ಬಿಳಿ/ ಶುಕ್ರ / ಯೇಸುವಿನ ವಿತ್ರಹೃದಯದ ಮಹೋತ್ಸವ
1ನೇ ವಾಚನ - ಯೆಜೆ 34: 11-16
ಕೀರ್ತನೆ - 23: 1-6
2ನೇ ವಾಚನ - ರೋಮ 5: 5-11
ಶುಭಸಂದೇಶ - ಲೂಕ 15: 3-7
ಸಂತ ಇರೇನಿಯನ್ ಸ್ಮರಣೆ ಇರುವುದಿಲ್ಲ.
2ನೇ ವಾಚನ - ರೋಮ 5: 5-11
ಶುಭಸಂದೇಶ - ಲೂಕ 15: 3-7
ಸಂತ ಇರೇನಿಯನ್ ಸ್ಮರಣೆ ಇರುವುದಿಲ್ಲ.
1ನೇ ವಾಚನ - ಯೆಜೆ 34: 11-16
11 : “ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ಆಹಾ, ನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನು.
12 : ಮಂದೆಯ ಕುರುಬನು ಸುತ್ತಮುತ್ತಲು ಚದರಿಹೋದ ತನ್ನ ಕುರಿಗಳನ್ನು ಹುಡುಕುವ ಹಾಗೆ ನಾನು ನನ್ನ ಕುರಿಗಳನ್ನು ಹುಡುಕುವೆನು;
13 : ಕಾರ್ಮುಗಿಲಿನ ದುರ್ದಿನದಲ್ಲಿ ಚೆಲ್ಲಾಪಿಲ್ಲಿಯಾದ ಅವುಗಳನ್ನು ಎಲ್ಲ ಸ್ಥಳಗಳಿಂದ ಬಿಡಿಸಿ, ಜನಾಂಗಗಳ ವಶದಿಂದ ತಪ್ಪಿಸಿ, ದೇಶಗಳಿಂದ ಒಟ್ಟುಗೂಡಿಸಿ, ಸ್ವದೇಶಕ್ಕೆ ಬರಮಾಡಿ ಇಸ್ರಯೇಲಿನ ಬೆಟ್ಟಗಳಲ್ಲೂ, ತೊರೆಗಳ ಬಳಿಯಲ್ಲೂ ನಾಡಿನ ಎಲ್ಲ ಹಕ್ಕೆಗಳಲ್ಲೂ ಮೇಯಿಸುವೆನು;
14 : ಅವುಗಳಿಗೆ ಒಳ್ಳೆಯ ಮೇವನ್ನು ಮೇಯಿಸುವೆನು; ಅವುಗಳ ಹುಲ್ಲುಗಾವಲು ಇಸ್ರಯೇಲಿನ ಎತ್ತರವಾದ ಬೆಟ್ಟಗಳಲ್ಲಿರುವುದು; ಅಲ್ಲಿ ಒಳ್ಳೆಯ ತೆವರಿನಲ್ಲಿ ಮಲಗುವುವು; ಇಸ್ರಯೇಲಿನ ಬೆಟ್ಟಗಳಲ್ಲಿ ಹಸಿಹುಲ್ಲನ್ನು ಮೇಯುವುವು.
15 : ನಾನೇ ನನ್ನ ಕುರಿಗಳನ್ನು ಮೇಯಿಸಿ ಹಾಯಾಗಿ ಮಲಗುವಂತೆ ಮಾಡುವೆನು; ಇದು ಸರ್ವೇಶ್ವರನಾದ ದೇವರ ನುಡಿ.
16 : “ತಪ್ಪಿಸಿಕೊಂಡಿದ್ದನ್ನು ಹುಡುಕುವೆನು, ದಾರಿತಪ್ಪಿದ್ದನ್ನು ಮಂದೆಗೆ ಸೇರಿಸುವೆನು, ದುರ್ಬಲವಾದುದನ್ನು ಬಲಗೊಳಿಸುವೆನು, ಮುರಿದ ಅಂಗವನ್ನು ಕಟ್ಟುವೆನು; ಬಲಿತ ಕೊಬ್ಬಿದ ಕುರಿಗಳನ್ನಾದರೋ ಧ್ವಂಸಮಾಡುವೆನು; ಅವುಗಳಿಗೆ ನ್ಯಾಯದಂಡನೆ ಎಂಬ ಮೇವನ್ನು ತಿನ್ನಿಸುವೆನು.”
ಕೀರ್ತನೆ - 23: 1-6
1 : ಪ್ರಭು ಕುರಿಗಾಹಿಯಾಗಿರಲು ನನಗೆ / ಕುಂದುಕೊರತೆಗಳೆಲ್ಲಿಯವು ಎನಗೆ? //
2 : ಹಸಿರುಗಾವಲುಗಳಲೆನ್ನ ತಂಗಿಸುವನು / ತಿಳಿಕೊಳಗಳ ಬಳಿಗೆನ್ನ ಕರೆದೊಯ್ಯುವನು //
3 : ಪುನಶ್ಚೇತನಗೊಳಿಸುವನು ನನ್ನ ಪ್ರಾಣವನಾತ | ಸನ್ಮಾರ್ಗದಲಿ ನಡೆಸುವನು ತನ್ನ ನಾಮನಿಮಿತ್ತ ||
4 : ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲು, ಅಂಜೆನು ಕೇಡಿಗೆ | ನಿನ್ನ ಕುರಿಗೋಲು, ಊರುಗೋಲು, ಧೈರ್ಯವನು ತರುವುದೆನಗೆ | ಕಾಣೆನೆಂದಿಗೂ ನಾ ದಿಗಿಲನು, ನೀನಿರಲು ನನ್ನೊಂದಿಗೆ ||
5 : ಸಜ್ಜುಗೊಳಿಸುವೆ ನೀ ಶತ್ರುಗಳ ಕಣ್ಮುಂದೆಯೆ ನನಗೌತಣವನು | ಹಚ್ಚುವೆ ತಲೆಗೆ ತೈಲವನು, ತುಂಬಿತುಳುಕಿಸುವೆ ಪಾನಪಾತ್ರೆಯನು ||
6 : ಶುಭಶಾಂತಿಯಿಂದ ನಾ ಬಾಳುವೆ ಜೀವಮಾನವೆಲ್ಲ / ದೇವಮಂದಿರದಲಿ ನಾ ವಾಸಿಸುವೆ ಚಿರಕಾಲವೆಲ್ಲ //
2ನೇ ವಾಚನ - ರೋಮ 5: 5-11
5 : ಈ ನಂಬಿಕೆ ನಿರೀಕ್ಷೆಯು ನಮಗಿರುವುದರಿಂದ ನಮಗೆ ಆಶಾಭಂಗವಾಗುವುದಿಲ್ಲ. ಏಕೆಂದರೆ, ನಮಗೆ ದಾನವಾಗಿ ದಯಪಾಲಿಸಿರುವ ಪವಿತ್ರಾತ್ಮ ಅವರ ಮುಖಾಂತರ ದೇವರು ತಮ್ಮ ಪ್ರೀತಿಯನ್ನು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿಸಿದ್ದಾರೆ.
6 : ನಾವು ಪಾಪದಿಂದ ದುರ್ಬಲರಾಗಿದ್ದಾಗಲೇ ನಿಯಮಿತ ಕಾಲದಲ್ಲಿ ಕ್ರಿಸ್ತಯೇಸು ಪಾಪಿಗಳಿಗೋಸ್ಕರ ಪ್ರಾಣತ್ಯಾಗಮಾಡಿದರು.
7 : ನೀತಿವಂತನಿಗಾಗಿ ಒಬ್ಬನು ತನ್ನ ಪ್ರಾಣಕೊಡುವುದು ವಿರಳ. ಸತ್ಪುರುಷನಿಗಾಗಿ ಒಬ್ಬನು ತನ್ನ ಪ್ರಾಣವನ್ನು ಕೊಟ್ಟರೂ ಕೊಟ್ಟಾನು.
8 : ಆದರೆ ನಾವಿನ್ನೂ ಪಾಪಿಗಳಾಗಿರುವಾಗಲೇ ಕ್ರಿಸ್ತಯೇಸು ನಮಗೋಸ್ಕರ ಪ್ರಾಣತ್ಯಾಗ ಮಾಡಿದರು. ಇದರಿಂದ ನಮ್ಮ ಮೇಲೆ ದೇವರಿಗಿರುವ ಪ್ರೀತಿ ಎಷ್ಟೆಂದು ವ್ಯಕ್ತವಾಗುತ್ತದೆ.
9 : ಕ್ರಿಸ್ತಯೇಸುವಿನ ರಕ್ತಧಾರೆಯಿಂದ ನಾವೀಗ ದೇವರೊಡನೆ ಸತ್ಸಂಬಂಧದಲ್ಲಿದ್ದೇವೆ. ಹೀಗಿರಲಾಗಿ, ಬರಲಿರುವ ದೈವಕೋಪಾಗ್ನಿಯಿಂದ ಯೇಸುಕ್ರಿಸ್ತರ ಮುಖಾಂತರವೇ ಪಾರಾಗುತ್ತೇವೆ ಎಂಬುದು ಮತ್ತಷ್ಟು ನಿಶ್ಚಯವಲ್ಲವೆ?
10 : ನಾವು ದೇವರಿಗೆ ಶತ್ರುಗಳಾಗಿದ್ದರೂ ಅವರು ತಮ್ಮ ಮಗನ ಮರಣದ ಮೂಲಕ ನಮ್ಮನ್ನು ತಮ್ಮೊಡನೆ ಸಂಧಾನಗೊಳಿಸಿ ಮಿತ್ರರನ್ನಾಗಿ ಮಾಡಿಕೊಂಡರು. ನಾವೀಗ ದೇವರ ಮಿತ್ರರಾಗಿರುವುದರಿಂದ, ಕ್ರಿಸ್ತಯೇಸುವಿನ ಜೀವದ ಮೂಲಕ ಉದ್ಧಾರ ಹೊಂದುತ್ತೇವೆ ಎಂಬುದು ಮತ್ತಷ್ಟು ಖಚಿತವಲ್ಲವೆ?
11 : ಅಷ್ಟೇ ಅಲ್ಲದೆ, ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ದೇವರು ನಮ್ಮನ್ನು ಮಿತ್ರರನ್ನಾಗಿಸಿರುವುದರಿಂದ ಅವರ ಮೂಲಕವೇ ನಾವು ದೇವರಲ್ಲಿ ಹೆಮ್ಮೆ ಪಡುತ್ತೇವೆ.
ಶುಭಸಂದೇಶ - ಲೂಕ 15: 3-7
3 : ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು:
4 : “ನಿಮ್ಮಲ್ಲಿ ಯಾರ ಬಳಿಯಾದರೂ ನೂರು ಕುರಿಗಳು ಇವೆ ಎನ್ನೋಣ. ಅವುಗಳಲ್ಲಿ ಒಂದು ಕುರಿ ಕಾಣದೆ ಹೋದಾಗ ಅವನೇನು ಮಾಡುತ್ತಾನೆ? ಇರುವ ತೊಂಭತ್ತೊಂಭತ್ತು ಕುರಿಗಳನ್ನು ಹುಲ್ಲುಗಾವಲಿನಲ್ಲೇ ಬಿಟ್ಟು ಕಾಣದೆ ಹೋದ ಆ ಒಂದು ಕುರಿ ಸಿಕ್ಕುವ ತನಕ ಹುಡುಕಿಕೊಂಡು ಹೋಗುತ್ತಾನಲ್ಲವೆ?
5 : ಅದು ಸಿಕ್ಕಿದಾಗ ಸಿಕ್ಕಿತೆಂಬ ಸಂತೋಷದಿಂದ ಅದನ್ನು ಹೆಗಲ ಮೇಲೆ ಎತ್ತಿಕೊಂಡು ಮನೆಗೆ ಬರುತ್ತಾನೆ;
6 : ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಿಗೆ ಕರೆಯುತ್ತಾನೆ. ‘ಕಳೆದು ಹೋಗಿದ್ದ ಕುರಿ ಸಿಕ್ಕಿತು; ನನ್ನೊಡನೆ ಸೇರಿ ಸಂತೋಷಪಡಿ,’ ಎನ್ನುತ್ತಾನೆ, ಅಲ್ಲವೆ?
7 : “ಅದೇ ರೀತಿಯಲ್ಲಿ, ಪಶ್ಚಾತ್ತಾಪದ ಅವಶ್ಯಕತೆಯಿಲ್ಲದ ತೊಂಭತ್ತೊಂಭತ್ತು ಸತ್ಪುರುಷರ ವಿಷಯವಾಗಿ ಸ್ವರ್ಗದಲ್ಲಿ ಉಂಟಾಗುವ ಸಂತೋಷಕ್ಕಿಂತ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ಹೆಚ್ಚು ಸಂತೋಷ ಉಂಟಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.
ಚಿಂತನೆ
ಇಂದಿನ ಆರಾಧನಾ ವಿಧಿಯ ವಾಚನಗಳು ನಮಗೆ ತಿಳಿಸುವುದೇನೆಂದರೆ ದೇವರ ಆತ್ಮೀಯತೆ ಮತ್ತು ಪ್ರೀತಿ. ದೇವರ ಪ್ರೀತಿಯ ಬಗ್ಗೆ ಒಬ್ಬ ಒಳ್ಳೆಯ ಉತ್ತಮ ಕುರಿಗಾಹಿಯಂತೆ ಚಿತ್ರಿಸಲಾಗಿದೆ. ದೇವರ ಪ್ರೀತಿಯಲ್ಲಿ ಪಾಲ್ಗೊಳ್ಳುವಿಕೆ , ಅತ್ಯಂತ ಶಕ್ತಿಯುಳ್ಳ ಪ್ರೀತಿಯಾಗಿದೆ. ಈ ಪ್ರೀತಿ ಅತ್ಯಂತ ಆತ್ಮಿಯ ಪ್ರೀತಿಯಾಗಿದ್ದು ಕಳೆದುಹೋದ ಪ್ರೀತಿಯನ್ನು ಮತ್ತೆ ಹುಡುಕುವ ಪ್ರತಿಯಾದ ಪ್ರೀತಿಯಾಗಿದೆ. ಯೇಸುವಿನ ಪವಿತ್ರ ಹೃದಯವು ಯಾವಾಗಲೂ ಉತ್ತಮ ಕುರಿಗಾಯಿ ಯೊಂದಿಗೆ ಸಮೀಕರಿಸಲ್ಪಪಟ್ಟಿದೆ.
ಮೊದಲನೆಯ ವಾಚನದಲ್ಲಿ ಪ್ರವಾದಿ ಏಜೇಕಿಯಲನು ತಿಳಿಸುವಂತೆ (34:11b) " ತಪ್ಪಿಸಿಕೊಂಡಿದ್ದನ್ನು ಹುಡುಕುವೆನು, ದಾರಿ ತಪ್ಪಿದ್ದನ್ನು ಮಂದಗೆ ಸೇರಿಸುವೆನು, ದುರ್ಬಲ ವಾದುದನ್ನು ಬಲಗೊಳಿಸುವೆನು". ಸರ್ವೇಶ್ವರಸ್ವಾಮಿ ನಮ್ಮನ್ನು ಯಾವಾಗಲೂ ಬಲಗೊಳಿಸುತ್ತಾರೆ. ಹಾಗೆಯೇ ಇಂದಿನ ಕೀರ್ತನೆಯಲ್ಲಿ ನಾವು ನೋಡುವುದಾದರೆ ದೇವರು ಉತ್ತಮ ಕುರಿಗಾಹಿ ಎಂಬುದನ್ನು ಮನಗಾಣುತ್ತೇವೆ.
ಇಂದಿನ ಶುಭ ಸಂದೇಶದಲ್ಲಿ ಕಾಣದೇ ಹೋದ ಕುರಿಯ ಬಗ್ಗೆ ಸ್ವಾಮಿ ಯೇಸು ಸಾಮತಿಯ ಮುಖಾಂತರ ತಿಳಿಸುತ್ತಾರೆ. ಯೇಸು ಪ್ರಭು ತಾವು ಅತ್ಯುತ್ತಮ ಕುರಿಗಾಹಿ ಎಂಬುದನ್ನು ಎಲ್ಲರಿಗೂ ಮನಮುಟ್ಟುವಂತೆ ತಿಳಿಸುತ್ತಾರೆ. ಅಂತೆಯೇ ಪ್ರಿಯರೇ ನಾವು ಯೇಸುವಿನ ಪವಿತ್ರ ಹೃದಯಕ್ಕೆ ಸೇರಿದವರು ಮಾತ್ರವಲ್ಲ ಅವರ ಕುರಿಮಂದೆಗೆ ಸೇರಿದ ಶಾಶ್ವತ ಕುರಿಗಳಾಗಿದ್ದೇವೆ. ಅವರ ಪವಿತ್ರ ಹೃದಯಕ್ಕೆ ಸೇರಿದ ಕುರಿಗಳು. ಅವರ ಪ್ರೀತಿಗೆ ಪಾತ್ರರಾದ ಕುರಿಗಳು ನಾವು. ಅವರ ಕ್ಷಮೆಗೆ ಅರ್ಹರಾದ ಕುರಿಗಳು ನಾವು.
ನಮ್ಮ ಹೃದಯವು ಯೇಸುವಿನ ಹೃದಯದೊಂದಿಗೆ ಮಿಡಿಯುವಂತಾಗಲಿ. ನಮ್ಮ ಹೃದಯಗಳಲ್ಲಿ ಯೇಸುವಿನ ಪ್ರೀತಿಯು ಸದಾಕಾಲಕ್ಕೂ ಉಕ್ಕಿ ಹರಿಯಲಿ. ಯೇಸುವಿನ ಪವಿತ್ರ ಹೃದಯಕ್ಕೆ ನಮ್ಮ ಹೃದಯವನ್ನು ಅರ್ಪಿಸಿ, ಸಮರ್ಪಿಸಿ ,ಸಮೃದ್ಧಿ ಯಾಗೋಣ.
No comments:
Post a Comment