮಾವಲೋಕನ
1. ಬೇರೆಯವರ ದ್ವೇಷ ನನ್ನ ಮೇಲೆ ಪರಿಣಾಮ ಬೀರುತ್ತದೆಯೇ?
2. ಸಾಕ್ಷಿ ನೀಡಿ ಸ್ವರ್ಗಕ್ಕೆ ಹೋಗಲು ನನ್ನಿಂದ ಸಾಧ್ಯವೇ?
ಸಹೋ ವಿನಯ್ ಕುಮಾರ್
No comments:
Post a Comment