Sunday, 2 June 2019

6 ಜೂನ್ 2೦19


ಬಿಳಿ/  ಗುರು/  ಪಾಸ್ಖ ಕಾಲದ ಏಳನೇ ವಾರ
1ನೇ ವಾಚನ -  ಪ್ರೇ.ಕಾ: 22: 3೦; 23: 6-11                   
ಕೀರ್ತನೆ  -  16:  1-2,  5,  7-11               
ಶುಭಸಂದೇಶ - ಯೊವಾನ್ನ 17: 2೦-26 

30 : ಯೆಹೂದ್ಯರು ಪೌಲನ ವಿರುದ್ಧ ತಂದ ಆಪಾದನೆ ಏನೆಂದು ಖಚಿತವಾಗಿ ತಿಳಿದುಕೊಳ್ಳಲು ಸಹಸ್ರಾಧಿಪತಿ ಅಪೇಕ್ಷಿಸಿದನು. ಮಾರನೆಯ ದಿನ ಪೌಲನನ್ನು ಬಿಡುಗಡೆ ಮಾಡಿದನು. ಮುಖ್ಯಯಾಜಕರು ಮತ್ತು ನ್ಯಾಯಸಭೆಯ ಪ್ರಮುಖರು ಕೂಡುವಂತೆ ಆಜ್ಞಾಪಿಸಿದನು. ಪೌಲನನ್ನು ಕರೆದುಕೊಂಡು ಹೋಗಿ ಆ ಸಭೆಯ ಮುಂದೆ ನಿಲ್ಲಿಸಿದನು.
 : ಸಭೆ ಸೇರಿದ್ದವರಲ್ಲಿ ಕೆಲವರು ಸದ್ದುಕಾಯ ಪಂಥದವರು ಮತ್ತೆ ಕೆಲವರು ಫರಿಸಾಯ ಪಂಥದವರು. ಇದನ್ನು ಗಮನಿಸಿದ ಪೌಲನು, “ಸಹೋದರರೇ, ನಾನೊಬ್ಬ ಫರಿಸಾಯ, ಫರಿಸಾಯರ ವಂಶಜ. ಸತ್ತವರು ಪುನರುತ್ಥಾನ ಹೊಂದುತ್ತಾರೆ ಎಂಬ ನಮ್ಮ ನಿರೀಕ್ಷೆಯ ನಿಮಿತ್ತ ನಾನು ಇಲ್ಲಿ ವಿಚಾರಣೆಗೆ ಗುರಿಯಾಗಿದ್ದೇನೆ,” ಎಂದು ಧ್ವನಿಯೆತ್ತಿ ಸಭೆಯಲ್ಲಿ ಹೇಳಿದನು.
7 : ಅವನು ಹೀಗೆ ಹೇಳಿದಾಕ್ಷಣವೇ, ಫರಿಸಾಯರ ಮತ್ತು ಸದ್ದುಕಾಯರ ನಡುವೆ ವಾಗ್ವಾದ ಉಂಟಾಯಿತು. ಸಭೆಯಲ್ಲಿ ಭಿನ್ನಭೇದವುಂಟಾಯಿತು.
8 : ಏಕೆಂದರೆ, ಸದ್ದುಕಾಯರು ಪುನರುತ್ಥಾನವಾಗಲಿ, ದೇವದೂತರಾಗಲಿ, ದೇಹರಹಿತ ಆತ್ಮವಾಗಲಿ ಇದೆಯೆಂದು ಒಪ್ಪುವುದಿಲ್ಲ. ಆದರೆ ಫರಿಸಾಯರು ಇವೆಲ್ಲಾ ಇವೆಯೆಂದು ನಂಬುತ್ತಾರೆ.
9 : ಆಗ ಅಲ್ಲಿ ದೊಡ್ಡ ಕೂಗಾಟವೆದ್ದಿತು. ಫರಿಸಾಯ ಪಂಥಕ್ಕೆ ಸೇರಿದ ಕೆಲವು ಧರ್ಮಶಾಸ್ತ್ರಿಗಳು ಎದ್ದು ನಿಂತು, “ಈ ಮನುಷ್ಯನಲ್ಲಿ ನಮಗೆ ಯಾವ ದೋಷವೂ ಕಾಣುವುದಿಲ್ಲ. ಒಂದು ಆತ್ಮವೋ ಅಥವಾ ಒಬ್ಬ ದೂತನೋ ಇವನೊಡನೆ ಮಾತನಾಡಿದ್ದರೂ ಮಾತನಾಡಿರಬಹುದು,” ಎಂದು ವಾದಿಸಿದರು.
10 : ಈ ವಾಗ್ವಾದ ವಿಕೋಪಕ್ಕೆ ಹೋದುದರಿಂದ ಪೌಲನನ್ನು ಅವರು ಖಂಡತುಂಡಾಗಿಸಬಹುದೆಂದು ಸಹಸ್ರಾಧಿಪತಿ ಹೆದರಿದನು. ಅವನು ಸೈನಿಕರನ್ನು ಕಳುಹಿಸಿ ಪೌಲನನ್ನು ಸಭೆಯ ಮಧ್ಯದಿಂದ ಎತ್ತಿಕೊಂಡು ಕೋಟೆಗೆ ತರುವಂತೆ ಆಜ್ಞಾಪಿಸಿದನು.
11 : ಪ್ರಭು ಅದೇ ರಾತ್ರಿ ಪೌಲನಿಗೆ ಹತ್ತಿರದಲ್ಲೇ ಕಾಣಿಸಿಕೊಂಡು, “ಧೈರ್ಯದಿಂದಿರು, ನೀನು ಜೆರುಸಲೇಮಿನಲ್ಲಿ ನನಗೆ ಸಾಕ್ಷಿಕೊಟ್ಟಂತೆ ರೋಮಿನಲ್ಲೂ ನನಗೆ ಸಾಕ್ಷಿಕೊಡಬೇಕಾಗಿದೆ,” ಎಂದರು.

ಕೀರ್ತನೆ  -  16:  1-2,  5,  7-11  
ನೀಡು ದೇವಾ ರಕ್ಷಣೆಯನು / ನಾ ನಿನಗೆ ಶರಣಾಗತನು //  
1 : ನೀಡು ದೇವಾ ರಕ್ಷಣೆಯನು / ನಾ ನಿನಗೆ ಶರಣಾಗತನು //
2 : “ನೀನೇ ನನ್ನೊಡೆಯ”ನೆಂದು ನಾ ನುಡಿದೆ / ನಿನ್ನ ಹೊರತು ನನಗಿಲ್ಲ ಒಳಿತು” ಎಂದೆ /
3 : ಸಂತರು ನಾಡಿಗೆ ತಿಲಕವು / ಅವರಲ್ಲಿದೆ ಎನಗೆ ಒಲವು //
4 : ಅನ್ಯದೇವರನ್ನು ಬಯಸುವವರನ್ನು ಕಾದಿದೆ ಕಠಿಣ ಕಷ್ಟ / ಅವರಂತೆ ರಕ್ತಪಾನತರ್ಪಣೆ ಮಾಡಲೆನಗಿಲ್ಲ ಇಷ್ಟ / ಆ ದೇವರುಗಳ ನಾಮೋಚ್ಚಾರಣೆ ನನ್ನ ತುಟಿಗೆ ಅನಿಷ್ಟ //
5 : ನನ್ನ ಸ್ವತ್ತೂ ಸ್ವಾಸ್ತ್ಯವೂ ನೀನೇ / ನಿನ್ನ ಕೈಯಲ್ಲಿದೆ ಪ್ರಭು, ನನ್ನ ವಿಮೆ //
6 : ನನ್ನ ಪಾಲಿಗೆ ಬಂದುದು ರಮಣೀಯವಾದುದು / ನನಗದೆ ಪರಮಾನಂದ ದಾಯಕವಾದುದು //
7 : ಪ್ರಭುವಿಗೆನ್ನ ಧನ್ಯವಾದ - ಆತನೇ ನನಗೆ ಮಾರ್ಗದರ್ಶಕ / ಅಂಧಕಾರದೊಳೂ ನನ್ನ ಮನಸ್ಸಾಕ್ಷಿಯೆ ನನಗೆ ಬೋಧಕ //
8 : ಇರಿಸಿಕೊಳ್ಳುವೆ ಪ್ರಭುವನು ಸತತ ನನ್ನೆದುರಿಗೆ / ಆತನಿರಲು ಬಲಕ್ಕೆ ನನಗೆಲ್ಲಿಯದು ಹೆದರಿಕೆ? //
9 : ಇದು ಕಾರಣ ಹರ್ಷದಿಂದಿದೆ ಎನ್ನಯ ಹೃದಯ / ಆನಂದಗೊಂಡಿದೆ ಮನ, ಸುರಕ್ಷಿತವಿದೆ ಕಾಯ //
10 : ಏಕೆನೆ ದೂಡುವುದಿಲ್ಲ ನೀನು ಎನ್ನನು ಅಧೋಲೋಕಕೆ / ಬಿಟ್ಟುಕೊಡುವುದಿಲ್ಲ ನಿನ್ನ ಈ ಭಕ್ತನನು ಪಾತಾಳಕೆ //
11 : ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು / ನಿನ್ನ ಸನ್ನಿಧಿ ಕೊಡುವುದು ಪರಮಾನಂದವನು / ನಿನ್ನ ಬಲಗೈ ನೀಡುವುದು ನಿತ್ಯ ಭಾಗ್ಯವನು //
ಶುಭಸಂದೇಶ - ಯೊವಾನ್ನ 172೦-26 
20 : “ಇವರಿಗಾಗಿ ಮಾತ್ರವಲ್ಲ, ಇವರ ಮಾತನ್ನು ಕೇಳಿ ನನ್ನಲ್ಲಿ ವಿಶ್ವಾಸವಿಡುವವರಿಗಾಗಿಯೂ ಪ್ರಾರ್ಥಿಸುತ್ತೇನೆ.
21 : ಪಿತನೇ, ಇವರೆಲ್ಲಾ ಒಂದಾಗಿರಲಿ. ನೀವು ನನ್ನಲ್ಲಿ, ನಾನು ನಿಮ್ಮಲ್ಲಿ ಇರುವಂತೆಯೇ ಇವರೂ ನಮ್ಮಲ್ಲಿ ಒಂದಾಗಿರಲಿ. ಹೀಗೆ, ನನ್ನನ್ನು ಕಳುಹಿಸಿದವರು ನೀವೇ ಎಂದು ಲೋಕವು ವಿಶ್ವಾಸಿಸುವಂತಾಗಲಿ.
22 : ನಾವು ಒಂದಾಗಿರುವಂತೆ ಇವರೂ ಒಂದಾಗಿರಲೆಂದು ನೀವು ನನಗಿತ್ತ ಮಹಿಮೆಯನ್ನು ನಾನು ಇವರಿಗೆ ಕೊಟ್ಟಿದ್ದೇನೆ.
23 : ನಾನು ಇವರಲ್ಲಿಯೂ ನೀವು ನನ್ನಲ್ಲಿಯೂ ಇದ್ದು, ಇವರ ಐಕ್ಯಮತ್ಯವು ಪೂರ್ಣಸಿದ್ಧಿಗೆ ಬರಲಿ. ಆಗ ನೀವೇ ನನ್ನನ್ನು ಕಳುಹಿಸಿರುವಿರಿ ಎಂದೂ ನನ್ನನ್ನು ಪ್ರೀತಿಸಿದಂತೆಯೇ ಇವರನ್ನು ನೀವು ಪ್ರೀತಿಸಿರುವಿರಿ ಎಂದೂ ಲೋಕಕ್ಕೆ ಮನವರಿಕೆ ಆಗುವುದು.
24 : ಪಿತನೇ, ಇವರನ್ನು ನೀವು ನನಗೆ ಕೊಟ್ಟಿರುವಿರಿ. ಜಗತ್ತು ಉಂಟಾಗುವ ಮೊದಲೇ ನೀವು ನನ್ನನ್ನು ಪ್ರೀತಿಸಿ ನನಗಿತ್ತ ಮಹಿಮೆಯನ್ನು ಇವರೂ ಕಾಣುವಂತೆ ನಾನಿದ್ದಲ್ಲಿ ಇವರೂ ಇರಬೇಕೆಂದು ಆಶಿಸುತ್ತೇನೆ.
25 : ನೀತಿಸ್ವರೂಪಿಯಾದ ಪಿತನೇ, ಲೋಕವು ನಿಮ್ಮನ್ನು ಅರಿತುಕೊಳ್ಳಲಿಲ್ಲ. ಆದರೆ ನಾನು ಅರಿತಿದ್ದೇನೆ. ನನ್ನನ್ನು ಕಳುಹಿಸಿದವರು ನೀವೆಂದು ಇವರು ತಿಳಿದುಕೊಂಡಿದ್ದಾರೆ.
26 : ನಿಮ್ಮ ನಾಮವನ್ನು ನಾನು ಇವರಿಗೆ ತಿಳಿಯಪಡಿಸಿದ್ದೇನೆ; ಇನ್ನೂ ತಿಳಿಯಪಡಿಸುತ್ತೇನೆ. ಹೀಗೆ ನೀವು ನನ್ನಲ್ಲಿಟ್ಟ ಪ್ರೀತಿಯು ಇವರಲ್ಲಿಯೂ ಇರುವಂತಾಗುವುದು; ನಾನೂ ಅವರಲ್ಲಿ ಇರುವಂತಾಗುವುದು,” ಎಂದು ಹೇಳಿದರು.

ಚಿಂತನೆ
ಐಕ್ಯತೆ ಕ್ರೈಸ್ತ ಬಾಳಿನ ಶ್ರೇಷ್ಠತೆ ಎಂಬುವುದು ಕ್ರೈಸ್ತ ಜೀವನದ ಮೂಲವಾಗಿದೆ. ಐಕ್ಯತೆ ಎಲ್ಲಿರುತ್ತದೇ ಅಲ್ಲಿ ಪವಿತ್ರಾತ್ಮರ ಸಪ್ತವರಗಳು ಸದಾ ನೆಲೆಸಿರುತ್ತದೆ. ನೀವು ನನ್ನಲ್ಲಿ ನೆಲೆಯೊಂದಿರಿ ಆಗ ನಾನು ನಿಮ್ಮಲ್ಲಿ ನೆಲೆಗೊಳ್ಳುವೆನು ಎಂದು ಪ್ರಭು ಯೇಸು ಐಕ್ಯತೆಯ ಪಾಠವನ್ನು ನಮಗೆ ಕಲಿಸುತ್ತಿದ್ದಾರೆ. ಒಂದು ಕುಟುಂಬ, ಒಂದು ಸಮುದಾಯ ಮತ್ತು ಸಂಸ್ಥೆ ಅಭಿವೃದ್ಧಿ ಹೊಂದಿದೆ ಎಂದಾದರೆ ಅದಕ್ಕೆ ಮೂಲ ಕಾರಣ ಐಕ್ಯತೆ. ಈ ಐಕ್ಯತೆಯು ನಮ್ಮಲ್ಲಿದ್ದರೆ ನಮ್ಮ ಬದುಕು ಪ್ರೀತಿಯ ನಂದನವನವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಎಷ್ಟೂ ಸಮಸ್ಯೆಗಳಿರಲಿ ಅವುಗಳನ್ನು ಬದಿಗಿಟ್ಟು ಐಕ್ಯಮತ್ಯದಿಂದ ಬಾಳುವ ಮನಸ್ಸು ನಮ್ಮದಾಗಬೇಕು. ದೇವರು ನಮ್ಮನ್ನು ಪ್ರೀತಿಸುತ್ತಿದ್ದಾರೆಂಬುವುದು ನಮಗೆ ಅವರ ಐಕ್ಯತೆಯನ್ನು ನೋಡಿ ತಿಳಿಯುತ್ತದೆ.  ಏಕೆಂದರೆ ಆ ಐಕ್ಯತೆಯು ಪ್ರೀತಿಯ ಮೂಲಕ ಕಟ್ಟಲ್ಪಟ್ಟ ಶಾಂತಿಯ ಸೌಧ. ಆದ್ದರಿಂದ ಕ್ರಿಸ್ತ ತೋರಿದ ಐಕ್ಯತೆಯು ನಮ್ಮಲ್ಲಿ ನೆಲೆಯಾಗಲು ನಾವೆಲ್ಲರೂ ತತ್ವ ಧರ್ಮ ಇವೆಲ್ಲವುಗಳನ್ನು ಮೀರಿದ ಮಾನವೀಯತೆ ದೊಡ್ಡದು ಎಂಬುದನ್ನು ಅರಿತರೆ ನಮ್ಮ ಬಾಳು ಸಾರ್ಥಕತೆಯನ್ನು ಪಡೆದಂತೆ.

No comments:

Post a Comment