ಹಸಿರು/ ಮಂಗಳ /ಸಾಧಾರಣ ಕಾಲದ ಹದಿನಾಲ್ಕನೇ ವಾರ
1ನೇ ವಾಚನ - ಆದಿ 32: 23-33
ಕೀರ್ತನೆ - 17: 1-3, 6-8, 15
ಶುಭಸಂದೇಶ - ಮತ್ತಾಯ 9: 32-38
1ನೇ ವಾಚನ - ಆದಿ 32: 23-33
22 : ಆ ರಾತ್ರಿ ಯಕೋಬನು ತನ್ನ ಇಬ್ಬರು ಹೆಂಡತಿಯರನ್ನೂ ಇಬ್ಬರು ದಾಸಿಯರನ್ನೂ ಹನ್ನೊಂದು ಮಂದಿ ಮಕ್ಕಳನ್ನೂ ಕರೆದುಕೊಂಡು ‘ಯಬ್ಬೋಕ್’ ಹೊಳೆಯನ್ನು ದಾಟುವ ಸ್ಥಳದಲ್ಲಿ ದಾಟಿದನು.
23 : ಅವರನ್ನೂ ತನ್ನ ಆಸ್ತಿ ಪಾಸ್ತಿಯನ್ನೂ ದಾಟಿಸಿದ ಮೇಲೆ
24 : ಯಕೋಬನು ಒಂಟಿಗನಾಗಿ ಹಿಂದೆ ನಿಂತಿದ್ದನು. ಯಾರೋ ಒಬ್ಬ ಪುರುಷ ಬೆಳಗಾಗುವ ತನಕ ಅವನ ಸಂಗಡ ಹೋರಾಡಿದನು.
25 : ಆ ಪುರುಷ ತಾನು ಗೆಲ್ಲದೆ ಇರುವುದನ್ನು ಕಂಡು ಯಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಹೋರಾಡುತ್ತಿರುವಾಗಲೆ ಯಕೋಬನ ತೊಡೆಯ ಕೀಲು ತಪ್ಪಿತು.
26 : ಆ ಪುರುಷ, “ನನ್ನನ್ನು, ಹೋಗಬಿಡು, ಬೆಳಗು ಆಗುತ್ತಿದೆ,” ಎನ್ನಲು ಯಕೋಬನು, “ನೀವು ನನ್ನನ್ನು ಆಶೀರ್ವದಿಸಿದ ಹೊರತು, ನಿಮ್ಮನ್ನು ಹೋಗಬಿಡುವುದಿಲ್ಲ,” ಎಂದನು.
27 : ಆ ಪುರುಷ, “ನಿನ್ನ ಹೆಸರೇನು?” ಎಂದು ಕೇಳಿದ್ದಕ್ಕೆ ಯಕೋಬನು, “ನನ್ನ ಹೆಸರು ಯಕೋಬ” ಎಂದನು.
28 : ಅವನು ಯಕೋಬನಿಗೆ, “ಇನ್ನು ಮೇಲೆ ನೀನು ಯಕೋಬ ಎನಿಸಿಕೊಳ್ಳುವುದಿಲ್ಲ; ದೇವರ ಸಂಗಡ ಹಾಗು ಮನುಷ್ಯರ ಸಂಗಡ ಹೋರಾಡಿ ಗೆದ್ದವನಾದ್ದರಿಂದ ನಿನಗೆ ‘ಇಸ್ರಯೇಲ್’ ಎಂದು ಹೆಸರುಂಟಾಗುವುದು,” ಎಂದು ಹೇಳಿದನು.
29 : ಯಕೋಬನು, “ನಿಮ್ಮ ಹೆಸರನ್ನು ದಯವಿಟ್ಟು ನನಗೆ ತಿಳಿಸಬೇಕು”, ಎಂದಾಗ ಆ ಪುರುಷ, “ನನ್ನ ಹೆಸರನ್ನು ವಿಚಾರಿಸುವುದೇಕೆ?” ಎಂದು ಹೇಳಿ ಅಲ್ಲೇ ಅವನನ್ನು ಆಶೀರ್ವದಿಸಿದನು.
30 : ಯಕೋಬನು, “ನಾನು ದೇವರನ್ನು ಮುಖಾಮುಖಿಯಾಗಿ ಕಂಡಿದ್ದರೂ ಪ್ರಾಣಸಹಿತ ಉಳಿದಿದ್ದೇನಲ್ಲಾ!” ಎಂದುಕೊಂಡು ಆ ಸ್ಥಳಕ್ಕೆ ‘ಪೆನೀಯೇಲ್’ ಎಂದು ಹೆಸರಿಟ್ಟನು.
31 : ಅವನು ಪೆನೂವೇಲನ್ನು ದಾಟುತ್ತಿರುವಾಗ ಸೂರ್ಯೋದಯ ಆಯಿತು; ಕೀಲುಕಳಚಿದ ತೊಡೆಯ ನಿಮಿತ್ತ ಅವನು ಕುಂಟಿಕೊಂಡೇ ನಡೆದನು.
32 : ಆ ಪುರುಷನು ಯಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಇಸ್ರಯೇಲರು ಇಂದಿನವರೆಗೂ ತೊಡೆಯ ಕೀಲಿನ ಮೇಲಿರುವ ಮಾಂಸವನ್ನು ತಿನ್ನುವುದಿಲ್ಲ.
ಕೀರ್ತನೆ - 17: 1-3, 6-8, 15
ಸತ್ಯಸಂಧನಾದ ನಾನೊ ಸೇರುವೆ ನಿನ್ನ ಸಾನ್ನಿಧ್ಯವನು
1 : ಲಕ್ಷ್ಯವಿಡು, ಓ ಪ್ರಭು, ಎನ್ನ ನ್ಯಾಯವಾದ ಮೊರೆಗೆ / ಕಿವಿಗೊಡು, ನಿಷ್ಕಪಟ ಬಾಯಿಂದ ಬಂದ ಪ್ರಾರ್ಥನೆಗೆ //
2 : ನ್ಯಾಯ ತೀರ್ಪು ಬರಲಿ ಎನಗೆ, ನಿನ್ನಿಂದಲೆ | ನೀತಿಗನುಸಾರ ನೋಡುವಾತ, ನೀನಲ್ಲವೆ?||
3 : ಹೃದಯ ವೀಕ್ಷಿಸು, ಇರುಳೆಲ್ಲ ವಿಚಾರಿಸು, ಅಗ್ನಿಪರೀಕ್ಷೆ ಮಾಡಿಸು / ನಾ ದೋಷರಹಿತ, ಮಾತಲಿ ತಪ್ಪದವ, ಎಂದಾಗ ತೀರ್ಮಾನಿಸು //
6 : ಸದುತ್ತರ ಪಾಲಿಪೆಯೆಂದು ನಂಬಿ ಬೇಡುವೆನಯ್ಯಾ / ಮೊರೆಯಿಡುವೆ ದೇವಾ, ಕಿವಿಗೊಟ್ಟು ಆಲಿಸಯ್ಯಾ //
7 : ಶರಣರನು ಶತ್ರುವಿನಿಂದ ಸಂರಕ್ಷಿಸುವಾತ ನೀನಯ್ಯಾ / ಭುಜಬಲವನು ಪ್ರಯೋಗಿಸಿ ಕಾಪಾಡುವಾತ ನೀನಯ್ಯಾ / ನಿನ್ನಚಲ ಪ್ರೀತಿಯನ್ನಚ್ಚರಿಯಿಂದ ತೋರ್ಪಡಿಸಯ್ಯಾ //
8 : ಮುತ್ತಿಗೆ ಹಾಕಿರುವ ಹೀನ ಶತ್ರುಗಳಿಂದ / ಸುತ್ತುವರೆದಿರುವ ಪ್ರಾಣ ವೈರಿಗಳಿಂದ /
15 : ಸತ್ಯಸಂಧನಾದ ನಾನೊ ಸೇರುವೆ ನಿನ್ನ ಸಾನ್ನಿಧ್ಯವನು / ಎಚ್ಚೆತ್ತು ನಿನ್ನ ಮುಖದರ್ಶನದಿಂದ ತೃಪ್ತನಾಗುವೆನು //
ಶುಭಸಂದೇಶ - ಮತ್ತಾಯ 9: 32-38
32 : ಕುರುಡರು ಹೊರಟುಹೋಗುತ್ತಿದ್ದ ಹಾಗೆ, ದೆವ್ವ ಹಿಡಿದಿದ್ದ ಒಬ್ಬ ಮೂಕನನ್ನು ಕೆಲವರು ಯೇಸುಸ್ವಾಮಿಯ ಬಳಿಗೆ ಕರೆತಂದರು.
33 : ದೆವ್ವ ಬಿಡಿಸಿದ ಮೇಲೆ ಆ ಮೂಕನಿಗೆ ಮಾತು ಬಂದಿತು. ಜನರೆಲ್ಲರೂ ಆಶ್ಚರ್ಯಚಕಿತರಾದರು. "ಇಂತಹ ಕಾರ್ಯವನ್ನು ನಾವು ಇಸ್ರಯೇಲಿನಲ್ಲಿ ಕಂಡದ್ದೇ ಇಲ್ಲ!" ಎಂದುಕೊಂಡರು.
34 : ಆದರೆ ಫರಿಸಾಯರು, "ಇವನು ದೆವ್ವಗಳೊಡೆಯನ ಶಕ್ತಿಯಿಂದಲೇ ದೆವ್ವಗಳನ್ನು ಬಿಡಿಸುತ್ತಾನೆ," ಎಂದರು.
35 : ಯೇಸುಸ್ವಾಮಿ, ಊರೂರುಗಳಲ್ಲೂ ಹಳ್ಳಿಹಳ್ಳಿಗಳಲ್ಲೂ ಸಂಚಾರ ಮಾಡುತ್ತಾ ಅಲ್ಲಿಯ ಪ್ರಾರ್ಥನಾಮಂದಿರಗಳಲ್ಲಿ ಬೋಧಿಸಿದರು. ಶ್ರೀ ಸಾಮ್ರಾಜ್ಯದ ಶುಭಸಂದೇಶವನ್ನು ಸಾರಿದರು. ಎಲ್ಲಾ ತರಹದ ರೋಗರುಜಿನಗಳನ್ನು ಗುಣಪಡಿಸಿದರು.
36 : ಆ ಜನಸಮೂಹವನ್ನು ಕಂಡಾಗ ಅವರ ಮನ ಕರಗಿತು.
37 : ಏಕೆಂದರೆ, ಕುರುಬನಿಲ್ಲದ ಕುರಿಗಳಂತೆ ಅವರು ತೊಳಲಿದ್ದರು ಹಾಗೂ ಬಳಲಿದ್ದರು.
38 : ಆದುದರಿಂದ ಯೇಸು ತಮ್ಮ ಶಿಷ್ಯರಿಗೆ, "ಬೆಳೆಯೇನೋ ಹೇರಳ; ಕೊಯಿಲಿಗಾರರೋ ವಿರಳ; ಈ ಕಾರಣ ತನ್ನ ಕೊಯಿಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಪ್ರಾರ್ಥಿಸಿರಿ," ಎಂದರು.
ಚಿಂತನೆ
ಜೀವನದಲ್ಲಿ ಬದಲಾವಣೆ ಎಂಬುದು ನಿರಂತರ.
ಇಂದಿನ ಮೊದಲನೆಯ ವಾಚನದಲ್ಲಿ ಯಕೋಬನು ಸರ್ವೇಶ್ವರನ ಆಶೀರ್ವಾದವನ್ನು ಪಡೆದು ಇಸ್ರಯೇಲ್ ಎಂದು ಹೆಸರು ಪಡೆದು ಜೀವನದಲ್ಲಿ ಸರ್ವೇಶ್ವರನನ್ನು ಕಾಣುವ ಭಾಗ್ಯವನ್ನುಕಾಣುತ್ತಾನೆ. ನಾವು ಸಹ ಇತರರನ್ನು ಅಪರಿಚಿತರೆಂದು ಕಾಣದೆ, ನಮ್ಮಲ್ಲಿರುವ ಸೈತಾನನ ಪ್ರಲೋಭನೆಯ ವಿರುದ್ಧ ಪ್ರೀತಿ ಮತ್ತು ವಿಶ್ವಾಸಭರಿತರಾಗಿ ಸೆಣಸಾಡಿದರೆ ದೇವರ ವರದಾನ ಅಪಾರವಾಗಿ ಲಭಿಸುತ್ತದೆ. ಶುಭಸಂದೇಶದಲ್ಲಿ ಕೆಲವು ವಿಶ್ವಾಸಿಗಳು ದೆವ್ವಹಿಡಿದಿದ್ದ ಒಬ್ಬ ಮೂಕನನ್ನು ಕರೆತಂದು ಕ್ರಿಸ್ತನ ಅದ್ಭುತ ಕಾರ್ಯಗಳಿಗೆ ನೈಜ ಸಾಕ್ಷಿಗಳಾಗುತ್ತಾರೆ. “ಜನರು ಕುರುಬನಿಲ್ಲದ ಕುರಿಗಳಂತೆ” ತೊಳಲಿ, ಬಳಲಾಡುತ್ತಿರುವುದನ್ನು ನೋಡಿದ ಯೇಸುವಿನ ಮನ ಕರಗುತ್ತದೆ. ಯೇಸು ತನ್ನ ದೀನ ಮತ್ತು ಕರುಣೆಯ ಹೃದಯದಿಂದ ಜನರಿಂದ ಅಧ್ಯಾತ್ಮಿಕ, ದೈಹೀಕ ಮತ್ತು ಸಮಾಜಿಕ ರೋಗರುಜಿನಗಳನ್ನು ಹೋಗಲಾಡಿಸಿ ಉತ್ತಮ ಕುರಿಗಾಹಿಯಾಗಿ ಸೇವೆಸಲ್ಲಿಸುತ್ತಾರೆ. ಇಂಥಹ ಪ್ರೀತಿಮಯ ಸೇವೆ ನಮ್ಮ ಕುಟುಂಬ ಮತ್ತು ಸಮಾಜದ ಕಲ್ಯಾಣಕ್ಕೆ ಒಳ್ಳೆ ಮಾದರಿಯ ಜೀವನ ನಡೆಸಲು ಪ್ರೇರಣೆ ನೀಡಲೆಂದು ಪ್ರಾರ್ಥಿಸೋಣ
ಫಾದರ್ ಕಾಣಿಕ್ಯರಾಜ್ ಎಸ್ ಜೆ
No comments:
Post a Comment