ಬಿಳಿ/ ಶನಿ/ಪಾಸ್ಖ ಕಾಲದ
ಏಳನೇ ವಾರ
1ವಾಚನ: ಪ್ರೇ.ಕಾ: 28:
16-2೦, 3೦-31
ಕೀರ್ತನೆ - 11: 4-5, 7
ಶುಭಸಂದೇಶ - ಯೊವಾನ್ನ 21: 2೦-25
ಐಚ್ಛಿಕ ಸ್ಮರಣೆ - ಪುನೀತ ಮರಿಯ ತೆರೇಸ (ಕ) 1ವಾಚನ: ಪ್ರೇ.ಕಾ: 28: 16-2೦, 3೦-31
16 : ನಾವು ರೋಮ್ ನಗರಕ್ಕೆ ಆಗಮಿಸಿದ ಮೇಲೆ, ತನ್ನನ್ನು ಕಾಯುತ್ತಿದ್ದ ಒಬ್ಬ ಸೈನಿಕನೊಂದಿಗೆ ಪ್ರತ್ಯೇಕವಾಗಿರಲು ಪೌಲನಿಗೆ ಅಪ್ಪಣೆ ಕೊಡಲಾಯಿತು.
17 : ಮೂರು ದಿನಗಳ ನಂತರ ಪೌಲನು ಸ್ಥಳೀಯ ಯೆಹೂದ್ಯ ಮುಖಂಡರು ತನ್ನ ಬಳಿಗೆ ಬರುವಂತೆ ಹೇಳಿಕಳುಹಿಸಿದನು. ಅವರು ಬಂದಾಗ, “ನನ್ನ ಸೋದರ ಇಸ್ರಯೇಲರೇ, ನಾನು ನಮ್ಮ ಜನರಿಗೆ ವಿರೋಧವಾಗಿಯಾಗಲಿ, ನಮ್ಮ ಪೂರ್ವಜರಿಂದ ಬಂದ ಸಂಪ್ರದಾಯಗಳಿಗೆ ವಿರೋಧವಾಗಿಯಾಗಲಿ, ಏನನ್ನೂ ಮಾಡಿಲ್ಲ; ಆದರೂ ಜೆರುಸಲೇಮಿನಲ್ಲಿ ನನ್ನನ್ನು ಕೈದಿಯನ್ನಾಗಿಸಿ ರೋಮನರ ಕೈಗೆ ಒಪ್ಪಿಸಲಾಯಿತು.
18 : ಇವರು ನನ್ನನ್ನು ವಿಚಾರಣೆಗೆ ಒಳಪಡಿಸಿದರು. ಮರಣ ದಂಡನೆಗೆ ಗುರಿಮಾಡುವಂಥ ಅಪರಾಧ ಏನನ್ನೂ ನನ್ನಲ್ಲಿ ಕಾಣಲಿಲ್ಲ. ಈ ಕಾರಣ ನನ್ನನ್ನು ಬಿಡುಗಡೆ ಮಾಡಬೇಕೆಂದಿದ್ದರು.
19 : ಆದರೆ ಯೆಹೂದ್ಯರು ಇದನ್ನು ಪ್ರತಿಭಟಿಸಿದರು. ಆಗ ನಾನು ಚಕ್ರವರ್ತಿಗೇ ಅಪೀಲುಮಾಡಬೇಕಾಯಿತು. ನನ್ನ ಸ್ವದೇಶಿಯರ ಮೇಲೆ ದೋಷಾರೋಪಣೆ ಮಾಡಬೇಕೆಂದು ನಾನು ಹಾಗೆ ಮಾಡಲಿಲ್ಲ.
20 : ಈ ಕಾರಣದಿಂದಲೇ ನಿಮ್ಮನ್ನು ನೋಡಿ ಮಾತನಾಡಲು ಬಯಸಿದೆ. ಇಸ್ರಯೇಲ್ ಜನತೆ ಯಾರ ನಿರೀಕ್ಷೆಯಲ್ಲಿ ಇದೆಯೋ ಅವರ ನಿಮಿತ್ತವೇ ನಾನು ಹೀಗೆ ಸರಪಣಿಗಳಿಂದ ಬಂಧಿತನಾಗಿದ್ದೇನೆ,” ಎಂದನು.
30 : ಪೌಲನು ತಾನು ಬಾಡಿಗೆಗೆ ತೆಗೆದುಕೊಂಡಿದ್ದ ಮನೆಯಲ್ಲಿ ಎರಡು ವರ್ಷಗಳವರೆಗೆ ವಾಸವಾಗಿದ್ದನು. ತನ್ನನ್ನು ನೋಡಲು ಬಂದವರನ್ನೆಲ್ಲಾ ಆದರದಿಂದ ಬರಮಾಡಿಕೊಳ್ಳುತ್ತಿದ್ದನು.
31 : ಭಯಭೀತಿಯಿಲ್ಲದೆ ಹಾಗೂ ಅಡ್ಡಿಆತಂಕವಿಲ್ಲದೆ ದೇವರ ಸಾಮ್ರಾಜ್ಯವನ್ನು ಕುರಿತು ಪ್ರಬೋಧಿಸುತ್ತಿದ್ದನು; ಸ್ವಾಮಿ ಯೇಸುಕ್ರಿಸ್ತರ ವಿಷಯವಾಗಿ ಉಪದೇಶಿಸುತ್ತಿದ್ದನು.
ಕೀರ್ತನೆ - 11: 4-5, 7
1 : ನಾನು ಆಶ್ರಯಿಸಿಕೊಂಡಿರಲು ಪ್ರಭುವನು / ನೀವು ಹೇಳುವುದೆಂತು ನನಗೀ ಮಾತನು: //
2 : “ನೇರ ಮನಸ್ಕರನು ಕೊಲ್ಲಲು ಇರುಳೊಳು | ಬಿಲ್ಲು ಬಗ್ಗಿಸಿಹರಿದೋ ಆ ದುರುಳರು | ಎದೆಗೆ ಬಾಣವನು ಹೂಡಿ ನಿಂತಿರುವರು” ||
3 : “ಓಡಿರಿ, ಪಕ್ಷಿಪಾರಿವಾಳಗಳಂತೆ ಗಿರಿಶಿಖರಗಳಿಗೆ | ಅಸ್ತಿವಾರವೆ ಕಿತ್ತಿರಲು, ಗತಿಯೆನಿತು ಸತ್ಯವಂತರಿಗೆ?” ||
4 : ಪ್ರಭು ಪ್ರಸನ್ನವಿರುವನು ಪವಿತ್ರಾಲಯದಲಿ / ಸ್ಥಾಪಿಸಿಹನು ಸಿಂಹಾಸನವನು ಪರದಲಿ / ನರಮಾನವರನು ನೋಡುತಿಹನು ನೇತ್ರಗಳಲಿ / ಪರೀಕ್ಷಿಸುತಿಹನು ಅವರನು ಸೂಕ್ಷ್ಮ ರೀತಿಯಲಿ //
5 : ಪರೀಕ್ಷಿಸುವನು ಪ್ರಭು ಸಜ್ಜನ ದುರ್ಜನರನು / ದ್ವೇಷಿಸುವನು ಮನಸಾರೆ ಹಿಂಸಾತ್ಮಕರನು //
6 : ಅಗ್ನಿಗಂಧಕಗಳನು ದುರುಳರ ಮೇಲೆ ಮಳೆಗರೆಯಲಿ / ಉರಿಗಾಳಿಯೆ ಅವರ ಪಾಲಿನ ಧೂಮಪಾನವಾಗಲಿ //
7 : ಸತ್ಯಸ್ವರೂಪನಾದ ಪ್ರಭು ಸತ್ಯ ಪ್ರಿಯನು / ಸತ್ಪುರುಷನು ಸೇರುವನು ಆತನ ಸನ್ನಿಧಿಯನು //
ಶುಭಸಂದೇಶ - ಯೊವಾನ್ನ 21: 2೦-25
20 : ಪೇತ್ರನು ಹಿಂದಿರುಗಿ ನೋಡಿದಾಗ, ಯೇಸುವಿನ ಆಪ್ತನಾಗಿದ್ದ ಶಿಷ್ಯನು ಹಿಂದೆ ಬರುವುದನ್ನು ಕಂಡನು. (ಭೋಜನದ ಸಮಯದಲ್ಲಿ ಯೇಸುವಿನ ಪಕ್ಕದಲ್ಲೇ ಒರಗಿ, “ಪ್ರಭುವೇ, ನಿಮ್ಮನ್ನು ಹಿಡಿದುಕೊಡುವಂಥ ಸ್ವಾಮಿದ್ರೋಹಿ ಯಾರು?” ಎಂದು ಕೇಳಿದವನೇ ಅವನು.)
21 : ಇವನನ್ನು ಕಂಡು ಪೇತ್ರನು, “ಪ್ರಭೂ, ಇವನ ವಿಷಯವೇನು?” ಎಂದು ಯೇಸುವನ್ನು ಕೇಳಿದನು.
22 : ಅದಕ್ಕೆ ಯೇಸು, “ನಾನು ಬರುವ ತನಕ ಅವನು ಹಾಗೆಯೇ ಇರಬೇಕೆಂಬುದು ನನ್ನ ಬಯಕೆ; ಆದರೆ ಅದರಿಂದ ನಿನಗೇನಾಗಬೇಕು? ನೀನು ಅಂತೂ ನನ್ನನ್ನು ಹಿಂಬಾಲಿಸಿ ಬಾ,” ಎಂದರು.
23 : ಇದರಿಂದಾಗಿ ಆ ಶಿಷ್ಯನಿಗೆ ಸಾವಿಲ್ಲವೆಂಬ ವದಂತಿ ಸೋದರರಲ್ಲಿ ಹಬ್ಬಿತು. ಯೇಸು, ‘ನಾನು ಬರುವ ತನಕ ಅವನು ಹಾಗೆಯೇ ಇರಬೇಕೆಂಬುದು ನನ್ನ ಬಯಕೆಯಾದರೆ ಅದರಿಂದ ನಿನಗೇನಾಗಬೇಕು?’ ಎಂದು ಹೇಳಿದರೇ ಹೊರತು ಅವನಿಗೆ ಸಾವಿಲ್ಲವೆಂದು ಹೇಳಲಿಲ್ಲ.
24 : ಇವುಗಳಿಗೆ ಆ ಶಿಷ್ಯನೇ ಸಾಕ್ಷಿ. ಇದನ್ನೆಲ್ಲಾ ಬರೆದಿಟ್ಟವನೂ ಅವನೇ. ಅವನ ಸಾಕ್ಷಿ ಸತ್ಯವಾದುದೆಂದು ನಾವು ಬಲ್ಲೆವು.
25 : ಯೇಸು ಮಾಡಿದ ಕಾರ್ಯಗಳು ಇನ್ನೂ ಎಷ್ಟೋ ಇವೆ. ಅವನ್ನೆಲ್ಲಾ ಒಂದೊಂದಾಗಿ ಬರೆಯಲು ಹೋದರೆ, ಬರೆಯಬೇಕಾದ ಗ್ರಂಥಗಳನ್ನು ಬಹುಶಃ ಲೋಕವೇ ಹಿಡಿಸಲಾರದೆಂದು ನೆನಸುತ್ತೇನೆ.
ಚಿಂತನೆ
ನೀನು ನನ್ನನ್ನು ಹಿಂಬಾಲಿಸು
ರೋಮಾಪುರದಲ್ಲಿ ಪೌಲರು ಯಾವ ವಿಧದಲ್ಲಿ ತಮ್ಮ ಸಮಯವನ್ನು ಕಳೆದರು ಎಂಬುದನ್ನು ತಿಳಿಸುತ್ತದೆ ಇಂದಿನ ವಾಚನ. ಪೌಲರು ತಮ್ಮ ಮರಣದ ಗಳಿಗೆಯಲ್ಲಿಯೂ ದೇವರ ಸಾಮ್ರಾಜ್ಯದ ಸುವಾರ್ತೆಯನ್ನು ಸಾರುವ ಕೆಲಸವನ್ನು ಕೈಬಿಡಲಿಲ್ಲ. ನಮ್ಮ ಜೀವನವನ್ನು ಪರಿಶೀಲಿಸಿ ನೋಡಿದರೆ ಸಿಗುವುದಾದರೆ ಏನು?
ಸಂತ ಯೊವಾನ್ನನ ಅನುಭವ, ಯೇಸುವಿನಲ್ಲಿಟ್ಟಿದ್ದ ಪ್ರೀತಿ, ಗೌರವವು ಅಪಾರವಾದುದು. ಇಂತಹ ಪ್ರೀತಿ, ಗೌರವವನ್ನು ಅರಿತ ನಾವು ದೇವರ ಮೇಲೆ ಇಡುವ ಪ್ರೀತಿಯು ಯಾವ ವಿಧವಾದುದು? ನಮ್ಮ ಜೀವನದಲ್ಲಿ ಅವರನ್ನು ಅನುಭವಿಸಿದ್ದೇವೆಯೋ? ಅವರ ನಿಯಮದ ಪ್ರಕಾರ ನಮ್ಮ ಜೀವನವನ್ನು ಅಳವಡಿಸಿದ್ದೇವೆಯೋ? ಅವರ ನಿಯಮದ ಪ್ರಕಾರ ನಮ್ಮ ಜೀವನವನ್ನು ಅಳವಡಿಸಿದ್ದೇವೆಯೋ? ಆದರೆ ಸಂತ ಯೊವಾನ್ನರು ನಮ್ಮ ಇಡೀ ಜೀವನ ಮತ್ತು ಪ್ರಾಣದ ಮುಖಾಂತರ ಯೇಸುವನ್ನು ಹಿಂಬಾಲಿಸಿದರೆಂಬುವುದನ್ನು ಮನದಟ್ಟು ಮಾಡುವಂತೆ ತಿಳಿಸುತ್ತಾರೆ. ನಾವು ಕೊಡುವ ಉತ್ತರವಾದರೂ ಏನು?
ನಾವು ದೇವರನ್ನು ಹಿಂಬಾಲಿಸುತ್ತೇವೆ ಎಂಬುದು ನಮ್ಮ ಬರೀ ಮಾತಿನಿಂದ ಕೂಡಿರದೆ ನಮ್ಮ ನಡತೆಯಿಂದ, ಒಂದು ಉತ್ತಮವಾದ ಜೀವನದ ಮುಖಾಂತರ ತೋರಿಸಬೇಕು. ಆಗ ಮಾತ್ರ ನಾವು ದೇವರನ್ನು ಹಿಂಬಾಲಿಸುವವರಾಗುತ್ತೇವೆ.
ಸಂತ ಪೌಲನು ಹೇಗೆ ನಮ್ಮ ಸಮಯವನ್ನು ಯೇಸುವಿನ ಸುವಾರ್ತೆಯನ್ನು ಸಾರಲು ಬಳಸಿದರೋ ಹಾಗೆ ನಾವು ಸಹ ನಮ್ಮ ಕೈಲಾದಷ್ಟು ಮಟ್ಟಿಗೆ ಅವರ ಸುವಾರ್ತೆಯನ್ನು ಸಾರಬೇಕು. ಆ ಸುವಾರ್ತೆಯನ್ನು ಸಾರಲು ನಾವು ಬೇರೆ ಬೇರೆ ಊರುಗಳಿಗೆ ಹೋಗಬೇಕಾಗಿಲ್ಲ. ನಾವು ಜೀವಿಸುವ ವಾತಾವರಣ, ಪರಿಸರ ಮತ್ತು ನಾವು ವಾಸಿಸುವ ಮನೆಯಲ್ಲಿ ಸಾರಲು ಮೊದಲು ಪ್ರಾರಂಭಿಸಬೇಕು. ಹೀಗೆ ಪ್ರತಿ ಒಬ್ಬರು ಸಾರಿದರೆ ನಾವು ನಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳುತ್ತೇವೆ.
ಹೋಗಿ ಸಾರಿರಿ ಕ್ರಿಸ್ತ ವಾಣಿಯ ನಿಮ್ಮ ಸುತ್ತಮುತ್ತ ಇರುವ ಜನತೆಗೆ
ಕೃಪೆ : ಜೀವವಾಕ್ಯ
No comments:
Post a Comment