ಕೆಂಪು/ ಭಾನು / ಪಂಚದಶಮಿ ಭಾನುವಾರ (ಮಹೋತ್ಸವ)
1ನೇ ವಾಚನ - ಪ್ರೇ.ಕಾ: 2: 1-11
ಕೀರ್ತನೆ - 1೦4: 1, 24,
29-31, 34
2ನೇ ವಾಚನ - ರೋಮ 8: 8-17 23-26
ಶುಭಸಂದೇಶ - ಯೊವಾನ್ನ 20:19-23
ಸಂತ ಎಫ್ರೆಮ ಸ್ಮರಣೆ ಇರುವುದಿಲ್ಲ.1ನೇ ವಾಚನ - ಪ್ರೇ.ಕಾ: 2: 1-11
1 : ಪಂಚಾಶತ್ತಮ ಹಬ್ಬದ ದಿನ ಭಕ್ತವಿಶ್ವಾಸಿಗಳೆಲ್ಲರೂ ಒಂದು ಸ್ಥಳದಲ್ಲಿ ಸಭೆಸೇರಿದ್ದರು.
2 : ಫಕ್ಕನೆ ಬಲವಾದ ಬಿರುಗಾಳಿ ಬೀಸುತ್ತಿದೆಯೋ ಎಂಬಂತೆ ಶಬ್ದವೊಂದು ಆಕಾಶದಿಂದ ಕೇಳಿ ಬಂತು. ಅದು ಅವರು ಕುಳಿತಿದ್ದ ಮನೆಯಲ್ಲೆಲ್ಲಾ ಮಾರ್ದನಿಸಿತು.
3 : ಅಲ್ಲದೆ ಅಗ್ನಿಜ್ವಾಲೆಗಳು ಕೆನ್ನಾಲಿಗೆಯಂತೆ ಕಾಣಿಸಿಕೊಂಡವು. ಅವು ವಿಂಗಡ ವಿಂಗಡವಾಗಿ ಪ್ರತಿಯೊಬ್ಬರ ಮೇಲೂ ನೆಲೆಸಿದವು.
4 : ಅವರೆಲ್ಲರೂ ಪವಿತ್ರಾತ್ಮಭರಿತರಾದರು. ಆ ಆತ್ಮ ಪ್ರೇರಣೆಯಿಂದ ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡತೊಡಗಿದರು.
5 : ಅದೇ ಸಮಯದಲ್ಲಿ ವಿಶ್ವದ ಎಲ್ಲಾ ದೇಶಗಳಿಂದ ಧರ್ಮನಿಷ್ಠ ಯೆಹೂದ್ಯರು ಜೆರುಸಲೇಮಿಗೆ ಬಂದು ತಂಗಿದರು.
6 : ಆ ಶಬ್ದವನ್ನು ಕೇಳಿದ್ದೇ, ಜನರ ದೊಡ್ಡ ಗುಂಪು ಸೇರಿತು. ಭಕ್ತಾದಿಗಳು ಮಾತನಾಡುತ್ತಿದ್ದುದನ್ನು ತಮ್ಮ ತಮ್ಮ ಭಾಷೆಗಳಲ್ಲೇ ಕೇಳಿದ ಜನರು ದಿಗ್ಭ್ರಮೆಗೊಂಡರು.
7 : ಅವರೆಲ್ಲರೂ ವಿಸ್ಮಿತರಾಗಿ, “ಹೀಗೆ ಮಾತನಾಡುವ ಇವರೆಲ್ಲಾ ಗಲಿಲೇಯದವರಲ್ಲವೇ?
8 : ನಮ್ಮಲ್ಲಿ ಪ್ರತಿಯೊಬ್ಬನೂ ಇವರು ಮಾತನಾಡುತ್ತಿರುವುದನ್ನು ತನ್ನ ತನ್ನ ಮಾತೃಭಾಷೆಯಲ್ಲೇ ಕೇಳುತ್ತಿರುವುದು ಹೇಗೆ?
9 : ನಮ್ಮಲ್ಲಿ ಪಾರ್ಥಿಯರು, ವಿೂಡಿಯರು ಮತ್ತು ಎಲಾಮಿನವರೂ, ಮೆಸಪೊಟೇಮಿಯ, ಜುದೇಯ ಮತ್ತು ಕಪ್ಪದೋಸಿಯದವರೂ ಇದ್ದಾರೆ. ಪೊಂತ ಮತ್ತು ಏಷ್ಯದವರೂ,
10 : ಫ್ರಿಜಿಯ ಮತ್ತು ಪಾಂಫಿಲಿಯದವರೂ ಇದ್ದಾರೆ. ಈಜಿಪ್ಟ್ ಮತ್ತು ಸಿರೇನಿನ ಬಳಿಯಲ್ಲಿರುವ ಲಿಬಿಯ ಪ್ರಾಂತ್ಯದವರೂ ಸೇರಿದ್ದಾರೆ. ಅದಲ್ಲದೆ ನಮ್ಮಲ್ಲಿ ಕೆಲವರು ರೋಮ್‍ನಿಂದ ಬಂದಿದ್ದಾರೆ.
11 : ಯೆಹೂದ್ಯರೂ ಯೆಹೂದ್ಯ ಧರ್ಮಾವಲಂಬಿಗಳೂ ಆದ ಅನ್ಯರೂ, ಕ್ರೇಟ ಮತ್ತು ಅರೇಬಿಯದವರೂ ಇಲ್ಲಿದ್ದಾರೆ. ದೇವರ ಮಹತ್ಕಾರ್ಯಗಳನ್ನು ಕುರಿತು ಇವರು ಮಾತನಾಡುತ್ತಿರುವುದನ್ನು ನಾವೆಲ್ಲರೂ ನಮ್ಮ ನಮ್ಮ ಭಾಷೆಗಳಲ್ಲೇ ಕೇಳುತ್ತಿದ್ದೇವಲ್ಲಾ!” ಎಂದು ಅಚ್ಚರಿಯನ್ನು ವ್ಯಕ್ತಪಡಿಸಿದರು.
ಕೀರ್ತನೆ - 1೦4: 1, 24, 29-31, 34
ನೀ ಉಸಿರನ್ನೂದಲು ಹೊಸದಾಗುವುವು / ಪುನಶ್ಚೇತನಗೊಳ್ಳುವುದು ಜಗವೆಲ್ಲವು
1 : ಭಜಿಸು ನನ್ನ ಮನವೇ, ಭಜಿಸು, ಪ್ರಭುವನು / ಪ್ರಭು, ನನ್ನ ದೇವಾ, ನೀ ಸರ್ವೋತ್ತಮನು / ಮಹಿಮೆ ಪ್ರತಾಪಗಳಿಂದ ಭೂಷಿತನು //
24 : ಸೃಜಿಸಿರುವೆ ಎಲ್ಲವನು ಸುಜ್ಞಾನದಿಂದ / ಜಗವೆಲ್ಲ ತುಂಬಿದೆ ನಿನ್ನ ಸೃಷ್ಟಿಯಿಂದ //
30 : ನೀ ಉಸಿರನ್ನೂದಲು ಹೊಸದಾಗುವುವು / ಪುನಶ್ಚೇತನಗೊಳ್ಳುವುದು ಜಗವೆಲ್ಲವು //
31 : ಸ್ವಾಮಿದೇವನ ಮಹಿಮೆಯಿರಲಿ ಶಾಶ್ವತ ವಾಗಿ / ಆತ ಸಂತೋಷಿಸಲಿ ತನ್ನ ಸುಕೃತ್ಯಗಳಿಗಾಗಿ //
32 : ನಡುಗುತ್ತದೆ ಭೂಮಂಡಲ ಆತನ ಕೃತ್ಯಕೆ / ಹೊಗೆಕಾರುತ್ತದೆ ಪರ್ವತ ಆತನ ಸ್ಪರ್ಶಕೆ //
33 : ಪ್ರಭುವನು ನಾ ಹೊಗಳಿ ಹಾಡುವೆನು ಬಾಳಿನೊಳೆಲ್ಲ / ನನ್ನ ದೇವನನು ಭಜಿಸುವೆನು ನಾ ಜೀವಮಾನವೆಲ್ಲ //
34 : ಆತನಿಗೊಲಿಯಲಿ ನನ್ನ ಧ್ಯಾನ / ಆತನಲೇ ಹರ್ಷಿಸಲಿ ನನ್ನ ಮನ //
2ನೇ ವಾಚನ - ರೋಮ 8: 8-17 23-26
3 : ಇಷ್ಟು ಮಾತ್ರ ನಿಮಗೆ ಸ್ಪಷ್ಟವಾಗಿ ತಿಳಿದಿರಲಿ; ಪವಿತ್ರಾತ್ಮ ಪ್ರೇರಣೆಯಿಂದ ಮಾತನಾಡುವ ಯಾವಾತನೂ, “ಯೇಸುವಿಗೆ ಧಿಕ್ಕಾರ!” ಎನ್ನಲಾರನು. ಅಂತೆಯೇ, ಪವಿತ್ರಾತ್ಮ ಪ್ರೇರಣೆಯಿಂದಲ್ಲದೆ ಯಾವಾತನೂ, “ಯೇಸುವೇ ಪ್ರಭು,” ಎಂದು ಒಪ್ಪಿಕೊಳ್ಳಲಾರನು.
4 : ವರದಾನಗಳು ವಿಧವಿಧವಾಗಿವೆ; ಅವುಗಳನ್ನು ಕೊಡುವ ಪವಿತ್ರಾತ್ಮ ಒಬ್ಬರೇ.
5 : ಸೇವೆಗಳು ವಿಧವಿಧವಾಗಿವೆ; ಅವುಗಳನ್ನು ಸ್ವೀಕರಿಸುವ ಪ್ರಭುವು ಒಬ್ಬರೇ.
6 : ಶಕ್ತಿಸಾಮಥ್ರ್ಯವು ನಾನಾ ವಿಧ; ಅವುಗಳನ್ನು ಎಲ್ಲರಲ್ಲೂ ಸಾಧಿಸುವ ದೇವರು ಒಬ್ಬರೇ.
7 : ಪ್ರತಿಯೊಬ್ಬನಲ್ಲಿ ಕಂಡು ಬರುವ ಪವಿತ್ರಾತ್ಮರ ವರದಾನಗಳನ್ನು ಸರ್ವರ ಒಳಿತಿಗಾಗಿಯೇ ಕೊಡಲಾಗಿದೆ.
8 : ಪವಿತ್ರಾತ್ಮ ಮುಖಾಂತರ ಒಬ್ಬನಿಗೆ ಜ್ಞಾನೋಕ್ತಿಗಳು, ಇನ್ನೊಬ್ಬನಿಗೆ ಅವರ ಮುಖಾಂತರವೇ ವಿದ್ಯೋಕ್ತಿಗಳು ಲಭಿಸುತ್ತವೆ;
9 : ಅದೇ ಪವಿತ್ರಾತ್ಮರಿಂದ ಒಬ್ಬನಿಗೆ ಅಗಾಧ ವಿಶ್ವಾಸವೂ ಇನ್ನೊಬ್ಬನಿಗೆ ಸ್ವಸ್ಥತೆಯನ್ನೀಯುವ ಶಕ್ತಿಯೂ ದೊರಕುತ್ತದೆ.
10 : ಒಬ್ಬನಿಗೆ ಪವಾಡಗಳನ್ನು ಎಸಗುವ ಪರಾಕ್ರಮವನ್ನು, ಇನ್ನೊಬ್ಬನಿಗೆ ಪ್ರವಾದನೆ ಮಾಡುವ ಪ್ರತಿಭೆಯನ್ನು, ಮತ್ತೊಬ್ಬನಿಗೆ ಸತ್ಯಾಸತ್ಯವನ್ನು ವಿವೇಚಿಸುವ ಜಾಣ್ಮೆಯನ್ನು, ಮಗದೊಬ್ಬನಿಗೆ ವಿವಿಧ ಭಾಷೆಗಳನ್ನಾಡುವ ಸಾಮಥ್ರ್ಯವನ್ನು, ಮತ್ತೂ ಒಬ್ಬನಿಗೆ ಅವುಗಳನ್ನು ಅರ್ಥೈಸುವ ಅರಿವನ್ನು ಆ ಪವಿತ್ರಾತ್ಮರಿಂದಲೇ ಕೊಡಲಾಗುತ್ತದೆ.
11 : ಈ ವರಗಳನ್ನೆಲ್ಲ ಆ ಪವಿತ್ರಾತ್ಮ ಒಬ್ಬರೇ ತಮ್ಮ ಇಷ್ಟಾನುಸಾರ ಪ್ರತಿಯೊಬ್ಬನಿಗೂ ಹಂಚುತ್ತಾರೆ.
12 : ದೇಹ ಒಂದೇ; ಅಂಗಗಳು ಹಲವು. ಆ ಅಂಗಗಳು ಅನೇಕವಿದ್ದರೂ ಅವು ಸೇರಿ ಒಂದೇ ದೇಹವಾಗುತ್ತದೆ. ಅಂತೆಯೇ ಕ್ರಿಸ್ತಯೇಸು.
13 : ಯೆಹೂದ್ಯರಾಗಿರಲಿ, ಗ್ರೀಕರಾಗಿರಲಿ, ಪರತಂತ್ರರಾಗಿರಲಿ, ಸ್ವತಂತ್ರರಾಗಿರಲಿ - ನಾವೆಲ್ಲರೂ ಒಂದೇ ದೇಹವಾಗುವಂತೆ ಒಂದೇ ಆತ್ಮದಿಂದ ದೀಕ್ಷಾಸ್ನಾನ ಹೊಂದಿದ್ದೇವೆ. ಒಂದೇ ಆತ್ಮವನ್ನು ನಮ್ಮೆಲ್ಲರಿಗೂ ಪಾನವಾಗಿ ಕೊಡಲಾಗಿದೆ.
ಶುಭಸಂದೇಶ - ಯೊವಾನ್ನ 20:19-23
19 : ಅದೇ ಭಾನುವಾರ ಸಂಜೆ ಶಿಷ್ಯರು ಒಂದು ಮನೆಯಲ್ಲಿ ಕೂಡಿದ್ದರು. ಯೆಹೂದ್ಯರಿಗೆ ಅಂಜಿ ಮನೆಯ ಬಾಗಿಲುಗಳನ್ನು ಮುಚ್ಚಿಕೊಂಡು ಒಳಗೇ ಇದ್ದರು. ಆಗ ಯೇಸು ಬಂದು ಅವರ ನಡುವೆ ನಿಂತರು.
20 : “ನಿಮಗೆ ಶಾಂತಿ” ಎಂದು ಹೇಳಿ ತಮ್ಮ ಕೈಗಳನ್ನು ಮತ್ತು ಪಕ್ಕೆಗಳನ್ನು ತೋರಿಸಿದರು. ಪ್ರಭುವನ್ನು ಕಂಡು ಶಿಷ್ಯರಿಗೆ ಮಹದಾನಂದವಾಯಿತು.
21 : ಯೇಸು ಪುನಃ, “ನಿಮಗೆ ಶಾಂತಿ, ಪಿತನು ನನ್ನನ್ನು ಕಳುಹಿಸಿದಂತೆಯೇ ನಾನೂ ನಿಮ್ಮನ್ನು ಕಳುಹಿಸುತ್ತೇನೆ,” ಎಂದರು.
22 : ಅನಂತರ ಅವರ ಮೇಲೆ ಉಸಿರೂದಿ, “ಪವಿತ್ರಾತ್ಮರನ್ನು ಸ್ವೀಕರಿಸಿರಿ.
23 : ಯಾರ ಪಾಪಗಳನ್ನು ನೀವು ಕ್ಷಮಿಸುತ್ತೀರೋ, ಅವರಿಗೆ ಅವನ್ನು ಕ್ಷಮಿಸಲಾಗುವುದು; ಯಾರ ಪಾಪಗಳನ್ನು ನೀವು ಕ್ಷಮಿಸದೆ ಉಳಿಸುತ್ತೀರೋ, ಅವರಿಗೆ ಕ್ಷಮಿಸದೆ ಉಳಿಸಲಾಗುವುದು,” ಎಂದು ನುಡಿದರು.
ಚಿಂತನೆ
ಪವಿತ್ರ ಆತ್ಮರೇ ಬನ್ನಿ
ನಾವೆಲ್ಲರು ಒಗ್ಗಟ್ಟಿನಿಂದ ಒಂದೆಡೆ ಸೇರಿದಾಗ ದೇವರ ಪರಮ ತ್ರಿತ್ವದ ಮೂರನೇ ವ್ಯಕ್ತಿಯಾದ ಪವಿತ್ರಾತ್ಮರು ನಮೊಂದಿಗೆ ನೆಲೆಸುತ್ತಾರೆ. ವಿಭಜನೆ, ಭಿನ್ನಾಭಿಪ್ರಾಯ, ದ್ವೇಷ, ಸ್ವಾರ್ಥ ತುಂಬಿಕೊಂಡು ನಡೆಸುವಂತಹ ಜೀವನ ಒಗ್ಗಟ್ಟಿನ ಜೀವನ ಎನಿಸಲಾರದು. ಪ್ರೀತಿಯಿಂದ ಅಸಂಖ್ಯಾತ ಕ್ರೈಸ್ತರು ಒಟ್ಟಾಗಿ ಸೇರಿ ಕ್ರಿಸ್ತರ ಪುನರುತ್ಥಾನದ ಮಹಿಮೆಯನ್ನು ಹೊಗಳುವುದೇ, ಹಾಡುವುದೇ ಪಂಚಾಶತ್ತಮ.
ಪ್ರಭುಕ್ರಿಸ್ತರು ಸರ್ವ ಜನರನ್ನು ಪಾಪದಿಂದ ವಿಮುಕ್ತಗೊಳಿಸಲು ಈ ಧರೆಗೆ ನಮ್ಮಲ್ಲಿ ಒಬ್ಬರಂತೆ ಬಂದರು. ಅವರು ಮಾಡಿದ ಎಲ್ಲಾ ದೈವಿಕ ಕಾರ್ಯಗಳನ್ನು ನಾವು ಗಣನೆಗೆ ತಂದುಕೊಳ್ಳದೆ, ಅವರನ್ನು ಶಿಲುಬೆಗೇರಿಸಿದೆವು. ಆದರೆ ಅವರು ಪುನರುತ್ಥಾನರಾಗಿ ತಾವೇ ದೇವಪುತ್ರರೆಂದು ನಿರೂಪಿಸಿದರು. ಅವರು ಪರಲೋಕಕ್ಕೆ ಏರಿ ಹೋದಾಗ ನಮ್ಮನ್ನು ಹಾಗೆ ಬಿಟ್ಟು ಹೋಗಲಿಲ್ಲ. ಬದಲಾಗಿ ತಮ್ಮ ಆತ್ಮರನ್ನು ಕಳುಹಿಸುವುದಾಗಿ ವಚನವಿತ್ತರು. ಇಂದು ಪವಿತ್ರಾತ್ಮರ ಆಗಮನದ ಹಬ್ಬವನ್ನು ಕೊಂಡಾಡುತ್ತಿರುವಾಗ ನಾವೆಲ್ಲರು ಅವರ ಅತ್ಯುತ್ತಮ ವರಗಳಿಗಾಗಿ ಪ್ರಾರ್ಥಿಸೋಣ. ಏಕೆಂದರೆ ಧರ್ಮಸಭೆ ಎಂಬ ಕುಟುಂಬವು ಸತ್ಯ, ಪ್ರೀತಿ, ತ್ಯಾಗ, ಸೇವೆಗಳನ್ನು ದೈವಿಕ ಕಾರ್ಯಗಳೆಂದು ಪರಿಗಣಿಸಿರುವ ಒಂದು ಸುಯೋಗ. ಪ್ರಭುಕ್ರಿಸ್ತರಿಂದ ವ್ಯಾಪಕವಾಗಿರುವ ಈ ಕುಟುಂಬಕ್ಕೆ ಪವಿತ್ರಾತ್ಮರೇ ಮೇಲ್ವಿಚಾರಕರು. ಇಲ್ಲಿ ಯಾವ ಸ್ವಾರ್ಥ, ದ್ವೇಷ, ಮತ್ಸರಕ್ಕೆ ಎಡೆಯಿಲ್ಲ. ಕಪ್ಪು-ಬಿಳುಪು, ಮೇಲು-ಕೀಳು, ಬಡವ-ಶ್ರೀಮಂತ ಎನ್ನುವ ತಾರತಮ್ಯವಿಲ್ಲ. ಇಲ್ಲಿ ಎಲ್ಲರೂ ಸಮಾನರು. ನಾವು ಯಾವುದೇ ರೀತಿಯ ತಪ್ಪು ಹಾದಿಯಲ್ಲಿ ನಡೆದು ನಮ್ಮ ಜೀವನದಲ್ಲಿ ಎಡವದ ಹಾಗೆ ನಮ್ಮನ್ನು ಎಚ್ಚರಿಸುತ್ತಾ ಇರುತ್ತಾರೆ. ನಾವು ಪ್ರತಿಯೊಬ್ಬರೂ ಪವಿತ್ರಾತ್ಮರ ವರಗಳನ್ನು ಪಡೆದು ಧರ್ಮಸಭೆಯ ಆದರ್ಶ ಸದಸ್ಯರೆನಿಸಿಕೊಳ್ಳಬೇಕು. ಒಬ್ಬರಿಗೊಬ್ಬರು ಕಷ್ಟಕಾರ್ಪಣ್ಯಗಳಲ್ಲಿ ನೆರವಾಗಬೇಕು. ಆಗ ಮಾತ್ರ ಮೃತ್ಯುವನ್ನು ಜಯಿಸಿ ನಮ್ಮೆಲ್ಲರನ್ನು ಪಾಪಗಳಿಂದ ಮುಕ್ತಗೊಳಿಸಿದ ಪ್ರಭು ಕ್ರಿಸ್ತರ ಶಾಂತಿ ಮತ್ತು ಪ್ರೀತಿಯ ಸವಿಯನ್ನು ಅತ್ಯುತ್ತಮವಾಗಿ ಸವಿಯಬಹುದು.
ಪ್ರಭು ಯೇಸುವೇ, ಸ್ವಾರ್ಥ ದ್ವೇಷಗಳು ತುಂಬಿಕೊಂಡಿರುವ ಈ ಸಮಾಜದಲ್ಲಿ ಪ್ರೀತಿ, ಸತ್ಯ, ತ್ಯಾಗಗಳು ಎಲ್ಲೆಲ್ಲೂ ಕಾಣದಾಗಿವೆ. ಎಲ್ಲಿ ನೋಡಿದರೂ ಕೊಲೆ, ದರೋಡೆ, ಯುದ್ಧಗಳು ನಡೆಯುತ್ತಾ ಇವೆ. ಕರುಣೆಯಿಂದ ನಿಮ್ಮ ಆತ್ಮರನ್ನು ನಮ್ಮಲ್ಲಿ ಕಳುಹಿಸಿರಿ , ಅವರ ತೇಜದಿಂದ ಪ್ರತಿಯೊಬ್ಬ ಮನುಷ್ಯನೂ ತಾನು ಯಾರು, ಇತರರು ತನಗೆ ಯಾರು ಎಂಬುವುದನ್ನು ಮನದಟ್ಟು ಮಾಡಿಕೊಂಡು ಶಾಂತಿ ಸಮಾಧಾನದಿಂದ ಎಲ್ಲರೂ ಒಂದೇ ಕುಟುಂಬದ ಸದಸ್ಯರೆಂದರಿತು ಬಾಳುವಂತೆ ನಿಮ್ಮ ವರ ಪ್ರಸಾದಗಳನ್ನು ಕರುಣಿಸಿರಿ ಆಮೆನ್.
ಪರಮ ಪಾವನಾತ್ಮರೇ ಬನ್ನಿ, ದಿವ್ಯ ತೇಜದಾತರೇ ತನ್ನಿ
ಸುರಿಸ ಸುಪ್ತ ವರಗಳ ಪರಮ ಪಾವನಾತ್ಮರೇ ಬನ್ನಿ.
ಕೃಪೆ : ಜೀವವಾಕ್ಯ
No comments:
Post a Comment