Saturday, 22 June 2019

23 ಜೂನ್ 2019

ಬಿಳಿ /ಭಾನು/     ಪ್ರಭು ಯೇಸುವಿನ ಪೂಜ್ಯ ಶರೀರ ಮತ್ತು ರಕ್ತದ ಮಹೋತ್ಸವ
1ನೇ ವಾಚನ - ಆದಿ: 14: 18-20
ಕೀರ್ತನೆ - 110: 1-4
2ನೇ ವಾಚನ - 1 ಕೊರಿಂಥ 11: 23-26
ಶುಭಸಂದೇಶ - ಲೂಕ 9: 11-17  
 

1ನೇ ವಾಚನ - ಆದಿ: 14: 18-20 
8 : ಸಾಲೇಮಿನ ಅರಸನೂ ಪರಾತ್ಪರ ದೇವರ ಯಾಜಕನೂ ಆಗಿದ್ದ ಮೆಲ್ಕಿಸದೇಕನು ಸಹ ಅಲ್ಲಿಗೆ ಬಂದು ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ಅರ್ಪಿಸಿ ಅಬ್ರಾಮನಿಗೆ ಇಂತೆಂದು ಆಶೀರ್ವಾದ ಮಾಡಿದನು:
19 : “ ಭೂಮ್ಯಾಕಾಶಗಳನ್ನು ಉಂಟುಮಾಡಿದ ಪರಾತ್ಪರ ದೇವರ ಆಶೀರ್ವಾದ ಅಬ್ರಾಮನಿಗಿರಲಿ; ನಿನ್ನ ಶತ್ರುಗಳನ್ನು ನಿನ್ನ ಕೈವಶ ಮಾಡಿದ ಆ ಪರಾತ್ಪರ ದೇವರಿಗೆ ಸ್ತೋತ್ರವಾಗಲಿ!”
20 : ಅಬ್ರಾಮನು ತಾನು ಗೆದ್ದು ತಂದಿದ್ದ ಎಲ್ಲ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಮೆಲ್ಕಿಸದೇಕನಿಗೆ ಕೊಟ್ಟನು.

ಕೀರ್ತನೆ - 110: 1-4 
ಮೆಲ್ಕಿಸೆದೆಕ್ ಪರಂಪರೆಯ ಯಾಜಕ ನೀ ನಿರುತ
1 : ನುಡಿದಿಹನು ಇಂತೆಂದು ಪ್ರಭು ನನ್ನೊಡೆಯನಿಗೆ / “ಆಸೀನನಾಗಿರು ನೀನು ನನ್ನ ಬಲಗಡೆಗೆ / ಹಗೆಗಳನು ನಿನಗೆ ಕಾಲ್ಮಣೆಯಾಗಿಸುವವರೆಗೆ” //
2 : ಸಿಯೋನಿನ ಹೊರಗು ವಿಸ್ತರಿಸುವನು ಪ್ರಭು ನಿನ್ನ ರಾಜ್ಯದಾಳಿಕೆಯನು / ನಿನ್ನ ವೈರಿ ವಿರೋಧಿಗಳ ನಟ್ಟನಡುವೆಯೆ ದೊರೆತನ ಮಾಡುವೆ ನೀನು //
3 : ಸೇನೆಯನು ನೀ ಅಣಿಗೊಳಿಸುವ ದಿನದೊಳು / ಸೇರಿಕೊಳ್ವರು ತಾವಾಗಿಯೇ ಪ್ರಜೆಗಳು / ಶುಭ್ರ ವಸ್ತ್ರಧರಿಸಿ ನಿನ್ನ ಯುವಕ ಯೋಧರು / ಉದಯಕಾಲದಿಬ್ಬನಿಯಂತೆ ಇಳಿದು ಬರುವರು //
4 : “ಮೆಲ್ಕಿಸೆದೆಕ್ ಪರಂಪರೆಯ ಯಾಜಕ ನೀ ನಿರುತ” / ಬದಲಿಸನು ಪ್ರಭು ತಾನಿತ್ತ ಪ್ರಮಾಣದೀ ಮಾತ //

2ನೇ ವಾಚನ - 1 ಕೊರಿಂಥ 11: 23-26 
23 : ನಿಮಗೆ ಮಾಡಿದ ಉಪದೇಶವನ್ನು ನಾನು ಪ್ರಭುವಿನಿಂದಲೇ ಪಡೆದೆನು. ಅದೇನೆಂದರೆ; ಪ್ರಭುಯೇಸು, ತಮ್ಮನ್ನು ಹಿಡಿದುಕೊಡಲಾದ ಆ ರಾತ್ರಿ ರೊಟ್ಟಿಯನ್ನು ತೆಗೆದುಕೊಂಡು
24 : ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ ಅದನ್ನು ಮುರಿದು, “ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ಇದನ್ನು ನನ್ನ ಸ್ಮರಣೆಗಾಗಿ ಮಾಡಿ,” ಎಂದರು.
25 : ಅಂತೆಯೇ ಭೋಜನದ ಕೊನೆಯಲ್ಲಿ ಪಾನ ಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆ ನನ್ನ ರಕ್ತದಿಂದ ಮುದ್ರಿತವಾದ ಹೊಸ ಒಡಂಬಡಿಕೆ; ಇದನ್ನು ನೀವು ಪಾನಮಾಡುವಾಗಲೆಲ್ಲಾ ನನ್ನ ಸ್ಮರಣೆಗಾಗಿ ಮಾಡಿರಿ,” ಎಂದರು.
26 : ಎಂದೇ, ನೀವು ಈ ರೊಟ್ಟಿಯನ್ನು ಭುಜಿಸಿ ಈ ಪಾತ್ರೆಯಿಂದ ಪಾನಮಾಡುವಾಗಲೆಲ್ಲಾ ಪ್ರಭು ಬರುವ ತನಕ ಅವರ ಮರಣವನ್ನು ಸಾರುತ್ತೀರಿ.
ಶುಭಸಂದೇಶ - ಲೂಕ 9: 11-17
11 : ಇದನ್ನು ತಿಳಿದುಕೊಂಡು ಜನಸಮೂಹವು ಅವರನ್ನು ಹಿಂಬಾಲಿಸಿತು. ಯೇಸು ಅವರನ್ನು ಸ್ವಾಗತಿಸಿ, ದೇವರ ಸಾಮ್ರಾಜ್ಯದ ವಿಷಯವಾಗಿ ಹೇಳಿ, ಅಗತ್ಯವಿದ್ದವರಿಗೆ ಆರೋಗ್ಯದಾನ ಮಾಡಿದರು.
12 : ಅಷ್ಟರಲ್ಲಿ ಸಾಯಂಕಾಲವಾಗುತ್ತಾ ಬಂದಿತು. ಹನ್ನೆರಡು ಮಂದಿ ಪ್ರೇಷಿತರು ಯೇಸುವಿನ ಬಳಿಗೆ ಬಂದು, “ಇದು ನಿರ್ಜನ ಪ್ರದೇಶ, ಜನರನ್ನು ಕಳುಹಿಸಿಬಿಡಿ; ಅವರು ಸವಿೂಪದ ಊರುಕೇರಿಗಳಿಗೆ ಹೋಗಿ ಊಟವಸತಿಯನ್ನು ಒದಗಿಸಿಕೊಳ್ಳಲಿ,” ಎಂದರು.
13 : ಅದಕ್ಕೆ ಯೇಸು, “ನೀವೇ ಅವರಿಗೆ ಊಟಕ್ಕೆ ಏನಾದರು ಕೊಡಿ,” ಎಂದರು. ಅವರು, “ನಮ್ಮಲ್ಲಿರುವುದು ಐದು ರೊಟ್ಟಿ ಮತ್ತು ಎರಡು ವಿೂನು ಮಾತ್ರ; ನಾವು ಹೋಗಿ ಇವರೆಲ್ಲರಿಗೆ ಬೇಕಾಗುವಷ್ಟು ಊಟ ಕೊಂಡುಕೊಂಡು ಬರಬೇಕೆ?” ಎಂದರು.
14 : ಏಕೆಂದರೆ ಅಲ್ಲಿ ಗಂಡಸರೇ ಸುಮಾರು ಐದು ಸಾವಿರ ಮಂದಿ ಇದ್ದರು. ಆಗ ಯೇಸು ಶಿಷ್ಯರಿಗೆ, “ಇವರನ್ನು ಐವತ್ತು ಐವತ್ತರಂತೆ ಪಂಕ್ತಿಯಾಗಿ ಕೂರಿಸಿರಿ,” ಎಂದು ಹೇಳಲು,
15 : ಅವರು ಹಾಗೆಯೇ ಎಲ್ಲರನ್ನು ಕುಳ್ಳಿರಿಸಿದರು.
16 : ಅನಂತರ ಯೇಸು ಐದು ರೊಟ್ಟಿಗಳನ್ನೂ ಎರಡು ವಿೂನುಗಳನ್ನೂ ತೆಗೆದುಕೊಂಡು ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೇವರಿಗೆ ಸ್ತೋತ್ರ ಸಲ್ಲಿಸಿದರು. ತರುವಾಯ ಅವುಗಳನ್ನು ಮುರಿದು ಜನಸಮೂಹಕ್ಕೆ ಬಡಿಸುವಂತೆ ಶಿಷ್ಯರಿಗೆ ಕೊಟ್ಟರು.

17 : ಎಲ್ಲರೂ ಹೊಟ್ಟೆತುಂಬ ತಿಂದು ಸಂತೃಪ್ತರಾದರು. ಇನ್ನು ಉಳಿದಿದ್ದ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಹನ್ನೆರಡು ಬುಟ್ಟಿ ತುಂಬ ಆದುವು.
ಚಿಂತನೆ 
( ಈ ದಿನದ ಚಿಂತನೆ ಬೈಬಲ್ ಡೈರಿ ಪುಸ್ತಕದಿಂದ)
ಯೇಸು ಕ್ರಿಸ್ತರು ಕಲ್ವಾರಿಯಲ್ಲಿ ಬಲಿಯಾಗಿ ತಮ್ಮ ಶರೀರವನ್ನು ಭೋಜನವಾಗಿ ಮತ್ತು ತಮ್ಮ ರಕ್ತವನ್ನು ಪಾನವಾಗಿ ನೀಡುವ ಬಲಿಯರ್ಪಣೆಯ ಮಹೋತ್ಸವವಾಗಿದೆ ಇಂದು. ಸ್ಮರಣೆಯೊಂದೇ ಸಾಲದು, ಅದು ಬದುಕಾಗಬೇಕು. ವಿಶ್ವಾಸಿಸಿ, ಭುಜಿಸಿ, ಕ್ರಿಸ್ತನಂತಾಗಬೇಕು. ಸಂತ ಪೌಲರು ಕೊರಿಂಥದವರಿಗೆ ಪ್ರಭುವಿನ ಭೋಜನ ಮಾಡುವಾಗ ನಿಮ್ಮಲ್ಲಿ ಪಂಗಡಗಳಿರಬಾರದು, ತಾರತಮ್ಯವಿರಬಾರದು ಒಂದಾಗಿ ಒಂದೇ ಕುಟುಂಬವಾಗಿ ಇದರಲ್ಲಿ ಪಾಲ್ಗೊಳ್ಳಬೇಕು ಎನ್ನುತ್ತಾರೆ. ನಮ್ಮನ್ನು ವಿಭಜಿಸಲು ಅನೇಕ ಕಾರಣಗಳು, ಶಕ್ತಿಗಳು, ಮಾರ್ಗಗಳಿವೆ. ಆದರೆ ನಮ್ಮನ್ನು ಒಂದುಗೂಡಿಸಲು ಇರುವುದೊಂದೇ ಮಾರ್ಗ, ಅದೇ ದಿವ್ಯಬಲಿಯಲ್ಲಿ ನಾವು ಪಾಲ್ಗೊಳ್ಳುವ, ಕ್ರಿಸ್ತರು ನೀಡುವ ಭೋಜನ.

No comments:

Post a Comment