Thursday, 20 June 2019

22 ಜೂನ್ 2019

ಹಸಿರು/ ಶನಿ / ಸಾಧಾರಣ ಕಾಲದ ಹನ್ನೋಂದನೇ ವಾರ
1ನೇ ವಾಚನ - 2 ಕೊರಿಂಥ 12: 1-1೦
ಕೀರ್ತನೆ - 34: 7-8, 9-1-, 11-12
ಶುಭಸಂದೇಶ - ಮತ್ತಾಯ 6: 24-34
ಐಚ್ಚಿಕ ಸ್ಮರಣೆ - ನೋಲಾದ ಸಂತ ಪೌಲಿನಸ್ ಧರ್ಮಾ, ಸಂತ ಜಾನ್ ಫಿಶರ್ ಮತ್ತು ಸಂತ ತೋಮಸ್ ಮೋರ್

1ನೇ ವಾಚನ - 2 ಕೊರಿಂಥ 12: 1-1೦ 
1 : ಹೊಗಳಿಕೊಳ್ಳುವುದು ಹಿತಕರವಲ್ಲ. ಆದರೂ ಹೊಗಳಿಕೊಳ್ಳಬೇಕಾದ್ದು ಅನಿವಾರ್ಯವಾಗಿದೆ. ಆದುದರಿಂದ ಪ್ರಭು ನನಗಿತ್ತ ದರ್ಶನಗಳನ್ನು ಮತ್ತು ಶ್ರುತಪಡಿಸಿದ ಸತ್ಯಗಳನ್ನು ಕುರಿತು ಹೇಳುತ್ತೇನೆ;
2 : ಕ್ರೈಸ್ತನಾದ ಒಬ್ಬ ವ್ಯಕ್ತಿಯನ್ನು ನಾನು ಬಲ್ಲೆ. ಅವನು ಹದಿನಾಲ್ಕು ವರ್ಷಗಳಿಗೆ ಹಿಂದೆ ಮಹೋನ್ನತ ಸ್ವರ್ಗಕ್ಕೆ ಒಯ್ಯಲ್ಪಟ್ಟನು. ದೇಹಸಹಿತವಾಗಿಯೋ ದೇಹರಹಿತವಾಗಿಯೋ ಅದನ್ನು ನಾನರಿಯೆ. ದೇವರೊಬ್ಬರೇ ಬಲ್ಲರು.
3 : ಅವನು ಪರಂಧಾಮಕ್ಕೆ ಒಯ್ಯಲ್ಪಟ್ಟನೆಂಬುದು ನಿಶ್ಚಯ. ದೇಹಸಹಿತವಾಗಿಯೋ ದೇಹರಹಿತವಾಗಿಯೋ ಅದನ್ನು ನಾನರಿಯೆ. ದೇವರೊಬ್ಬರೇ ಬಲ್ಲರು.
4 : ಅಲ್ಲಿ ಅವನಿಗೆ ಕೇಳಿ ಬಂದ ವಿಷಯಗಳು ಮಾನವನ ವರ್ಣನೆಗೆ ಎಟುಕದವು. ಮಾನವನ ನುಡಿಗೆ ನಿಲುಕದವು.
5 : ಅವನನ್ನು ಕುರಿತು ನಾನು ಹೆಮ್ಮೆಪಡುತ್ತೇನೆ. ಆದರೆ ನನ್ನನ್ನು ಕುರಿತು ನಾನು ಹೊಗಳಿಕೊಳ್ಳುವುದಿಲ್ಲ. ನನ್ನ ದೌರ್ಬಲ್ಯವೇ ನನ್ನ ಹೊಗಳಿಕೆ.
6 : ಹಾಗೇನಾದರೂ ನಾನು ಹೊಗಳಿಕೊಳ್ಳಲು ಆಶಿಸಿದರೆ ಅದೇನು ಹುಚ್ಚುತನವಲ್ಲ. ಏಕೆಂದರೆ, ನಾನು ನುಡಿಯುತ್ತಿರುವುದು ಸತ್ಯವನ್ನೇ. ಆದರೂ ನಾನು ಹಾಗೆ ಹೊಗಳಿಕೊಳ್ಳುವುದಿಲ್ಲ. ಕಾರಣ, ಯಾರೂ ನನ್ನಲ್ಲಿ ಕಾಣುವುದಕ್ಕಿಂತಲೂ ನನ್ನಿಂದ ಕೇಳುವುದಕ್ಕಿಂತಲೂ ಹೆಚ್ಚಾಗಿ ನನ್ನನ್ನು ಪರಿಗಣಿಸಬಾರದು.
7 : ನನಗೆ ತಿಳಿಸಲಾದ ಗಹನ ಸತ್ಯಗಳಿಂದ ನಾನು ಉಬ್ಬಿಹೋಗದ ಹಾಗೆ ನನ್ನ ದೇಹದಲ್ಲಿ ಶೂಲದಂತೆ ನಾಟಿರುವ ಬೇನೆಯೊಂದನ್ನು ನನಗೆ ಕೊಡಲಾಯಿತು. ನಾನು ಅಹಂಕಾರಪಡದ ಹಾಗೆ ಇದು ನನ್ನನ್ನು ತಿವಿತಿವಿದು ಸೈತಾನನ ದೂತನಂತೆ ಕಾಡಿಸುತ್ತಿತ್ತು.
8 : ಈ ಪೀಡೆ ನನ್ನನ್ನು ಬಿಟ್ಟು ತೊಲಗಲೆಂದು ನಾನು ಮೂರು ಸಾರಿ ಪ್ರಭುವಿನಲ್ಲಿ ಬೇಡಿಕೊಂಡೆ.
9 : ಅದಕ್ಕವರು, “ನನ್ನ ಅನುಗ್ರಹವೇ ನಿನಗೆ ಸಾಕು. ನನ್ನ ಶಕ್ತಿ ಪರಿಪಕ್ವವಾಗುವುದು ನಿಶ್ಯಕ್ತಿಯಲ್ಲಿಯೇ,” ಎಂದು ಹೇಳಿದರು. ಕ್ರಿಸ್ತಯೇಸುವಿನ ಶಕ್ತಿ ನನ್ನಲ್ಲಿ ನೆಲಸುವಂತೆ ನನ್ನ ನಿಶ್ಯಕ್ತಿಯನ್ನು ಕುರಿತು ಮತ್ತಷ್ಟು ಹೆಮ್ಮೆಪಡುತ್ತೇನೆ.
10 : ದುರ್ಬಲತೆಗಳಲ್ಲೂ ದುರವಸ್ಥೆಗಳಲ್ಲೂ ಮಾನನಷ್ಟದಲ್ಲೂ ಕಷ್ಟಹಿಂಸೆಗಳಲ್ಲೂ, ಆಪತ್ತುವಿಪತ್ತುಗಳಲ್ಲೂ ನಾನು ಕ್ರಿಸ್ತ ಯೇಸುವಿನ ನಿಮಿತ್ತ ಸಂತುಷ್ಟನಾಗಿದ್ದೇನೆ. ನಾನು ಬಲಶಾಲಿಯಾಗಿರುವುದು ಬಲಹೀನನಾಗಿರುವಾಗಲೇ.
ಕೀರ್ತನೆ - 34: 7-8, 9-1-, 11-12
8 : ಸವಿದು ನೋಡು ಪ್ರಭುವಿನ ಮಾಧುರ್ಯವನು / ಆತನನು ಆಶ್ರಯಿಸಿಕೊಂಡವನು ಧನ್ಯನು //
9 : ದೇವಜನರೆ, ನಿಮಗಿರಲಿ ಪ್ರಭುವಿನ ಭಯಭಕುತಿ / ಅಂಥವರಿಗಿರದು ಯಾವ ಕುಂದುಕೊರತೆಯ ಭೀತಿ //
10 : ಯುವ ಕೇಸರಿಗೆ ಇರಬಹುದು ಹಸಿವು, ದಾಹ / ಪ್ರಭುವನು ಅರಸುವವರಿಗಿರದು ಒಳಿತಿನ ಅಭಾವ //
11 : ಬನ್ನಿ ಮಿತ್ರರೇ, ಆಲಿಸಿರೀ ಮಾತನು / ಕಲಿಸುವೆನು ನಾ ನಿಮಗೆ ದೇವ ಭಯವನು //
12 : ಎಲೈಮಾನವ, ಬಲುದಿನ ಬಾಳಲು ಬಯಸುವೆಯಾ? / ಆಯುರಾರೋಗ್ಯ ಭಾಗ್ಯವನು ಆಶಿಸುವೆಯಾ?//
13 : ಕಾದಿಡು ನಾಲಿಗೆಯನು ಕೇಡನು ಆಡದಂತೆ / ಬಿಗಿಯಿಡು ತುಟಿಯನ್ನು ಕುಟಿಲವನು ನುಡಿಯದಂತೆ //

ಶುಭಸಂದೇಶ - ಮತ್ತಾಯ 6: 24-34 
24 : "ಯಾರೂ ಇಬ್ಬರು ಯಜಮಾನರಿಗೆ ಜೀತಮಾಡಲಾಗದು. ಅವನು ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುತ್ತಾನೆ; ಅಥವಾ, ಒಬ್ಬನೊಡನೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುತ್ತಾನೆ. ದೇವರಿಗೂ ದ್ರವ್ಯಕ್ಕೂ ಒಟ್ಟಿಗೆ ಸೇವೆ ಮಾಡಲು ನಿಮ್ಮಿಂದಾಗದು."
25 : "ನಾನು ಹೇಳುವುದನ್ನು ಕೇಳಿ; ‘ಪ್ರಾಣಧಾರಣೆಗೆ ಏನು ಉಣ್ಣುವುದು, ಏನು ಕುಡಿಯುವುದು; ದೇಹರಕ್ಷಣೆಗೆ ಏನು ಹೊದೆಯುವುದು’ ಎಂದು ಚಿಂತೆಮಾಡಬೇಡಿ. ಊಟಕ್ಕಿಂತ ಪ್ರಾಣ, ಉಡುಪಿಗಿಂತ ದೇಹ ಮೇಲಾದುದಲ್ಲವೇ?
26 : ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ಗಮನಿಸಿ; ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಕಣಜಗಳಲ್ಲಿ ಕುಡಿಡುವುದೂ ಇಲ್ಲ. ಆದರೂ ಸ್ವರ್ಗದಲ್ಲಿರುವ ನಿಮ್ಮ ತಂದೆ ಅವುಗಳನ್ನು ಪೋಷಿಸುತ್ತಾರೆ. ಹಕ್ಕಿಗಳಿಗಿಂತ ನೀವು ಎಷ್ಟೋ ಮೇಲಾದವರಲ್ಲವೇ?
27 : ಚಿಂತಿಸಿ, ಚಿಂತಿಸಿ ನಿಮ್ಮ ಜೀವನಾವಧಿಯನ್ನು ಕೊಂಚಕಾಲವಾದರೂ ದೀರ್ಘಮಾಡಲು ನಿಮ್ಮಲ್ಲಿ ಯಾರಿಂದಾದೀತು?
28 : ಉಡುಗೆತೊಡುಗೆಗಳ ಚಿಂತೆ ನಿಮಗೇಕೆ? ವನಕುಸುಮಗಳು ಬೆಳೆಯುವ ರೀತಿಯನ್ನು ಗಮನಿಸಿ ನೋಡಿ: ಅವು ದುಡಿಯುವುದಿಲ್ಲ, ನೂಲುವುದಿಲ್ಲ.
29 : ಆದರೂ ಅರಸ ಸೊಲೊಮೋನನು ತನ್ನ ಸರ್ವವೈಭವದಲ್ಲಿ ಇದ್ದಾಗಲೂ ಈ ಕುಸುಮಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪನ್ನು ಧರಿಸಿರಲಿಲ್ಲ.
30 : ಅಲ್ಪ ವಿಶ್ವಾಸಿಗಳೇ, ಇಂದಿದ್ದು ನಾಳೆ ಒಲೆಪಾಲಾಗುವ ಬಯಲಿನ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ, ನಿಮಗೆ ಮತ್ತಷ್ಟೂ ಮಾಡಲಾರರೇ?
31 : ಆದುದರಿಂದ ತಿನ್ನಲು ಏನು? ಕುಡಿಯಲು ಏನು? ಉಡಲು ಏನು? ಎಂದು ಪೇಚಾಡಬೇಡಿ.
32 : ಇವೆಲ್ಲವುಗಳಿಗಾಗಿ ಪರಕೀಯರೂ ಪರದಾಡುತ್ತಾರೆ; ಇವೆಲ್ಲಾ ನಿಮಗೆ ಅವಶ್ಯ ಎಂದು ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆ.
33 : ನೀವಾದರೋ ಮೊದಲು ದೇವರ ಸಾಮ್ರಾಜ್ಯಕ್ಕಾಗಿ, ಅವರ ಸತ್ಸಂಬಂಧಕ್ಕಾಗಿ ತವಕಪಡಿ. ಇದರೊಂದಿಗೆ ಅವೆಲ್ಲವೂ ನಿಮಗೆ ನೀಡಲಾಗುವುದು.
34 : ಆದುದರಿಂದ ನಾಳೆಯ ಚಿಂತೆ ನಿಮಗೆ ಬೇಡ. ನಾಳೆಯ ಚಿಂತೆ ನಾಳೆಗೇ ಇರಲಿ. ಇಂದಿನ ಪಾಡೇ ಇಂದಿಗೆ ಸಾಕು."

ಚಿಂತನೆ 
( ಈ ದಿನದ ಚಿಂತನೆ ಜೀವವಾಕ್ಯ ಪುಸ್ತಕದಿಂದ)
ನಾಳೆ ಬಗ್ಗೆ ಚಿಂತೆ ಏಕೆ?

ಮಾನವರೆಲ್ಲರೂ ಸಾಧಾರಣವಾಗಿ ಹೇಳುವ ಮಾತೆಂದರೆ, `ನನಗೆ ಸಮಯವಿಲ್ಲ' ಎಂಬುದು. ಒಂದು ದೇಶದ ನಾಯಕನಿಂದಿಡಿದು ಅವನ ಸೇವಕನವರೆಗೆ ಎಲ್ಲರೂ ತಮ್ಮ ಕೆಲಸಕಾರ್ಯಗಳಲ್ಲಿ ಮಗ್ನರಾಗಿದ್ದು ಯಂತ್ರಗಳಂತೆ ಸಮಯಕ್ಕೆ ಅನುಸಾರವಾಗಿ ವಿವಿಧ ರೀತಿಯ ಕೆಲಸಗಳಲ್ಲಿ ತೊಡಗಿರುತ್ತಾರೆ. ಕೆಲವು ಅಧಿಕಾರಿಗಳನ್ನಂತೂ ಭೇಟಿ ಮಾಡಬೇಕೆಂದರೆ ಒಂದು ತಿಂಗಳ ಮೊದಲೇ ಅವರಿಗೆ ಅದನ್ನು ತಿಳಿಸಿ, ಅವರಿಂದ ಅನುಮತಿ ಪಡೆದುಕೊಳ್ಳಬೇಕು. ಇವೆಲ್ಲವೂ ನಮಗೆ ಏನನ್ನು ಸೂಚಿಸುತ್ತಿವೆಯೆಂದರೆ ನಾವು ಯಾವಾಗಲೂ ನಾಳೆಯ ಬಗ್ಗೆ ಚಿಂತಿಸುತ್ತೇವೆ ಎಂಬುವುದನ್ನು.
ಮನಃತತ್ವಶಾಸ್ತ್ರಜ್ಞರು ಮಾನವರನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸಿರುವರು. ಮೊದಲನೆಯದಾಗಿ ಚಿಕ್ಕ ಮಕ್ಕಳು,-ಅವರು ಯಾವಾಗಲೂ ನೋಡಿದ್ದೆಲ್ಲವನ್ನೂ ಪ್ರಶ್ನಿಸುತ್ತಾ, ಸಂತೋಷದಿಂದ ಹಿಗ್ಗುತ್ತಾ ಪ್ರಸ್ತುತ ಕಾಲದಲ್ಲಿ ಬದುಕುವರು. ಎರಡನೆಯದಾಗಿ ವಯಸ್ಸದವರು-ತಮ್ಮ ಹಿಂದಿನ ಜೀವನದ ಬಗ್ಗೆ ಯಾವಾಗಲೂ ಚಿಂತಿಸುತ್ತಾ ನಾನು ಹಾಗೆ ಜೀವಿಸಿದೆ ಎಂದು ಹೆಮ್ಮೆ ಪಟ್ಟುಕೊಳ್ಳುವವರು. ಮೂರನೆಯದಾಗಿ ಯುವಕರು-ಯಾವಾಗಲೂ ಮುಂದಿನ ಜೀವನದ ಬಗ್ಗೆ ಚಿಂತಿಸುವರು. ನಾನು ಏನನ್ನು ಮಾಡಿದರೆ ಅದನ್ನು ಸಾಧಿಸಬಹುದು ಎಂದು ನಾಳೆಯ ಬಗ್ಗೆ ಚಿಂತಿಸುವರು.
ಇಂದಿನ ಶುಭಸಂದೇಶ ಈ ಮೂರನೇ ಗುಂಪಿಗೆ ಮಾತ್ರವಲ್ಲದೆ ಎಲ್ಲರಿಗೂ ಅನ್ವಯಿಸುವುದು. ಒಮ್ಮೆ ಒಬ್ಬ ದೊಡ್ಡ ಗೋಣಿಚೀಲವನ್ನು ಹೊತ್ತು ನಡೆಯುತ್ತಿದ್ದ. ಅವನನ್ನು ಕಂಡ ದೇವದೂತರು ಚೀಲದಲ್ಲಿ ಏನಿರುವುದೆಂದು ಕೇಳಿದರು. ಅವನು ಆ ಚೀಲದ ಗಂಟನ್ನು ಬಿಚ್ಚುತ್ತಾ ನಿನ್ನೆ ಮತ್ತು ನಾಳೆಯ ಕಷ್ಟಗಳನ್ನು ಹೊತ್ತಿರುವುದಾಗಿ ಹೇಳಿದನು. ಚೀಲ ಖಾಲಿಯಾಗಿರುವುದನ್ನು ಕಂಡು ದೇವದೂತರು ಪ್ರತ್ಯುತ್ತರವಾಗಿ ನಿನ್ನೆಯ ಕಷ್ಟಗಳು ಮುಗಿದವು ಮತ್ತು ನಾಳೆಯ ಕಷ್ಟಗಳು ಇನ್ನೂ ಬಂದಿಲ್ಲ, ಚೀಲವನ್ನು ಎಸೆದು ಸಂತೋಷದಿಂದ ಮನೆಗೆ ತೆರೆಳು ಎಂದು ನುಡಿದರು.
ನಾವೆಲ್ಲರೂ ಜೀವನವನ್ನು ಒಂದು ಹೊರೆಯಾಗಿ ಖಾಲಿ ಚೀಲವನ್ನು ಹೊತ್ತು ನಡೆಯುತ್ತಿದ್ದೇವೆ. ಅದಕ್ಕೆ ಕ್ರಿಸ್ತರು ಆಕಾಶದ ಪಕ್ಷಿಗಳಂತೆಯೂ, ಲಿಲ್ಲಿ ಹೂಗಳಂತೆಯೂ ಚಿಂತಿಸದೆ ಜೀವಿಸಲು ಇಂದಿನ ಶುಭ ಸಂದೇಶದಲ್ಲಿ ಕರೆಕೊಡುತ್ತಿದ್ದಾರೆ. ಸಂತ ಪೌಲರು ಕೂಡ ಮೊದಲನೆ ವಾಚನದಲ್ಲಿ ತಾನು ತನ್ನ ಬಲಹೀನತೆಗಾಗಿ ಚಿಂತಿಸುವುದಿಲ್ಲ. ಏಕೆಂದರೆ ಪ್ರಭುಕ್ರಿಸ್ತರು ಅವರಿಗೆ ಬೇಕಾದ ನೆರವನ್ನು ಕೊಡುವರು ಎನ್ನುತ್ತಿದ್ದಾರೆ. ನಾಳೆಯ ಬಗ್ಗೆ ಚಿಂತಿಸದೆ ಅಂದಂದಿನ ಕೆಲಸವನ್ನು ಉತ್ತಮ ರೀತಿಯಲ್ಲಿ ಮಾಡಿದರೆ ನಮಗ್ಯಾಕೆ ಬರುವುದು ಚಿಂತೆ? ಒಂದು ವೇಳೆ ನಮಗೆ ಚಿಂತೆ ಇದ್ದರೆ ಅದು ದೇವರನ್ನು, ಸಾವನ್ನು, ಮೋಕ್ಷರಾಜ್ಯವನ್ನು ಕುರಿತದ್ದಾಗಿರಬೇಕು.
ಸೂರ್ಯ ಹೋದನೆಂದು ಅಳುತ್ತಾ ಕುಳಿತರೆ
ನಕ್ಷತ್ರ ನೋಡುವ ಭಾಗ್ಯವನ್ನು ಕಳೆದುಕೊಳ್ಳುತ್ತೀರಿ

No comments:

Post a Comment