15/ ಬಿಳಿ/ ಸೋಮ /ಸಂತಬೊನವೆಂಚರ್, (ಧರ್ಮಾ ಮತ್ತು ಧ.ಪಂ) (ಸ್ಮರಣೆ)
1ನೇ ವಾಚನ - ವಿಮೋ 1: 8-14, 22
ಕೀರ್ತನೆ - 124: 1-8
ಶುಭಸಂದೇಶ -ಮತ್ತಾಯ 1೦: 34-11: 1
1ನೇ ವಾಚನ - ವಿಮೋ 1: 8-14, 22
8 : ಅನಂತರ ಹೊಸ ರಾಜನೊಬ್ಬನು ಈಜಿಪ್ಟ್ ದೇಶದ ಆಳ್ವಿಕೆಗೆ ಬಂದನು. ಅವನಿಗೆ ಜೋಸೆಫನ ವಿಷಯ ತಿಳಿದಿರಲಿಲ್ಲ.
9 : ಅವನು ತನ್ನ ಜನರಿಗೆ, “ಇಸ್ರಯೇಲರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಬಲಾಢ್ಯರಾಗಿದ್ದಾರೆ, ಅಧೀನದಲ್ಲಿರಿಸಲು ಕಷ್ಟಸಾಧ್ಯ.
10 : ಯುದ್ಧವೇನಾದರು ಸಂಭವಿಸಿದರೆ ಅವರು ನಮ್ಮ ಶತ್ರುಗಳೊಂದಿಗೆ ಕೂಡಿಕೊಂಡು ನಮಗೆ ವಿರೋಧವಾಗಿ ಕಾದಾಡಿ ನಾಡನ್ನು ಬಿಟ್ಟು ಪಲಾಯನ ಗೈಯಬಹುದು. ಆದ್ದರಿಂದ ಅವರು ವೃದ್ಧಿಯಾಗದಂತೆ ನಾವು ಉಪಾಯ ಹೂಡಬೇಕು,” ಎಂದು ಎಚ್ಚರಿಸಿದನು.
11 : ಅದರಂತೆಯೇ ಅವನ ಜನರು ಇಸ್ರಯೇಲರಿಗೆ ಕಿರುಕುಳ ಕೊಡಲು ತೊಡಗಿದರು. ಪುಕ್ಕಟೆಯಾಗಿ ಕೆಲಸಮಾಡಿಸಿಕೊಂಡರು. ಬಿಟ್ಟೀ ಕೆಲಸ ಮಾಡಿಸುವ ಅಧಿಕಾರಿಗಳನ್ನು ನೇಮಿಸಿ ಫರೋಹನಿಗೆ ‘ಪಿತೋಮ್’ ಮತ್ತು ‘ರಾಮ್ಸೇಸ್’ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದರು.
12 : ಈಜಿಪ್ಟರು ಅವರಿಗೆ ಎಷ್ಟು ಕಿರುಕುಳ ಕೊಡುತ್ತಿದ್ದರೋ ಅಷ್ಟೂ ಹೆಚ್ಚಿ ಹರಡಿಕೊಳ್ಳುತ್ತಿದ್ದರು.
13 : ಆದ್ದರಿಂದ ಇಸ್ರಯೇಲರ ಬಗ್ಗೆ ಈಜಿಪ್ಟರು ಸಹಿಸಲಾರದಷ್ಟು ಹೆದರಿಕೆ ಉಳ್ಳವರಾದರು. ಇಸ್ರಯೇಲರಿಂದ ಕ್ರೂರತನದಿಂದ ಸೇವೆ ಮಾಡಿಸಿಕೊಂಡರು.
14 : ಮಣ್ಣು ಅಗೆಯುವ ಕೆಲಸದಲ್ಲೂ ಇಟ್ಟಿಗೆ ಸುಡುವ ಕೆಲಸದಲ್ಲೂ ವ್ಯವಸಾಯದ ಮತ್ತಿತರ ಕೆಲಸಕಾರ್ಯಗಳಲ್ಲೂ ಕಠಿಣವಾಗಿ ಅವರಿಂದ ದುಡಿಸಿಕೊಂಡರು. ಅವರು ಮಾಡಿಸಿಕೊಳ್ಳುತ್ತಿದ್ದ ಪ್ರತಿಯೊಂದು ಕೆಲಸವು ಜೀವನವೇ ಬೇಡವೆನ್ನುವಷ್ಟು ಕಠೋರವಾಗಿ ಇರುತ್ತಿತ್ತು.
22 : ಕಟ್ಟಕಡೆಗೆ ಫರೋಹನು ತನ್ನ ಜನರಿಗೆಲ್ಲಾ, “ಹಿಬ್ರಿಯರ ಗಂಡುಕೂಸುಗಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು; ಹೆಣ್ಣು ಕೂಸುಗಳನ್ನೆಲ್ಲಾ ಉಳಿಸಬೇಕು,” ಎಂದು ಆಜ್ಞೆಮಾಡಿದನು.
ಕೀರ್ತನೆ - 124: 1-8
ನಮಗುದ್ಧಾರ ಪ್ರಭುವಿನ ನಾಮದಲಿ
1 : ಪ್ರಭು ನಮ್ಮ ಪರ ಇಲ್ಲದಿದ್ದರೆ ಏನಾಗುತ್ತಿತ್ತು?/ ಇಸ್ರಯೇಲರೇ ಹೇಳಲಿ ಆ ದುರ್ಗತಿಯನ್ನು ಕುರಿತು
2 : ಪ್ರಭು ನಮ್ಮ ಪರ ಇಲ್ಲದಿದ್ದರೆ ಏನಾಗುತ್ತಿತ್ತು?/ ಜನರೆಮಗೆ ವಿರುದ್ಧ ಎದ್ದಾಗ ಏನಾಗುತ್ತಿತ್ತು?
3 : ಉರಿಗೊಳ್ಳುತಿದ್ದರು ಕಡುಗೋಪದಿಂದ ಖಂಡಿತ / ನುಂಗಿಬಿಡುತ್ತಿದ್ದರು ನಮ್ಮನ್ನು ಜೀವಸಹಿತ
4 : ಕೊಚ್ಚಿಬಿಡುತ್ತಿತ್ತು ನಮ್ಮನ್ನು ಹುಚ್ಚು ಪ್ರವಾಹ / ಬಡಿದುಬಿಡುತ್ತಿತ್ತು ನಮ್ಮನ್ನು ರಭಸದಿಂದ ಪೂರ /
5 : ಮುಳುಗಿಸಿಬಿಡುತ್ತಿತ್ತು ನಮ್ಮನ್ನು ಮಹಾಪ್ರಳಯ
6 : ತುತ್ತಾಗಿಸಲಿಲ್ಲ ನಮ್ಮನ್ನು ಶತ್ರುಗಳ ಬಾಯಿಗೆ / ಕೃತಜ್ಞತಾಪೂರ್ವಕ ಸ್ತೋತ್ರ ಇಗೋ ಪ್ರಭುವಿಗೆ
7 : ಬೇಟೆಬಲೆಯಿಂದ ಪಾರಾದ ಪಕ್ಷಿಯಂತಾದೆವು / ಹರಿದುಹೋಯಿತಿದೊ ಬಲೆಯು, ಹಾರಿಹೋದೆವು ನಾವು
8 : ನಮಗುದ್ಧಾರ ಪ್ರಭುವಿನ ನಾಮದಲಿ / ಭೂಮ್ಯಾಕಾಶವನು ಸೃಜಿಸಿದಾತನಲಿ //
ಶುಭಸಂದೇಶ -ಮತ್ತಾಯ 1೦: 34-11: 1
34 : "ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆನೆಂದು ಭಾವಿಸಬೇಡಿ; ಸಮಾಧಾನವನ್ನಲ್ಲ, ಛೇದಿಸುವ ಖಡ್ಗವನ್ನು ತರಲು ಬಂದೆನು.
35 : ತಂದೆಗೆ ವಿರುದ್ಧ ಮಗನಿಗೂ, ತಾಯಿಗೆ ವಿರುದ್ದ ಮಗಳಿಗೂ, ಅತ್ತೆಗೆ ವಿರುದ್ದ ಸೊಸೆಗೂ ಭೇದ ಹುಟ್ಟಿಸಲು ಬಂದೆನು;
36 : ಒಡಹುಟ್ಟಿದವರೇ ಒಬ್ಬನ ಕಡುವೈರಿಗಳಾಗುವರು.
37 : "ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ತಂದೆಯನ್ನು ಅತವಾ ತಾಯಿಯನ್ನು ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ಮಗನನ್ನು ಅಥವಾ ಮಗಳನ್ನು ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ.
38 : ತನ್ನ ಶಿಲುಬೆಯನ್ನು ಹೊತ್ತು ನನ್ನನ್ನು ಹಿಂಬಾಲಿಸದವನು ನನ್ನವನಾಗಲು ಯೋಗ್ಯನಲ್ಲ.
39 : ತನ್ನ ಪ್ರಾಣವನ್ನು ಕಾಪಾಡಿಕೊಳ್ಳುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗೋಸ್ಕರವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಾಪಾಡಿಕೊಳ್ಳುತ್ತಾನೆ. ಸತ್ಕಾರಕ್ಕೆ ತಕ್ಕ ಸಂಭಾವನೆ (ಮಾರ್ಕ 9:41)
40 : "ನಿಮ್ಮನ್ನು ಸ್ವಾಗತಿಸುವವನು ನನ್ನನ್ನು ಸ್ವಾಗತಿಸುತ್ತಾನೆ; ನನ್ನನ್ನು ಸ್ವಾಗತಿಸುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸ್ವಾಗತಿಸುತ್ತಾನೆ.
41 : ಪ್ರವಾದಿಯನ್ನು ಪ್ರವಾದಿಯೆಂದು ಸ್ವಾಗತಿಸುವವನು ಪ್ರವಾದಿಗೆ ಸಿಗುವ ಪ್ರತಿಫಲವನ್ನು ಪಡೆಯುತ್ತಾನೆ. ಸತ್ಪುರುಷನನ್ನು ಸತ್ಪುರುಷನೆಂದು ಸ್ವಾಗತಿಸುವವನು ಸತ್ಪುರುಷನಿಗೆ ಸಿಗುವ ಪ್ರತಿಫಲವನ್ನು ಪಡೆಯುತ್ತಾನೆ.
42 : ಯಾರಾದರೂ ಈ ಚಿಕ್ಕವರಲ್ಲಿ ಒಬ್ಬನಿಗೆ ಅವನು ನನ್ನ ಶಿಷ್ಯನೆಂದು ಕುಡಿಯಲು ಒಂದು ಲೋಟ ತಣ್ಣೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಪಡೆಯದೆ ಹೋಗನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ."
ಚಿಂತನೆ
(ಜೀವವಾಕ್ಯ ಪುಸ್ತಕದಿಂದ)
ಶಿಲುಬೆ ಜೀವನದ ಉತ್ಕೃಷ್ಟ ಆಯ್ಕೆ
ಪ್ರಭು ಯೇಸು ಆರಿಸಿದ ಹನ್ನೆರಡು ಮಂದಿ ಪ್ರೇಷಿತರನ್ನು ಬಳಿಗೆ ಕರೆದು ಉಪದೇಶವನ್ನೀಯುವಾಗ ಅವರಲ್ಲಿ ಪ್ರಭುವಿಗೊಸ್ಕರ ಹತ್ತು ಮಂದಿ ಪ್ರೇಷಿತರು ಪ್ರಾಣತ್ಯಾಗ ಮಾಡುವರು ಎಂಬುದನ್ನು ಅರಿತಿದ್ದರು. ಪ್ರಭು ಯೇಸು ಅವರಿಗಿತ್ತ ಕರೆ ಸುಖಭೋಗಗಳ ಜೀವನಕ್ಕೆ ಅಲ್ಲ, ಬದಲಾಗಿ ಕಷ್ಟ ಸಂಕಷ್ಟಗಳಿಗೆ ಸಿಲುಕಿ ಪ್ರಾಣ ತ್ಯಾಗಕ್ಕೂ ಹಿಂಜರಿಯದ ತ್ಯಾಗಮಯ ಜೀವನಕ್ಕೆ. ಪ್ರಭು ಯೇಸು ಬಿಚ್ಚು ಮನಸ್ಸಿನ, ಪ್ರಾಮಾಣಿಕ ಮತ್ತು ನಿಷ್ಕಪಟ ವ್ಯಕ್ತಿಯಾಗಿದ್ದರು. ಅವರು ಹೇಳಬೇಕಾದ ವಾಸ್ತವಿಕ ಸತ್ಯಾಂಶವನ್ನು ಬಚ್ಚಿಡದೆ ಬಿಚ್ಚುಮನಸ್ಸಿನಿಂದ ಮುಚ್ಚು ಮರೆಯಿಲ್ಲದೆ ತಿಳಿಸುತ್ತಾರೆ. ಅವರು ತಮ್ಮ ಹಿಂಬಾಲಕರಿಗೆ ಸುಖ-ಸೌಭಾಗ್ಯದ ಜೀವನದ ಭರವಸೆ ಕೊಡುವುದಿಲ್ಲ , ಅದಕ್ಕೆ ಬದಲು ಖಡ್ಗ, ಸಮರ, ವೈಮನಸ್ಸು, ಭೇದ-ಭಾವ ಮತ್ತು ವೈರತ್ವವನ್ನು ಪ್ರಭು ಯೇಸುವಿಗೊಸ್ಕರ ಅನುಭವಿಸಬೇಕಾಗುವುದು ಎಂದು ಮೊದಲೆ ತಿಳಿಸುತ್ತಾರೆ. ಅಷ್ಟ ಮಾತ್ರವಲ್ಲದೆ ಅವರ ಜೀವನದಲ್ಲಿ ಅತ್ಯಂತ ಅಮೂಲ್ಯವಾದಂತ ತಂದೆ, ತಾಯಿ, ಬಂಧು, ಮಿತ್ರರನ್ನು ತೊರೆಯಬೇಕಾಗುವುದು ಎಂದು ಮುಕ್ತವಾಗಿ ತಿಳಿಸುತ್ತಾರೆ. ಇದಕ್ಕೂ ಮಿಗಿಲಾಗಿ ಅವರು ಶಿಲುಬೆಯನ್ನು ಆರಿಸಬೇಕಾಗುತ್ತದೆ ಎಂಬುವುದನ್ನು ತಿಳಿಯಪಡಿಸುತ್ತಾರೆ.
ಈ ಎಲ್ಲಾ ವಾಸ್ತವಿಕ ಸತ್ಯಗಳನ್ನು ಸ್ವೀಕರಿಸಿ, ಪ್ರಭು ಯೇಸು ತೋರಿದ ದಾರಿಯಲ್ಲಿ ನಡೆದರೆ ಮಾತ್ರ ನಾವು ಪ್ರಭು ಯೇಸುವಿನ ನೈಜ ಹಿಂಬಾಲಕರಾಗಬಹುದು. ಆದರೆ ಅದು ಸುಲಭದ ಕೆಲಸವಲ್ಲ, ಇದಕ್ಕೆ ನಮ್ಮ ದೃಢ ಮನಸ್ಸು ಅಗತ್ಯ....
No comments:
Post a Comment