Sunday, 9 June 2019

10 ಜೂನ್ 2೦19


ಪಾಸ್ಖ ಕಾಲದ ನಂತರದ ಸಾಧಾರಣ ಕಾಲ ಇಂದಿನಿಂದ ಆರಂಭವಾಗುತ್ತದೆ.     
 ಬಿಳಿ /ಸೋಮ/ಧರ್ಮಸಭೆಯ ತಾಯಿ ಮಾತೆಮೇರಿಯ (ಸ್ಮರಣೆ)                
1ನೇ  ವಾಚನ  -  1ನೇ  ಕೊರಿಂಥ  1:  1-7
ಕೀರ್ತನೆ  34:  1-2,  3-4,  5-6,  7-8    
ಶುಭಸಂದೇಶ :  ಮತ್ತಾಯ  5:  1-12     

1ನೇ
  ವಾಚನ  -  1ನೇ  ಕೊರಿಂಥ  1:  1-7


1 : ಕೊರಿಂಥದಲ್ಲಿರುವ ದೇವರ ಸಭೆಗೂ ಅಖಾಯ ಸೀಮೆಯಲ್ಲಿರುವ ಎಲ್ಲಾ ದೇವಜನರಿಗೂ - ದೇವರ ಚಿತ್ತಾನುಸಾರ ಕ್ರಿಸ್ತಯೇಸುವಿನ ಪ್ರೇಷಿತನಾದ ಪೌಲನು ಸಹೋದರ ತಿಮೊಥೇಯನೊಡನೆ ಸೇರಿ ಬರೆಯುವ ಪತ್ರ.
2 : ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸುಕ್ರಿಸ್ತರಿಂದಲೂ ನಿಮಗೆ ಆಶೀರ್ವಾದವೂ ಶಾಂತಿಸಮಾಧಾನವೂ ಲಭಿಸಲಿ!
3 : ನಮ್ಮ ಪ್ರಭು ಯೇಸುಕ್ರಿಸ್ತರ ತಂದೆಯಾದ ದೇವರಿಗೆ ಸ್ತೋತ್ರವಾಗಲಿ. ಅವರು ಕರುಣಾಭರಿತ ತಂದೆ; ಸಕಲ ಸಾಂತ್ವನವನ್ನೀಯುವ ದೇವರು.
4 : ನಮಗೆ ಒದಗುವ ಎಲ್ಲಾ ಸಂಕಷ್ಟಗಳಲ್ಲಿ ಅವರು ನಮ್ಮನ್ನು ಸಂತೈಸುತ್ತಾರೆ. ಹೀಗೆ ದೇವರಿಂದ ದೊರೆತ ಆದರಣೆಯಿಂದ ವಿವಿಧ ಸಂಕಷ್ಟಗಳಲ್ಲಿ ನರಳುತ್ತಿರುವವರನ್ನು ಸಂತೈಸುವುದಕ್ಕೆ ನಾವು ಶಕ್ತರಾಗುತ್ತೇವೆ.
5 : ಕ್ರಿಸ್ತಯೇಸುವಿನ ಯಾತನೆಯು ನಮ್ಮ ಬಾಳಿನಲ್ಲಿ ತುಂಬಿರುವಂತೆ ಅವರ ಮುಖಾಂತರ ಲಭಿಸುವ ಸಾಂತ್ವನವೂ ನಮ್ಮಲ್ಲಿ ತುಂಬಿರುತ್ತದೆ.
6 : ನಾವು ಕಷ್ಟಸಂಕಟಗಳನ್ನು ಸಹಿಸಬೇಕಾಗುವುದು ಸಹ ನಿಮ್ಮ ಉಪಶಮನ ಹಾಗೂ ಸಾಂತ್ವನಕ್ಕಾಗಿಯೇ ನಮ್ಮ ಕಷ್ಟಸಂಕಟಗಳು ನಿವಾರಣೆಯಾದರೆ ಅದೂ ನಿಮ್ಮ ಆದರಣೆಗಾಗಿಯೇ. ನಾವು ಪಡುವ ಯಾತನೆಯನ್ನು ನೀವು ಸಹನೆಯಿಂದ ಅನುಭವಿಸುವಂತೆ ಅದು ಹುರಿದುಂಬಿಸುತ್ತದೆ.
7 : ನಿಮ್ಮಲ್ಲಿ ನಮಗೆ ಅಚಲವಾದ ಭರವಸೆಯಿದೆ. ಏಕೆಂದರೆ, ನಮ್ಮ ಯಾತನೆಗಳಲ್ಲಿ ನೀವು ಪಾಲುಗೊಳ್ಳುವಂತೆ ನಾವು ಪಡೆಯುವ ಸಾಂತ್ವನದಲ್ಲಿಯೂ ನೀವು ಸಹಭಾಗಿಗಳಾಗಿದ್ದೀರಿ, ಎಂಬುದು ನಮಗೆ ಗೊತ್ತಿದೆ.
ಕೀರ್ತನೆ  34:  1-2,  3-4,  5-6,  7-8 
ಸವಿದು ನೋಡು ಪ್ರಭುವಿನ ಮಾಧುರ್ಯವನು
1 : ಪ್ರಭುವನು ನಾ ಕೊಂಡಾಡುವೆ ಎಲ್ಲ ಕಾಲದೊಳು / ಆತನ ಸ್ತುತಿ ಸದಾ ಇಹುದು ನನ್ನ ಬಾಯೊಳು //
2 : ಪ್ರಭುವಿನಲ್ಲಿದೆ ನನ್ನ ಮನದಭಿಮಾನ / ದೀನರಿದನು ಕೇಳಿ, ಪಡೆಯಲಿ ಸುಮ್ಮಾನ //
3 : ಬನ್ನಿ, ಕೊಂಡಾಡುವ ಪ್ರಭು ದೇವನನು / ಘನಪಡಿಸೋಣ ಅವನ ಶ್ರೀನಾಮವನು //
4 : ಬೇಡಿಕೊಳ್ಳಲು ಕೊಟ್ಟನಾತ ಸದುತ್ತರವನು / ಭಯಭೀತಿಯಿಂದೆನ್ನನು ಮುಕ್ತ ನಾಗಿಸಿಹನು //
5 : ಆತನತ್ತ ತಿರುಗಿದ ಮುಖ ಅರಳುವುದು / ಲಜ್ಜೆಯಿಂದೆಂದಿಗು ಕುಂದಿಹೋಗದು //
6 : ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು / ಸರ್ವಾಪತ್ತಿನಿಂದವನು ಮುಕ್ತಗೊಂಡನು //
7 : ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು / ಕಾಯುವನು ಪ್ರಭುವಿನ ದೂತನೆ ಬಂದಿಳಿದು //
8 : ಸವಿದು ನೋಡು ಪ್ರಭುವಿನ ಮಾಧುರ್ಯವನು / ಆತನನು ಆಶ್ರಯಿಸಿಕೊಂಡವನು ಧನ್ಯನು //

9 : ದೇವಜನರೆ, ನಿಮಗಿರಲಿ ಪ್ರಭುವಿನ ಭಯಭಕುತಿ / ಅಂಥವರಿಗಿರದು ಯಾವ ಕುಂದುಕೊರತೆಯ ಭೀತಿ //

ಶುಭಸಂದೇಶ :  ಮತ್ತಾಯ  5:  1-12  
1 : ಜನರ ದೊಡ್ಡ ಗುಂಪನ್ನು ಕಂಡು ಯೇಸುಸ್ವಾಮಿ ಒಂದು ಬೆಟ್ಟವನ್ನು ಹತ್ತಿ ಕುಳಿತುಕೊಂಡರು. ಅವರ ಶಿಷ್ಯರು ಸುತ್ತಲೂ ನೆರೆದರು.
2 : ಆಗ ಯೇಸು ಇಂತೆಂದು ಪ್ರಬೋಧಿಸಿದರು :
3 : "ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು; ಸ್ವರ್ಗಸಾಮ್ರಾಜ್ಯ ಅವರದು.
4 : ದುಃಖಿಗಳು ಭಾಗ್ಯವಂತರು; ದೇವರು ಅವರನ್ನು ಸಂತೈಸುವರು.
5 : ವಿನಯಶೀಲರು ಭಾಗ್ಯವಂತರು; ದೇವರ ವಾಗ್ದತ್ತ ನಾಡಿಗೆ ಬಾಧ್ಯಸ್ಥರು ಅವರು.
6 : ನ್ಯಾಯನೀತಿಗಾಗಿ ಹಸಿದು ಹಾತೊರೆಯು ವವರು ಭಾಗ್ಯವಂತರು; ದೇವರು ಅವರಿಗೆ ತೃಪ್ತಿಯನ್ನೀಯುವರು.
7 : ದಯಾವಂತರು ಭಾಗ್ಯವಂತರು; ದೇವರ ದಯೆ ಅವರಿಗೆ ದೊರಕುವುದು.
8 : ನಿರ್ಮಲ ಹೃದಯಿಗಳು ಭಾಗ್ಯವಂತರು; ಅವರು ದೇವರನ್ನು ಕಾಣುವರು.
9 : ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು; ಅವರು ದೇವರ ಮಕ್ಕಳೆನಿಸಿಕೊಳ್ಳುವರು.
10 : ನ್ಯಾಯನೀತಿಯ ನಿಮಿತ್ತ ಹಿಂಸೆಯನ್ನು ತಾಳುವವರು ಭಾಗ್ಯವಂತರು; ಸ್ವರ್ಗಸಾಮ್ರಾಜ್ಯ ಅವರದು."
11 : "ನನ್ನ ಶಿಷ್ಯರು ನೀವಾದ್ದರಿಂದ ಜನರು ನಿಮ್ಮನ್ನು ಧಿಕ್ಕರಿಸುವರು, ಹಿಂಸಿಸುವರು, ಅನ್ಯಾಯವಾಗಿ ಇಲ್ಲಸಲ್ಲದ್ದನ್ನು ನಿಮ್ಮ ಮೇಲೆ ಹೊರಿಸುವರು; ಆಗ ನೀವು ಭಾಗ್ಯವಂತರು.
12 : ಅದಕ್ಕಾಗಿ ಹರ್ಷಿಸಿ ಆನಂದಪಡಿ; ಏಕೆಂದರೆ ಸ್ವರ್ಗದಲ್ಲಿ ನಿಮಗೆ ಸಿಗುವ ಪ್ರತಿಫಲ ಹಿರಿದು. ನಿಮಗಿಂತ ಮೊದಲಿದ್ದ ಪ್ರವಾದಿಗಳನ್ನೂ ಜನರು ಹೀಗೆಯೇ ಚಿತ್ರಹಿಂಸೆಗೆ ಒಳಪಡಿಸಿದರು."

ಚಿಂತನೆ
ನಮ್ಮ ಪ್ರಭು ದೇವರು ನಮ್ಮನ್ನು ನಿರಂತರವೂ ಸಂತೈಸುವ ದೇವರು. ಇದು ಸಂತ ಪೌಲನ ದೃಢ ವಿಶ್ವಾಸ ಹಾಗೂ ಅನುಭವವೂ ಆಗಿತ್ತು. ಸಂದೇಶವನ್ನು ಅಂದು ಪೌಲನು ಕೊರಿಂಥಿಯರಿಗೆ ತಿಳಿಸಿ ನಮಗೆ ಒದಗುವ ಎಲ್ಲಾ ಸಂಕಷ್ಟಗಳಲ್ಲಿ ದೇವರು ನಮ್ಮನ್ನು ಸಂತೈಸುತ್ತಾರೆ ಎನ್ನತ್ತಾನೆ. ನಮ್ಮ ಕಷ್ಟ-ನಷ್ಟಗಳಲ್ಲಿ ದೇವರು ನಮ್ಮೊಡನೆ ಇರುತ್ತಾರೆ. ಸತ್ಯವನ್ನು ಇಂದಿನ ಶುಭಸಂದೇಶದಲ್ಲಿ ಪ್ರಭು ಯೇಸು ದೃಢಪಡಿಸುತ್ತಾರೆ. ಜೀವನದಲ್ಲಿ ನ್ಯಾಯ ನೀತಿಗಾಗಿ ಹೋರಾಡುವಾಗ, ಶಾಂತಿಗಾಗಿ ಶ್ರಮಿಸಿದಾಗ ಹಿಂಸೆ, ದಿಕ್ಕಾರ, ನೋವು, ಸಂಕಟಗಳು ತಲೆದೋರಿದಾಗ ಧೃತಿಗೆಡದೆ ನಮ್ಮೊಂದಿಗೆ ಸಂತೈಸಲು ದೇವರಿದ್ದಾರೆ ಎಂದು ವಿಶ್ವಾಸಿಸುತ್ತಾ ಮುನ್ನೆಡೆದರೆ ಸ್ವರ್ಗದ ದ್ವಾರ ತೆರೆದುಕೊಳ್ಳುತ್ತದೆ. ಆಗ ಆತ್ಮಾನಂದ ಉಂಟಾಗಿ ಮಾನವರು ಪರಿಪೂರ್ಣತೆಯನ್ನು ಹೊಂದಲು ಸಾಧ್ಯ

No comments:

Post a Comment