Sunday, 23 June 2019

29 ಜೂನ್ 2019

ಕೆಂಪು /ಶನಿ/ ಸಂತ ಪೇತ್ರ ಮತ್ತು ಪೌಲರ ಮಹೋತ್ಸವ
1ನೇ ವಾಚನ - ಪ್ರೇ.ಕಾ 12: 1-11
ಕೀರ್ತನೆ - 34: 1-8
2ನೇ ವಾಚನ - 2 ತಿಮೊ 4: 6-8, 17-18
ಶುಭಸಂದೇಶ - ಮತ್ತಾಯ: 16: 13-19
ಮಾತೆ ಮರಿಯಳ ನಿಷ್ಕಳಂಕ ಹೃದಯದ ಸ್ಮರಣೆ ಇರುವುದಿಲ್ಲ.
1ನೇ ವಾಚನ - ಪ್ರೇ.ಕಾ 12: 1-11 
1 : ಆ ದಿನಗಳಲ್ಲಿ ಅರಸ ಹೆರೋದನು ಕ್ರೈಸ್ತಸಭೆಯ ಸದಸ್ಯರಲ್ಲಿ ಕೆಲವರನ್ನು ಹಿಂಸಿಸಲು ಆರಂಭಿಸಿದನು.
2 : ಯೊವಾನ್ನನ ಸಹೋದರ ಯಕೋಬನನ್ನು ಖಡ್ಗದಿಂದ ಕೊಲ್ಲಿಸಿದನು.
3 : ಇದರಿಂದ ಯೆಹೂದ್ಯರಿಗೆ ಮೆಚ್ಚುಗೆಯಾಯಿತೆಂದು ತಿಳಿದು ಪೇತ್ರನನ್ನು ಬಂಧಿಸಿದನು. (ಆಗ ಹುಳಿರಹಿತ ರೊಟ್ಟಿಯ ಹಬ್ಬ ನಡೆಯುತ್ತಿತ್ತು).
4 : ಪೇತ್ರನನ್ನು ಬಂಧಿಸಿದ ಮೇಲೆ ಸೆರೆಮನೆಯಲ್ಲಿಟ್ಟು ಅವನನ್ನು ಕಾಯಲು ನಾಲ್ಕು ನಾಲ್ಕು ಸೈನಿಕರಿದ್ದ ಚತುರ್ದಳಕ್ಕೆ ವಹಿಸಿದನು. ಪಾಸ್ಕಹಬ್ಬದ ನಂತರ ಪೇತ್ರನನ್ನು ಬಹಿರಂಗ ವಿಚಾರಣೆಗೆ ಗುರಿಪಡಿಸಲು ಉದ್ದೇಶಿಸಿದ್ದನು.
5 : ಪೇತ್ರನನ್ನು ಹೀಗೆ ಸೆರೆಯಲ್ಲಿಟ್ಟಿದ್ದಾಗ, ಸಭೆಯು ಅವನಿಗಾಗಿ ಶ್ರದ್ದೆಯಿಂದ ದೇವರಿಗೆ ಪ್ರಾರ್ಥನೆಮಾಡುತ್ತಿತ್ತು.
6 : ಹೆರೋದನು ಪೇತ್ರನನ್ನು ಜನರ ಮುಂದೆ ತರಬೇಕೆಂದಿದ್ದ ಹಿಂದಿನ ರಾತ್ರಿ ಅದು. ಪೇತ್ರನು ಇಬ್ಬರು ಸೈನಿಕರ ನಡುವೆ ನಿದ್ರಿಸುತ್ತಿದ್ದನು. ಅವನನ್ನು ಎರಡು ಸರಪಣಿಗಳಿಂದ ಕಟ್ಟಲಾಗಿತ್ತು. ಪಹರೆಯವರು ಸೆರೆಮನೆಯ ದ್ವಾರದಲ್ಲಿ ಕಾವಲಿದ್ದರು.
7 : ಫಕ್ಕನೆ ದೇವದೂತನೊಬ್ಬನು ಕಾಣಿಸಿಕೊಂಡನು. ಆ ಕೋಣೆಯೆಲ್ಲಾ ಪ್ರಕಾಶಮಯವಾಯಿತು. ದೂತನು ಪೇತ್ರನ ಭುಜವನ್ನು ತಟ್ಟಿ, ಎಬ್ಬಿಸಿ, “ಬೇಗನೆ ಏಳು,” ಎಂದನು. ಆ ಕ್ಷಣವೇ ಪೇತ್ರನ ಕೈಗಳಿಗೆ ಕಟ್ಟಿದ್ದ ಸರಪಣಿಗಳು ಕಳಚಿಬಿದ್ದವು.
8 : ದೂತನು ಅವನಿಗೆ, “ಬಟ್ಟೆಯನ್ನು ತೊಟ್ಟುಕೋ, ಪಾದರಕ್ಷೆಯನ್ನು ಮೆಟ್ಟಿಕೋ,” ಎಂದನು. ಪೇತ್ರನು ಹಾಗೆಯೇ ಮಾಡಿದನು. ಅನಂತರ ದೂತನು, “ನಿನ್ನ ಮೇಲುಹೊದಿಕೆಯನ್ನು ಹೊದ್ದುಕೊಂಡು ನನ್ನ ಜೊತೆ ಬಾ,” ಎಂದನು.
9 : ಪೇತ್ರನು ಸೆರೆಮನೆಯ ಹೊರಕ್ಕೆ ಅವನನ್ನು ಹಿಂಬಾಲಿಸಿ ಹೋದನು. ಅಷ್ಟಾದರೂ ದೂತನು ಮಾಡುತ್ತಿರುವುದು ನಿಜವೆಂದು ಅವನಿಗೆ ಅರಿವಾಗಲಿಲ್ಲ; ತನಗೇನೋ ದರ್ಶನವಾಗುತ್ತಿದೆಯೆಂದೆ ಭಾವಿಸಿದನು.
10 : ಅವರು ಮೊದಲನೆಯ ಮತ್ತು ಎರಡನೆಯ ಕಾವಲನ್ನು ದಾಟಿದರು. ಪಟ್ಟಣದ ಕಡೆಯಿದ್ದ ಕಬ್ಬಿಣದ ದ್ವಾರದ ಬಳಿಬಂದರು. ಆ ದ್ವಾರ ತನ್ನಷ್ಟಕ್ಕೆ ತಾನೇ ತೆರೆಯಿತು. ಅವರು ಹೊರ ನಡೆದರು. ಬೀದಿಯೊಂದರಲ್ಲಿ ಹಾದು ಹೋಗುತ್ತಿರಲು ಒಮ್ಮೆಲೆ ದೂತನು ಪೇತ್ರನನ್ನು ಬಿಟ್ಟು ಅದೃಶ್ಯನಾದನು.
11 : ನಡೆದ ಸಂಗತಿ ಏನೆಂದು ಪೇತ್ರನಿಗೆ ಅರಿವಾದಾಗ ಆತನು, “ನಡೆದುದೆಲ್ಲಾ ಸಾಕ್ಷಾತ್ ಸತ್ಯವೆಂದು ಈಗ ನನಗೆ ತಿಳಿಯಿತು. ಪ್ರಭು ತಮ್ಮ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ ಯೆಹೂದ್ಯರು ಮಾಡಬೇಕೆಂದಿದ್ದ ಕೇಡಿನಿಂದಲೂ ನನ್ನನ್ನು ಪಾರುಮಾಡಿದ್ದಾರೆ,” ಎಂದುಕೊಂಡನು.
ಕೀರ್ತನೆ - 34: 1-8 
ಭಯಭೀತಿಯಿಂದೆನ್ನನು ಮುಕ್ತ ನಾಗಿಸಿಹನು
1: ಪ್ರಭುವನು ನಾ ಕೊಂಡಾಡುವೆ ಎಲ್ಲ ಕಾಲದೊಳು / ಆತನ ಸ್ತುತಿ ಸದಾ ಇಹುದು ನನ್ನ ಬಾಯೊಳು //
2 : ಪ್ರಭುವಿನಲ್ಲಿದೆ ನನ್ನ ಮನದಭಿಮಾನ / ದೀನರಿದನು ಕೇಳಿ, ಪಡೆಯಲಿ ಸುಮ್ಮಾನ //
3 : ಬನ್ನಿ, ಕೊಂಡಾಡುವ ಪ್ರಭು ದೇವನನು / ಘನಪಡಿಸೋಣ ಅವನ ಶ್ರೀನಾಮವನು //
4 : ಬೇಡಿಕೊಳ್ಳಲು ಕೊಟ್ಟನಾತ ಸದುತ್ತರವನು / ಭಯಭೀತಿಯಿಂದೆನ್ನನು ಮುಕ್ತ ನಾಗಿಸಿಹನು //
5 : ಆತನತ್ತ ತಿರುಗಿದ ಮುಖ ಅರಳುವುದು / ಲಜ್ಜೆಯಿಂದೆಂದಿಗು ಕುಂದಿಹೋಗದು //
6 : ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು / ಸರ್ವಾಪತ್ತಿನಿಂದವನು ಮುಕ್ತಗೊಂಡನು //
7 : ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು / ಕಾಯುವನು ಪ್ರಭುವಿನ ದೂತನೆ ಬಂದಿಳಿದು //
8 : ಸವಿದು ನೋಡು ಪ್ರಭುವಿನ ಮಾಧುರ್ಯವನು / ಆತನನು ಆಶ್ರಯಿಸಿಕೊಂಡವನು ಧನ್ಯನು //
9 : ದೇವಜನರೆ, ನಿಮಗಿರಲಿ ಪ್ರಭುವಿನ ಭಯಭಕುತಿ / ಅಂಥವರಿಗಿರದು ಯಾವ ಕುಂದುಕೊರತೆಯ ಭೀತಿ //

2ನೇ ವಾಚನ - 2 ತಿಮೊ 4: 6-8, 17-18 
6 : ನಾನು ಯಜ್ಞಪಶುವಾಗಿ ಅರ್ಪಿತನಾಗುವ ಸಮಯವು ಬಂದಿದೆ. ಈ ಲೋಕದಿಂದ ತೆರಳಬೇಕಾದ ಕಾಲವೂ ಕೂಡಿಬಂದಿದೆ
7 : ಬಾಳಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ನನ್ನ ಓಟವನ್ನು ಮುಗಿಸಿದ್ದೇನೆ. ವಿಶ್ವಾಸವನ್ನು ಕಾಪಾಡಿಕೊಂಡಿದ್ದೇನೆ.
8 : ಇನ್ನು ನನಗೆ ಉಳಿದಿರುವುದು ಒಂದೇ: ಸಜ್ಜನರಿಗೆ ಸಲ್ಲುವಂಥ ಜಯಮಾಲೆ ನನಗೀಗ ಸಿದ್ಧವಾಗಿದೆ. ಅದನ್ನು ನೀತಿವಂತ ನ್ಯಾಯಾಧಿಪತಿಯಾದ ಪ್ರಭು ಆ ದಿನದಂದು ನನಗೆ ಕೊಡುವರು; ನನಗೆ ಮಾತ್ರವಲ್ಲ, ಅವರ ಪ್ರತ್ಯಕ್ಷತೆಯನ್ನು ಪ್ರೀತಿಯಿಂದ ನಿರೀಕ್ಷಿಸುತ್ತಿರುವ ಎಲ್ಲರಿಗೂ ಕೊಡುವರು.
17 : ಆದರೆ ಪ್ರಭು ನನಗೆ ಬೆಂಬಲವಾಗಿ ನಿಂತರು. ನಾನು ಶುಭಸಂದೇಶವನ್ನು ಸಂಪೂರ್ಣವಾಗಿ ಸಾರುವಂತೆಯೂ ಅನ್ಯಧರ್ಮಿಯರೆಲ್ಲರು ಅದನ್ನು ಕೇಳುವಂತೆಯೂ ಮಾಡಿದರು. ಅಲ್ಲದೆ, ಸಿಂಹದ ಬಾಯಿಂದಲೂ ನನ್ನನ್ನು ಸಂರಕ್ಷಿಸಿದರು.
18 : ಪ್ರಭು ನನ್ನನ್ನು ಸಕಲ ಕೇಡುಗಳಿಂದ ರಕ್ಷಿಸಿ, ತಮ್ಮ ಸ್ವರ್ಗಸಾಮ್ರಾಜ್ಯಕ್ಕೆ ನನ್ನನ್ನು ಸುರಕ್ಷಿತವಾಗಿ ಸೇರಿಸುವರು. ಯುಗಯುಗಾಂತರಕ್ಕೂ ಅವರಿಗೆ ಮಹಿಮೆ ಸಲ್ಲಲಿ. ಆಮೆನ್. ಶುಭಾಶಯಗಳು

ಶುಭಸಂದೇಶ - ಮತ್ತಾಯ: 16: 13-19 
13 : ಯೇಸುಸ್ವಾಮಿ "ಫಿಲಿಪ್ಪನ ಸೆಜರೇಯ" ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?" ಎಂದು ಕೇಳಿದರು.
14 : ಅದಕ್ಕೆ ಶಿಷ್ಯರು, "ಸ್ನಾನಿಕ ಯೊವಾನ್ನ", ಎಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು, "ಎಲೀಯನು" ಎನ್ನುತ್ತಾರೆ; "ಯೆರೆವಿೂಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು," ಎಂಬುದು ಇನ್ನೂ ಕೆಲವರ ಅಭಿಪ್ರಾಯ, ಎಂದು ಉತ್ತರ ಕೊಟ್ಟರು.
15 : ಆಗ ಯೇಸು, "ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?" ಎಂದು ಪ್ರಶ್ನಿಸಿದರು.
16 : ಅದಕ್ಕೆ ಪೇತ್ರನು, "ಅಭಿಷಿಕ್ತರಾದ ಲೋಕೋದ್ದಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ," ಎಂದನು.
17 : ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಹೀಗೆಂದರು: "ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತ ಪಡಿಸಿದ್ದು ನರಮಾನವ ಶಕ್ತಿ ಅಲ್ಲ, ಸ್ವರ್ಗದಲ್ಲಿರುವ ನನ್ನ ಪಿತನೇ.
18 : ನಾನು ನಿನಗೆ ಹೇಳುತ್ತೇನೆ, ಕೇಳು: "ನಿನ್ನ ಹೆಸರು ಪೇತ್ರ; ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು. ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು.
19 : ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತೀಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು."
ಚಿಂತನೆ
ಇಂದು ತಾಯಿ ಧರ್ಮಸಭೆಯು ಇಬ್ಬರು ಸರ್ವಶ್ರೇಷ್ಠ ಸಂತರ ಹಬ್ಬವನ್ನು ಕೊಂಡಾಡುತ್ತಿದೆ. ಮೊದಲನೆಯದಾಗಿ ಸಂತ ಪೇತ್ರ ರು ಪ್ರಭು ಯೇಸುವಿನ ಪ್ರಪ್ರಥಮ ಶಿಷ್ಯರು. ಇವರು ಪ್ರಥಮ ಧರ್ಮಾಧ್ಯಕ್ಷರು ಹಾಗೂ ಪ್ರಥಮ ಜಗದ್ಗುರುಗಳು. ಹಾಗೆಯೇ ಪ್ರೇಷಿತರ ಮುಖಂಡರು. ಅಷ್ಟು ಮಾತ್ರವಲ್ಲ ಅದೇ ಧರ್ಮಸಭೆಯ ಪ್ರಭಾವಿ ನಾಯಕರೂ ಆಗಿದ್ದಾರೆ. ಪೇತ್ರ ಇವರ ಮೂಲ ಹೆಸರು. ಸಿಮೋನ ಎಂದು ಯೇಸು ಇವರಿಗೆ ನೀಡಿದ ಹೊಸ ಹೆಸರು. ಅಂದರೆ ಪೇತ್ರ ಎಂದು ಕರೆಯುತ್ತಾರೆ. ಈ ಹೆಸರು ಏನನ್ನು ಸೂಚಿಸುತ್ತದೆ ಎಂದರೆ ಹಿಬ್ರೂ ಭಾಷೆಯಲ್ಲಿ ಕೆಪಾಸ್ kephas ಅಂದರೆ ಬಂಡೆ ಎಂದು ಅರ್ಥ. ಪೇತ್ರರು ಬೇತ್ಸೈದ ಎಂಬ ಊರಿನಲ್ಲಿ ಜನಿಸಿದರು. ಪ್ರಭು ಯೇಸುವಿನ ಸಮಯದಲ್ಲಿ ನಡೆದ ಅನೇಕ ಘಟನೆಗಳಿಗೆ ಪೇತ್ರರ ಮನೆಯು ಪ್ರಮುಖ ಕೇಂದ್ರವಾಗಿತ್ತು. ಇಲ್ಲಿ ಪ್ರಭು ಯೇಸು ಅನೇಕ ಪವಾಡಗಳನ್ನು ಮಾಡಿದ ಸ್ಥಳವಾಗಿದೆ. ಪೇತ್ರ ಇವರು ಯೇಸುವಿನ ಕರೆಗೆ ಓಗೊಟ್ಟು ಸಕಲವನ್ನು ತ್ಯಾಗ ಮಾಡಿ ಹಿಂಬಾಲಿಸಿದುದರ ಫಲವಾಗಿ ಸ್ವರ್ಗ ಸಾಮ್ರಾಜ್ಯದ ಬೀಗದ ಕೈಗಳನ್ನು ಪಡೆಯುವ ಸ್ಥಾನಕ್ಕೆರುತ್ತಾರೆ . ಪೇತ್ರ ರು ಅನೇಕ ಸಾರಿ ತಮ್ಮ ಬಲಹೀನತೆ ಯಿಂದಾಗಿ ಅವಿಶ್ವಾಸವನ್ನು ತೋರ್ಪಡಿಸಿದರೂ ಮುಂದೆ ಪ್ರಭುವಿನಲ್ಲಿಟ್ಟ ವಿಶ್ವಾಸಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಿಸುತ್ತಾರೆ.
ಸಂತ ಪೌಲಾರೂ ಮೊದಲು ಸೌಲನಾಗಿ ಇದ್ದಂಥವರು. ದಮಾಸ್ಕಸ್ ದಾರಿಯಲ್ಲಿ ಪೌಲ್ ನಾಗಿ ಮಾರ್ಪಟ್ಟು ಯಾವ ಧರ್ಮವನ್ನು ನಿರ್ನಾಮ ಮಾಡಬೇಕು ಎಂದು ಬಯಸಿದ್ದನು ಅದೇ ಧರ್ಮದ ಅತ್ಯಂತ ಪ್ರಭಾವಿ ಧರ್ಮಪ್ರಚಾರಕನಾಗಿ ಮಾರ್ಪಡುತ್ತಾನೆ. ಅಷ್ಟು ಮಾತ್ರವಲ್ಲ ತನ್ನ ಪ್ರತಿ ಉಸಿರಾಟದಲ್ಲಿ ಸಹ ಯೇಸುವಿನ ಶುಭ ಸಂದೇಶವನ್ನು ಹೊತ್ತು ಸಾರುತ್ತಾನೆ. ಇದಕ್ಕೆ ಉತ್ತಮ ಉದಾಹರಣೆ ಇವರು ಬರೆದ 14 ಪತ್ರಗಳು. ಹೊಸ ಒಡಂಬಡಿಕೆಯಲ್ಲಿ ಈ ಪತ್ರಗಳಿಗೆ ಅತ್ಯಂತ ಮಹತ್ತರವಾದ ಸ್ಥಾನವಿದೆ. ಕ್ರಿಸ್ತಶಕ 66ರಲ್ಲಿ ಅವರು ರೋಮ್ ನಗರದಲ್ಲಿ ಬಂಧಿಸಲ್ಪಟ್ಟರು. ಹಾಗೆಯೇ 67 ರಲ್ಲಿ ಇವರ ಶಿರಚ್ಛೇದನವಾಯಿತು. ಪ್ರಿಯರೇ ಇಬ್ಬರು ಮಹಾನ್ ಸಂತರ ಹಬ್ಬವು ನಮ್ಮ ಜೀವನಕ್ಕೆ ಭದ್ರವಾದ ಅಡಿಪಾಯವಾಗಿ ಮಾರ್ಪಟ್ಟಾಗ ಕ್ರೈಸ್ತರಾದ ನಮಗೆ ಮಹತ್ತರವಾದ ಜೀವನ ಪ್ರಾಪ್ತವಾಗುತ್ತದೆ.


 ಪವಿತ್ರ ಧರ್ಮಸಭೆಯ ಧೃವತಾರೆಗಳು:

ಸಂತ ಪೇತ್ರ ಮತ್ತು ಪೌಲ


ಸಂತ ಪೇತ್ರ ಮತ್ತು ಪೌಲರು ಪುನರುತ್ಥಾನಿ ಪ್ರಭು ಯೇಸುಕ್ರಿಸ್ತ ಅಸ್ತಿವಾರ ಹಾಕಿದ ಕಥೋಲಿಕ ಕ್ರೈಸ್ತ ಪವಿತ್ರ ಧರ್ಮಸಭೆಯನ್ನು ಮುನ್ನಡೆಸಿ ಬೆಳೆಸಲು ತಮ್ಮನ್ನೇ ಸಂಪೂರ್ಣವಾಗಿ ಸಮರ್ಪಿಸಿಕೊಂಡ ಮಹಾನುಭಾವರಲ್ಲಿ ಅಗ್ರಗಣ್ಯರು. ಅಂದಿನ ಏಳು ಬೀಳುಗಳನ್ನು ದಿಟ್ಟತನದಿಂದ ಮೆಟ್ಟಿನಿಂತು ಪವಿತ್ರ ಧರ್ಮಸಭೆಯನ್ನು ಸಮೃದ್ಧಿಗೊಳಿಸಲು ಸದಾ ಸನ್ನದ್ದರಾಗಿ ಎದೆಯೊಡ್ಡಿ ನಿಂತವರು. ಇವರು ಅಂಜಲಿಲ್ಲ ಅಳುಕಲಿಲ್ಲ ಬದಲಾಗಿ ತಮ್ಮ ದಿಟ, ದೃಢ ವಿಶ್ವಾಸದಲ್ಲಿ ಸ್ಥಿರವಾಗಿ ನೆಲೆನಿಂತು ಪ್ರಭುವಿನಿಂದ ವಿಜಯಮಾಲೆ ಪಡೆದವರು. ಅಂತಹ ವೀರ ಸೇವಕರ ಜೀವನದ ಕೆಲ ಘಟನೆಗಳೆಡೆ ಕಣ್ಣಾಯಿಸೋಣ.
ಸಂತ ಪೇತ್ರ
ಪೇತ್ರ ವೃತ್ತಿಯಲ್ಲಿ ಬೆಸ್ತ. ಗಲಿಲೇಯ ಸರೋವರದಲ್ಲಿ ತನ್ನ ಸಹೋದರ ಅಂದ್ರೆಯನೊಡನೆ ಮೀನು ಹಿಡಿಯಲು ಬಲೆ ಬೀಸುತ್ತಾ ಇದ್ದಾಗ "ನನ್ನನ್ನು ಹಿಂಬಾಲಿಸಿ ಬನ್ನಿ, ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು" (ಮತ್ತಾಯ ೪:೧೯) ಎಂದು ಯೇಸು ಕರೆದಾಗ ತಕ್ಷಣವೇ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು. ಅಂದಿನಿಂದ ಅವನ ಜೀವನದ ದಿಕ್ಕೇ ಬದಲಾಯಿಸಿತು. ಮೀನು ಹಿಡಿಯುವ ಕಾಯಕದಿಂದ ಮನುಷ್ಯರನ್ನೇ ಹಿಡಿಯುವ ಕಾಯಕಕ್ಕೆ ತನ್ನನ್ನೇ ತೊಡಗಿಸಿಕೊಂಡ. ಕ್ರಿಸ್ತನ ಸರಳ ಜೀವನ ಶೈಲಿ, ಅವರ ಸ್ಪಷ್ಟ ನಿಲುವು, ವಿಭಿನ್ನ ಬೋಧನೆ, ನೇರ ಮತ್ತು ದಿಟ್ಟ ನುಡಿಗಳು ಅವನ ಜೀವನದ ಮೇಲೆ ಅಪಾರ ಪರಿಣಾಮವನ್ನು ಉಂಟುಮಾಡಿತು. ವಿಶೇಷವಾಗಿ ಆಯ್ಕೆಯಾದ ಹನ್ನೆರಡು ಮಂದಿ ಶಿಷ್ಯರಲ್ಲಿ ತಾನು ಪವಿತ್ರ ಧರ್ಮಸಭೆಯ ಮೂಲ ಬಂಡೆಯಾಗುವೆನೆಂದು ಆತ ಕನಸು ಮನಸಿನಲ್ಲಿಯೂ ನೆನೆಸಿರಲಿಲ್ಲ. "ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು. ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು. ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತೀಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು, ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು (ಮತ್ತಾಯ ೧೬:೧೮-೧೯) ಎಂದಾಗ ಪೇತ್ರ ಅದನ್ನು ಗ್ರಹಿಸಲಿಲ್ಲ. ಆದರೆ ಕ್ರಿಸ್ತ ಎಸಗಿದ ಪ್ರಮುಖ ಅದ್ಭುತಗಳ ಸಮಯದಲ್ಲಿ ಪೇತ್ರ ಉಪಸ್ಥಿತನಿದ್ದ. ವಿಶೇಷವಾಗಿ ಪ್ರಭುಯೇಸು ಮರುರೂಪ ತಾಳಿದಾಗ ಆನಂದದ ತುತ್ತತುದಿಯನ್ನು ತಲಪಿದ ಪೇತ್ರ "ಪ್ರಭೂ, ನಾವು ಇಲ್ಲೇ ಇರುವುದು ಎಷ್ಟು ಒಳ್ಳೆಯದು!" (ಮತ್ತಾಯ ೧೭:೪) ಎಂದು ಉದ್ಗರಿಸಿದ್ದ. ಅದೇ ಕ್ರಿಸ್ತ ಯೆಹೂದ್ಯ ಪ್ರಮುಖರ ಕೈವಶವಾದಾಗ ದಾಸಿಯೊಬ್ಬಳು "ನೀನು ಸಹ ಗಲಿಲೇಯದ ಯೇಸುವಿನೊಂದಿಗೆ ಇದ್ದವನು" ಎಂದಾಗ "ನೀನು ಹೇಳುವುದು ಏನೆಂದು ನನಗೆ ತಿಳಿಯದು" (ಮತ್ತಾಯ ೨೬:೭೦) ಎಂದು ಸಾರಾಸಗಟಾಗಿ "ಆ ಮನುಷ್ಯನನ್ನು ನಾನು ಖಂಡಿತವಾಗಿ ಅರಿಯೆನು" ಎಂದು ಆಣೆಯಿಟ್ಟು ನಿರಾಕರಿಸುತ್ತಾನೆ. ಆದರೆ ತಕ್ಷಣ ತಪ್ಪಿನ ಅರಿವಾಗಿ ಬಹಳವಾಗಿ ವ್ಯಥೆಪಟ್ಟು ಅಳುತ್ತಾನೆ. ಪೇತ್ರನದು ಬಹು ವಿಚಿತ್ರ ಸ್ವಭಾವ. ಯೇಸು ತಮ್ಮನ್ನು ಹಿಂಬಾಲಿಸುತ್ತಿದ್ದ ಜನ ತಮ್ಮ ಬೋಧನೆ ಪಾಲಿಸಲು ಕಷ್ಟ ಎಂದು ಹಿಂದೆ ಸರಿಯಲು ಪ್ರಾರಂಭಿಸಿದಾಗ ತಮ್ಮ ಶಿಷ್ಯರನ್ನು ನೋಡಿ ನೀವು ಸಹ ಹಿಂದೆ ಸರಿಯುವಿರಾ?” ಎಂದು ಕೇಳಿದಾಗ ಪೇತ್ರ "ಪ್ರಭುವೇ, ನಾವು ಹೋಗುವುದಾದರೂ ಯಾರ ಬಳಿಗೆ?” ನಿತ್ಯ ಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ, ತಾವೇ ದೇವರಿಂದ ಬಂದ ಪರಮಪೂಜ್ಯರು" (ಯೊವಾನ್ನ ೬:೬೮-೬೯) ಎಂದು ತನ್ನ ಅಚಲ ವಿಶ್ವಾಸವನ್ನು ವ್ಯಕ್ತಪಡಿಸುತ್ತಾನೆ.
ಪೇತ್ರನಲ್ಲಿ ಆಳವಾಗಿ ಬೇರು ಬಿಟ್ಟಿದ್ದ ವಿಶ್ವಾಸದ ಅಳವನ್ನು ಪ್ರಭು ಅರಿತಿದ್ದರು. ಆದ್ದರಿಂದಲೇ ಪುನರುತ್ಥಾನದ ನಂತರ ಸಿಮೋನ ಪೇತ್ರನನ್ನು ನೋಡಿ, ಯೊವಾನ್ನನ ಮಗನಾದ ಸಿಮೋನನೇ, ಇವರಿಗಿಂತಲೂ ಹೆಚ್ಚಾಗಿ ನೀನು ನನ್ನನ್ನು ಪ್ರೀತಿಸುತ್ತೀಯಾ? ಎಂದು ಮೂರು ಬಾರಿ ಕೇಳಿದಾಗ ಪೇತ್ರ ನೊಂದುಕೊಂಡು "ಪ್ರಭುವೇ, ನಿಮಗೆ ಎಲ್ಲವೂ ತಿಳಿದೇ ಇದೆ" ಎನ್ನುತ್ತಾನೆ. ಇದರ ಮೂಲಕ ಅವನು ತನ್ನನ್ನು ಸಂಪೂರ್ಣವಾಗಿ ಪ್ರಭುವಿಗೆ ಸಮರ್ಪಿಸುತ್ತಾನೆ. ಆತನ ಸಮರ್ಪಣೆಯಲ್ಲಿ ಭರವಸೆ ಇಟ್ಟು "ನನ್ನ ಕುರಿಗಳನ್ನು ಮೇಯಿಸು" (ಯೊವಾನ್ನ ೨೧:೧೫-೧೭) ಎನ್ನುತ್ತಾರೆ ಪ್ರಭು. ಆ ಕ್ಷಣದಿಂದ ಪೇತ್ರ ಕ್ರಿಸ್ತನ ಪರಿಪೂರ್ಣ ದಾಸನಾದ. ತನ್ನತನವನ್ನು ತ್ಯಜಿಸಿ ಕಿಸ್ತನ ಗುಲಾಮನಾದ. ಈಗ ಪೇತ್ರ ಸಂಪೂರ್ಣ ಕ್ರಿಸ್ತಮಯನಾಗಿದ್ದಾನೆ.
ಕ್ರಿಸ್ತನನ್ನು ಹಿಂಬಾಲಿಸಲು ಬದ್ಧತೆ ಬೇಕು ಆ ಬದ್ದತೆಯನ್ನು ಪ್ರಭು ಪೇತ್ರನಲ್ಲಿ ಗುರುತಿಸಿದರು. ಪೇತ್ರ ತನ್ನ ಬದ್ದತೆಯನ್ನು ಉಳಿಸಿಕೊಳ್ಳುತ್ತಾನೆ. ರೋಮ್ ಅಧಿಪತಿ ನೀರೋ ಕ್ರೈಸ್ತರನ್ನು ಹಿಂಸಿಸುತ್ತಿದ್ದ ಅಗ ಕ್ರೈಸ್ತರು ವಿಶ್ವಾಸವನ್ನು ಕಳೆದುಕೊಳ್ಳಬಾರದೆಂದು ಪೇತ್ರ ಹುರಿದುಂಬಿಸಿ ಪ್ರೋತ್ಸಾಹಿಸುತ್ತಾನೆ. ಆದರೆ ತಾನೇ ಆ ಹಿಂಸೆಯಲ್ಲಿ ಸಿಲುಕಿ ಸುಮಾರು ಕ್ರಿಸ್ತಶಕ ೬೪ರಲ್ಲಿ ಶಿಲುಬೆಯಲ್ಲಿ ತಲೆಕೆಳಗಾಗಿ ಜಡಿಸಿಕೊಂಡು ರಕ್ತಸಾಕ್ಷಿಯಾಗುತ್ತಾನೆ.
ಪೇತ್ರನ ಬೋಧನೆಯನ್ನು ಹಾಗೂ ಆತನ ಅಚಲ ವಿಶ್ವಾಸವನ್ನು ಏಷ್ಯಾ ಮೈನರ್ ಸೀಮೆಯ ಉತ್ತರಭಾಗದಲ್ಲಿ ಚದುರಿದ ಕ್ರೈಸ್ತವಿಶ್ವಾಸಿಗಳಿಗೆ ಬರೆದಿರುವ ಎರಡು ಪತ್ರಗಳಲ್ಲಿ ಓದಿ ತಿಳಿದುಕೊಳ್ಳಬಹುದು. ಪ್ರಮುಖವಾಗಿ ಕ್ರೈಸ್ತರು ವಿಶ್ವಾಸವನ್ನು ಕಳೆದುಕೊಳ್ಳಬಾರದು ಹಿಂಸೆಬಾಧೆಗಳು ನಮ್ಮ ವಿಶ್ವಾಸವನ್ನು ಪರಿಶೋಧಿಸುವ ಅಗ್ನಿಕುಂಡ. ನಮ್ಮ ವಿಶ್ವಾಸಕ್ಕೆ ಸಜ್ಜೀವವೆಂಬ ಸತ್ಫಲ ದೊರಕುತ್ತದೆ ಎಂಬ ಅಭಯವನ್ನು ನೀಡುತ್ತಾನೆ. ತಾನೂ ಸಹ ಅಂತಹ ಸತ್ಫಲಕ್ಕಾಗಿ ಸದೃಢ ವಿಶ್ವಾಸದಿಂದ ಎದುರುನೋಡುತ್ತಾ ಕಮರುತ್ತಿದ್ದ ಭರವಸೆ ಚಿಗುರುವಂತೆ ಮಾಡುತ್ತಾನೆ. ಇಂದೂ ಸಹ ಆ ಭರವಸೆಯ ಚಿಗುರು ಬೆಳೆಯುತ್ತಲೇ ಸಾಗಿದೆ.
ಸಂತ ಪೌಲ
ಯೆಹೂದ್ಯ ಧರ್ಮದ ನಿಷ್ಠಾವಂತ ಅನುಯಾಯಿ ಹಾಗೂ ಕ್ರೈಸ್ತ ಧರ್ಮದ ಕಟ್ಟಾ ವಿರೋಧಿಯಾಗಿದ್ದ ಪೌಲ ದಮಸ್ಕಸಿನ ಹಾದಿಯಲ್ಲಿ ಕ್ರಿಸ್ತನ ದರ್ಶನವಾದ ನಂತರ ಸಂಪೂರ್ಣವಾಗಿ ಬದಲಾವಣೆ ಹೊಂದಿದ ವೀರ ಧರ್ಮಪ್ರಚಾರಕ. ತಾರ್ಸುಸ್ ಇವನ ಹುಟ್ಟೂರು. ಅಪ್ಪಟ ಪರಿಸಾಯನಾಗಿದ್ದ ಪೌಲನ ಕಸುಬು ಗುಡಾರ ಕಟ್ಟುವುದು. ಸ್ವಾಭಿಮಾನಿ, ನಿಷ್ಠಾವಂತ ಕ್ರಿಸ್ತನ ಬೋಧನೆಗಳನ್ನು ಪ್ರಾಮಾಣಿಕವಾಗಿ ಪಾಲಿಸಲು ಹಗಳಿರುಳು ಶ್ರಮಿಸಿದ ಅದ್ವಿತೀಯ. ಪ್ರಾರ್ಥನೆ ಇವನ ಉಸಿರಾಗಿತ್ತು. ಪ್ರಭುಕ್ರಿಸ್ತನಲ್ಲಿ ಅನನ್ಯ ಭಕ್ತಿ ವಿಶ್ವಾಸವನ್ನಿಟ್ಟಿದ್ದನು. ಅವರೇ ಮಾನವಕುಲದ ರಕ್ಷಕ. ಅವರಲ್ಲಿ ವಿಶ್ವಾಸವಿಟ್ಟವರು ರಕ್ಷಣೆಹೊಂದುವರು ಎಂದು ಬಹಿರಂಗವಾಗಿ ಬೋಧಿಸುತ್ತಿದ್ದನು. ಮಾತ್ರವಲ್ಲದೆ ರಕ್ಷಣೆಹೊಂದಲು ಪ್ರಭುಕ್ರಿಸ್ತನಲ್ಲಿ ಪೂರ್ಣವಿಶ್ವಾಸವೇ ಅಡಿಗಲ್ಲು. ಅವರ ಬೋಧನೆಗಳನ್ನು ಸಿದ್ದಿಗೆ ತರುವುದರಲ್ಲಿ ರಕ್ಷಣೆಯ ದ್ವಾರ ತೆರೆದುಕೊಳ್ಳುತ್ತದೆ. ಈ ರಕ್ಷಣೆ ಯೆಹೂದ್ಯರಿಗೆ ಮಾತ್ರ ಸೀಮಿತವಲ್ಲ. ಪ್ರಭು ಯೇಸುವೇ ’ಕ್ರಿಸ್ತ’ ಎಂದು ಯಾರು ಪೂರ್ಣ ನಂಬಿಕೆ ಇಡುತ್ತಾರೋ ಅವರೆಲ್ಲರು ರಕ್ಷಣೆಗೆ ಅರ್ಹರು ಎಂದು ಅನ್ಯಧರ್ಮೀರನ್ನೂ ಕ್ರಿಸ್ತನ ಅನುಯಾಯಿಗಳಾಗಲು ಮುಕ್ತವಾಗಿ ಆಹ್ವಾನಿಸುತ್ತಾನೆ.
ಕ್ರಿಸ್ತನಲ್ಲಿ ರಕ್ಷಣೆ ಹೊಂದಲು ಯೆಹೂದ್ಯ ಧರ್ಮದ ಸುನ್ನತಿ ಅವಶ್ಯಕತೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿ ತನ್ನ ಮೂಲಧರ್ಮದವರಲ್ಲಿದ್ದ ತಪ್ಪು ಕಲ್ಪನೆಗೆ ತಿಲಾಂಜಲಿ ಹಾಡಿ ಆ ಧರ್ಮದ ಪ್ರಮುಖರ ಕೊಪಾಗ್ನಿಗೆ ಒಳಗಾದರೂ ತನ್ನ ನಂಬಿಕಯನ್ನೂ ಮಾತ್ರ ಬದಲಾಯಿಸಿಕೊಳ್ಳಲಿಲ್ಲ. ಬದಲಾಗಿ ದಿಟ್ಟತನದಿಂದ ಕ್ರಿಸ್ತನ ಸುವಾರ್ತೆ ಸಾರುವುದರಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾನೆ. ವಿಶೇಷವಾಗಿ ಪ್ರಭು ನಮಗೋಸ್ಕರ ಪ್ರಾಣತ್ಯಾಗ ಮಾಡಿದರು ಎಂಬುದನ್ನು ಹೀಗೆ ಹೇಳತ್ತಾನ. ನೀತಿವಂತನಿಗಾಗಿ ಒಬ್ಬನು ತನ್ನ ಪ್ರಾಣಕೊಡುವುದು ವಿರಳ. ಸತ್ಪುರುಷನಿಗಾಗಿ ಒಬ್ಬನು ತನ್ನ ಪ್ರಾಣವನ್ನು ಕೊಟ್ಟರೂ ಕೊಟ್ಟಾನು. ಆದರೆ ನಾವಿನ್ನೂ ಪಾಪಿಗಳಾಗಿರುವಾಗಲೇ ಕ್ರಿಸ್ತಯೇಸು ನಮಗೋಸ್ಕರ ಪ್ರಾಣತ್ಯಾಗ ಮಾಡಿದರು (ರೋಮಾ ೫:೭) ಎಂದು ಸ್ಪಷ್ಟಪಡಿಸುತ್ತಾನೆ. ಪ್ರಭುವಿನಿಂದ ಮಾತ್ರ ಮಾನವಕುಲದ ರಕ್ಷಣೆ ಎಂಬುದನ್ನು ಈ ಮೂಲಕ ದೃಢೀಕರಿಸುತ್ತಾ: ’ಇಹಲೋಕದ ಆಚಾರವಿಚಾರಗಳಿಗೆ ಮಾರುಹೋಗಬೇಡಿ. ಬದಲಿಗೆ, ಮಾನಸಾಂತರಗೊಂಡು ನೂತನ ಜೀವಿಗಳಾಗಿ ಬಾಳಿರಿ. ಆಗ ನೀವು ದೇವರ ಚಿತ್ತಾನುಸಾರ ಯಾವುದು ಉತ್ತಮವಾದುದು, ಯಾವುದು ಉನ್ನತವಾದುದು, ಯಾವುದು ಉತ್ಕೃಷ್ಟವಾದುದು ಎಂಬುದನ್ನು ಅರಿತುಕೊಳ್ಳುವಿರಿ’ (ರೋಮಾ ೧೨:೨) ಎಂದು ಎಚ್ಚರಿಸುತ್ತಾ ಕ್ರಿಸ್ತನಿಗೆ ಮೆಚ್ಚುಗೆಯಾಗುವ ಜೀವನದೆಡೆಗೆ ತಿರುಗಿಕೊಳ್ಳಲು ನಿಮ್ಮ ಪ್ರೀತಿ ನಿಷ್ಕಪಟವಾಗಿರಲಿ. ಕೆಟ್ಟದ್ದನ್ನು ದ್ವೇಷಿಸಿರಿ. ಒಳ್ಳೆಯದನ್ನು ಕೈಬಿಡದಿರಿ. ಸೋದರಭಾವನೆಯಿಂದ ಒಬ್ಬರನ್ನೊಬ್ಬರು ಪ್ರೀತಿಸಿರಿ. ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ. ಪ್ರಭುವಿನ ಸೇವೆಯಲ್ಲಿ ಆಲಸಿಗಳಾಗದೆ ಅತ್ಯಾಸಕ್ತರಾಗಿರಿ. ನಂಬಿಕೆ ನಿರೀಕ್ಷೆಯನ್ನು ಹೊಂದಿರುವ ನೀವು ಉಲ್ಲಾಸದಿಂದಿರಿ. ಸಂಕಟ ಬಂದಾಗ ಸಹನೆಯಿಂದಿರಿ. ಬೇಸರಗೊಳ್ಳದೆ ಪ್ರಾರ್ಥನೆ ಮಾಡಿರಿ. ಕೊರತೆಯಲ್ಲಿರುವ ದೇವಜನರಿಗೆ ನೆರವುನೀಡಿರಿ. ಅತಿಥಿಸತ್ಕಾರದಲ್ಲಿ ತತ್ಪರರಾಗಿರಿ’ ಎಂದು ಕರೆ ನೀಡುತ್ತಾನೆ. ಹಾಗೆಯೇ ತನ್ನ ಬೋಧನೆಯನ್ನು ಮುಂದುವರಿಸುತ್ತ ನಿಮ್ಮನ್ನು ಹಿಂಸಿಸುವವರನ್ನು ಆಶೀರ್ವದಿಸಿರಿ. ಹೌದು, ಶಪಿಸದೆ ಆಶೀರ್ವದಿಸಿರಿ. ಸಂತೋಷ ಪಡುವವರೊಂದಿಗೆ ಸಂತೋಷಪಡಿರಿ; ದುಃಖಿಸುವವರೊಡನೆ ದುಃಖಿಸಿರಿ. ನಿಮ್ಮನಿಮ್ಮಲ್ಲಿ ಸಾಮಸ್ಯವಿರಲಿ, ದೊಡ್ಡಸ್ತಿಕೆಯಿಂದ ವರ್ತಿಸಬೇಡಿ. ದೀನದಲಿತರೊಡನೆ ಗೆಳೆತನ ಬೆಳೆಸಿರಿ. ನೀವೇ ಜಾಣರೆಂದು ಭಾವಿಸದಿರಿ. ಕೇಡಿಗೆ ಪ್ರತಿಯಾಗಿ ಕೇಡನ್ನು ಮಾಡದಿರಿ. ಎಲ್ಲರ ದೃಷ್ಟಿಯಲ್ಲಿ ಯಾವುದು ಮಾನ್ಯವೋ ಅದನ್ನೇ ಮಾಡಿರಿ. ಸಾಧ್ಯವಾದ ಮಟ್ಟಿಗೆ ಸರ್ವರೊಂದಿಗೂ ಸಮಾಧಾನದಿಂದ ಬಾಳಿರಿ. ಪ್ರಿಯರೇ, ಮುಯ್ಯಿಗೆ ಮುಯ್ಯಿ ತೀರಿಸಬೇಡಿ (ರೋಮಾ ೧೨:೯-೧೯) ಎಂದು ಕ್ರಿಸ್ತನ ಅನುಯಾಯಿಗಳಲ್ಲಿ ಇರಬೇಕಾದ ಸದ್ಗುಣಗಳ ಬಗ್ಗೆ ಸವಿವರವಾಗಿ ವಿವರಿಸಿ ದೇವಜನರನ್ನು ಸದಾ ಸನ್ಮಾರ್ಗದಲ್ಲಿ ಸಾಗಲು ಪ್ರೇರಣೆಯನ್ನೀಯುತ ಮುನ್ನೆಡೆಸಿದ ಪ್ರಾಮಾಣಿಕ ಸೇವಕ ಪೌಲ.
ಪೌಲನಂತವರು ವಿಶ್ವದಲ್ಲಿ ಮತ್ತೆ ಹುಟ್ಟುವರೇ ... ಕಂಡಿತವಾಗಿಯೂ ಇಲ್ಲ ಎಂತಲೇ ಹೇಳಬಹುದು ಏಕೆಂದರೆ ದೇವರ ಸೃಷ್ಟಿ ಬಹು ವಿಚಿತ್ರವಾದುದು, ಅಗಾಧವಾದುದು ಅನನ್ಯವಾದುದು. ಪೌಲ ಒಬ್ಬ ವಿಶೇಷ ಹಾಗೂ ವಿಶಿಷ್ಟ ವ್ಯಕ್ತಿ. ಆತನ ಅಂತಿಮ ಕ್ಷಣಗಳ ಬಗ್ಗೆ ಖಚಿತ ಮಾಹಿತಿಗಳಿಲ್ಲ, ಆತ ಸುಮಾರು ಕ್ರಿಸ್ತಶಕ ೬೨-೬೪ರಲ್ಲಿ ರೋಮಿನ ಇಟಲಿಯಲ್ಲಿ ತಾನು ಹಿಂಸಿಸಿ ಪ್ರೀತಿಸಿದ ಪ್ರಭುಕ್ರಿಸ್ತನಿಗಾಗಿ ರಕ್ತಸಾಕ್ಷಿಯಾಗುತ್ತಾನೆ. ಅವನ ಬದುಕು ಕ್ರಿಸ್ತಮಯವಾಗಿತ್ತು ಹಾಗೂ ವಿಶ್ವಾಸದ ಉತ್ತುಂಗ ಶಿಖರವಾಗಿತ್ತು.
¨ ಫಾದರ್ ವಿಜಯ ಕುಮಾರ್ ಪಿ. ಬಳ್ಳಾರಿ






No comments:

Post a Comment