ಬಿಳಿ /ಸೋಮ
ಸಂತ ಸ್ನಾನಿಕ ಯೊವಾನ್ನರ ಜಯಂತಿ ಮಹೋತ್ಸವ
1ನೇ ವಾಚನ - ಯೆಶಾಯ 49: 1-6
ಕೀರ್ತನೆ - 139: 1-3, 13-15
2ನೇ ವಾಚನ - ಪ್ರೇ.ಕಾ 13: 22-26
ಸಂತ ಸ್ನಾನಿಕ ಯೊವಾನ್ನರ ಜಯಂತಿ ಮಹೋತ್ಸವ
1ನೇ ವಾಚನ - ಯೆಶಾಯ 49: 1-6
ಕೀರ್ತನೆ - 139: 1-3, 13-15
2ನೇ ವಾಚನ - ಪ್ರೇ.ಕಾ 13: 22-26
ಶುಭಸಂದೇಶ - ಲೂಕ 1: 57-66, 8೦
1ನೇ ವಾಚನ - ಯೆಶಾಯ 49: 1-6
1 : ಕಿವಿಗೊಡಿ ನನ್ನ ದ್ವೀಪನಿವಾಸಿಗಳೇ, ಆಲಿಸಿ ನನ್ನನ್ನು ದೂರದ ಜನಾಂಗಗಳೇ, ಸರ್ವೇಶ್ವರ ಕರೆದನೆನ್ನನ್ನು ಗರ್ಭದಲ್ಲಿದ್ದಾಗಲೇ; ಹೆಸರಿಟ್ಟನೆನಗೆ ನಾನು ತಾಯಿಯ ಉದರಲ್ಲಿದ್ದಾಗಲೇ.
2 : ಮಾಡಿದನು ನನ್ನ ನುಡಿಯನ್ನು ಹರಿತವಾದ ಖಡ್ಗವನ್ನಾಗಿ ಮುಚ್ಚಿಟ್ಟಿಹನು ನನ್ನನ್ನು ತನ್ನ ಕರದ ನೆರಳಿನಲ್ಲಿ ರೂಪಿಸಿಹನು ನನ್ನನ್ನು ಚೂಪಾದ ಬಾಣವನ್ನಾಗಿ, ಬಚ್ಚಿಟ್ಟಿಹನು ನನ್ನನು ತನ್ನ ಬತ್ತಳಿಕೆಯಲ್ಲಿ.
3 : ಆತನೆನಗೆ ಇಂತೆಂದ: “ನೀನೆನ್ನ ದಾಸ; ನನ್ನ ಮಹಿಮೆ ಬೆಳಗಿಸುವ ಇಸ್ರಯೇಲ.”
4 : ಇಂತೆಂದುಕೊಂಡೆ ನಾನಾಗ: ವ್ಯರ್ಥವಾಯಿತು ನನ್ನ ಸಾಮಥ್ರ್ಯವೆಲ್ಲ ಶೂನ್ಯವಾಗಿ ಹೋಯಿತು ನನ್ನ ಶಕ್ತಿಯೆಲ್ಲ ನನಗೆ ದೊರಕುವುದು ನ್ಯಾಯ ಸರ್ವೇಶ್ವರನ ಕೈಯಲ್ಲೇ, ನನಗೆ ಬರುವುದು ಬಹುಮಾನ ಆ ದೇವರಿಂದಲೇ.
5 : ಯಕೋಬ್ಯರನ್ನು ತನ್ನ ಬಳಿಗೆ ಕರೆತರಲು ಇಸ್ರಯೇಲರನ್ನು ತನ್ನೊಂದಿಗೆ ಸೇರಿಸಿಕೊಳ್ಳಲು ತನ್ನ ದಾಸನನ್ನಾಗಿ ನನ್ನ ರೂಪಿಸಿದನು, ತಾಯ ಗರ್ಭದಲ್ಲಿದ್ದಾಗಲೇ ಮಾಡಿದನಿದನು. ಸನ್ಮಾನ್ಯನು ನಾನು ಸರ್ವೇಶ್ವರನ ದೃಷ್ಟಿಯಲಿ ನನ್ನ ಶಕ್ತಿಸಾಮಥ್ರ್ಯ ಇರುವುದು ಆ ದೇವರಲಿ.
6 : ಮತ್ತೆ ಆತ ಇಂತೆಂದನು ನನಗೆ: “ಮಹತ್ಕಾರ್ಯವೇನೂ ಅಲ್ಲ ನನ್ನ ದಾಸನಾದ ನಿನಗೆ ಕುಲಗಳನು ಉದ್ಧರಿಸುವ ಮಾತ್ರಕೆ ಇಸ್ರಯೇಲರಲಿ ರಕ್ಷಿತರಾದವರನ್ನು ಮರಳಿ ಬರಮಾಡುವ ಮಾತ್ರಕೆ. ನೇಮಿಸಿರುವೆನು ನಿನ್ನನ್ನು ಜ್ಯೋತಿಯನ್ನಾಗಿ ಸರ್ವಜನಾಂಗಗಳಿಗೆ ನನ್ನ ರಕ್ಷಣೆ ವ್ಯಾಪಿಸಿರುವಂತೆ ಮಾಡಲು ಜಗದ ಕಟ್ಟಕಡೆಯವರೆಗೆ.”
ಕೀರ್ತನೆ - 139: 1-3, 13-15
ನಿನಗೆ ವಂದನೆ, ನೀ ನನ್ನ ಭಯಭಕ್ತಿಗೆ ಪಾತ್ರ
1 : ಪ್ರಭು, ಪರಿಶೋಧಿಸಿರುವೆ ನೀ ನನ್ನನು / ಅರಿತುಕೊಂಡಿರುವೆ ಅಂತರಂಗವನು
2 : ನಾ ಕೂರುವುದೂ ಏಳುವುದೂ ನಿನಗೆ ಗೊತ್ತಿದೆ / ನನ್ನಾಲೋಚನೆ ದೂರದಿಂದಲೇ ನಿನಗೆ ತಿಳಿದಿದೆ
3 : ನನ್ನ ನಡೆಯನು, ನಿದ್ರೆಯನು ನೀ ಬಲ್ಲಾತ / ನನ್ನ ನಡತೆಯೆಲ್ಲವು ನಿನಗೆ ಸುಪರಿಚಿತ
13 : ನನ್ನ ಅಂತರಂಗವನು ಉಂಟುಮಾಡಿದಾತ ನೀನು / ತಾಯಗರ್ಭದಲೆ ನನ್ನ ರೂಪಿಸಿದಾತ ನೀನು
14 : ನಿನಗೆ ವಂದನೆ, ನೀ ನನ್ನ ಭಯಭಕ್ತಿಗೆ ಪಾತ್ರ / ನಿನ್ನ ಕೃತ್ಯಗಳು ಅದ್ಭುತಕರ ಹಾಗೂ ವಿಚಿತ್ರ / ನನ್ನ ಬಗ್ಗೆ ನಿನಗಿರುವ ಪೂರ್ಣ ಅರಿವು ಸಮರ್ಥ
15 : ನನ್ನ ಅಸ್ಥಿಪಂಜರವನು ರೂಪಿಸುವಾಗ / ತಾಯಗರ್ಭದೊಳು ಅಚ್ಚರದಿ ರಚಿಸುವಾಗ / ಗುಟ್ಟಾಗಿ ನಾನಲ್ಲಿ ಬೆಳೆಯುತ್ತಿದ್ದಾಗ / ಮರೆಯಾಗಿರಲಿಲ್ಲ ನಾನು ನಿನಗಾಗ
2ನೇ ವಾಚನ - ಪ್ರೇ.ಕಾ 13: 22-26
22 : ಅನಂತರ ದೇವರು ಸೌಲನನ್ನು ತ್ಯಜಿಸಿ ದಾವೀದನನ್ನು ಅರಸನನ್ನಾಗಿ ನೇಮಿಸಿದರು. ಇವನ ಬಗ್ಗೆ ದೇವರು, “ಜೆಸ್ಸೆಯನ ಮಗ ದಾವೀದನು ನನಗೆ ಮೆಚ್ಚುಗೆಯಾದ ವ್ಯಕ್ತಿ; ಇವನು ನನ್ನ ಆಶೆ ಆಕಾಂಕ್ಷೆಗಳನ್ನೆಲ್ಲಾ ಪೂರೈಸುವನು,” ಎಂದು ತಮ್ಮ ಒಪ್ಪಿಗೆಯನ್ನು ಸೂಚಿಸಿದರು.
23 : ಈ ದಾವೀದನ ಸಂತತಿಯಿಂದಲೇ ದೇವರು ತಮ್ಮ ವಾಗ್ದಾನದ ಪ್ರಕಾರ ಇಸ್ರಯೇಲ್ ಜನರಿಗೆ ಒಬ್ಬ ಉದ್ಧಾರಕನನ್ನು ಕಳುಹಿಸಿದರು. ಇವರೇ ಯೇಸುಸ್ವಾಮಿ.
24 : ಇವರ ಆಗಮನಕ್ಕೆ ಸಿದ್ಧತೆಯಾಗಿ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿ ಸ್ನಾನದೀಕ್ಷೆಯನ್ನು ಪಡೆಯಬೇಕೆಂದು ಯೊವಾನ್ನನು ಇಸ್ರಯೇಲಿನ ಎಲ್ಲ ಜನರಿಗೆ ಸಾರಿದನು.
25 : ಯೊವಾನ್ನನು ತನ್ನ ನಿಯೋಗವನ್ನು ಪೂರೈಸುತ್ತಿದ್ದಂತೆ ಜನರಿಗೆ, ‘ನಾನು ಯಾರೆಂದು ನೀವು ನೆನೆಸುತ್ತೀರಿ? ನೀವು ಎದುರು ನೋಡುತ್ತಿರುವ ವ್ಯಕ್ತಿ ನಾನಲ್ಲ. ನನ್ನ ಅನಂತರ ಒಬ್ಬರು ಬರುವರು; ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,’ ಎಂದನು.
26 : “ನನ್ನ ಸಹೋದರರೇ, ಅಬ್ರಹಾಮನ ಸಂತತಿಯವರೇ ಮತ್ತು ದೇವರಲ್ಲಿ ಭಯಭಕ್ತಿಯುಳ್ಳ ಇನ್ನಿತರರೇ, ಈ ಜೀವೋದ್ಧಾರದ ಸಂದೇಶವನ್ನು ಕಳುಹಿಸಿರುವುದು ನಮಗಾಗಿಯೇ.
ಶುಭಸಂದೇಶ - ಲೂಕ 1: 57-66, 8೦
57 : ದಿನ ತುಂಬಿದಾಗ ಎಲಿಜಬೇತಳು ಗಂಡು ಮಗುವಿಗೆ ಜನ್ಮವಿತ್ತಳು.
58 : ಸರ್ವೇಶ್ವರ ಆಕೆಗೆ ವಿಶೇಷ ಕೃಪೆ ತೋರಿದ್ದಾರೆಂದು ಅರಿತುಕೊಂಡ ನೆರೆಹೊರೆಯವರೂ ಬಂಧುಬಳಗದವರೂ ಬಂದು ಆಕೆಯೊಡನೆ ಸೇರಿ ಸಂತೋಷಪಟ್ಟರು.
59 : ಎಂಟನೆಯ ದಿನ ಮಗುವಿನ ಸುನ್ನತಿಗಾಗಿ ಅವರು ಬಂದು ಅದಕ್ಕೆ, ತಂದೆಯ ಹೆಸರನ್ನು ಅನುಸರಿಸಿ, ಜಕರೀಯನೆಂದು ನಾಮಕರಣ ಮಾಡುವುದರಲ್ಲಿ ಇದ್ದರು.
60 : ಆದರೆ ಮಗುವಿನ ತಾಯಿ, “ಇಲ್ಲ, ಅದು ಕೂಡದು, ಅವನಿಗೆ ‘ಯೊವಾನ್ನ’ ಎಂಬ ಹೆಸರಿಡಬೇಕು,” ಎಂದಳು.
61 : ಅದಕ್ಕೆ ಅವರು, “ನಿನ್ನ ಬಂಧುಬಳಗದವರಲ್ಲಿ ಯಾರಿಗೂ ಈ ಹೆಸರು ಇಲ್ಲವಲ್ಲಾ,” ಎಂದು ಹೇಳಿ,
62 : “ಮಗುವಿಗೆ ಏನು ಹೆಸರಿಡಬೇಕೆನ್ನುತ್ತೀರಿ?” ಎಂದು ಮಗುವಿನ ತಂದೆಗೆ ಸನ್ನೆಮಾಡಿ ಕೇಳಿದರು.
63 : ಆಗ ಜಕರೀಯನು ಬರೆಯುವ ಒಂದು ಹಲಗೆಯನ್ನು ತರಿಸಿಕೊಂಡು, ‘ಇವನ ಹೆಸರು ಯೊವಾನ್ನ’ ಎಂದು ಬರೆದನು. ಎಲ್ಲರೂ ಬೆರಗಾದರು.
64 : ತಕ್ಷಣವೇ ಅವನಿಗೆ ಬಾಯಿ ಬಂದಿತು; ನಾಲಿಗೆ ಸಡಿಲವಾಯಿತು; ಅವನು ಮಾತನಾಡಲು ಆರಂಭಿಸಿ ದೇವರನ್ನು ಸ್ತುತಿಸಿದನು.
65 : ನೆರೆಹೊರೆಯವರೆಲ್ಲರೂ ತಲ್ಲಣಗೊಂಡರು. ಈ ಸಮಾಚಾರ ಜುದೇಯದ ಗುಡ್ಡಗಾಡು ಪ್ರಾಂತ್ಯದಲ್ಲೆಲ್ಲಾ ಹರಡಿತು.
66 : ಕೇಳಿದವರೆಲ್ಲರೂ ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ‘ಈ ಮಗು ಮುಂದೆ ಎಂಥವನಾಗುವನೋ!’ ಎಂದುಕೊಂಡರು. ನಿಶ್ಚಯವಾಗಿಯೂ ಸರ್ವೇಶ್ವರನ ಅಭಯ ಹಸ್ತವು ಆ ಮಗುವಿನ ಮೇಲಿತ್ತು. ಜಕರೀಯನ ಪ್ರವಾದನೆ
80 : ಬಾಲಕನು ಬೆಳೆದಂತೆ ಆತ್ಮಶಕ್ತಿಯುತನಾದನು. ಇಸ್ರಯೇಲ್ ಜನರಿಗೆ ಬಹಿರಂಗವಾಗಿ ಕಾಣಿಸಿಕೊಳ್ಳುವವರೆಗೂ ಅವನು ಬೆಂಗಾಡಿನಲ್ಲೇ ವಾಸಿಸುತ್ತಿದ್ದನು. ಕ್ರಿಸ್ತೇಸುವಿನ ಜನನ (ಮತ್ತಾ. 1.18-25)
ಚಿಂತನೆ
ಇಂದು ಧರ್ಮಸಭೆಯು ಸಂತ
ಸ್ನಾನಿಕಯವನರ ಹುಟ್ಟುಹಬ್ಬವನ್ನು ಆಚರಿಸುತ್ತಿದೆ. ಮೊದಲನೇ ವಾಚನದಲ್ಲಿ ಪ್ರವಾದಿ ಯೇಶಾಯ ತಿಳಿಸುವಂತೆ 49:16 " ಗರ್ಭದಲ್ಲಿದ್ದಾಗಲೇ ಎನ್ನನು ಸರ್ವೇಶ್ವರ
ಕರೆದ " . ಇದು ಸ್ನಾನಿಕ ಯೋವಾನ ಜೀವನದಲ್ಲಿ ಅಕ್ಷರಶಃ ನಡೆದ
ಘಟನೆ ಮತ್ತು ಈ ವಾಕ್ಯಕ್ಕೆ ತಮ್ಮನ್ನೇ ತಾವು ಸಂಪೂರ್ಣವಾಗಿ ಸಮರ್ಪಿಸಿಕೊಂಡು ಅದರಂತೆಯೇ ಅವರು ಜೀವಿಸಿದರು.
ಎರಡನೆಯ
ವಾಚನದಲ್ಲಿ ಗಮನಿಸುವುದಾದರೆ ತನ್ನ ಸ್ಥಾನದ ಬಗ್ಗೆ
ಅತ್ಯಂತ ವಿನಮ್ರತೆಯನ್ನು ಅವರು ತೋರ್ಪಡಿಸಿದ್ದಾರೆ. ಅತ್ಯುನ್ನತ ಸ್ಥಾನವನ್ನು ತಂದೆಯಾದ ದೇವರು ನೀಡಿದರೂ ವಿನಮ್ರತೆಯಿಂದ ತಗ್ಗಿಕೊಂಡು ಜೀವಿಸಿದಂತಹ ಮಹಾನ್
ಚೇತನ ಇವರಾಗಿದ್ದಾರೆ.
ಇಂದಿನ
ಶುಭ ಸಂದೇಶದಲ್ಲಿ ಸ್ನಾನಿಕ ಯೋವಾನ್ನರ ಜನನದ ಬಗ್ಗೆ ನಾವು ಓದುತ್ತೇವೆ. ಹೊಸ ಒಡಂಬಡಿಕೆಯಲ್ಲಿ ಪ್ರಭು ಕ್ರಿಸ್ತರ ಜನನವನ್ನು ಬಿಟ್ಟು ಆ ಬಳಿಕ ಪ್ರಸ್ತಾಪಿಸಲ್ಪಟ್ಟ
ಇನ್ನೊಬ್ಬರ ಜನನದ ಘಟನೆಯೆಂದರೆ ಅದು ಸ್ನಾನಿಕ ಯೋವಾನ್ನರ ಜನನ ಮಾತ್ರವಾಗಿದೆ. ಹಾಗೆಯೇ ಸ್ನಾನಿಕ ಯೋವಾನ್ನರ ಅತಿಮುಖ್ಯವಾದ
ಧ್ಯೇಯವೆಂದರೆ-- ಪಶ್ಚಾತ್ತಾಪ ಪಟ್ಟು ಪಾಪಕ್ಕೆ ವಿಮುಖರಾಗಿ
ದೇವರಿಗೆ ಅಭಿಮುಖರಾಗಿರಿ ಮತ್ತು ಸ್ನಾನ ದೀಕ್ಷೆ
ಪಡೆದುಕೊಳ್ಳಿರಿ ಎಂಬುದಾಗಿದೆ.
ನಾವೆಲ್ಲರೂ
ಈ ಮಹೋತ್ಸವದ ದಿನದಂದು ನಮ್ಮ ನಮ್ಮ ಜನನ ಮತ್ತು ದೀಕ್ಷಾಸ್ನಾನದ ಬಗ್ಗೆ ಹೆಮ್ಮೆಪಡೋಣ ಹಾಗೆಯೇ
ತಂದೆಯಾದ ದೇವರಿಗೆ ಕೃತಜ್ಞತೆಗಳನ್ನು
ಸಮರ್ಪಿಸೋಣ.
ಸ್ನಾನಿಕ
ಯೋವಾನ್ನರ ಮಾರ್ಗದಲ್ಲಿ ನಾವು ಸಹ ನಡೆದು ನಮ್ಮ ಜೀವನವನ್ನು ಸನ್ಮಾಮಾರ್ಗದತ್ತ ಹರಿಸಿ ಪಾವನ ವ್ಯಕ್ತಿಗಳಾಗಿ , ಪರಿಶುದ್ಧರಾಗಿ , ಪವಿತ್ರಾತ್ಮ ಭರಿತರಾಗಿ ಸಂಭ್ರಮಿಸೋಣ.
- ಫಾದರ್ ಆನಂದ್ ಪ್ರಸಾದ್ ಬಳ್ಳಾರಿ ಧರ್ಮಕ್ಷೇತ್ರ
No comments:
Post a Comment