Sunday, 2 June 2019

5 ಜೂನ್ 2019

ಕೆಂಪು/ ಬುಧ / ಸಂತ ಬೋನಿಫಾಸ್ (ಧರ್ಮಾ ಮತ್ತುರ.ಸಾ)  (ಸ್ಮರಣೆ)
1ನೇ  ವಾಚನ  -  ಪ್ರೇ.ಕಾ:  2೦:  28-38
ಕೀರ್ತನೆ - 68: 28-29, 32-33, 34-35
ಶುಭಸಂದೇಶ - ಯೊವಾನ್ನ 17: 11-19

1ನೇ  ವಾಚನ  -  ಪ್ರೇ.ಕಾ:  2೦:  28-38
28 : ನೀವು ನಿಮ್ಮ ವಿಷಯದಲ್ಲಿ ಹಾಗೂ ಪವಿತ್ರಾತ್ಮ ನಿಮ್ಮ ಪಾಲನೆಗೆ ವಹಿಸಿರುವ ಮಂದೆಯ ವಿಷಯದಲ್ಲಿ ಜಾಗರೂಕರಾಗಿರಿ. ಪ್ರಭು ತಮ್ಮ ಸ್ವಂತ ರಕ್ತಸುರಿಸಿ ಸಂಪಾದಿಸಿದ ಧರ್ಮಸಭೆಗೆ ಉತ್ತಮ ಕುರಿಗಾಹಿಗಳಾಗಿರಿ.
29 : ನಾನು ಹೋದ ಬಳಿಕ ಕ್ರೂರವಾದ ತೋಳಗಳು ನಿಮ್ಮ ಮಧ್ಯೆ ನುಗ್ಗುವುವು ಎಂದು ನಾನು ಬಲ್ಲೆ. ಅವು ಮಂದೆಗೆ ಹಾನಿ ಮಾಡದೆ ಬಿಡವು.
30 : ಇದಲ್ಲದೆ ನಿಮ್ಮಲ್ಲೇ ಕೆಲವರು ಎದ್ದು ಭಕ್ತವಿಶ್ವಾಸಿಗಳನ್ನು ತಮ್ಮ ಕಡೆ ಸೆಳೆದುಕೊಳ್ಳಲು ಅಸತ್ಯವಾದವುಗಳನ್ನು ಹೇಳುವರು.
31 : ಆದುದರಿಂದ ಎಚ್ಚರಿಕೆ! ನಾನು ಮೂರು ವರ್ಷಗಳ ಕಾಲ ಹಗಲಿರುಳು ಕಣ್ಣೀರಿಡುತ್ತಾ ಪ್ರತಿಯೊಬ್ಬನಿಗೂ ಬುದ್ಧಿ ಹೇಳಿದ್ದೇನೆಂಬುದನ್ನು ಮರೆಯಬೇಡಿ.
32 : “ಈಗ ನಿಮ್ಮನ್ನು ದೇವರ ಕೈಗೂ, ಅವರ ಅನುಗ್ರಹ ಸಂದೇಶಕ್ಕೂ ಒಪ್ಪಿಸಿಕೊಡುತ್ತೇನೆ. ಅದು ನಿಮ್ಮನ್ನು ಅಭಿವೃದ್ಧಿಗೊಳಿಸಬಲ್ಲದು. ಮಾತ್ರವಲ್ಲ, ಪಾವನಪುರುಷರ ಬಾಧ್ಯತೆಯಲ್ಲಿ ಭಾಗಿಗಳಾಗುವಂತೆ ಮಾಡಬಲ್ಲದು.
33 : ನಾನು ಯಾರ ಬೆಳ್ಳಿ ಬಂಗಾರಕ್ಕೂ ಬಟ್ಟೆಬರೆಗೂ ಆಶೆಪಟ್ಟವನಲ್ಲ.
34 : ನನ್ನ ಹಾಗೂ ನನ್ನ ಸಂಗಡಿಗರ ಅವಶ್ಯಕತೆಗಳನ್ನು ನೀಗಿಸಲು ಈ ಕೈಗಳೇ ದುಡಿದಿವೆಯೆಂಬುದು ನಿಮ್ಮೆಲ್ಲರಿಗೂ ತಿಳಿದಿದೆ.
35 : ಹೀಗೆ ಕಷ್ಟಪಟ್ಟು ದುಡಿದು, ದುರ್ಬಲರಿಗೆ ನೆರವಾಗಬೇಕೆಂದು ನಾನು ನಿಮಗೆ ಹಲವಾರು ವಿಧದಲ್ಲಿ ತೋರಿಸಿಕೊಟ್ಟಿದ್ದೇನೆ. ‘ಕೊಳ್ಳುವ ಕೈಗಿಂತ ಕೊಡುವ ಕೈ ಧನ್ಯವಾದುದು’ ಎಂಬ ಯೇಸುಸ್ವಾಮಿಯ ಮಾತುಗಳನ್ನು ನೆನಪಿನಲ್ಲಿಡಿ.”
36 : ಇಷ್ಟು ಹೇಳಿದ ಮೇಲೆ ಪೌಲನು ಅವರೆಲ್ಲರ ಸಂಗಡ ಮೊಣಕಾಲೂರಿ ಪ್ರಾರ್ಥನೆ ಮಾಡಿದನು.
37 : ಅನಂತರ ಅವರು ಅವನನ್ನು ತಬ್ಬಿಕೊಂಡು ಮುದ್ದಿಟ್ಟು ಬೀಳ್ಕೊಟ್ಟರು. ಅವರ ಕಣ್ಣಲ್ಲಾದರೋ ನೀರು ಧಾರಾಕಾರವಾಗಿ ಹರಿಯುತ್ತಿತ್ತು.
38 : ಇನ್ನೆಂದೂ ನೀವು ನನ್ನ ಮುಖವನ್ನು ಕಾಣಲಾರಿರಿ,’ ಎಂಬ ಅವನ ಮಾತು ಅವರನ್ನು ಅತೀವ ದುಃಖಕ್ಕೆ ಈಡು ಮಾಡಿತ್ತು. ಅವರು ಹಡಗಿನವರೆಗೂ ಹೋಗಿ ಅವನನ್ನು ಬೀಳ್ಕೊಟ್ಟರು.
ಕೀರ್ತನೆ - 68: 28-29, 32-33, 34-35
ಭೂರಾಜ್ಯಗಳೇ, ಸ್ತುತಿಸಿರಿ ದೇವರನು
29 : ಜೆರುಸಲೇಮಿನ ನಿನ್ನ ಮಹಾದೇವಾಲಯದ ಪ್ರಯುಕ್ತ / ಅರಸರು ನಿನಗೆ ಕಾಣಿಕೆಯನು ತಂದೊಪ್ಪಿಸುವುದು ಅತಿಸೂಕ್ತ //
30 : ದಂಡಿಸು ಜಂಡು ಕಾಡುಮೃಗದಂಥಾ ನಾಡನು / ಗದರಿಸು ಹೋರಿ ದನಕರುಗಳಂಥಾ ನಾಡುಗಳನು // ಚದರಿಸು ಕಲಹಕಾಳಗ ಪ್ರಿಯ ಜನಾಂಗಗಳನು / ಅಡ್ಡಬೀಳಿಸು ನಿನಗೆ ಬೆಳ್ಳಿಗಟ್ಟಿ ತಂದವರನು //
32 : ಭೂರಾಜ್ಯಗಳೇ, ಸ್ತುತಿಸಿರಿ ದೇವರನು / ಸಂಕೀರ್ತಿಸಿರಿ ನೀವೆಲ್ಲರು ಪ್ರಭುವನು //
33 : ಆದಿಮೊದಲು ಮೇಘಾರೂಢನಾಗಿರುವನು / ಕೊಂಡಾಡಿರಿ, ಗುಡುಗಿನಂತೆ ಗರ್ಜಿಸುವಾತನನು //
34 : ಸಾರಿರಿ ದೇವರಾ ಶಕ್ತಿಸಾಮಥ್ರ್ಯವನು / ಇಸ್ರಯೇಲಿಗೆ ತೋರಿದಾ ಪ್ರಭಾವವನು / ಗಗನವನು ಆವರಿಸಿರುವಾ ಪ್ರತಿಭೆಯನು //
35 : ಪರಮ ಪವಿತ್ರಾಲಯದಲ್ಲಿಹ ದೇವ ಭಯಭಕುತಿಗೆ ಪಾತ್ರ / ಪ್ರಜೆಗೆ ಪರಾಕ್ರಮವೀವ ಇಸ್ರಯೇಲ ದೇವನಿಗೆ ಸ್ತೋತ್ರ //

ಶುಭಸಂದೇಶ - ಯೊವಾನ್ನ 17: 11-19
11 : ನಾನಿನ್ನು ಲೋಕದಲ್ಲಿ ಇರುವುದಿಲ್ಲ. ಇವರಾದರೋ ಲೋಕದಲ್ಲಿ ಇರುತ್ತಾರೆ. ನಾನು ನಿಮ್ಮ ಬಳಿಗೆ ಬರುತ್ತಿದ್ದೇನೆ. ಪವಿತ್ರ ಪಿತನೇ, ನಾವು ಒಂದಾಗಿರುವಂತೆ ನೀವು ನನಗೆ ಕೊಟ್ಟಿರುವ ಇವರೂ ಒಂದಾಗಿರುವ ಹಾಗೆ ನಿಮ್ಮ ನಾಮದ ಶಕ್ತಿಯಿಂದ ಇವರನ್ನು ಸುರಕ್ಷಿತವಾಗಿರಿಸಿರಿ.
12 : ನಾನು ಇವರೊಡನೆ ಇದ್ದಾಗ ಇವರನ್ನು ಕಾಪಾಡಿದೆನು. ನೀವಿತ್ತ ಇವರನ್ನು ನಿಮ್ಮ ನಾಮದ ಶಕ್ತಿಯಿಂದ ಸುರಕ್ಷಿತವಾಗಿ ನೋಡಿಕೊಂಡು ಬಂದೆನು. ಪವಿತ್ರಗ್ರಂಥದ ಮಾತು ನೆರವೇರುವಂತೆ ವಿನಾಶಕ್ಕೆ ಗುರಿಯಾಗಬೇಕಿದ್ದ ಒಬ್ಬನನ್ನು ಬಿಟ್ಟರೆ, ಇವರಲ್ಲಿ ಬೇರೆ ಯಾರೂ ನಾಶವಾಗಲಿಲ್ಲ.
13 : ಈಗ ನಾನು ನಿಮ್ಮ ಬಳಿಗೆ ಬರುತ್ತಿದ್ದೇನೆ. ನನ್ನ ಆನಂದವು ಅವರ ಹೃದಯದಲ್ಲಿ ತುಂಬಿತುಳುಕುವಂತೆ ಈ ಲೋಕದಲ್ಲಿರುವಾಗಲೇ ಇವುಗಳನ್ನು ಹೇಳುತ್ತಿದ್ದೇನೆ.
14 : ನಿಮ್ಮ ಸಂದೇಶವನ್ನು ಇವರಿಗೆ ತಿಳಿಸಿದ್ದೇನೆ. ನಾನು ಲೋಕಕ್ಕೆ ಸೇರಿದವನಲ್ಲ. ಅಂತೆಯೇ, ಇವರೂ ಲೋಕಕ್ಕೆ ಸೇರಿದವರಲ್ಲ. ಈ ಕಾರಣ, ಲೋಕಕ್ಕೆ ಇವರ ಮೇಲೆ ದ್ವೇಷವಿದೆ.
15 : ಇವರನ್ನು ಲೋಕದಿಂದ ತೆಗೆದುಬಿಡಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತಿಲ್ಲ. ಆದರೆ ಕೇಡಿಗನಿಂದ ಇವರನ್ನು ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ.
16 : ನಾನು ಲೋಕಕ್ಕೆ ಹೇಗೆ ಸೇರಿದವನಲ್ಲವೋ ಹಾಗೆಯೇ ಇವರೂ ಲೋಕಕ್ಕೆ ಸೇರಿದವರಲ್ಲ.
17 : ಇವರನ್ನು ಸತ್ಯಸಂಧರನ್ನಾಗಿಸಿ ನಿಮ್ಮ ಸೇವೆಗೆ ಮೀಸಲಾಗಿಡಿ. ನಿಮ್ಮ ಮಾತೇ ಸತ್ಯ.
18 : ನೀವು ನನ್ನನ್ನು ಲೋಕಕ್ಕೆ ಕಳಿಸಿದಂತೆ ನಾನು ಇವರನ್ನು ಲೋಕಕ್ಕೆ ಕಳಿಸಿದ್ದೇನೆ.
19 : ಸತ್ಯಸಂಧರಾಗಿ ಇವರು ನಿಮ್ಮ ಸೇವೆಗೆ ಮೀಸಲಾಗಬೇಕೆಂದು ನನ್ನನ್ನು ನಾನೇ ಮೀಸಲಾಗಿಸಿಕೊಂಡಿದ್ದೇನೆ.

ಚಿಂತನೆ

ಯೇಸು ಕ್ರಿಸ್ತರು ಪಿತದೇವರನ್ನು ವೈಯಕ್ತಿಕವಾಗಿ ಪ್ರಾರ್ಥಿಸುವುದನ್ನು ಇಂದಿನ ಶುಭಸಂದೇಶದ ವಾಚನದಲ್ಲಿ ಆಲಿಸುತ್ತೇವೆ. ಕ್ರಿಸ್ತರ ಪ್ರಾರ್ಥನೆಯಲ್ಲಿ 4 ಅಂಶಗಳನ್ನು ಕಾಣಬಹುದು; ಒಂದು ಸುರಕ್ಷತೆಯ ಅಂಶ. ಕ್ರಿಸ್ತರು ತನ್ನ ಶಿಷ್ಯರನ್ನು ಕಾಪಾಡಿ ಸಂರಕ್ಷಿಸಲು ಪಿತದೇವರಲ್ಲಿ ಕೇಳಿಕೊಳ್ಳುತ್ತಾರೆ. ಎರಡೆನೇಯದಾಗಿ ಲೋಕದಿಂದ ಶಿಷ್ಯರನ್ನು ಕಾಪಾಡಲು ಪ್ರಾರ್ಥಿಸುತ್ತಾರೆ. ಲೋಕ ಅಂದರೆ ಕೇಡುಗನಿಂದ ಅಥವಾ ಸೈತಾನ್‍ನಿಂದ ಶಿಷ್ಯರನ್ನು ರಕ್ಷಿಸಲು ಪ್ರಾರ್ಥಿಸುತ್ತಾರೆ. ಮೂರನೇಯದಾಗಿ, ಕ್ರಿಸ್ತರು ಪ್ರಾರ್ಥನೆಯಲ್ಲಿ ಸಂತೋಷವನ್ನು ವ್ಯಕ್ತಪಡಿಸುತ್ತಾರೆ. ಏನೇ ಆಗಲಿ ದೇವರು ನಮ್ಮನ್ನು ಕಾಪಾಡುತ್ತಾರೆಂಬ ವಿಶ್ವಾಸ ನಮ್ಮಲ್ಲಿದ್ದರೆ ನಿಜವಾದ ಸಂತೋಷ ನಮಗೆ ಖಂಡಿತವಾಗಿಯೂ ಲಭಿಸುತ್ತದೆ. ನಾಲ್ಕನೇಯದಾಗಿ ಪ್ರಾರ್ಥನೆಯಲ್ಲಿ  ಸತ್ಯತೆಯ ಅಂಶವನ್ನು ಕಾಣಬಹುದು. ದೇವರ ಮಾತುಗಳೇ ಸತ್ಯ. ಶಿಷ್ಯರು ಸತ್ಯದಲ್ಲಿ ಬೆಳೆಯುವಂತವರಾಗಲಿ ಎಂಬುವುದು ಕ್ರಿಸ್ತರ ಅಶಯ. ಕೆಲವೊಮ್ಮೆ ನಮ್ಮ ಸ್ವಾರ್ಥದ ಪರಿಧಿಯಲ್ಲಿ ಸತ್ಯವನ್ನು ವ್ಯಾಖ್ಯಾನಿಸುತ್ತೇವೆ. ನನಗೆ ಒಳೆಯದಾದರೆ ಅದು ಸತ್ಯ, ನನ್ನ ಯೋಚನೆಗಳಿಗೆ ಅದು ಸರಿಹೊಂದಿದರೆ, ನನ್ನ ಜೀವನಕ್ಕೆ ಅದು ನೆರವಾದರೆ ಅದು ಸತ್ಯ.. ಹೀಗೆ ಇಂತಹ ಮಿಥ್ಯದಿಂದ ದೂರವಾಗಿ ಶಿಷ್ಯರು ನಿಜವಾದ ಸತ್ಯದಲ್ಲಿ ಬೆಳೆಯುವಂತೆ ಕ್ರಿಸ್ತರು ಪ್ರಾರ್ಥಿಸುತ್ತಾರೆ. ನಮ್ಮ ಪ್ರಾರ್ಥನೆಯೂ ಸಹ ಈ ಎಲ್ಲಾ ಅಂಶಗಳನ್ನು ಒಳಗೊಂಡಿರಲ್ಲಿ ಎಂದು ಪ್ರಾರ್ಥಿಸೋಣ.

No comments:

Post a Comment