Thursday, 20 June 2019

21 ಜೂನ್ 2೦19

ಬಿಳಿ  /       ಶುಕ್ರ   /     ಸಂತ  ಅಲೋಶಿಯಸ್ ಗೊನಜಗ() (ಸ್ಮರಣೆ)                    
1ನೇ ವಾಚನ - : 2 ಕೊರಿಂಥ 11: 18, 21-3೦           
ಕೀರ್ತನೆ  -  341-23-45-6          
ಶುಭಸಂದೇಶ - ಮತ್ತಾಯ 6: 19-23  

1ನೇ ವಾಚನ - : 2 ಕೊರಿಂಥ 111821-3೦ 
18 : ಅನೇಕರು ಕೇವಲ ಪ್ರಾಪಂಚಿಕ ವಿಷಯಗಳನ್ನು ಕುರಿತು ತಮ್ಮನ್ನೇ ಹೊಗಳಿಕೊಳ್ಳುತ್ತಾರೆ. ಹಾಗೆಯೇ ನಾನೂ ಹೊಗಳಿಕೊಳ್ಳುತ್ತೇನೆ.
21 : ಇದನ್ನೆಲ್ಲಾ ಮಾಡುವ ಸಾಹಸ ನಮಗಿಲ್ಲವೆಂದು ಹೇಳಿಕೊಳ್ಳಲು ನನಗೆ ನಾಚಿಕೆಯಾಗುತ್ತದೆ. ಯಾರಿಗಾದರೂ ಯಾರ ವಿಷಯದಲ್ಲಾದರೂ ಹೊಗಳಿಕೊಳ್ಳುವ ಧೈರ್ಯವಿದ್ದರೆ ಅದಕ್ಕಿಂತ ಹೆಚ್ಚಿನ ಧೈರ್ಯ ನನಗಿದೆ. ಇದನ್ನು ನಾನು ಹುಚ್ಚನಂತೆಯೇ ಹೇಳುತ್ತಿದ್ದೇನೆ ಎಂದು ಭಾವಿಸಿಕೊಳ್ಳಿ.
22 : ಅವರು ಹಿಬ್ರಿಯರೋ? ನಾನೂ ಹಿಬ್ರಿಯನೇ. ಅವರು ಇಸ್ರಯೇಲರೋ? ನಾನೂ ಇಸ್ರಯೇಲನೇ. ಅವರು ಅಬ್ರಹಾಮನ ವಂಶದವರೋ? ನಾನೂ ಅದೆ ವಂಶದವನೇ.
23 : ಅವರು ಕ್ರಿಸ್ತಯೇಸುವಿನ ದಾಸರೋ? (ನಾನು ಬುದ್ಧಿಕೆಟ್ಟವನಂತೆಯೇ ಮಾತನಾಡುತ್ತಿದ್ದೇನೆ) ಅವರಿಗಿಂತ ನಾನು ದಾಸಾನುದಾಸನು. ಅವರಿಗಿಂತ ಹೆಚ್ಚಾಗಿ ಸೇವೆಮಾಡಿದ್ದೇನೆ; ಅವರಿಗಿಂತ ಹೆಚ್ಚಾಗಿ ಸೆರೆಮನೆಗಳ ವಾಸವನ್ನು ಅನುಭವಿಸಿದ್ದೇನೆ; ಮಿತಿವಿೂರಿ ಏಟುಪೆಟ್ಟುಗಳನ್ನು ತಿಂದಿದ್ದೇನೆ; ಅನೇಕ ಸಲ ಸಾವಿನ ದವಡೆಗೆ ಸಿಲುಕಿಕೊಂಡಿದ್ದೇನೆ.
24 : ಐದು ಸಾರಿ ಯೆಹೂದ್ಯರಿಂದ ನನಗೆ ನಲವತ್ತಕ್ಕೆ ಒಂದು ಕಡಿಮೆ ಚಾಟಿ ಏಟುಗಳು ಬಿದ್ದವು.
25 : ಮೂರು ಸಾರಿ ರೋಮನರು ನನ್ನನ್ನು ಛಡಿಗಳಿಂದ ಹೊಡೆಸಿದರು. ಒಮ್ಮೆ ಜನರು ನನ್ನನ್ನು ಕೊಲ್ಲಲೆಂದು ಕಲ್ಲು ತೂರಿದರು. ಮೂರು ಸಲ ನಾನಿದ್ದ ಹಡಗು ಒಡೆದು ನೀರುಪಾಲಾಯಿತು. ಒಂದು ರಾತ್ರಿ, ಒಂದು ಹಗಲು ನಡುಗಡಲಲ್ಲಿ ತೇಲಾಡಿದೆ.
26 : ಪ್ರಭುವಿನ ಸೇವೆಯಲ್ಲಿ ನಾನು ಕೈಗೊಂಡ ಪ್ರಯಾಣಗಳು ಅನೇಕ; ನನಗೆ ಬಂದೊದಗಿದ ಅಪಾಯಗಳೂ ಅನೇಕ. ಪ್ರವಾಹಗಳ ಅಪಾಯ, ಕಳ್ಳಕಾಕರ ಅಪಾಯ, ಸ್ವಜನ ಹಾಗೂ ಅನ್ಯಜನರಿಂದ ಅಪಾಯ, ನಗರಗಳ ಹಾಗೂ ನಿರ್ಜನ ಪ್ರದೇಶಗಳ ಅಪಾಯ, ಕಡಲುಗಳ ಅಪಾಯ, ಕಪಟ ಸಹೋದರರಿಂದ ಅಪಾಯ - ಇವೆಲ್ಲಕ್ಕೂ ತುತ್ತಾದೆ.
27 : ಶ್ರಮಪಟ್ಟು ದುಡಿದಿದ್ದೇನೆ, ಎಷ್ಟೋ ಸಾರಿ ನಿದ್ದೆಗೆಟ್ಟಿದ್ದೇನೆ; ಹಸಿವು ನೀರಡಿಕೆಗಳಿಂದ ಬಳಲಿದ್ದೇನೆ; ಅನೇಕ ಸಾರಿ ಊಟ ಬಟ್ಟೆಯಿಲ್ಲದೆ ಅಲೆದಿದ್ದೇನೆ; ಚಳಿಗಾಳಿಯಲ್ಲಿ ನಡುಗಿದ್ದೇನೆ.
28 : ಇಂಥ ಇನ್ನಿತರ ಕಷ್ಟ ಸಂಕಟಗಳನ್ನು ಅನುಭವಿಸಿದ್ದೇನೆ. ಅಷ್ಟೇ ಅಲ್ಲದೆ, ಎಲ್ಲ ಸಭೆಗಳ ಹಿತಚಿಂತನೆಯೂ ನನ್ನನ್ನು ಅನುದಿನವೂ ಕಾಡಿಸಿದೆ.
29 : ಒಬ್ಬನು ಬಲಹೀನನಾಗಿದ್ದರೆ, ಅವನೊಡನೆ ನಾನೂ ಬಲಹೀನನೇ. ಒಬ್ಬನು ಪಾಪಕ್ಕೆ ಬಲಿಯಾದರೆ ನಾನೂ ತಾಪದಿಂದ ಕುದಿಯುತ್ತೇನೆ.
30 : ನಾನು ನನ್ನನ್ನೇ ಹೊಗಳಿಕೊಳ್ಳಬೇಕಾಗಿ ಬಂದರೆ, ನನ್ನ ದೌರ್ಬಲ್ಯವನ್ನು ಬಹಿರಂಗಪಡಿಸುವ ವಿಷಯಗಳ ಬಗ್ಗೆ ಹೊಗಳಿಕೊಳ್ಳುತ್ತೇನೆ.  

ಕೀರ್ತನೆ  -  34:  1-2,  3-4,  5-6

ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ      
1 : ಪ್ರಭುವನು ನಾ ಕೊಂಡಾಡುವೆ ಎಲ್ಲ ಕಾಲದೊಳು / ಆತನ ಸ್ತುತಿ ಸದಾ ಇಹುದು ನನ್ನ ಬಾಯೊಳು //
2 : ಪ್ರಭುವಿನಲ್ಲಿದೆ ನನ್ನ ಮನದಭಿಮಾನ / ದೀನರಿದನು ಕೇಳಿ, ಪಡೆಯಲಿ ಸುಮ್ಮಾನ //
3 : ಬನ್ನಿ, ಕೊಂಡಾಡುವ ಪ್ರಭು ದೇವನನು / ಘನಪಡಿಸೋಣ ಅವನ ಶ್ರೀನಾಮವನು //
4 : ಬೇಡಿಕೊಳ್ಳಲು ಕೊಟ್ಟನಾತ ಸದುತ್ತರವನು / ಭಯಭೀತಿಯಿಂದೆನ್ನನು ಮುಕ್ತ ನಾಗಿಸಿಹನು //
5 : ಆತನತ್ತ ತಿರುಗಿದ ಮುಖ ಅರಳುವುದು / ಲಜ್ಜೆಯಿಂದೆಂದಿಗು ಕುಂದಿಹೋಗದು //
6 : ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು / ಸರ್ವಾಪತ್ತಿನಿಂದವನು ಮುಕ್ತಗೊಂಡನು //


ಶುಭಸಂದೇಶ - ಮತ್ತಾಯ 619-23  
19 : "ಇಹಲೋಕದಲ್ಲಿ ಆಸ್ತಿಪಾಸ್ತಿಯನ್ನು ಶೇಖರಿಸಿಡಬೇಡಿ. ಇಲ್ಲಿ ತುಕ್ಕು ಹಿಡಿದೀತು; ನುಸಿ ಹೊಡೆದೀತು; ಕಳ್ಳರು ಕನ್ನ ಕೊರೆದು ಕದ್ದಾರು.
20 : ನಿಮ್ಮ ಆಸ್ತಿಯನ್ನು ಸ್ವರ್ಗದಲ್ಲಿ ಕೂಡಿಸಿಡಿ. ಅಲ್ಲಿ ತುಕ್ಕು ಹಿಡಿಯದು, ನುಸಿ ಹೊಡೆಯದು, ಕಳ್ಳರು ಕನ್ನ ಕೊರೆದು ಕದಿಯರು.
21 : ನಿನ್ನ ನಿಧಿ ಎಲ್ಲಿದೆಯೋ ಅಲ್ಲೇ ಇರುವುದು ನಿನ್ನ ಹೃದಯ."
22 : ಕಣ್ಣೇ ದೇಹಕ್ಕೆ ದೀಪ. ನಿನ್ನ ಕಣ್ಣು ಸರಿಯಿದ್ದರೆ ದೇಹವೆಲ್ಲ ಕಾಂತಿಮಯವಾಗುವುದು. ಅದು ಕೆಟ್ಟಿದ್ದರೆ ನಿನ್ನ ದೇಹವೆಲ್ಲ ಕತ್ತಲೆಮಯವಾಗುವುದು.
23 : ನಿನ್ನೊಳಗಿರುವ ಬೆಳಕೇ ಕತ್ತಲೆಯಾದಲ್ಲಿ ಅದೆಂತಹ ಕರಾಳ ಕತ್ತಲೆಯಾಗಿರಬಹುದು!"

ಚಿಂತನೆ 
( ಈ ದಿನದ ಚಿಂತನೆ ಜೀವವಾಕ್ಯ ಪುಸ್ತಕದಿಂದ)


ಭೂಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಬೇಡಿರಿ
ಅಲೆಕ್ಸಾಂಡರ್ ಚಕ್ರವರ್ತಿಯ ಶವ ಮೆಸದೋನಿಯಾವನ್ನು ಸುತ್ತಿ ಮೆರವಣಿಗೆ ಬರುತ್ತಿತ್ತು. ಅದನ್ನು ವೀಕ್ಷಿಸುತ್ತಿದ್ದ ಎಲ್ಲರಿಗೂ ಆ ಶವದ ಪೆಟ್ಟಿಗೆ ಒಂದು ಹೊಸ ಅರ್ಥವನ್ನು ಕೊಡುತ್ತಿತ್ತು ಆ ಶವದ ಪೆಟ್ಟಿಗೆ ಚಿನ್ನದಿಂದ ಮಾಡಿದ್ದಾಗಿದ್ದು ಅದರ ಎರಡು ಬದಿಗಳಲ್ಲೂ ಅಲೆಕ್ಸಾಂಡರನ ಕೈಗಳೆರಡೂ ಹೊರಗಡೆ ನೇತಾಡುತ್ತಿದ್ದವು. ನಾನು ಸತ್ತಾಗ ಇದೇ ರೀತಿ ಮೆರಣಿಗೆ ಮಾಡಿ, ಶವವನ್ನು ಸಮಾಧಿ ಮಾಡುವಾಗ ನನ್ನ ಎರಡು ಕೈಗಳೂ ನೆಲದಿಂದ ಮೇಲೆದ್ದು ಕಾಣಬೇಕು ಮತ್ತು ಅದನ್ನು ನೋಡುವವರಿಗೆ ನಾನು ಚಕ್ರವರ್ತಿಯಾಗಿದ್ದರೂ ಕೂಡ ಸತ್ತಾಗ ಏನನ್ನೂ ಎತ್ತಿಕೊಂಡು ಸ್ವರ್ಗಕ್ಕೆ ಹೋಗಲಿಲ್ಲ ಎಂಬುದನ್ನು ಇಡೀ ಲೋಕ ತಿಳಿಯಲಿ ಎಂದು ಬರೆದಿಟ್ಟಿದ್ದನು.
ಇದನ್ನೇ ಇಂದಿನ ಶುಭಸಂದೇಶದಲ್ಲಿ ಪ್ರಭುಕ್ರಿಸ್ತರು ಈ ವಿಶ್ವದಲ್ಲಿ ಆಸ್ತಿಯನ್ನು ಸಂಪಾದಿಸಬೇಡಿ, ಅವೆಲ್ಲವೂ ವ್ಯರ್ಥ, ಬದಲಿಗೆ ನಿಮ್ಮ ಆಸ್ತಿಗಳನ್ನು ಸ್ವರ್ಗ ಸಾಮ್ರಾಜ್ಯದಲ್ಲಿ ಕೂಡಿಟ್ಟುಕೊಳ್ಳಿ, ಅಲ್ಲಿ ಕಳ್ಳರಿಲ್ಲ ಎಂದು ನುಡಿದಿದ್ದಾರೆ.
ಮಾನವಕುಲ ಇಂದು ನಂಬಿರುವ ದೇವರೆಂದರೆ ಹಣ. ಅವನು ಹೆಣವಾದಾಗ ಅದು ಉಪಯೋಗಕ್ಕೆ ಬರುವುದಿಲ್ಲವೆಂಬುವುದನ್ನು ಅವನು ಇನ್ನೂ ಅರಿತಿಲ್ಲ. (ಹಣ ಮಾನವನ ಕಣ್ಣಿಗೆ ಕಾಣುವ ದೇವರು. ಆದರೆ ಅವನು ಸತ್ತಾಗ ಅದು ಕಣ್ಣಿಗೆ ಕಾಣಿಸುವುದಿಲ್ಲವೆಂಬುದನು ಅವನಿಗೆ ಗೊತ್ತಾಗುವುದಿಲ್ಲ)
ಇಂದಿನ ಶುಭಸಂದೇಶದಲ್ಲಿ ನೀವು ಹಣವನ್ನು ಕೂಡಿಟ್ಟುಕೊಳ್ಳಬೇಡಿ ಎನ್ನುತ್ತಿರುವಾಗ ಇಂದಿನ ಮೊದಲನೆ ವಾಚನದಲ್ಲಿ ಸಂತ ಪೌಲರು ನಾನು ಈ ವಿಶ್ವದಲ್ಲಿ ಯಾವುದೇ ರೀತಿಯ ಮಹಿಮೆ ಪಡೆದರೂ ಅವೆಲ್ಲವೂ ವ್ಯರ್ಥ. ಏಕೆಂದರೆ ಪ್ರಭು ಕ್ರಿಸ್ತರ ಹೆಸರಿನ ಎದುರಿಗೆ ಯಾವ ಮಹಿಮೆಗೂ ಬೆಲೆಯಿಲ್ಲ ಎನ್ನುತ್ತಾರೆ.
ಹಣವನ್ನೂ ಸೇರಿಸಬೇಡಿ ಎಂಬುವುದನ್ನು ತಪ್ಪಾಗಿ ಅರ್ಥ ಮಾಡಿಕೊಂಡು ನಾವು ದುಡಿಯುವುದು ಬೇಡ, ಕಷ್ಟಪಡುವುದು ಬೇಡ, ಎಂಬುವುದಿಲ್ಲ ಅರ್ಥ. ಆದರೆ ಪರರ ಆಸ್ತಿಯನ್ನು ದೋಚುವವರಿಗೆ ಒಂದು ಮಾರ್ಗದರ್ಶನವಾಗಿ ಇಂದಿನ ಶುಭಸಂದೇಶ ದಾರಿ ತೋರಿಸುತ್ತದೆ. ನಮ್ಮ ಆಸ್ತಿಯನ್ನು, ನಮ್ಮ ಸೌಲಭ್ಯಗಳನ್ನು ಪರರಲ್ಲಿ ಹಂಚಿಕೊಂಡು ಇಂದಿನ ಶುಭಸಂದೇಶಕ್ಕೆ ಸಾಕ್ಷಿಯಾದರೆ ನಮ್ಮ ಆಸ್ತಿ ಹೆಚ್ಚಿಸಲ್ಪಡುವುದು. 


ನಮ್ಮ ಸರ್ವವೂ ಸರ್ವಸ್ವವೂ ಪ್ರಭು ಯೇಸು

No comments:

Post a Comment