Sunday, 7 July 2019

ಸಾಧಾರಣ ಕಾಲದ ಹದಿನಾಲ್ಕನೇ ವಾರ ಸೋಮವಾರ

ಹಸಿರು /ಸೋಮ/ ಸಾಧಾರಣ ಕಾಲದಹದಿ ನಾಲ್ಕನೇ ವಾರ 
1ನೇ ವಾಚನ - ಆದಿ 28: 1೦-22 
ಕೀರ್ತನೆ - 91: 1-4, 14-15 
ಶುಭಸಂದೇಶ - ಮತ್ತಾಯ 9: 18-26

1ನೇ ವಾಚನ - ಆದಿ 28: 1೦-22 
10 : ಯಕೋಬನು ಖಾರಾನಿಗೆ ಹೋಗಬೇಕೆಂದು ಬೇರ್ಷೆಬದಿಂದ ಹೊರಟನು.
11 : ಪ್ರಯಾಣ ಮಾಡುತ್ತಾ ಅವನು ಒಂದು ಸ್ಥಳಕ್ಕೆ ಬಂದು ಸೇರಿದನು. ಹೊತ್ತು ಮುಳುಗಿದ್ದ ಕಾರಣ ಆ ರಾತ್ರಿ ಅಲ್ಲಿಯೇ ಇಳಿದುಕೊಂಡನು. ಅಲ್ಲಿದ್ದ ಕಲ್ಲುಗಳಲ್ಲಿ ಒಂದು ಕಲ್ಲನ್ನು ತಲೆದಿಂಬಾಗಿ ಇಟ್ಟುಕೊಂಡು ಆ ಸ್ಥಳದಲ್ಲೇ ಮಲಗಿಕೊಂಡನು.
12 : ಆ ರಾತ್ರಿ ಅವನಿಗೆ ಒಂದು ಕನಸು ಬಿತ್ತು. ಆ ಕನಸಿನಲ್ಲಿ ಒಂದು ನಿಚ್ಚಣಿಗೆ ನೆಲದ ಮೇಲೆ ನಿಂತಿತ್ತು; ಅದರ ತುದಿ ಆಕಾಶವನ್ನು ಮುಟ್ಟಿತ್ತು. ಅದರ ಮೇಲೆ ದೇವದೂತರು ಹತ್ತುತ್ತಾ ಇಳಿಯುತ್ತಾ ಇದ್ದರು.
13 : ಇದಲ್ಲದೆ, ಸರ್ವೇಶ್ವರಸ್ವಾಮಿ ಅವನ ಬಳಿಯಲ್ಲೇ ನಿಂತು, “ನಿನ್ನ ತಂದೆಯೂ ಅಬ್ರಹಾಮನ ದೇವರೂ ಇಸಾಕನ ದೇವರೂ ಆಗಿರುವ ಸರ್ವೇಶ್ವರ ನಾನೇ. ನೀನು ಮಲಗಿಕೊಂಡಿರುವ ಈ ನಾಡನ್ನು ನಿನಗೂ ನಿನ್ನ ಸಂತತಿಗೂ ಕೊಡುತ್ತೇನೆ.
14 : ನಿನ್ನ ಸಂತತಿ ಭೂಮಿಯ ಧೂಳಿನಂತೆ ಅಸಂಖ್ಯ ಆಗುವುದು; ನೀನು ಪೂರ್ವಪಶ್ಚಿಮ - ದಕ್ಷಿಣೋತ್ತರ ದಿಕ್ಕುಗಳಿಗೆ ಹರಡಿಕೊಳ್ಳುವೆ. ನಿನ್ನ ಮುಖಾಂತರ ಹಾಗೂ ನಿನ್ನ ಸಂತತಿಯ ಮುಖಾಂತರ ಜಗದ ಎಲ್ಲ ರಾಷ್ಟ್ರಗಳೂ ಆಶೀರ್ವಾದ ಪಡೆಯುವುವು.
15 : ಗಮನಿಸು, ನಾನು ನಿನ್ನೊಂದಿಗೆ ಇರುತ್ತೇನೆ. ನೀನು ಎಲ್ಲಿಗೆ ಹೋದರೂ ನಿನ್ನನ್ನು ಕಾಪಾಡಿ ಈ ನಾಡಿಗೆ ಮರಳಿ ಬರಮಾಡುತ್ತೇನೆ. ನಾನು ನಿನಗೆ ಹೇಳಿದ್ದನ್ನೆಲ್ಲ ನೆರವೇರಿಸದೆ ಬಿಡುವುದಿಲ್ಲ,” ಎಂದರು.
16 : ಯಕೋಬನು ನಿದ್ರೆಯಿಂದ ಎಚ್ಚೆತ್ತನು. “ನಿಶ್ಚಯವಾಗಿ ಸರ್ವೇಶ್ವರ ಈ ಸ್ಥಳದಲ್ಲಿದ್ದಾರೆ; ಇದು ನನಗೆ ತಿಳಿಯದೆ ಹೋಯಿತು!” ಎಂದುಕೊಂಡನು;
17 : ಅಲ್ಲದೆ ಭಯಭಕ್ತಿಯಿಂದ, “ಇದು ಮಹಾಗಂಭೀರವಾದ ಸ್ಥಳ; ದೇವರ ಸ್ಥಾನವೇ ಹೊರತು ಬೇರೆಯಲ್ಲ, ಇದು ಪರಲೋಕದ ಬಾಗಿಲು!” ಎಂದನು.
18 : ಯಕೋಬನು ಬೆಳಗಿನ ಜಾವದಲ್ಲಿ ಎದ್ದು ತಾನು ತಲೆದಿಂಬಾಗಿ ಇಟ್ಟುಕೊಂಡಿದ್ದ ಆ ಕಲ್ಲನ್ನು ಸ್ಮಾರಕಸ್ತಂಭವಾಗಿ ನೆಟ್ಟನು. ಅದರ ಮೇಲೆ ಎಣ್ಣೆ ಹೊಯ್ದು ಅಭ್ಯಂಗಿಸಿದನು.
19 : ‘ಲೂಜ್’ ಎಂದು ಹೆಸರು ಪಡೆದಿದ್ದ ಆ ಊರಿಗೆ ‘ಬೇತೇಲ್’ ಎಂದು ನಾಮಕರಣ ಮಾಡಿದನು.
20 : ಅದೂ ಅಲ್ಲದೆ ಅವನು ಹೀಗೆಂದು ಹರಕೆ ಮಾಡಿಕೊಂಡನು: “ದೇವರು ನನ್ನ ಸಂಗಡವಿದ್ದು ನಾನು ಕೈಗೊಂಡ ಪ್ರಯಾಣದಲ್ಲಿ ನನ್ನನ್ನು ಕಾಪಾಡಿ, ಹೊಟ್ಟೆಗೆ ಊಟವನ್ನೂ ಮೈಗೆ ಬಟ್ಟೆಯನ್ನೂ ಕೊಟ್ಟು,
21 : ನನ್ನ ತಂದೆಯ ಮನೆಗೆ ಸುರಕ್ಷಿತವಾಗಿ ಮರಳಿ ಬರಮಾಡಿದರೆ ಸರ್ವೇಶ್ವರಸ್ವಾಮಿಯೇ ನನಗೆ ದೇವರು ಆಗುವರು.
22 : ನಾನು ಸ್ಮಾರಕಸ್ತಂಭವಾಗಿ ನೆಟ್ಟಿರುವ ಈ ಕಲ್ಲು ದೇವರ ಮನೆಯಾಗುವುದು; ಅದು ಮಾತ್ರವಲ್ಲ, ನೀವು ನನಗೆ ಕೊಡುವ ಎಲ್ಲ ಆಸ್ತಿಪಾಸ್ತಿಯಲ್ಲಿ ಹತ್ತರಲ್ಲಿ ಒಂದು ಪಾಲನ್ನು ನಿಮಗೆ ಸಮರ್ಪಿಸುತ್ತೇನೆಂದು ಮಾತುಕೊಡುತ್ತೇನೆ.”

ಕೀರ್ತನೆ - 91: 1-4, 14-15 
1 : ಪರಾತ್ಪರ ಪ್ರಭುವಿನ ಮೊರೆಹೊಕ್ಕಿರುವವನು / ಸರ್ವಶಕ್ತನ ಆಶ್ರಯದಲಿ ಸುರಕ್ಷಿತನು //
2 : ನಾನಾತನಿಗೆ, ‘ನೀನೇ ನನ್ನ ರಕ್ಷಕನೂ / ದುರ್ಗವೂ ನಾ ನಂಬಿದ ದೇವನು’ ಎನ್ನುವೆನು //
3 : ತಪ್ಪಿಸುವನಾತನು ಬೇಟೆಗಾರನ ಬಲೆಯಿಂದ / ರಕ್ಷಿಸುವನು ಮಾರಕವಾದ ವ್ಯಾಧಿಯಿಂದ //
4 : ಹುದುಗಿಸುವನು ನಿನ್ನನು ತನ್ನ ಗರಿಗಳ ತೆಕ್ಕೆಯಲಿ / ಆಶ್ರಯಪಡೆಯುವೆ ನೀ ಆತನ ರೆಕ್ಕೆಗಳಡಿಯಲಿ / ರಕ್ಷಣೆಯ ಕವಚವಿದೆ ಆತನು ಕೊಟ್ಟ ಮಾತಿನಲಿ //
14 : ಪ್ರಭು : “ನನ್ನ ಭಕ್ತನಾದ್ದರಿಂದ ವಿಮೋಚಿ ಸುವೆನು ಅವನನು / ನನ್ನ ನಾಮವನು ಅರಿತವನಾದ್ದರಿಂದ ರಕ್ಷಿಸುವೆನು //
15 : ನನಗೆ ಮೊರೆಯಿಟ್ಟಾಗ ಕಿವಿಗೊಡುವೆನು / ಸಂಕಟದೊಳು ಅವನ ಸಂಗಡವಿರುವೆನು / ಅವನನು ಉದ್ಧರಿಸಿ ಘನಪಡಿಸುವೆನು //

ಶುಭಸಂದೇಶ - ಮತ್ತಾಯ 9: 18-26
18 : ಯೇಸುಸ್ವಾಮಿ ಹೀಗೆ ಬೋಧಿಸುತ್ತಿರುವಾಗಲೇ ಯೆಹೂದ್ಯ ಅಧಿಕಾರಿಯೊಬ್ಬನು ಅಲ್ಲಿಗೆ ಬಂದನು. ಅವನು ಯೇಸುವಿನ ಮುಂದೆ ಮೊಣಕಾಲೂರಿ, "ನನ್ನ ಮಗಳು ಈಗ ತಾನೆ ಸತ್ತುಹೋದಳು. ಆದರೂ ತಾವು ದಯಮಾಡಿಸಿ ತಮ್ಮ ಹಸ್ತವನ್ನು ಆಕೆಯ ಮೇಲಿಡಬೇಕು. ಅವಳು ಮರಳಿ ಬದುಕುವಳು," ಎಂದು ಬೇಡಿಕೊಂಡನು.
19 : ಯೇಸು ಎದ್ದು ಅವನ ಹಿಂದೆ ಹೊರಟರು. ಶಿಷ್ಯರೂ ಹಿಂಬಾಲಿಸಿ ಹೋದರು.
20 : ಹೋಗುತ್ತಿದ್ದಾಗ, ಹನ್ನೆರಡು ವರ್ಷಗಳಿಂದ ರಕ್ತಸ್ರಾವ ರೋಗದಿಂದ ಬಹಳವಾಗಿ ನರಳುತ್ತಿದ್ದ ಒಬ್ಬ ಮಹಿಳೆ ಹಿಂಬದಿಯಿಂದ ಬಂದು ಯೇಸುಸ್ವಾಮಿಯ ಉಡುಪಿನ ಅಂಚನ್ನು ಮುಟ್ಟಿದಳು.
21 : "ನಾನು ಅವರ ಉಡುಪನ್ನು ಮುಟ್ಟಿದರೂ ಸಾಕು, ಗುಣಹೊಂದುವೆನು" ಎಂದುಕೊಂಡಿದ್ದಳು ಆಕೆ.
22 : ಯೇಸು ಹಿಂದಿರುಗಿ ಆಕೆಯನ್ನು ನೋಡಿ, "ಮಗಳೇ, ಹೆದರಬೇಡ; ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ," ಎಂದರು. ಆ ಕ್ಷಣದಲ್ಲೇ ಆಕೆ ವ್ಯಾಧಿಯಿಂದ ಮುಕ್ತಳಾದಳು.
23 : ಯೇಸು ಆ ಅಧಿಕಾರಿಯ ಮನೆಯನ್ನು ತಲುಪಿದರು. ಅಲ್ಲಿ ವಾದ್ಯಗಾರರನ್ನೂ ಗದ್ದಲ ಮಾಡುತ್ತಿದ್ದ ಜನಜಂಗುಳಿಯನ್ನೂ ಕಂಡು,
24 : "ಎಲ್ಲರೂ ಇಲ್ಲಿಂದ ಹೊರಡಿರಿ, ಬಾಲಕಿ ಸತ್ತಿಲ್ಲ; ನಿದ್ರಿಸುತ್ತಿದ್ದಾಳೆ" ಎಂದರು. ಜನರು ನಕ್ಕು ಅವರನ್ನು ಪರಿಹಾಸ್ಯ ಮಾಡಿದರು.
25 : ಆದರೂ ಜನರ ಗುಂಪನ್ನು ಹೊರಗೆ ಕಳುಹಿಸಿ, ಯೇಸು ಕೊಠಡಿಯೊಳಕ್ಕೆ ಹೋಗಿ, ಬಾಲಕಿಯ ಕೈಹಿಡಿದು ಎಬ್ಬಿಸಿದರು. ಆಕೆ ಎದ್ದಳು.
26 : ಈ ಸಮಾಚಾರ ಆ ನಾಡಿನಲ್ಲೆಲ್ಲಾ ಹಬ್ಬಿ ಹರಡಿತು.

ಚಿಂತನೆ
ಕ್ರಿಸ್ತನಲ್ಲಿ ಪ್ರಿಯ ಸಹೋದರ ಸಹೋದರಿಯರೇ ಇಂದಿನ ವಾಚನದಲ್ಲಿ ಯೇಸು ಎರಡು ಅದ್ಭುತ ಕಾರ್ಯಗಳನ್ನು ಮಾಡುತ್ತಾರೆ. ವಿಶ್ವಾಸಭರಿತ ಬದುಕು ಅದ್ಭುತಗಳ ಆಗರ ಎಂದು ತೋರಿಸುತ್ತಿದ್ದಾರೆ. ಯೆಹೂದ್ಯ ಅಧಿಕಾರಿಯೊಬ್ಬನು ತನ್ನ ಮಗಳು ತೀರಿಹೋಗಿದ್ದರಿಂದ ಯೇಸುವಿನಲ್ಲಿ ಮೊಣಕಾಲೂರಿ ಜೀವಭಿಕ್ಷೆಯ ಪ್ರಾರ್ಥನೆಯನ್ನು ಮಾಡುತ್ತಾನೆ. ಯೇಸುವಿನ ಪವಿತ್ರ ಹಸ್ತಗಳಿಂದ ಮುಟ್ಟಿದರೆ ಸಾಕು ತನ್ನ ಮಗಳು ಬದುಕುವಳು ಎಂಬ ಗಾಢವಾದ ವಿಶ್ವಾಸವನ್ನು ತೋರ್ಪಡಿಸುತ್ತಾನೆ. ಎರಡನೇಯ ಅದ್ಭುತದಲ್ಲಿ ರಕ್ತಸ್ರಾವದಿಂದ ಬಳಲುತ್ತಿದ್ದ ಮಹಿಳೆ ಕ್ರಿಸ್ತನ ಉಡುಪಿನ ಸ್ಪರ್ಶದಿಂದ ಪೂರ್ಣ ಗುಣಹೊಂದುತ್ತಾಳೆ. ಇವೆರಡರಲ್ಲು ಜನ ನಕ್ಕು ಅಪಹಾಸ್ಯ ಮಾಡಿದರೂ ಯೇಸು ವಿಶ್ವಾಸದ ಸಫಲತೆಯನ್ನು ತೋರಿಸಿ, “ನಾನೇ ಜೀವ, ಮಾರ್ಗ, ಸತ್ಯ’ ಎಂದು ತೋರಿಸಿಕೊಡುತ್ತಾರೆ. ನಮ್ಮಲ್ಲು ಈ ಅಳುಕು ವಿಶ್ವಾಸವನ್ನು ತೆಗೆದು ಕ್ರಿಸ್ತನಲ್ಲಿ ಪೂರ್ಣ ಬರವಸೆ ಇಟ್ಟು, ನಮ್ಮ ಆಧ್ಯಾತ್ಮಿಕ ಮತ್ತು ದೈಹೀಕ ಸ್ವಾಸ್ತ್ಯವನ್ನು ಹೆಚ್ಚಿಸಿ ಇತರರ ಅಪಹಾಸ್ಯವನ್ನು ಶಮನಗೋಳಿಸಿ ವಿಶ್ವಾಸದ ಪತಾಕೆಯ ಜೊತೆ ಅದ್ಭುತವನ್ನು ಕಾಣೋಣ.
ಫಾದರ್ ಕಾಣಿಕ್ಯರಾಜ್ ಎಸ್. ಜೆ

No comments:

Post a Comment